ಈಗ ಅಂಬೇಡ್ಕರ್ ಎಲ್ಲರಿಗೂ ಬೇಕು
ಅಂಬೇಡ್ಕರ್ ಅವರು ಬದುಕಿದ್ದಾಗ ತಮ್ಮ ರಾಜಕೀಯ ಮತ್ತು ಸೈದ್ಧಾಂತಿಕ ನಿಲುವುಗಳನ್ನು ಯಾವುದೇ ಮುಲಾಜಿಲ್ಲದೆ ವ್ಯಕ್ತಪಡಿಸುತ್ತಿದ್ದರು. ಭಾರತದಲ್ಲಿ ಆಗ ಇದ್ದ ರಾಜಕೀಯ ಪಕ್ಷಗಳ ಬಗ್ಗೆ ಅವರಿಗೆ ಭಿನ್ನಾಭಿಪ್ರಾಯವಿತ್ತು. ಕೆಲ ವಿಷಯಗಳಲ್ಲಿ ಸಹಮತವಿತ್ತು. ಆದರೆ, ಸಂಘ ಪರಿವಾರದ ಮನುವಾದಿ ನಿಲುವುಗಳನ್ನು ಬಾಬಾ ಸಾಹೇಬರು ಎಂದೂ ಒಪ್ಪಿಕೊಳ್ಳಲಿಲ್ಲ. ಭಾರತ ವಿಭಿನ್ನ ಸಮುದಾಯಗಳ, ಭಾಷೆಗಳ, ಧರ್ಮಗಳನ್ನು ಒಳಗೊಂಡ ದೇಶ. ಈ ಬಹುತ್ವ ಭಾರತ ಒಂದು ವೇಳೆ ಹಿಂದೂರಾಷ್ಟ್ರವಾದರೆ ಅದು ಸುರಕ್ಷಿತವಾಗಿ ಉಳಿಯುವುದಿಲ್ಲ ಎಂದು ತಮ್ಮ ಪುಸ್ತಕಗಳಲ್ಲಿ, ಭಾಷಣಗಳಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಸಂಘ ಪರಿವಾರದ ರಾಜಕೀಯ ವೇದಿಕೆಯಾದ ಬಿಜೆಪಿ (ಹಿಂದಿನ ಜನಸಂಘ) ಮೇಲ್ನೋಟಕ್ಕೆ ಏನೇ ಹೇಳಲಿ ಅದರ ಅಂತರಂಗದಲ್ಲಿ ಇರುವುದು ತಿರಸ್ಕಾರ.
ಕಳೆದ 50 ವರ್ಷಗಳಿಂದ ಅಂದರೆ ನನಗೆ ರಾಜಕೀಯ ವಿದ್ಯಮಾನಗಳ ಬಗ್ಗೆ ತಿಳಿವಳಿಕೆ ಬಂದಾಗಿನಿಂದ ಸೂಕ್ಷ್ಮವಾಗಿ ಅವಲೋಕಿಸುತ್ತ ಬಂದಿದ್ದೇನೆ. ಕರ್ನಾಟಕವನ್ನೇ ತೆಗೆದುಕೊಂಡರೆ 90ರ ದಶಕದವರೆಗೆ ಬಾಬಾಸಾಹೇಬರ ಬಗ್ಗೆ ಯಾವ ರಾಜಕೀಯ ಪಕ್ಷವೂ ಚುನಾವಣೆ ಸಂದರ್ಭದಲ್ಲಿ ಅಥವಾ ನಂತರವಾಗಲಿ ಪ್ರಸ್ತಾಪಿಸುತ್ತಿರಲಿಲ್ಲ.
ಅಂಬೇಡ್ಕರ್ ಸ್ಥಾಪಿಸಿದ ರಿಪಬ್ಲಿಕನ್ ಪಕ್ಷವೂ ರಾಜ್ಯದಲ್ಲಿ ಅಷ್ಟು ಪ್ರಬಲವಾಗಿರಲಿಲ್ಲ. 70ರ ದಶಕದ ಕೊನೆಯಲ್ಲಿ ದಲಿತ ಸಂಘರ್ಷ ಸಮಿತಿ ಸ್ಥಾಪನೆಯಾಯಿತು. ಆಗಲೂ ಕನ್ನಡದಲ್ಲಿ ಅಂಬೇಡ್ಕರ್ ಸಾಹಿತ್ಯ ಅಷ್ಟೊಂದು ಬಂದಿರಲಿಲ್ಲ. ಆದರೆ 80ರ ದಶಕದ ಕೊನೆಯಲ್ಲಿ ಶರದ್ ಪವಾರ್ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದಾಗ ಎಲ್ಲೂ ಪ್ರಕಟವಾಗದ ಅಂಬೇಡ್ಕರ್ ಸಂಪುಟಗಳನ್ನು ಸರಕಾರದ ಪರವಾಗಿ ಪ್ರಕಟಿಸಿದರು. ಮುಂದೆ ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳು ಈ ಸಂಪುಟಗಳನ್ನು ತಮ್ಮ ಪ್ರಾದೇಶಿಕ ಭಾಷೆಯಲ್ಲಿ ಪ್ರಕಟಿಸಿದವು. ಹೀಗಾಗಿ ಭಾರತದ ಎಲ್ಲರ ಕೈಗೆ ಅಂಬೇಡ್ಕರ್ ಸಾಹಿತ್ಯ ತಲುಪಿತು. ಅದರ ಜೊತೆ ಜೊತೆಗೆ ಅಂಬೇಡ್ಕರ್ ನೇತೃತ್ವದಲ್ಲಿ ರೂಪುಗೊಂಡ ಸಂವಿಧಾನದಿಂದ ಅವಕಾಶವಂಚಿತ ಜನ ಸಮುದಾಯಗಳಿಗೆ ಮಾತ್ರವಲ್ಲ ಮಹಿಳೆಯರು, ರೈತರು, ಕಾರ್ಮಿಕರು ಹೀಗೆ ಎಲ್ಲಾ ಜನ ವಿಭಾಗಗಳಿಗೆ ಸಾಮಾಜಿಕ ಮತ್ತು ಆರ್ಥಿಕ ನ್ಯಾಯವನ್ನು ಒದಗಿಸುವುದು ಸಾಧ್ಯವಾಯಿತು. ಇದನ್ನು ಭಾರತದ ಬಹುತೇಕ ಜನ ವಿಭಾಗಗಳು ಒಪ್ಪಿ ಗೌರವಿಸಿದರೂ ಸಮಾನತೆ, ತಾರತಮ್ಯ ಇಲ್ಲದ ಸಂವಿಧಾನದ ಆಶಯಗಳನ್ನು ಒಪ್ಪದ ಮತ್ತೆ ಮನುವಾದದ ಕತ್ತಲ ಜಗತ್ತಿಗೆ ಕೊಂಡೊಯ್ಯಬೇಕೆಂದು ಬಯಸಿದ ಕರಾಳ ಶಕ್ತಿಗಳಿಗೆ ಅಂಬೇಡ್ಕರ್ ರೂಪಿಸಿದ ಸಂವಿಧಾನ ಇಷ್ಟವಾಗಲಿಲ್ಲ. ಅಂತಲೇ ಆರೆಸ್ಸೆಸ್‌ನ ಎರಡನೇ ಸರ ಸಂಘಚಾಲಕ ಮಾಧವ ಸದಾಶಿವ ಗೋಳ್ವಲ್ಕರ್ ಅವರು ಸಂವಿಧಾನವನ್ನು ವಿರೋಧಿಸಿದರು.
ಅಂಬೇಡ್ಕರ್ ಅವರು ಬದುಕಿದ್ದಾಗ ತಮ್ಮ ರಾಜಕೀಯ ಮತ್ತು ಸೈದ್ಧಾಂತಿಕ ನಿಲುವುಗಳನ್ನು ಯಾವುದೇ ಮುಲಾಜಿಲ್ಲದೆ ವ್ಯಕ್ತಪಡಿಸುತ್ತಿದ್ದರು. ಭಾರತದಲ್ಲಿ ಆಗ ಇದ್ದ ರಾಜಕೀಯ ಪಕ್ಷಗಳ ಬಗ್ಗೆ ಅವರಿಗೆ ಭಿನ್ನಾಭಿಪ್ರಾಯವಿತ್ತು. ಕೆಲ ವಿಷಯಗಳಲ್ಲಿ ಸಹಮತವಿತ್ತು. ಆದರೆ, ಸಂಘ ಪರಿವಾರದ ಮನುವಾದಿ ನಿಲುವುಗಳನ್ನು ಬಾಬಾ ಸಾಹೇಬರು ಎಂದೂ ಒಪ್ಪಿಕೊಳ್ಳಲಿಲ್ಲ. ಭಾರತ ವಿಭಿನ್ನ ಸಮುದಾಯಗಳ, ಭಾಷೆಗಳ, ಧರ್ಮಗಳನ್ನು ಒಳಗೊಂಡ ದೇಶ. ಈ ಬಹುತ್ವ ಭಾರತ ಒಂದು ವೇಳೆ ಹಿಂದೂರಾಷ್ಟ್ರವಾದರೆ ಅದು ಸುರಕ್ಷಿತವಾಗಿ ಉಳಿಯುವುದಿಲ್ಲ ಎಂದು ತಮ್ಮ ಪುಸ್ತಕಗಳಲ್ಲಿ, ಭಾಷಣಗಳಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಸಂಘ ಪರಿವಾರದ ರಾಜಕೀಯ ವೇದಿಕೆಯಾದ ಬಿಜೆಪಿ (ಹಿಂದಿನ ಜನಸಂಘ) ಮೇಲ್ನೋಟಕ್ಕೆ ಏನೇ ಹೇಳಲಿ ಅದರ ಅಂತರಂಗದಲ್ಲಿ ಇರುವುದು ತಿರಸ್ಕಾರ. ಒಂದೊಂದು ಸಂದರ್ಭದಲ್ಲಿ ಅದರ ಅಸಲಿ ಮುಖ ಕಾಣಿಸುತ್ತದೆ. ಇತ್ತೀಚೆಗೆ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಸಭೆಯಲ್ಲಿ ಮಾತಾಡುವಾಗ ಅಂಬೇಡ್ಕರ್ ಅವರ ಬಗ್ಗೆ ಆಡಿದ ಮಾತು ವಿವಾದದ ಅಲೆ ಎಬ್ಬಿಸಿದೆ. ಪದೇ ಪದೇ ಅಂಬೇಡ್ಕರ್ ಹೆಸರು ಹೇಳುವುದರ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅಮಿತ್ ಶಾ ‘‘ಅಂಬೇಡ್ಕರ್ ಹೆಸರು ಹೇಳುವುದು ಒಂದು ವ್ಯಸನವಾಗಿದೆ’’ ಎಂದು ಟೀಕಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ದಲಿತ, ಜನಪರ ಸಂಘಟನೆಗಳು, ವಿರೋಧ ಪಕ್ಷಗಳು ದೇಶವ್ಯಾಪಿ ಪ್ರತಿಭಟನೆ ನಡೆಸಿವೆ.
ಅಮಿತ್ ಶಾ ಅವರು ಬಾಯಿ ತಪ್ಪಿ, ಇಲ್ಲವೇ ಆಕಸ್ಮಿಕವಾಗಿ ಹೇಳಿದ ಮಾತು ಇದಲ್ಲ. ಇದು ಗೊತ್ತಿದ್ದು ಆಡಿದ ಮಾತು. ಆರೆಸ್ಸೆಸ್ ಶಾಖೆಯಿಂದ ಬೆಳೆದು ಬಂದ ಯಾರೂ ಕೂಡ ಅದರಲ್ಲೂ ರಾಜಕೀಯ ಅಧಿಕಾರ ಹೊಂದಿದವರು ಎಂದೂ ಸ್ವಂತದ ಅಭಿಪ್ರಾಯವನ್ನು ವ್ಯಕ್ತಪಡಿಸುವುದಿಲ್ಲ. ಯಾರ ಬಾಯಿಯಿಂದ ಏನನ್ನು ಹೇಳಿಸಬೇಕೆಂಬುದು ಮೊದಲೇ ತೀರ್ಮಾನವಾಗಿರುತ್ತದೆ. ಅವರಿಂದ ಅಂಥ ಹೇಳಿಕೆಯನ್ನು ಕೊಡಿಸಲಾಗುತ್ತದೆ. ಬಾಬಾ ಸಾಹೇಬರನ್ನು ಅವಹೇಳನ ಮಾಡಿದ ಮಾತುಗಳನ್ನು ಹೇಳಿಸಿ ಅದಕ್ಕೆ ಬರುವ ಪ್ರತಿಕ್ರಿಯೆಗಳನ್ನು ಅವಲೋಕನ ಮಾಡಿ ಸಂಘಟನೆಯ ಮುಂದಿನ ಕಾರ್ಯತಂತ್ರ ರೂಪಿಸಲಾಗುತ್ತದೆ. ಒಳ್ಳೆಯ ಪ್ರತಿಕ್ರಿಯೆ ಬಂದರೆ ಅದು ಸಂಘಟನೆಯ ಹೇಳಿಕೆ ಆಗುತ್ತದೆ. ಆದರೆ ದಲಿತ, ದಮನಿತ ಸಮುದಾಯಗಳಿಂದ ತೀವ್ರ ವಿರೋಧ ಬಂದರೆ ಅದು ಅಮಿತ್ ಶಾ ವೈಯಕ್ತಿಕ ಹೇಳಿಕೆಯಾಗುತ್ತದೆ. ಇದರಲ್ಲಿ ಅಚ್ಚರಿ ಪಡುವಂಥದ್ದೇನೂ ಇಲ್ಲ. ಇದು ಆ ಸಂಘಟನೆಯ ರಣ ನೀತಿ.
ಬೇರೆ ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಸಂಘದ ಕಾರ್ಯಕರ್ತರಿಗೆ ಅವರು ಯಾವ ರೀತಿ ಹೇಳಿಕೆ ನೀಡಬೇಕೆಂದು ತರಬೇತಿ ನೀಡಲಾಗಿರುತ್ತದೆ. ಕೋಮುವಾದಿಗಳಿಗೆ ತಮ್ಮ ಕಾರ್ಯಸೂಚಿಯನ್ನು ಜಾರಿಗೆ ತರುವದಷ್ಟೇ ಮುಖ್ಯ. ಸಂಘಕ್ಕೆ ವಾಜಪೇಯಿ ಅವರೂ ಬೇಕು. ಅಯೋಧ್ಯೆಗೆ ರಥಯಾತ್ರೆ ಮಾಡಲು ಅಡ್ವಾಣಿಯವರೂ ಬೇಕು. ಅದರಿಂದ ಅಂತರ ಕಾಯ್ದುಕೊಂಡು ಬಹುಸಂಖ್ಯಾತ ಉದಾರವಾದಿ ಭಾರತೀಯರ ಮನಸ್ಸನ್ನು ಗೆಲ್ಲಲು ಗಡ್ಕರಿ ಅವರೂ ಬೇಕು. ಅದೇ ರೀತಿ ಗುಜರಾತಿನಲ್ಲಿ ಏನೆಲ್ಲಾ ಮಾಡಿ ದಕ್ಕಿಸಿಕೊಂಡ ನರೇಂದ್ರ ಮೋದಿ ಹಾಗೂ ಅಮಿತ್ ಶಾರೂ ಬೇಕು. ಇವರೆಲ್ಲ ಪಾತ್ರಧಾರಿಗಳು ಮಾತ್ರ. ನಾಗಪುರದಲ್ಲಿರುವ ಸೂತ್ರಧಾರರು ಯಾರೆಂಬುದು ಎಲ್ಲರಿಗೂ ಗೊತ್ತು.
ಮಹಾತ್ಮಾ ಗಾಂಧಿಯವರನ್ನು ಹತ್ಯೆ ಮಾಡಿದ ನಾಥೂರಾಮ್ ಗೋಡ್ಸೆ ತಮ್ಮ ಸಂಘದ ಸ್ವಯಂ ಸೇವಕನಲ್ಲ ಎಂದು ಒಂದೆಡೆ ಅಂತರ ಕಾಯ್ದುಕೊಂಡರೆ ಇನ್ನೊಂದೆಡೆ ‘ಗಾಂಧಿಯನ್ನು ನಾನೇಕೆ ಕೊಂದೆ’ ಎಂಬ ಗೋಡ್ಸೆ ಪುಸ್ತಕವನ್ನು ಯಾರು ಮಾರಾಟ ಮಾಡುತ್ತಾರೆಂಬುದು ಎಲ್ಲರಿಗೂ ಗೊತ್ತು. ಒಂದೆಡೆ ಸಂಘದ ಶಾಖೆಗೆ ಗಾಂಧಿಯವರು ಬಂದಿದ್ದರು ಎಂದು ಹೇಳುತ್ತಲೇ ಮತ್ತೊಂದೆಡೆ ‘ವಾಟ್ಸ್‌ಆ್ಯಪ್ ಯುನಿವರ್ಸಿಟಿ’ ಮೂಲಕ ಗಾಂಧೀಜಿ ಅವರ ತೇಜೋವಧೆ ಮಾಡಲಾಗುತ್ತದೆ. ಹಿಂದೆ ಅರುಣ್ ಶೌರಿಯವರ ಮೂಲಕ ಡಾ.ಅಂಬೇಡ್ಕರ್ ಅವರ ತೇಜೋವಧೆ ಮಾಡುವ ಪುಸ್ತಕ ಬರೆಸಲಾಯಿತು. ಆದರೆ ಅದಕ್ಕೆ ಭಾರತದ ಸಮಸ್ತ ದಲಿತ, ದಮನಿತ, ಶೋಷಿತ ಸಮುದಾಯಗಳಿಂದ ತೀವ್ರ ವಿರೋಧ ಬಂದ ನಂತರ ಸಂಘಕ್ಕೂ, ಶೌರಿಗೂ ಸಂಬಂಧವಿಲ್ಲ, ಇದು ಅವರ ವೈಯಕ್ತಿಕ ಅಭಿಪ್ರಾಯ ಎಂದು ಜಾರಿಕೊಳ್ಳಲಾಯಿತು. ಇಂತಹ ನೂರಾರು ಉದಾಹರಣೆಗಳನ್ನು ಕೊಡಬಹುದು.
ಕರ್ನಾಟಕದ ರಾಜಕೀಯವನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಇದು ಗೊತ್ತಾಗುತ್ತದೆ. ಚುನಾವಣೆಯಲ್ಲಿ ಗೆಲ್ಲಲು ಯಡಿಯೂರಪ್ಪ ಬೇಕು. ಆದರೆ ಅವರು ಮುಖ್ಯಮಂತ್ರಿ ಆಗುವಂತಿಲ್ಲ. ಕೋವಿಡ್ ಕಷ್ಟ ಕಾಲದಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರನ್ನು ಬಳಸಿಕೊಳ್ಳಲಾಯಿತು. ಆದರೆ ನಂತರ ಬಲವಂತವಾಗಿ ಅವರ ರಾಜೀನಾಮೆ ಪಡೆಯಲಾಯಿತು. ಆನಂತರ ಅದರ ಪರಿಣಾಮವನ್ನು ಪರಾಮರ್ಶಿಸಿ ಕರ್ನಾಟಕ ಬಿಜೆಪಿಯ ಅಧ್ಯಕ್ಷ ಸ್ಥಾನವನ್ನು ವಿಜಯೇಂದ್ರರ ಕೊರಳಿಗೆ ಕಟ್ಟಲಾಯಿತು. ಇನ್ನೊಂದೆಡೆ ಬಿಜಾಪುರದ ಶಾಸಕ ಬಸನಗೌಡ ಪಾಟೀಲ್(ಯತ್ನಾಳ್) ಅವರನ್ನು ಯಡಿಯೂರಪ್ಪ ಮತ್ತು ವಿಜಯೇಂದ್ರರ ವಿರುದ್ಧ ಛೂ ಬಿಡಲಾಯಿತು. ಭಿನ್ನಮತೀಯರಿಗೆ ಪ್ರಚೋದನೆ ನೀಡಲಾಯಿತು. ಇದನ್ನು ದಿಲ್ಲಿಯ ನಾಯಕರ ಗಮನಕ್ಕೆ ತಂದರೆ ಅವರು ಕ್ರಮ ಕೈಗೊಳ್ಳುವ ಒಣ ಭರವಸೆಯನ್ನು ನೀಡಿ ಕೈ ತೊಳೆದುಕೊಂಡರು. ಭಿನ್ನಮತೀಯರಿಂದ ಶಿಸ್ತು ಉಲ್ಲಂಘನೆಯಾಗಿದ್ದರೆ ಅವರ ಮೇಲೆ ಶಿಸ್ತಿನ ಕ್ರಮವನ್ನು ಕೈಗೊಳ್ಳಬೇಕಾಗಿತ್ತು. ಆದರೆ ಅವರನ್ನು ಕರೆಯಿಸಿ ಬುದ್ಧಿ ಹೇಳುವುದಾಗಿ ಸಮಾಧಾನ ಹೇಳಿ ‘ಕೆಲವು ದಿನ ಸುಮ್ಮನಿರ್ರಿ’ ಎಂದು ಬಹಿರಂಗವಾಗಿ ಹೇಳುತ್ತಲೇ ‘ಬಿಡಬೇಡಿ’ ಎಂದು ಕಿವಿಯೂದಲಾಯಿತು.
ನಾಗಪುರ ನಿಯಂತ್ರಿತ ಬಿಜೆಪಿಯಂಥ ಪಕ್ಷಗಳಲ್ಲಿ ದಿಲ್ಲಿ ನಾಯಕರ ಮತ್ತು ನಾಗಪುರದ ಗುರುಗಳ ಮೌನ ಸಮ್ಮತಿ ಇಲ್ಲದೆ ಯಾರೂ ಬಹಿರಂಗವಾಗಿ ಈ ರೀತಿ ಮಾತಾಡಲು ಸಾಧ್ಯವಿಲ್ಲ. ಯತ್ನಾಳ್ ಹಾಗೂ ಇತರರು ಮೇಲಿನವರು ಕೈ ಬಿಡುವುದಿಲ್ಲ ಎಂಬ ಖಚಿತ ನಂಬಿಕೆಯಿಂದಲೇ ಈ ರೀತಿ ಮಾತಾಡುತ್ತಾರೆ. ಒಮ್ಮೊಮ್ಮೆ ಅವರ ಹೇಳಿಕೆಯನ್ನು ಮಾಧ್ಯಮಗಳಲ್ಲಿ ಓದಿ ಅಚ್ಚರಿಯಾಗುತ್ತದೆ.
ಸಂಘದ ಹಲವು ನಾಯಕರು ಮತ್ತು ಕಾರ್ಯಕರ್ತರು ಅಯೋಧ್ಯೆ ಮಾತ್ರವಲ್ಲ ಮಥುರಾ ಮತ್ತು ಕಾಶಿ ನಮ್ಮದು ಎಂದು ಹೇಳುತ್ತಾರೆ. ಇನ್ನು ಕೆಲವರು ಮೂರು ಸಾವಿರ ಪ್ರಾರ್ಥನಾ ಸ್ಥಳಗಳ ಪಟ್ಟಿ ಮಾಡಿದ್ದಾರೆ. ನಮ್ಮ ಕರ್ನಾಟಕದವರೇನು ಕಡಿಮೆ ಬಸವ ಕಲ್ಯಾಣದ ನಿಜವಾದ ಅನುಭವ ಮಂಟಪವನ್ನು ಮುಸಲ್ಮಾನರು ಆಕ್ರಮಿಸಿದ್ದಾರೆ ಎಂದು ಕತೆ ಕಟ್ಟಿ ಪ್ರಚಾರ ಮಾಡುತ್ತಿದ್ದಾರೆ. ಇನ್ನೊಂದು ಕಡೆ ಆರೆಸ್ಸೆಸ್ ಸರ ಸಂಘಚಾಲಕ ಮೋಹನ್ ಭಾಗವತರು ‘‘ಅಯೋಧ್ಯೆ ಸಾಕು, ಮತ್ತೆ ವಿವಾದ ಬೇಡ’’ ಎಂದು ಬಹಿರಂಗವಾಗಿ ಹೇಳಿದ್ದಾರೆ. ಇದರಲ್ಲಿ ಯಾವುದು ನಿಜ ಎಂದು ಹುಡುಕಲು ಹೊರಟರೆ ಹುಚ್ಚು ಹಿಡಿಯುತ್ತದೆ. ದೇಶದ ಬಹುದೊಡ್ಡ ಮತ ನಿರಪೇಕ್ಷ ಪಕ್ಷವಾದ ಕಾಂಗ್ರೆಸ್ ಮೊದಲೇ ಎಚ್ಚೆತ್ತಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಆದರೆ ಇತ್ತೀಚಿನವರೆಗೆ ಕೋಮುವಾದಿಗಳ ಬಗ್ಗೆ ಕಾಂಗ್ರೆಸ್ ನಾಯಕರು ಬಾಯಿ ಬಿಚ್ಚುತ್ತಿರಲಿಲ್ಲ. ಕೆಲವು ಕಡೆ ಸ್ಥಳೀಯ ಕಾಂಗ್ರೆಸ್ ನಾಯಕರು ವಿಶ್ವ ಹಿಂದೂ ಪರಿಷತ್ತಿನ ಪದಾಧಿಕಾರಿಗಳಾಗುತ್ತಿದ್ದರು. ಆದರೆ ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಕೋಮುವಾದಿಗಳ ಸಂಘಟನೆಗಳ ಬಗ್ಗೆ ಯಾವುದೇ ಮುಲಾಜಿಲ್ಲದೆ ಗಟ್ಟಿಯಾಗಿ ಮಾತಾಡುತ್ತಿದ್ದಾರೆ. ದಿಲ್ಲಿಯಲ್ಲಿ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಕೂಡ ತಾತ್ವಿತ ಪ್ರಶ್ನೆಗಳನ್ನು ಎತ್ತಿ ನೇರವಾಗಿ ಮಾತಾಡುತ್ತಿದ್ದಾರೆ. ಅದೇ ರೀತಿ ಹರಿಪ್ರಸಾದ್ ಮುಂತಾದವರು ಸಾಕಷ್ಟು ಓದಿಕೊಂಡು ತುಂಬಾ ಚೆನ್ನಾಗಿ ಮಾತಾಡುತ್ತಿದ್ದಾರೆ. ಈ ಸನ್ನಿವೇಶದಲ್ಲಿ ಸಮಾನ ಮನಸ್ಕ, ಪ್ರಗತಿಪರ ಶಕ್ತಿಗಳು ಒಂದಾಗಿ ನಿಲ್ಲದಿದ್ದರೆ ಭಾರತದ ಪ್ರಜಾಪ್ರಭುತ್ವದ ಸುರಕ್ಷಿತೆಗೆ ಅಪಾಯವಿದೆ.