ಜನ ಒಪ್ಪುವ ರಾಷ್ಟ್ರ ನಾಯಕರು ಎಲ್ಲಿದ್ದಾರೆ ?

ಈ ಭಾರತ ಎಂಬುದು ಅಂತಿಂಥ ದೇಶವಲ್ಲ. 145 ಕೋಟಿ ಜನರ ಹಲವಾರು ಭಾಷೆಗಳ, ಧರ್ಮಗಳ, ಸಂಸ್ಕೃತಿಗಳ ವಿಭಿನ್ನ ರಾಷ್ಟೀಯತೆಗಳ ಒಂದು ಒಕ್ಕೂಟ ಈ ದೇಶ. ಈ ಕಾರಣಕ್ಕೆ ನಮ್ಮ ಸಂವಿಧಾನ ನಿರ್ಮಾಪಕರು ಇದನ್ನು ‘ಫೆಡರಲ್ ಸ್ಟೇಟ್’ ಎಂದು ಕರೆದರು. ಇಂಥ ಒಂದು ದೇಶಕ್ಕೆ ನಾಯಕನಾಗುವವನು ಯಾವುದೇ ಜಾತಿ, ಧರ್ಮ, ಪ್ರದೇಶಗಳೊಂದಿಗೆ ಗುರುತಿಸಿಕೊಳ್ಳಬಾರದು. ಎಲ್ಲ ಸಮುದಾಯಗಳನ್ನು ಒಟ್ಟಿಗೆ ಕರೆದುಕೊಂಡು ಹೋಗುವವನೇ ನಿಜವಾದ ಜನ ನಾಯಕ.

Update: 2024-10-14 05:36 GMT

ಎಲ್ಲ ಸಮುದಾಯಗಳು ಒಪ್ಪಿಕೊಳ್ಳುವ ರಾಷ್ಟ್ರ ನಾಯಕರೆಂದರೆ ಯಾರು? ಭಾರತದಂಥ ಬಹು ಧರ್ಮೀಯ, ಬಹು ಭಾಷೆಗಳನ್ನಾಡುವ ಹಾಗೂ ಹಲವಾರು ಜನಾಂಗಗಳು ಗೌರವಿಸುವ ನಾಯಕರು ಎಲ್ಲಿದ್ದಾರೆ ಎಂದು ನಾವು ಇಂದು ಹುಡುಕಬೇಕಿದೆ. ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಅದರ ನೇತೃತ್ವ ವಹಿಸಿದ್ದ ಅನೇಕ ನಾಯಕರು ಜನಮೆಚ್ಚುಗೆಯ ನಾಯಕರಾಗಿದ್ದರು. ಮಹಾತ್ಮಾ ಗಾಂಧೀಜಿ, ಭಗತ್ ಸಿಂಗ್ ಸುಭಾಷ್‌ಚಂದ್ರ ಬೋಸ್, ಜವಾಹರಲಾಲ್ ನೆಹರೂ, ಡಾ. ಅಂಬೇಡ್ಕರ್ ಹೀಗೆ ಬಹು ಎತ್ತರದ ನಾಯಕರು ಭಾರತದ ತುಂಬ ತುಂಬಿದ್ದರು. ಕನ್ಯಾಕುಮಾರಿಯಿಂದ ಕಾಶ್ಮೀರವರೆಗೆ ಇಂಥ ನಾಯಕರು ಇದ್ದುದರಿಂದ ಬ್ರಿಟಿಷ್ ವಸಾಹತುಶಾಹಿಯನ್ನು ತೊಲಗಿಸಲು ಸಾಧ್ಯವಾಯಿತು.

ಹಿಂದೂ, ಮುಸ್ಲಿಮ್, ಸಿಖ್, ಕ್ರೈಸ್ತ ಹೀಗೆ ಎಲ್ಲ ಸಮುದಾಯಗಳ ಜನರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗ ವಹಿಸಿದ್ದರು.ಇವರನ್ನು ಒಂದು ಮಾಡಿದ ಶ್ರೇಯಸ್ಸು ಗಾಂಧಿ, ನೆಹರೂ, ಮೌಲಾನಾ ಆಝಾದ್‌ರಂಥ ನಾಯಕರಿಗೆ ಸಲ್ಲುತ್ತದೆ. ಅಂತಲೇ ಸ್ವಾತಂತ್ರ್ಯ ನಂತರವೂ ಈ ಭಾರತ ಜಾತ್ಯತೀತ ಒಕ್ಕೂಟ ದೇಶವಾಗಿ ಹೊರ ಹೊಮ್ಮಿತು.ಆವಾಗ ಸ್ವಾತಂತ್ರ್ಯ ಹೋರಾಟದಿಂದ ದೂರವಿದ್ದವರು, ಬ್ರಿಟಿಷರ ಚಮಚಾಗಿರಿ ಮಾಡಿದವರು ಯಾರು ಎಂಬುದು ಎಲ್ಲರಿಗೂ ಗೊತ್ತು.

ಈಗ ಎಲ್ಲ ಸಮುದಾಯಗಳ ಜನರನ್ನು ಪ್ರತಿನಿಧಿಸುವ ನಾಯಕರಿಲ್ಲ. ಈಗ ಇರುವ ಕೋಮುವಾದಿ ಪಕ್ಷದ ಬಹುತೇಕ ನಾಯಕರು ಜನ ಸಾಮಾನ್ಯರನ್ನು ಜಾತಿ ಮತ್ತು ಮತದ ಹೆಸರಲ್ಲಿ ವಿಭಜಿಸಿ ಚುನಾವಣೆಯಲ್ಲಿ ಗೆದ್ದು ನಾಯಕರಾದವರು. ಕೋಮು ದಂಗೆಗೆ ಪ್ರಚೋದಿಸಿ ಅಧಿಕಾರಕ್ಕೆ ಬಂದವರು. ಜಾತ್ಯತೀತ ಪಕ್ಷಗಳಲ್ಲಿ ಸಿದ್ದರಾಮಯ್ಯನವರಂಥ ಜನನಾಯಕರಿದ್ದರೂ ಅವರ ನಂತರ ಯಾರು ಎಂಬ ಪ್ರಶ್ನೆಗೆ ಉತ್ತರವನ್ನು ಹುಡುಕಬೇಕಿದೆ. ಸ್ವಾತಂತ್ರ್ಯ. ಹೋರಾಟದಲ್ಲಿ ಜನರೇ ಇತಿಹಾಸವನ್ನು ನಿರ್ಮಿಸಿದರೂ ಕೂಡ ಈಗ ದೇಶವನ್ನು ಸರಿಯಾದ ದಿಕ್ಕಿಗೆ ಕೊಂಡೊಯ್ಯಬಲ್ಲ ನಾಯಕರ ಕೊರತೆ ಎದ್ದು ಕಾಣುತ್ತದೆ. ಆ ಜನ ಸಮೂಹವನ್ನು ಸರಿಯಾದ ದಿಕ್ಕಿನಲ್ಲಿ ಒಯ್ಯಬಲ್ಲ ನಾಯಕರ ಕೊರತೆ ಕಾಡುತ್ತಿದೆ.

ಈ ಭಾರತ ಎಂಬುದು ಅಂತಿಂಥ ದೇಶವಲ್ಲ. 145 ಕೋಟಿ ಜನರ ಹಲವಾರು ಭಾಷೆಗಳ, ಧರ್ಮಗಳ, ಸಂಸ್ಕೃತಿಗಳ ವಿಭಿನ್ನ ರಾಷ್ಟೀಯತೆಗಳ ಒಂದು ಒಕ್ಕೂಟ ಈ ದೇಶ. ಈ ಕಾರಣಕ್ಕೆ ನಮ್ಮ ಸಂವಿಧಾನ ನಿರ್ಮಾಪಕರು ಇದನ್ನು ‘ಫೆಡರಲ್ ಸ್ಟೇಟ್’ ಎಂದು ಕರೆದರು. ಇಂಥ ಒಂದು ದೇಶಕ್ಕೆ ನಾಯಕನಾಗುವವನು ಯಾವುದೇ ಜಾತಿ, ಧರ್ಮ, ಪ್ರದೇಶಗಳೊಂದಿಗೆ ಗುರುತಿಸಿಕೊಳ್ಳಬಾರದು. ಎಲ್ಲ ಸಮುದಾಯಗಳನ್ನು ಒಟ್ಟಿಗೆ ಕರೆದುಕೊಂಡು ಹೋಗುವವನೇ ನಿಜವಾದ ಜನ ನಾಯಕ. ದೇಶದ ಸ್ವಾತಂತ್ರ್ಯ ಚಳವಳಿ ತೀವ್ರತೆ ಪಡೆಯಲು ಗಾಂಧೀಜಿಯಂಥ ಒಬ್ಬ ನಾಯಕ ಸಿಕ್ಕಿದ್ದರಿಂದ ಗಾಂಧಿ ಬಗ್ಗೆ ಅನೇಕ ಭಿನ್ನಾಭಿಪ್ರಾಯಗಳು ಇರಬಹುದು. ಆದರೆ, ಅವರು ಎಲ್ಲರಿಗೂ ನಾಯಕರಾಗಿದ್ದರು.

ಎಲ್ಲರನ್ನೂ ವಿಶ್ವಾಸದಿಂದ ಕರೆದೊಯ್ಯುವ ನಾಯಕತ್ವದ ಗುಣ ಅವರಿಗಿತ್ತು. ಬಾಪೂಜಿ ಮಾತ್ರವಲ್ಲದೆ ಆ ಕಾಲದ ನಾಯಕರಲ್ಲಿ ಜಾತಿ, ಮತ ನೋಡದೆ ಜನರನ್ನು ಸಮಾನವಾಗಿ ಪ್ರೀತಿಸುವ ತಾಯ್ತನವಿತ್ತು. ಪಂಡಿತ್ ಜವಾಹರಲಾಲ್ ನೆಹರೂ, ಸುಭಾಷ್ ಚಂದ್ರ ಬೋಸ್, ಡಾ.ಅಂಬೇಡ್ಕರ್, ಭಗತ್ ಸಿಂಗ್,ಮೌಲಾನಾ ಅಬುಲ್ ಕಲಾಮ್ ಆಝಾದ್ ಇವರೆಲ್ಲ ನಿಜವಾದ ಜನ ನಾಯಕರಾಗಿದ್ದರು. ಸ್ವಾತಂತ್ರ್ಯಾ ನಂತರವೂ ಈ ಭಾರತಕ್ಕೆ ನಾಯಕರ ಕೊರತೆ ಇರಲಿಲ್ಲ. ಸಂಸತ್ತಿನಲ್ಲಿ ಪ್ರಧಾನಿ ನೆಹರೂಗೆ ಸರಿ ಸಾಟಿಯಾಗಿ ನಿಂತು ವಾದಿಸಬಲ್ಲ ಸೋಷಲಿಸ್ಟ್

ನಾಯಕರಾದ ರಾಮ ಮನೋಹರ ಲೋಹಿಯಾ, ನಾಥ ಪೈ ಅಶೋಕ್‌ಮೆಹತಾ, ಕಮ್ಯುನಿಸ್ಟ್ ನಾಯಕರಾಗಿದ್ದ ಶ್ರೀ ಪಾದ ಅಮೃತ ಡಾಂಗೆ, ಎ.ಕೆ. ಗೋಪಾಲನ್,ಭೂಪೇಶ್ ಗುಪ್ತ್ತಾ, ಪ್ರೊ.ಹಿರೇನ್ ಮುಖರ್ಜಿ, ಸ್ವತಂತ್ರ ಪಕ್ಷದ ಎನ್.ಜಿ. ರಂಗಾ,ಮೀನೂ ಮಸಾನಿ

ಅವರಂಥ ಘಟಾನುಘಟಿಗಳಿದ್ದರು.

ರಾಮ ಮನೋಹರ ಲೋಹಿಯಾರಂಥವರು ಮಾತಾಡಲು ನಿಂತರೆ ಪ್ರಧಾನಿ ನೆಹರೂ ಸದನದ ಎ.ಸಿ. ವ್ಯವಸ್ಥೆಯಲ್ಲೂ ಬೆವರುತ್ತಿದ್ದರು. ಆದರೆ ,

ಪ್ರತಿಪಕ್ಷ ನಾಯಕರನ್ನು ಅವರು ಎಂದೂ ಶತ್ರುಗಳಂತೆ ನೋಡಲಿಲ್ಲ. ತಮ್ಮನ್ನು ಟೀಕಿಸುವ ಲೋಹಿಯಾ, ಭೂಪೇಶ್ ಗುಪ್ತ್ತಾ ರಂಥವರನ್ನು ನೆಹರೂ ಇಷ್ಟ ಪಡುತ್ತಿದ್ದರು.ಪ್ರಜಾಪ್ರಭುತ್ವ ಆರೋಗ್ಯಕರವಾಗಿರಬೇಕೆಂದರೆ ಸಮರ್ಥ ಪ್ರತಿಪಕ್ಷ ನಾಯಕರು ಸದನ ದಲ್ಲಿ ಇರಬೇಕೆಂದು ಬಯಸುತ್ತಿದ್ದರು. ಹೀಗೆ ಭಾರತದ ಪಜಾಪ್ರಭುತ್ವವನ್ನು ಬಾಬಾ ಸಾಹೇಬರು, ನೆಹರೂ ಮುಂತಾದವರು ಸೇರಿ ಕಟ್ಟಿದರು.

ಆಗ ಸ್ವಾತಂತ್ರ್ಯ ಚಳವಳಿಯಲ್ಲಾಗಲಿ ನಂತರದ ಮೂರು ದಶಕಗಳಲ್ಲಾಗಲಿ ಜನ ನಾಯಕರೆನ್ನುವವರು ಜನತೆಯ ನಡುವಿನಿಂದ ಬರುತ್ತಿದ್ದರು. ಜನ ಹೋರಾಟಗಳ ನಡುವಿನಿಂದ ಮೇಲೆದ್ದು ಬರುತ್ತಿದ್ದರು. ಇಂದಿರಾ ಗಾಂಧಿ ಕಾಲದಲ್ಲಿ ಬಂದ ಜಾರ್ಜ್ ಫೆರ್ನಾಂಡಿಸ್, ಮಧು ಲಿಮಯೆ, ಮಧು ದಂಡವತೆ, ಎಕೆಜಿ, ಜ್ಯೋತಿರ್ಮಯ ಬಸು, ಸಮರ ಮುಖರ್ಜಿ ಇವರೂ ಕೂಡ ಹೀಗೆ ಸಂಘರ್ಷದ ಸಮರ ಭೂಮಿಯಲ್ಲಿ ಅರಳಿದವರು.ಅಟಲ್ ಬಿಹಾರಿ ವಾಜಪೇಯಿ, ಜಗನ್ನಾಥ ರಾವ್ ಜೋಶಿ ಅವರ ಬಗ್ಗೆ ಎಷ್ಟೇ ತಾತ್ವಿಕ ಭಿನ್ನಾಭಿಪ್ರಾಯಗಳಿದ್ದರೂ ಅವರು ಉತ್ತಮ ವಾಕ್ಪಟುಗಳು ಆಗಿದ್ದರು. ಅದಕ್ಕೆ ಸಂಸತ್ತಿನ ಚರ್ಚೆಗಳು ಆಗ ಘನತೆಯಿಂದ ಕೂಡಿರುತ್ತಿದ್ದವು.

ಕರ್ನಾಟಕದಲ್ಲಿ ಸಿದ್ಧವನಹಳ್ಳಿ ನಿಜಲಿಂಗಪ್ಪ, ಬಿ.ಡಿ.ಜತ್ತಿ, ಕೆಂಗಲ್ ಹನುಮಂತಯ್ಯ, ಕೆ.ಸಿ.ರೆಡ್ಡಿ, ದೇವರಾಜ ಅರಸು, ನಾಗಪ್ಪ ಆಳ್ವ್ವ,ವೈಕುಂಠ ಬಾಳಿಗಾ, ಜಾಫರ್ ಶರೀಫ್, ಅಝೀಝ್ ಸೇಠ್,ಬಿ.ಎಂ. ಇದಿನಬ್ಬ, ಬಂಗಾರಪ್ಪರಂತಹ, ನಾಯಕರಿದ್ದರು. ಪ್ರತಿಪಕ್ಷ ಗಳ ಸಾಲಿನಲ್ಲಿ ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡರು, ಎಸ್.ಶಿವಪ್ಪ ಕಮ್ಯುನಿಸ್ಟರಾದ ಬಿ.ವಿ.ಕಕ್ಕಿಲ್ಲಾಯ, ಎಂ.ಎಸ್. ಕೃಷ್ಣನ್, ಸೂರ್ಯನಾರಾಯಣರಾವ್ ಪಂಪಾಪತಿ, ವಿ.ಎನ್.ಪಾಟೀಲ್, ಕೃಷ್ಣಶೆಟ್ಟಿ ಮುಂತಾದವರು ಎದ್ದು ಕಾಣುತ್ತಿದ್ದರು.

ಇವರೆಲ್ಲರೂ ಜನತೆಯ ನಡುವಿನಿಂದ ಬಂದವರು. ದಾವಣಗೆರೆ ಯ ಜವಳಿ ಗಿರಣಿಯಲ್ಲಿ ಕಾರ್ಮಿಕನಾಗಿದ್ದ ಕಾಮ್ರೇಡ್ ಪಂಪಾಪತಿ ಜಾತಿ ಬಲ, ದುಡ್ಡಿನ ಬಲವಿಲ್ಲದೆ ಮೂರು ಬಾರಿ ಶಾಸಕರಾಗಿ ಗೆದ್ದು ಬಂದರು. ಪಂಪಾಪತಿ ಯಾರನ್ನೂ ಜಾತಿ, ಮತ ಭಾಷೆಯನ್ನು ನೋಡಿ ಪ್ರೀತಿಸಲಿಲ್ಲ. ಜನರೂ ಅವರನ್ನು ಜಾತಿ, ಮತ ನೋಡದೆ ಘಟಾನುಘಟಿ ಸಿರಿವಂತರನ್ನು ಸೋಲಿಸಿ ವಿಧಾನ ಸಭೆಗೆ ಗೆಲ್ಲಿಸಿ ಕಳಿಸುತ್ತಿದ್ದರು.

ಆದರೆ ಈಗ ಎಲ್ಲವೂ ಬದಲಾಗಿದೆ.ಅದರಲ್ಲೂ ಎಂಭತ್ತರ ದಶಕದ ಕೊನೆಯಲ್ಲಿ ಎಲ್ಲವೂ ಬದಲಾಯಿತು. ಜಾಗತೀಕರಣದ

ನವ ಉದಾರವಾದಿ ಆರ್ಥಿಕತೆಯನ್ನು ಆಳುವ ವರ್ಗ ದೇಶದ ಮೇಲೆ ಹೇರಿದ ನಂತರ ಅದಕ್ಕೆ ಪೂರಕವಾಗಿ ಕೋಮುವಾದದ ಕಾಯಿಲೆಯೂ ಉಲ್ಬಣಿಸಿತು.ಅಯೋಧ್ಯೆಯ ರಾಮ ಮಂದಿರ ರಥಯಾತ್ರೆ ಮತ್ತು ಜಾಗತೀಕರಣದ ಚೈತ್ರ ಯಾತ್ರೆಗಳು ಒಟ್ಟೊಟ್ಟಿಗೆ ಬಂದವು.ದೇಶವನ್ನು ದರೋಡೆ ಮಾಡುವ ಜಾಗತೀಕರಣದ ನೀತಿಯನ್ನು ವಿರೋಧಿಸಬೇಕಾದ ಜನ ಜಾತಿ ಮತಗಳ ಆಧಾರದಲ್ಲಿ ವಿಭಜನೆಗೊಂಡರು.ಶ್ರಮಜೀವಿ ವರ್ಗವೂ ಒಂದಾಗಿ ಉಳಿಯಲಿಲ್ಲ.ಮಂದಿರ ನಿರ್ಮಾಣದ ಜೊತೆ ಜೊತೆಗೆ ಹಿಂದೂ ರಾಷ್ಟ್ರ ನಿರ್ಮಾಣದ ಘೋಷಣೆ ಕೇಳಿಬಂತು. ಅಷ್ಟರಲ್ಲಿ ಭಾರತದಲ್ಲಿ ಹೊಸ ಪೀಳಿಗೆ ಕಣ್ಣು ತೆರಯತೊಡಗಿತ್ತು.ಅದೇ ಪೀಳಿಗೆಗೆ ಬಲೆ ಬೀಸಿದ ಕೋಮುವಾದಿ ಶಕ್ತಿಗಳು ಈಗ ಅಧಿಕಾರ ಹಿಡಿದು ಕೂತಿದ್ದಾರೆ. ಕೋಮುವಾದಿ ಸಂಘಟನೆಗಳ, ಪಕ್ಷಗಳ ನಾಯಕರು ಎಲ್ಲ ಭಾರತೀಯರನ್ನು ಒಂದಾಗಿ ಕೂಡಿಸಿಕೊಂಡು ಜೊತೆಗೆ ಕರೆದುಕೊಂಡು ಹೋಗುವ ನಾಯಕರಲ್ಲ. ಇವರು ಒಂದು ಬಹುಸಂಖ್ಯಾತ ಸಮುದಾಯದಲ್ಲಿ ಹುಸಿ ಭೀತಿಯನ್ನು ಉಂಟು ಮಾಡಿ ನಾಯಕರಾದವರು. ಇವರೊಂದಿಗೆ ಇವರನ್ನು ಸಾಕುವ ಕಾರ್ಪೊರೇಟ್ ಬಂಡವಾಳಶಾಹಿಗಳು,ರಿಯಲ್ ಎಸ್ಟೇಟ್

ಮಾಫಿಯಾಗಳು, ಮೈನಿಂಗ್ ಖದೀಮರು ಸೇರಿದ್ದಾರೆ.ಇದು ಭಾರತದ ಇಂದಿನ ದುರಂತ.

ಭಾರತೀಯರಲ್ಲೇ ಒಂದು ಸಮುದಾಯದ ಜನರನ್ನು ಹಿಟ್ಲರ್ ಮಾದರಿಯ ಡಿಟೆನ್ಷೆನ್ ಸೆಂಟರ್‌ಗಳಿಗೆ ದಬ್ಬಲು ಹೊಂಚು ಹಾಕಿದ್ದರು.ದೇಶ ಒಡೆಯುವ ಈ ಹುನ್ನಾರದ ವಿರುದ್ಧ ಜನತೆ ಸಿಡಿದೆದ್ದರು.

ಒಂದು ಕಾಲದಲ್ಲಿ ಸಂಸತ್ತಿನ ಉಭಯ ಸದನಗಳಲ್ಲಿ ಜನಪರ ಹೋರಾಟಗಾರರು, ತ್ಯಾಗ ಜೀವಿಗಳು, ವಿದ್ವಾಂಸರು, ವಾಕ್ಪಟುಗಳು,ಕಾನೂನು ಪರಿಣಿತರು ತುಂಬಿರುತ್ತಿದ್ದರು.ಈಗ ಉದ್ಯಮ ಪತಿಗಳು,ಮೈನಿಂಗ್ ಮಾಫಿಯಾಗಳು, ರಿಯಲ್ ಎಸ್ಟೇಟ್ ದಗಾಕೋರರು,ಕೊಲೆ ಆರೋಪ ಹೊತ್ತವರು,ನಕಲಿ ಎನ್ ಕೌಂಟರ್ ಕ್ರಿಮಿನಲ್ ಗಳು ತುಂಬಿದ್ದಾರೆ, ಪ್ರತಿಪಕ್ಷ ಗಳು ದುರ್ಬಲಗೊಂಡಿವೆ. ಹಿಂದೆ ಲೋಹಿಯಾ ಅಂಥವರು ಸಂಸತ್ತಿಗೆ ಬರಲೆಂದು ನೆಹರೂ ಬಯಸುತ್ತಿದ್ದರು. ಈಗ ಮಲ್ಲಿಕಾರ್ಜುನ ಖರ್ಗೆಯವರಂಥ ಸಮರ್ಥ ವಾಕ್ಪಟುಗಳು ಲೋಕಸಭೆಗೆ ಬರಬಾರದೆಂದು ಕೋಟಿ, ಕೋಟಿ ರೂಪಾಯಿ ನೀರಿನಂತೆ ಸುರಿದು, ಜಾತಿ ರಾಜಕೀಯ ಮಾಡಿ ಅವರನ್ನು ಸೋಲಿಸಲಾಯಿತು. ಈಗ ಮತ್ತೆ ಕಲಬುರಗಿ ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್ ಗೆದ್ದು ಕೊಂಡಿದೆ.

ಈಗ ಅಂಬಾನಿ,ಅದಾನಿ ಕೃಪಾ ಪೋಷಿತ ನಾಯಕರೇ ಜನ ನಾಯಕರಾಗಿದ್ದಾರೆ, ಮಾಧ್ಯಮಗಳ ಮೂಲಕ ಇಂದಿನ ನಾಯಕರ ಇಮೇಜು ವರ್ಧನೆ ಕೆಲಸ ಅವಿರತವಾಗಿ ನಡೆದಿದೆ.ಎಲ್ಲ ಭಾರತೀಯರು ಪ್ರೀತಿಸುವ, ಎಲ್ಲ ಭಾರತೀಯರನ್ನು ಜಾತಿ, ಮತ ನೋಡದೇ ಪ್ರೀತಿಸುವ ನೇತಾರರು ಇವರಲ್ಲ. ಕೊರೋನ ಬಂದರೆ ಬಂಗಲೆ ಬಿಟ್ಟು ಹೊರಗೆ ಬಾರದ ಸದಾ ಕಿರುತೆರೆಗಳಲ್ಲಿ ಅಬ್ಬರಿಸುವ ಇವರು ಜನ ನಾಯಕರಲ್ಲ, ಹಾಗೆಂದು ಭ್ರಮೆ ಮೂಡಿಸಿದವರು.

ನಿಜವಾದ ಜನ ನಾಯಕರು ಇಲ್ಲವೆಂದಲ್ಲ. ಅಂಥವರು ಹೊಸ ಪೀಳಿಗೆಯಿಂದ ಬರುತ್ತಿದ್ದಾರೆ. ಬಿಹಾರದ ಬೇಗುಸರಾಯನ ಕನ್ಹಯಾ ಕುಮಾರ್, ಗುಜರಾತಿನ ಜಿಗ್ನೇಶ್ ಮೇವಾನಿ, ಉತ್ತರ ಪ್ರದೇಶದ ಚಂದ್ರಶೇಖರ ಆಝಾದ್ ಇಂಥವರು ಭರವಸೆ ಮೂಡಿಸುತ್ತಿದ್ದಾರೆ. ಕೊರೋನ ಕಾಲದಲ್ಲೂ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಆರೋಗ್ಯ ಸಚಿವೆ ಶೈಲಜಾಟೀಚರ್ ದೇಶದ ಗಮನವನ್ನು ಸೆಳೆದಿದ್ದಾರೆ.ಜನ ಹೋರಾಟಗಳು ತೀವ್ರಗೊಂಡಂತೆ ಹೊಸ ನಾಯಕರು ಬರುತ್ತಾರೆ.ಚಳವಳಿಗಳೇ ನಾಯಕರನ್ನು ಸೃಷ್ಟಿಸುತ್ತವೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಸನತ್ ಕುಮಾರ ಬೆಳಗಲಿ

contributor

Similar News