ಮಿತಿ ಮೀರಿದ ಮಾಲಿನ್ಯ, ಸುಪ್ರೀಂ ಕೋರ್ಟ್ ತರಾಟೆ
ರಾಜಧಾನಿ ದಿಲ್ಲಿ ಸೇರಿದಂತೆ ಭಾರತದ ಬಹುತೇಕ ಮಹಾನಗರಗಳಲ್ಲಿ ವಾಯುಮಾಲಿನ್ಯ ಮಿತಿ ಮೀರಿದೆ. ರಾಜಧಾನಿ ದಿಲ್ಲಿಯಲ್ಲಂತೂ ಉಸಿರಾಡಲು ಜನಸಾಮಾನ್ಯರು ಪರದಾಡಬೇಕಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮತ್ತು ಚಳಿಗಾಲದಲ್ಲಿ ವಾಯುಮಾಲಿನ್ಯ ಅಪಾಯಕಾರಿ ಮಟ್ಟ ತಲುಪುತ್ತಿದೆ. ಈ ವಾಯುಮಾಲಿನ್ಯಕ್ಕೆ ಕಾರಣವಾದ ಪಟಾಕಿ ಸಿಡಿಸುವುದನ್ನು ತಡೆಯಲು ಸರಕಾರ ವಿಫಲ ಗೊಂಡಿದೆ ಎಂದು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಆದರೆ, ದೇಶವನ್ನು ಆಳುವವರಿಗೆ ಇದರ ಖಬರಿಲ್ಲ. ಸದಾ ಸುಳ್ಳು ಹೇಳುವ ನಮ್ಮ ವಿಶ್ವಗುರುಗಳು ಮಹಾರಾಷ್ಟ್ರದಲ್ಲಿ ತಮ್ಮ ಪಕ್ಷದ ಚುನಾವಣಾ ಪ್ರಚಾರ ಮಾಡುತ್ತ, ದೇಶದ ಎಲ್ಲ ಸಮಸ್ಯೆಗಳಿಗೆ ಹತ್ತು ವರ್ಷದ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷವೇ ಕಾರಣ ಎಂದು ರೈಲು ಬಿಡುತ್ತಿದ್ದಾರೆ.
ಹಬ್ಬ, ಉತ್ಸವಗಳ ಸಂದರ್ಭದಲ್ಲಿ, ಯಾವುದೇ ಚುನಾವಣೆಯಲ್ಲಿ ಗೆಲುವು ಸಾಧಿಸಿದಾಗ ನಡೆಯುವ ಮೆರವಣಿಗೆಯಲ್ಲಿ ಈ ಪಟಾಕಿ ವಿಪರೀತವಾಗುತ್ತದೆ. ಇದರಿಂದ ಪಟಾಕಿ ಹಾರಿಸಿದವರಿಗೆ ಯಾವ ಪ್ರಯೋಜನವಾಗುತ್ತದೆ ಎಂಬುದು ತಿಳಿಯದ ಸಂಗತಿ. ಆದರೆ, ಪಟಾಕಿಯ ಪರಿಣಾಮವಾಗಿ ಜನರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಇದನ್ನು ಗಮನಿಸಿದ ಸುಪ್ರೀಂ ಕೋರ್ಟ್ ಪಟಾಕಿ ಸಿಡಿಸುವುದು ತಮ್ಮ ಹಕ್ಕು ಎಂದು ಹೇಳುವವರನ್ನು ತರಾಟೆಗೆ ತೆಗೆದುಕೊಂಡಿದೆ. ಜನರನ್ನು ಯಾತನೆಗೆ ಗುರಿಪಡಿಸಿ ಸಂಭ್ರಮಿಸುವುದರಲ್ಲಿ ಅರ್ಥವಿಲ್ಲ . ಆದರೆ, ಈ ದೇಶದ ಆಳುವ ವರ್ಗಗಳಿಗೆ ವಾಯು ಮಾಲಿನ್ಯ ನಿವಾರಣೆ ಆದ್ಯತೆಯ ವಿಷಯವಲ್ಲ.
ಆದರೆ, ಪಟಾಕಿ ಮಾತ್ರವಲ್ಲ ವಿಪರೀತವಾಗಿ ಹೆಚ್ಚುತ್ತಿರುವ ವಾಹನ ಸಂಖ್ಯೆ ಮತ್ತು ಕೈಗಾರಿಕೆಗಳ ಮಾಲಿನ್ಯ ಕೂಡ ಪರಿಸ್ಥಿತಿ ಹದಗೆಡಲು ಕಾರಣ. ಈ ಮಾಲಿನ್ಯದಿಂದ ದಿಲ್ಲಿ ಮಾತ್ರವಲ್ಲ ಬೆಂಗಳೂರು, ಮಂಗಳೂರು ಸೇರಿದಂತೆ ಎಲ್ಲ ನಗರಗಳಲ್ಲೂ ವಾಯುಮಾಲಿನ್ಯ ಹೆಚ್ಚುತ್ತಿದೆ. ಇದರಿಂದ ಅಸ್ತಮಾ ಮುಂತಾದ ಶ್ವಾಸಕೋಶದ ಸಮಸ್ಯೆಗಳು ಹೆಚ್ಚುತ್ತಿವೆ. ಕ್ಯಾನ್ಸರ್‌ಗೂ ಕೂಡ ಇದೂ ಒಂದು ಕಾರಣ ಎಂದು ಖಚಿತವಾಗಿದೆ. ಇವು ಮಾತ್ರವಲ್ಲದೇ, ಹಲವಾರು ಹೊಸ ಕಾಯಿಲೆಗಳಿಗೆ ಇದು ಕಾರಣವಾಗಿದೆ. ಯಾವುದೇ ಕಾಯಿಲೆ ವ್ಯಾಪಕವಾಗಿ ಹಬ್ಬಿದರೆ, ಆಸ್ಪತ್ರೆಗೆ ಹೋಗಿ ಔಷಧಿಗಳ ಮೊರೆ ಹೋಗುವುದು ಈ ಸಮಸ್ಯೆಗೆ ಶಾಶ್ವತ ಪರಿಹಾರವಲ್ಲ. ಇದರ ಜೊತೆಗೆ ಉಸಿರಾಡುವ ಗಾಳಿ, ಕುಡಿಯುವ ನೀರು ಮುಂತಾದವು ಸುರಕ್ಷಿತವಾಗಿ ಇಟ್ಟುಕೊಳ್ಳದಿದ್ದರೆ ಯಾವ ಆಸ್ಪತ್ರೆಯ ವೈದ್ಯರಿಂದಲೂ ಇದಕ್ಕೆ ಪರಿಹಾರ ಸಿಗಲು ಸಾಧ್ಯವಿಲ್ಲ.
ಇಂಥ ವಾಯುಮಾಲಿನ್ಯಕ್ಕೆ ಎಲ್ಲಕ್ಕಿಂತ ಮುಖ್ಯವಾಗಿ 90ರ ದಶಕದಲ್ಲಿ ಜಾಗತೀಕರಣದ ಹೆಸರಿನಲ್ಲಿ ಆರಂಭವಾದ ಅಭಿವೃದ್ಧಿ ಮತ್ತು ಮಾರುಕಟ್ಟೆ ಆರ್ಥಿಕತೆ ಕಾರಣ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ನೂರಾರು ವರ್ಷಗಳ ಹಿಂದಿನ ಭಾರತವನ್ನು ಅಂದರೆ, ಜಾತಿ ಮತೀಯ ರಾಜ್ಯ ನಿರ್ಮಿಸಲು ಹೊರಟವರಿಗೆ ಇದು ಅರ್ಥ ಆಗುವುದಿಲ್ಲ. ವಾಹನಗಳ ಸಂಖ್ಯೆಯನ್ನು ಕಡಿಮೆ ಮಾಡಲು ಕಾರ್ಪೊರೇಟ್ ಪರ ಸರಕಾರ ಆಸಕ್ತಿ ಹೊಂದಿಲ್ಲ.
ಸಕಲರ ಲೇಸು ಬಯಸುವ ಸೋವಿಯತ್ ರಶ್ಯದ ಸಮತಾ ಭವನ ಕುಸಿದುಬಿದ್ದ ನಂತರ ಜಗತ್ತಿನ ಸ್ವರೂಪವೇ ಬದಲಾಗಿದೆ. ಈ ಭೂಮಿ ಕೂಡ ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ಬಂಡವಾಳ ಶಾಹಿ ಅಭಿವೃದ್ಧಿ ಮಾರ್ಗದ ಪರಿಣಾಮವಾಗಿ ತತ್ತರಿಸಿ ಹೋಗಿದೆ. ಈಗಲಂತೂ ಪರಿಸ್ಥಿತಿ ಎಷ್ಟು ಹದಗೆಟ್ಟಿದೆಯೆಂದರೆ ಮುಂದಿನ ನೂರು ವರ್ಷಗಳಲ್ಲಿ ಜನರಿಗೆ ಬೇರೆ ಗ್ರಹಕ್ಕೆ ಹೋಗಲೇಬೇಕಾದ ಪರಿಸ್ಥಿತಿ ಎದುರಾಗಬಹುದು ಎಂದು ಹೆಸರಾಂತ ಭೌತಶಾಸ್ತ್ರಜ್ಞ ಸ್ಟೀಫನ್ ಹಾಕಿಂಗ್ ಹೇಳಿದ ಮಾತು ತಳ್ಳಿಹಾಕುವಂತಿಲ್ಲ.
ಈ ಮಾಲಿನ್ಯ ಜಾತಿ, ಮತದ ಕೊಚ್ಚೆಯಲ್ಲಿ ಬಿದ್ದಿರುವ ಭಕ್ತರಿಗೆ ಅರ್ಥವಾಗುವುದಿಲ್ಲ. ಎಲ್ಲಾದರೂ ಭೂಮಿ ನಡುಗಿದರೆ ಅಥವಾ ಸುನಾಮಿ ಬಂದರೆ ಯಜ್ಞ, ಹೋಮ ಮಾಡಿ ಹೊಗೆ ಎಬ್ಬಿಸುವ ಇವರಲ್ಲಿ ವೈಜ್ಞಾನಿಕ ಮನೋಭಾವ ಸಾಧ್ಯವಿಲ್ಲ. ಇವರ ಸಿದ್ಧಾಂತದಲ್ಲಿ ಪರಿಸರ ಹಾಗೂ ಮನುಷ್ಯನ ಏಳ್ಗೆಯ ವಿಷಯಗಳಿಗೆ ಜಾಗವಿಲ್ಲ. ನಮ್ಮ ವಿಶ್ವಗುರುಗಳಿಗೆ ಜಾತಿ, ಮತದ ಹೆಸರಿನಲ್ಲಿ ಭಾರತೀಯರನ್ನು ವಿಭಜಿಸಿ ಚುನಾವಣೆಯಲ್ಲಿ ಗೆಲ್ಲುವುದು ಬಿಟ್ಟರೆ, ಬೇರೇನೂ ಗೊತ್ತಿಲ್ಲ.
ಕುಡಿಯುವ ನೀರು ಮತ್ತು ಉಸಿರಾಡುವ ಗಾಳಿ ಮಲಿನಗೊಂಡರೆ ಬದುಕಲು ಅಸಾಧ್ಯವಾದ ಪರಿಸ್ಥಿತಿ ಎದುರಾಗುತ್ತದೆ. ಅಧಿಕೃತ ಅಂಕಿ ಅಂಶಗಳ ಪ್ರಕಾರ, 2015ರಲ್ಲಿ ಮಾಲಿನ್ಯದ ಪರಿಣಾಮವಾಗಿ 26 ಲಕ್ಷ ಜನ ಅಸುನೀಗಿದ್ದಾರೆ. ಈ ಪೈಕಿ ಹೆಚ್ಚು ಸಾವುಗಳು ಮಾಲಿನ್ಯದ ಕಾರಣಕ್ಕಾಗಿ ಸಂಭವಿಸಿವೆ. ಈ ವಾಯುಮಾಲಿನ್ಯ ತಡೆಯಲು ಸುರಕ್ಷಿತ ಯೋಜನೆಯನ್ನು ರೂಪಿಸಬೇಕಾದ ವಿಶ್ವಗುರುವಿನ ಸರಕಾರ ಜನಸಾಮಾನ್ಯರನ್ನು ಕೋಮು ಹಿಂಸಾಚಾರದಲ್ಲಿ ಮುಳುಗಿಸಿ ಅಧಿಕಾರ ಉಳಿಸಿಕೊಳ್ಳುವ ಅಪಾಯಕಾರಿ ಆಟದಲ್ಲಿ ತೊಡಗಿದೆ.
ನಾಶವಾಗುತ್ತಿರುವ ನೈಸರ್ಗಿಕ ಪರಿಸರ, ಅತಿರೇಕದ ಗಡಿ ದಾಟಿದ ಅಸಮಾನತೆ , ಮುಸ್ಲಿಮ್ ಮತ್ತಿತರ ಅಲ್ಪಸಂಖ್ಯಾತರ ಮೇಲೆ ನಿತ್ಯ ನಡೆಯುವ ದಾಳಿ ಮತ್ತು ಹಿಂಸೆ ಇವುಗಳಿಂದ ಭಾರತದ ಪ್ರಜಾಪ್ರಭುತ್ವ ಅಪಾಯಕ್ಕೆ ಸಿಲುಕಿದೆ.
ಭಾರತ ಸೇರಿದಂತೆ ಈ ಜಗತ್ತನ್ನು ಉಳಿಸಬೇಕಾದರೆ ಲಾಭಕೋರ, ಬಂಡವಾಳಶಾಹಿ ಅಭಿವೃದ್ಧಿ ಮಾರ್ಗವನ್ನು ತೊರೆಯ ಬೇಕು. ಆದರೆ, ಕೋಮುವಾದಿಗಳಿಗೆ ಇಂಥ ಜ್ವಲಂತ ಸಮಸ್ಯೆಗಳು ಕಾಣುತ್ತಿಲ್ಲ. ಇವುಗಳ ಬಗ್ಗೆ ಚರ್ಚೆಯಾಗದಂತೆ ಕೋಮು ಮತ್ತು ಜಾತಿ ದ್ವೇಷದ ವಾತಾವರಣವನ್ನು ನಿರ್ಮಿಸುತ್ತಿದ್ದಾರೆ. ಈಗ ಚರ್ಚೆಯಾಗಬೇಕಾಗಿರುವುದು ಬಡತನ, ನಿರುದ್ಯೋಗ, ಜಾತೀಯತೆ ಮುಂತಾದ ಜ್ವಲಂತ ಸಮಸ್ಯೆಗಳ ಬಗ್ಗೆ ಎಂಬುದನ್ನು ಮರೆಯಬಾರದು. ಈ ಸಮಸ್ಯೆಗಳನ್ನು ಬದಿಗೊತ್ತಿ ಕೋಮು ಆಧಾರದಲ್ಲಿ ಭಾರತವನ್ನು ವಿಭಜಿಸಿ ಅಶಾಂತಿ ಉಂಟು ಮಾಡುವ ಹುನ್ನಾರ ನಡೆದಿದೆ. ನಮ್ಮ ವಿಶ್ವಗುರುಗಳು ಉದ್ಯಮಪತಿ ಅಲ್ಲವಾದರೂ ಅವರ ಸೇವೆ ಮಾಡುವುದನ್ನು ಪಣ ತೊಟ್ಟವರು. ಇಂಥ ಪರಿಸ್ಥಿತಿಯಲ್ಲಿ ಈ ಜಗತ್ತು ಮತ್ತು ಭಾರತವನ್ನು ಉಳಿಸಿಕೊಳ್ಳಲು ವಿಶ್ವವ್ಯಾಪಿ ಬಹುದೊಡ್ಡ ಜನಾಂದೋಲನ ನಡೆಯಬೇಕಾಗಿದೆ.