ಮಠಾಧೀಶರು ಮತ್ತು ಸಂವಿಧಾನ

Update: 2024-11-25 04:34 GMT

ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನೇತೃತ್ವದಲ್ಲಿ ರೂಪುಗೊಂಡ ಸ್ವತಂತ್ರ ಭಾರತದ ಸಂವಿಧಾನವನ್ನು ನಾಶ ಮಾಡುವ ಹುನ್ನಾರ ಹೊಸದಲ್ಲ. ಈ ಬಾರಿ ಸಂಘ ಪರಿವಾರ ನಿಷ್ಠ ಕೆಲ ಮಠಾಧೀಶರು ಸಂವಿಧಾನದ ವಿರುದ್ಧ ಅಪಸ್ವರ ತೆಗೆದಿದ್ದಾರೆ. ಅದರಲ್ಲೂ ವಿಶೇಷವಾಗಿ ಕೋಮುವಾದಿ ಸಂಘಟನೆಗಳ ಜೊತೆ ಗುರುತಿಸಿಕೊಂಡ ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ಸ್ವಾಮಿಗಳು ಬಹಿರಂಗವಾಗಿ ಸಂವಿಧಾನ ಬದಲಾವಣೆಗೆ ಆಗ್ರಹಪಡಿಸಿದ್ದಾರೆ.

ವಿಶ್ವ ಹಿಂದೂ ಪರಿಷತ್ತಿನ ಕರ್ನಾಟಕ ಘಟಕ ಶನಿವಾರ ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಸಂತ ಸಮಾವೇಶದಲ್ಲಿ ಮಾತನಾಡಿದ ಸ್ವಾಮಿಗಳು ‘ಸ್ವಾತಂತ್ರ್ಯ ಪೂರ್ವದಲ್ಲಿ ಭಾರತವು ಹಿಂದೂ ರಾಷ್ಟ್ರವಾಗಿತ್ತು. ಆದರೆ, ಸ್ವಾತಂತ್ರ್ಯಾನಂತರ ಜಾತ್ಯತೀತ ರಾಷ್ಟ್ರವಾಯಿತು’ ಎಂದು ಹೇಳಿದ್ದಾರೆ. ‘ಈಗಿನ ಸಂವಿಧಾನ ಹೋಗಿ, ನಮ್ಮನ್ನು ಗೌರವಿಸುವ ಸಂವಿಧಾನ ಬರಬೇಕಾಗಿದೆ’ ಎಂದು ಅವರು ಈ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ. ಜೊತೆಗೆ ಮಹಾತ್ಮ್ಮಾ ಗಾಂಧೀಜಿ, ನೆಹರೂ, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್ ಮುಂತಾದವರ ನೇತೃತ್ವದ ಸ್ವತಂತ್ರ ಭಾರತವನ್ನು ಅವಹೇಳನ ಮಾಡಿದ್ದಾರೆ.

‘‘ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದವು ಎಂದು ಸಂಭ್ರಮಿಸುತ್ತಿದ್ದೇವೆ. ಆದರೂ ನಿಜವಾಗಿ ನಾವು ಸ್ವತಂತ್ರ ವಾಗಿದ್ದೇವೆಯೇ’’ ಎಂದು ಪ್ರಶ್ನೆ ಮಾಡಿರುವ ಅವರು ‘‘ಹಿಂದೂಗಳು ಸುಭದ್ರವಾಗಿ ಇದ್ದಾರೆ. ಆದರೆ ಹಿಂದೂಧರ್ಮ ಮತ್ತು ಹಿಂದೂಗಳನ್ನು ಗೌರವಿಸುವ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಚುನಾವಣೆಯ ಸಂದರ್ಭದಲ್ಲಿ ಆಸೆ, ಆಮಿಷಗಳಿಗೆ ಬಲಿಯಾಗಿ ಹಿಂದೂ ಧರ್ಮದ ವಿರುದ್ಧ ಸಂಕಲ್ಪ ಮಾಡುವ ಪಕ್ಷವನ್ನು ಅಧಿಕಾರಕ್ಕೆ ತರುತ್ತಿದ್ದೇವೆ. ಇದು ಬದಲಾಗಬೇಕಾಗಿದೆ. ಚುನಾವಣೆಯ ಸಂದರ್ಭದಲ್ಲಿ ನಾವು ಬೀದಿಗೆ ಇಳಿಯಬೇಕು’’ ಎಂದು ತಮ್ಮ ರಾಜಕೀಯ ಹಿತಾಸಕ್ತಿಯನ್ನು ಪ್ರದರ್ಶಿಸಿದ್ದಾರೆ.

ಯಾವುದೇ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾಮಿಗಳ ಅಭಿವ್ಯಕ್ತಿ ಸ್ವಾತಂತ್ರ್ಯ ವನ್ನು ಪ್ರಶ್ನಿಸುವುದಿಲ್ಲ. ಆದರೆ, ಮಾತನಾಡುವ ಈ ಸ್ವಾತಂತ್ರ್ಯ ಅವರಿಗೆ ನೀಡಿದ್ದು ಸಂವಿಧಾನ ಎಂಬುದನ್ನು ಸ್ವಾಮೀಜಿಯೂ ಮರೆಯಬಾರದು. ಸ್ವಾಮಿಗಳು ಸೇರಿದಂತೆ ಈ ಭಾರತದ 145 ಕೋಟಿ ಜನರಿಗೆ ಅಭಿಪ್ರಾಯವನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯ ದೊರಕಿದ್ದು ಅಂಬೇಡ್ಕರ್ ಅವರ ಸಂವಿಧಾನದಿಂದ.

ಪೇಜಾವರ ಮಠದ ಇವರಿಗಿಂತ ಮುಂಚಿನ ಪೀಠಾಧಿಪತಿಗಳಾದ ವಿಶ್ವೇಶ ತೀರ್ಥ ಸ್ವಾಮಿಗಳು ಕೂಡ ಸಂಘಪರಿವಾರದ ಸಂಘಟನೆಗೊಂದಿಗೆ ಗುರುತಿಸಿಕೊಂಡಿದ್ದರು. ಆದರೆ ಅವರು ಇವರಿಗಿಂತ ಭಿನ್ನವಾಗಿದ್ದರು. ಹೇಳಬೇಕಾದುದನ್ನು ನಯವಾದ ಭಾಷೆಯಲ್ಲಿ ಹೇಳುತ್ತಿದ್ದರು. ಅಯೋಧ್ಯೆಯ ಬಾಬರಿ ಮಸೀದಿ ನೆಲಸಮಗೊಳಿಸಿದಾಗ ವಿಶ್ವೇಶ ತೀರ್ಥರು ಅಲ್ಲಿದ್ದರು. ಆದರೆ, ಕೊನೆಯ ಘಳಿಗೆಯಲ್ಲಿ ಮಸೀದಿ ಉರುಳುವಾಗ ಅಲ್ಲಿರಲಿಲ್ಲ ಎಂದು ಹೇಳುತ್ತಿದ್ದರು. ಸಂವಿಧಾನದ ಬಗ್ಗೆ ಹಾಗೂ ಬಾಬಾಸಾಹೇಬರ ಕುರಿತು ಎಂದೂ ಆಕ್ರಮಣಕಾರಿಯಾದ ಹೇಳಿಕೆ ನೀಡಿದ ನೆನಪಿಲ್ಲ. ಮನಸ್ಸಿನಲ್ಲಿ ಹೇಗೇ ಇರಲಿ, ಸೈದ್ಧಾಂತಿಕ ಭಿನ್ನಾಭಿಪ್ರಾಯ ಹೊಂದಿದವರೊಂದಿಗೆ ಸಂವಾದ ನಡೆಸಲು ಇಷ್ಟಪಡುತ್ತಿದ್ದರು.ಅವರ ಕೋಮುವಾದಿ ನಿಲುವುಗಳನ್ನು ಕಟುವಾಗಿ ಟೀಕಿಸುತ್ತಿದ್ದ ರಾಜ್ಯದ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮ ರಾವ್, ಪಿ.ಲಂಕೇಶ್ ಹಾಗೂ ಅಗ್ನಿ ಶ್ರೀಧರ್‌ಅವರನ್ನು ತಾವೇ ಹೋಗಿ ಭೇಟಿಯಾಗಿ ಚರ್ಚಿಸುತ್ತಿದ್ದರು.

ಒಮ್ಮೆ ಟಿವಿ ಚಾನೆಲ್‌ವೊಂದರಲ್ಲಿ ನಾಡಿನ ಹಿರಿಯ ಚಿಂತಕ ಜಿ.ಕೆ . ಗೊವಿಂದರಾವ್ ಅವರ ಜೊತೆಗೂ ಸಂವಾದ ನಡೆಸಿದ್ದರು. ಈ ಸಂದರ್ಭದಲ್ಲಿ ಸಂವಾದ ಎಲ್ಲೂ ಹಳಿ ತಪ್ಪಿರಲಿಲ್ಲ. ನನ್ನ ಜೊತೆ ಹಿಂದಿನ ಪೇಜಾವರ ಶ್ರೀಗಳದು ತುಂಬ ಹಳೆಯ ಪರಿಚಯ. ‘ವಾರ್ತಾಭಾರತಿ’ಯ ನನ್ನ ಅಂಕಣ ಬರಹಗಳನ್ನು ತಪ್ಪದೇ ಓದುತ್ತಿದ್ದರು. ಒಮ್ಮೆ ನಾನು ವೈಷ್ಣವ ದೀಕ್ಷೆಯ ಬಗ್ಗೆ ಬರೆದಾಗ ವಿಶ್ವೇಶ ತೀರ್ಥರು ತಕ್ಷಣ ಪ್ರತಿಕ್ರಿಯೆ ನೀಡಿದರು. ಮರುವಾರ ನಾನು ಮತ್ತೆ ಬರೆದೆ. ಹೀಗೆ ನಾಲ್ಕು ತಿಂಗಳ ನಿರಂತರ ಪ್ರಶ್ನೆ ಮತ್ತು ಉತ್ತರಗಳ ಸಮರ ನಡೆಯಿತು. ಆದರೆ ವೈಯಕ್ತಿಕವಾಗಿ ಅವರಾಗಲಿ, ನಾನಾಗಲಿ ಎಂದೂ ಕೆರಳಿ ಅಸಭ್ಯ ಭಾಷೆಯನ್ನು ಬಳಸಲಿಲ್ಲ. ಈ ಸಂದರ್ಭದಲ್ಲಿ ವಾಹಿನಿಯೊಂದರ ಜೊತೆ ಸಂವಾದ ನಡೆಸಿ ಹೊರಗೆ ಬಂದಾಗ ಅಲ್ಲಿ ನಗುತ್ತಾ ನಿಂತಿದ್ದ ಅವರು ‘ಹೇಗಿದ್ದೀರಿ ಬೆಳಗಲಿ ಅವರೆ’ ಎಂದರು. ಆದರೆ, ಅವರ ಉತ್ತರಾಧಿಕಾರಿಯಾಗಿ ಬಂದ ವಿಶ್ವಪ್ರಸನ್ನ ತೀರ್ಥ ಸ್ವಾಮಿಗಳು ಅವರ ಹಿರಿಯ ಗುರುಗಳಿಗಿಂತ ಭಿನ್ನವಾಗಿ ಬಹುತ್ವ ಭಾರತ, ಪರಿಕಲ್ಪನೆ ಹಾಗೂ ಸಂವಿಧಾನದ ಬಗ್ಗೆ ಅತ್ಯಂತ ಪ್ರಚೋದನಕಾರಿ ಮಾತುಗಳನ್ನು ಆಡುತ್ತಿದ್ದಾರೆ. ಭಾರತೀಯರನ್ನು ಜಾತಿ ಮತದ ಹೆಸರಿನಲ್ಲಿ ವಿಭಜಿಸುವ ಮಾತುಗಳು ಅವರ ಬಾಯಿಯಿಂದ ಬರುತ್ತಿವೆ.

ಸಂವಿಧಾನದ ಬಗ್ಗೆ ಈ ವಿಶ್ವಪ್ರಸನ್ನ ತೀರ್ಥ ಅವರಿಗೆ ಯಾಕೆ ಇಷ್ಟು ಕೋಪ ? ಸ್ವಾತಂತ್ರ್ಯ ಪೂರ್ವದಲ್ಲಿ ಭಾರತ ಹಿಂದೂ ರಾಷ್ಟ್ರವಾಗಿತ್ತು, ಸ್ವಾತಂತ್ರ್ಯ ಬಂದ ನಂತರ ಜಾತ್ಯತೀತ ರಾಷ್ಟ್ರವಾಯಿತು ಎಂದು ಇವರು ಹೇಳಿದ ಮಾತಿಗೆ ಐತಿಹಾಸಿಕ ಆಧಾರಗಳಿವೆಯೇ? ವಾಸ್ತವವಾಗಿ ದೇಶ ಎಂಬುದು ಖಚಿತ ಸ್ವರೂಪ ಪಡೆದಿದ್ದು ಸ್ವಾತಂತ್ರ್ಯ ಬಂದ ನಂತರ.ಅದಕ್ಕಿಂತ ಮೊದಲು ಇಲ್ಲಿ ರಾಷ್ಟ್ರ ಎಂಬ ಪರಿಕಲ್ಪನೆ ಇರಲಿಲ್ಲ. ಆಗ ಊರೂರಿಗೆ ಒಬ್ಬ ರಾಜನಿದ್ದ. ದಿಲ್ಲಿ, ಬಂಗಾಳ, ಕಾಶ್ಮೀರ ಹೀಗೆ ಹಲವಾರು ರಾಷ್ಟ್ರಗಳಿದ್ದವು. ಆಗ ಉತ್ತರ ಕರ್ನಾಟಕದ ಜಮಖಂಡಿ, ಮುಧೋಳ, ರಾಮದುರ್ಗ ಹೀಗೆ ನಲವತ್ತು ಕಿ.ಮೀ. ಅಂತರದಲ್ಲಿ ಒಬ್ಬೊಬ್ಬ ರಾಜರಿರುತ್ತಿದ್ದರು. ಈ ಭಾರತದ ಇತಿಹಾಸದ ಬಗ್ಗೆ ಮಾತಾಡುವಾಗ ಖಚಿತ ಸಾಕ್ಷ್ಯಾಧಾರಗಳನ್ನ್ನು ಒದಗಿಸಬೇಕು.

ಸ್ವಾತಂತ್ರ್ಯ ಮತ್ತು ಸಂವಿಧಾನ ಬರುವ ಮುಂಚೆ ಭಾರತ ಎಂಬುದು ಹೇಗಿತ್ತು? ಆಗ ರಾಜ, ಮಹಾರಾಜರ ಕಾಲ. ಶ್ರೇಣೀಕೃತ ಜಾತಿ ವ್ಯವಸ್ಥೆ ಭಯಾನಕ ಸ್ವರೂಪದಲ್ಲಿ ಇತ್ತು.ಅಕ್ಷರ ಕಲಿಯಲು ದಲಿತರು ಮತ್ತು ಹಿಂದುಳಿದ ಸಮುದಾಯದವರಿಗೆ ಹಾಗೂ ಮಹಿಳೆಯರಿಗೆ ಅವಕಾಶವಿರಲಿಲ್ಲ. ಅಸ್ಪೃಶ್ಯತೆ, ಸತಿ ಸಹಗಮನ ಪದ್ಧ್ದತಿಗಳು ಚಾಲ್ತಿಯಲ್ಲಿದ್ದವು. ಪೇಶ್ವೆಗಳ ರಾಜ್ಯದಲ್ಲಂತೂ ದಲಿತರು ತಮ್ಮ ಓಣಿಯಿಂದ ನಗರಕ್ಕೆ ಬರಬೇಕೆಂದರೆ ಕೊರಳಿಗೆ ಗಡಿಗೆ ಯನ್ನು ಕಟ್ಟಿಕೊಂಡು ಬರಬೇಕಾಗಿತ್ತು, ಹೀಗೆ ಬಂದವರು ಉಗುಳು ಬಂದರೆ ಕೊರಳಿಗೆ ಕಟ್ಟಿಕೊಂಡ ಗಡಿಗೆಯಲ್ಲಿ ಉಗುಳಬೇಕು. ನಡೆದಾಡುವಾಗ ಹೆಜ್ಜೆಗಳು ನೆಲದ ಮೇಲೆ ಮೂಡಬಾರದು ಎಂದು ಸೊಂಟಕ್ಕೆ ಪೊರಕೆಯನ್ನು ಕಟ್ಟಿಕೊಂಡು ಬರಬೇಕಾಗಿತ್ತು. ಪತಿ ತೀರಿಕೊಂಡಾಗ ಹೆಂಡತಿ ಗಂಡನ ಜೊತೆಗೆ ಚಿತೆಗೆ ಹಾರಬೇಕಾಗಿತ್ತು.ಆದರೆ ಸ್ವಾತಂತ್ರ್ಯ ಪೂರ್ವದ ಬ್ರಿಟಿಷ್ ಕಾಲದಲ್ಲಿ ದಲಿತರಿಗೆ ಅಕ್ಷರ ಕಲಿಯುವ ಅವಕಾಶ ದೊರಕಿತು. ಆ ಕಾಲಘಟ್ಟದಲ್ಲಿ ಅಂಬೇಡ್ಕರ್ ಎಂಬ ಬೆಳಕು ಕಾಣಿಸಿಕೊಂಡಿತು. ಬಹುಶಃ ವಿಶ್ವಪ್ರಸನ್ನ ತೀರ್ಥರು ಅಂದಿನ ಭಾರತವನ್ನು ಅಂದರೆ ದಲಿತರನ್ನು ಕಾಲ ಕಸದಂತೆೆ ಕಾಣುವ ಭಾರತವನ್ನು ಬಯಸುತ್ತಿದ್ದಾರೆ.ಈ ಗುರಿ ಸಾಧನೆಗಾಗಿ ಹಿಂದೂ ರಾಷ್ಟ್ರ ಅವರಿಗೆ ಬೇಕಾಗಿದೆ. ಅದಕ್ಕಾಗಿ ಅವರು ಹಿಂದೂ’ ಶಬ್ದವನ್ನು ಬಳಸುತ್ತಿದ್ದಾರೆ. ಅದಕ್ಕಾಗಿ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡುವಂಥ ಮಾತುಗಳನ್ನು ಆಡುತ್ತಿದ್ದಾರೆ.

ಭಾರತ ಎಂಬ ದೇಶ ಸಮಸ್ತ ಭಾರತೀಯರಿಗೆ ಸೇರಿದ್ದು.ಇದು ಯಾವುದೇ ಒಂದು ಧರ್ಮಕ್ಕೆ, ಇಲ್ಲವೇ ಜಾತಿಗೆ ಸೇರಿದ್ದಲ್ಲ.ಸಮಸ್ತ ಭಾರತಿಯರೆಂದರೆ ಯಾರು? ಇಲ್ಲಿ ಹಿಂದೂಗಳು, ಮುಸಲ್ಮಾನರು, ಜೈನರು, ಸಿಖ್, ಕ್ರೈಸ್ತರು ಹೀಗೆ ಎಲ್ಲರೂ ಶತಮಾನಗಳಿಂದ ಒಟ್ಟಾಗಿ ಬದುಕಿದ್ದಾರೆ. ಭಾರತ ಎಂಬುದು ಇವರೆಲ್ಲರಿಗೆ ಸೇರಿದ್ದು.ವಾಸ್ತವವಾಗಿ ಇದು ಎಲ್ಲರ ಭಾರತ. ಬಾಬಾ ಸಾಹೇಬರು ಇದಕ್ಕೆ ಪೂರಕವಾದ ಸಂವಿಧಾನವನ್ನು ಬರೆದಿದ್ದು, ಅದನ್ನು ದೇಶ ಒಪ್ಪಿಕೊಂಡಿದೆ. ಇದನ್ನು ನಾಶ ಮಾಡುವ ಮಸಲತ್ತನ್ನು ಯಾರೇ ಮಾಡಿರಲಿ ಅದು ಘೋರ ಅಪರಾಧ ವಾಗಿದೆ. ಭಾರತವನ್ನು ಕಲ್ಯಾಣ ರಾಜ್ಯವನ್ನಾಗಿ ಮಾಡುವುದು ಸಂವಿಧಾನದ ಗುರಿಯಾಗಿದೆ. ಕಲ್ಯಾಣ ರಾಜ್ಯವೆಂದರೆ ಜನಸಾಮಾನ್ಯರಿಗೆ ಆಹಾರ ,

ಕುಡಿಯುವ ನೀರು,ಆರೋಗ್ಯ, ಶಿಕ್ಷಣ, ಉದ್ಯೋಗ ಇವೆಲ್ಲ ಒದಗುವಂತೆ ನೋಡಿಕೊಳ್ಳುವುದು, ಇದು ಸರಕಾರದ ಜವಾಬ್ದಾರಿ. ದೇಶದ ಸಂಪತ್ತನ್ನು ಅದಾನಿ,

ಅಂಬಾನಿ ಮುಂತಾದ ಕಾರ್ಪೊರೇಟ್ ಧನಿಕರಿಗೆ ಧಾರೆಯೆರೆದು ಕೊಡುವ ಮಸಲತ್ತನ್ನು ವಿಫಲಗೊಳಿಸಬೇಕಾಗಿದೆ.

ಮಠಾಧೀಶರು ಮತ್ತು ಕೋಮುವಾದಿಗಳು ವಿರೋಧಿಸುವ ಈ ಸಂವಿಧಾನ ಬಂದ ನಂತರ ಅಸ್ಪೃಶ್ಯತೆ ಅಪರಾಧವಾಗಿದೆ. ಹೆಣ್ಣು ಮಕ್ಕಳನ್ನು ಹೀನಾಯವಾಗಿ ಕಾಣುವ ವರದಕ್ಷಿಣೆ ನಿಷೇಧಿಸಲ್ಪಟ್ಟಿದೆ. ಶತಮಾನಗಳಿಂದ ತಮ್ಮ ಮೈಬೆವರಿನಿಂದ ಭಾರತವನ್ನು ನಿರ್ಮಿಸಿದ ದುಡಿಯುವ, ದಲಿತ, ದಮನಿತರಿಗೆ ಮೀಸಲು ವ್ಯವಸ್ಥೆ ಜಾರಿಗೆ ಬಂದಿದೆ.

ಹಿಂದೂ ಮುಸ್ಲಿಮ್ ಸೇರಿದಂತೆ ಇದು ಎಲ್ಲರಿಗೂ ಸೇರಿದ ದೇಶ.ಅದರಲ್ಲೂ ನಮ್ಮ ಕರ್ನಾಟಕ ಎಂಬುದು ಸೌಹಾರ್ದದ ತಾಣ.ಇದು ಸಕಲರ ಲೇಸನು ಬಯಸುವ ಬಸವಣ್ಣನವರು, ಕನಕದಾಸರು, ಶಿಶುನಾಳ ಶರೀಫರು ನಡೆದಾಡಿದ ನೆಲ ಎಂಬುದನ್ನು ಮರೆಯಬಾರದು. ತಮ್ಮ ಮಠ, ಪೀಠಗಳಿಗೆ ಸೀಮಿತ ವಾಗಿರಬೇಕಾದ ಸ್ವಾಮಿಗಳು ರಾಜಕೀಯ ಮಾಡುವುದು ಅವರಿಗೆ ಶೋಭೆ ತರುವುದಿಲ್ಲ. ಯಾವುದೇ ಮಠಾಧೀಶರಿರಲಿ, ಸ್ವಾಮಿಗಳಿರಲಿ ಅವರು ನಮ್ಮ ಸ್ವಾತಂತ್ರ್ಯ, ಸಂವಿಧಾನ ಹಾಗೂ ಪ್ರಜಾಪ್ರಭುತ್ವಕ್ಕಿಂತ ದೊಡ್ಡವರಲ್ಲ. ಮಠಾಧೀಶರು ಹೃದಯ ಬೆಸೆಯುವ , ಅರಿವು ಮೂಡಿಸುವ ಮಾತು ಆಡಲಿ. ಬೆದರಿಕೆ, ಪ್ರಚೋದನಕಾರಿ ಮಾತುಗಳು ಬೇಡ.

ರಾಜಕೀಯ ಮತ್ತು ಮಠ, ಧಾರ್ಮಿಕತೆಗಳು ಪ್ರತ್ಯೇಕ ಕ್ಷೇತ್ರಗಳು. ಅವುಗಳಿಗೆ ಅವುಗಳದ್ದೇ ಆದ ಪಾವಿತ್ರ್ಯಗಳಿವೆ. ಒಬ್ಬ ರಾಜಕಾರಣಿ ಧಾರ್ಮಿಕತೆಯೊಳಗೆ ಕೈಯಾಡಿಸಲು ಹೋಗಬಾರದು. ಅದೇ ರೀತಿ ಯಾವುದೇ ಮಠ, ಪೀಠದ ಸ್ವಾಮಿಗಳು ಪಾರಮಾರ್ಥಿಕ ಚಿಂತನೆಯನ್ನು ಬಿಟ್ಟು ಸದಾ ರಾಜಕಾರಣ ಮಾಡುವುದು ಅವರ ಘನತೆಗೆ ತಕ್ಕುದಲ್ಲ. ತಮ್ಮದೇ ಪುಟ್ಟ ಜಗತ್ತಿನ ಗುರುಗಳಾಗಿ ಜಗದ್ಗುರು ಎಂದು ಕರೆಸಿಕೊಳ್ಳುವ ಇವರು ಎಚ್ಚರಿಕೆಯಿಂದ ಹೇಳಿಕೆ ನೀಡುವುದು ಸೂಕ್ತ.ಈ ದೃಷ್ಟಿಯಿಂದ ಲಿಂಗಾಯತ ಸ್ವಾಮಿಗಳು ಎಷ್ಟೋ ವಾಸಿ. ಅವರ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಮತದ ತಾರತಮ್ಯ ಇರುವುದು ಕಡಿಮೆ. ಉಡುಪಿಯ ಪೇಜಾವರ ಶ್ರೀ ಗಳು ನಿಜವಾದ ಆಧ್ಯಾತ್ಮಿಕ ಮಾತುಗಳನ್ನು ಹೇಳುವ ಅಭ್ಯಾಸ ಮಾಡಿಕೊಳ್ಳಲಿ.ಅದಕ್ಕಾಗಿ ಬಸವಣ್ಣನವರ, ವಿವೇಕಾನಂದರ ,

ಬಾಬಾಸಾಹೇಬರ ಸಾಹಿತ್ಯವನ್ನು ಓದಲಿ.ಕಟ್ಟುವ ಮಾತುಗಳು ಅವರ ಬಾಯಿಯಿಂದ ಬರಲಿ. ಅದರ ಬದಲಾಗಿ ಕೆಡವುವ ಮಾತು ಬೇಡ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಸನತ್ ಕುಮಾರ್ ಬೆಳಗಲಿ

contributor

Similar News