ದ್ವೇಷ ರಾಜಕಾರಣದ ಅತಿರೇಕ

Update: 2024-10-08 05:09 GMT

ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅನೇಕ ಕಡೆ ಸೋಲನ್ನು ಅನುಭವಿಸಿತು. ಸ್ವಂತ ಬಹುಮತ ಪಡೆಯುವಷ್ಟು ಸ್ಥಾನಗಳನ್ನೂ ಅದು ಗೆಲ್ಲಲಿಲ್ಲ. ಅದರಲ್ಲೂ ವಿಶೇಷವಾಗಿ ಉತ್ತರ ಭಾರತದಲ್ಲಿ ಅನುಭವಿಸಿದ ಸೋಲಿನಿಂದ ಪ್ರಧಾನಿ ನರೇಂದ್ರ ಮೋದಿಯವರು ಮತ್ತು ಅವರ ಪಟಾಲಂ ಪಾಠ ಕಲಿಯುವರೆಂದು ಕೆಲವು ರಾಜಕೀಯ ಪರಿಣಿತರು ಅಂದು ಕೊಂಡಿದ್ದರು. ಚಂದ್ರಬಾಬು ನಾಯ್ಡು ಮತ್ತು ಬಿಹಾರದ ನಿತೀಶ್ ಕುಮಾರ್ ಅವರ ಪಕ್ಷಗಳ ಬೆಂಬಲದಿಂದ ಬಿಜೆಪಿ ಸರಕಾರ ರಚಿಸಿರುವುದರಿಂದ ಅವರು ಸರಕಾರದ ಮೇಲೆ ಹಿಡಿತವನ್ನು ಇಟ್ಟುಕೊಳ್ಳುತ್ತಾರೆಂದು ಹೇಳಲಾಗುತ್ತಿತ್ತು. ಆದರೆ ಮೋದಿಯವರು ಮಾತ್ರವಲ್ಲ ಕೋಮುವಾದಿ ಶಕ್ತಿಗಳಿಗೆ ಇವರಿಬ್ಬರೂ ಶರಣಾಗತರಾಗಿದ್ದಾರೆಂಬುದು ದಿನದಿಂದ ದಿನಕ್ಕೆ ಸ್ಪಷ್ಟವಾಗುತ್ತಿದೆ. ತಿರುಪತಿ ಲಾಡು ಹೆಸರಿನಲ್ಲಿ ಚಂದ್ರಬಾಬು ನಾಯ್ಡು ಸೃಷ್ಟಿಸಿದ ವಿವಾದ ಪರೋಕ್ಷವಾಗಿ ಕೋಮು ರಾಜಕಾರಣಕ್ಕೆ ಅವರೂ ಕೈ ಹಾಕಿದ್ದಾರೆಂಬುದು ಎಲ್ಲರಿಗೂ ತಿಳಿದ ಸಂಗತಿ.

ತನ್ನ ಪಕ್ಷದ ಕಾರ್ಯಸೂಚಿಯನ್ನು ಕೈ ಬಿಟ್ಟು ಸಂಘಪರಿವಾರದ ಕಾರ್ಯಸೂಚಿಯನ್ನು ವೋಟಿಗಾಗಿ ಬಳಸಿಕೊಳ್ಳಲು ಮುಂದಾದ ಚಂದ್ರಬಾಬು ನಾಯ್ಡು ಅವರನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್ ನಿಮ್ಮ ರಾಜಕೀಯದಿಂದ ದೇವರನ್ನಾದರೂ ದೂರವಿಡಿ ಎಂದು ಹೇಳಬೇಕಾಗಿ ಬಂತು. ತನಿಖೆಗೆ ಮೊದಲೇ ಹಿಂದಿನ ಸರಕಾರದ ತಿರುಪತಿ ಪ್ರಸಾದ ತಯಾರಿಕೆಯ ಕಲಬೆರಕೆ ತುಪ್ಪವನ್ನು ಬಳಸಲಾಗಿದೆ ಎಂದು ಹೇಗೆ ಹೇಳಿದಿರಿ ಎಂದು ಸುಪ್ರೀಂ ಕೋರ್ಟ್ ಕಿವಿಯನ್ನು ಹಿಂಡಿತು. ‘‘ನಿಮ್ಮದೇ ಸರಕಾರ ತನಿಖೆಗೆ ಆದೇಶ ನೀಡಿರುವಾಗ ಬಹಿರಂಗ ಹೇಳಿಕೆಯನ್ನು ನೀಡುವ ತುರ್ತು ಅಗತ್ಯ ವೇನಿತ್ತು?’’ ಎಂದು ಸುಪ್ರೀಂ ಕೋರ್ಟ್ ಪ್ರಶ್ನೆಗೆ ನಾಯ್ಡು ಬಳಿ ಉತ್ತರವಿಲ್ಲ.

ಆದರೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಿಜೆಪಿ ಮತ್ತು ಒಟ್ಟಾರೆ ಸಂಘಪರಿವಾರದ ಪಾಲಿಗೆ ನುಂಗಲಾರದ ತುತ್ತಾಗಿದ್ದರು. ಕಾಂಗ್ರೆಸ್‌ನ ಉಳಿದ ನಾಯಕರಂತೆ ಸಿದ್ದರಾಮಯ್ಯನವರು ಬರೀ ರಾಜಕೀಯ ಟೀಕೆಗಳನ್ನು ಮಾಡುತ್ತಿರಲಿಲ್ಲ, ಬಿಜೆಪಿ ಸೈದ್ಧಾಂತಿಕ ಮೂಲವಾದ ಆರೆಸ್ಸೆಸ್‌ನ ಕೋಮುವಾದಿ ಹುನ್ನಾರಗಳನ್ನು ಆಗಾಗ ಬಯಲಿಗೆಳೆಯುತ್ತಿದ್ದರು. ಇದರಿಂದ ನರೇಂದ್ರ ಮೋದಿ, ಅಮಿತ್‌ಶಾ ಮಾತ್ರವಲ್ಲ ನಾಗಪುರದ ಗುರುಗಳು ಸಿದ್ದರಾಮಯ್ಯನವರ ವಿರುದ್ಧ ಒಳಗೊಳಗೆ ದ್ವೇಷ ಸಾಧಿಸುತ್ತಿದ್ದರು.

ಸಿದ್ದರಾಮಯ್ಯನವರು ಮಾಡಿರುವ ಒಂದೇ ಒಂದು ತಪ್ಪೆಂದರೆ ಕರ್ನಾಟಕವನ್ನು ಕೋಮುವಾದಿ ಮತ್ತು ಮನುವಾದಿಗಳ ಅಡ್ಡೆಯಾಗಲು ಬಿಡಲಿಲ್ಲ. ಕರ್ನಾಟಕದ ಅತ್ಯಂತ ಜನಪ್ರಿಯ ಮಾಸ್ ಲೀಡರ್ ಆದ ಸಿದ್ದರಾಮಯ್ಯನವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾಡಿನ ತುಂಬಾ ಓಡಾಡಿ ಕಾಂಗ್ರೆಸನ್ನು ಅಧಿಕಾರಕ್ಕೆ ತರುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದರು. ಸ್ವತಃ ಪ್ರಧಾನಿ ನರೇಂದ್ರ ಮೋದಿಯವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹದಿನೈದು ದಿನಗಳ ಕಾಲ ಕರ್ನಾಟಕದಲ್ಲಿ ಝಂಡಾ ಊರಿ ನಾನಾ ಕಸರತ್ತುಗಳನ್ನು ಮಾಡಿದರೂ ಕರ್ನಾಟಕದ ಜನ ಕೋಮುವಾದಿ ಶಕ್ತಿಗಳನ್ನು ಸೋಲಿಸಿದರು. ಈ ಮತದಾರರ ಮೇಲೆ ಸೇಡು ತೀರಿಸಿಕೊಳ್ಳಲು ಸಿದ್ದರಾಮಯ್ಯನವರ ಸುತ್ತ ಬಲೆ ಹೆಣೆಯಲಾಗಿದೆ. ಅವರ ಜಾಗದಲ್ಲಿ ಬೇರೆ ಯಾರೇ ಆಗಿದ್ದರೂ ಅವರಂತೆ ದೃಢವಾಗಿ ಎದುರಿಸುತ್ತಿರಲಿಲ್ಲ.

ಇದು ಸಿದ್ದರಾಮಯ್ಯನವರಿಗೆ ಸಂಬಂಧಿಸಿದ ಪ್ರಶ್ನೆ ಮಾತ್ರವಲ್ಲ, ಕಳೆದ ಅರವತ್ತೈದು ವರ್ಷಗಳಿಂದ ಸುರಕ್ಷಿತವಾಗಿ ಇದ್ದ ಭಾರತದ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ ಫ್ಯಾಶಿಸ್ಟ್ ಶಕ್ತಿಗಳ ಕೈಗೆ ಸಿಕ್ಕು ಹೇಗೆ ಅಸ್ತಿತ್ವ ಕಳೆದುಕೊಳ್ಳುತ್ತದೆ ಎಂಬುದಕ್ಕೆ ಕಳೆದ ಹತ್ತು ವರ್ಷಗಳ ವಿದ್ಯಮಾನಗಳು ಸಾಕ್ಷಿಯಾಗಿವೆ. ಕರ್ನಾಟಕದಲ್ಲಿ ಯಾರ ಆಡಳಿತದಲ್ಲಿ ಬಳ್ಳಾರಿ ಗಣಿ ಸಂಪತ್ತು ಹೇಗೆ ಲೂಟಿಯಾಯಿತೆಂಬುದು ಎಲ್ಲರಿಗೂ ಗೊತ್ತಿದೆ. ಈಗ ಸಿದ್ದರಾಮಯ್ಯನವರ ರಾಜೀನಾಮೆಗೆ ಒತ್ತಾಯಿಸುವವರ ಕೆಲವು ಹೆಸರುಗಳನ್ನು ನೋಡಿದರೆ ರಾಜ್ಯದ ರಾಜಕೀಯ ಎಲ್ಲಿಗೆ ಬಂತೆಂಬ ಬಗ್ಗೆ ಆತಂಕ ಉಂಟಾಗುತ್ತದೆ.

ಅದೊಂದು ಕಾಲವಿತ್ತು. ರಾಜಕೀಯ ಭಿನ್ನಾಭಿಪ್ರಾಯಗಳು ವೈಯಕ್ತಿಕ ದ್ವೇಷವಾಗಿರಲಿಲ್ಲ. ಅದರಲ್ಲೂ ಮೊದಲ ಪ್ರಧಾನಿ ಜವಾಹರ ಲಾಲ್ ನೆಹರೂ ಅವರು ಪ್ರತಿಪಕ್ಷ ನಾಯಕರ ಬಗ್ಗೆ ಎಂದೂ ವೈರ ಭಾವನೆಯನ್ನು ಹೊಂದಿರಲಿಲ್ಲ. ಸಮಾಜವಾದಿ ನಾಯಕ ಡಾ. ರಾಮಮನೋಹರ ಲೋಹಿಯಾ ಅವರು ನೆಹರೂ ಅವರ ಕಟು ಟೀಕಾಕಾರರಾಗಿದ್ದರು. ಆದರೂ ಅವರ ಮತ್ತು ಲೋಹಿಯಾ ಅವರ ನಡುವೆ ವೈಯಕ್ತಿಕ ದ್ವೇಷವಿರಲಿಲ್ಲ. ಲೋಹಿಯಾ ಅವರ ಒಂದೆರಡು ಪುಸ್ತಕಗಳಿಗೆ ನೆಹರೂ ಅವರು ಮುನ್ನುಡಿ ಬರೆದಿದ್ದರು. ಸದನದಲ್ಲಿ ಲೋಹಿಯಾರಂತಹ ಕಟು ಟೀಕಾಕಾರರು ಇರಬೇಕೆಂದು ನೆಹರೂ ಬಯಸುತ್ತಿದ್ದರು. ವಾಜಪೇಯಿ ಮೊದಲ ಬಾರಿ ಸದನಕ್ಕೆ ಬಂದಾಗ ಅವರ ವಾಕ್ ಚಾತುರ್ಯ ನೋಡಿ ‘‘ನಿಮಗೆ ಒಳ್ಳೆಯ ಭವಿಷ್ಯವಿದೆ’’ ಎಂದಿದ್ದರು.

ಜವಾಹರಲಾಲ್ ನೆಹರೂ ಅವರು ರಾಜಕೀಯ ವಿರೋಧಿಗಳನ್ನು ಪ್ರಜಾಪ್ರಭುತ್ವದ ಚೌಕಟ್ಟಿನೊಳಗೆ ವಿರೋಧಿಸುತ್ತಿದ್ದರು. ಎದುರಾಳಿಗಳನ್ನು ಹತ್ತಿಕ್ಕಲು ತನಿಖಾ ಸಂಸ್ಥೆಗಳಾದ ಸಿಬಿಐ, ಜಾರಿ ನಿರ್ದೇಶನಾಲಯ, ರಾಷ್ಟ್ರೀಯ ತನಿಖಾ ಸಂಸ್ಥೆ ಮುಂತಾದವುಗಳನ್ನೆಲ್ಲ ಎಂದೂ ಬಳಸಿಕೊಳ್ಳಲಿಲ್ಲ. ಆದರೆ ಮಗಳ ಒತ್ತಾಯಕ್ಕೆ ಮಣಿದು 1957ರಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಕೇರಳದ ಇ.ಎಂ.ಎಸ್. ನಂಬೂದಿರಿಪಾಡ್‌ರ ನೇತೃತ್ವದ ಕಮ್ಯುನಿಸ್ಟ್ ಸರಕಾರಕ್ಕೆ ಕೊಂಚ ತೊಂದರೆ ಕೊಟ್ಟಿದ್ದನ್ನು ಬಿಟ್ಟರೆ ಜನತಂತ್ರಕ್ಕೆ ಅಪಚಾರವನ್ನು ಉಂಟುಮಾಡುವ ಮತ್ತ್ಯಾವ ತಪ್ಪನ್ನು ನೆಹರೂ ಮಾಡಲಿಲ್ಲ. ಇಂದಿರಾ ಗಾಂಧಿಯವರು ಕೂಡ ಪ್ರಧಾನಿಯಾದ ನಂತರ ತಮ್ಮ ತಪ್ಪುತಿದ್ದಿಕೊಂಡರು.

ಇಂತಹ ಪ್ರಕರಣಗಳಲ್ಲಿ ಆರೋಪಕ್ಕೊಳಗಾಗುವವರ ಎದುರಿಗೆ ಇರುವ ಆಯ್ಕೆಗಳು ಎರಡೇ ಎರಡು. ಒಂದು ತನಿಖಾ ಸಂಸ್ಥೆಗಳ ಕಿರಿಕಿರಿಯನ್ನು ಅನುಭವಿಸಬೇಕು. ಇಲ್ಲವಾದರೆ ಬಿಜೆಪಿ ಸೇರಿ ಬಚಾವ್ ಆಗಬೇಕು. ಲಾಲು ಪ್ರಸಾದ್ ಯಾದವ್ ಅವರು ಬಿಜೆಪಿಯೊಂದಿಗೆ ರಾಜಿ ಮಾಡಿಕೊಳ್ಳಲಿಲ್ಲ. ಅದಕ್ಕಾಗಿ ಅವರು ಜೈಲು ಸೇರಬೇಕಾಯಿತು.ಸಿದ್ದರಾಮಯ್ಯನವರದು ಕೂಡ ಕೋಮುವಾದಿ ಶಕ್ತಿಗಳ ವಿರುದ್ಧ ರಾಜಿ ರಹಿತ ಹೋರಾಟ. ಹೀಗಾಗಿ ಈಗ ಜಾರಿ ನಿರ್ದೇಶನಾಲಯದ ಬಲೆಯನ್ನು ಎದುರಿಸುವ ಅನಿವಾರ್ಯತೆ ಅವರ ಎದುರಿಗಿದೆ. ಜನತೆಯ ಮತ ಪಡೆದು ಗೆದ್ದರೆ ಸಾಲದು ಯಾರಿಗೆ ಶರಣಾಗತರಾಗಬೇಕೋ ಅವರಿಗೆ ಶರಣಾಗತರಾಗಬೇಕು ಎಂಬ ಪರಿಸ್ಥಿತಿ ಈಗ ಇದೆ. ಸಿದ್ದರಾಮಯ್ಯ ಮಾತ್ರ ಎಂತಹ ಪರಿಸ್ಥಿತಿ ಬಂದರೂ ಅದನ್ನು ಎದುರಿಸಲು ತಯಾರಾಗಿದ್ದಾರೆ.

ಈಗ ಕೇಂದ್ರ ಸರಕಾರದ ಚುಕ್ಕಾಣಿ ಹಿಡಿದಿರುವ ಪಕ್ಷ ಮತ್ತು ಪ್ರಧಾನಿ ತಮ್ಮ ರಾಜಕೀಯ ವಿರೋಧಿಗಳನ್ನು ಹತ್ತಿಕ್ಕಲು ಏನೇನು ಮಾಡುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಪ್ರಾದೇಶಿಕ ಪಕ್ಷಗಳನ್ನು ವಿಭಜಿಸಿ ದುರ್ಬಲಗೊಳಿಸಿರುವುದಕ್ಕೆ ಮಹಾರಾಷ್ಟ್ರ ನಮ್ಮ ಕಣ್ಣ ಮುಂದಿನ ಉದಾಹರಣೆಯಾಗಿದೆ. ದ್ವೇಷ ರಾಜಕಾರಣದ ಅತಿರೇಕಸಿದ್ದರಾಮಯ್ಯನವರ ಮೇಲಿನ ಮುಡಾ ಹಗರಣದಲ್ಲಿ ಹುರುಳಿಲ್ಲ ಎಂಬುದು ನರೇಂದ್ರ ಮೋದಿ, ಅಮಿತ್‌ಶಾ ಸೇರಿದಂತೆ ಬಿಜೆಪಿ ನಾಯಕರಿಗೆ ಗೊತ್ತಿದೆ. ಆದರೆ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಯಾಗಿರುವವರೆಗೆ ಕರ್ನಾಟಕವನ್ನು ಕಬಳಿಸಲು ಆಗುವುದಿಲ್ಲ ಹಾಗೂ ಕರ್ನಾಟಕದ ಬಿಜೆಪಿಯೇ ಒಡೆದ ಮನೆಯಾಗಿದೆ. ಈ ಒಳಜಗಳ ಅನೇಕ ಬಾರಿ ಬೀದಿಗೆ ಬಂದಿದೆ. ತಮ್ಮ ಪಕ್ಷವನ್ನು ಉಳಿಸಿಕೊಳ್ಳಲು ಜನರಿಂದ ಚುನಾಯಿತರಾದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಇಕ್ಕಟಿನಲ್ಲಿ ಸಿಲುಕಿಸಲು ಇಷ್ಟೆಲ್ಲ ಮಸಲತ್ತು ನಡೆಸಿದ್ದಾರೆ.

ನಮ್ಮ ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿದ ನಾಯಕರು ಭಾರತ ಎಂಬುದು ಒಂದಾಗಿ ಉಳಿಯಲು ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ ಸೂಕ್ತ ಎಂದು ಮನಗಂಡು ಸ್ವತಂತ್ರ ಭಾರತವನ್ನು ಜನತಂತ್ರ ಭಾರತವಾಗುವಂತೆ ಮಾಡಿದರು. ಬಾಬಾಸಾಹೇಬರು ಬಹುತ್ವ ಭಾರತಕ್ಕೆ ಸೂಕ್ತವಾದ ಸಂವಿಧಾನವನ್ನು ನೀಡಿದರು. ಆದರೆ ಅದೇ ಬಾಬಾಸಾಹೇಬ್ ಅಂಬೇಡ್ಕರ್ ಅವರು ಉಪನ್ಯಾಸ ಒಂದರಲ್ಲಿ ಮಾತನಾಡುತ್ತ ‘‘ಸ್ವತಂತ್ರ ಭಾರತ ಪ್ರಜಾಪ್ರಭುತ್ವವನ್ನು ರಾಜಕೀಯ ವ್ಯವಸ್ಥೆಯನ್ನಾಗಿ ಸ್ವೀಕರಿಸಿದೆ. ಆದರೆ ಈ ದೇಶದ ಸಮಾಜ ಇನ್ನೂ ಪ್ರಜಾಪ್ರಭುತ್ವಗೊಂಡಿಲ್ಲ’’ ಎಂದು ಹೇಳಿದರು. ಆದರೆ ಸ್ವಾತಂತ್ರ್ಯ ಹೋರಾಟವನ್ನು ಮತ್ತು ಸಂವಿಧಾನವನ್ನು ವಿರೋಧಿಸಿದವರು ಅಧಿಕಾರಕ್ಕೆ ಬಂದು ರಾಜಕೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮುಳುಗಿಸಲು ಹೊರಟಿದ್ದಾರೆ. ಅದರ ಆಧಾರ ಸ್ತಂಭವಾದ ಸಂವಿಧಾನವನ್ನು ಬದಲಿಸುವ ಮಸಲತ್ತು ನಡೆಸಿದ್ದಾರೆ.

ವಿಭಿನ್ನ ಪಕ್ಷಗಳ ಕೆಲವು ನಾಯಕರು ಮೋದಿ ಮತ್ತು ಅಮಿತ್ ಶಾಗೆ ಶರಣಾಗತರಾಗಿದ್ದಾರೆ. ಪಶ್ಚಿಮ ಬಂಗಾಳದ ಟಿಎಂಸಿ ನಾಯಕ ಮುಕುಲ್ ರಾಯ್, ಜನಾರ್ದನ ರೆಡ್ಡಿ, ಭಾವನಾಗವಳಿ, ತಪಸ್ ರಾಯ್, ಯಾಮಿನಿ ಜಾಧವ್ ಹೀಗೆ ಅನೇಕರ ದೊಡ್ಡ ಪಟ್ಟಿಯೇ ಇದೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಎನ್‌ಸಿಪಿಗಳನ್ನು ಒಡೆದು ಅಲ್ಲಿನ ಸರಕಾರವನ್ನು ಹೇಗೆ ಉರುಳಿಸಲಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ.

ಬಿಜೆಪಿ ಸೇರಿದಂತೆ ಸಂಘ ಪರಿವಾರದವರಿಗೆ ಇರುವಂತೆ ಕರ್ನಾಟಕದ ಮತದಾರರು ಮಾತ್ರವಲ್ಲ ಜನಸಾಮಾನ್ಯರಿಗೆ ಇರುವುದು ಎರಡೇ ಆಯ್ಕೆಗಳು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆಗೆ ಇರಬೇಕು, ಇಲ್ಲವಾದರೆ ಕರ್ನಾಟಕವನ್ನು ನುಂಗಲು ಕೋಮುವಾದಿಗಳಿಗೆ ಅವಕಾಶ ಕೊಡಬೇಕು. ಸಿದ್ದರಾಮಯ್ಯನವರ ವಿರೋಧಿಗಳು ಸಿದ್ದರಾಮಯ್ಯನವರು ರಾಜೀನಾಮೆ ಕೊಡಬೇಕೆಂದು ಪದೇ ಪದೇ ಒತ್ರಾಯಿಸುತ್ತಿದ್ದಾರೆ. ಹಾಗಾದರೆ ಎಫ್‌ಐಆರ್ ದಾಖಲಾದ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಕೂಡ ರಾಜೀನಾಮೆ ಕೊಡಬೇಕಲ್ಲವೇ? ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಎಸ್.ಆರ್. ಹಿರೆಮಠ್ ಅವರು ಹೇಳಿದಂತೆ ಸಿದ್ದರಾಮಯ್ಯನವರು ಅಕಸ್ಮಾತ್ ರಾಜೀನಾಮೆ ಕೊಟ್ಟರೆ ಮುಂದೇನು ಎಂಬ ಪ್ರಶ್ನೆಗೆ ಉತ್ತರ ಬೇಕಾಗಿದೆ. ಒಂದು ಸಣ್ಣ ಪ್ರಕರಣದಲ್ಲಿ ಸಿದ್ದರಾಮಯ್ಯನವರನ್ನು ಸಿಲುಕಿಸಿ ಬಲಿ ತೆಗೆದುಕೊಳ್ಳಲು ಹೊರಟವರಲ್ಲಿ ಬಹುತೇಕ ಎಲ್ಲರೂ ನೂರಾರು ಕೋಟಿ ರೂ. ಹಗರಣದಲ್ಲಿ ಸಿಲುಕಿದವರು. ದೇವರಾಜ ಅರಸು, ಬಂಗಾರಪ್ಪನವರ ನಂತರ ಹಿಂದುಳಿದ ವರ್ಗಗಳ ಅತ್ಯಂತ ಸಮರ್ಥ ಆಡಳಿತಗಾರ ಎಂದು ತೋರಿಸಿ ಕೊಟ್ಟ ಸಿದ್ದರಾಮಯ್ಯನವರು ಕೋಮುವಾದಿ, ಕ್ರಿಮಿನಲ್ ಶಕ್ತಿಗಳ ಪಿತೂರಿಯನ್ನು ಎದುರಿಸಿ, ಸರ್ವ ಜನಾಂಗದ ಶಾಂತಿಯ ತೋಟವಾದ ಕರ್ನಾಟಕವನ್ನು ರಕ್ಷಿಸಲು ಮುಂದಾಗಲಿ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಸನತ್ ಕುಮಾರ ಬೆಳಗಲಿ

contributor

Similar News