ವಿಶ್ವ ಸಂಸ್ಥೆ ಮಾನವ ಹಕ್ಕು ಪರಾಮರ್ಶೆ ಸಭೆ: ಭಾರತದಲ್ಲಿನ ಭಿನ್ನಮತ ಹತ್ತಿಕ್ಕುವಿಕೆಯ ಕುರಿತು ಪ್ರಶ್ನಿಸಿದ ಪೆನ್ ಇಂಟರ್ ನ್ಯಾಶನಲ್
ಹೊಸದಿಲ್ಲಿ : ಈ ವಾರ ವಿಶ್ವ ಸಂಸ್ಥೆ ಮಾನವ ಹಕ್ಕುಗಳ ಸಮಿತಿಯು ನಡೆಸಿದ ಭಾರತದ ಮಾನವ ಹಕ್ಕುಗಳ ದಾಖಲೆ ಪರಾಮರ್ಶೆಯ ಸಂದರ್ಭದಲ್ಲಿ ಕೇಳಲಾದ ವಾಕ್ ಸ್ವಾತಂತ್ರ್ಯ ಕುರಿತ ಪ್ರಶ್ನೆಗಳಿಗೆ ಭಾರತ ನೀಡಿರುವ ಪ್ರತಿಕ್ರಿಯೆ ಕುರಿತು ಬುಧವಾರ ಜಾಗತಿಕ ಲೇಖಕರ ಸಂಘಟನೆಯಾದ ಪೆನ್ ಇಂಟರ್ ನ್ಯಾಶನಲ್ ಕಳವಳ ವ್ಯಕ್ತಪಡಿಸಿದೆ.
ನಾಗರಿಕ ಹಾಗೂ ರಾಜಕೀಯ ಹಕ್ಕುಗಳ ಅಂತಾರಾಷ್ಟ್ರೀಯ ಒಡಂಬಡಿಕೆಯ ಭಾಗವಾಗಿ ತಾನು ಸಿದ್ದಪಡಿಸಿರುವ ಭಾರತದ ನಿಯಮಿತ ಪರಾಮರ್ಶೆ ವರದಿಯನ್ನು ಪೆನ್ ಇಂಟರ್ ನ್ಯಾಶನಲ್ ಸಂಘಟನೆಯು ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಸಮಿತಿಗೆ ಸಲ್ಲಿಸಿದೆ.
ಈ ವರದಿಯಲ್ಲಿ, ಲೇಖಕರು, ಪತ್ರಕರ್ತರು, ಶಿಕ್ಷಣ ತಜ್ಞರು ಹಾಗೂ ಸರಕಾರದ ಇನ್ನಿತರ ಟೀಕಾಕಾರರನ್ನು ನಿರಂಕುಶವಾಗಿ ಬಂಧಿಸುವ ಮೂಲಕ ಹಾಗೂ ವಿಚಾರಣೆ ಇಲ್ಲದೆ ದೀರ್ಘಕಾಲ ವಶದಲ್ಲಿಟ್ಟುಕೊಳ್ಳುವ ಮೂಲಕ ಅವರನ್ನು ಕಾನೂನಾತ್ಮಕ ಕಿರುಕುಳಕ್ಕೆ ಒಳಪಡಿಸಲಾಗುತ್ತಿರುವ ಸಂಖ್ಯೆ ಹೆಚ್ಚುತ್ತಿದ್ದು, ಆ ಮೂಲಕ ಭಾರತದಲ್ಲಿ ಭಿನ್ನಮತವನ್ನು ಹತ್ತಿಕ್ಕಲಾಗುತ್ತಿದೆ ಎಂದು ಒತ್ತಿ ಹೇಳಲಾಗಿದೆ.
ದೇಶದ ಕಾನೂನಾತ್ಮಕ ವ್ಯವಸ್ಥೆಯನ್ನು ಶಾಂತಿಯುತ ಅಭಿವ್ಯಕ್ತಿಯನ್ನು ಹತ್ತಿಕ್ಕಲು ಹೇಗೆ ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತಿದೆ, ವಿಶೇಷವಾಗಿ ಅದು ಸರಕಾರ ಅಥವಾ ಅದರ ನೀತಿಗಳ ಟೀಕೆಗಳಿಗೆ ಸಂಬಂಧಿಸಿದ್ದಾಗ ಎಂಬುದರ ಕುರಿತು ಅಂತಾರಾಷ್ಟ್ರೀಯ ನಾಗರಿಕ ಮತ್ತು ರಾಜಕೀಯ ಹಕ್ಕುಗಳ ಒಡಂಬಡಿಕೆಯ ವಿಧಿ 19ರ ಹಿನ್ನೆಲೆಯಲ್ಲಿ ಈ ಜಾಗತಿಕ ಲೇಖಕರ ಸಂಘಟನೆಯು ಕಳವಳ ವ್ಯಕ್ತಪಡಿಸಿದೆ.
ಪೆನ್ ಸಂಘಟನೆಯು ಎತ್ತಿದ್ದ ಹಲವಾರು ವಿಷಯಗಳನ್ನು ಸಮಿತಿಯ ಸದಸ್ಯರು ಪ್ರಸ್ತಾಪಿಸಿದರಾದರೂ, ವಾಕ್ ಸ್ವಾತಂತ್ರ್ಯದ ಹಕ್ಕಿನ ಮೇಲೆ ಅನುಚಿತವಾಗಿ ಹೇರಲಾಗಿರುವ ನಿರ್ಬಂಧದ ಕುರಿತು ನಾವು ಎತ್ತಿದ್ದ ಕಳವಳಗಳ ಬಗ್ಗೆ ಭಾರತೀಯ ನಿಯೋಗವು ಸಮರ್ಥವಾಗಿ ಉತ್ತರಿಸಲು ವಿಫಲವಾಯಿತು ಎಂದು ಪೆನ್ ಇಂಟರ್ ನ್ಯಾಶನಲ್ ಸಂಘಟನೆ ತನ್ನ ಪ್ರಕಟಣೆಯಲ್ಲಿ ಹೇಳಿದೆ.
ಸರಕಾರದ ಟೀಕಾಕಾರರನ್ನು ಅಸಮರ್ಥನೀಯವಾಗಿ ಶಿಕ್ಷಿಸಲು ಯುಎಪಿಎ ಕಾಯ್ದೆಯನ್ನು ಸಾಧನವನ್ನಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಪೆನ್ ಇಂಟರ್ ನ್ಯಾಶನಲ್ ಸಂಘಟನೆ ಉಲ್ಲೇಖಿಸಿದೆ. ತನ್ನ ವರದಿಯಲ್ಲಿ ಭೀಮಾ ಕೋರೆಗಾಂವ್/ಎಲ್ಗರ್ ಪರಿಷದ್ ಪ್ರಕರಣದಲ್ಲಿನ ಆರೋಪಿಗಳ ಕುರಿತು ಪ್ರಸ್ತಾಪಿಸಲಾಗಿದ್ದು, ವೈದ್ಯಕೀಯ ನೆಲೆಯಿದ್ದ ಹೊರತಾಗಿಯೂ ಪ್ರೊ. ಹನಿ ಬಾಬು ಹಾಗೂ ಕವಿ ವರವರ ರಾವ್ ಅವರಿಗೆ ಕಿರುಕುಳ ನೀಡಲಾಗಿದ್ದು, ಅವರ ಜಾಮೀನನ್ನು ತಿರಸ್ಕರಿಸಲಾಗಿದೆ ಎಂಬುದರತ್ತ ಬೊಟ್ಟು ಮಾಡಲಾಗಿದೆ.
ಸ್ವತಂತ್ರ ಮಾಧ್ಯಮ ಸಂಸ್ಥೆಯಾದ NewsClick ಮೇಲಿನ ದಾಳಿಯ ನಿದರ್ಶನ ನೀಡಿರುವ ವರದಿಯು, ಸ್ವತಂತ್ರ ಮಾಧ್ಯಮ ಸಂಸ್ಥೆಗಳನ್ನು ಹತ್ತಿಕ್ಕುವ ಹಾಗೂ ಅಂತರ್ಜಾಲದಲ್ಲಿ ಸರಕಾರದ ಟೀಕೆಯನ್ನು ತಡೆ ಹಿಡಿಯುವ ಪ್ರಯತ್ನಗಳು ಮುಂದುವರಿದಿವೆ" ಎಂಬುದರತ್ತ ಬೆಳಕು ಚೆಲ್ಲಿದೆ.
ಅಂತರ್ಜಾಲ ಸೇವೆ ಸ್ಥಗಿತದ ಕುರಿತೂ ಈ ವರದಿಯಲ್ಲಿ ಪ್ರಶ್ನೆ ಎತ್ತಲಾಗಿದ್ದು, ವಿಶೇಷವಾಗಿ ಸರಕಾರದ ವಿರುದ್ಧ ಭಿನ್ನಮತದ ದೃಷ್ಟಿಕೋನವಿರುವ ಜಮ್ಮು ಮತ್ತು ಕಾಶ್ಮೀರದಂಥ ಪ್ರದೇಶಗಳಲ್ಲಿನ ಅಂತರ್ಜಾಲ ಸೇವೆ ಸ್ಥಗಿತದ ಕುರಿತು ಪ್ರಶ್ನಿಸಲಾಗಿದೆ.
ಸೌಜನ್ಯ: thewire.in