ಪ್ರತಿ ಶುಕ್ರವಾರ ನಮಾಝ್ ಮಾಡಲಾಗುತ್ತದೆ, ಆದರೆ ಹೋಳಿ ವರ್ಷಕ್ಕೊಮ್ಮೆ ಮಾತ್ರ ಬರುತ್ತದೆ: ಸಂಭಲ್ ಪೋಲಿಸ್ ಅಧಿಕಾರಿಯ ಹೇಳಿಕೆ ಪುನರುಚ್ಚರಿಸಿದ ಸಿಎಂ ಆದಿತ್ಯನಾಥ್

ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ (PTI)
ಲಕ್ನೋ: ಹೋಳಿಯನ್ನು ವರ್ಷಕ್ಕೊಮ್ಮೆ ಆಚರಿಸಲಾಗುತ್ತದೆ,ಆದರೆ ಶುಕ್ರವಾರದ ನಮಾಝ್ ನ್ನು ಪ್ರತಿ ವಾರ ಮಾಡಲಾಗುತ್ತದೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಸಂಭಲ್‌ನ ಪೋಲಿಸ್ ಅಧಿಕಾರಿಯನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಬೆಂಬಲಿಸಿದ್ದಾರೆ.
ಈ ವರ್ಷದ ಹೋಳಿ ಹಬ್ಬವು ಮಾ.14ರಂದು ನಡೆಯಲಿದ್ದು,ಅಂದು ಮುಸ್ಲಿಮರ ಸಾಮೂಹಿಕ ನಮಾಝ್ ನಿರ್ವಹಿಸುವ ಶುಕ್ರವಾರವೂ ಆಗಿದೆ. ಹೀಗಾಗಿ ಕೋಮು ಸಾಮರಸ್ಯವನ್ನು ಕಾಯ್ದುಕೊಳ್ಳಲು ಮಾ.6ರಂದು ಸಂಭಲ್ ಪೋಲಿಸ್ ಠಾಣೆಯಲ್ಲಿ ನಡೆದಿದ್ದ ಶಾಂತಿಸಭೆಯಲ್ಲಿ ಡಿಎಸ್‌ಪಿ ಅನುಜ ಚೌಧರಿಯವರು,‘ಬಣ್ಣಗಳ ಹಬ್ಬವು ವರ್ಷಕ್ಕೆ ಒಂದು ಸಲ ಮಾತ್ರ ಬರುತ್ತದೆ ಮತ್ತು ಶುಕ್ರವಾರದ ನಮಾಝ್ ಗಳು ವರ್ಷಕ್ಕೆ 52 ಸಲ ನಡೆಯುತ್ತವೆ. ಹೀಗಾಗಿ ಶುಕ್ರವಾರದ ನಮಾಝ್ ಗೆ ತೆರಳುವಾಗ ತಮ್ಮ ಮೈಮೇಲೆ ಬಣ್ಣಗಳು ಎರಚಲ್ಪಡುವುದು ದೈವಿಕವಲ್ಲದ ಕೃತ್ಯ ಎಂದು ಭಾವಿಸುವ ನನ್ನ ಮುಸ್ಲಿಮ್ ಸೋದರರಿಗೆ ಬೀದಿಗಳಲ್ಲಿ ಹೋಳಿ ಸಂಭ್ರಮಾಚರಣೆ ಮುಗಿಯುವವರೆಗೂ ಮನೆಗಳಲ್ಲಿಯೇ ಇರುವಂತೆ ನಾನು ಸಲಹೆ ನೀಡುತ್ತೇನೆ ’ ಎಂದು ಹೇಳಿದ್ದರು.
ಶನಿವಾರ ಇಂಡಿಯಾ ಟುಡೇ ಕಾಂಕ್ಲೇವ್‌ನ್ನು ಉದ್ದೇಶಿಸಿ ಮಾತನಾಡಿದ ಆದಿತ್ಯನಾಥ ಪೋಲಿಸ್ ಅಧಿಕಾರಿ ಓರ್ವ ‘ಪೆಹಲ್ವಾನ್’ ಆಗಿ ಮಾತನಾಡಿರಬಹುದು ಎಂದರು. ಚೌಧರಿ ಮಾಜಿ ಕುಸ್ತಿಪಟುವಾಗಿದ್ದು,ಅರ್ಜುನ ಪ್ರಶಸ್ತಿ ಪುರಸ್ಕೃತರೂ ಆಗಿದ್ದಾರೆ.
ಶುಕ್ರವಾರದ ನಮಾಝ್ ಅನ್ನು ಅಪರಾಹ್ನ ಎರಡು ಗಂಟೆಯ ಬಳಿಕ ನಡೆಸಲು ನಿರ್ಧರಿಸಿದ್ದಕ್ಕಾಗಿ ಧಾರ್ಮಿಕ ಮುಖಂಡರಿಗೆ ವಂದನೆಗಳನ್ನು ಸಲ್ಲಿಸಿದ ಆದಿತ್ಯನಾಥ್, ‘ಹಬ್ಬಗಳ ಸಂದರ್ಭಗಳಲ್ಲಿ ನಾವು ಪರಸ್ಪರರ ಭಾವನೆಗಳನ್ನು ಗೌರವಿಸಬೇಕು. ನಮಾಝ್ ನ್ನು ಪ್ರತಿ ಶುಕ್ರವಾರ ಮಾಡಲಾಗುತ್ತದೆ, ಆದರೆ ಹೋಳಿ ವರ್ಷಕ್ಕೊಮ್ಮೆ ಮಾತ್ರ ಬರುತ್ತದೆ. ನಮಾಜ್ ಅನ್ನು ವಿಳಂಬಿಸಬಹುದು ಮತ್ತು ಎಂದಿನ ಸಮಯಕ್ಕೇ (ಅಪರಾಹ್ನ 1:30) ನಮಾಝ್ ಮಾಡಲು ಬಯಸುವವರು ತಮ್ಮ ಮನೆಯಲ್ಲಿಯೇ ಅದನ್ನು ಮಾಡಬಹುದು. ನಮಾಝ್ ಗಾಗಿ ಮಸೀದಿಗೆ ಹೋಗುವುದು ಕಡ್ಡಾಯವೇನಲ್ಲ’ ಎಂದು ಹೇಳಿದರು.
ಸಂಭಲ್ ಪೋಲಿಸ್ ಅಧಿಕಾರಿಯ ಹೇಳಿಕೆಯ ಕುರಿತು ಉತ್ತರ ಪ್ರದೇಶದ ಪ್ರತಿಪಕ್ಷಗಳು ಮತ್ತು ಮುಸ್ಲಿಮ್ ಧಾರ್ಮಿಕ ಮುಖಂಡರು ಕಳವಳಗಳನ್ನು ವ್ಯಕ್ತಪಡಿಸಿದ್ದು, ಆದಿತ್ಯನಾಥ್ ನೇತೃತ್ವದ ಸರಕಾರದ ಅಧಿಕಾರಿಗಳು ಬಿಜೆಪಿಯ ಏಜೆಂಟ್‌ಗಳಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸಂಭಲ್‌ನಲ್ಲಿ ಗಲಭೆಗಳನ್ನು ರೂಪಿಸಿದ್ದೇ ಡಿಎಸ್‌ಪಿ ಅನುಜ ಚೌಧರಿ ಎಂದು ಪ್ರತಿಪಾದಿಸಿದ ಎಸ್‌ಪಿ ಪ್ರ.ಕಾರ್ಯದರ್ಶಿ ಹಾಗೂ ಸಂಸದ ರಾಮಗೋಪಾಲ ಯಾದವ್ ಅವರು, ಹಿಂಸಾಚಾರದ ಸಮಯದಲ್ಲಿ ಜನರನ್ನು ಪ್ರಚೋದಿಸಿದ್ದ ಪೋಲಿಸ್ ಅಧಿಕಾರಿಯಿಂದ ಇನ್ನೇನನ್ನು ನಿರೀಕ್ಷಿಸಲು ಸಾಧ್ಯ? ಆಡಳಿತ ಬದಲಾದಾಗ ಇಂತಹ ಜನರು ಜೈಲಿನಲ್ಲಿರಲಿದ್ದಾರೆ ಎಂದು ಹೇಳಿದರು.
ಚೌಧರಿ ವಿರುದ್ಧ ಮೊರಾದಾಬಾದ್ ಡಿಐಜಿಗೆ ದೂರು ಸಲ್ಲಿಸಿರುವ ಕಾಂಗ್ರೆಸ್ ನಾಯಕ ಆದಿತ್ಯ ಗೋಸ್ವಾಮಿಯವರು,ಅವರು ಧರ್ಮದ ಹೆಸರಿನಲ್ಲಿ ಜನರ ನಡುವೆ ಬಿರುಕನ್ನು ಮೂಡಿಸಲು ಮತ್ತು ದ್ವೇಷವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ. ಅವರ ಹೇಳಿಕೆಯು ಅತ್ಯಂತ ಆಕ್ಷೇಪಾರ್ಹವಾಗಿದ್ದು,ಅದು ಎರಡು ಸಮುದಾಯಗಳ ನಡುವೆ ದ್ವೇಷಕ್ಕೆ ಕಾರಣವಾಗುತ್ತದೆಯಷ್ಟೇ ಎಂದರು.
ಡಿಎಸ್‌ಪಿ ಚೌಧರಿ ಸಂಭಲ್ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಪೆನ್ಸಿಯಾ ಅವರ ಕೆಂಗಣ್ಣಿಗೂ ಗುರಿಯಾಗಿದ್ದಾರೆ. ತನ್ನ ಅಥವಾ ಎಸ್‌ಪಿ ಅನುಮತಿಯಿಲ್ಲದೆ ಯಾವುದೇ ಅಧಿಕಾರಿ ಯಾವುದೇ ಸಾರ್ವಜನಿಕ ಹೇಳಿಕೆಗಳನ್ನು ನೀಡಬಾರದು ಎಂದು ಫರ್ಮಾನ್ ಹೊರಡಿಸಿರುವ ಪೆನ್ಸಿಯಾ,ಶಾಂತಿಯನ್ನು ಕಾಯ್ದುಕೊಳ್ಳುವುದು ಜಿಲ್ಲಾಡಳಿತದ ಅತ್ಯುನ್ನತ ಆದ್ಯತೆಯಾಗಿದೆ. ಯಾವುದೇ ಅಧಿಕಾರಿಯು ಯಾವುದೇ ಸಮುದಾಯದ ಧಾರ್ಮಿಕ ಭಾವನೆಗಳಿಗೆ ನೋವನ್ನುಂಟು ಮಾಡುವ ಯಾವುದೇ ಹೇಳಿಕೆಯನ್ನು ನೀಡಬಾರದು ಎಂದಿದ್ದಾರೆ.