ಜಾಗತಿಕ ಹಿತಕ್ಕೆ ಯೋಗ ಪ್ರಬಲ ಸಾಧನ : ಪ್ರಧಾನಿ ಮೋದಿ
ಶ್ರೀನಗರ : ಯೋಗವು ಭೂತಕಾಲದ ವಿಷಯಗಳನ್ನು ಮರೆತು ವರ್ತಮಾನದಲ್ಲಿ ನೆಮ್ಮದಿಯಿಂದ ಬದುಕಲು ಜನರಿಗೆ ನೆರವಾಗುತ್ತದೆ. ಹೀಗಾಗಿ ಯೋಗವನ್ನು ಜಾಗತಿಕ ಹಿತಕ್ಕಾಗಿ ಪ್ರಬಲ ಸಾಧನವನ್ನಾಗಿ ವಿಶ್ವವು ನೋಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ಇಲ್ಲಿ ಹೇಳಿದರು.
10ನೇ ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ಇಲ್ಲಿಯ ಶೇರ್-ಇ-ಕಾಶ್ಮೀರ ಇಂಟರ್‌ನ್ಯಾಷನಲ್ ಕಾನ್ಫರೆನ್ಸ್ ಸೆಂಟರ್ (ಎಸ್‌ಕೆಐಸಿಸಿ)ನಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಯೋಗವು ತಮ್ಮ ಏಳಿಗೆಯು ತಮ್ಮ ಸುತ್ತಲಿನ ಜಗತ್ತಿನ ಏಳಿಗೆಯೊಂದಿಗೆ ನಂಟು ಹೊಂದಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ಜನರಿಗೆ ನೆರವಾಗಿದೆ ಎಂದು ಹೇಳಿದರು.
‘ನಮ್ಮ ಮನಸ್ಸಿನಲ್ಲಿ ಶಾಂತಿ ನೆಲೆಸಿದ್ದರೆ ನಾವು ನಮ್ಮ ಸುತ್ತಲಿರುವವರ ಮೇಲೆಯೂ ಸಕಾರಾತ್ಮಕ ಪರಿಣಾಮವನ್ನು ಬೀರಬಹುದು. ಯೋಗ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯ ಹೊಸ ಮಾರ್ಗಗಳಿಗೆ ಕಾರಣವಾಗುತ್ತಿದೆ ’ ಎಂದರು.
ದಾಲ್ ಸರೋವರದ ದಂಡೆಯಲ್ಲಿರುವ ಎಸ್‌ಕೆಐಸಿಸಿಯ ಹುಲ್ಲುಹಾಸಿನ ಮೇಲೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತಾದರೂ ನಿರಂತರವಾಗಿ ಮಳೆ ಸುರಿಯುತ್ತಿದ್ದರಿಂದ ನಂತರ ಒಳಾಂಗಣಕ್ಕೆ ಸ್ಥಳಾಂತರಿಸಲಾಗಿತ್ತು.
‘ವಿಶ್ವಾದ್ಯಂತ ಯೋಗಾಭ್ಯಾಸಿಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ ಮತ್ತು ಯೋಗ ಅವರ ದೈನಂದಿನ ಜೀವನದ ಭಾಗವಾಗುತ್ತಿದೆ. ನಾನು ಎಲ್ಲಿಯೇ ಹೋದರೂ ನನ್ನೊಂದಿಗೆ ಯೋಗದ ಲಾಭಗಳ ಕುರಿತು ಮಾತನಾಡದ ಅಂತರರಾಷ್ಟ್ರೀಯ ನಾಯಕರಿಲ್ಲ’ ಎಂದ ಮೋದಿ, ಹಲವಾರು ದೇಶಗಳಲ್ಲಿ ಯೋಗ ಜನರ ದೈನಂದಿನ ಬದುಕಿನ ಭಾಗವಾಗುತ್ತಿದೆ. ಧ್ಯಾನದ ಈ ಪ್ರಾಚೀನ ರೂಪವು ಅಲ್ಲಿ ಬಹುಬೇಗ ಜನಪ್ರಿಯಗೊಳ್ಳುತ್ತಿದೆ ಎಂದು ತುರ್ಕ್‌ಮೆನಿಸ್ತಾನ್, ಸೌದಿ ಅರೇಬಿಯ, ಮಂಗೋಲಿಯಾ ಮತ್ತು ಜರ್ಮನಿಗಳ ಉದಾಹರಣೆಗಳನ್ನು ಉಲ್ಲೇಖಿಸಿ ಹೇಳಿದರು.
ತನ್ನ ದೇಶದಲ್ಲಿ ಯೋಗವನ್ನು ಜನಪ್ರಿಯಗೊಳಿಸಿರುವುದಕ್ಕಾಗಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ 101ರ ಹರೆಯದ ಫ್ರೆಂಚ್ ಮಹಿಳೆ ಚಾರ್ಲೊಟ್ಟೆ ಚಾಪಿನ್ ಅವರನ್ನೂ ಪ್ರಧಾನಿ ತನ್ನ ಭಾಷಣದಲ್ಲಿ ಉಲ್ಲೇಖಿಸಿದರು.
‘ನಾವಿಂದು ಉತ್ತರಾಖಂಡ ಮತ್ತು ಕೇರಳದಂತಹ ರಾಜ್ಯಗಳಲ್ಲಿ ಯೋಗ ಪ್ರವಾಸೋದ್ಯಮವನ್ನು ನೋಡುತ್ತಿದ್ದೇವೆ. ಯೋಗವನ್ನು ನೋಡಲು ಮತ್ತು ಅದರ ಬಗ್ಗೆ ಅಧಿಕೃತ ಜ್ಞಾನವನ್ನು ಪಡೆಯಲು ಜನರು ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಜನರು ಈಗ ದೈಹಿಕ ಕ್ಷಮತೆಗಾಗಿ ಯೋಗ ತರಬೇತುದಾರರನ್ನು ನೇಮಿಸಿಕೊಳ್ಳುತ್ತಿದ್ದಾರೆ. ಕಂಪನಿಗಳು ತಮ್ಮ ಉದ್ಯೋಗಿಗಳಿಗಾಗಿ ಮಾನಸಿಕ ಮತ್ತು ದೈಹಿಕ ಕ್ಷಮತೆ ಕಾರ್ಯಕ್ರಮಗಳಲ್ಲಿ ಯೋಗವನ್ನು ಸೇರಿಸಿಕೊಳ್ಳುತ್ತಿವೆ. ಯೋಗವು ಜೀವನೋಪಾಯದ ಹೊಸ ಮಾರ್ಗಗಳನ್ನು ತೆರೆದಿದೆ’ ಎಂದು ಹೇಳಿದ ಮೋದಿ, ಜನರು ಇಂದು ಎದುರಿಸುತ್ತಿರುವ ಹಲವಾರು ಸಮಸ್ಯೆಗಳಿಗೆ ಯೋಗವು ಪರಿಹಾರಗಳನ್ನು ಒದಗಿಸುತ್ತದೆ. ಅದು ಜ್ಞಾನ ಮಾತ್ರವಲ್ಲ, ವಿಜ್ಞಾನವೂ ಹೌದು. ಮಾಹಿತಿ ಕ್ರಾಂತಿಯ ಈ ಯುಗದಲ್ಲಿ ಮಾಹಿತಿ ಸಂಪನ್ಮೂಲಗಳ ಮಹಾಪೂರವೇ ಇದೆ ಮತ್ತು ಯಾವುದೇ ಒಂದು ವಿಷಯದ ಮೇಲೆ ಮನಸ್ಸನ್ನು ಕೇಂದ್ರೀಕರಿಸುವುದು ಸವಾಲಾಗಿದೆ. ಇದಕ್ಕೂ ಪರಿಹಾರವು ಯೋಗದಲ್ಲಿದೆ. ಅದು ಮನಸ್ಸಿನ ಏಕಾಗ್ರತೆಗೆ ನೆರವಾಗುತ್ತದೆ. ಇದೇ ಕಾರಣದಿಂದ ಕ್ರೀಡೆಯಿಂದ ಸೇನೆಯವರೆಗೆ ಯೋಗವನ್ನು ದಿನಚರಿಯಲ್ಲಿ ಸೇರಿಸಲಾಗಿದೆ ಎಂದರು.
ಯೋಗವು ಉತ್ಪಾದಕತೆ ಮತ್ತು ಸಹಿಷ್ಣುತೆಯನ್ನು ಹೆಚ್ಚಿಸುತ್ತದೆ. ಹೀಗಾಗಿ ಗಗನಯಾನಿಗಳು ಮತ್ತು ಬಾಹ್ಯಾಕಾಶ ಯೋಜನೆಗಳಲ್ಲಿ ಕೆಲಸ ಮಾಡುವವರಿಗೂ ಯೋಗ ತರಬೇತಿಯನ್ನು ನೀಡಲಾಗುತ್ತಿದೆ. ಅನೇಕ ಜೈಲುಗಳಲ್ಲಿ ಕೈದಿಗಳು ಸಕಾರಾತ್ಮಕವಾಗಿ ಯೋಚಿಸುವಂತಾಗಲು ಅವರಿಗೂ ಯೋಗವನ್ನು ಬೋಧಿಸಲಾಗುತ್ತಿದೆ ಎಂದು ಹೇಳಿದರು.
ಜಮ್ಮು-ಕಾಶ್ಮೀರದ ಜನರು ಕೂಡ ಯೋಗಾಭ್ಯಾಸ ಮಾಡುತ್ತಿರುವುದಕ್ಕೆ ತೃಪ್ತಿಯನ್ನು ವ್ಯಕ್ತಪಡಿಸಿದ ಅವರು, ಇದು ಇಲ್ಲಿಗೆ ಹೆಚ್ಚಿನ ಪ್ರವಾಸಿಗಳನ್ನು ಆಕರ್ಷಿಸಲಿದೆ ಎಂದರು.