ತೆಲಂಗಾಣ ವಿಧಾನಸಭಾ ಚುನಾವಣೆ: ಕಾಂಗ್ರೆಸ್ ಪಕ್ಷಕ್ಕೆ ಕೈಕೊಟ್ಟ ವೈ.ಎಸ್.ಶರ್ಮಿಳಾ
ಹೊಸದಿಲ್ಲಿ: ಆಡಳಿತಾರೂಢ ಭಾರತ್ ರಾಷ್ಟ್ರ ಸಮಿತಿ ಸರ್ಕಾರದ ವಿರುದ್ಧ ಮತಗಳನ್ನು ಕ್ರೋಡೀಕರಿಸಲು ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲಾಗುತ್ತದೆ ಎಂಬ ವದಂತಿಗಳಿಗೆ ತೆರೆ ಎಳೆದಿರುವ ವೈಎಸ್ ಆರ್ ತೆಲಂಗಾಣ ಪಕ್ಷದ ನಾಯಕಿ ವೈ.ಎಸ್.ಶರ್ಮಿಳಾ, ತಮ್ಮ ಪಕ್ಷವು ಎಲ್ಲ 119 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂದು ಘೋಷಿಸಿದ್ದಾರೆ ಎಂದು ndtv.com ವರದಿ ಮಾಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ವೈ.ಎಸ್.ಶರ್ಮಿಳಾ, “ನಾನು ಮೈತ್ರಿ ಒಪ್ಪಂದಕ್ಕಾಗಿ ನಾಲ್ಕು ತಿಂಗಳಿನಿಂದ ಕಾದೆ. ಈಗ ಯಾರೂ ಕೆಸಿಆರ್ ವಿರೋಧಿ ಮತಗಳು ವಿಭಜನೆಯಾದರೆ ನಮ್ಮನ್ನು ದೂರುವಂತಿಲ್ಲ. ನಾವು ನಮ್ಮ ಕೈಲಾದಷ್ಟೂ ಪ್ರಯತ್ನಿಸಿದ್ದೇವೆ” ಎಂದು ಹೇಳಿರುವ ಅವರು, ನಾನು ಪಲೈರ್ ವಿಧಾನಸಭಾ ಕ್ಷೇತ್ರವಲ್ಲದೆ ಮತ್ತೊಂದು ಕ್ಷೇತ್ರದಿಂದಲೂ ಸ್ಪರ್ಧಿಸುವ ಸಾಧ್ಯತೆ ಇದೆ” ಎಂದೂ ತಿಳಿಸಿದ್ದಾರೆ.
ಎರಡು ವಾರಗಳ ಹಿಂದೆ, “ಕಾಂಗ್ರೆಸ್ ಪಕ್ಷದೊಂದಿಗಿನ ಮೈತ್ರಿ ಕುರಿತು ಸೆಪ್ಟೆಂಬರ್ ಅಂತ್ಯದ ವೇಳೆಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು” ಎಂದು ಹೇಳಿದ್ದರು. ಆದರೆ, ಇದೀಗ “ಯಾವ ಮೈತ್ರಿಯೂ ಫಲಪ್ರದವಾಗದೆ ಇರುವುದರಿಂದ ನಮ್ಮ ಪಕ್ಷವು ಎಲ್ಲ 119 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ” ಎಂದು ತಿಳಿಸಿದ್ದಾರೆ.
ಇದಕ್ಕೂ ಮುನ್ನ, ಕಳೆದ ತಿಂಗಳು ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿದ್ದ ವೈ.ಎಸ್.ಶರ್ಮಿಳಾ, ಆ ಭೇಟಿಯ ನಂತರ ಅವರೊಂದಿಗೆ ರಚನಾತ್ಮಕ ಚರ್ಚೆ ನಡೆಯಿತು ಎಂದು ಹೇಳಿ, ಕೆಸಿಆರ್ ಪರಾಭವವನ್ನು ಎದುರು ನೋಡಲಿದ್ದಾರೆ ಎಂದು ಎಚ್ಚರಿಕೆ ರವಾನಿಸಿದ್ದರು.
ಆದರೆ, ಈ ಕುರಿತು NDTV ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿದ್ದ ತೆಲಂಗಾಣ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ರೇವಂತ್ ರೆಡ್ಡಿ, ಆಕೆಯೊಂದಿಗೆ ತಮ್ಮ ಪಕ್ಷವು ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೇಳುವ ಮೂಲಕ ವೈ.ಎಸ್.ಶರ್ಮಿಳಾರೊಂದಿಗಿನ ಮೈತ್ರಿ ಸಾಧ್ಯತೆಯನ್ನು ತಳ್ಳಿ ಹಾಕಿದ್ದರು.
ತೆಲಂಗಾಣ ವಿಧಾನಸಭೆಗೆ ನವೆಂಬರ್ 30ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 3ರಂದು ಫಲಿತಾಂಶ ಪ್ರಕಟವಾಗಲಿದೆ.