ವಚನ ದರ್ಶನದ ನಿಜ ದರ್ಶನ

Update: 2025-03-10 12:55 IST
ವಚನ ದರ್ಶನದ ನಿಜ ದರ್ಶನ
  • whatsapp icon

ಭಾರತದಲ್ಲಿ ಅಸಮಾನತೆಯಿಂದ ಕೂಡಿದ ಜಾತಿ ಶ್ರೇಣೀಕರಣದ ಸಾಮಾಜಿಕ ವ್ಯವಸ್ಥೆಯನ್ನು ಬದಲಿಸಲು ಹೊರಟವರನ್ನು ಹೇಳ ಹೆಸರಿಲ್ಲದಂತೆ ಮಾಡಲಾಗಿದೆ ಎಂಬುದು ಇತಿಹಾಸದಲ್ಲಿ ದಾಖಲಾದ ಮತ್ತು ದಾಖಲಾಗದ ಸತ್ಯ.

ಹೊಸ ಬೆಳಕನ್ನು ನಂದಿಸಲು ಪ್ರಯಾಸ ಪಡುತ್ತಲೇ ಇದ್ದಾರೆ. ಇದರ ಜೊತೆಗೆ ಪಟ್ಟು, ಸಾಧ್ಯವಾಗಲಿಲ್ಲವೆಂದಾಗ ಮನುವಾದಿಗಳು ನಾನಾ ಕಸರತ್ತು ಮಾಡುತ್ತಾರೆ. ನಾನಾ ಕಾಲಘಟ್ಟಗಳಲ್ಲಿ ಇವೆಲ್ಲ ನಡೆಯುತ್ತಲೇ ಬಂದಿವೆ. ಮಹಾ ಚೇತನಗಳ ವಿಚಾರಗಳನ್ನು ಅಳಿಸಲು ಆಗುವುದಿಲ್ಲ ಎಂದು ಗೊತ್ತಾದಾಗ ಅಂಥವರನ್ನು ದೃತರಾಷ್ಟ್ರ ಅಪ್ಪುಗೆಯ ಮೂಲಕ ಆಪೋಶನ ಮಾಡಿಕೊಳ್ಳಲು ಮಸಲತ್ತು ಮಾಡುತ್ತಾರೆ. ಇತ್ತೀಚೆಗೆ ಅಲ್ಲಲ್ಲಿ ಬಿಡುಗಡೆ ಮಾಡಲಾದ ‘ವಚನ ದರ್ಶನ’ ಎಂಬ ಪುಸ್ತಕದ ಒಳ ತಿರುಳು ಇದು. ವೈಚಾರಿಕ ಮುನ್ನಡೆಗೆ ಬೆಳಕನ್ನು ನೀಡಿದ ಬುದ್ಧ್ದ, ಕರಾಳ ಜಾತಿ ವ್ಯವಸ್ಥೆಗೆ ಚುರುಕು ಮುಟ್ಟಿಸಿದ ಬಸವಣ್ಣ, ಮಹಾರಾಷ್ಟ್ರ ದ ತುಕಾರಾಮ. ಹೀಗೆ ಹಿಂಸೆ ಅನುಭವಿಸಿ ಹುತಾತ್ಮರಾದ ನೂರಾರು ಹೆಸರುಗಳನ್ನು ಕೊಡಬಹುದು. ಇದು ಬಲಿವೇದಿಕೆ ಏರಿದವರ ಕತೆಯಾದರೆ ಬದುಕಿನುದ್ದಕ್ಕೂ ಜೀವ ಪರ ಸಂದೇಶ ನೀಡುತ್ತ ಬಂದ ಕೇರಳದ ನಾರಾಯಣ ಗುರು, ತಮಿಳುನಾಡಿನ ಪೆರಿಯಾರ ರಾಮಸ್ವಾಮಿ ನಾಯ್ಕರ್ ಹೀಗೆ ಉದಾಹರಣೆಗಳನ್ನು ನೀಡಬಹುದು. ಅಂತಲೇ ನಾರಾಯಣ ಗುರುಗಳ ಕೇರಳ, ಪೆರಿಯಾರ್ ತಮಿಳುನಾಡು ಇಂದಿಗೂ ಭಿನ್ನವಾಗಿ ಮನುವಾದಿಗಳಿಗೆ ಎದುರಾಗಿ ನಿಂತಿವೆ.

ಕರ್ನಾಟಕದಲ್ಲಿ ‘ದೇಹವೇ ದೇವಾಲಯ’ ಎಂದು ಹೇಳಿ ದೇವಾಲಯ ಸಂಸ್ಕೃತಿಯನ್ನೇ ನಿರಾಕರಿಸಿದ ಬಸವಣ್ಣ ಧರ್ಮವಿಲ್ಲದವರಿಗಾಗಿ ಹೊಸ ಧರ್ಮವೊಂದನ್ನು ನಿರ್ಮಿಸಿಕೊಡಲು ಯತ್ನಿಸಿದರು. ವೇದಕ್ಕೆ ಒರೆಯ ಕಟ್ಟುವೆ!ಶಾಸ್ತ್ರಕ್ಕೆ ನಿಗಳನಿಕ್ಕುವೆ; ತರ್ಕದ ಬೆನ್ನ ಭಾರವನೆತ್ತುವೆ;ಆಗಮದ ಮೂಗಕೊಯ್ಯುವೆ ಎಂದು ಹೇಳಿ ಮನುವಾದಿ ಹಿಂದುತ್ವಕ್ಕೆ ಸವಾಲು ಹಾಕಿನಿಂತ ಬಸವಣ್ಣನವರು ವೇದವನ್ನು ಅರ್ಥಹೀನ ಕರ್ಮಕಾಂಡವೆಂದು ಟೀಕಿಸಿದರು.ಜಾತಿಯ ಕೊಳೆಯನ್ನು ಆತ ಯಾವ ಪರಿ ಕಿತ್ತು ಹಾಕಿದನೆಂದರೆ,ತಾನು ಮಾದಾರ ಚೆನ್ನಯ್ಯನ ಮಗ ಎಂದು ಹೇಳಿಕೊಂಡ,ಸಕಲ ಜೀವಾತ್ಮರ ಲೇಸನು ಕಂಡ. ಇಂಥವರ ವಚನಗಳ ಸಾರ ಶ್ಲೋಕಗಳಲ್ಲಿ ಇತ್ತು ಎಂದು ಮೊಂಡು ವಾದ ಮಾಡುವವರು ಸತ್ಯ ಒಪ್ಪಿಕೊಳ್ಳಲು ತಯಾರಿಲ್ಲ.

ವಾಸ್ತವವಾಗಿ ಜೈನ ಧರ್ಮ, ಬೌದ್ಧ ಧರ್ಮಗಳಂತೆ ಬಸವ ಧರ್ಮ ಕೂಡ ಒಂದು ಅವೈದಿಕ ಧರ್ಮ. ಈ ಅಂಶವೇ ಮನುವಾದಿಗಳಿಗೆ ನುಂಗಲಾಗದ ತುಪ್ಪಾಗಿದೆ.ಗೌತಮ ಬುದ್ಧ್ದನನ್ನು ವಿಷ್ಣುವಿನ ಅವತಾರ ಮಾಡಿ ಬೌದ್ಧ್ದಧರ್ಮವನ್ನು ದೇಶದಿಂದ ಹೊರ ಹಾಕಿದಂತೆ ಬಸವಣ್ಣನನ್ನು ಮೂರ್ತಿ ಮಾಡಿ ಗುಡಿಕಟ್ಟಿ ಕಲ್ಲಾಗಿ ಕೂರಿಸುವ ಅಪಾಯಗಳು ಈಗ ನಿಜವಾಗುತ್ತಿವೆ. ನೀರ ಕಂಡಲ್ಲಿ ಮುಳುಗುವರಯ್ಯ ಎಂದು ಕಂದಾಚಾರಿಗಳನ್ನು ಕೆಣಕಿದ ಬಸವಣ್ಣನನ್ನೇ ಹಿಂದುತ್ವದ ಕೆರೆಯಲ್ಲಿ ಮುಳುಗಿಸುವ ಮಸಲತ್ತು ನಡೆದಿದೆ. ಈ ಅಪಾಯವನ್ನು ತಡವಾದರೂ ಅರ್ಥ ಮಾಡಿಕೊಂಡ ಲಿಂಗಾಯತರು, ಹಾಗಾಗಲು ನಾವು ಬಿಡುವುದಿಲ್ಲ ಎಂದು ಪ್ರತ್ಯೇಕ ಲಿಂಗಾಯತ ಧರ್ಮ ಆಂದೋಲನಕ್ಕೆ ಧ್ವನಿಯೆತ್ತಿದರು.

ಎಂಟು ನೂರು ವರ್ಷಗಳ ಹಿಂದೆಯೇ ಬಸವಣ್ಣನವರು ಉಳ್ಳವರು ಶಿವಾಲಯ ಮಾಡುವರು ನಾನೇನು ಮಾಡಲಿ ಬಡವನಯ್ಯ ಎಂದು ದೇಹವೇ ದೇಗುಲ ಮಾಡಿ, ಅದರ ಮೇಲೆ ಶಿರವೆಂಬ ಹೊನ್ನಕಳಶವನ್ನಿಟ್ಟರು. ಮಂದಿರ, ದೇವಾಲಯಗಳಲ್ಲಿ ನಡೆಯುತ್ತಿದ್ದ ಪುರೋಹಿತಶಾಹಿ ಶೋಷಣೆಯನ್ನು ಬಸವಣ್ಣನವರು ಬರೀ ಖಂಡಿಸಲಿಲ್ಲ. ಅದಕ್ಕೆ ಪರ್ಯಾಯವಾಗಿ ಇಷ್ಟಲಿಂಗ ವನ್ನು ಅಂಗೈಯೊಳಗಿಟ್ಟರು. ಇದರ ಮೂಲಕ ದೇವಾಲಯಗಳಿಗೆ ಹೋಗಿ ಮೌಢ್ಯದ ಕೂಪಕ್ಕೆ ಬಲಿಯಾಗಬೇಡಿ ಎಂದರು. ಜಾತಿ ವ್ಯವಸ್ಥೆಯ ವಿರುದ್ಧ ಬಸವಣ್ಣನವರ ಹೋರಾಟ ಕೇವಲ ತೋರಿಕೆಯದಾಗಿರಲಿಲ್ಲ. ಜಾತಿ ರಹಿತ ಮದುವೆಗಳಿಗೆ ಮುಂದಾದರು. ಆಗ ಕಲ್ಯಾಣದಲ್ಲಿ ರಕ್ತಪಾತವೇ ನಡೆಯಿತು. ಕರ್ಮ ಸಿದ್ಧಾಂತಕ್ಕೆ ಎದುರಾಗಿ ಶ್ರಮ ಸಿದ್ಧಾಂತವನ್ನು ತಂದ ಬಸವಣ್ಣನವರು ಕಾಯಕವೇ ಕೈಲಾಸ ಎಂದರು. ನಾನು ಈ ಮಹಾಪುರುಷನ ಬಸವನ ಬಾಗೇವಾಡಿಯಲ್ಲಿ ಜನಿಸಿ ಆತ ಪಾದಸ್ಪರ್ಶ ಮಾಡಿದ ನೆಲದಲ್ಲಿ ಬೆಳೆದವನು. ಬಸವಣ್ಣನವರು ಈಗ ಬದುಕಿದ್ದರೆ ಹಿಂದುತ್ವ ಕೋಮುವಾದಿ ಶಕ್ತಿಗಳ ಕೆಂಗಣ್ಣಿಗೆ ಗುರಿಯಾಗುತ್ತಿದ್ದರು. ಜಾತಿವಾದಿಗಳು ಮರೆ ಮಾಚಿದ ನಿಜ ಬಸವಣ್ಣನವರನ್ನು ಅನಾವರಣ ಗೊಳಿಸಲು ಜೀವ ಕೊಟ್ಟ ಡಾ.ಎಂ.ಎಂ.ಕಲಬುರ್ಗಿ ಅವರು ನಮ್ಮ ಕಣ್ಣೆದುರೇ ಆಗಿ ಹೋದರು. ಈಗ ನಾವು ಬಸವಣ್ಣನವರ ಜೀವಪರ ಸಿದ್ಧಾಂತವನ್ನು ಎತ್ತಿ ಜಗತ್ತಿನ ಮುಂದೆ ಹಿಡಿಯಬೇಕಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದರು. ಅತ್ತ ತಮಿಳುನಾಡಿನಲ್ಲಿ ಪೆರಿಯಾರ್‌ಪ್ರಭಾವ ಎಷ್ಟಿದೆಯೆಂದರೆ ಅಲ್ಲಿ ಕೋಮುವಾದಿಗಳಿಗೆ ನೆಲೆಯೂರಲು ಸಾಧ್ಯವಾಗುತ್ತಿಲ್ಲ. ಅಲ್ಲಿ ಈಗಿನ ಮುಖ್ಯಮಂತ್ರಿ ಸ್ಟಾಲಿನ್ ಗಟ್ಟಿಯಾಗಿ ನಿಂತಿದ್ದಾರೆ. ಮನುವಾದಕ್ಕೆ ಕೋಮುವಾದದ ವೇಷ ಹಾಕಿದವರು ಈಗ ರಾಮ ಮಂದಿರ, ಕುಂಭ ಮೇಳಗಳನ್ನು ತಮ್ಮ ಕಾರ್ಯಸೂಚಿಗೆ ಬಳಸಿಕೊಳ್ಳುತ್ತಿದ್ದಾರೆ.ಆದರೆ ದೇಗುಲ, ಗುಡಿ ಸಂಸ್ಕೃತಿ ಗೆ ಜೀವ ನೀಡಲು ಪ್ರತಿಗಾಮಿ ಶಕ್ತಿಗಳು ಯತ್ನಿಸುತ್ತಲೇ ಇವೆ.

ನೂರಾರು ಭಾಷೆ,ಹಲವಾರು ಸಂಸ್ಕೃತಿಗಳು,ವಿಭಿನ್ನ ಧರ್ಮಗಳು ಹಾಗೂ ರಾಷ್ಟ್ರೀಯತೆಗಳನ್ನು ಒಳಗೊಂಡ ಈ ಭಾರತವನ್ನು ಬಹುತ್ವ ಭಾರತವೆಂದು ಕರೆಯುತ್ತೇವೆ ನಮ್ಮದು ನಮ್ಮದೇ ಆದ ಭಾರತದ ಮಾದರಿ.ಇದನ್ನು ಹೆಮ್ಮೆಯಿಂದ ಹೇಳುತ್ತೇವೆ. ಈ ನಮ್ಮ ಎಲ್ಲರ ಪ್ರೀತಿಯ ಭಾರತವನ್ನು ಕಡೆಗಣಿಸಿ ಜರ್ಮನಿಯ ಹಿಟ್ಲರ್ ,

ಮುಸ್ಸೋಲಿನಿ ಮಾದರಿಯ ಇಟಲಿಯನ್ನು ನಿರ್ಮಿಸಲು ಹೊರಟವರ ಮಸಲತ್ತುಗಳು ವಿಫಲಗೊಳಿಸಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಸನತ್ ಕುಮಾರ ಬೆಳಗಲಿ

contributor

Similar News