ವಿಜಯವಾಡದಲ್ಲಿ ವಿಶ್ವದ ಅತಿ ಎತ್ತರದ ಅಂಬೇಡ್ಕರ್ ಪ್ರತಿಮೆ ಉದ್ಘಾಟನೆ
ವಿಜಯವಾಡ: ವಿಜಯವಾಡದ ಸ್ವರಾಜ್ ಮೈದಾನದಲ್ಲಿ ನಿರ್ಮಿಸಲಾಗಿರುವ ವಿಶ್ವದ ಅತಿ ಎತ್ತರದ ಅಂಬೇಡ್ಕರ್ ಪ್ರತಿಮೆ ಇಂದು ಅನಾವರಣಗೊಂಡಿತು. ವಿಗ್ರಹದ ಎತ್ತರವು 125 ಅಡಿ ಇದ್ದು, 85 ಅಡಿ ಇರುವ ಮೂರ್ತಿ ಪೀಠವನ್ನು ಸೇರಿಸಿದರೆ, ಪ್ರತಿಮೆಯ ಒಟ್ಟಾರೆ ಎತ್ತರವು 206 ಅಡಿಯಾಗಿದೆ. ಸ್ವರಾಜ್ ಮೈದಾನದಲ್ಲಿ ನಿರ್ಮಿಸಲಾಗಿರುವ ಈ ಪ್ರತಿಮೆಯ ಸುತ್ತ ಅನುಭವ ಕೇಂದ್ರ, 2000 ಆಸನ ಸಾಮರ್ಥ್ಯದ ಸಮ್ಮೇಳನ ಸಭಾಂಗಣ, ಉಪಾಹಾರ ಗೃಹ, ಮಕ್ಕಳ ಆಟದ ಆವರಣ, ಕೊಳಗಳು, ಸಂಗೀತ ಕಾರಂಜಿ ಹಾಗೂ ನಡಿಗೆಯ ದಾರಿಯಂತಹ ನಾಗರಿಕ ಸೌಕರ್ಯಗಳನ್ನು ಒದಗಿಸಲಾಗಿದೆ.
ಸ್ವರಾಜ್ ಮೈದಾನವನ್ನು ಇನ್ನು ಮುಂದೆ ‘ಡಾ. ಬಿ.ಆರ್.ಅಂಬೇಡ್ಕರ್ ಸ್ವರಾಜ್ ಮೈದಾನ’ ಎಂದು ಅಧಿಕೃತವಾಗಿ ಗುರುತಿಸಲಾಗುತ್ತದೆ.
ಜನವರಿ 20ರಂದು ಪ್ರತಿಮೆ ಪ್ರತಿಷ್ಠಾಪನೆಗೊಂಡಿರುವ ಸ್ವರಾಜ್ ಮೈದಾನದ ದ್ವಾರಗಳು ತೆರೆಯಲಿದ್ದು, ಆ ಮೂಲಕ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ನಿರ್ಮಿಸಲಾಗಿರುವ 125 ಅಡಿ ಎತ್ತರದ ಪ್ರತಿಮೆಯ ವೀಕ್ಷಣೆಯು ಸಾರ್ವಜನಿಕರಿಗೆ ಅಧಿಕೃತವಾಗಿ ಮುಕ್ತವಾಗಲಿದೆ. ಈ ಪ್ರತಿಮೆಯು ಅತ್ಯಂತ ಎತ್ತರದ ಧಾರ್ಮಿಕೇತರ ಪ್ರತಿಮೆ ಮಾತ್ರವಲ್ಲದೆ ಭಾರತದಲ್ಲೇ ತಯಾರಾಗಿರುವ ಹೆಮ್ಮೆಯ ಪ್ರತಿಮೆಯಾಗಿದೆ ಎಂದು ಆಂಧ್ರಪ್ರದೇಶದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಹೇಳಲಾಗಿದೆ.
ಈ ಯೋಜನೆಯನ್ನು ನೊಯ್ಡಾ ಮೂಲದ ಡಿಸೈನ್ ಅಸೋಸಿಯೇಟ್ಸ್ ಸಂಸ್ಥೆಯು ಸಂಪೂರ್ಣವಾಗಿ ಅಭಿವೃದ್ಧಿಪಡಿಸಿದ್ದು, ಈ ಯೋಜನೆಯಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅನುಭವ ಕೇಂದ್ರ, 2000 ಆಸನ ಸಾಮರ್ಥ್ಯದ ಸಮ್ಮೇಳನ ಸಭಾಂಗಣ, ಉಪಾಹಾರ ಗೃಹ ಹಾಗೂ ಮಕ್ಕಳಿಗೆಂದೇ ಮೀಸಲಾಗಿರುವ ಆಟದ ಆವರಣವನ್ನು ಒಳಗೊಂಡಿದೆ.