ಅಲ್ಲಿರಬೇಕಾದವರು ಇಲ್ಲಿ, ಇಲ್ಲಿರಬೇಕಾದವರು ಅಲ್ಲಿ

ಸಮಾಜವಾದಿ ಚಳವಳಿಯಿಂದ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರಂಥವರಿಂದಾಗಿ ಶಾಸನ ಸಭೆಗಳು ಇಂದಿಗೂ ಜನ ಸದನಗಳಾಗಿ ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಿವೆ. ರಿಯಲ್ ಎಸ್ಟೇಟ್ ಮತ್ತು ಶಿಕ್ಷಣ ವ್ಯಾಪಾರಿಗಳ ನಡುವೆಯೂ ಕೃಷ್ಣ ಬೈರೇಗೌಡ, ಸತೀಶ್ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ ಮೊದಲಾದವರು ತಮ್ಮ ಅಧ್ಯಯನ ಪೂರ್ಣ ಮಾತುಗಳಿಂದ ಸದನದ ಚರ್ಚೆಯ ಗುಣಮಟ್ಟವನ್ನು ಹೆಚ್ಚಿಸಿದ್ದಾರೆ.;

Update: 2025-03-24 11:45 IST
ಅಲ್ಲಿರಬೇಕಾದವರು ಇಲ್ಲಿ, ಇಲ್ಲಿರಬೇಕಾದವರು ಅಲ್ಲಿ
  • whatsapp icon

ಸ್ವತಂತ್ರ ಭಾರತದ 70 ವರ್ಷಗಳ ನಂತರ, ನಮ್ಮ ಶಾಸನ ಸಭೆಗಳ ಈಗಿನ ಸ್ವರೂಪವನ್ನು ಗಮನಿಸಿದಾಗ, ಪ್ರಜಾಪ್ರಭುತ್ವದ ಸುರಕ್ಷತೆ ಹಾಗೂ ಭವಿಷ್ಯದ ಬಗ್ಗೆ ಸಹಜವಾಗಿ ಆತಂಕ ಉಂಟಾಗುತ್ತದೆ.

ಪ್ರಜಾಪ್ರಭುತ್ವ ಹಾಗೂ ಕೋಟ್ಯಂತರ ಜನರ ಬದುಕು ಭವಿಷ್ಯದ ಬಗ್ಗೆ ಶಾಸನವನ್ನು ರೂಪಿಸುವ ಸದನಗಳಲ್ಲಿ ದುಶ್ಶಾಸನರು ಕಾಣಿಸಿಕೊಳ್ಳುತ್ತಿದ್ದಾರೆ. ಅವರು ಎಳೆಯುತ್ತಿರುವುದು ದ್ರೌಪದಿಯ ಸೀರೆಯನ್ನಲ್ಲ, ತಮ್ಮನ್ನು ತಾವು ಬೆತ್ತಲೆಗೊಳಿಸಿಕೊಳ್ಳುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಬಿಚ್ಚಿಕೊಳ್ಳುತ್ತಿರುವ ‘ಹನಿ ಟ್ರ್ಯಾಪ್’ ಹಗರಣಗಳು ಇಂದಿನ ಶಾಸನ ಸಭೆಗಳ ಅಧೋಗತಿಗೆ ಸಾಕ್ಷಿಯಾಗಿವೆ.

ಕೃಷ್ಣ ಜನ್ಮಸ್ಥಳದಲ್ಲಿ ಇರಬೇಕಾದವರು ಸದನಗಳಲ್ಲಿ ಗೋಚರಿಸುತ್ತಿದ್ದಾರೆ. ಸದನಗಳಲ್ಲಿ ಇರಬೇಕಾದವರು ಜೈಲು ಪಾಲಾಗಿದ್ದಾರೆ. ಇದಕ್ಕೆ ಹಲವಾರು ಉದಾಹರಣೆಗಳಿವೆ. ಆನಂದ ತೇಲ್ತುಂಬ್ಡೆ ಅವರಂಥ ಅಂತರ್‌ರಾಷ್ಟ್ರೀಯ ಮಟ್ಟದ ಚಿಂತಕರು ಅನುಭವಿಸಿದ ಸೆರೆಮನೆ ವಾಸ, ನಂತರ ಬಿಡುಗಡೆ ಎಲ್ಲರಿಗೂ ಗೊತ್ತು. ಭಾರತ ಸ್ವತಂತ್ರಗೊಂಡು ಪ್ರಜಾಪ್ರಭುತ್ವ ಆಡಳಿತ ಪದ್ಧತಿಯನ್ನು ಒಪ್ಪಿ 7 ದಶಕಗಳು ಗತಿಸಿವೆ. ಈ ಕಾಲಾವಧಿಯಲ್ಲಿ ಅನೇಕ ಚುನಾವಣೆಗಳು, ಉಪ ಚುನಾವಣೆಗಳು ಈ ದೇಶದಲ್ಲಿ ನಡೆದಿವೆ. ಜಾತಿ ವ್ಯವಸ್ಥೆಯ ಮತ್ತು ಪಾಳೆಗಾರಿಕೆಯ ಬೇರುಗಳು ತುಂಬಾ ಆಳಕ್ಕಿಳಿದ ಇಲ್ಲಿ ಜನತಾಂತ್ರಿಕ ಆಡಳಿತ ಪದ್ಧತಿಯ ಬೇರುಗಳು ನಿಧಾನವಾಗಿ ಕ್ಷೀಣಗೊಳ್ಳುತ್ತಿವೆಯೇನೋ ಎಂಬ ಕಳವಳ ಉಂಟಾಗುತ್ತದೆ.

ಬಾಬಾಸಾಹೇಬರು ಹೇಳಿದಂತೆ ಸಮಾಜ ಪ್ರಜಾಪ್ರಭುತ್ವವಾಗದೇ ಆಡಳಿತ ಮಾತ್ರ ಪ್ರಜಾಪ್ರಭುತ್ವವಾದರೆ ಪ್ರಯೋಜನವಿಲ್ಲ. ಆದರೂ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಹಲವಾರು ಏರುಪೇರುಗಳನ್ನು ಕಂಡು ಚುನಾವಣೆಯ ಮಟ್ಟಿಗಂತೂ ಯಶಸ್ವಿಯಾಗಿದೆಯೆಂದರೆ ತಪ್ಪಿಲ್ಲ.

ವಿದೇಶಿ ಆಡಳಿತ ತೊಲಗಿ ಹೊಸದಾಗಿ ಸ್ವಾತಂತ್ರ್ಯ ಪಡೆದ ಜಗತ್ತಿನ ಅನೇಕ ದೇಶಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸ್ವೀಕರಿಸಿದ್ದರೂ ಅದನ್ನು ಕಾಪಾಡಿಕೊಂಡು ಹೋಗಲು ಆಗಿಲ್ಲ. ಅನೇಕ ದೇಶಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡಿ ಸೇನೆ ಆಡಳಿತವನ್ನು ವಹಿಸಿಕೊಂಡಿದೆ. ಕೆಲವು ದೇಶಗಳಲ್ಲಿ ಹಿಂದಿನ ರಾಜ ಮಹಾರಾಜರು ಮತ್ತೆ ಅಧಿಕಾರ ವಹಿಸಿಕೊಂಡಿದ್ದಾರೆ. ಇನ್ನು ಕೆಲವು ದೇಶಗಳಲ್ಲಿ ನಿರಂತರ ಅರಾಜಕತೆ ತಾಂಡವವಾಡುತ್ತಿದೆ. ನಮ್ಮ ಪಕ್ಕದ ಪಾಕಿಸ್ತಾನ, ಅಫ್ಘಾನಿಸ್ತಾನಗಳಲ್ಲಿ ಅರಾಜಕತೆ ಇದೆ. ಮತೀಯ ಸಾಮ್ರಾಜ್ಯ ಕಟ್ಟಲು ಹೋದವರು ಮಣ್ಣುಪಾಲಾಗಿದ್ದಾರೆ. ಆದರೆ, ಭಾರತದ ಪ್ರಜಾಪ್ರಭುತ್ವ ಹಲವಾರು ಅಗ್ನಿಪರೀಕ್ಷೆಗಳನ್ನು ಎದುರಿಸಿ ಯಶಸ್ವಿಯಾಗಿದೆ. ಇದಕ್ಕೆ ಕಾರಣ ಇದು ಯಾವುದೇ ಒಂದು ಧರ್ಮ, ಭಾಷೆ, ಜನಾಂಗ ಮತ್ತು ಸಂಸ್ಕೃತಿಗೆ ಸೇರಿದ ಭೂ ಪ್ರದೇಶವಲ್ಲ. ಹಲವಾರು ಧರ್ಮ, ಭಾಷೆ, ಜನಾಂಗೀಯ ವೈವಿಧ್ಯತೆಗಳನ್ನು ಒಡಲಲ್ಲಿ ಇರಿಸಿಕೊಂಡ ಒಕ್ಕೂಟ ದೇಶ. ಇದನ್ನೆಲ್ಲ ಅಧ್ಯಯನ ಮಾಡಿದ ಡಾ. ಅಂಬೇಡ್ಕರ್ ಇದಕ್ಕೆ ಸೂಕ್ತವಾದ ಸಂವಿಧಾನವನ್ನು ರೂಪಿಸಿದರು.

ಈ ದೇಶದಲ್ಲಿ ಐದು ವರ್ಷಕ್ಕೊಮ್ಮೆ ಚುನಾವಣೆ ನಡೆದು ಒಕ್ಕೂಟ ಸರಕಾರ ನಡೆಸುವ ಪಕ್ಷಗಳು ಬದಲಾಗಿವೆ. ಗೆದ್ದವರು ಅಧಿಕಾರ ವಹಿಸಿಕೊಂಡಿದ್ದಾರೆ. ಸೋತವರು ಅಧಿಕಾರ ಬಿಟ್ಟುಕೊಟ್ಟಿದ್ದಾರೆ.ಅಧಿಕಾರ ಹಸ್ತಾಂತರ ಇಲ್ಲಿ ಯಾವುದೇ ಕಲಹ, ರಕ್ತಪಾತವಿಲ್ಲದೇ ಸರಳವಾಗಿ ನಡೆಯುತ್ತ ಬಂದಿದೆ. ಇದು ಇಡೀ ಜಗತ್ತಿಗೆ ಮಾದರಿಯಾಗಿದೆ. ನಮ್ಮ ಹಿರಿಯರು ಜತನದಿಂದ ಕಾಪಾಡಿಕೊಂಡು ಬಂದ ಈ ಪ್ರಜಾಪ್ರಭುತ್ವ ವ್ಯವಸ್ಥೆ ಕಳೆದ ಹತ್ತು ವರ್ಷಗಳಿಂದ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಪ್ರಜಾಪ್ರಭುತ್ವ ಮತ್ತು ಇದಕ್ಕೆ ಆಧಾರಸ್ತಂಭವಾದ ಸಂವಿಧಾನದ ಬುಡವನ್ನೇ ಅಲ್ಲಾಡಿಸುವ ಮಸಲತ್ತುಗಳು ಒಳಗೊಳಗೆ ನಡೆಯುತ್ತಿವೆ. ಒಂದು ಕಾಲದಲ್ಲಿ ಕಾನೂನು ಪರಿಣಿತರು, ಚಾರಿತ್ರ್ಯವಂತರು, ಸಾಮಾಜಿಕ ಕಾಳಜಿಯ ಹೋರಾಟಗಾರರಿಂದ ತುಂಬಿರುತ್ತಿದ್ದ ನಮ್ಮ ಸಂಸತ್ತು ಮತ್ತು ರಾಜ್ಯಗಳ ಶಾಸನಸಭೆಗಳು ಈಗ ಸಮಾಜವಿರೋಧಿ ಶಕ್ತಿಗಳು, ಕ್ರಿಮಿನಲ್ ಆರೋಪಿತರು, ರಿಯಲ್ ಎಸ್ಟೇಟ್ ಮಾಫಿಯಾಗಳು, ಮೈನಿಂಗ್ ಖದೀಮರು, ಹನಿ ಟ್ರ್ಯಾಪ್‌ಗಳ ಪ್ರವೇಶವಾಗಿದೆ. ಹೀಗಾಗಿ ಭಾರತೀಯ ಜನತಾಂತ್ರಿಕ ವ್ಯವಸ್ಥೆ ತೀವ್ರ ಬಿಕ್ಕಟ್ಟಿನ ಸುಳಿಗೆ ಸಿಲುಕಿದೆ.

ಇದೆಲ್ಲದರ ನಡುವೆ 300 ವರ್ಷಗಳ ಹಿಂದಿನ ಔರಂಗಜೇಬ್‌ನ ಸಮಾಧಿಯನ್ನು ಅಗೆಯುವ ಕೂಗೊಂದು ಕೇಳಿ ಬರುತ್ತಿದೆ. ಇನ್ನೊಂದೆಡೆ ತೊಂಭತ್ತು ಸಾವಿರ ಸರಕಾರಿ ಶಾಲೆಗಳು ಮುಚ್ಚಿ ಹೋಗಿವೆ. ನಮ್ಮ ವಿಧಾನ ಸಭೆಯಲ್ಲಿ ಹನಿಟ್ರ್ಯಾಪ್ ಕೋಲಾಹಲ ನಡೆದಿದೆ.

ಸ್ವಾತಂತ್ರ್ಯ ಹೋರಾಟಗಾರರ ಮನೆತನದ ವಾತಾವರಣದಲ್ಲಿ ಜನಿಸಿ, ಬೆಳೆದ ನನಗೆ ಚಿಕ್ಕ ವಯಸ್ಸಿನಲ್ಲೇ ರಾಜಕೀಯ ಅರಿವು ಉಂಟಾಯಿತು. ಕೊಂಚ ತಿಳುವಳಿಕೆ ಬಂದಾಗಿನಿಂದ ಅಂದರೆ ಎಪ್ಪತ್ತರ ದಶಕದಿಂದ ಸದನದ ಕಲಾಪಗಳನ್ನು ಪತ್ರಿಕೆಗಳ ಮೂಲಕ, ನಂತರ ಬೆಂಗಳೂರಿಗೆ ಹೋದಾಗ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು, ತದನಂತರ ಪತ್ರಿಕಾ ವೃತ್ತಿಯನ್ನು ಆಯ್ಕೆ ಮಾಡಿಕೊಂಡ ನಂತರ ವರದಿಗಾರನಾಗಿ ಸದನದ ಒಳಗೆ ಕುಳಿತು ಹತ್ತಿರದಿಂದ ಗಮನಿಸುತ್ತ ಬಂದಿರುವೆ. ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ, ನಂತರ ಗುಂಡೂರಾವ್, ರಾಮಕೃಷ್ಣ ಹೆಗಡೆ, ಬಂಗಾರಪ್ಪ, ಧರಂಸಿಂಗ್, ವೀರೇಂದ್ರ ಪಾಟೀಲ್, ಜೆ.ಎಚ್.ಪಟೇಲ್, ಎಸ್.ಆರ್.ಬೊಮ್ಮಾಯಿ, ಸಿದ್ದರಾಮಯ್ಯ, ಕುಮಾರಸ್ವಾಮಿ, ಯಡಿಯೂರಪ್ಪ ಮೊದಲಾದವರು ಮುಖ್ಯಮಂತ್ರಿಗಳಾಗಿದ್ದಾಗ ಕೂಡ ಸದನದ ಕಲಾಪಗಳನ್ನು ಗಮನಿಸಿರುವೆ. ಆದರೆ ಅಂದಿನ ಸದನದ ಕಲಾಪಗಳಿಗೆ ಹಾಗೂ ಇಂದಿನ ಸದನದ ಕಲಹವನ್ನು ಹೋಲಿಕೆ ಮಾಡುವಂತಿಲ್ಲ.

ನಮ್ಮ ಸಾವಳಗಿಯ ಬಿ.ಡಿ.ಜತ್ತಿಯವರು ಮತ್ತು ನಿಜಲಿಂಗಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ಸಮಾಜವಾದಿ ಶಾಂತವೇರಿ ಗೋಪಾಲಗೌಡರ ವಾಗ್ದಾಳಿ ನೆನಪಾಗುತ್ತಿದೆ. ನಂತರ ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ ಎಚ್.ಡಿ.ದೇವೇಗೌಡರು ಪ್ರತಿಪಕ್ಷ ನಾಯಕರು. ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾಗಿದ್ದಾಗ ಬಂಗಾರಪ್ಪನವರು ಪ್ರತಿಪಕ್ಷ ನಾಯಕರು. ಆಗ ದೇವೇಗೌಡರ ಟೀಕೆಗಳಿಗೆ ದೇವರಾಜ ಅರಸು ಕೊಡುತ್ತಿದ್ದ ಉತ್ತರ, ರಾಮಕೃಷ್ಣ ಹೆಗಡೆಯವರು ಮತ್ತು ಬಂಗಾರಪ್ಪನವರ ನಡುವಿನ ವಾಗ್ವಾದ, ಯಡಿಯೂರಪ್ಪನವರ ರೋಷಾವೇಶವನ್ನು ವ್ಯಂಗ್ಯಶೈಲಿಯಲ್ಲಿ ಎದುರಿಸಿ ತೇಲಿಸಿಬಿಡುತ್ತಿದ್ದ ಜೆ.ಎಚ್.ಪಟೇಲರ ವಿನೋದ ಪ್ರವೃತ್ತಿ, ತಮ್ಮ ಅಧ್ಯಯನಶೀಲತೆ ಮತ್ತು ಬೌದ್ಧಿಕ ಸಾಮರ್ಥ್ಯದಿಂದ ಸದನದ ಕಲಾಪದ ಘನತೆಯನ್ನು ಹೆಚ್ಚಿಸುತ್ತಿದ್ದ ಕಮ್ಯುನಿಸ್ಟ್ ಸದಸ್ಯರಾದ ಬಿ.ವಿ.ಕಕ್ಕಿಲ್ಲಾಯರು, ಎಂ.ಎಸ್.ಕಷ್ಣನ್, ಸೂರ್ಯನಾರಾಯಣ ರಾವ್, ಪಿ.ರಾಮಚಂದ್ರ ರಾವ್, ವಿ.ಎನ್.ಪಾಟೀಲ, ಗಂಗಾಧರ ನಮೋಶಿ, ಕಾರ್ಮಿಕ ಚಳವಳಿಯಿಂದ ಬಂದು ಅನುಭವದಿಂದ ಎತ್ತರಕ್ಕೆ ಬೆಳೆದ ಪಂಪಾಪತಿ, ಶಾಣಪ್ಪ, ಆಗ ಸೋಷಲಿಸ್ಟ್ ಪಾರ್ಟಿಯಲ್ಲಿದ್ದ ಕೆ.ಎಚ್.ರಂಗನಾಥ್, ಕಾಗೋಡು ತಿಮ್ಮಪ್ಪ, ಕೋಣಂದೂರು ಲಿಂಗಪ್ಪ ಅವರನ್ನು ಮತ್ತೆ ಮತ್ತೆ ನೆನಪಿಗೆ ತರುತ್ತದೆ.

ಈಗ ಸ್ಪೀಕರ್ ಖಾದರ್ ಅವರನ್ನು ಅಜಾತ ಶತ್ರು ಎಂದು ವರ್ಣಿಸುವ ಬಿಜೆಪಿ ಶಾಸಕರೇ ಖಾದರ್ ಅವರದು ತುಳು, ಬ್ಯಾರಿ ಭಾಷೆಗಳ ಮಿಶ್ರಿತ ಕನ್ನಡವೆಂದು ಲೇವಡಿ ಮಾಡುತ್ತಾರೆ. ಹಿಂದೆ ಸದನದಲ್ಲಿ ಕಾಂಗ್ರೆಸ್ ಸದಸ್ಯರಾಗಿದ್ದ ಕವಿ ಬಿ.ಎಂ.ಇದಿನಬ್ಬ, ಉಮರಬ್ಬ ಹುಬ್ಬಳ್ಳಿಯ ಪ್ರೊ.ಐ.ಜಿ.ಸನದಿಯವರು ಅಸ್ಖಲಿತ ಕನ್ನಡ ಮಾತುಗಳುಕೂಡ ಎಲ್ಲರಿಗೂ ಇಷ್ಟ. ಸದನದ ಕಲಾಪಗಳಲ್ಲಿ ಪಾಲ್ಗೊಂಡು ಸದನದಲ್ಲೇ ಕುಳಿತು ಪದ್ಯಗಳನ್ನು ರಚಿಸಿ ಸದನದ ಚರ್ಚೆಯ ಮಧ್ಯೆ ಓದುತ್ತಿದ್ದ ಇದಿನಬ್ಬರು ಅಜಾತ ಶತ್ರು ಎಂದು ಹೆಸರಾಗಿದ್ದರು. ಆಗ ಸದನದ ಕಲಾಪ ವರದಿ ಮಾಡಲು ಹೋದರೆ ಸಂಸದೀಯ ಪದ್ಧತಿಯ ವಿಧಿ ವಿಧಾನಗಳು ಸಹಜವಾಗಿ ಗೊತ್ತಾಗುತ್ತಿದ್ದವು. ಬಿ.ಬಸವಲಿಂಗಪ್ಪನವರ ಖಡಕ್ ಮಾತುಗಳು ಯಾರ ಬಗೆಗೂ ದ್ವೇಷದಿಂದ ಕೂಡಿರುತ್ತಿರಲಿಲ್ಲ.

ಬಿಜೆಪಿಯದು ಇನ್ನೊಂದು ಆಂತರಿಕ ಸಮಸ್ಯೆ. ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕದಲ್ಲಿ ಹದಿನೈದು ದಿನ ಝಂಡಾ ಊರಿ ಪ್ರತೀ ತಾಲೂಕು, ಹೂಬಳಿಗಳಿಗೆ ಹೋದರೂ ಕೂಡ ಅವರ ಪಕ್ಷ ಹೆಚ್ಚು ಸ್ಥಾನಗಳನ್ನು ಗೆದ್ದು ಮತ್ತೆ ಅಧಿಕಾರಕ್ಕೆ ಬರಲಿಲ್ಲ. ಜೆಡಿಎಸ್ ಬೆಂಬಲ ಪಡೆದು ಸರಕಾರ ರಚಿಸಲು ಅಗತ್ಯವಿರುವಷ್ಟು ಸ್ಥಾನಗಳನ್ನೂ ಗೆಲ್ಲಲು ಆಗಲಿಲ್ಲ. ಜನತೆ ನೀಡಿದ ಈ ತೀರ್ಪನ್ನು ಗೌರವಿಸುವ ಜನತಾಂತ್ರಿಕ ಸಭ್ಯತೆಯನ್ನು ತೋರಿಸದ ಬಿಜೆಪಿ ನಾಯಕರು ಫಲಿತಾಂಶ ಬಂದ ಮರುದಿನದಿಂದಲೇ ಗ್ಯಾರಂಟಿ ಯೋಜನೆ ವಿರುದ್ಧ ಬೀದಿಗಳಿದು ಪ್ರತಿಭಟಿಸಲು ಹೋಗಿ ಅಪಹಾಸ್ಯಕ್ಕೀಡಾದರು. ಬಹಮತ ಪಡೆದು ಸರಕಾರ ರಚನೆ ಮಾಡಿದ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ಎಂದು ಮೇಲ್ನೋಟಕ್ಕೆ ಅನಿಸಿದರೂ ತನ್ನ ಆಂತರಿಕ ಒಡಕನ್ನು ಮುಚ್ಚಿಕೊಳ್ಳಲು ಬಿಜೆಪಿಗೆ ಇಂಥ ಬೀದಿ ಪ್ರಹಸನ ಅನಿವಾರ್ಯವಾಗಿತ್ತು. ವಿಧಾನ ಮಂಡಲ ಅಧಿವೇಶನ ಆರಂಭವಾಗಿ ಒಂದು ವಾರದ ನಂತರವೂ ವಿಧಾನಸಭೆಯಲ್ಲಿ ಬಿಜೆಪಿ ಪಕ್ಷದ ನಾಯಕ ಯಾರು? ಪ್ರತಿಪಕ್ಷ ನಾಯಕ ಯಾರು? ಎಂಬುದನ್ನು ತೀರ್ಮಾನಿಸಲು ಆಗಲೇ ಇಲ್ಲ ಪಕ್ಷದೊಳಗಿನ ಗುಂಪುಗಾರಿಕೆ, ಯಡಿಯೂರಪ್ಪ ಮತ್ತು ಸಂತೋಷ್ ಗುಂಪಿನ ನಡುವಿನ ಕಿತ್ತಾಟದಿಂದಾಗಿ ಪ್ರತಿಪಕ್ಷ ನಾಯಕನ ಆಯ್ಕೆ ಸಾಧ್ಯವಾಗಿರಲಿಲ್ಲ.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕರ್ನಾಟಕದಲ್ಲಿ ಮಹಾರಾಷ್ಟ್ರದಂತೆ ಇನ್ನೊಬ್ಬ ಅಜಿತ್ ಪವಾರ್ ಹುಟ್ಟಿಕೊಳ್ಳಬಹುದೆಂದು ಆಸೆಗಣ್ಣುಗಳಿಂದ ಕಾಯುತ್ತಿದ್ದಾರೆ. ಅಂದರೆ ಜನತೆ ಏನೇ ಫಲಿತಾಂಶ ನೀಡಲಿ ಅಧಿಕಾರದಲ್ಲಿರುವ ಪಕ್ಷದಲ್ಲಿ ಒಡಕುಂಟಾಗಿ ಮತ್ತೆ ಅಸ್ಥಿರ ಪರಿಸ್ಥಿತಿ ನಿರ್ಮಾಣವಾಗಲಿ ಎಂದು ಅವರು ಬಯಸುತ್ತಿದ್ದಾರೆ. ಇದು ಕರ್ನಾಟಕ ಮಾತ್ರವಲ್ಲ ಭಾರತದ ರಾಜಕಾರಣದ ಇಂದಿನ ದುರಂತ ಸ್ಥಿತಿ. ವಾಸ್ತವವಾಗಿ ಆಡಳಿತ ಪಕ್ಷದವರಷ್ಟೇ ಪ್ರಾಮುಖ್ಯತೆ ಪ್ರತಿಪಕ್ಷ ಸದಸ್ಯರಿಗೂ ಇದೆ. ಸರಕಾರದ ಲೋಪ ದೋಷಗಳನ್ನು ಟೀಕಿಸುವ ಅವಕಾಶ ದೊರಕಿದೆ. ಇದನ್ನು ಸದುಪಯೋಗ ಮಾಡಿಕೊಳ್ಳಬೇಕಾಗಿದೆ.

ಇತ್ತೀಚಿನ ಸದನದ ಕಲಾಪಗಳನ್ನು ಗಮನಿಸಿದಾಗೆಲ್ಲ ಹಳೆಯದೆಲ್ಲ ನೆನಪಿಗೆ ಬರುತ್ತದೆ. ಆಗ ಚುನಾವಣೆಯಲ್ಲಿ ಸೋತವರು ಸೋಲನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸುತ್ತಿದ್ದರು. ಆದರೆ ಕರ್ನಾಟಕದ ವಿಧಾನಸಭಾ ಚುನಾವಣಾ ಫಲಿತಾಂಶ ತಮ್ಮ ನಿರೀಕ್ಷೆಯಂತೆ ಬರಲಿಲ್ಲ ಎಂದು ಅಶೋಕ್ ಮುಂತಾದ ಬಿಜೆಪಿ ಶಾಸಕರು ಅತ್ಯಂತ ಅಸಹನೆಯಿಂದ ವರ್ತಿಸಿದರು. ಜನಾದೇಶವನ್ನು ಒಪ್ಪಲು ತಯಾರಿಲ್ಲದ ಇವರು ಫಲಿತಾಂಶ ಬರುತ್ತಿರುವಾಗಲೇ ಪ್ಲಾನ್ ಎಬಿಸಿಡಿ ಎಂದೆಲ್ಲ ಮಾತಾಡತೊಡಗಿದರು. ಕಾಂಗ್ರೆಸ್ ಇಷ್ಟು ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಇವರು ನಿರೀಕ್ಷಿಸಿರಲಿಲ್ಲ. ಬಿಜೆಪಿ ನಾಯಕರು ಮಾತ್ರವಲ್ಲ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಕೂಡ ಕಾಂಗ್ರೆಸ್ ಬರೀ ಎಂಭತ್ತು ಬರಬಹುದು, ಬಿಜೆಪಿ ತೊಂಭತ್ತು ಬಂದರೆ ಉಳಿದ ಸ್ಥಾನಗಳನ್ನು ತಮ್ಮ ಪಕ್ಷ ಗೆದ್ದರೆ ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಅವಕಾಶ ಸಿಗಬಹುದು ಎಂದು ನಿರೀಕ್ಷಿಸಿದ್ದರು. ಆದರೆ ಫಲಿತಾಂಶ ಉಲ್ಟಾ ಆದಾಗ ಸದನದಲ್ಲಿ ಕುಮಾರಸ್ವಾಮಿ ಅವರು ರೋಷಾವೇಶದಿಂದ ಮಾತಾಡಿದರು.

ಜಾಗತಿಕವಾಗಿ ಸಮಾಜವಾದಿ ಸೋವಿಯತ್ ವ್ಯವಸ್ಥೆ ಕುಸಿದ ನಂತರ ಜಾಗತೀಕರಣ, ಮಾರುಕಟ್ಟೆ ಆರ್ಥಿಕತೆಯ ಅಬ್ಬರದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ನಿಧಾನವಾಗಿ ಕಾರ್ಪೊರೇಟೀಕರಣಗೊಳ್ಳತೊಡಗಿತು. ಉದ್ಯಮಿಗಳು, ಸಕ್ಕರೆ ಕಾರ್ಖಾನೆಗಳ ಮಾಲಕರು, ರಿಯಲ್ ಎಸ್ಟೇಟ್ ದಂಧೆಕೋರರು ಸದನಕ್ಕೆ ಚುನಾಯಿತರಾಗಿ ಬರತೊಡಗಿದರು. ಜನತೆಯ ಹಿತಾಸಕ್ತಿಗಳ ಬಗ್ಗೆ ಮಾತಾಡಬೇಕಾದ ಸದನದಲ್ಲಿ ಉದ್ಯಮಪತಿಗಳು ತಮ್ಮ ಹಿತಾಸಕ್ತಿಗಳನ್ನು ಕಾಪಾಡಲು ಸದನವನ್ನು ಬಳಸಿಕೊಳ್ಳತೊಡಗಿದರು. ಹೀಗಾಗಿ ಸದನದ ಘನತೆ ಕುಸಿಯತೊಡಗಿತು. ಉದಾಹರಣೆಗೆ ಸಕ್ಕರೆ ಕಾರ್ಖಾನೆ ಮಾಲಕನೊಬ್ಬ ಶಾಸಕನಾಗಿ ಸದನಕ್ಕೆ ಬಂದರೆ, ಅಕಸ್ಮಾತ್ ಆತ ಮಂತ್ರಿಯಾದರೆ ಅವನಿಗೆ ತನ್ನ ಕಾರ್ಖಾನೆ ಹಿತಾಸಕ್ತಿ ಮುಖ್ಯವಾಗುತ್ತದೆ. ಕಬ್ಬು ಬೆಳೆಗಾರರ ಸಮಸ್ಯೆಗಳ ಬಗ್ಗೆ, ಅವರ ಬಾಕಿ ಪಾವತಿ ಬಗ್ಗೆ ಆತ ಮಾತಾಡುವುದಿಲ್ಲ.

ಈ ನಿರಾಶಾದಾಯಕ ವಾತಾವರಣದಲ್ಲೂ ಸ್ವಂತದ ಕಾರ್ಖಾನೆ, ಶಿಕ್ಷಣ ಸಂಸ್ಥೆಗಳಿಲ್ಲದ, ಸಮಾಜವಾದಿ ಚಳವಳಿಯಿಂದ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರಂಥವರಿಂದಾಗಿ ಶಾಸನ ಸಭೆಗಳು ಇಂದಿಗೂ ಜನ ಸದನಗಳಾಗಿ ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಿವೆ. ರಿಯಲ್ ಎಸ್ಟೇಟ್ ಮತ್ತು ಶಿಕ್ಷಣ ವ್ಯಾಪಾರಿಗಳ ನಡುವೆಯೂ ಕೃಷ್ಣ ಬೈರೇಗೌಡ, ಸತೀಶ್ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ ಮೊದಲಾದವರು ತಮ್ಮ ಅಧ್ಯಯನ ಪೂರ್ಣ ಮಾತುಗಳಿಂದ ಸದನದ ಚರ್ಚೆಯ ಗುಣಮಟ್ಟವನ್ನು ಹೆಚ್ಚಿಸಿದ್ದಾರೆ. ನಿರಾಶೆ ಬೇಡ ಮುಂದೆ ಇಂಥ ಕೆಲವರು ಸದನಕ್ಕೆ ಬರಬಹುದು. ಎಲ್ಲಕ್ಕಿಂತ ಮುಖ್ಯವಾಗಿ ರಾಜಕಾರಣಿಗಳ ಚುನಾವಣೆಯ ಸೋಲು ಮತ್ತು ಗೆಲುವುಗಳನ್ನು ಸಹಜವಾಗಿ ತೆಗೆದುಕೊಂಡು ಜನತೆಯ ತೀರ್ಪಿಗೆ ತಲೆಬಾಗಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಾದೇಶವನ್ನು ಹಗುರವಾಗಿ ಕಾಣುವ, ಪಕ್ಷಾಂತರ ಮಾಡಿಸಿ ಜನರ ತೀರ್ಪನ್ನು ಉಲ್ಟಾಪಲ್ಟಾ ಮಾಡುವ ಮಾತುಗಳನ್ನು ಯಾರೂ ಆಡಬಾರದು. ತಾಳ್ಮೆಯಿಂದ ಕಾಯ್ದರೆ ಮತ್ತೆ ಅವಕಾಶ ಸಿಗಬಹುದು. ಇದೇ ಪ್ರಜಾಪ್ರಭುತ್ವದ ಪವಾಡ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾತ್ರ ಬಂಗಾರಪ್ಪ, ಸಿದ್ದರಾಮಯ್ಯನವರಂಥವರು ಉನ್ನತ ಅಧಿಕಾರ ಸ್ಥಾನಕ್ಕೆ ಬರಲು ಸಾಧ್ಯವಾಗುತ್ತದೆ. ಇದೆಲ್ಲ ನಿಜ. ಆದರೆ ಈ ನೆಲ, ಜಲಕ್ಕೆ ಸಂಬಂಧಿಸಿದ ಜ್ವಲಂತ ವಿಷಯಗಳ ಬಗ್ಗೆ ಚರ್ಚೆ ನಡೆಯಬೇಕಾದ ಸದನದಲ್ಲಿ ಹನಿಟ್ರ್ಯಾಪ್ ಕೋಲಾಹಲ ನಡೆಯುತ್ತಿರುವುದು ಪ್ರಜಾಪ್ರಭುತ್ವದ ದುರಂತ. ಈ ಹದಗೆಟ್ಟ ವ್ಯವಸ್ಥೆಯನ್ನು ಸರಿ ಮಾಡಿ ಮತ್ತೆ ಹಳಿಗೆ ತರುವುದು ಯಾವಾಗ?

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಸನತ್ ಕುಮಾರ ಬೆಳಗಲಿ

contributor

Similar News