ಚಂದ್ರಲೋಕದ ವಸಾಹತೀಕರಣ: ವಿಜ್ಞಾನದ ಹೆಸರಲ್ಲಿ ಚಂದ್ರನ ಮೇಲೆ ಕಾರ್ಪೊರೇಟ್ ಉದ್ಯಮಿಗಳ ಆಕ್ರಮಣ

ಈಗ ಎಲ್ಲಾ ವಿಜ್ಞಾನವನ್ನು ಕಡಿಮೆ ವೆಚ್ಚದಲ್ಲಿ ವ್ಯೋಮಯಾತ್ರಿಗಳನ್ನು ಆಕಾಶದಲ್ಲಿ ಬಿಟ್ಟು ಬರುವ ತಂತ್ರಜ್ಞಾನವನ್ನು ಕಂಡುಹಿಡಿಯುವಲ್ಲಿ ವ್ಯಯ ಮಾಡಲಾಗುತ್ತಿದೆ. ಈಗಾಗಲೇ ಖಾಸಗಿ ಕಂಪೆನಿಗಳು ಅದರಲ್ಲಿ ಯಶ ಪಡೆಯುತ್ತಿವೆ. ಹಾಗೆಯೇ ಅಂತರಿಕ್ಷದಲ್ಲಿ International Space Station (ISS) ಸ್ಥಾಪಿಸಿ ತಿಂಗಳುಗಟ್ಟಲೆ ಮತ್ತು ವರ್ಷಗಟ್ಟಲೆ ವ್ಯೋಮಯಾತ್ರಿಗಳನ್ನು ಅಲ್ಲಿ ಪ್ರಯೋಗಗಳಿಗೆ ಮತ್ತು ವಾಸಕ್ಕೆ ಹಚ್ಚುವುದು ಉದ್ಯಮಿಗಳ ವಿಜ್ಞಾನದ ಮುಂದಿನ ಹೆಜ್ಜೆ. ಹಾಗೆಯೇ ೨೦೨೪-೩೦ರ ನಡುವೆ ಚಂದ್ರನ ಮೇಲೂ ಇಂಥ ಒಂದು ಸ್ಥಾವರವನ್ನು ಸ್ಥಾಪಿಸಿ ಚಂದ್ರನ ಮೇಲೆ ತಿಂಗಳುಗಟ್ಟಲೆ ಮನುಷ್ಯ ಜೀವನ ಸಾಧ್ಯತೆಯನ್ನು ಅನ್ವೇಷಿಸುವುದೇ ಇಂದು ಜಾಗತಿಕ ಕಾರ್ಪೊರೇಟ್ ಉದ್ದಿಮೆ ನಿರ್ದೇಶಿತ ವಿಜ್ಞಾನ-ತಂತ್ರಜ್ಞಾನದ ದಿಕ್ಕಾಗಿದೆ.

Update: 2023-08-30 03:14 GMT
Editor : Safwan | Byline : ಶಿವಸುಂದರ್

ಆಗಸ್ಟ್ 23ರಂದು ಭಾರತದ ಚಂದ್ರನೌಕೆ ಚಂದ್ರನ ದಕ್ಷಿಣ ಕಗ್ಗತ್ತಲ ಭಾಗದ ಮೇಲೆ ಇಳಿಯುವ ಮೂಲಕ ಭಾರತದ ಚಂದ್ರಯಾನ-೩ ಎರಡನೇ ಪ್ರಯತ್ನದಲ್ಲಿ ಯಶಸ್ವಿಯಾಗಿದೆ ಮತ್ತು ಆ ನೌಕೆಯ ಜೊತೆ ಕಳಿಸಲಾಗಿದ್ದ ರೋವರ್ ವಾಹನವು ಚಂದ್ರನ ಮೇಲೆ ಸಂಚರಿಸುತ್ತಾ ಚಂದ್ರಲೋಕದ ಬಗ್ಗೆ ಅಪರೂಪದ ಮಾಹಿತಿಗಳನ್ನು ಭಾರತಕ್ಕೆ ಕಳಿಸಲು ಪ್ರಾರಂಭಿಸಿದೆ. ಇದು ಭಾರತದ ವಿಜ್ಞಾನಿಗಳ ಐತಿಹಾಸಿಕ ಸಾಧನೆಯಾಗಿದೆ. ಈ ಯಶಸ್ವಿ ಪ್ರಯೋಗದಿಂದ ಸಿಗುವ ಮಾಹಿತಿಗಳು ಭಾರತಕ್ಕೆ ಮಾತ್ರವಲ್ಲದೆ ಜಗತ್ತಿನ ಒಟ್ಟಾರೆ ವೈಜ್ಞಾನಿಕ ಸಮುದಾಯಕ್ಕೆ ಚಂದ್ರನನ್ನು ಮನುಷ್ಯರ ವಸಾಹತುವಾಗಿಸಲು ಅಗತ್ಯವಾದ ಮಾಹಿತಿಗಳು ಲಭ್ಯವಾಗುತ್ತದೆ. ಅದನ್ನು ಆಧರಿಸಿ ಭಾರತವನ್ನೂ ಒಳಗೊಂಡಂತೆ ಇತರ ದೇಶಗಳು ಇನ್ನೂ ಹೆಚ್ಚಿನ ಪ್ರಯೋಗಗಳನ್ನು ಮಾಡಲು ಅನುಕೂಲವಾಗುತ್ತದೆ.

ಚಂದ್ರನಿಗೂ ಖಾಕಿ ಚಡ್ಡಿಯೇ?

ಆದರೆ ಭಾರತಕ್ಕೆ ಏನೇ ಒಳ್ಳೆಯದಾದರೂ ತನ್ನಿಂದ, ಏನೇ ಕೆಟ್ಟದಾದರೂ ಕಾಂಗ್ರೆಸ್ನಿಂದ ಎಂಬ ಕ್ಷುಲ್ಲಕ ರಾಜಕಾರಣ ಮಾಡುತ್ತಿರುವ ಮೋದಿ ಮತ್ತು ಬಿಜೆಪಿ ಸರಕಾರ ಹಾಗೂ ಸಂಘ ಪರಿವಾರ ವಿಜ್ಞಾನಿಗಳ ಈ ಸಾಧನೆಯನ್ನು ಕೂಡ ತಮ್ಮ ಸಾಧನೆಯೆಂಬ ಅಭಿಪ್ರಾಯ ಬರುವಂತೆ ಪ್ರಚಾರ ಮಾಡುತ್ತಿದ್ದಾರೆ. ಅಷ್ಟು ಮಾತ್ರವಲ್ಲ. ಅದನ್ನು ತಮ್ಮ ಹಿಂದುತ್ವ ರಾಜಕಾರಣಕ್ಕೆ ಪೂರಕವಾಗಿ ಬಳಸಿಕೊಳ್ಳಲು ಪ್ರಾರಂಭಿಸಿದ್ದಾರೆ. ಚಂದ್ರಯಾನ-3 ಯಶಸ್ಸು ಆದ ಕೂಡಲೇ ಟೆಲಿವಿಷನ್ ಪರದೆಯನ್ನು ಆವರಿಸಿಕೊಂಡ ಪ್ರಧಾನಿ ಮೋದಿ, ಇದು ತಾನು ಅಧಿಕಾರದಲ್ಲಿರುವ ‘ಅಮೃತಕಾಲ’ದ ಯಶಸ್ಸು ಎಂದು ಘೋಷಿಸಿಬಿಟ್ಟರು. ಹಾಗೂ ಭಾರತದ ನೌಕೆಯು ಚಂದ್ರನ ಮೇಲೆ ಇಳಿದ ಜಾಗವನ್ನು ‘ಶಿವಶಕ್ತಿ ಸ್ಥಳ’ವನ್ನಾಗಿ ಹೆಸರಿಸಿರುವುದಾಗಿ ಘೋಷಿಸಿದರು. ಇದರಿಂದ ಉತ್ತೇಜಿತಗೊಂಡ ಅಖಿಲ ಭಾರತ ಹಿಂದೂ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಚಂದ್ರಮೌಳಿ ಯೆಂಬವರು ಚಂದ್ರನನ್ನು ಹಿಂದೂ ರಾಷ್ಟ್ರವೆಂದು ಘೋಷಿಸಲು ಆಗ್ರಹಿಸಿದರು. ಒಂದರ್ಥದಲ್ಲಿ ಭಾರತದ ವಿಜ್ಞಾನಿಗಳು ಭಾರತದ ಹೆಸರನ್ನು ಚಂದ್ರನ ಎತ್ತರಕ್ಕೆ ಏರಿಸಿದ್ದರೆ, ಈ ಬೆಳವಣಿಗೆಗಳು ಭಾರತದ ಮಾನವನ್ನು ಹರಾಜು ಮಾಡಿತು.

ಅಂತರ್ರಾಷ್ಟ್ರೀಯ ನಿಯಮಗಳ ಉಲ್ಲಂಘನೆ?

ಏಕೆಂದರೆ ಇಂಥಾ ಬಾಹ್ಯಾಕಾಶ ಕಾಯಗಳ ಅನ್ವೇಷಣೆಗೆ ಹಾಗೂ ಆಕಾಶಕಾಯಗಳಿಗೆ ಹೆಸರಿಡುವುದನ್ನು ಒಳಗೊಂಡಂತೆ ಸಂಯೋಜಿತ ಮತ್ತು ಸಾಮೂಹಿಕ ವೈಜ್ಞಾನಿಕ ಪ್ರಯತ್ನಗಳನ್ನು ಮುಂದುವರಿಸಲು ಇಂಟರ್ನ್ಯಾಶನಲ್ ಅಸ್ಟ್ರಾನಾಮಿಕಲ್ ಯೂನಿಯನ್ (ಐಎಯು) ಎಂಬ ಸಂಸ್ಥೆಯಿದೆ. ಅದರಲ್ಲಿ 92 ರಾಷ್ಟ್ರಗಳಿದ್ದು ಭಾರತವೂ ಕೂಡ ಅದರ ಸದಸ್ಯ ರಾಷ್ಟ್ರ.

(https://www.iau.org/administration/about/)

1982ರಲ್ಲೇ ವಿಶ್ವಸಂಸ್ಥೆಯೂ ತನ್ನ ವಿಶೇಷ ಸಭೆ ಮತ್ತು ವಿಶೇಷ ನಿರ್ಣಯವೊಂದರಲ್ಲಿ ಆಕಾಶಕಾಯಗಳ ನಾಮಕರಣದ ಜವಾಬ್ದಾರಿಯನ್ನು ಸರ್ವಸಮ್ಮತಿಯಿಂದ ಐಎಯುಗೆ ವಹಿಸಿದೆ ಮತ್ತು ಹೀಗೆ ನಾಮಕರಣ ಮಾಡುವಾಗ ಸಂಬಂಧಿತ ರಾಷ್ಟ್ರಗಳು ಅದಕ್ಕೆ ಸಂಬಂಧಪಟ್ಟ ಪ್ರಸ್ತಾಪಗಳನ್ನು ಕಳಿಸುವ ಹಕ್ಕಿರುತ್ತದೆ. ಆದರೆ ಐಎಯುನ ಸಮಿತಿ ಅದನ್ನು ಅನುಮೋದಿಸುವ ಮುನ್ನ ಹೆಸರುಗಳು ಪುನರಾವರ್ತನೆ ಆಗದಂತೆ ಅಥವಾ ಪ್ರಚ್ಛನ್ನ ರಾಜಕೀಯ ದುರುದ್ದೇಶ ಅಥವಾ ಧಾರ್ಮಿಕ ಪ್ರಚಾರದ ಸಾಧನವನ್ನ್ನಾಗಿ ಹೆಸರನ್ನು ಬಳಕೆ ಮಾಡದಿರುವುದನ್ನು ಖಾತರಿ ಮಾಡಿಕೊಂಡು ಅನುಮೋದಿಸುತ್ತದೆ. ಇದು ಅಂತರ್ರಾಷ್ಟ್ರೀಯವಾಗಿ ನಡೆದುಕೊಂಡು ಬಂದಿರುವ ರಿವಾಜು.

(https://unstats.un.org/unsd/geoinfo/ungegn/docs/4th-uncsgn-docs/4-uncsgn-rpt-en.pdf)

ಆದರೂ ಮೋದಿ ಸರಕಾರ ಇದ್ಯಾವುದನ್ನು ಪಾಲಿಸದೆ ಭಾರತವು ವಿಜ್ಞಾನದ ಕಾರಣಕ್ಕೆ ತಲೆ ಎತ್ತಿ ನಿಲ್ಲುವ ಕ್ಷಣದಲ್ಲಿ ತನ್ನ ಕ್ಷುಲ್ಲಕ ರಾಜಕಾರಣದಿಂದ ತಲೆತಗ್ಗಿಸುವಂತೆ ಮಾಡಿದೆ.

ವಿಜ್ಞಾನ ಇಂದಿನ ಸಾಧನೆಗೆ ಹಿಂದಿನ ಜ್ಞಾನವೇ ಅಡಿಪಾಯ

ಮೇಲಾಗಿ ಇಸ್ರೋ ಮುಖ್ಯಸ್ಥರೇ ಈ ನೌಕೆಯು ಯಶಸ್ವಿಯಾಗಿ ಚಂದ್ರನ ಮೇಲೆ ಇಳಿದ ನಂತರ ಕೊಟ್ಟ ಹೇಳಿಕೆಯಂತೆ ಚಂದ್ರಯಾನ-೩ರ ಯಶಸ್ಸಿನ ಹಿಂದೆ 2019ರ ಚಂದ್ರಯಾನ-2ರ ವೈಫಲ್ಯದ ಪಾಠವಿದೆ. ಅದರ ಹಿಂದೆ 2008ರಲ್ಲಿ ಯುಪಿಎ ಸರಕಾರದ ಕಾಲದಲ್ಲಿ ಯಶಸ್ವಿಯಾಗಿ ನಡೆದ ಚಂದ್ರಯಾನ-೧ರ ಯಶಸ್ಸಿನ ಪಾಠಗಳಿವೆ.

ಅದಕ್ಕೂ ಹಿಂದೆ 1950ರ ದಶಕದಿಂದಲೇ ನೆಹರೂ ನೇತೃತ್ವದ ವಿಜ್ಞಾನ ಮುಖಿ ನೀತಿಗಳು ಮತ್ತು ಪ್ರಭುತ್ವ ಪ್ರಾಯೋಜಿತ ಬಂಡವಾಳಶಾಹಿ ಅಭಿವೃದ್ಧಿ ಮಾದರಿಯ ಭಾಗವಾಗಿ ವಿಕ್ರಂ ಸಾರಾಭಾಯಿ, ಹೋಮಿ ಭಾಭಾರಂಥ ಅತ್ಯಪೂರ್ವ ಪ್ರತಿಭಾನ್ವಿತ ವಿಜ್ಞಾನಿಗಳು ಕಟ್ಟಿದ ಇಸ್ರೋ, ಅದು ಕಳೆದ ನಾಲ್ಕು ದಶಕಗಳಲ್ಲಿ ಕೈಗೊಂಡ ಸಫಲ ಹಾಗೂ ವಿಫಲ ಬಾಹ್ಯಾಕಾಶ ಯೋಜನೆಗಳು.. ಅದಕ್ಕೆ ಪೂರಕವಾದ ಜ್ಞಾನ ಹಾಗೂ ಮಾಹಿತಿಗಳನ್ನು ಕೊಟ್ಟ ಆಗಿನ ಸೋವಿಯತ್ ರಶ್ಯ ಮತ್ತು ಅಮೆರಿಕಗಳ ಬಾಹ್ಯಾಕಾಶ ಪ್ರಯೋಗಗಳು..ಇವಿಲ್ಲದೆ ಚಂದ್ರಯಾನ-೩ ದಿಢೀರನೇ ಯಶಸ್ವಿಯಾಗುತ್ತಿರಲಿಲ್ಲ. ಜ್ಞಾನ ವಾಗಲೀ- ವಿಜ್ಞಾನವಾಗಲೀ ಬೆಳೆಯುವುದೇ ಹೀಗೆ ಐತಿಹಾಸಿಕ ಸರಪಳಿಯಲ್ಲಿ.

ಅದರಲ್ಲಿ ಯಾವೊಂದು ಕೊಂಡಿಯೂ ಅಮುಖ್ಯವೂ ಅಲ್ಲ. ಅದು ಮನುಕುಲದ ಸಾಧನೆಯೇ ವಿನಾ ಯಾವೊಬ್ಬ ರಾಜಕೀಯ ನೇತಾರನ ಸಾಧನೆಯಲ್ಲ.

ಸಫಾಯಿ ಸಾವುಗಳು ರಾಷ್ಟ್ರೀಯ ಅಪಮಾನ ಎನಿಸದ ದೇಶದಲ್ಲಿ...

ಆದರೂ ಮೋದಿ ಸರಕಾರ ಚಂದ್ರಯಾನವನ್ನು ಪ್ರಧಾನಿ ಮೋದಿ ಸಾಧಿಸಿರುವ ರಾಷ್ಟ್ರೀಯ ಹೆಮ್ಮೆ ಹಾಗೂ ಅಭಿಮಾನ ಎಂದು ಭಾವಿಸಲಾಗದವರಿಗೆ ದೇಶದ್ರೋಹಿಗಳೆಂದು ಪಟ್ಟಕಟ್ಟಲು ತುದಿಗಾಲಲ್ಲಿ ನಿಂತಿದೆ.

ಆದರೆ ಈ ವಿಜ್ಞಾನ ಯುಗದಲ್ಲಿ, ೪ ಲಕ್ಷ ಕಿ.ಮೀ. ದೂರದಲ್ಲಿರುವ ಚಂದ್ರನನ್ನೂ ಕೂಡ ತಲುಪುವ ತಂತ್ರಜ್ಞಾನವುಳ್ಳ ಈ ಭವ್ಯ ಭಾರತದಲ್ಲಿ ಆರಡಿ ಚರಂಡಿಗಿಳಿದು ಸ್ವಚ್ಛ ಮಾಡುವ ತಂತ್ರಜ್ಞಾನ ಏಕಿಲ್ಲವೆಂಬುದನ್ನು ಪ್ರಶ್ನಿಸದೆ ಚಂದ್ರಯಾನವನ್ನು ಒಪ್ಪಿಕೊಳ್ಳುವುದು ರಾಷ್ಟ್ರೀಯ ಆತ್ಮದ್ರೋಹವಾಗುವುದಿಲ್ಲವೇ?

ದಿನನಿತ್ಯ ನಾಗರಿಕ ಲೋಕವು ಮಾಡುವ ಹೊಲಸನ್ನು ಚರಂಡಿಗಿಳಿದು ಸ್ವಚ್ಛ ಮಾಡುತ್ತಾ ಸಾಯುತ್ತಿರುವ ಸಫಾಯಿ ಕರ್ಮಚಾರಿಗಳ ಸಾವುಗಳನ್ನು ಒಂದು ರಾಷ್ಟ್ರೀಯ ಅಪಮಾನ ಎಂದು ಭಾವಿಸದ ದೇಶದಲ್ಲಿ...

ಕನಿಷ್ಠ ಬೆಂಬಲ ಹಾಗೂ ವಿಜ್ಞಾನದ ಸಹಯೋಗ ಒದಗದ ಕಾರಣಕ್ಕೆ ಮಸಣ ಸೇರುತ್ತಿರುವ ಮಣ್ಣಿನ ಮಕ್ಕಳ ಸಾವುಗಳು ರಾಷ್ಟ್ರೀಯ ಅಪಮಾನ ಎಂದು ಭಾವಿಸದ ದೇಶದಲ್ಲಿ...

ಚಂದ್ರಯಾನವನ್ನು ಮಾತ್ರ ದೇಶದ ರಾಷ್ಟ್ರೀಯ ಅಭಿಮಾನ ಎಂದು ಭಾವಿಸಬೇಕೆಂದು ಮಾಡುವ ಆಗ್ರಹ ಅನಾಗರಿಕ, ಬರ್ಬರ ಮತ್ತು ಆತ್ಮವಂಚಕ.

ಏಕೆಂದರೆ ವಿಜ್ಞಾನ ಮತ್ತು ತಂತ್ರಜ್ಞಾನಗಳು ಸಂಪೂರ್ಣ ವಾಸ್ತವಿಕ ಜ್ಞಾನ ಮತ್ತು ತರ್ಕಗಳ ಮೇಲೆ ಅನ್ವೇಷಣೆಗೊಳ್ಳುತಾ ಬಂದಿದ್ದರೂ ಯಾವ ಕ್ಷೇತ್ರದಲ್ಲಿ ಹೆಚ್ಚಿನ ಜ್ಞಾನ ಅನ್ವೇಷಣೆಯಾಗಬೇಕು ಅಥವಾ ಯಾವ ಬಗೆಯ ತಂತ್ರಜ್ಞಾನ ತುರ್ತಾಗಿ ಬೇಕು ಎನ್ನುವುದನ್ನು ಮಾತ್ರ ವಿಜ್ಞಾನಿಗಳಾಗಲೀ ಅಥವಾ ತಂತ್ರಜ್ಞಾನಿಗಳಾಗಲೀ ತೀರ್ಮಾನ ಮಾಡುವುದಿಲ್ಲ.

ಅದನ್ನು ತೀರ್ಮಾನ ಮಾಡುವುದು ಆಯಾ ದೇಶಗಳ ಪ್ರಭುತ್ವ ಮತ್ತು ಆ ಪ್ರಭುತ್ವವನ್ನು ನಿಯಂತ್ರಿಸುವ ಆಳುವವರ್ಗಗಳೇ-ಕಾರ್ಪೊರೇಟ್ ಉದ್ಯಮಪತಿಗಳೇ. ಹೀಗಾಗಿ ರಾಷ್ಟ್ರೀಯ ಎಂಬ ಮುಸುಕು ಹೊದ್ದು ಪ್ರದರ್ಶಿತವಾಗುವ ಸಾಧನೆಗಳು ಸಾರದಲ್ಲಿ ರಾಷ್ಟ್ರದ ಆಳುವ ವರ್ಗದ ಹಿತವನ್ನು ಕಾಯುವ ಸಾಧನೆಯಾಗಿರುತ್ತವೆಯೇ ಆ ದೇಶದ ಬಹುಜನ ಹಿತದ ಸಾಧನವೇನೂ ಆಗಿರುವುದಿಲ್ಲ. ಅದಕ್ಕೆ ವಿಜ್ಞಾನದಲ್ಲಿ ಆಕಾಶದೆತ್ತರಕ್ಕೆ ಏರಿ ಚಂದ್ರನನ್ನು ಮುಟ್ಟಿದರೂ ಸಾಮಾನ್ಯ ಜನರ ಬದುಕು ನೆಲಕಚ್ಚಿರುವುದೇ ಸಾಕ್ಷಿ...

‘ತಟಸ್ಥ ವಿಜ್ಞಾನ-ತಂತ್ರಜ್ಞಾನಗಳ’ ತಾರತಮ್ಯ ರಾಜಕಾರಣ

ಹೀಗಾಗಿ ವಿಜ್ಞಾನವೆಂಬುದು ತಟಸ್ಥ ವಿದ್ಯಮಾನವಲ್ಲ. ಅದೂ ಒಂದು ವರ್ಗ-ಜಾತಿ-ಲಿಂಗ ರಾಜಕಾರಣವೇ.

30-40 ವರ್ಷಗಳ ಹಿಂದೆ ಬಹುಪಾಲು ದೇಶಗಳ ವಿಜ್ಞಾನ-ಸಂಶೋಧನೆ- ಆಡಳಿತದ ನೀತಿ-ನಿರೂಪಣೆಯಲ್ಲಿ ಖಾಸಗಿಯವರ ನೇರ ಸಹಭಾಗಿತ್ವ ಇರುತ್ತಿರಲಿಲ್ಲ. ಆಗ ಕೆಲವೊಮ್ಮೆ ವಿಜಾನ ಸಂಶೋಧನೆಗಳ ದಿಕ್ಕು ಅಪರೂಪಕ್ಕೊಮ್ಮೆ ಮಾರುಕಟ್ಟೆಯ ಹಿತಾಸಕ್ತಿಗಿಂತ ಸಾರ್ವಜನಿಕರ ಅರ್ಥಾತ್ ಬಹುಜನರ ಹಿತಾಸಕ್ತಿಯನ್ನು ಆದ್ಯತೆ ಮಾಡಿಕೊಳ್ಳುತ್ತಿತ್ತು. ಆದರೆ ಕಳೆದ ಮೂರು ದಶಕಗಳಿಂದ ಭಾರತದಂಥ ದೇಶಗಳಲ್ಲಿ ಕಾರ್ಪೊರೇಟ್ ಉದ್ಯಮಿಗಳ ಮಾರುಕಟ್ಟೆ ಹಿತಾಸಕ್ತಿಯೇ ದೇಶದ ಹಿತಾಸಕ್ತಿ ಎಂದು ಬದಲಾಗಿದೆ. ಹೀಗಾಗಿ ಸಾರ್ವಜನಿಕ ವಿಜ್ಞಾನ-ಸಂಶೋಧನಾ ಸಂಸ್ಥೆಗಳೂ ಒಳಗೊಂಡಂತೆ ಸಾರ್ವಜನಿಕ ಸಂಸ್ಥೆಗಳೆಲ್ಲ ಖಾಸಗಿ ಸಹಭಾಗಿತ್ವದ ಹೆಸರಿನಲ್ಲಿ ಖಾಸಗಿ ಕಾರ್ಪೊರೇಟ್ ಉದ್ಯಮಪತಿಗಳ ಆಸಕ್ತಿಯನ್ನು ಪೂರೈಸುವ ಸಾಧನಗಳಾಗಿಬಿಟ್ಟಿವೆ.

ಉದಾಹರಣೆಗೆ ಇಂದು ಜಗತ್ತಿನಲ್ಲಿ 600 ಕೋಟಿಗೂ ಹೆಚ್ಚು ಬಡಜನರಿದ್ದಾರೆ. ಶೇ. ೮೦ಕ್ಕೂ ಹೆಚ್ಚು ಕೃಷಿ ಆಧಾರಿತ ದೇಶಗಳು ಮಳೆಯನ್ನೇ ಆಶ್ರಯಿಸಿವೆ. ಆದರೆ ಕೃಷಿಯಲ್ಲಿ ನಡೆಯುತ್ತಿರುವ ಶೇ. 90ರಷ್ಟು ವೈಜ್ಞಾನಿಕ ಪ್ರಯೋಗಗಳು ಕಾರ್ಪೊರೇಟ್ ಕೃಷಿ ಮತ್ತು ಅವರ ಲಾಭವನ್ನು ಹೆಚ್ಚಿಸುವ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುವುದರಲ್ಲಿ ನಿರತವಾಗಿದೆಯೇ ವಿನಾ ಮಳೆಯಾಶ್ರಿತ ಪ್ರದೇಶಗಳಲ್ಲಿ ಜನರ ಹಸಿವಿನ ಮತ್ತು ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸುವ ಧಾನ್ಯಗಳ ಇಳುವರಿ ಹೆಚ್ಚಿಸುವುದು ಹೇಗೆ ಎಂಬ ಬಗ್ಗೆಯಲ್ಲ.

ಹಾಗೆಯೇ ಇಂದು ಇಂಟರ್ನೆಟ್ ಮತ್ತು ಮೊಬೈಲ್ಗಳು ನಮ್ಮ ದೈನಂದಿನ ಬದುಕಿನ ಅತ್ಯಗತ್ಯ ಸಾಧನಗಳನ್ನಾಗಿ ಮಾಡಿಬಿಡಲಾಗಿದೆಯಾದರೂ, ಕಂಪ್ಯೂಟರ್, ಇಂಟರ್ನೆಟ್ ಹಾಗೂ ಸಂಬಂಧಿತ ತಂತ್ರಜ್ಞಾನಗಳು ಅಭಿವೃದ್ಧಿಯಾದದ್ದೂ ಮತ್ತು ಅದಕ್ಕೆ ಪೂರಕವಾಗಿ ಬಾಹ್ಯಾಕಾಶದಲ್ಲಿ ಜಾಗತಿಕ ಮಾಹಿತಿ ಸಂವಹನವನ್ನೇ ಉದ್ದೇಶವಾಗಿಟ್ಟುಕೊಂಡು ಸಾವಿರಕ್ಕೂ ಹೆಚ್ಚು ಉಪಗ್ರಹಗಳನ್ನು ಹಾರಿಬಿಟ್ಟಿರುವುದು ಹಣಕಾಸು ಬಂಡವಾಳದ ಜಾಗತೀಕರಣವು ಹುಟ್ಟುಹಾಕಿದ್ದ ತಂತ್ರಜ್ಞಾನದ ಅಗತ್ಯಗಳಿಂದಾಗಿಯೇ ವಿನಾ ಜಾಗತಿಕ ಕಲ್ಯಾಣದ ಉದ್ದೇಶದಿಂದಲ್ಲ. ಸಾಮಾನ್ಯ ಜನರಿಗೆ ರಿಯಾಯಿತಿ ದರದಲ್ಲಿ ಸಿಗುತ್ತಿರುವ ಇಂಟರ್ನೆಟ್, ಮೊಬೈಲ್ ಫೋನ್ ಇತ್ಯಾದಿಗಳೆಲ್ಲಾ ಮೂಲಭೂತವಾಗಿ ಜಾಗತಿಕ ಹಣಕಾಸು ಬಂಡವಾಳದ ಅಗತ್ಯಗಳನ್ನು ಪೂರೈಸಲು ಹುಟ್ಟಿಕೊಂಡ ತಂತ್ರಜ್ಞಾನದ ಕೊಲ್ಯಾಟರಲ್ ಬೆನಿಫಿಟ್ (ಆಯೋಜಿತ ಲಾಭ)..ಅಷ್ಟೇ..

ಚಂದಿರನು ಬಗೆಹರಿಸುವನೇ ಮುಗಿಯದ ಬಂಡವಾಳಶಾಹಿ ಬಿಕ್ಕಟ್ಟನ್ನು?

ಅದೇ ರೀತಿ ಕಳೆದ 50-60 ವರ್ಷಗಳ ಹಿಂದೆ ಬಾಹ್ಯಾಕಾಶ ಹಾಗೂ ಚಂದ್ರ ಹಾಗೂ ಮಂಗಳಯಾನದ ಯೋಜನೆಗಳು ಬ್ರಹ್ಮಾಂಡದ ಬಗ್ಗೆ ಇರುವ ಮನುಷ್ಯ ಸಹಜ ಕುತೂಹಲದಿಂದ ಮೂಲಭೂತವಾಗಿ ಸಾರ್ವಜನಿಕ ಒಡೆತನದಲ್ಲಿದ್ದ ವೈಜ್ಞಾನಿಕ ಸಂಸ್ಥೆಗಳು ರೂಪಿಸಿದ್ದವು. ಆರೇಳು ದಶಕಗಳ ಹಿಂದೆ ಅದರ ಜ್ಞಾನದ ಲಾಭವನ್ನು ಪಡೆದುಕೊಂಡಷ್ಟನ್ನು ಸಾರ್ವಜನಿಕ ಪ್ರಯೋಜನಗಳಿಗೆ ವಿನಿಯೋಗಿಸುವ ನಾಟಕಗಳಾದರೂ ನಡೆಯುತ್ತಿದ್ದವು.

ಆದರೆ ಕಳೆದ ಮೂರು ನಾಲ್ಕು ದಶಕಗಳಿಂದ ಅದರಲ್ಲೂ ಅಮೆರಿಕ ನೇತೃತ್ವದ ಪಶ್ಚಿಮ ಬಂಡವಾಳಶಾಹಿ ದೇಶಗಳ ವೈಜ್ಞಾನಿಕ ಮತ್ತು ತಂತ್ರಜ್ಞಾನದ ಯೋಜನೆಗಳಲ್ಲಿ ದೈತ್ಯ ಬಂಡವಾಳಶಾಹಿ ಕಂಪೆನಿಗಳು ಆಸಕ್ತಿ ಮತ್ತು ಹೂಡಿಕೆ ಮಾಡುತ್ತಿದ್ದಂತೆ ಬ್ರಹ್ಮಾಂಡದ ಅನ್ವೇಷಣೆಗಿಂತ ಬಾಹ್ಯಾಕಾಶ ಮತ್ತು ಚಂದ್ರಲೋಕ ಅನ್ವೇಷಣೆಯನ್ನು ಲಾಭದಾಯಕ ಉದ್ಯಮವಾಗಿಸಿಕೊಳ್ಳುವ ಆದ್ಯತೆಗಳು ಪ್ರಧಾನವಾಗುತ್ತಾ ಬಂದಿವೆ.

ಏಕೆಂದರೆ ತನ್ನ ತರ್ಕರಹಿತ ಲಾಭಾಸಕ್ತಿಗಳಿಂದಾಗಿ ಪ್ರತೀ ಹತ್ತು ವರ್ಷಗಳಿಗೊಮ್ಮೆ ಒಂದಲ್ಲ ಒಂದು ಸಹಜ ಬಿಕ್ಕಟ್ಟಿನ ಚಕ್ರಗಳಲ್ಲಿ ಸಿಲುಕುತ್ತಾ ಬಂದಿರುವ ಜಾಗತಿಕ ಬಂಡವಾಳಶಾಹಿ ೧೯೭೦ರಿಂದ ಅದರಿಂದ ಹೊರಬರಲು ಹಲವು ಹುಸಿ ಉದ್ಯಮಗಳನ್ನು ಸೃಷ್ಟಿಸಿ ಬಚಾವಾಗುತ್ತಾ ಬಂದಿದೆ. ಡಾಟ್ ಕಾಮ್ ಆರ್ಥಿಕತೆ, ಮಾರ್ತ್ಗೇಜ್ ಆರ್ಥಿಕತೆ, ಸರ್ವೆಲೆನ್ಸ್ ಆರ್ಥಿಕತೆ, ಡಿಜಿಟಲ್ ಆರ್ಥಿಕತೆ ಇತ್ಯಾದಿಗಳ ಅನಗತ್ಯ ಬಿರುಗಾಳಿಗೆ ಇಡೀ ಜಗತ್ತನ್ನೇ ಈ ಜಾಗತಿಕ ಕಾರ್ಪೊರೇಟ್ ಸಂಸ್ಥೆಗಳು ಬಲಿಮಾಡಿವೆ. ಆದರೆ ಇವು ಯಾವುವೂ ಜಾಗತಿಕ ಬಂಡವಾಳಶಾಹಿ ವ್ಯವಸ್ಥೆಯಲ್ಲೇ ಅಂತರ್ಗತವಾಗಿರುವ ಬಿಕ್ಕಟ್ಟನ್ನು ಶಮನ ಮಾಡುವ ಬದಲಿಗೆ ಬಿಕ್ಕಟ್ಟಿನಿಂದ ಬಿಕ್ಕಟ್ಟಿಗೆ ಅದರ ತೀವ್ರತೆಯನ್ನು ಹೆಚ್ಚಿಸುತ್ತಿವೆ. ಇದರ ಜೊತೆಜೊತೆಗೆ ಬಂಡವಾಳಶಾಹಿ ಅಭಿವೃದ್ಧಿ ಮಾದರಿಯಿಂದ ಜಾಗತಿಕ ತಾಪಮಾನವೂ ಹೆಚ್ಚುತ್ತಾ ಹೋಗುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರಿಯುತ್ತಾ ಹೋದರೆ ಮುಂದಿನ ಶತಮಾನದ ವೇಳೆಗೆ ಈ ಭೂಗೋಳದಲ್ಲಿ ಜೀವಪೋಷಕ ವಾತಾವರಣವಿರುತ್ತದೆಯೇ ಎಂಬ ಸಂದೇಹವು ತೀವ್ರವಾಗುತ್ತಿದೆ.

ಈ ಎಲ್ಲಾ ಕಾರಣಗಳಿಂದಾಗಿ ಕಳೆದ ಎರಡು ದಶಕಗಳಿಂದ ಬಾಹ್ಯಾಕಾಶ ಮತ್ತು ಆಕಾಶಕಾಯಗಳ ಸಂಶೋಧನೆ ಮತ್ತದರಲ್ಲಿನ ಹೂಡಿಕೆಗಳು ಬಿಕ್ಕಟ್ಟಿನಲ್ಲಿರುವ ಜಾಗತಿಕ ಬಂಡವಾಳಶಾಹಿಗಳನ್ನು ಮತ್ತೆ ಲಾಭದತ್ತ ಕೊಂಡೊಯ್ಯುವ ವರವಾಗಿ ಹುಟ್ಟಿಕೊಂಡಿದೆ. ಅದರ ಜೊತೆಗೆ ಚಂದ್ರನನ್ನೂ ಒಳಗೊಂಡಂತೆ ಇತರ ಆಕಾಶಕಾಯಗಳಲ್ಲಿ ಮನುಷ್ಯ ಜೀವಕ್ಕೆ ಪೂರಕ ವಾತಾವರಣವಿದೆಯೇ ಎನ್ನುವ ಅಧ್ಯಯನದಲ್ಲಿ ಅತಿ ಹೆಚ್ಚು ಹೂಡಿಕೆಯನ್ನು ಮಾಡಲಾಗುತ್ತಿದೆ.

ಸುಂದರ ಚಂದಿರನೀಗ ಕಾರ್ಪೊರೇಟ್ ವಸಾಹತು!

ಉದಾಹರಣೆಗೆ ಭಾರತದ ನೌಕೆಯು ಚಂದ್ರನ ದಕ್ಷಿಣ ಭಾಗದಲ್ಲಿಳಿದಿದೆ. ಆ ಭಾಗವು ಸೂರ್ಯನ ತಾಪಕ್ಕೆ ತೆರೆದುಕೊಳ್ಳದ ಭಾಗವಾಗಿರುವುದರಿಂದ ಅಲ್ಲಿ ನೀರಿನ ತಾಣ ಇರಬಹುದೇ ಎಂಬುದು ೨೦೦೮ರ ಯಶಸ್ವೀ ಚಂದ್ರಯಾನದ ಕಾಲದಿಂದಲೂ ಜಗತ್ತಿನ ಆಸಕ್ತಿಯಾಗಿದೆ. ಅಲ್ಲಿ ನೀರು ಸಿಗುವುದು ಖಾತರಿಯಾದರೆ ಮನುಷ್ಯ ವಸತಿಯ ಸಾಧ್ಯತೆಯನ್ನು ಕೂಲಂಕಷವಾಗಿ ಪರಿಶೀಲಿಸುವುದು ಉದ್ಯಮಿಗಳು ಇಡುವ ಎರಡನೇ ಹೆಜ್ಜೆಯಾಗಿದೆ. ಅದಕ್ಕೆ ಪೂರಕವಾಗಿಯೇ ಚಂದ್ರನಲ್ಲಿ ಈಗಾಗಲೇ ಹೀಲಿಯಂ-೩ ಎಂಬ ಅಪರೂಪದ ವಿಕಿರಣ ವಸ್ತು ಪತ್ತೆಯಾಗಿದೆ. ಅದರಿಂದ ಅಣುವಿಭಜನೆಯ ಮೂಲಕ ಶಕ್ತಿ ಉತ್ಪಾದನೆಯು ಸಾಧ್ಯವಾದರೆ ಮನುಷ್ಯ ವಸತಿಗೆ ಬೇಕಾದ ಶಕ್ತಿ ಮೂಲವಾಗುತ್ತದೆ. ಹಾಗೆಯೇ ವ್ಯೋಮಯಾತ್ರಿಗಳನ್ನು ರಾಕೆಟ್ನಲ್ಲಿ ಕೊಂಡೊಯ್ದು ಚಂದ್ರನ ಕಕ್ಷೆಯಲ್ಲಿ ಬಿಟ್ಟುಬರುವುದು ಬಹಳ ದುಬಾರಿಯಾಗುತ್ತಿತ್ತು. ಈಗ ಎಲ್ಲಾ ವಿಜ್ಞಾನವನ್ನು ಕಡಿಮೆ ವೆಚ್ಚದಲ್ಲಿ ವ್ಯೋಮಯಾತ್ರಿಗಳನ್ನು ಆಕಾಶದಲ್ಲಿ ಬಿಟ್ಟು ಬರುವ ತಂತ್ರಜ್ಞಾನವನ್ನು ಕಂಡುಹಿಡಿಯುವಲ್ಲಿ ವ್ಯಯ ಮಾಡಲಾಗುತ್ತಿದೆ. ಈಗಾಗಲೇ ಖಾಸಗಿ ಕಂಪೆನಿಗಳು ಅದರಲ್ಲಿ ಯಶ ಪಡೆಯುತ್ತಿವೆ. ಹಾಗೆಯೇ ಅಂತರಿಕ್ಷದಲ್ಲಿ International Space Station (ISS) ಸ್ಥಾಪಿಸಿ ತಿಂಗಳುಗಟ್ಟಲೆ ಮತ್ತು ವರ್ಷಗಟ್ಟಲೆ ವ್ಯೋಮಯಾತ್ರಿಗಳನ್ನು ಅಲ್ಲಿ ಪ್ರಯೋಗಗಳಿಗೆ ಮತ್ತು ವಾಸಕ್ಕೆ ಹಚ್ಚುವುದು ಉದ್ಯಮಿಗಳ ವಿಜ್ಞಾನದ ಮುಂದಿನ ಹೆಜ್ಜೆ. ಹಾಗೆಯೇ ೨೦೨೪-೩೦ರ ನಡುವೆ ಚಂದ್ರನ ಮೇಲೂ ಇಂಥ ಒಂದು ಸ್ಥಾವರವನ್ನು ಸ್ಥಾಪಿಸಿ ಚಂದ್ರನ ಮೇಲೆ ತಿಂಗಳುಗಟ್ಟಲೆ ಮನುಷ್ಯ ಜೀವನ ಸಾಧ್ಯತೆಯನ್ನು ಅನ್ವೇಷಿಸುವುದೇ ಇಂದು ಜಾಗತಿಕ ಕಾರ್ಪೊರೇಟ್ ಉದ್ದಿಮೆ ನಿರ್ದೇಶಿತ ವಿಜ್ಞಾನ-ತಂತ್ರಜ್ಞಾನದ ದಿಕ್ಕಾಗಿದೆ.

ಹೀಗೆ ಬಾಹ್ಯಾಕಾಶ ವಿಜ್ಞಾನ ಮತ್ತು ಚಂದ್ರಯಾನಗಳ ವಿಜ್ಞಾನದ ದಿಕ್ಕನ್ನು ನಿಯಂತ್ರಿಸುತ್ತಿರುವುದು ಜಾಗತಿಕ ಕಾರ್ಪೊರೇಟ್ ಉದ್ಯಮಪತಿಗಳ ಹೊಸ ಲಾಭಾನ್ವೇಷಣೆಯ ಉದ್ದೇಶಗಳೇ ಆಗಿವೆ.

೧೬ನೇ ಶತಮಾನದಲ್ಲಿ ಈ ಹಿತಾಸಕ್ತಿಗಳೇ ಅಮೆರಿಕ, ಆಸ್ಟ್ರೇಲಿಯ ಮತ್ತು ನ್ಯೂಝಿಲ್ಯಾಂಡ್ಗಳನ್ನು ತಮ್ಮ ಲಾಭಾನ್ವೇಷಣೆಯ ಹೊಸ ವಸಾಹತುವನ್ನಾಗಿ ಮಾಡಿಕೊಂಡಿದ್ದವು. ಈಗ ಬಾಹ್ಯಾಕಾಶ ಮತ್ತು ಚಂದ್ರನನ್ನು ವಸಾಹತು ಮಾಡಿಕೊಳ್ಳಲು ಹೊರಟಿವೆ. ಈ ನವವಸಾಹತುಶಾಹಿ ವಿಜ್ಞಾನ ಮತ್ತು ತಂತ್ರಜ್ಞಾನಗಳ ಬಗ್ಗೆ ಜಗತ್ತಿನ ಬಹುಜನ ಹೆಮ್ಮೆ ಪಟ್ಟುಕೊಳ್ಳುವುದು ಏನಿದೆ?

ನಾಲ್ಕು ಟ್ರಿಲಿಯನ್ ಡಾಲರ್ ಚಂದ್ರ ವ್ಯವಹಾರ!

ಆದ್ದರಿಂದಲೇ ಕಳೆದ ಹತ್ತು ವರ್ಷಗಳಲ್ಲಿ ಬಾಹ್ಯಾಕಾಶ ಉದ್ದಿಮೆ ಮತ್ತು ಚಂದ್ರಯಾನದಂತಹ ಉದ್ದಿಮೆಗಳು ಈಗ ಜಾಗತಿಕ ಬಂಡವಾಳಶಾಹಿಗಳಿಗೆ ೪ ಟ್ರಿಲಿಯನ್ ಡಾಲರ್ ಉದ್ಯಮವಾಗಿದೆ (ಅಂದರೆ ೩೪೦ ಲಕ್ಷ ಕೋಟಿ ರೂ. ಉದ್ಯಮವಾಗಿದೆ. ಇದು ಭಾರತದ ಜಿಡಿಪಿಗಿಂತ ಹೆಚ್ಚು). ಇದರಲ್ಲಿ ಈಗಾಗಲೇ ೧೦ ಸಾವಿರ ಕಂಪೆನಿಗಳು ನಿರತವಾಗಿದ್ದು ೫,೦೦೦ ದೈತ್ಯ ಹೂಡಿಕೆದಾರರು ಅದರಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ‘ಫೋರ್ಬ್ಸ್’ ಪತ್ರಿಕೆ ವರದಿ ಮಾಡಿದೆ. ಇದರಲ್ಲಿ ಶೇ. ೫೨ರಷ್ಟು ಅಮೆರಿಕದ ಕಂಪೆನಿಗಳೇ ಆಗಿವೆ. ಅದರಲ್ಲಿ ಪ್ರಮುಖವಾಗಿ ಟ್ವಿಟರ್ (ಈಗ X) ಮತ್ತು ಟೆಸ್ಲಾ ಕಂಪೆನಿಯ ಮಾಲಕ ಎಲಾನ್ ಮಸ್ಕ್ SpaceX ಎಂಬ ಹೊಸ ಕಂಪೆನಿಯನ್ನೇ ಹುಟ್ಟುಹಾಕಿದ್ದಾನೆ. ವ್ಯೋಮಯಾತ್ರಿಗಳನ್ನು ಅಂತರಿಕ್ಷಕ್ಕೆ ತಲುಪಿಸಿ ಬರುವ ಉದ್ದಿಮೆಯಲ್ಲಿ ಈ ಕಂಪೆನಿ ಭಾರತದ ಇಸ್ರೋವನ್ನು ಕೂಡ ಈಗ ಹಿಂದಿಕ್ಕಿದೆ. ಹಾಗೆಯೇ ಅಮೆಝಾನ್, ಬೋಯಿಂಗ್ ರೀತಿಯ ಇನ್ನಿತರ ದೈತ್ಯ ಬಹುರಾಷ್ಟ್ರೀಯ ಕಂಪೆನಿಗಳು ಈಗ ಜಾಗತಿಕ ಬಾಹ್ಯಾಕಾಶ ವಿಜ್ಞಾನದ ದಿಕ್ಕುದಿಸೆಯನ್ನು ನಿಯಂತ್ರಿಸುತ್ತಿವೆ. ಸ್ಪೇಸ್ ಟೂರಿಸಂ, ವ್ಯೋಮಯಾತ್ರೆ ನಿರ್ವಹಣೆ, ಚಂದ್ರನ ಮೇಲ್ಮೈ ಗುಣಲಕ್ಷಣಗಳ ವಿಶ್ಲೇಷಣೆ, ಅಲ್ಲಿ ಸಿಗಬಹುದಾದ ಅಪರೂಪದ ಖನಿಜ ವಸ್ತುಗಳ ಪತ್ತೆ ಮತ್ತು ವಿಶ್ಲೇಷಣೆ ಇವೇ ಇನ್ನಿತ್ಯಾದಿ ೨೦ ಬಗೆಯ ಹೊಸ ಬಾಹ್ಯಾಕಾಶ ಉದ್ದಿಮೆ ವ್ಯವಹಾರಗಳು ಹುಟ್ಟಿಕೊಂಡಿವೆ. ಈ ದೈತ್ಯ ಕಂಪೆನಿಗಳು ಆ ವ್ಯವಹಾರಕ್ಕೆ ತಕ್ಕಂತೆ ಇಡೀ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ನಿರ್ದೇಶಿಸುತ್ತಿವೆ.

(https://www.forbes.com/sites/johnkoetsier/2021/05/22/space-inc-10000-companies-4t-value--and-52-american/?sh=2df8a31455ac)

ಅಮೆರಿಕದ ಹೆಜ್ಜೆಗಳನ್ನೇ ಅನುಕರಿಸುವ ಮೋದಿ ಸರಕಾರವು ಕೂಡ ಭಾರತದ ಬಾಹ್ಯಾಕಾಶ ಉದ್ದಿಮೆಯಲ್ಲಿ ಖಾಸಗಿ ಕಾರ್ಪೊರೇಟ್ ಸಹಭಾಗಿತ್ವವನ್ನು ಉತ್ತೇಜಿಸಲು ಆಸಕ್ತ ಖಾಸಗಿ ಉದ್ದಿಮೆಪತಿಗಳ Indian Space Association (ISpA)ನ್ನು ೨೦೨೧ರ ಅಕ್ಟೋಬರ್ನಲ್ಲಿ ಉದ್ಘಾಟಿಸಿದೆೆ. ಇದರಲ್ಲಿ ಲಾರ್ಸೆನ್ ಟುರ್ಬೊ, ಭಾರತ್ ಟೆಲಿಕಾಂ (ಏರ್ಟೆಲ್), ನೆಲ್ಕೋ (ಟಾಟಾ), ಭಾರತ್ ಫೋರ್ಜ್ ಇನ್ನಿತರ ಐವತ್ತಕ್ಕೂ ಹೆಚ್ಚು ಖಾಸಗಿ ಬೃಹತ್ ಮತ್ತು ನವೋದ್ಯಮ ಕಂಪೆನಿಗಳಿವೆ. ಇನ್ನು ಮುಂದೆ ಭಾರತದ ಬಾಹ್ಯಾಕಾಶ ಮತ್ತು ಚಂದ್ರಯಾನ ಮತ್ತು ಮಂಗಳಯಾನ ಪ್ರಯೋಗಗಳು ಇವರ ಸಹಯೋಗ ಮತ್ತು ಲಾಭಾಸಕ್ತಿಗಳ ಭಾಗವಾಗಿಯೇ ನಡೆಯಲಿವೆ.

(https://www.isro.gov.in/PressOct_11_2021.html)

ತಮ್ಮ ಲಾಭಕ್ಕಾಗಿ ಭುವಿಯ ತಾಪಮಾನವನ್ನು, ಬಹುಸಂಖ್ಯಾತ ಬಡಜನರ ಬದುಕಿನ ದಾರುಣತೆಯನ್ನು ಹೆಚ್ಚಿಸಿ ಭೂಮಿಯನ್ನು ನರಕಸದೃಶಗೊಳಿಸಿದ ಭಾರತದ ಮತ್ತು ಜಾಗತಿಕ ಖಾಸಗಿ ದೈತ್ಯ ಉದ್ಯಮಪತಿಗಳೇ ತಮ್ಮ ಪ್ರಭುತ್ವವನ್ನು ಬಳಸಿಕೊಂಡು ಬಾಹ್ಯಾಕಾಶವನ್ನು ಮತ್ತು ಚಂದ್ರಲೋಕವನ್ನು ತಮ್ಮ ವಸಾಹತುಮಾಡಿಕೊಳ್ಳಲು ಹೊರಟಿದ್ದಾರೆ.

ಶೀಲವಿಲ್ಲದ ಜ್ಞಾನಕ್ಕೆ ಸಂಭ್ರಮವೇಕೆ?

ಇದು ವಿಜ್ಞಾನದ ಸಾಧನೆಯೇ ಆಗಿರಬಹುದು. ಹಾಗೆ ನೋಡಿದರೆ ಅಣುಬಾಂಬ್ ಕೂಡ ವಿಜ್ಞಾನದ ಉತ್ಪನ್ನವೇ. ಆದರೆ ಅದನ್ನು ಕಂಡುಹಿಡಿದ ವಿಜ್ಞಾನಿಗಳು ಆನಂತರ ಪರಿತಪಿಸಿದರು. ಆದರೆ ಅದನ್ನು ಬಳಸಿದವರು ಇದುವರೆಗೂ ಪಶ್ಚಾತ್ತಾಪ ಪಟ್ಟಿಲ್ಲ. ಆ ಪಶ್ಚಾತ್ತಾಪವಿಲ್ಲದವರೇ ಈ ಕಾಲದ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಮಾರ್ಗದರ್ಶನ ಮಾಡುತ್ತಿದ್ದಾರೆ. ಚಂದ್ರನ ಮೇಲೆ ದಂಡೆತ್ತಿ ಹೋಗುತ್ತಿದ್ದಾರೆ.

ಆದ್ದರಿಂದಲೇ ಪರಿಶುದ್ಧ ಜ್ಞಾನ-ವಿಜ್ಞಾನವೆಂಬುದು ಮೋಸ ಮಾತ್ರವಲ್ಲ. ಆತ್ಮವಂಚನೆ ಕೂಡ.

ಅದಕ್ಕೆ ಬುದ್ಧ ಹೇಳಿದ್ದು ಜ್ಞಾನಕ್ಕೆ ಶೀಲವಿರಬೇಕು. ಕರುಣವಿರಬೇಕು. ಮೈತ್ರಿಯಿರಬೇಕು. ಶೀಲ, ಕರುಣ ಮತ್ತು ಮೈತ್ರಿಗಳಿಲ್ಲದ ಜ್ಞಾನ ಮತ್ತು ವಿಜ್ಞಾನ ಮನುಷ್ಯರನ್ನು ಅನಾಗರಿಕ ಮಾಡುತ್ತದೆ. ಸಮಾಜವನ್ನು ಜಗತ್ತನ್ನು ನಿರಂತರ ರಣರಂಗವಾಗಿಸುತ್ತದೆ.

ಬಂಡವಾಳಶಾಹಿ ಜ್ಞಾನದ ಪ್ರೇರಣೆ, ಉದ್ದೇಶ ಮತ್ತು ಪರಿಣಾಮಗಳೆಲ್ಲ ಲಾಭ, ಲಾಭ ಮತ್ತು ಲಾಭ ಮಾತ್ರ.

ಅದರಲ್ಲಿ ಶೀಲ, ಕರುಣ ಮತ್ತು ಮೈತ್ರಿಯ ಲವಲೇಶವೂ ಇರುವುದಿಲ್ಲ.

ಅಂಥಾ ಬರ್ಬರ ಜ್ಞಾನದ ಉತ್ಪನ್ನಗಳನ್ನು ಬಹುಜನರು ಸಂಭ್ರಮಿಸಬೇಕೆ?

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ಶಿವಸುಂದರ್

contributor

Similar News

ಪತನದ ಕಳವಳ