ಅಂಬೇಡ್ಕರ್ ಎಂಬ ಬೆಂಕಿ ಮತ್ತು ಬೆಳಕು

Update: 2025-04-14 08:27 IST
ಅಂಬೇಡ್ಕರ್ ಎಂಬ ಬೆಂಕಿ ಮತ್ತು ಬೆಳಕು
  • whatsapp icon

ಇಂದು ಭಾರತದ ಭಾಗ್ಯವಿದಾತ, ಬೆಳಕಿನ ಕಿರಣ ಬಾಬಾಸಾಹೇಬರ 135ನೇ ಜನ್ಮದಿನ. ಈಗ ನಮ್ಮ ನಡುವೆ ದೈಹಿಕವಾಗಿ ಅವರಿಲ್ಲ. ಆದರೆ, ಅವರು ನೀಡಿದ ಸಂವಿಧಾನ, ಅವರು ನೀಡಿದ ವೈಚಾರಿಕ ಬೆಳಕು 140 ಕೋಟಿ ಭಾರತೀಯರನ್ನು ಮುನ್ನಡೆಸುತ್ತಿದೆ. ವಿಭಿನ್ನ ಜಾತಿ, ಧರ್ಮ, ಭಾಷೆ, ಸಂಸ್ಕೃತಿ, ಜನಾಂಗೀಯ ಅಸ್ಮಿತೆಗಳನ್ನು ಭಾರತ ಎಂಬ ಪರಿಕಲ್ಪನೆಯಲ್ಲಿ ಒಂದುಗೂಡಿಸಿದ್ದು ಸಣ್ಣ ಸಾಧನೆಯಲ್ಲ. ಬಾಬಾಸಾಹೇಬರು ನೀಡಿರುವ ಸಂವಿಧಾನ ಸ್ವತಂತ್ರ ಭಾರತದ ಬಹುತ್ವದ ಅಡಿಪಾಯವನ್ನು ನಿರ್ಮಿಸುವಲ್ಲಿ ಮುಖ್ಯ ಪಾತ್ರ ವಹಿಸಿತು. ದೇಶಕ್ಕೆ ಸ್ವಾತಂತ್ರ್ಯ ಬರುವ ಮುಂಚೆಯೇ ಹೆಸರಾಂತ ಮಾರ್ಕ್ಸ್ಸ್ ವಾದಿ ಮೇಧಾವಿ ಮಾನವೇಂದ್ರನಾಥ ರಾಯ್ (ಎಂ.ಎನ್.ರಾಯ್) ಅವರು ಸ್ವತಂತ್ರ ಭಾರತಕ್ಕೊಂದು ಸಂವಿಧಾನ ಬೇಕೆಂದು ಹೇಳಿದ್ದರು. ಯಾಕೆಂದರೆ ಆಗ ಭಾರತ ಎಂಬುದು ಒಂದು ರಾಷ್ಟ್ರ ಆಗಿರಲಿಲ್ಲ.

ಇಲ್ಲಿ 500ಕ್ಕೂ ಮಿಕ್ಕಿದ ಪ್ರತ್ಯೇಕ ಸಂಸ್ಥಾನಗಳು,ರಾಜ ಮಹಾರಾಜರು ಇದ್ದರು. ಅವರಿಗೆಲ್ಲ ಸಂವಿಧಾನದ ಪರಿಕಲ್ಪನೆಯೂ ಇರಲಿಲ್ಲ. ಬಹುತೇಕ ಮನುವಾದವೇ ಅವರ ಅಲಿಖಿತ ಸಂವಿಧಾನ ವಾಗಿತ್ತು. ಆದರೆ, ಇವುಗಳನ್ನೆಲ್ಲ ಒಂದುಗೂಡಿಸಿ ಸ್ವತಂತ್ರ ಭಾರತ ರೂಪುಗೊಂಡಾಗ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಮತ್ತು ಗೃಹ ಸಚಿವ ವಲ್ಲಭಭಾಯ್ ಪಟೇಲ್ ಅವರು ಮಹಾತ್ಮ್ಮಾ ಗಾಂಧೀಜಿ ಬಳಿ ಧಾವಿಸಿತ್ತಾರೆ. ಸಂವಿಧಾನದ ಅಗತ್ಯದ ಬಗ್ಗೆ ಪ್ರತಿಪಾದಿಸಿ ಅದರ ರಚನೆಗೆ ಹಲವಾರು ವಿದೇಶಿ ಪರಿಣಿತರ ಹೆಸರುಗಳನ್ನು ಹೇಳುತ್ತಾರೆ.ಆಗ ಗಾಂಧೀಜಿ ಬೇರೆ ಕಡೆ ಏಕೆ ಹುಡುಕುತ್ತೀರಿ ನಮ್ಮಲ್ಲೇ ಡಾ.ಅಂಬೇಡ್ಕರ್ ಅವರಂಥ ಮಹಾಜ್ಞಾನಿ ಇದ್ದಾರಲ್ಲ ಎಂದು ಹೇಳುತ್ತಾರೆ. ಅಂಬೇಡ್ಕರ್ ಹೆಸರನ್ನು ಹೇಳಿದ್ದನ್ನು ಕೇಳಿ ನೆಹರೂ, ಪಟೇಲರಿಗೆ ಅಚ್ಚರಿಯಾಗಿತ್ತದೆ.ಗಾಂಧೀಜಿ ಮತ್ತು ಅಂಬೇಡ್ಕರ್ ನಡುವೆ ಆಗ ಉತ್ತಮ ಸಂಬಂಧವಿರಲಿಲ್ಲ.ಆದರೆ ಇದು ಇಲ್ಲಿ ಅಡ್ಡಿಯಾಗಲಿಲ್ಲ.ಅಂಬೇಡ್ಕರ್ ಅವರು ಹಗಲೂ ರಾತ್ರಿ ಬೌದ್ಧಿಕ ,ಶಾರೀರಿಕ ಪರಿಶ್ರಮದಿಂದ ಒಂದು ಅಪರೂಪದ ಸಂವಿಧಾನವನ್ನು ನಮಗೆ ನೀಡಿದರು.ಭೂಮಿ ಮತ್ತು ಕೈಗಾರಿಕೆಗಳು ಸರಕಾರಿ ಒಡೆತನದಲ್ಲಿರಬೇಕು ಎಂದು ಬಾಬಾಸಾಹೇಬರು ಪ್ರತಿಪಾದಿಸಿದರು. ದೇಶದ ದುರ್ಬಲ ವರ್ಗಗಳಿಗೆ ಮಾತ್ರವಲ್ಲ ಮಹಿಳೆಯರು,ಮಕ್ಕಳು ಸೇರಿದಂತೆ ಎಲ್ಲರ ಬದುಕಿನ ಕತ್ತಲೆಯನ್ನು ಈ ಸಂವಿಧಾನ ತೊಲಗಿಸುತ್ತ ಬಂದಿದೆ . ಆದರೆ ಆಗ ಈ ಸಂವಿಧಾನವನ್ನು ವಿರೋಧಿಸಿದವರು ಈಗ ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ‘ಭೀಮ ಹೆಜ್ಜೆ’ ಹಾಕಲು ಹೊರಟಿದ್ದಾರೆ. ಮಹಿಳೆಯರಿಗೆ ಸಮಾನ ಹಕ್ಕು ನೀಡುವ ಹಿಂದೂ ಕೋಡ್ ಬಿಲ್ ನ್ನು ವಿರೋಧಿಸಿ ಕಾನೂನು ಮಂತ್ರಿಯಾಗಿದ್ದ ಅಂಬೇಡ್ಕರ್ ಪದತ್ಯಾಗ ಮಾಡುವಂತೆ ಮಾಡಿದವರು ಈಗ ತಮ್ಮ ರಾಗವನ್ನು ಬದಲಿಸಿದ್ದಾರೆ.

ಬಾಬಾ ಸಾಹೇಬರ ಸಿದ್ಧಾಂತವನ್ನು ಕಂಡರೆ ಆಗದವರು ರಾಜಕೀಯ ಲಾಭ ಗಳಿಕೆಗಾಗಿ ದಲಿತ ಸೂರ್ಯ ಎಂದೆಲ್ಲ ಹಾಡಿ ಹೊಗಳುತ್ತಿದ್ದಾರೆ. ಈಗ ಬಾಬಾ ಸಾಹೇಬರ ನಾಮ ಸ್ಮರಣೆ ಮಾಡುತ್ತಿರುವವರು ಒಳಗೊಳಗೆ ಬಾಬಾ ಸಾಹೇಬರ ಸಾಮಾಜಿಕ ನ್ಯಾಯವನ್ನು ಮತ್ತು ಜೀವಪರ ಕಾಳಜಿಯ ಸಂವಿಧಾನವನ್ನು ನಾಶ ಮಾಡುವ ಹುನ್ನಾರ ನಡೆಸುತ್ತಲೇ ಇದ್ದಾರೆ.

ಡಾ. ಅಂಬೇಡ್ಕರ್ ಎಂಥ ಮಹಾಚೇತನ ಮತ್ತು ಅವರು ಏನಾಗಿದ್ದರು ಎಂಬುದು ಅವರು ಬರೆದ ಪುಸ್ತಕ, ಲೇಖನ ಮತ್ತು ಮಾಡಿದ ಹೋರಾಟಗಳಿಂದ ಸ್ಪಷ್ಟವಾಗಿದೆ. ಆದರೂ ಭಗತ್ ಸಿಂಗ್ ರಂತೆ ಬಾಬಾ ಸಾಹೇಬರನ್ನು ಹೈಜಾಕ್ ಮಾಡಿ ತಮ್ಮ ನಾಯಕರ ಫೋಟೊ ಪಕ್ಕದಲ್ಲಿ ಬಾಬಾ ಸಾಹೇಬರ ಫೋಟೊ ಇಟ್ಟು ಮನುವಾದಿ ಹಿಂದುತ್ವದ ವಿಷ ವರ್ತುಲದಲ್ಲಿ ದಲಿತರನ್ನು ಸೆಳೆದುಕೊಳ್ಳಲು ವಿಫಲ ಯತ್ನಗಳನ್ನು ಈ ಗೋಡ್ಸೆವಾದಿ ಶಕ್ತಿಗಳು ನಡೆಸುತ್ತಲೇ ಇವೆ.ಪ್ರಭುತ್ವದ ಅಧಿಕಾರ ಸೂತ್ರ ಹಿಡಿಯಲು ಈ ಪ್ರಹಸನ ನಡೆದಿದೆ.

‘ನಾನು ಹಿಂದೂ ಅಸ್ಪೃಶ್ಯ ಸಮುದಾಯದಲ್ಲಿ ಜನಿಸಿದ್ದು ಆಕಸ್ಮಿಕ. ಹುಟ್ಟು ನನ್ನ ಕೈಯಲ್ಲಿ ಇರಲಿಲ್ಲ. ಆದರೆ ನಾನು ಹಿಂದೂವಾಗಿ ಸಾಯುವುದಿಲ್ಲ. ಈ ತೀರ್ಮಾನ ಕೈಗೊಳ್ಳುವ ಸಾಮರ್ಥ್ಯ ನನಗಿದೆ’ ಎಂದು ಅಂಬೇಡ್ಕರ್ ಸ್ಪಷ್ಟವಾಗಿ ಘೋಷಿಸಿದ್ದರು. 1935ರ ಅಕ್ಟೋಬರ್ 13ರಂದು ಮುಂಬೈ ಸಮೀಪದ ಯವೋಳದಲ್ಲಿ ನಡೆದ ಶೋಷಿತ ಸಮುದಾಯದ ಸಮ್ಮೇಳನದಲ್ಲಿ ಹಿಂದುತ್ವವಾದಿಗಳನ್ನು ಅವರು ತರಾಟೆಗೆ ತೆಗೆದುಕೊಂಡಿದ್ದರು.

ತಾನು ಹಿಂದೂವಾಗಿ ಸಾಯುವುದಿಲ್ಲ ಎಂದು ಘೋಷಿಸಿದ ಕೆಲವೇ ತಿಂಗಳಲ್ಲಿ ಹಿಂದುತ್ವದ ಜನ್ಮಜಾಲಾಡುವ ಜಾತಿ ವಿನಾಶ ಎಂಬ ಗ್ರಂಥವನ್ನು ಬಾಬಾ ಸಾಹೇಬರು ರಚಿಸಿದರು. ಇದು ಬಾಬಾ ಸಾಹೇಬರು ಕೊನೆಯ ದಿನಗಳಲ್ಲಿ ಮಾಡಿದ ಭಾಷಣ ಮತ್ತು ಬರಹಗಳು. ಇದರಿಂದ ಹಿಂದುತ್ವದ ಬಗ್ಗೆ ಬಾಬಾ ಸಾಹೇಬರ ನಿಲುವು ಏನಾಗಿತ್ತು ಎಂಬುದು ಸ್ಪಷ್ಟವಾಗುತ್ತದೆ.

ವಾಸ್ತವಾಂಶ ಹೀಗಿರುವಾಗ, ಕೋಮುವಾದಿ , ಮನುವಾದಿ ಸಂಘಟನೆಗಳು ನಾಚಿಕೆ ಇಲ್ಲದೇ ಅಂಬೇಡ್ಕರ್ ತಮ್ಮವರು ಎಂದು ಹೇಳಿಕೊಳ್ಳಲು ಹೊರಟಿವೆ. ಸಂಘದ ಪಥಸಂಚಲನಗಳಲ್ಲಿ ಹೆಡ್ಗೆವಾರ್, ಗೋಳ್ವಾಲ್ಕರ್ ಪಕ್ಕದಲ್ಲಿ ಅಂಬೇಡ್ಕರ್ ಫೋಟೊ ಇಟ್ಟು ಅಸ್ಪೃಶ್ಯ ಸಮುದಾಯವನ್ನು ಹಿಂದುತ್ವದ ವಿಷ ವರ್ತುಲ ದಲ್ಲಿ ಸೇರಿಸಿಕೊಳ್ಳುವ ಯತ್ನ ನಡೆಸಿದೆ.

ಒಂದು ಸುಳ್ಳನ್ನು ನೂರು ಬಾರಿ ಹೇಳಿದರೆ ಸತ್ಯವಾಗುತ್ತದೆ. ಜನ ಅದನ್ನು ನಂಬುತ್ತಾರೆ ಎಂದು ಜರ್ಮನಿಯ ಫ್ಯಾಶಿಸ್ಟ್

ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರನ ಪ್ರಚಾರ ಮಂತ್ರಿ ಗೋಬಲ್ಸ್ ಹೇಳುತ್ತಿದ್ದ. ಅಂಥ ಹಿಟ್ಲರ್ ಆರಾಧಕರು ಗೋಬಲ್ಸ್ ರೀತಿಯಲ್ಲಿ ಸುಳ್ಳನ್ನು ನೂರು ಬಾರಿ ಹೇಳಿ ಸತ್ಯವನ್ನು ನಂಬಿಸಲು ಹೊರಟಿದ್ದಾರೆ. ಆದರೆ ಇದು ಅವರಿಗೆ ತಿರುಗುಬಾಣವಾಗುತ್ತದೆ.

ಕಳೆದ ಶತಮಾನದ ಆರಂಭದಲ್ಲಿ ಜ್ಯೋತಿಬಾ ಫುಲೆ, ಅಗರ್ಕರ್, ಶಾಹು ಮಹಾರಾಜರ ಹೊಡೆತದಿಂದ ತತ್ತರಿಸಿದ ಮನುವಾದಿಗಳು ತಮ್ಮ ಜಾತಿಯ ರಕ್ಷಣೆಗಾಗಿ 1925ರಲ್ಲಿ ನಾಗಪುರದಲ್ಲಿ ಸಂಘಟನೆಯೊಂದನ್ನು ಕಟ್ಟಿಕೊಂಡರು. ಹಿಂದುತ್ವದ ಸೋಗು ಹಾಕಿ ಬಂಡೆದ್ದ ದಲಿತ ಮತ್ತು ಹಿಂದುಳಿದ ಸಮುದಾಯಗಳನ್ನು ವರ್ಣಾಶ್ರಮ ಧರ್ಮದ ಚೌಕಟ್ಟಿನಲ್ಲಿ ಕೂಡಿಸಲು ಸಂಚು ರೂಪಿಸಿದರು.

ಈ ಸಂಚಿನ ಭಾಗವಾಗಿ ಪುರೋಹಿತಶಾಹಿ ವಿರುದ್ಧ ಬಂಡೆದ್ದವರನ್ನೆಲ್ಲ ತನ್ನವರೆಂದು ಹೇಳಿಕೊಳ್ಳಲು ಹೊರಟಿದ್ದಾರೆ. ಮುಸ್ಲಿಮ್ ವಿರೋಧಿಯಾಗಿರದ ಸೌಹಾರ್ದ ಭಾರತಕ್ಕಾಗಿ ಜೀವ ತೆತ್ತ ಮಹಾತ್ಮ್ಮಾ ಗಾಂಧೀಜಿಯವರನ್ನು ಮುಗಿಸಿದವರು ಈಗ 1933ರಲ್ಲಿ ತಮ್ಮ ಶಾಖೆಗೆ ಗಾಂಧಿ ಭೇಟಿ ನೀಡಿ ಸಂಘವನ್ನು ಹೊಗಳಿದ್ದರೆಂದು ಸುಳ್ಳು ಹೇಳುತ್ತಿದ್ದಾರೆ. ಆದರೆ ಇದಕ್ಕೆ ಯಾವುದೇ ಚಾರಿತ್ರಿಕ ಆಧಾರವಿಲ್ಲ.

ಗಾಂಧೀಜಿ ಬರೆದ ಯಾವ ಪುಸ್ತಕದಲ್ಲಿ ಇದರ ಬಗ್ಗೆ ಎಲ್ಲಿಯೂ ಉಲ್ಲೇಖವಿಲ್ಲ.

ಇದೇ ರೀತಿ ಡಾ. ಅಂಬೇಡ್ಕರ್ ಬದುಕಿದ್ದಾಗ, ಸಂಘದ ಶಾಖೆಗೆ ಭೇಟಿ ನೀಡಿ ಸಂಘದ ಸಾಧನೆಗಳನ್ನು ಹೊಗಳಿದ್ದರು ಎಂದು

ಇನ್ನೊಂದು ಸುಳ್ಳನ್ನು ಸೃಷ್ಟಿಸಲಾಗಿದೆ. ತಮ್ನ ಸಂಘದ ಸಂಸ್ಥಾಪಕ ಕೇಶವ ಬಲಿರಾಮ ಹೆಡ್ಗೆವಾರ್‌ಗೆ ಬಾಬಾ ಸಾಹೇಬರು ಆತ್ಮೀಯ ಮಿತ್ರರಾಗಿದ್ದರು ಎಂದು ಇನ್ನೊಂದು ಸುಳ್ಳನ್ನು ಸೃಷ್ಟಿಸಲಾಗಿದೆ. ಇದಕ್ಕೂ ಯಾವುದೇ ಚಾರಿತ್ರಿಕ ಸಾಕ್ಷ್ಯಾಧಾರಗಳಿಲ್ಲ. ಫೋಟೊಗಳಿಲ್ಲ. ಅಂಬೇಡ್ಕರರು ತಮ್ಮ ಪುಸ್ತಕಗಳಲ್ಲಿ, ಪತ್ರಿಕೆಯಲ್ಲಿ ಎಲ್ಲಿಯೂ ಇದರ ಪ್ರಸ್ತಾಪ ಮಾಡಿಲ್ಲ.

ಡಾ. ಅಂಬೇಡ್ಕರ್ ಸ್ವ್ವತಂತ್ರ್ಯ ಕಾರ್ಮಿಕ ಪಕ್ಷ ಕಟ್ಟಿದ್ದಕ್ಕೆ ದಾಖಲೆಗಳಿವೆ. ಕಮ್ಯುನಿಸ್ಟರ ಜೊತೆ ಸೇರಿ ಮುಂಬೈ ಜವಳಿ ಕಾರ್ಮಿಕರ ಮುಷ್ಕರ ನಡೆಸಿದ್ದಕ್ಕೆ ಸಾಕ್ಷ್ಯಾಧಾರಗಳಿವೆ. ಮಹಾಡ್ ಸತ್ಯಾಗ್ರಹದಲ್ಲಿ ಅಂಬೇಡ್ಕರ್ ಜೊತೆಗೆ ಕಮ್ಯುನಿಸ್ಟ್ ನಾಯಕ ಆರ್.ಬಿ.ಮೋರೆಯವರು ಪಾಲ್ಗೊಂಡ ಬಗ್ಗೆ ಪುರಾವೆಗಳಿವೆ. ಸಮಾಜವಾದಿ ನಾಯಕ ರಾಮ ಮನೋಹರ ಲೋಹಿಯಾ ಅವರಿಗೆ ಪತ್ರ ಬರೆದಿರುವ ಬಗ್ಗೆ ದಾಖಲೆಗಳಿವೆ. ಸಾವರ್ಕರ್‌ರ ಹಿಂದೂ ಮಹಾಸಭೆಯ ಜೊತೆಗಿನ ಮೈತ್ರಿ ತಿರಸ್ಕರಿಸಿದ್ದಕ್ಕೆ ದಾಖಲೆಗಳಿವೆ. ಆದರೆ ಸಂಘದ ಶಾಖೆಗೆ ಭೇಟಿ ನೀಡಿದ ಮತ್ತು ಹೆಡ್ಗೆವಾರ್‌ರ ಜೊತೆ ಸ್ನೇಹ ಸಂಬಂಧ ಹೊಂದಿದ್ದರ ಕುರಿತು ದಾಖಲೆಗಳಿಲ್ಲ.

ಈಗಂತೂ ಮನುವಾದವನ್ನು ವಿರೋಧಿಸುವವರನ್ನೆಲ್ಲ ಸಾರಾಸಗಟಾಗಿ ರಾಷ್ಟ್ರದ್ರೋಹಿಗಳೆಂದು ಆರೆಸ್ಸೆಸ್ ಬಿಂಬಿಸುತ್ತಿದೆ. ಭಾರತ ಮಾತಾ ಕಿ ಜೈ ಎಂದು ಹೇಳದವರ ರುಂಡ ಹಾರಿಸುವುದಾಗಿ ಕಾವಿ ವೇಷದ ಕಾರ್ಪೊರೇಟ್ ಉದ್ಯಮಿ ಬಾಬಾ ರಾಮದೇವ್ ಹೇಳುತ್ತಾರೆೆ.

ಈ ಹಿಂದೆ ಮುಸಲ್ಮಾನರು ಪ್ರತಿನಿತ್ಯ ತಮ್ಮ ರಾಷ್ಟ್ರನಿಷ್ಠೆಯನ್ನು ಈ ನಕಲಿ ದೇಶಭಕ್ತರ ಎದುರು ಸಾಬೀತುಪಡಿಸಬೇಕಿತ್ತು. ಈಗ

ದಲಿತರಿಗೂ ಅಂತಹ ಸ್ಥಿತಿ ಬಂದಿದೆ. ಶ್ರೇಣೀಕೃತ ಜಾತಿ ಪದ್ಧತಿಯನ್ನು ವಿರೋಧಿಸುವ ದಮನಿತ ಸಮುದಾಯಗಳನ್ನೆಲ್ಲ ದೇಶದ್ರೋಹಿ ಎಂದು ಬಿಂಬಿಸುವ ಯತ್ನ ನಡೆದಿದೆ.

ಒಂದೆಡೆ ಅಂಬೇಡ್ಕರರ ಜಯಕಾರದ ನಾಟಕವಾಡುತ್ತಲೇ, ಇನ್ನೊಂದೆಡೆ ಅವರ ತೇಜೋವ ಧೆಯನ್ನು ಮಾಡಲಾಗುತ್ತದೆ.ಉತ್ತರ ಪ್ರದೇಶದ ಬಿಜೆಪಿ ನಾಯಕಿಯೊಬ್ಬರು, ಒಂದು ಕಾಲದಲ್ಲಿ ನಮ್ಮ ಚಪ್ಪಲಿ ಒರೆಸುತ್ತಿದ್ದವರು ಸಂವಿಧಾನದ ಬಲದಿಂದ ಅಧಿಕಾರಕ್ಕೆ ಬಂದಿದ್ದಾರೆ ಎಂದು ಛೇಡಿಸಿದ್ದರು.

ಇನ್ನೊಂದೆಡೆ ಅಂಬೇಡ್ಕರರು ಮುಸ್ಲಿಮ್ ವಿರೋಧಿಯಾಗಿದ್ದರೆಂದು ಸುಳ್ಳು ಇತಿಹಾಸ ಸೃಷ್ಟಿಸುವ ಮಸಲತ್ತು ನಡೆದಿದೆ. ಆದರೆ ಅಂಬೇಡ್ಕರ್ ಎಲ್ಲಿಯೂ ಈ ರೀತಿ ಹೇಳಿಲ್ಲ. ಇದಕ್ಕೆ ಬದಲಾಗಿ ಸಂಘ ಪರಿವಾರದ ಹಿಂದೂ ರಾಷ್ಟ್ರದ ಸಿದ್ಧಾಂತವನ್ನು ಬಾಬಾ ಸಾಹೇಬರು ಕಟುವಾಗಿ ವಿರೋಧಿಸಿದ್ದರು. ಒಂದು ವೇಳೆ ಹಿಂದೂರಾಷ್ಟ್ರ ಸ್ಥಾಪಿಸಲ್ಪಟ್ಟರೆ, ಅದು ದೇಶಕ್ಕೆ ಒಂದು ಆಪತ್ತು ಆಗುತ್ತದೆ ಎಂದು ಅಂಬೇಡ್ಕರ್ ಸ್ಪಷ್ಟವಾಗಿ ಹೇಳಿದ್ದರು.

ಉಳಿದವರನ್ನು ಮನುವಾದದ ಬುಟ್ಟಿಗೆ ಹಾಕಿಕೊಂಡಂತೆ, ಅಂಬೇಡ್ಕರ್ ಅವರನ್ನು ಸುಲಭವಾಗಿ ಬುಟ್ಟಿಗೆ ಹಾಕಿಕೊಳ್ಳಲು ಸಾಧ್ಯವಿಲ್ಲ. ಬಾಬಾ ಸಾಹೇಬರು ಬೆಂಕಿ ಇದ್ದಂತೆ. ಅವರನ್ನು ನುಂಗಲು ಹೊರಟರೆ, ಗಂಟಲು ಸುಟ್ಟುಕೊಳ್ಳಬೇಕಾಗುತ್ತದೆ. ಬಾಬಾ ಸಾಹೇಬರು ಸುಮ್ಮನೆ ಹೋಗಿಲ್ಲ. ನೂರಾರು ಪುಸ್ತಕಗಳನ್ನು ಬರೆದು ಉಳಿಸಿ ಹೋಗಿದ್ದಾರೆ. ಈ ಪುಸ್ತಕಗಳೇ ದಲಿತ ಸಮುದಾಯಕ್ಕೆ ಬೆಳಕಿನ ಜ್ಯೋತಿಯಾಗಿವೆ. ಈ ದೀವಟಿಗೆ ಹಿಡಿದು ಹೊರಟವರನ್ನು ಹತ್ತಿಕ್ಕಲು ಹುನ್ನಾರ ನಡೆದಿದೆ.

ಅಂದಿನ ದ್ರೋಣಾಚಾರ್ಯರು ಏಕಲವ್ಯನ ಹೆಬ್ಬೆರಳನ್ನು ಗುರುದಕ್ಷಿಣೆಗಾಗಿ ಕೇಳಿದ್ದರು. ಇಂದಿನ ಈ ಚಡ್ಡಿ ದ್ರೋಣಾಚಾರ್ಯರು ಬೆರಳನ್ನಲ್ಲ, ಕೊರಳನ್ನೇ ಕೇಳುತ್ತಿದ್ದಾರೆ. ರೋಹಿತ್ ವೇಮುಲಾ ಇವರ ಹುನ್ನಾರಕ್ಕೆ ಬಲಿಯಾದರು.

ಈ ಸನ್ನಿವೇಶದಲ್ಲಿ ಬಾಬಾ ಸಾಹೇಬರ ಜಯಂತಿ ಮತ್ತೆ ಬಂದಿದೆ. ಮನುವಾದ, ಬಂಡವಾಳಶಾಹಿ, ಬ್ರಾಹ್ಮಣವಾದದಿಂದ ಆಝಾದಿ ಪಡೆದರೆ ಮಾತ್ರ ಜಾತಿ ಮುಕ್ತ ಮತ್ತು ವರ್ಗಭೇದವಿಲ್ಲದ ರಾಷ್ಟ್ರವನ್ನು ಕಟ್ಟಲು ಸಾಧ್ಯ ಎಂಬುದು ಹಗಲಿನಷ್ಟು ನಿಚ್ಚಳವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಸನತ್ ಕುಮಾರ್ ಬೆಳಗಲಿ

contributor

Similar News