ಮೀಸಲಾತಿ ಒಳಗಿನ ರಾಜಕಾರಣ
ವಾಸ್ತವವಾಗಿ ಯಾರು ಎಷ್ಟೇ ಹೋರಾಟ ಮಾಡಿದರೂ ಪಂಚಮ ಸಾಲಿ ಸೇರಿದಂತೆ ಯಾವುದೇ ಮುಂದುವರಿದ ಜಾತಿಯನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಲು ಸಾಧ್ಯವಾಗುವುದಿಲ್ಲ. ಸಂವಿಧಾನದಲ್ಲಿ ಇದಕ್ಕೆ ಅವಕಾಶವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದ್ದಾರೆ. ಇದು ಉತ್ತರ ಕರ್ನಾಟಕದಲ್ಲಿ ಇರುವ ಬಿಜೆಪಿ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳಿಗೂ ಗೊತ್ತು. ಆದರೆ ಇದು ಗೊತ್ತಿದ್ದರೂ, ಬೇರೆ, ಬೇರೆ ಕಾರಣಗಳಿಗಾಗಿ ಬಿಜೆಪಿ ಸೇರಿದಂತೆ ಸಂಘ ಪರಿವಾರದ ಎಲ್ಲ ಸಂಘಟನೆಗಳು ಇದನ್ನು ಬೆಂಬಲಿಸುತ್ತಿವೆ.
ಸಿದ್ಧಾಂತ ಯಾವುದೇ ಆಗಿರಲಿ ಅದನ್ನು ಕಾರ್ಯಗತಗೊಳಿಸಲು ಮುಂಚೂಣಿ ನಾಯಕತ್ವ ಬೇಕು. ಅದಕ್ಕಾಗಿ ನಡೆಯುವ ಚಳವಳಿ, ಹೋರಾಟಗಳ ನೇತೃತ್ವ ವಹಿಸುವ ನೇತಾರ ಪರಿಶುದ್ಧ, ಪಾರದರ್ಶಕ ವ್ಯಕ್ತಿತ್ವ ಹೊಂದಿರಬೇಕು. ಇವರನ್ನು ಐಕಾನ್‌ಗಳೆಂದು, ರೋಲ್ ಮಾಡೆಲ್‌ಗಳೆಂದು, ಮಹಾಪುರುಷರೆಂದೂ ಕರೆಯುತ್ತೇವೆ. ಸ್ವಾತಂತ್ರ್ಯ ಚಳವಳಿ ಕಾಲದಲ್ಲಿ ಇಂತಹ ಸರಳ ನಾಯಕರಿದ್ದರು. ಅವರ ನಡುವೆ ಎಷ್ಟೇ ಭಿನ್ನಾಭಿಪ್ರಾಯ ಇರಲಿ ಗಾಂಧೀಜಿಯನ್ನು ‘ಮಹಾತ್ಮಾ’ ಎಂದೂ ಬಾಬಾಸಾಹೇಬರನ್ನು ‘ಭಾರತದ ಭಾಗ್ಯವಿಧಾತ’ ಎಂದೂ ಕೋಟಿ, ಕೋಟಿ ಜನ ಸ್ಮರಿಸುತ್ತಾರೆ.
ನುಡಿದಂತೆ ನಡೆಯುವುದು ಇವರ ಹಿರಿಮೆ. ಈ ದೇಶದ ಬಹುದೊಡ್ಡ ನ್ಯಾಯವಾದಿಯಾಗಿದ್ದ ಅಂಬೇಡ್ಕರ್ ಹಣವನ್ನು ಕಣ್ಣೆತ್ತಿ ನೋಡದೆ ಸಾಲದಲ್ಲಿ ಕೊನೆಯುಸಿರೆಳೆದರು. ಆಧುನಿಕ ಭಾರತಕ್ಕೆ ಸಂವಿಧಾನ ಎಂಬ ಎಂದೂ ನಂದದ ಬೆಳಕನ್ನು ನೀಡಿ ಹೋದರು. ಬಾಪೂ ಕೂಡ ಸೌಹಾರ್ದ ಭಾರತಕ್ಕಾಗಿ ಗುಂಡಿಗೆ ಎದೆಯೊಡ್ಡಿ ಹುತಾತ್ಮರಾದರು.
ಈಗೆಲ್ಲಿ ಇದ್ದಾರೆ ಇಂತಹ ಐಕಾನ್‌ಗಳು? ಮಾರುಕಟ್ಟೆಯ ಆರ್ಥಿಕತೆಯಲ್ಲಿ ವ್ಯಾಪಾರದ ಸರಕಾಗಿರುವ ತತ್ವಾದರ್ಶಗಳು ಐಷಾರಾಮಿ ಜಗತ್ತಿನಲ್ಲಿ ತಬ್ಬಲಿಗಳಾಗಿವೆ. ಎಲ್ಲೆಡೆ ಭ್ರಷ್ಟಾಚಾರ, ಲಂಚಕೋರತನ ತಾಂಡವವಾಡುತ್ತಿವೆ. ಇದು ಮಾತು ಸೋತ ಮಾತ್ರವಲ್ಲ ಮಾತು ಸತ್ತ ಭಾರತದ ವ್ಯಥೆಯ ಕತೆ. ರಾಜಕೀಯ ಮಾತ್ರವಲ್ಲ ಸಮಾಜದ ಎಲ್ಲ ಕ್ಷೇತ್ರಗಳು ಹದಗೆಟ್ಟು ಹೋಗಿವೆ. ಸಮಾಜ ದಾರಿ ತಪ್ಪಿದಾಗ ಮಾರ್ಗದರ್ಶನ ಮಾಡಬೇಕಾದ, ಐಹಿಕ ಬದುಕಿನ ವ್ಯಾಮೋಹವನ್ನು ತೊರೆದು ಪರಮಾತ್ಮನ ನಾಮ ಸ್ಮರಣೆ ಮಾಡಬೇಕೆಂದು ಭಕ್ತರಿಗೆ ಉಪದೇಶ ನೀಡಬೇಕಾದ ಧರ್ಮ ಗುರುಗಳು, ಸ್ವಾಮಿಗಳು, ಮಠಾಧೀಶರು, ಜಗದ್ಗುರುಗಳು ಈಗ ಸಾಂಸಾರಿಕರಿಗಿಂತ ಹೆಚ್ಚು ಪ್ರಾಪಂಚಿಕ ವ್ಯಾಮೋಹವನ್ನು ಹೊಂದಿದ್ದಾರೆ. ಜನರ ಮುಂದೆ ಹೋಗುವ ನೈತಿಕತೆಯನ್ನು ಕಳೆದುಕೊಂಡಿರುವ ಇವರು ತಮ್ಮ ಜಾತಿ, ಉಪಜಾತಿಗಳನ್ನು ಮುಂದೆ ಮಾಡಿ ತಮ್ಮ ಮತ್ತು ತಮ್ಮನ್ನು ಸಾಕುವ ರಾಜಕಾರಣಿಗಳ ಹಿತಾಸಕ್ತಿಯನ್ನು ರಕ್ಷಿಸಲು ಸಲ್ಲದ ಚಳವಳಿಗಳೆಂಬ ಪ್ರಹಸನದಲ್ಲಿ ಮುಳುಗಿದ್ದಾರೆ. ಈ ಭಾರತಕ್ಕೊಂದು ಸಂವಿಧಾನವಿದೆ, ಅದಕ್ಕಿಂತ ಯಾವುದೂ ದೊಡ್ಡದಲ್ಲ ಎಂಬುದು ಗೊತ್ತಿದ್ದರೂ ಸಂವಿಧಾನಾತ್ಮಕವಾಗಿ ಚುನಾಯಿತಗೊಂಡ ಮುಖ್ಯಮಂತ್ರಿಗಳ ಬಗ್ಗೆ ಬಾಯಿಗೆ ಬಂದಂತೆ ಮಾತಾಡುವ, ಸವಾಲು ಹಾಕುವ, ಸ್ವಾಮಿಗಳಿಗೆ ತಾವೇನು ಮಾತಾಡುತ್ತಿದ್ದೇವೆ ಎಂಬ ಅರಿವಿಲ್ಲ. ಮುಂಚೆ ರಾಜಕಾರಣಿಗಳು ಸೇರಿ ಸಮಾಜದ ವಿವಿಧ ಕ್ಷೇತ್ರಗಳ ನಾಯಕರು ಮಠ, ಮಂದಿರಗಳಿಗೆ ಬಂದು ಆಶೀರ್ವಾದ ಪಡೆದು ಹೋಗುತ್ತಿದ್ದರು. ಆದರೆ ಈಗ ಈ ಮಠಾಧೀಶರು ಬೀದಿಗೆ ಬಂದು ಜಾತಿ ಚಳವಳಿಗಳ ನಾಯಕತ್ವ ವಹಿಸುತ್ತಿದ್ದಾರೆ. ಕೆಲವು ಹಣವಂತ ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ಕೋಟ್ಯಂತರ ರೂಪಾಯಿ ಚೆಲ್ಲಿ ತಾವು ಹೇಳಿದಂತೆ ಕೇಳುವ, ಮಠಗಳನ್ನು ಹಾಗೂ ಮಠಾಧೀಶರನ್ನು ಸೃಷ್ಟಿಸುತ್ತಿದ್ದಾರೆ. ಅವರ ಮೂಲಕ ತಮ್ಮದೇ ಸರಕಾರದ ಮೇಲೆ ಒತ್ತಡ ತರುತ್ತಿದ್ದಾರೆ.
ಇಂತಹ ಕೆಲವು ಸ್ವಾಮಿಗಳು ಹಾಗೂ ಮಠಾಧೀಶರ ಪರಿಚಯ ನನಗಿದೆ. ತೊಂಭತ್ತರ ದಶಕದ ನಂತರ ಕೋಮುವಾದದ ಅಪಾಯದ ಕುರಿತು ಜನರನ್ನು ಎಚ್ಚರಿಸಲು ನಾವು (ಪ್ರಗತಿಪರ ಸಂಘಟನೆಗಳು) ನಡೆಸುತ್ತಿದ್ದ ವಿಚಾರ ಗೋಷ್ಠಿಗಳಲ್ಲಿ ಇಂತಹ ಉದಾರವಾದಿಯಾದ ಕೆಲವು ಸ್ವಾಮಿಗಳನ್ನು ಆಗಾಗ ಕರೆಸಿ ಮಾತಾಡಲು ಮೈಕ್ ಕೊಡುತ್ತಿದ್ದೆವು. ಅವರ ಜೊತೆಗೆ ನಾನೂ ವೇದಿಕೆಯನ್ನು ಹಂಚಿಕೊಂಡಿದ್ದೇನೆ. ಬಸವಣ್ಣನವರ ನಾಮ ಸ್ಮರಣೆ ಮಾಡುತ್ತಲೇ ಭಾಷಣ ಆರಂಭಿಸುತ್ತಿದ್ದ ಇವರಲ್ಲಿ ಕೆಲವರು ಈಗ ಜಾತಿ ಮೀಸಲಾತಿ ಚಳವಳಿಯ ನಾಯಕತ್ವವನ್ನು ವಹಿಸಿದ್ದಾರೆ. ಅದಕ್ಕೆ ಯಾರ ಅಭ್ಯಂತರವೂ ಇಲ್ಲ. ಆದರೆ ಕೆಲವು ರಾಜಕಾರಣಿಗಳ ಹಿತಾಸಕ್ತಿಯನ್ನು ರಕ್ಷಿಸಲು ಇವರು ಸುಪಾರಿ ಪಡೆದಿದ್ದಾರೆಯೇ ಎಂಬ ಸಂದೇಹ ಸಹಜವಾಗಿ ಮೂಡುತ್ತದೆ. ಈಗ ಪಂಚಮಸಾಲಿ ಚಳವಳಿಯ ಮುಂಚೂಣಿಯಲ್ಲಿರುವ ಸ್ವಾಮಿಗಳೊಬ್ಬರು ನಮಗೆಲ್ಲ ಗೊತ್ತು. ನಮಗೆಲ್ಲ ಅಂದರೆ ಪ್ರಗತಿಪರ ಸಂಘಟನೆಗಳ ಎಲ್ಲರಿಗೂ ಗೊತ್ತು. ಚಿಕ್ಕಮಗಳೂರು, ಶಿವಮೊಗ್ಗ ಮುಂತಾದ ಕಡೆ 2006-07ರಲ್ಲಿ ನಡೆಸಿದ ಸೌಹಾರ್ದ ಸಮಾವೇಶಗಳಲ್ಲಿ ಇವರೂ ಬರುತ್ತಿದ್ದರು. ಕಾವಿಧಾರಿಯಾಗುವ ಮುಂಚೆ ಎಡಪಂಥೀಯ ವಿದ್ಯಾರ್ಥಿ ಸಂಘಟನೆಯೊಂದರ ಜೊತೆಗೆ ಗುರುತಿಸಿಕೊಂಡಿದ್ದ ಇವರು ನಂತರ ತಮ್ಮದೇ ಪೀಠಮಾಡಿಕೊಂಡರು. ಆಗಿನ ಬಿಜೆಪಿ ಮಂತ್ರಿಯೊಬ್ಬರು ಇವರಿಗೆ ನೆರವಾಗಿದ್ದರು. ಸೌಹಾರ್ದ ಸಮಾವೇಶಗಳಲ್ಲಿ ಕ್ರಾಂತಿ ಗೀತೆಗಳನ್ನು ಹಾಡುತ್ತಿದ್ದ ಇವರು ಈಗ ಮೀಸಲಾತಿ ಚಳವಳಿಯ ನೇತೃತ್ವ ವಹಿಸಿದ್ದಾರೆ. ಕೆಲವು ರಾಜಕಾರಣಿಗಳ ಪರೋಕ್ಷ ಬೆಂಬಲ ಇವರಿಗಿದೆ. ವಾಸ್ತವವಾಗಿ ಯಾರು ಎಷ್ಟೇ ಹೋರಾಟ ಮಾಡಿದರೂ ಪಂಚಮ ಸಾಲಿ ಸೇರಿದಂತೆ ಯಾವುದೇ ಮುಂದುವರಿದ ಜಾತಿಯನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಲು ಸಾಧ್ಯವಾಗುವುದಿಲ್ಲ. ಸಂವಿಧಾನದಲ್ಲಿ ಇದಕ್ಕೆ ಅವಕಾಶವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದ್ದಾರೆ. ಇದು ಉತ್ತರ ಕರ್ನಾಟಕದಲ್ಲಿ ಇರುವ ಬಿಜೆಪಿ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳಿಗೂ ಗೊತ್ತು. ಆದರೆ ಇದು ಗೊತ್ತಿದ್ದರೂ, ಬೇರೆ, ಬೇರೆ ಕಾರಣಗಳಿಗಾಗಿ ಬಿಜೆಪಿ ಸೇರಿದಂತೆ ಸಂಘ ಪರಿವಾರದ ಎಲ್ಲ ಸಂಘಟನೆಗಳು ಇದನ್ನು ಬೆಂಬಲಿಸುತ್ತಿವೆ.
ಕರ್ನಾಟಕವನ್ನು ವಶಪಡಿಸಿಕೊಂಡು ಆ ಮೂಲಕ ದಕ್ಷಿಣ ಭಾರತದಲ್ಲಿ ಶಾಶ್ವತವಾಗಿ ಕಾಲೂರಲು ಹಾಗೂ ಆ ಮೂಲಕ ಹಿಂದೂ ರಾಷ್ಟ್ರದ ಸಂಘ ಪರಿಕಲ್ಪನೆಯ ಕಾರ್ಯಸೂಚಿಯನ್ನು ಜಾರಿಗೆ ತರಲು ಅನುಕೂಲ ವಾಗುತ್ತದೆ ಎಂದು ಬಿಜೆಪಿ ಲೆಕ್ಕಾಚಾರವಾಗಿದೆ. ಆದರೆ ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಮತದಾರರು ತಿರಸ್ಕರಿಸಿದರು. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ 136 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬಂತು. ಇದಕ್ಕೆ ಸಮಾಜವಾದಿ ಹಿನ್ನೆಲೆಯ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಭಾವೀ ಜನಪರ ವ್ಯಕ್ತಿತ್ವ ಬಹುಮುಖ್ಯ ಕಾರಣವಾದರೆ ಅವರು ಮೊದಲ ಸಲ ಮುಖ್ಯಮಂತ್ರಿಯಾದಾಗ ತಂದ ಅನ್ನಭಾಗ್ಯ ಸೇರಿದಂತೆ ಹಲವಾರು ಭರವಸೆಯನ್ನು ಜಾರಿಗೆ ತಂದಿರುವುದು ಒಂದು ಮುಖ್ಯ ಕಾರಣವೆಂದರೆ ಅತಿಶಯೋಕ್ತಿ ಅಲ್ಲ. ಈಗ ಜಾರಿಯಲ್ಲಿರುವ ಗೃಹಲಕ್ಷ್ಮಿ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕೂಡ ಅವಕಾಶ ವಂಚಿತ ಸಮುದಾಯಗಳಿಗೆ ತುಂಬಾ ನೆರವಾಗುತ್ತಿವೆ. ಆದರೆ ಬಿಜೆಪಿಯಲ್ಲಿ ಸಿದ್ದರಾಮಯ್ಯನವರಂತಹ ನಾಯಕರಿಲ್ಲ ಹಾಗೂ ಕಡುಬಡವರಿಗಾಗಿ ಯಾವುದೇ ಕಾರ್ಯಕ್ರಮವೂ ಇಲ್ಲ. ಬಡವರ ನೋವು ಮತ್ತು ಆತಂಕಗಳಿಗೆ ಸ್ಪಂದಿಸದೆ ಜನರನ್ನು ವಿಭಜಿಸುವ ‘ಲವ್ ಜಿಹಾದ್, ಹಲಾಲ್, ಬುರ್ಖಾ ಮುಂತಾದ ಕೋಮುವಾದಿ ಅಜೆಂಡಾಗಳನ್ನು ತಂದು ಅಧಿಕಾರಕ್ಕೆ ಬರುವ ಮಸಲತ್ತುಗಳನ್ನು ಜನರು ವಿಫಲಗೊಳಿಸಿದರು. ಆದರೂ ಅಧಿಕಾರ ಹಪಾಹಪಿತನದ ಇವರು ಮತದಾರರ ತೀರ್ಮಾನವನ್ನು ತಿರಸ್ಕರಿಸಿ ಮತ್ತೆ ಬೀದಿಗಿಳಿದು ಅಶಾಂತಿ ಉಂಟಾಗಲು ಕಾರಣರಾಗಿದ್ದಾರೆ.
ಕರ್ನಾಟಕದ ಬಲಿಷ್ಠ ಜಾತಿಗಳು ಮತ್ತು ವರ್ಗಗಳು 1956ರಲ್ಲಿ ಕರ್ನಾಟಕ ರಾಜ್ಯ ನಿರ್ಮಾಣದ ನಂತರ ರಾಜಕೀಯ ಅಧಿಕಾರದ ಸುಖವನ್ನು ಅನುಭವಿಸುತ್ತ ಬಂದಿದ್ದಾರೆ. ಆದರೆ ಎಪ್ಪತ್ತರ ದಶಕದ ಆರಂಭದಲ್ಲಿ ಮುಖ್ಯಮಂತ್ರಿಯಾದ ದೇವರಾಜ ಅರಸು ಅವರು ರಾಜ್ಯದ ರಾಜಕೀಯದ ದಿಕ್ಕನ್ನೇ ಬದಲಿಸಿದರು. ಶತಮಾನಗಳಿಂದ ತುಳಿತಕ್ಕೊಳಗಾದ ಅವಕಾಶ ವಂಚಿತ ಸಮುದಾಯಗಳಿಗೆ ರಾಜಕೀಯ ಅಧಿಕಾರ ನೀಡಿದರು. ಆಗ ಜನಸಂಘ ಎಂದು ಕರೆಯಲ್ಪಡುತ್ತಿದ್ದ ಈಗಿನ ಬಿಜೆಪಿ ರಾಜ್ಯದಲ್ಲಿ ಹೆಸರಿಗೆ ಮಾತ್ರ ಅಸ್ತಿತ್ವದಲ್ಲಿತ್ತು. ರಾಜ್ಯದ ಎರಡು ಪ್ರಮುಖ ಜಾತಿಗಳು ಅಧಿಕಾರ ಹಂಚಿಕೊಳ್ಳುತ್ತಿದ್ದವು. ಆದರೆ ದೇವರಾಜ ಅರಸು ಅವರು ತಳ ಸಮುದಾಯಗಳಿಂದ ಬಂದ ಮಲ್ಲಿಕಾರ್ಜುನ ಖರ್ಗೆ, ಧರಂಸಿಂಗ್, ಡಿ.ಕೆ. ನಾಯ್ಕರ್ ಮೊದಲಾದವರನ್ನು ರಾಜಕೀಯ ಮುಂಚೂಣಿಗೆ ತಂದರು. ಆಗಲೂ ಅರಸು ಅವರನ್ನು ಬಲಿಷ್ಠ ಜಾತಿಗಳ ಪಟ್ಟಭದ್ರ ಹಿತಾಸಕ್ತಿಗಳು ತೀವ್ರವಾಗಿ ವಿರೋಧಿಸಿ ತೊಂದರೆ ಕೊಟ್ಟರೂ ಅವರು ಮಣಿಯಲಿಲ್ಲ. ಆನಂತರದ ಅವಧಿಯಲ್ಲಿ ಹಿಂದುಳಿದ ಸಮುದಾಯದ ವೀರಪ್ಪ ಮೊಯ್ಲಿ, ಎಸ್.ಬಂಗಾರಪ್ಪ ಜನಪ್ರಿಯತೆಯಿಂದ ಮುಖ್ಯಮಂತ್ರಿಯಾದರೂ ಪೂರ್ಣಾವಧಿ ಅಧಿಕಾರದಲ್ಲಿ ಇರಲು ಬಿಡಲಿಲ್ಲ. ದೇವರಾಜ ಅರಸು ನಂತರ ಎಲ್ಲ ಅಡ್ಡಿ ಆತಂಕಗಳನ್ನು ಎದುರಿಸಿ ಐದು ವರ್ಷ ಅಬಾಧಿತವಾಗಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯನವರು ಈಗ ಎರಡನೇ ಬಾರಿ ಮತ್ತೆ ಚುನಾಯಿತರಾಗಿ ಮುಖ್ಯಮಂತ್ರಿಯಾಗಿದ್ದಾರೆ. ಇದನ್ನು ಸಹಿಸದ ಬಲಿಷ್ಠ ಜಾತಿಗಳ ಪ್ರಭಾವಿ ನಾಯಕರು ಅವಕಾಶವಾದಿ ಮಠಾಧೀಶರನ್ನು ಮುಂದಿಟ್ಟುಕೊಂಡು ಚುನಾಯಿತ ಸರಕಾರವನ್ನು ಉರುಳಿಸಲು ಹುನ್ನಾರ ನಡೆಸಿದ್ದಾರೆ.
ಆದರೆ, ಎಲ್ಲ ಹಿಂದುಳಿದ ಸಮುದಾಯಗಳಿಗೆ ಸಿದ್ದರಾಮಯ್ಯನವರೇ ನಾಯಕರು. ಅರಸು ಕಾಲದಲ್ಲಿ ಆದಂತೆ ಎಲ್ಲಾ ಬಡ ಹಿಂದುಳಿದ ಮತ್ತು ಅಲ್ಪ ಸಂಖ್ಯಾತ ಸಮುದಾಯಗಳು ಈಗ ಮತ್ತೆ ಒಂದಾಗತೊಡಗಿವೆ. ಇದನ್ನು ಸಹಿಸದ ಬಲಿಷ್ಠ ಜಾತಿಗಳಿಗೆ ಸೇರಿದ ದುಡ್ಡಿನ ಹೊಳೆ ಹರಿಸಬಲ್ಲ ನಾಯಕರು ದಿಲ್ಲಿಯ ಕೋಮುವಾದಿ ಸರಕಾರದ ಪ್ರಭಾವೀ ನಾಯಕರ ಜೊತೆಗೆ ಶಾಮೀಲಾಗಿ ನಡೆಸಿರುವ ಮೀಸಲಾತಿ ಚಳವಳಿಯಲ್ಲಿದ್ದರೆ, ಅದೇ ಸಮುದಾಯದ ಬಡವರು, ಆರ್ಥಿಕವಾಗಿ ಹಿಂದುಳಿದವರು ಸಿದ್ದರಾಮಯ್ಯನವರ ಪರವಾಗಿ ಇರುವುದು ಇತ್ತೀಚಿನ ವಿಧಾನಸಭಾ ಉಪ ಚುನಾವಣೆಯಲ್ಲಿ ಸಾಬೀತಾಗಿದೆ. ಹೀಗಾಗಿ ಇದು ಬಹಳ ದಿನ ನಡೆಯುವುದಿಲ್ಲ. ಅವಕಾಶ ವಂಚಿತ ಸಮುದಾಯಗಳು ಮತ್ತು ದಲಿತ ಹಾಗೂ ಅಲ್ಪಸಂಖ್ಯಾತ ಸಮುದಾಯಗಳು ಕರ್ನಾಟಕದ ಮುಂದಿನ ದಿಕ್ಕುದೆಸೆಗಳನ್ನು ತೀರ್ಮಾನಿಸಲಿವೆ.