ಕಾಂಗ್ರೆಸ್‌ನ ಮುಂದಿನ ದಾರಿ ಯಾವುದು ?

Update: 2025-02-24 11:51 IST
ಕಾಂಗ್ರೆಸ್‌ನ ಮುಂದಿನ ದಾರಿ ಯಾವುದು ?
  • whatsapp icon

ಶತಮಾನದ ಇತಿಹಾಸವುಳ್ಳ ಮತ್ತು ಸ್ವಾತಂತ್ರ್ಯ ಆಂದೋಲನದ ನಾಯಕತ್ವ ವಹಿಸಿದ್ದ ಕಾಂಗ್ರೆಸ್ ಪಕ್ಷದ ಇಂದಿನ ಸ್ಥಿತಿಗೆ ಯಾರು ಕಾರಣ? ಈ ಪ್ರಶ್ನೆಗೆ ಉತ್ತರ ಎಂಬಂತೆ ಬಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಮಾತೊಂದು ಗಮನಾರ್ಹವಾಗಿದೆ. ‘ಚುನಾವಣೆಗಳಲ್ಲಿ ಕಾಂಗ್ರೆಸ್ ಸೋಲಿಗೆ ಅವಕಾಶವಾದಿ ನಾಯಕರೇ ಕಾರಣ. ಪಕ್ಷದ ಸೈದ್ಧಾಂತಿಕ ನಿಲುವಿನ ಬಗ್ಗೆ ಅರಿವಿಲ್ಲದ ಬಹುತೇಕ ಕಾಂಗ್ರೆಸ್ ನಾಯಕರು ಪಕ್ಷದ ಕಷ್ಟಕಾಲದಲ್ಲಿ ಪಕ್ಷ ಬಿಟ್ಟು ಹೋಗುತ್ತಾರೆ’ ಎಂದು ಖರ್ಗೆಯವರು ಹೇಳಿದರು. ಕಳೆದ ವಾರ ದಿಲ್ಲಿಯ ಇಂದಿರಾ ಭವನದಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿಗಳು ಹಾಗೂ ರಾಜ್ಯಗಳ ಉಸ್ತುವಾರಿಗಳ ಸಭೆಯನ್ನು ಉದ್ದೇಶಿಸಿ ಮಾತಾಡಿದ ಖರ್ಗೆಯವರು, ‘ಇನ್ನು ಮುಂದೆ ನಡೆಯುವ ಚುನಾವಣೆಗಳಲ್ಲಿ ಪಕ್ಷ ಪರಾಭವಗೊಂಡರೆ ಪಕ್ಷದ ಉನ್ನತ ನಾಯಕರನ್ನು ಹೊಣೆ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಕಾಂಗ್ರೆಸ್‌ಗೆ ಈಗ ಎಂಥ ಪರಿಸ್ಥಿತಿ ಎದುರಾಗಿದೆ ಯೆಂದರೆ, ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದಿರುವವರಿಂದ, ಬ್ರಿಟಿಷರ ಏಜೆಂಟರು ಎಂಬ ಆರೋಪಕ್ಕೆ ಒಳಗಾದವರಿಂದ ದೇಶಪ್ರೇಮದ ಪಾಠ, ಪ್ರವಚನಗಳನ್ನು ಕೇಳಬೇಕಾಗಿ ಬಂದಿದೆ. ಅಷ್ಟೇ ಅಲ್ಲ, ನಿನ್ನೆ ಮೊನ್ನೆ ಹುಟ್ಟಿದವರು 70 ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ಲೇವಡಿ ಮಾಡುತ್ತಿದ್ದಾರೆ. 1947ರ ನಂತರ ನಡೆದ ಮಹಾ ಚುನಾವಣೆಯಲ್ಲಿ ಪಡೆದ ಗೆಲುವನ್ನು ಮತ್ತು ಸ್ಫೂರ್ತಿಯನ್ನು ಹೊಸ ಪೀಳಿಗೆಗೆ ವರ್ಗಾಯಿಸುವಲ್ಲಿ ಹಾಗೂ ತಿಳಿಸಿ ಹೇಳುವಲ್ಲಿ ಕಾಂಗ್ರೆಸ್ ಯಶಸ್ವಿಯಾಗುವುದು ಹೋಗಲಿ, ಸೌಹಾರ್ದ ಭಾರತದ ತನ್ನ ಗುರಿಯನ್ನು ಸಾಧಿಸಲಾಗಲಿಲ್ಲ. ಈ ಲೋಪದಿಂದಾಗಿ ಬಹುತ್ವ ಭಾರತ ಬೆಲೆ ತೆರಬೇಕಾಗಿ ಬಂದಿದೆ.

ಕಾಂಗ್ರೆಸ್ ಪಕ್ಷಕ್ಕೆ ಅದರದೇ ಆದ ಸಿದ್ಧಾಂತ ಮತ್ತು ಇತಿಹಾಸಗಳಿವೆ.ಅದು ಪಕ್ಷದ ಕಾರ್ಯಕರ್ತರಿಗೆ ಹಾಗೂ ನಾಯಕರಿಗೆ ಗೊತ್ತಿಲ್ಲ. ಆದರೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಹರಿಪ್ರಸಾದ್ ಹಾಗೂ ಪಕ್ಷದ ಕೆಲವು ನಾಯಕರು, ಕಾರ್ಯಕರ್ತರನ್ನು ಹೊರತು ಪಡಿಸಿದರೆ ಉಳಿದ ಬಹುತೇಕ ನಾಯಕರಿಗೆ ಯಾವ ಸಿದ್ಧಾಂತದ ಅರಿವೂ ಇಲ್ಲ.ಅಂತಲೇ ಚುನಾವಣೆಗಳಲ್ಲಿ ಸೋತರೆ ಪಕ್ಷವನ್ನೇ ತೊರೆದು ಗೋಡೆಯನ್ನು ದಾಟಿ ಆ ಕಡೆ ಹೋಗುವವರಿದ್ದಾರೆ.

ಸಂಘ ಪರಿವಾರಕ್ಕೆ ಅದರದೇ ಆದ ಹಿಂದೂ ರಾಷ್ಟ್ರದ ಅಜೆಂಡಾ ಇದೆ. ಆ ಗುರಿ ಸಾಧಿಸುವವರೆಗೆ ದೇಶ ಈ ಒತ್ತಡದಲ್ಲೇ ಇರುವಂತೆ ಅವರು ನೋಡಿಕೊಳ್ಳುತ್ತಾರೆ. ಅವರನ್ನು ದೂರಿ ಪ್ರಯೋಜನವಿಲ್ಲ. ಅದರೆ ಇದನ್ನು ವಿರೋಧಿಸಿ ತಡೆಯಬೇಕಾಗಿದ್ದ ದೇಶದ ಮತ ನಿರಪೇಕ್ಷ ಶಕ್ತಿಗಳು, ಪಕ್ಷಗಳು ಎಲ್ಲಿವೆ?

ಭಾರತದ ಅತ್ಯಂತ ದೊಡ್ಡ ಸೆಕ್ಯುಲರ್ ಪಾರ್ಟಿಯಾದ ಕಾಂಗ್ರೆಸ್ ಏನು ಮಾಡುತ್ತಿದೆ? ಎಂದು ಅನೇಕರು ಕೇಳುತ್ತಾರೆ. ಅದು ಏನು ಮಾಡುತ್ತಿದೆ ಎಂಬುದು ಅಯೋಧ್ಯೆಯ ಭೂಮಿ ಪೂಜೆ ನಡೆದಾಗ ಎಲ್ಲರಿಗೂ ಗೊತ್ತಾಯಿತು. ಪ್ರಿಯಾಂಕಾ ಗಾಂಧಿಯವರೇನೋ ರಾಮ ಎಲ್ಲರಿಗೆ ಸೇರಿದವ ಎಂದು ಟ್ವೀಟ್ ಮಾಡಿ ಸುಮ್ಮನಾದರು.ಆದರೆ ದೇಶದ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಇರುವ ಕಾಂಗ್ರೆಸ್‌ನ ಹಿರಿ ನಾಯಕರು, ಮರಿ ನಾಯಕರು ಆ ದಿನ ಹೆಗಲ ಮೇಲೆ ಕೇಸರಿ ಶಾಲು ಹಾಕಿಕೊಂಡು ಸಂಭ್ರಮಿಸಿದರು. ಹೀಗೇಕೆ ಮಾಡ್ತೀರಿ ? ಎಂದು ಕೇಳಿದರೆ ರಾಮ ಮಂದಿರ ನಿರ್ಮಾಣಕ್ಕೆ ನಮ್ಮ ವಿರೋಧವಿಲ್ಲ ಎಂದು ಹೇಳುತ್ತಾರೆ. ಅನೇಕ ಕಡೆ ವಿಶ್ವ ಹಿಂದೂ ಪರಿಷತ್ತು ಸೇರಿದಂತೆ ಸಂಘಪರಿವಾರದ ಅಂಗ ಸಂಘಟನೆಗಳಿಗೆ ಕಾಂಗ್ರೆಸ್ ಮುಖಂಡರೇ ಪದಾಧಿಕಾರಿಗಳಾಗಿದ್ದಾರೆ.ಹಣಕಾಸಿನ ನೆರವನ್ನೂ ನೀಡುತ್ತಾರೆ. ತಮ್ಮ ಲಾಭಕ್ಕಾಗಿ ಕಾಂಗ್ರೆಸ್ ಸೇರಿದವರಿಗೆ ಯಾರನ್ನೂ ಎದುರು ಹಾಕಿಕೊಳ್ಳಲು ಇಷ್ಟವಿಲ್ಲ.ಆದರೆ ಮಲ್ಲಿಕಾರ್ಜುನ ಖರ್ಗೆಯವರು ಎಐಸಿಸಿ ಅಧ್ಯಕ್ಷರಾದ ನಂತರ ಹಾಗೂ ಸಿದ್ದರಾಮಯ್ಯನವರು ಕರ್ನಾಟಕದ ಮುಖ್ಯಮಂತ್ರಿಯಾದ ನಂತರ ಇಂಥದಕ್ಕೆ ಕೊಂಚ ಕಡಿವಾಣ ಹಾಕಲಾಗಿದೆ. ಕಾಂಗ್ರೆಸ್‌ನ ಒಳಗೂ ಕೋಮುವಾದಿ ಶಕ್ತಿಗಳನ್ನು ನೇರವಾಗಿ ವಿರೋಧಿಸುವ ಖರ್ಗೆ ಮತ್ತು ಸಿದ್ದರಾಮಯ್ಯನವರನ್ನು ಭಾಷಣಕ್ಕೆ ಕರೆಸಲು ಅನೇಕರಿಗೆ ಇಷ್ಟವಿರಲಿಲ್ಲ.ಕಳೆದ ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ಭಾಷಣಗಳಿಗೆ ಸಿದ್ದರಾಮಯ್ಯನವರು ಬರುವುದು ಬೇಡ ಎಂದು ಕಾಂಗ್ರೆಸ್ ಅಭ್ಯರ್ಥಿಗಳು ಪಕ್ಷದ ಉನ್ನತ ನಾಯಕತ್ವದ ಮೇಲೆ ಒತ್ತಡ ತಂದರಂತೆ. ಕಾರಣವೇನೆಂದರೆ ಸಿದ್ದರಾಮಯ್ಯನವರು ಸಂಘಪರಿವಾರದ ಕೋಮುವಾದಿ ಹುನ್ನಾರಗಳ ಬಗ್ಗೆ ನೇರವಾಗಿ ಮಾತಾಡುತ್ತಾರೆ.ಇದರಿಂದ ತಮಗೆ ಓಟು ಬರುವುದಿಲ್ಲ ’ ಎಂಬುದು ಇವರ ವಿರೋಧಕ್ಕೆ ಕಾರಣ.ಇದು ಕಾಂಗ್ರೆಸ್‌ನ ಇಂದಿನ ಸ್ಥಿತಿ.

ರಾಜೀವ್ ಗಾಂಧಿಯವರು ಪ್ರಧಾನಿಯಾಗಿದ್ದಾಗ ವಿವಾದಿತ ಕಟ್ಟಡದ ಬೀಗ ತೆಗೆಸಿದರು, ಕಾರಣ ಅದರ ಲಾಭ ನಮಗೆ ಸಿಗಬೇಕೆಂದು ನಾಚಿಕೆಯನ್ನು ತಲೆಗೆ ಸುತ್ತಿಕೊಂಡ ಕೆಲವು ಕಾಂಗ್ರೆಸ್ ನಾಯಕರು ಹೇಳುತ್ತಿದ್ದರಂತೆ.ಇಂಥ ಅವಕಾಶವಾದಿ ನೀತಿ ಕಾಂಗ್ರೆಸ್ ಮಾತ್ರವಲ್ಲ ಎಡಪಂಥೀಯ ಪಕ್ಷಗಳನ್ನು ಹೊರತು ಪಡಿಸಿ ಬಹುತೇಕ ಸೆಕ್ಯುಲರ್ ಎಂದು ಹೇಳಿಕೊಳ್ಳುವ ಪಕ್ಷಗಳು ಅನುಸರಿಸುತ್ತವೆ. ಆದರೆ ಕಾಂಗ್ರೆಸ್‌ನ ಕೆಳಹಂತದ ನಾಯಕರಿಂದ ಎಷ್ಟೇ ಲೋಪಗಳಾಗಿರಲಿ ಭಾರತದ ಬಹುತ್ವ ಮತ್ತು ಸಂವಿಧಾನದ ಸುರಕ್ಷತೆಯ ಮಹತ್ತರ ಹೊಣೆಗಾರಿಕೆ ಹಳ್ಳಿ, ಹಳ್ಳಿಗಳಲ್ಲಿ ನೆಲೆ ಹೊಂದಿರುವ ಕಾಂಗ್ರೆಸ್ ಮೇಲಿದೆ. ಜಾತ್ಯತೀತಗೆ ನೆಹರೂ, ಗಾಂಧಿ ಕುಟುಂಬಗಳ ತ್ಯಾಗವನ್ನು ಮರೆಯಲು ಆಗುವುದಿಲ್ಲ. ಆದರೆ ಕಾಂಗ್ರೆಸ್ ಪಕ್ಷ ಸರಿಯಾದ ತಾತ್ವಿಕ ತಿಳುವಳಿಕೆಯನ್ನು ನೀಡದಿರುವುದರಿಂದ ಇಂಥ ಗೊಂದಲಗಳಾಗುತ್ತವೆ. ಇಂಥ ಪರಿಸ್ಥಿತಿಯಲ್ಲಿ ಕೋಮುವಾದಿಗಳ ಅಪಪ್ರಚಾರವನ್ನು ಸೈದ್ಧಾಂತಿಕವಾಗಿ ಎದುರಿಸಬೇಕಾಗಿದೆ.ಇತ್ತೀಚೆಗೆ ದಿನೇಶ್ ಅಮಿನ್ ಮಟ್ಟು ಅವರು ಕಾಂಗ್ರೆಸ್ ಸಮಾವೇಶದಲ್ಲಿ ಹೇಳಿದಂತೆ ಕಾಂಗ್ರೆಸ್ ಕಾರ್ಯಕರ್ತರು ಹಿಂದೂ ರಾಷ್ಟ್ರದ ಸಿದ್ಧಾಂತಕ್ಕೆ ಎದುರಾಗಿ ಬಾಬಾಸಾಹೇಬರ ಸಂವಿಧಾನವೇ ನಮ್ಮ ಸಿದ್ಧಾಂತ ಎಂದು ಹೇಳಬೇಕಾಗಿದೆ. ಅಂಬೇಡ್ಕರ್ ಅವರ ಚುನಾವಣಾ ಸೋಲಿಗೆ ಕಾಂಗ್ರೆಸ್ ಕಾರಣ ಎಂಬ ನಾಝಿಗಳ ಸುಳ್ಳಿನ ಕಾರ್ಖಾನೆಯಲ್ಲಿ ತಯಾರಾದ ಸುಳ್ಳಿನ ವಿರುದ್ಧ ಉತ್ತರ ನೀಡಬೇಕು. ಆಗ ಚುನಾವಣೆಯಲ್ಲಿ ಪರಾಭವಗೊಂಡ ಅಂಬೇಡ್ಕರ್ ಅವರನ್ನು ಅಂದಿನ ಪ್ರಧಾನಿ ನೆಹರೂ ಅವರು ದಿಲ್ಲಿಗೆ ಕರೆ ತಂದು ಸಂವಿಧಾನ ರಚನೆಯ ಮಹತ್ತರ ಹೊಣೆಗಾರಿಕೆಯನ್ನು ನೀಡಿದರು ಎಂಬುದನ್ನು ಯಾವುದೇ ಮುಲಾಜಿಲ್ಲದೇ ಹೇಳಬೇಕು.ಕೆಲವು ಸಲ ಚುನಾವಣಾ ಗೆಲುವಿಗಾಗಿ ಕಾಂಗ್ರೆಸ್ ಹಿಂದುತ್ವದ ಬಗ್ಗೆ ಸೌಮ್ಯ ಧೋರಣೆಯನ್ನು ತಾಳಿರುವುದು ನಿಜ, ಮೃದು ಹಿಂದುತ್ವ ನೀತಿ ಕಾಂಗ್ರೆಸ್‌ಗೆ

ರಾಜಕೀಯ ವಾಗಿ ಎಂದೂ ಲಾಭದಾಯಕವಾಗಿಲ್ಲ. ತೊಂಭತ್ತರ ದಶಕದ ಬಾಬರಿ ಮಸೀದಿ ಕೆಡವಿದ ನಂತರದ ವರ್ಷಗಳಲ್ಲಿ ಇಂಥ ಸಂದರ್ಭ ಸಾಧಕ ನಿಲುವು ತಾಳಿದಾಗೆಲ್ಲ ಕಾಂಗ್ರೆಸ್ ತನ್ನ ನೆಲೆ ಕಳೆದುಕೊಂಡಿದೆ. ಮೃದು ಹಿಂದುತ್ವ ನೀತಿಯ ಸಂಪೂರ್ಣ ಲಾಭವನ್ನು ಬಿಜೆಪಿ ಪಡೆದುಕೊಳ್ಳುತ್ತ ಬಂದಿದೆ. ಆದರೂ ಕಾಂಗ್ರೆಸ್ ನಾಯಕರು ದಾರಿ ತಪ್ಪುತ್ತಲೇ ಇದ್ದಾರೆ. ದಾರಿ ತಪ್ಪಿಸುವವರ ಬಲೆಗೆ ಬೀಳುತ್ತಲೇ ಇದ್ದಾರೆ.ಇದು ಖರ್ಗೆಯವರಿಗೂ ಗೊತ್ತಿದೆ.

ಕಳೆದ ಹತ್ತು ವರ್ಷಗಳ ಮೋದಿ ನೇತೃತ್ವದ ನಾಗಪುರ ನಿಯಂತ್ರಿತ ಬಿಜೆಪಿ ಸರಕಾರದ ದುರಾಡಳಿತದಿಂದ ದೇಶ ದಿವಾಳಿಯ ಅಂಚಿಗೆ ಬಂದು ನಿಂತಿದೆ. ಕೊರೋನ ಬರುವ ಮೊದಲೇ ಕುಸಿಯುತ್ತಲೇ ಇದ್ದ ದೇಶದ ಆರ್ಥಿಕತೆ ಕೊರೋನ ನಂತರ ಇನ್ನೂ ಹದಗೆಟ್ಟಿದೆ.ಬೀದಿಗೆ ಬಿದ್ದ ವಲಸೆ ಕಾರ್ಮಿಕರು ಇನ್ನೂ ನೆಲೆ ಕಂಡುಕೊಂಡಿಲ್ಲ, ಅನೇಕ ಸಣ್ಣಪುಟ್ಟ ಕೈಗಾರಿಕೆಗಳು ಮುಚ್ಚಿ ಸಾವಿರಾರು ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ.

ಅನೇಕ ದೊಡ್ಡ ಉದ್ದಿಮೆಗಳಲ್ಲಿ ಕೂಡ ಆರ್ಥಿಕ ಬಿಕ್ಕಟ್ಟಿನ ನೆಪ ಮುಂದೆ ಮಾಡಿ ನೌಕರರನ್ನು ಮನೆಗೆ ಕಳಿಸುತ್ತಿದ್ದಾರೆ. ಈ ನಡುವೆ ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ತಂದು ಅವರ ಕೆಲಸದ ಅವಧಿಯನ್ನು ಎಂಟು ತಾಸುಗಳಿಂದ ಹತ್ತು ತಾಸುಗಳಿಗೆ ಹೆಚ್ಚಿಸಲಾಗಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲೂ ಕೂಡ ನೌಕರರನ್ನು ಮನೆಗೆ ಕಳಿಸಲಾಗುತ್ತಿದೆ. ವಲಸೆ ಕಾರ್ಮಿಕರು ಹಳ್ಳಿಗಳಿಗೆ ಬಂದ ಪರಿಣಾಮವಾಗಿ ಗ್ರಾಮೀಣ ಆರ್ಥಿಕತೆಯ ಮೇಲೆ ತೀವ್ರವಾದ ಒತ್ತಡ ಬೀಳುತ್ತಿದೆ. ಬ್ಯಾಂಕಿಂಗ್ ವಲಯದಲ್ಲಿ ಅರಾಜಕತೆ ಉಂಟಾಗಿದೆ, ಕೊರೋನ ಸಂದರ್ಭವನ್ನು ಬಳಸಿಕೊಂಡು ದೇಶದ ಅಮೂಲ್ಯವಾದ ಸಂಪತ್ತನ್ನು ಖಾಸಗಿ ರಂಗದ ರಣಹದ್ದುಗಳಿಗೆ ಮಾರಾಟ ಮಾಡಲಾಯಿತು,ಈಗಲೂ ಮಾರಾಟ ಮಾಡಲಾಗುತ್ತಿದೆ.

ಇಂಥ ಸನ್ನಿವೇಶದಲ್ಲಿ ಕಾಂಗ್ರೆಸ್ ನಂಥ ಪ್ರಮುಖ ವಿರೋಧ ಪಕ್ಷ ಬೀದಿಗೆ ಬಂದು ನೊಂದವರಿಗೆ ಆಸರೆಯಾಗಿ ನಿಂತು ಬಿಜೆಪಿ ಸರಕಾರದ ದಿವಾಳಿಕೋರ ನೀತಿಯನ್ನು ಬಯಲಿಗೆಳೆಯಬೇಕಾಗಿದೆ.ಆದರೆ ಅದು ತನ್ನ ಸಿದ್ಧಾಂತ ಮತ್ತು ಕಾರ್ಯಕ್ರಮಗಳನ್ನು ಗಾಳಿಗೆ ತೂರಿ ಸಂಘಪರಿವಾರದ ಅಜೆಂಡಾದ ಜಾರಿಗೆ ಪರೋಕ್ಷವಾಗಿ ಸಹಕರಿಸುತ್ತಿದೆಯೇ ಎಂಬ ಸಂದೇಹ ಬರುತ್ತಿದೆ. ಇದು ವಿಷಾದದ ಸಂಗತಿಯಾಗಿದೆ.

ಬಿಜೆಪಿಗೆ ಒಂದು ಸಿದ್ಧಾಂತವಿದೆ. ಅದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ರಾಜಕೀಯ ವೇದಿಕೆ ಚುನಾವಣಾ ರಾಜಕಾರಣಕ್ಕಾಗಿ ಏನೇ ತಂತ್ರ ಬಳಸಿದರೂ ಅಂತಿಮವಾಗಿ ಅದು ಬದ್ಧವಾಗಿರುವುದು ಮಾತೃ ಸಂಘಟನೆಯ ಹಿಂದೂ ರಾಷ್ಟ್ರ ನಿರ್ಮಾಣದ ಸಿದ್ಧಾಂತಕ್ಕೆ. ಬಾಬಾಸಾಹೇಬರ ಸಂವಿಧಾನವನ್ನು ಸಮಾಧಿ ಮಾಡಿ ಚುನಾವಣೆ ಮೂಲಕ ಅಧಿಕಾರಕ್ಕೆ ಬಂದು ಕ್ರಮೇಣ ಸಂವಿಧಾನದ ಚಟ್ಟ ಕಟ್ಟಿ ಮನುವಾದಿ ಹಿಂದೂ ರಾಷ್ಟ್ರ ನಿರ್ಮಿಸುವುದು ಅದರ ಹಿಡನ್ ಅಜೆಂಡಾ.

ದೇಶಕ್ಕೆ ಸ್ವಾತಂತ್ರ್ಯ ಬರುವ ಸಂದರ್ಭದಲ್ಲೇ ಇಂಥದೊಂದು ವಿಷಯ ಪ್ರಸ್ತಾಪಕ್ಕೆ ಬಂದಿತ್ತು. ಆದರೆ ಮಹಾತ್ಮಾ ಗಾಂಧೀಜಿಯವರ ಮಾರ್ಗದರ್ಶನದಲ್ಲಿದ್ದ ಹಾಗೂ ನೆಹರೂ, ಪಟೇಲ್ ನೇತೃತ್ವದಲ್ಲಿ ಇದ್ದ ರಾಷ್ಟ್ರೀಯ ಕಾಂಗ್ರೆಸ್ ಹಿಂದೂ ರಾಷ್ಟ್ರ ಸಿದ್ಧಾಂತವನ್ನು ವಿರೋಧಿಸಿ ಜಾತ್ಯತೀತ (ಮತ ನಿರಪೇಕ್ಷ) ಭಾರತಕ್ಕೆ ಒಲವು ತೋರಿಸಿತು.ಸ್ವಾತಂತ್ರ್ಯ ಹೋರಾಟದಲ್ಲಿ ಬೇರೆ ಬೇರೆ ರೂಪದಲ್ಲಿ ಪಾಲ್ಗೊಂಡಿದ್ದ ನೇತಾಜಿ ಸುಭಾಷ್ ಭೋಸ್ ಮತ್ತು ಶಹೀದ್ ಭಗತ್ ಸಿಂಗ್ ಅಂಥವರು ಕೂಡ ಸ್ವತಂತ್ರ ಭಾರತ ಸೆಕ್ಯುಲರ್ ಭಾರತವಾಗಬೇಕೆಂದು ಬಯಸಿದವರು. ಹೀಗಾಗಿ ಸೆಕ್ಯುಲರ್ ಭಾರತಕ್ಕೆ ಪೂರಕವಾದ ಸಂವಿಧಾನವನ್ನು ರಚಿಸುವ ಹೊಣೆಯನ್ನು ಬಾಬಾ ಸಾಹೇಬರು ಹೊತ್ತು ಕೊಂಡರು.ಅದೇ ಸಂವಿಧಾನ ಈಗಲೂ ದೇಶವನ್ನು ಮುನ್ನಡೆಸುತ್ತಿದೆ.

ಹೀಗೆ ಮತನಿರಪೇಕ್ಷತೆಯ ತನ್ನದೇ ಆದ ಸಿದ್ಧಾಂತವನ್ನು ಹೊಂದಿರುವ ಕಾಂಗ್ರೆಸ್‌ನ ಪರಂಪರೆ ಇಂದಿನ ಹಸಿ ಬಿಸಿ ಅವಕಾಶವಾದಿ ಕಾಂಗ್ರೆಸ್ ನಾಯಕರಿಗೆ ಗೊತ್ತಿಲ್ಲ, ಹೀಗಾಗಿ ಅಯೋಧ್ಯೆಯ ಭೂಮಿ ಪೂಜೆಯ ದಿನ ಕೇಸರಿ ಶಾಲು ಹಾಕಿಕೊಂಡು ಕುಣಿದಾಡಿದರು. ಈ ಬಗ್ಗೆ ಮಣಿ ಶಂಕರ್ ಅಯ್ಯರ್ ಸೇರಿದಂತೆ ಕಾಂಗ್ರೆಸ್‌ನ ಹಿರಿಯ ನಾಯಕರು ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.

ದೇಶದಲ್ಲಿ ಹೊಸ ಪೀಳಿಗೆಗೆ ಚಾರಿತ್ರಿಕ ಸಂಗತಿಗಳ ಬಗ್ಗೆ ಸರಿಯಾದ ತಿಳುವಳಿಕೆಯಿಲ್ಲ. ಸಂಘಪರಿವಾರ ವಾಟ್ಸ್ ಆ್ಯಪ್ ಯುನಿವರ್ಸಿಟಿ ಗಳ ಮೂಲಕ ಸುಳ್ಳು ಸಂಗತಿಗಳನ್ನೇ ಸತ್ಯವೆಂದು ಬಿಂಬಿಸುತ್ತಿದೆ.ಅನೇಕ ಶಾಲಾ ಶಿಕ್ಷಕರು ಕೂಡ ಮಕ್ಕಳ ತಲೆಯಲ್ಲಿ ಒಂದು ಸಮುದಾಯದ ಬಗ್ಗೆ, ಗಾಂಧಿ, ನೆಹರೂ ಮುಂತಾದ ಸ್ವಾತಂತ್ರ್ಯ ಹೋರಾಟದ ಅಗ್ರಣಿಗಳ ಬಗ್ಗೆ ವಿಷ ತುಂಬುತಿದ್ದಾರೆ.

ಈ ಹೊಸ ಪೀಳಿಗೆಯ ಸಂಪರ್ಕ ಬೆಳೆಸಿ ಬಹುತ್ವ ಭಾರತದ ನಿಜ ಚರಿತ್ರೆಯನ್ನು ತಿಳಿಸುವಲ್ಲಿ ಕಾಂಗ್ರೆಸ್ ಸೇರಿದಂತೆ ಎಲ್ಲ ಸೆಕ್ಯುಲರ್ ಪಕ್ಷಗಳು ವಿಫಲಗೊಂಡಿವೆ. ಈ ಗೊಂದಲದ ಜೊತೆಗೆ ಚುನಾವಣಾ ಗೆಲುವಿನ ಅವಕಾಶವಾದ ಬೆರೆತು ಕಾಂಗ್ರೆಸ್ ಗೊಂದಲದಲ್ಲಿದೆ. ಹಿಂದೆ ಒಂದು ಕಾಲವಿತ್ತು, ಯಾರು ಹೆಚ್ಚು ಜಾತ್ಯತೀತರು ಎಂದು ಬಿಂಬಿಸಿಕೊಳ್ಳಲು ರಾಜಕೀಯ ಪಕ್ಷಗಳಲ್ಲಿ ಪೈಪೋಟಿ ನಡೆಯುತ್ತಿತ್ತು. ಭಾರತೀಯ ಜನತಾ ಪಕ್ಷ ಕೂಡ ಎಂಭತ್ತರ ದಶಕದಲ್ಲಿ ಮುಂಬೈಯ ಸ್ಥಾಪನಾ ಅಧಿವೇಶನದಲ್ಲಿ ತನ್ನನ್ನು ಸಮಾಜವಾದಿ ಸೆಕ್ಯುಲರ್ ಪಕ್ಷ ಎಂದು ಕರೆದುಕೊಳ್ಳಬೇಕಾಗಿ ಬಂದಿತ್ತು. ಆದರೆ ಈಗ ತಾನು ನೈಜ ಹಿಂದುತ್ವವಾದಿ ಪಕ್ಷ ಎಂದು ತೋರಿಸಿಕೊಳ್ಳಲು ಬಿಜೆಪಿ ಪ್ರಯಾಸ ಪಡುತ್ತಿದೆ.ಈ ಸಂದರ್ಭದಲ್ಲಿ ಕಮ್ಯುನಿಸ್ಟ್ ನಾಯಕ ಹರಕಿಷನ್ ಸಿಂಗ್ ಇರಬೇಕಾಗಿತ್ತು. ಅವರು ಬದುಕಿರುವವರೆಗೆ ಕೋಮುವಾದಿ ಶಕ್ತಿಗಳು ಅಧಿಕಾರಕ್ಕೆ ಬರಲು ಬಿಡಲಿಲ್ಲ.ಅವರನ್ನು ಬಿಟ್ಟರೆ ಕಾಮ್ರೇಡ್ ಸೀತಾರಾಮ ಯೆಚೂರಿ ಅವರಾದರೂ ಇರಬೇಕಾಗಿತ್ತು.ಸಮಾನ ಮನಸ್ಕ ಶಕ್ತಿಗಳನ್ನು ಒಗ್ಗೂಡಿಸಿ ಫ್ಯಾಶಿಸ್ಟ್ ಶಕ್ತಿಗಳ ಹುನ್ನಾರಗಳನ್ನು ವಿಫಲಗೊಳಿಸದೇ ಬಿಡುತ್ತಿರಲಿಲ್ಲ. ಸೀತಾರಾಮ ಯೆಚೂರಿಯವರು ಅಗಲಿದಾಗ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರ ಜೈರಾಂ ರಮೇಶ್ ಅವರು ‘ಕಾಮ್ರೇಡ್ ಸೀತಾರಾಮ ಯೆಚೂರಿ ಅವರು ಕಮ್ಯುನಿಸ್ಟ್

ಪಕ್ಷಕ್ಕೆ ಮಾತ್ರವಲ್ಲ ನಮ್ಮ ಕಾಂಗ್ರೆಸ್‌ಗೂ ಪ್ರಧಾನ ಕಾರ್ಯದರ್ಶಿಯಾಗಿದ್ದರು’ ಎಂದು ತಮಾಷೆಯಾಗಿ ಹೇಳಿದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಯೆಚೂರಿಯವರು ಸೈದ್ಧಾಂತಿಕ ಸಲಹೆಗಾರರಾಗಿದ್ದರು ಎಂದು ರಮೇಶ್ ಹೇಳಿದ್ದು ಎಲ್ಲರಿಗೂ ತಿಳಿದ ಸಂಗತಿ.

ಇದು ಕಾಂಗ್ರೆಸ್ ನ ಅಳಿವು ಉಳಿವಿನ ಪ್ರಶ್ನೆ, ತಾನು ನಡೆದು ಬಂದ ದಾರಿಯನ್ನು ಅದು ಹೊರಳಿ ನೋಡಿಕೊಂಡು, ಮುಂದೆ ಯಾವ ದಾರಿಯಲ್ಲಿ ಸಾಗಬೇಕೆಂದು ತೀರ್ಮಾನಿಸಬೇಕು. ದೇಶ ವಿಭಜನೆಯ ಸಂದರ್ಭದಲ್ಲಿ ಬಾಪೂಜಿ ಮಾಡಿದ ನೌಖಾಲಿ ಯಾತ್ರೆಯನ್ನು ನೆನಪು ಮಾಡಿಕೊಳ್ಳಬೇಕು.ಆಗ ದಿಲ್ಲಿಯಲ್ಲಿ ಹಿಂಸಾಚಾರ ನಡೆದಾಗ ಹಿಂದೂಗಳು ಆಕ್ರಮಿಸಿಕೊಂಡ ಮಸೂದೆಗಳನ್ನು ಮುಸಲ್ಮಾನರಿಗೆ ವಾಪಸ್ ಕೊಡಬೇಕೆಂದು ಗಾಂಧೀಜಿ ಪಟ್ಟು ಹಿಡಿದಿದ್ದರು.ದೇಶದ ಮೊದಲ ಸಾರ್ವತ್ರಿಕ ಚುನಾವಣೆಗಳು ನಡೆದಾಗ ಕೋಮುವಾದಿ ಪಕ್ಷಗಳೊಂದಿಗೆ ,ಶಕ್ತಿಗಳೊಂದಿಗೆ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ನಿರಾಕರಿಸಿದ್ದರು.

ಕಾಂಗ್ರೆಸ್ ಚುನಾವಣೆಯಲ್ಲಿ ಸೋತರೂ ಅಡ್ಡಿಯಿಲ್ಲ. ಆದರೆ ಧರ್ಮದ ಹೆಸರಿನಲ್ಲಿ ಜನರಲ್ಲಿ ಕೋಮುದ್ವೇಷದ ವಿಷಬೀಜವನ್ನು ಬಿತ್ತುವವರನ್ನು ಸಹಿಸುವುದಿಲ್ಲ ಎಂದು ಹೇಳಿದ್ದರು. ಕಾಂಗ್ರೆಸ್ ತನ್ನ ಸಿದ್ಧಾಂತ-ಕಾರ್ಯಕ್ರಮ ಗಳೊಂದಿಗೆ ಬಿಜೆಪಿಯಂಥ ಕೋಮುವಾದಿ ಶಕ್ತಿಗಳನ್ನು ಎದುರಿಸಿ ಹೋರಾಡಬೇಕು.

ಇಲ್ಲಿ ಚುನಾವಣಾ ಸೋಲು, ಗೆಲುವುಗಳು ಮುಖ್ಯವಲ್ಲ.ಇಂಥ ಸೈದ್ಧಾಂತಿಕ ಬದ್ಧತೆಯೇ ಕಾಂಗ್ರೆಸ್‌ಗೆ ಪುನಶ್ಚೇತನ ನೀಡಬಲ್ಲದು. ಉಳಿದವರಂತೆ ಕಾಂಗ್ರೆಸ್, ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳೆಂದು ನಾನು ಹೇಳುವುದಿಲ್ಲ. ಆರ್ಥಿಕ ಧೋರಣೆಯ ಪ್ರಶ್ನೆಯಲ್ಲಿ ಅದು ನವ ಉದಾರವಾದಿ ಮಾರ್ಗದಲ್ಲಿ ಹೊರಟಿರಬಹುದು. ಆದರೆ ಕಾಂಗ್ರೆಸ್, ಬಿಜೆಪಿಯಂತೆ ಕೋಮುವಾದಿ ಫ್ಯಾಶಿಸ್ಟ್ ಪಕ್ಷವಲ್ಲ. ಅದು ಈಗಾಗಲೇ ತನ್ನ ಎದುರಿನ ಸುವರ್ಣಾವಕಾಶ ಕಳೆದುಕೊಂಡಿದೆ. ಇನ್ನಾದರೂ ತನ್ನ ತಪ್ಪನ್ನು ತಿದ್ದಿಕೊಂಡರೆ ಅದಕ್ಕೆ ಭವಿಷ್ಯವಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ಸನತ್ ಕುಮಾರ ಬೆಳಗಲಿ

contributor

Similar News