ಖರ್ಗೆ ಮಾತಿಗೆ ಯಾಕೆ ಆಕ್ಷೇಪ?
ಭಕ್ತಿ ಮಾರ್ಗವೆಂದರೆ ಬರೀ ಮೂರ್ತಿ ಪ್ರತಿಷ್ಠಾಪನೆ ಅಲ್ಲ. ಹೋಮ ಹವನಗಳಲ್ಲ. ಗಂಟೆ ಬಾರಿಸುವುದಲ್ಲ. ಊದುಬತ್ತಿ ಸುಡುವುದಲ್ಲ. ಯಾವ ವ್ರತಾಚರಣೆಯ ಅಗತ್ಯವೂ ಇಲ್ಲ. ಮಡಿ, ಮೈಲಿಗೆಗಳ ಉಸಾಬರಿಯೂ ಬೇಡ. ಇವೆಲ್ಲದರ ಬದಲಾಗಿ ಅಂತರಾಳದ ಕದ ತಟ್ಟಿ ಪ್ರೀತಿಸುವುದು ಮತ್ತು ಸಕಲರ ಏಳಿಗೆ ಬಯಸುವುದು ನಿಜವಾದ ಭಕ್ತಿ ಮಾರ್ಗ. ಹಸಿದವರ ಕಣ್ಣಲ್ಲಿ ಕೂಡಲ ಸಂಗಮದೇವನನ್ನು ಕಂಡ ಬಸವಣ್ಣ ನಮಗೆ ಆದರ್ಶವಾಗಬೇಕು.;

ಕುಂಭಮೇಳದ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಆಡಿದ ಮಾತೊಂದು ಬಿಜೆಪಿಯ ಕೆಲ ನಾಯಕರನ್ನು ಕೆರಳಿಸಿದೆ. ಖರ್ಗೆಯವರು ಆಡಬಾರದ ಮಾತನ್ನೇನೂ ಆಡಿಲ್ಲ. ಅವರು, ಬಿಜೆಪಿ ನಾಯಕರು ಕ್ಯಾಮರಾಗಳಿಗೆ ಪೋಸು ನೀಡುವ ಉದ್ದೇಶದಿಂದ ಗಂಗಾನದಿಯಲ್ಲಿ ಮುಳುಗಿ ಏಳಲು ಅಂದರೆ ಸ್ನಾನ ಮಾಡಲು ಪೈಪೋಟಿ ನಡೆಸಿದ್ದಾರೆ ಎಂದು ಸಭೆಯೊಂದರಲ್ಲಿ ಹೇಳಿದರು. ಇದರಿಂದ ತಾಳ್ಮೆ ಕಳೆದುಕೊಂಡ ಬಿಜೆಪಿಯ ನಾಯಕರು ಖರ್ಗೆಯವರನ್ನು ಸನಾತನ ಧರ್ಮದ ವಿರೋಧಿ ಎಂದು ಟೀಕಿಸುತ್ತಿದ್ದಾರೆ. ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಖರ್ಗೆಯವರು, ನಾನು ಯಾರ ನಂಬಿಕೆಯನ್ನೂ ಪ್ರಶ್ನಿಸುತ್ತಿಲ್ಲ. ಆದರೆ, ಗಂಗಾ ನದಿಯಲ್ಲಿ ಸ್ನಾನ ಮಾಡಿದರೆ ದೇಶದ ಬಡತನ ಹೋಗುವುದೇ ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ,ಬಡವರ ಮಗು ಹಸಿವೆಯಿಂದ, ಅಕ್ಷರದಿಂದ ವಂಚಿತವಾಗಿರುವಾಗ, ಕೂಲಿ ಕಾರ್ಮಿಕರಿಗೆ ಅವರ ಸಂಬಳದ ಬಾಕಿ ಸಿಗದಿರುವಾಗ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಗಂಗಾನದಿಯಲ್ಲಿ ಸ್ನಾನ ಮಾಡಲು ಬಿದ್ದರೆ ಹೇಗೆ ಎಂದು ಖರ್ಗೆಯವರು ಪ್ರಶ್ನಿಸಿದ್ದಾರೆ. ಇದರಲ್ಲಿ ತಪ್ಪೇನಿದೆ? ಇಂಥ ಮೌಢ್ಯದ ಬಗ್ಗೆ ಖರ್ಗಯವರೇನು ಮೊದಲು ಮಾತಾಡಿಲ್ಲ. ಹನ್ನೆರಡನೇ ಶತಮಾನದಲ್ಲಿ ನೀರ ಕಂಡಲ್ಲಿ ಮುಳುಗುವವರನ್ನು ಕಂಡು ಅದನ್ನು ಟೀಕಿಸಿ ವಚನವನ್ನು ಬರೆದಿದ್ದಾರೆ. ಬಸವಣ್ಣನವರು ಮಾತ್ರವಲ್ಲ ಹನ್ನೆರಡನೇ ಶತಮಾನದ ವಚನ ಚಳವಳಿಯ ಹಲವಾರು ಶರಣರು ಬಸವಣ್ಣನವರಿಗಿಂತ ಕಟುವಾದ ಭಾಷೆಯಲ್ಲಿ ವಚನಗಳನ್ನು ಬರೆದಿದ್ದಾರೆ. ಅದಕ್ಕಾಗಿ ಅವರು ನಾನಾ ತೊಂದರೆ ಅನುಭವಿಸಿದ್ದಾರೆ. ಎಷ್ಟೋ ಜನ ಹುತಾತ್ಮರಾಗಿದ್ದಾರೆ.ಶರಣರ ಪ್ರಶ್ನೆಗಳಿಗೆ ಉತ್ತರ ನೀಡಲಾಗದವರು ಕಲಬುರ್ಗಿ, ಗೌರಿ ಲಂಕೇಶ್, ಪನ್ಸಾರೆ, ದಾಭೋಲ್ಕರ್ ಅವರನ್ನು ಮುಗಿಸಿದಂತೆ ಅಂದಿನ ಶರಣರನ್ನು ಮುಗಿಸಿದ್ದಾರೆ.
ಖರ್ಗೆಯವರ ಒಂದು ಮಾತಿನ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿರುವವರು ಮಹಾ ಕುಂಭ ಮೇಳದಲ್ಲಿ ನೂಕು ನುಗ್ಗಲು ಉಂಟಾಗಿ ಮೂವತ್ತಕ್ಕೂ ಹೆಚ್ಚು ಜನರ ಸಾವಿಗೆ ಯಾರು ಕಾರಣ ಎಂಬ ಪ್ರಶ್ನೆಗೆ ಮೊದಲು ಉತ್ತರಿಸಲಿ. ಇದು ತನ್ನ ಮಹಾ ಸಾಧನೆ ಎಂಬಂತೆ ಎಲ್ಲ ಭಾಷೆಗಳ ಮಾಧ್ಯಮಗಳಿಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡುವ ಉತ್ತರ ಪ್ರದೇಶ ಮುಖ್ಯ ಮಂತ್ರಿ ಕೋಟ್ಯಂತರ ಜನ ಸೇರುವಾಗ ಯಾಕೆ ಸೂಕ್ತ ಸೌಕರ್ಯಗಳನ್ನು ಮಾಡಿರಲಿಲ್ಲ? ತನ್ನ ತಪ್ಪನ್ನು ಮುಚ್ಚಿ
ಟ್ಟುಕೊಳ್ಳಲು ಕುಂಭದ ವೈಭವವಕ್ಕೆ ಧಕ್ಕೆ ತರಲು ರಾಜಕೀಯ ವಿರೋಧಿಗಳು ಯತ್ನಿಸುತ್ತಿದ್ದಾರೆ ಎಂದು ಆರೋಪಿಸುತ್ತಿರುವುದು ಏಕೆ? ಪ್ರತಿಪಕ್ಷಗಳನ್ನು ಸನಾತನ ಧರ್ಮದ ವಿರೋಧಿಗಳು ಎಂದು ಜರೆಯುತ್ತಿರುವುದು ನ್ಯಾಯ ಸಮ್ಮತವೇ? ಕಾಲ್ತುಳಿತದ ಘಟನೆಯ ನಂತರ ಸಾವಿನ ಸಂಖ್ಯೆಯ ಬಗ್ಗೆ ಸಾರ್ವಜನಿಕರಿಗೆ ಸರಿಯಾಗಿ ಮಾಹಿತಿ ನೀಡದೇ ನೈಜ ಅಂಕಿ ಸಂಖ್ಯೆಗಳನ್ನು ಮುಚ್ಚಿ ಡುತ್ತಿರುವುದೇಕೆ?
ಉತ್ತರ ಭಾರತದ ಯೋಗಿಯಂಥವರು ಕರ್ನಾ ಟಕದಿಂದ ಕಲಿಯುವುದು ಸಾಕಷ್ಟಿದೆ.ನಮ್ಮದು ದೇಹವೇ ದೇವಾಲಯ ಎಂದು ಹೇಳಿ ದೇವಾಲಯ ಸಂಸ್ಕೃತಿಯನ್ನೇ ನಿರಾಕರಿಸಿದ ಬಸವಣ್ಣನವರು ನಡೆದಾಡಿದ ನೆಲ.ಅಂತಲೇ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಘೋಷಿಸಿದೆ.
ಬಸವಣ್ಣನವರು ಯಾರನ್ನೂ ದೂರವಿಡದೇ ಇವ ನಮ್ಮವ, ಇವ ನಮ್ಮವ’ ಎಂದು ಮೇಲು , ಕೀಳು ನೋಡದೇ , ಎಲ್ಲರನ್ನೂ ಅಪ್ಪಿಕೊಂಡರು. ಧರ್ಮವಿಲ್ಲದ ವರಿಗಾಗಿ ಹೊಸ ಧರ್ಮವೊಂದನ್ನು ನಿರ್ಮಿಸಿಕೊಡಲು ಯತ್ನಿಸಿದ ಬಸವಣ್ಣ
‘ವೇದಕ್ಕೆ ಒರೆಯ ಕಟ್ಟುವೆ!
ಶಾಸ್ತ್ರಕ್ಕೆ ನಿಗಳನಿಕ್ಕುವೆ.
ತರ್ಕದ ಬೆನ್ನ ಭಾರವನೆತ್ತುವೆ;
ಆಗಮದ ಮೂಗಕೊಯ್ಯುವೆ’
ಎಂದು ಹೇಳಿ ಮನುವಾದಕ್ಕೆ ಸವಾಲು ಹಾಕಿನಿಂತರು.
ಬಸವಣ್ಣನವರು ವೇದಕ್ಕೆ ಒರೆಯ ಕಟ್ಟುವೆ ಎಂದು ವೇದದ ಅರ್ಥಹೀನ ಕರ್ಮಕಾಂಡವನ್ನು ಟೀಕಿಸಿದರು.ಅವರು ಜಾತಿಯ ಕೊಳೆಯನ್ನು ಯಾವ ಪರಿ ಕಿತ್ತು ಹಾಕಿದರೆಂದರೆ, ಮಾದಾರ ಚೆನ್ನಯ್ಯನ ಮಗ ಎಂದು ತಮ್ಮನ್ನು ತಾವು ಕರೆದುಕೊಂಡರು. ಬಸವಣ್ಣ ಯಾವುದೇ ಒಂದು ಧರ್ಮ, ಇಲ್ಲವೇ ಜಾತಿಯ ಬಗ್ಗೆ ಅಥವಾ ಯಾವುದೇ ಭೂ ಪ್ರದೇಶದ ಜನರ ಹಿತವನ್ನು ಮಾತ್ರ ಬಯಸಲಿಲ್ಲ. ಸಕಲ ಜೀವಾತ್ಮರ ಲೇಸನು ಬಯಸಿದರು.
ಆದರೆ, ಹನ್ನೆರಡನೇ ಶತಮಾನದ ಆನಂತರ ಇಂತಹ ಬಸವಣ್ಣನವರ ಚರಿತ್ರೆಯನ್ನೇ ಅಳಿಸಿ ಹಾಕುವ ಹುನ್ನಾರ ನಡೆಯಿತು. ಜೀವಂತ ಬಸವಣ್ಣನವರನ್ನು ಮುಗಿಸಿದವರು ಅವರನ್ನು ಕಲ್ಲಿನ ಮೂರ್ತಿಯನ್ನಾಗಿ ಮಾಡುತ್ತ ಬಂದರು. ಆದರೆ, ಬಿಜಾಪುರದ ಫ.ಗು. ಹಳಕಟ್ಟಿಯವರು ವಚನ ಸಾಹಿತ್ಯವನ್ನು ಬೆಳಕಿಗೆ ತಂದ ಅನಂತರ ನಿಜವಾದ ಬಸವಣ್ಣ ಅನಾವರಣಗೊಂಡರು. ಈಗಲೂ ‘ವಚನ ದರ್ಶನ’ ದಂಥ ಪುಸ್ತಕ ಬಿಡುಗಡೆ ಮಾಡಿ ವಚನ ಚಳವಳಿಯ ಸಾಹಿತ್ಯಕ್ಕೆ ಅಪಚಾರ ಉಂಟು ಮಾಡುವ ಹುನ್ನಾರ ನಾಡಿನಲ್ಲಿ ನಡೆದಿದೆ.
ಗೌತಮ ಬುದ್ಧನನ್ನು ವಿಷ್ಣುವಿನ ಅವತಾರ ಮಾಡಿ ಬೌದ್ಧಧರ್ಮವನ್ನು ದೇಶದಿಂದ ಹೊರ ಹಾಕಿದಂತೆ ಬಸವಣ್ಣನನ್ನು ಮೂರ್ತಿ ಮಾಡಿ ಗುಡಿಕಟ್ಟಿ ಕಲ್ಲಾಗಿ ಕೂರಿಸುವ ಅಪಾಯಗಳಿರುವಾಗಲೇ ಕರ್ನಾಟಕ ಸರಕಾರ ಸಾಂಸ್ಕೃತಿಕ ನಾಯಕ ಎಂದು ಸಾರಿದೆ. ‘ನೀರ ಕಂಡಲ್ಲಿ ಮುಳುಗುವರಯ್ಯ’ ಎಂದು ಕಂದಾಚಾರಿಗಳನ್ನು ಕೆಣಕಿದ ಬಸವಣ್ಣನನ್ನೇ ಕೋಮುವಾದದ ಕೆರೆಯಲ್ಲಿ ಮುಳುಗಿಸುವ ಹುನ್ನಾರ ನಡೆಯುತ್ತಲೇ ಬಂದಿದೆ. ಆದರೆ, ಬಸವಣ್ಣ ಬೆಂಕಿ ಇದ್ದಂತೆ. ಅವನನ್ನು ಮುಟ್ಟಲು ಹೋದವರು ಕೈ ಸುಟ್ಟು ಕೊಳ್ಳುತ್ತಾರೆ. ಲಿಂಗಾಯತರಲ್ಲಿ ಕೆಲವರಾದರೂ ಎಚ್ಚೆತ್ತು ‘ನಾವು ನಿಮ್ಮವರಲ್ಲ ,
ಎಲ್ಲರೂ ನಮ್ಮವರು’ ಎಂದು ಮನುವಾದಿಗಳಿಗೆ ತಿರುಗಿ ಬಿದ್ದಿದ್ದಾರೆ.
_ವಾಸ್ತವವಾಗಿ ಜನತೆಗೆ ನೀಡಿದ ಯಾವ ಭರವಸೆಗಳನ್ನೂ ಈಡೇರಿಸದೆ ಮಾತಿನ ಮಂಟಪ ಕಟ್ಟುತ್ತ ಬಂದವರು ದೇವರನ್ನೂ ದುರ್ಬಳಕೆ ಮಾಡಿಕೊಳ್ಳುತ್ತಿರುವ ಈ ಕೆಟ್ಟ ದಿನಗಳಲ್ಲಿ ಅಪಾಯಕಾರಿ ಶಕ್ತಿಗಳಿಂದ ನಮ್ಮ ಬಸವಣ್ಣನವರನ್ನು, ಬಾಬಾಸಾಹೇಬರ ಸಂವಿಧಾನವನ್ನು ಕಾಪಾಡಿಕೊಳ್ಳಬೇಕಿದೆ.
ಸಾಂಕೇತಿಕವಾಗಿ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ಈ ನೆಲದಲ್ಲಿ ಜಾತಿ ಮತಗಳನ್ನು ಮೀರಿವ ಮನುಷ್ಯ ಪ್ರೀತಿಯ ಸಂದೇಶ ಸಾರಿದವರ ಬಹುದೊಡ್ಡ ಪರಂಪರೆಯೇ ಇದೆ. ಇವರಲ್ಲಿ ಬಸವಣ್ಣನವರು ಯಾಕೆ ಭಿನ್ನವಾಗಿ ನಿಲ್ಲುತ್ತಾರೆಂದರೆ ಅವರು ಬರೀ ಸಂದೇಶವನ್ನು ಮಾತ್ರ ನೀಡಲಿಲ್ಲ. ವರ್ಣಾಶ್ರಮ ವ್ಯವಸ್ಥೆಗೆ ಅವರ ಪ್ರತಿರೋಧ ಕೇವಲ ವೈಯಕ್ತಿಕವಾಗಿರಲಿಲ್ಲ. ಅವರು ಬಯಸಿದ್ದರೆ ಬಿಜ್ಜಳ ರಾಜನೊಂದಿಗೆ ರಾಜಿ ಮಾಡಿಕೊಂಡು ಒಣ ಉಪದೇಶ ನೀಡುತ್ತ ಸುರಕ್ಷಿತವಾಗಿ ಇರಬಹುದಿತ್ತು. ಆದರೆ ಬಸವಣ್ಣ ಅಷ್ಟಕ್ಕೆ ಸೀಮಿತರಾಗಿ ಉಳಿಯಲಿಲ್ಲ.
ಅಕ್ಷರ ವಂಚಿತ ಸಮುದಾಯಗಳ ಜನರನ್ನು ಸಂಘಟಿಸಿ ಅವರಿಗೆ ಅಕ್ಷರ ಕಲಿಸಿದರು. ಅಕ್ಷರ ಕಲಿತವರು ವಚನಗಳನ್ನು ಬರೆಯಲು ಪ್ರೇರಣೆಯಾದರು. ಎಂಟು ನೂರು ವರ್ಷಗಳ ಹಿಂದೆ ಸಾಕಷ್ಟು ಬಿಗಿಯಾಗಿದ್ದ ಶ್ರೇಣೀಕೃತ ಜಾತಿ ವ್ಯವಸ್ಥೆಯ ಬುಡ ಅಲ್ಲಾಡಿಸುವ ಕೆಲಸಕ್ಕೆ ಕೈ ಹಾಕಿದರು. ಮಧುವರಸ, ಹರಳಯ್ಯ ಕುಟುಂಬಗಳ ಬಾಂಧವ್ಯ ಬೆಸೆಯಲು ಜಾತಿ ರಹಿತ ಮದುವೆಗೆ ಮುಂದಾದರು. ಇದರಿಂದ ರೊಚ್ಚಿಗೆದ್ದ ಕರ್ಮಠ ಕ್ರೂರಿಗಳು ಬಸವಣ್ಣನವರನ್ನು ಹೇಗೆ ಮುಗಿಸಿದರೆಂಬುದು ಈಗ ಇತಿಹಾಸ. ಬಸವಣ್ಣನವರ ಆನಂತರ ಅವರ ಲಕ್ಷಾಂತರ ಅನುಯಾಯಿಗಳು ಅಮೂಲ್ಯವಾದ ವಚನ ಸಾಹಿತ್ಯದ ಗಂಟುಗಳನ್ನು ಹೊತ್ತುಕೊಂಡು ಕಲ್ಯಾಣ ತೊರೆದರು.
ಚೆನ್ನಬಸವಣ್ಣನ ನೇತೃತ್ವದಲ್ಲಿ ಶರಣರ ಬಹುದೊಡ್ಡ ಸಮೂಹ ಉಳವಿಯ ಮಾರ್ಗ ಹಿಡಿಯಿತು. ಉಳವಿ ಎಂಬ ಊರು ಇರುವುದು ಈಗಿನ ಕಾರವಾರ ಜಿಲ್ಲೆಯ ಜೊಯಿಡಾ ಸಮೀಪದಲ್ಲಿ. ಕಲ್ಯಾಣಕ್ಕೂ ಉಳವಿಗೂ ಅಂದಾಜು ೮೦೦ ಮೈಲಿ ಅಂತರ. ವಚನ ಸಾಹಿತ್ಯವನ್ನು ಕಾಪಾಡಿಕೊಳ್ಳಲು ಬಿಜ್ಜಳನ ಸೇನೆಯ ಹಾಗೂ ಕ್ರೂರಿ ಮನುವಾದಿಗಳ ದಾಳಿಯನ್ನು ಎದುರಿಸುತ್ತ ದಾರಿಯಲ್ಲಿ ಹಲವರು ಬಲಿದಾನ ಮಾಡಿದರು. ಉಳಿದವರು ಉಳವಿಯನ್ನು ತಲುಪಿದರು. ಆ ಕಾಲದಲ್ಲಿ ಕಾಲ್ನಡಿಗೆಯಲ್ಲಿ ರಸ್ತೆಯಿಲ್ಲದಲ್ಲಿ ರಸ್ತೆ ಮಾಡಿಕೊಂಡು ಶರಣರು ಉಳವಿಯನ್ನು ತಲುಪಿದ್ದು ನನಗೀಗಲೂ ಅಚ್ಚರಿಯ ಸಂಗತಿಯಾಗಿದೆ. ನಾನು ಅನೇಕ ಸಲ ಇದೇ ಕುತೂಹಲದಿಂದ ಉಳವಿಗೆ ಹೋಗಿ ಬಂದಿದ್ದೇನೆ.
ನಮಗೆ ನಿಮ್ಮ ಮನು, ಸಾವರ್ಕರ್, ಗೋಳ್ವಾಲ್ಕರ್ ಬೇಡ. ನಮ್ಮ ಕರ್ನಾಟಕದಲ್ಲಿ ಸಕಲ ಜೀವಾತ್ಮರಿಗೆ ಲೇಸನ್ನು ಬಯಸಿದ ಬಸವಣ್ಣ, ಮನುಷ್ಯ ಜಾತಿ ತಾನೊಂದೆ ವಲಂ ಎಂದು ಸಾರಿದ ಪಂಪನ ಕನ್ನಡ ಪರಂಪರೆಗೆ ಸೇರಿದ ಮಹಾನ್ ಚೇತನ ಕುವೆಂಪು -ಇವರೆಲ್ಲ ನಮಗೆ ಮುಖ್ಯರಾಗುತ್ತಾರೆ. ಇವರು ಬರೀ ಯಾವುದೋ ಒಂದು ಜಾತಿಯ, ಮತದ, ಕುಲದ ಏಳಿಗೆಯನ್ನು ಮಾತ್ರ ಬಯಸಲಿಲ್ಲ. ಜಗತ್ತಿನ ಸಕಲ ಜೀವರಾಶಿಗಳ ಹಿತವನ್ನು ಬಯಸಿದರು.ಬಹುತ್ವ ಭಾರತವನ್ನು ಹಿಂದೂ ರಾಷ್ಟ್ರ ಮಾಡುತ್ತೇವೆ ಎಂದು ಕೂಗೆದ್ದಿರುವ ಈ ದಿನಗಳಲ್ಲಿ ಕುವೆಂಪು ಕೂಡ ಮತ್ತೆ ಮತ್ತೆ ನಮಗೆ ನೆನಪಾಗುತ್ತಾರೆ. ಈ ಮಹಾಕವಿ ಈ ನಾಡನ್ನು ಸರ್ವ ಜನಾಂಗದ ಶಾಂತಿಯ ತೋಟ ಎಂದು ಕರೆದರು. ಹಿಂದೂ, ಮುಸಲ್ಮಾನ, ಕ್ರೈಸ್ತ, ಜೈನರ ಉದ್ಯಾನ ಎಂದರು ಮತಾಂಧತೆಯ ಪಿತ್ತ ನೆತ್ತಿಗೇರಿದ ಈ ದಿನಗಳಲ್ಲಿ ಕುವೆಂಪು ಎಂಬ ಚೇತನ ಕೂಡ ಬಸವ ಎಂಬ ಜ್ಯೋತಿಯ ಜೊತೆಗೆ ಈ ನಾಡನ್ನು ಮುನ್ನಡೆಸಬೇಕಾಗಿದೆ.
ಕುವೆಂಪು ತಾತ್ವಿಕ ಪ್ರಶ್ನೆಯಲ್ಲಿ ಎಷ್ಟು ನಿಷ್ಠುರವಾದಿಯಾಗಿದ್ದರೆಂದರೆ, ೭೦ರ ದಶಕದಲ್ಲಿ ಉಡುಪಿಯಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ತಿನ ಸ್ಥಾಪನಾ ಸಮಾವೇಶದ ಉದ್ಘಾಟನೆಗೆ ಅವರನ್ನು ಆಹ್ವಾನಿಸಲಾಗಿತ್ತು. ಈ ಆಹ್ವಾನವನ್ನು ತಿರಸ್ಕರಿಸಿದ ಕುವೆಂಪು, ‘ಹಿಂದೂ ಒಂದು ಎನ್ನುವುದಾದರೆ ಶ್ರೇಣೀಕೃತ ಜಾತಿಪದ್ಧತಿಯನ್ನು ಪ್ರತಿಪಾದಿಸುವ ಮನುಸ್ಮತಿ ಧಿಕ್ಕರಿಸುವಿರಾ? ಉಡುಪಿ ಅಷ್ಟ ಮಠಗಳ ಪೈಕಿ ಒಂದು ಮಠಕ್ಕಾದರೂ ಶೂದ್ರ ಮಠಾಧೀಶರನ್ನು ನೇಮಿಸುವಿರಾ’ ಎಂದು ಸವಾಲು ಹಾಕಿದರು. ಕುವೆಂಪು ಆ ಸಮಾವೇಶಕ್ಕೆ ಹೋಗಲಿಲ್ಲ. ತಮ್ಮ ಬದುಕಿನ ಕೊನೆಯುಸಿರು ಇರುವವರೆಗೆ ಕುವೆಂಪು ಕೋಮುವಾದಿಗಳ ಜೊತೆ ರಾಜಿ ಮಾಡಿಕೊಳ್ಳಲಿಲ್ಲ.
ಸರ್ವ ಜನಾಂಗದ ಶಾಂತಿಯ ತೋಟವಾದ ನಮ್ಮ ಕರ್ನಾಟಕವನ್ನು ಕೋಮುವಾದಿ ರೋಗಾಣುಗಳಿಂದ ಕಾಪಾಡಬೇಕಾಗಿದೆ. ಮನುವಾದಿಗಳ , ಕೋಮುವಾದಿಗಳ ಸಹವಾಸ ನಮಗೆ ಬೇಡ. ಮನೆ ಮನೆಯ ಬಾಗಿಲಿಗೆ ಮನದ ಅಂತರಾಳಕ್ಕೆ ಮಾನವತೆಯ ಬಸವಣ್ಣನವರ ಲಿಂಗಾಯತ ಧರ್ಮ , ಮಹಾವೀರರ ಜೈನ ಧರ್ಮ, ಗೌತಮ ಬುದ್ಧರ ಬೌದ್ಧ ಧರ್ಮ ,
ಗುರು ನಾನಕರ ಸಿಖ್ ಧರ್ಮ ಗಳು, ವೈದಿಕೇತರ ಪರಂಪರೆಗೆ ಸೇರಿದ ಧರ್ಮಗಳು ಬೇಕು. ಅವುಗಳ ಸಂದೇಶವನ್ನು ಎಲ್ಲೆಡೆ ತಲುಪಿಸೋಣ.
ಸಂವಿಧಾನದ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿ ಶಾಸನಸಭೆಯನ್ನು ಪ್ರವೇಶಿಸಿದ ಜನಪ್ರತಿನಿಧಿಗಳು ಕೂಡ ಸಂವಿಧಾನವನ್ನು ಕಡೆಗಣಿಸಿ ಮತ ಧರ್ಮಗಳಿಗೆ ತಮ್ಮ ನಿಷ್ಠೆಯನ್ನು ಪ್ರದರ್ಶಿಸುತ್ತಿರುವ ಇಂದಿನ ದಿನಗಳಲ್ಲಿ ಇತರ ಧರ್ಮ ಮತ್ತು ಇತರರ ಆಲೋಚನೆಗಳನ್ನು ಸಹನೆಯಿಂದ ನೋಡುವುದೇ ನಿಜವಾದ ಧರ್ಮ ಎಂದು ಹೇಳಿದ ಕವಿರಾಜಮಾರ್ಗಕಾರನ ಮಾತು ನಮ್ಮನ್ನು ಮುನ್ನಡೆಸಬೇಕಾಗಿದೆ. ‘ಇತರರ ಪ್ರಾರ್ಥನಾ ಮಂದಿರಗಳನ್ನು ನೆಲಸಮಗೊಳಿಸುತ್ತೇವೆ’ ಎಂಬ ಕೂಗು ಮಾರಿಗಳಿಗೆ ಕಡಿವಾಣ ಹಾಕಬೇಕಿದೆ.
ಎಲ್ಲರನ್ನೂ ತನ್ನವರೆಂದು ಅಪ್ಪಿಕೊಂಡ, ಒಪ್ಪಿಕೊಂಡ, ಅರಿವನ್ನು ಗುರುವೆಂದು ನುಡಿದ, ದಯೆಯೇ ಧರ್ಮದ ಮೂಲವೆಂದು ಸಾರಿದ ಬಸವಣ್ಣನವರ ವಚನಗಳನ್ನು ಮತ್ತು ಬಾಬಾಸಾಹೇಬರ ಸಂವಿಧಾನವನ್ನು ಶಾಲಾ ಮಕ್ಕಳ ಹಂತದಿಂದ ಕಡ್ಡಾಯ ಪಠ್ಯಕ್ರಮ ವಾಗಿ ಜಾರಿಗೆ ತರಬೇಕಾಗಿದೆ.
ಭಕ್ತಿ ಮಾರ್ಗವೆಂದರೆ ಬರೀ ಮೂರ್ತಿ ಪ್ರತಿಷ್ಠಾಪನೆ ಅಲ್ಲ. ಹೋಮ ಹವನಗಳಲ್ಲ. ಗಂಟೆ ಬಾರಿಸುವುದಲ್ಲ. ಊದುಬತ್ತಿ ಸುಡುವುದಲ್ಲ. ಯಾವ ವ್ರತಾಚರಣೆಯ ಅಗತ್ಯವೂ ಇಲ್ಲ. ಮಡಿ, ಮೈಲಿಗೆಗಳ ಉಸಾಬರಿಯೂ ಬೇಡ. ಇವೆಲ್ಲದರ ಬದಲಾಗಿ ಅಂತರಾಳದ ಕದ ತಟ್ಟಿ ಪ್ರೀತಿಸುವುದು ಮತ್ತು ಸಕಲರ ಏಳಿಗೆ ಬಯಸುವುದು ನಿಜವಾದ ಭಕ್ತಿ ಮಾರ್ಗ. ಹಸಿದವರ ಕಣ್ಣಲ್ಲಿ ಕೂಡಲ ಸಂಗಮದೇವನನ್ನು ಕಂಡ ಬಸವಣ್ಣ ನಮಗೆ ಆದರ್ಶವಾಗಬೇಕು. ಇವತ್ತಿನ ಕಾರ್ಗತ್ತಲ ಕಾಲದಲ್ಲಿ ಬಸವ ಮತ್ತು ಬಾಬಾಸಾಹೇಬರ ಬೆಳಕು ನಮ್ಮನ್ನು ಮುನ್ನಡೆಸಬೇಕಾಗಿದೆ. ಜನಸಾಮಾನ್ಯರಿಗಿಂತ ಮೊದಲು ಅವರನ್ನು ಪ್ರತಿನಿಧಿಸುವ ಶಾಸಕರು ಮತ್ತು ಸಂಸದರು ಒಟ್ಟಾರೆ ಜನಪ್ರತಿನಿಧಿಗಳು ಬಸವಣ್ಣನವರ ವಿಚಾರಗಳಿಗೆ ತಮ್ಮ ಬದ್ಧತೆಯನ್ನು ತೋರಿಸಬೇಕಾಗಿದೆ.