ಹಿಮಾಲಯದ ಕೊರಳಿಗೆ ಧ್ವನಿಯಾಗಿದ್ದ ಬಹುಗುಣ

ಬಹುಗುಣ ಇಡೀ ಹಿಮಾಲಯಕ್ಕೆ ಒಂದು ಸುಸಂಘಟಿತ ಮತ್ತು ಸುಸಂಬದ್ಧ ಸಂರಕ್ಷಣಾ ನೀತಿ ಅಗತ್ಯವೆಂದು ನಂಬಿದ್ದರು. ಇದಕ್ಕಾಗಿ 1981-83ರ ನಡುವೆ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಿಂದ ನಾಗಾಲ್ಯಾಂಡ್ನ ಕೊಹಿಮಾದವರೆಗೆ 5,000 ಕಿಲೋಮೀಟರ್ ಉದ್ದದ ಜಾಥಾ ಕೈಗೊಂಡರು. 1990 ರ ಆರಂಭದಲ್ಲಿ ‘ಹಿಮಾಲಯ ಉಳಿಸಿ’ ಮತ್ತು ತೆಹ್ರಿ ಅಣೆಕಟ್ಟು ವಿರುದ್ಧ ಆಂದೋಲನ ಮುನ್ನಡೆಸಿದರು.

Update: 2024-01-19 06:42 GMT
Editor : Safwan | Byline : ಋತ

ಕಳೆದ ನವೆಂಬರ್ನಲ್ಲಿ ಉತ್ತರ ಕಾಶಿಯ ಸಿಲ್ಕ್ಯಾರಾದಲ್ಲಿ ನಿರ್ಮಿಸುತ್ತಿದ್ದ 4.5 ಕಿ.ಮೀ. ಉದ್ದದ ಸುರಂಗದ ಕೆಲ ಭಾಗ ಕುಸಿದು, ಮಣ್ಣಿನ ರಾಶಿಯಲ್ಲಿ ಸಿಲುಕಿಕೊಂಡಿದ್ದ 41 ಕಾರ್ಮಿಕರನ್ನು ರಕ್ಷಿಸಿದಾಗ ದೇಶ ನಿಟ್ಟುಸಿರುಬಿಟ್ಟಿತು. ಹಿಮಾಲಯದಲ್ಲಿ ಮಾನವ ಹಸ್ತಕ್ಷೇಪ ಕೂಡದು ಎಂದಿದ್ದ ಸುಂದರ್ಲಾಲ್ ಬಹುಗುಣ ಬದುಕಿದ್ದರೆ, ಪರ್ವತ ಶ್ರೇಣಿ ಮೇಲಿನ ದಬ್ಬಾಳಿಕೆಯನ್ನು ಕಂಡು ಎಷ್ಟು ಮರುಗುತ್ತಿದ್ದರೋ?

ಸುಂದರ್ಲಾಲ್ ಬಹುಗುಣ(9 ಜನವರಿ 1927-ಮೇ 21,2021) ಮತ್ತು ಪತ್ನಿ ವಿಮಲಾ, ತಮ್ಮ ಕಾಲದಿಂದ ಬಹುದೂರ ನೋಡಬಲ್ಲವರಾಗಿದ್ದರು. ವಿಶ್ವಸಂಸ್ಥೆ ಭೂಮಿಯ ರಕ್ಷಣೆಗೆ ಕರಡು ಸಿದ್ಧಪಡಿಸುವ ಮೊದಲೇ, ಹವಾಮಾನ ಬದಲಾವಣೆ ಅತ್ಯಂತ ಪ್ರಮುಖ ವಿಷಯ ಆಗುವ ಮುನ್ನವೇ ಮನುಷ್ಯರ ಉಳಿವಿಗೆ ಪರಿಸರ ಸಂರಕ್ಷಣೆ ಅತ್ಯಂತ ಅಗತ್ಯ ಎಂದು ಅರಿತಿದ್ದರು. ಉತ್ತರಾಖಂಡದ ತೆಹ್ರಿ ಜಿಲ್ಲೆಯ ಮರುದಾ ಗ್ರಾಮದಲ್ಲಿ ಜನನ. ಸ್ವಾತಂತ್ರ್ಯ ಹೋರಾಟ ಗರಿಗಟ್ಟಿಕೊಳ್ಳುತ್ತಿದ್ದ ಕಾಲ. ತೆಹ್ರಿಯ ರಾಜನ ದಬ್ಬಾಳಿಕೆ ವಿರುದ್ಧ ಜನ ಬಂಡಾಯವೆದ್ದರು. ಮೇ 30, 1930ರಂದು ನಿರಾಯುಧ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಲು ರಾಜ ಆದೇಶಿಸಿದಾಗ, ಅನೇಕರು ಮೃತಪಟ್ಟರು ಮತ್ತು ಶವಗಳನ್ನು ನದಿಯಲ್ಲಿ ಎಸೆಯಲಾಯಿತು. ಬಹುಗುಣ ಹತ್ತು ವರ್ಷಗಳ ನಂತರ ರಾಜ ಪ್ರಭುತ್ವದ ವಿರುದ್ಧದ ದಂಗೆಯಲ್ಲಿ ಭಾಗವಹಿಸುವ ಮೂಲಕ ಸಾರ್ವಜನಿಕ ಜೀವನವನ್ನು ಪ್ರಾರಂಭಿಸಿದರು. ಲಾಹೋರ್ನಲ್ಲಿ ಬಿಎ ಪದವಿ ಪಡೆದು, ಸ್ನಾತಕೋತ್ತರ ಪದವಿಗೆ ವಾರಣಾಸಿಗೆ ಹೋದರು. ಆದರೆ, ವ್ಯಾಸಂಗ ಪೂರ್ಣಗೊಳಿಸಲಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು, ಸೆರೆವಾಸ ಅನುಭವಿಸಿದರು. ಅವರಿಗೆ ಆಗ 17 ವರ್ಷ ವಯಸ್ಸು.

ಗಾಂಧಿವಾದಿ ಶ್ರೀದೇವ್ ಸುಮನ್ ಅವರ ಸಂಪರ್ಕ ಅವರ ಬದುಕನ್ನು ಬದಲಿಸಿತು. ಶ್ರೀದೇವ್ ಅವರು ತೆಹ್ರಿಯ ರಾಜನ ದೌರ್ಜನ್ಯದ ವಿರುದ್ಧ 84 ದಿನ ದೀರ್ಘ ಉಪವಾಸ ಮಾಡಿ, ನಿಧನರಾದರು; ಈ ಸಾವು ಬಹುಗುಣ ಅವರ ಮೇಲೆ ಗಾಢ ಪರಿಣಾಮ ಬೀರಿತು; ರಾಜಕೀಯ ಮತ್ತು ಸಾಮಾಜಿಕ ತಿಳಿವಳಿಕೆಯನ್ನು ರೂಪಿಸಿತು. 1949ರಲ್ಲಿ ಮೀರಾ ಬೆಹನ್ ಮತ್ತು ಥಕ್ಕರ್ ಬಾಪಾ ಅವರ ಸಂಪರ್ಕಕ್ಕೆ ಬಂದರು. ಎಲ್ಲ ಸಮುದಾಯದ ಬಡ ವಿದ್ಯಾರ್ಥಿಗಳಿಗೋಸ್ಕರ ಆಶ್ರಯತಾಣ ಅರಂಭಿಸಿದರು. 1954ರಲ್ಲಿ ಸಾಮಾಜಿಕ ಕಾರ್ಯಕರ್ತೆ ಸರಳಾ ಬೆಹೆನ್ ಅವರೊಂದಿಗೆ ಕೆಲಸ ಆರಂಭಿಸಿ, ಎರಡು ವರ್ಷ ನಂತರ ತೆಹ್ರಿ ರಾಜ್ಯ ಪ್ರಜಾಮಂಡಲ್ ಕಾರ್ಯದರ್ಶಿ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯ ಸ್ಥಾನ ತೊರೆದರು. ಸರಳಾ ಅವರ ಶಿಷ್ಯೆ ವಿಮಲಾ ನೌಟಿಯಲ್ ಅವರನ್ನು 1956ರಲ್ಲಿ ವಿವಾಹವಾಗಿ, ದಂಪತಿ ತೆಹ್ರಿ-ಗರ್ವಾಲ್ ಜಿಲ್ಲೆಯ ಸಿಲ್ಕ್ಯಾರಾದಲ್ಲಿ ನೆಲೆಯೂರಿದರು. ದಂಪತಿ ದುರ್ಬಲರು ಮತ್ತು ಶಕ್ತಿಹೀನರಿಗಾಗಿ ಕೆಲಸ ಮಾಡಲು ಪರ್ವತಿಯಾ ನವಜೀವನ್ ಮಂಡಲವನ್ನು ಸ್ಥಾಪಿಸಿದರು.

1960ರಲ್ಲಿ ವಿನೋಬಾ ಭಾವೆ ಅವರ ಸೂಚನೆ ಮೇರೆಗೆ ಪರ್ವತ ಪ್ರದೇಶದ 7 ಜಿಲ್ಲೆಗಳಲ್ಲಿ ಪಾದಯಾತ್ರೆ ಆರಂಭಿಸಿದರು. ಈ ಪಾದಯಾತ್ರೆಗಳು ಅವರಿಗೆ ಅರಣ್ಯ ನಾಶದ ಅಪಾಯಗಳ ಬಗ್ಗೆ ಅರಿವು ಮೂಡಿಸಿದವು. 1971ರಲ್ಲಿ ಮದ್ಯ ಮಾರಾಟವನ್ನು ವಿರೋಧಿಸಿ 16 ದಿನ ನಿರಶನ ನಡೆಸಿದರು. ಸಾವಿರಾರು ಮಹಿಳೆಯರು ಈ ಆಂದೋಲನದಲ್ಲಿ ಪಾಲ್ಗೊಂಡು, ಉತ್ತರಾಖಂಡ ಸರ್ವೋದಯ ಮಂಡಲ ಅಸ್ತಿತ್ವಕ್ಕೆ ಬಂದಿತು. 1972ರಲ್ಲಿ ಚಮೋಲಿ ಜಿಲ್ಲೆಯಲ್ಲಿ ಮರ ಕಡಿತಲೆ ವಿರುದ್ಧ ಚಿಪ್ಕೋ ಪ್ರಾರಂಭವಾಯಿತು. ‘ಚಿಪ್ಕೋ’ ಎಂದರೆ ಮರಗಳನ್ನು ಅಪ್ಪುವುದು ಎಂದರ್ಥ. ಮಹಿಳೆಯರ ನೇತೃತ್ವದಲ್ಲಿ ಜನರು ಮರ ಕಡಿಯದಂತೆ ಗುತ್ತಿಗೆದಾರರನ್ನು ತಡೆದರು. ಚಿಪ್ಕೋ ಹಿಮಾಲಯ ಪ್ರದೇಶದಲ್ಲಿ ದಶಕಗಳಿಂದ ನಡೆಯುತ್ತಿದ್ದ ಅರಣ್ಯ ಮತ್ತು ಜನರ ಹಕ್ಕುಗಳಿಗೆ ಸಂಬಂಧಿಸಿದ ಹಲವು ಪ್ರತಿಭಟನೆಗಳ ಪರಿಣಾಮ. ಆಂದೋಲನವು ಉತ್ತರಾಖಂಡದ ಕುಮಾಂವ್ ಪ್ರದೇಶದಲ್ಲಿ ಸಮಾಜವಾದಿಗಳು ಮತ್ತು ಗರ್ವಾಲ್ನಲ್ಲಿ ಕಮ್ಯುನಿಸ್ಟರ ಹಿಡಿತದಲ್ಲಿ ಇದ್ದಿತ್ತು. 1973, 1975 ಮತ್ತು 1981-83ರಲ್ಲಿ ಮೂರು ಬಾರಿ ಪಾದಯಾತ್ರೆ ನಡೆಸಿದರು. ಈ ಎಲ್ಲ ಪ್ರಯತ್ನಗಳಿಂದ ಉತ್ತರ ಪ್ರದೇಶ ಸರಕಾರವು 1,000 ಮೀಟರ್ಗಿಂತ ಎತ್ತರದಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ ಹಸಿರು ಮರಗಳನ್ನು ಕಡಿಯುವುದನ್ನು ನಿಷೇಧಿಸಿತು. ಚಿಪ್ಕೋ ಸಂದೇಶವನ್ನು ಮರಗಳ ಮನುಷ್ಯ ಎಂದು ಪ್ರಖ್ಯಾತರಾದ ರಿಚರ್ಡ್ ಬಾರ್ಬೆ ಬೇಕರ್ 108 ದೇಶಗಳಲ್ಲಿ ಹರಡಿದರು.

ಬಹುಗುಣ ಇಡೀ ಹಿಮಾಲಯಕ್ಕೆ ಒಂದು ಸುಸಂಘಟಿತ ಮತ್ತು ಸುಸಂಬದ್ಧ ಸಂರಕ್ಷಣಾ ನೀತಿ ಅಗತ್ಯವೆಂದು ನಂಬಿದ್ದರು. ಇದಕ್ಕಾಗಿ 1981-83ರ ನಡುವೆ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಿಂದ ನಾಗಾಲ್ಯಾಂಡ್ನ ಕೊಹಿಮಾದವರೆಗೆ 5,000 ಕಿ.ಮೀ. ಉದ್ದದ ಜಾಥಾ ಕೈಗೊಂಡರು. 1990ರ ಆರಂಭದಲ್ಲಿ ‘ಹಿಮಾಲಯ ಉಳಿಸಿ’ ಮತ್ತು ತೆಹ್ರಿ ಅಣೆಕಟ್ಟು ವಿರುದ್ಧ ಆಂದೋಲನ ಮುನ್ನಡೆಸಿದರು. ತೆಹ್ರಿ ವಿರುದ್ಧ ಹೋರಾಟ ಆರಂಭಿಸಿದವರು ವಕೀಲ ಮತ್ತು ಭೂವಿಜ್ಞಾನಿ ವೀರೇಂದ್ರ ದತ್ ಸಕ್ಲಾನಿ. 1960ರಲ್ಲಿ ವಿಷಯವನ್ನು ಸುಪ್ರೀಂ ಕೋರ್ಟ್ ಗೆ ಕೊಂಡೊಯ್ದರು. ಸಕ್ಲಾನಿ 1980ರ ದಶಕದಲ್ಲಿ ಅನಾರೋಗ್ಯ ಮತ್ತು ವಯಸ್ಸಿನ ಹಿನ್ನೆಲೆಯಲ್ಲಿ ಬಹುಗುಣ ಅವರಿಗೆ ಜವಾಬ್ದಾರಿ ವಹಿಸಿಕೊಟ್ಟರು. ತೆಹ್ರಿ ಯೋಜನೆ ವಿರೋಧಿಸಿ ಭಾಗೀರಥಿ ನದಿಯ ದಡದಲ್ಲಿ ನೆಲೆಸಿದರು ಮತ್ತು 1995ರಲ್ಲಿ 45 ದಿನಗಳ ಸುದೀರ್ಘ ಉಪವಾಸ ಕೈಗೊಂಡರು. ಪ್ರಧಾನಿ ಪಿ.ವಿ. ನರಸಿಂಹರಾವ್ ಅವರ ಮಧ್ಯಸ್ಥಿಕೆ ನಂತರ ನಿರಶನ ಕೊನೆಗೊಳಿಸಿದರು. 2001ರಲ್ಲಿ ಹೊಸದಿಲ್ಲಿಯ ರಾಜ್ಘಾಟ್ನಲ್ಲಿ 74 ದಿನಗಳ ಸುದೀರ್ಘ ಉಪವಾಸ ಮಾಡಿದರು. ಹೀಗಿದ್ದರೂ, ತೆಹ್ರಿ ಅಣೆಕಟ್ಟು ನಿರ್ಮಾಣ ತಡೆಯಲು ಸಾಧ್ಯವಾಗಲಿಲ್ಲ. ಪ್ರಧಾನಿ ಇಂದಿರಾಗಾಂಧಿ ಅವರು 1980ರಲ್ಲಿ ತೆಹ್ರಿ ಯೋಜನೆಯನ್ನು ಪುನರ್ಪರಿಶೀಲಿಸಬೇಕೆಂದು ವಿಜ್ಞಾನ-ತಂತ್ರಜ್ಞಾನ ಇಲಾಖೆಗೆ ಪತ್ರ ಬರೆದಿದ್ದರು. ಇಲಾಖೆ ರಚಿಸಿದ ಸಮಿತಿಯು ಯೋಜನೆ ನಿಲ್ಲಿಸಬೇಕೆಂದು ಹೇಳಿತ್ತು (ಆಗಸ್ಟ್ 28,1986) ಮತ್ತು ಇದಕ್ಕೆ ಪರಿಸರ-ಅರಣ್ಯ ಮಂತ್ರಾಲಯದ ಪರಿಸರ ಮೌಲ್ಯಮಾಪನ ಸಮಿತಿ(ಇಎಸಿ) ಸಮ್ಮತಿಸಿತು. ಹೀಗಿದ್ದರೂ ಯೋಜನೆ ಅನುಷ್ಠಾನಗೊಂಡಿತು. ಅವರಿಗೆ 1987ರಲ್ಲಿ ರೈಟ್ ಲೈವ್ಲಿಹುಡ್ ಪ್ರಾಪ್ತವಾಯಿತು ಹಾಗೂ 1981ರಲ್ಲಿ ಪದ್ಮಶ್ರೀಯನ್ನು ನಿರಾಕರಿಸಿದರು. ಮೇ 21, 2021ರಂದು ರಿಷಿಕೇಶದಲ್ಲಿರುವ ಏಮ್ಸ್ (ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್)ನಲ್ಲಿ ಮೃತಪಟ್ಟರು.

ಸಂಕಷ್ಟದಲ್ಲಿ ಹಿಮಾಲಯ

1981-83ರಲ್ಲಿ ಬಹುಗುಣ ಕಾಶ್ಮೀರದಿಂದ ಕೊಹಿಮಾವರೆಗೆ ಪಾದಯಾತ್ರೆ ನಡೆಸಿದ ಬಳಿಕ, ‘ಹೆಚ್ಚಿನವರಿಗೆ ಹಿಮಾಲಯ ಎಂದರೆ ದೃಶ್ಯ ವೈಭವ; ಹಿಮಚ್ಛಾದಿತ ಶಿಖರಗಳು, ಮರಗಳಿಂದ ತುಂಬಿರುವ ಬೆಟ್ಟಗಳ ಇಳಿಜಾರು, ನದಿಗಳು-ಸರೋವರಗಳು, ಹಸಿರುಡುಗೆ ತೊಟ್ಟ ಹಳ್ಳಿಗಳು ಹಲವು ಶತಮಾನಗಳಿಂದ ಪ್ರಕೃತಿಪ್ರಿಯರು, ಅಧ್ಯಾತ್ಮದ ಒಲವಿರುವವರು, ಕವಿಗಳು-ಕಲಾವಿದರನ್ನು ಸೆಳೆಯುತ್ತಿವೆ. ಆದರೆ, ಹಿಮಾಲಯದ ವೈಭವ ವೇಗವಾಗಿ ಕರಗುತ್ತಿದೆ. ನೀರ್ಗಲ್ಲುಗಳು ಕರಗುತ್ತಿವೆ, ಇಳಿಜಾರುಗಳು ಬರಿದಾಗುತ್ತಿವೆ, ನದಿ-ಸರೋವರಗಳಲ್ಲಿ ಹೂಳು ತುಂಬಿಕೊಳ್ಳುತ್ತಿದೆ ಮತ್ತು ಗಿರಿ ಕಂದರಗಳು ಬರಡಾಗುತ್ತಿವೆ’ ಎಂದು ಬರೆದಿದ್ದರು. ಅವರ ತಂಡ ಪಾದಯಾತ್ರೆ ಬಳಿಕ ಸಲ್ಲಿಸಿದ ವರದಿ(ಕೆಕೆಎಂ ವರದಿ)ಯಲ್ಲಿ, ‘ನೇಪಾಳದಲ್ಲಿ ಅರಣ್ಯನಾಶದ ವಿಪರಿಣಾಮ ಸ್ಪಷ್ಟವಾಗಿ ಗೋಚರಿಸುತ್ತಿದೆ. ಬೆಟ್ಟಗಳು ಬರಿದಾಗಿವೆ; ಅಂದಾಜಿನ ಪ್ರಕಾರ, 240 ದಶಲಕ್ಷ ಟನ್ ಮೇಲ್ಮಣ್ಣು ಕೊಚ್ಚಿ ಹೋಗಿದ್ದು, ನದಿಪಾತ್ರಗಳನ್ನು ಎತ್ತರಿಸಿದೆ ಮತ್ತು ಆಗಾಗ ಪ್ರವಾಹ ಸಂಭವಿಸುತ್ತಿದೆ’ ಎನ್ನಲಾಗಿತ್ತು. ಈ ಭವಿಷ್ಯವಾಣಿ ಮತ್ತೆಮತ್ತೆ ಮರುಧ್ವನಿಸುತ್ತಿದ್ದು, ಹಿಮಾಲಯ ಉಗ್ರವಾಗಿ ಪ್ರತಿಕ್ರಿಯಿಸುತ್ತಿದೆ.

ಹಿಮಾಲಯ ತೀರ ಎಳೆಯ ಪರ್ವತಶ್ರೇಣಿ. ಭಾರತ ಉಪಖಂಡದ ಶಿಲಾಫಲಕವು ಟಿಬೆಟಿಯನ್ ಫಲಕವನ್ನು ಒತ್ತುತ್ತಿದ್ದು, ಇದರಿಂದ ಟಿಬೆಟಿಯನ್ ಫಲಕ ಸ್ವಲ್ಪ ಮೇಲಕ್ಕೆ ಏರುತ್ತದೆ. ಈ ನಿರಂತರ ಕ್ರಿಯೆಯಿಂದ ಹಿಮಾಲಯದ ಎತ್ತರ ನಿರಂತರವಾಗಿ ಬದಲಾಗುತ್ತಿರುತ್ತದೆ. ಧಾರಣ ಸಾಮರ್ಥ್ಯ ಕಡಿಮೆ ಇರುವ ದುರ್ಬಲ ಕಲ್ಲು, ಸಣ್ಣ ಹರಳುಗಳಿಂದ ಕೂಡಿದ ಸಡಿಲ ಮಣ್ಣು ಮತ್ತು ನೆಲದಡಿಯ ನೀರು ಕಾಲುವೆಗಳಿಂದಾಗಿ ಇಲ್ಲಿ ಮಣ್ಣು ಸುಲಭವಾಗಿ ಕುಸಿಯುತ್ತದೆ. ‘ಹಿಮಾಚಲ ಪ್ರದೇಶ, ಉತ್ತರಾಖಂಡ, ಸಿಕ್ಕಿಂ, ನೇಪಾಳ ಮತ್ತು ಭೂತಾನ್ ಅತ್ಯಂತ ಅಸ್ಥಿರ ಪ್ರದೇಶದಲ್ಲಿವೆ. ಇಲ್ಲಿ ಯಾವುದೇ ಬೃಹತ್ ನಿರ್ಮಾಣ ಕೂಡದು. ತಪೋವನ ಜಲವಿದ್ಯುತ್ ಯೋಜನೆ ಅಪಾಯಕಾರಿ’ ಎಂದು ಅಮೆರಿಕ ಟೊಲೆಡೊ ವಿಶ್ವವಿದ್ಯಾನಿಲಯದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ವಿಜ್ಞಾನಿಗಳು ಎಚ್ಚರಿಸಿದ್ದರು. ವರದಿ ಪ್ರಕಟಗೊಂಡ ಕೆಲವೇ ತಿಂಗಳ ಬಳಿಕ ಫೆಬ್ರವರಿ 2021ರಲ್ಲಿ ಉತ್ತರಾಖಂಡದಲ್ಲಿ ಸಂಭವಿಸಿದ ನೀರ್ಗಲ್ಲು ಕರಗುವಿಕೆ ಮತ್ತು ಕಲ್ಲುಗಳ ಕುಸಿತದಿಂದ ತೀಸ್ತಾ ನದಿ ಹಠಾತ್ ಉಕ್ಕಿ ಹರಿದು 83 ಮಂದಿ ಮೃತಪಟ್ಟರು ಮತ್ತು ಕನಿಷ್ಠ 416 ಮಂದಿ ನಾಪತ್ತೆಯಾದರು. ಕಳೆದ ಜನವರಿಯಲ್ಲಿ ಉತ್ತರಾಖಂಡದ ಜೋಶಿಮಠ ಅಲಕಾನಂದಾ ನದಿಯತ್ತ ಕುಸಿಯುತ್ತಿರುವುದು ಸುದ್ದಿಯಾಗಿತ್ತು. ತಪೋವನ-ವಿಷ್ಣುಗಡ ಜಲವಿದ್ಯುತ್ ಯೋಜನೆಗೆ ನಿರ್ಮಿಸುತ್ತಿರುವ 12 ಕಿ.ಮೀ. ಉದ್ದದ ಸುರಂಗ ಜೋಶಿಮಠದ ಕೆಳಗೆ ಸಾಗುತ್ತಿದ್ದು, ಪಟ್ಟಣದ ಕುಸಿತಕ್ಕೆ ಅದೇ ಕಾರಣ ಎಂದು ಅಧ್ಯಯನಗಳು ಹೇಳಿದವು. ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ಸಿಕ್ಕಿಂನಲ್ಲಿ ಇಂಥ ಹತ್ತಾರು ಯೋಜನೆಗಳು ನಿರ್ಮಾಣಗೊಳ್ಳುತ್ತಿವೆ. ಹಿಮಾಚಲ ಪ್ರದೇಶ ಸರಕಾರ 27 ಜಲವಿದ್ಯುತ್ ಯೋಜನೆಗಳನ್ನು ರೂಪಿಸಿದ್ದು, ವಿಶ್ವ ಬ್ಯಾಂಕಿನೊಡನೆ 200 ದಶಲಕ್ಷ ಡಾಲರ್ ಒಪ್ಪಂದಕ್ಕೆ ಸಹಿ ಹಾಕಿದೆ.

ಸಿಲ್ಕ್ಯಾರದ ಸುರಂಗ ಘಟನೆ ಬಳಿಕ science.orgನಲ್ಲಿ ಪ್ರಕಟಗೊಂಡಿದ್ದ ಲೇಖನ, ‘ಹೆಚ್ಚಿನ ಭಾರತೀಯ ಸಂಶೋಧಕರಿಗೆ ಇದು ನಿರೀಕ್ಷಿತ ಘಟನೆಯಾಗಿತ್ತು. ೧.೯ ಶತಕೋಟಿ ಡಾಲರ್ ವೆಚ್ಚದ ಚಾರ್ಧಾಮ್ ಯೋಜನೆಯು ರಸ್ತೆ ವಿಸ್ತರಣೆ, ಸುರಂಗ, 100ಕ್ಕೂ ಅಧಿಕ ಸೇತುವೆ ಹಾಗೂ 3,500ಕ್ಕೂ ಅಧಿಕ ಚರಂಡಿಗಳ ನಿರ್ಮಾಣಕ್ಕೆ ಡೈನಮೈಟ್ ಸಿಡಿತ, ಮರ ಕಡಿತ, ಬೆಟ್ಟದ ಇಳಿಜಾರಿನ ಕತ್ತರಿಸುವಿಕೆಯಿಂದ ಭೂಕುಸಿತ, ಪ್ರವಾಹ ಮತ್ತು ಬಂಡೆಗಳ ಉರುಳುವಿಕೆ ಸಂಭವಿಸುತ್ತದೆ ಎಂದು ತಜ್ಞರು ಮೊದಲೇ ಎಚ್ಚರಿಸಿದ್ದರು’. ಯೋಜನೆ ವಿರುದ್ಧ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣಕ್ಕೆ ದೂರು ಸಲ್ಲಿಕೆಯಾಗಿತ್ತು. 2019ರಲ್ಲಿ ಸುಪ್ರೀಂ ಕೋರ್ಟ್ ನೇಮಿಸಿದ ಪರಿಸರ ವಿಜ್ಞಾನಿ ರವಿ ಚೋಪ್ರಾ ನೇತೃತ್ವದ ಉನ್ನತಾಧಿಕಾರ ಸಮಿತಿಯು ‘ಇಂಜಿನಿಯರ್ಗಳು ಸ್ಥಳೀಯ ಭೌಗೋಳಿಕ ಮತ್ತು ಜಲವೃತ್ತದ ವಿಶ್ಲೇಷಣೆಯಲ್ಲಿ ವಿಫಲರಾಗಿದ್ದಾರೆ’ ಎಂದು ಹೇಳಿತ್ತು. ಆದರೆ, ಸೇನೆಯ ಸಂಚಾರಕ್ಕೆ ವಿಸ್ತಾರವಾದ ರಸ್ತೆ ಅಗತ್ಯವಿದೆ ಎಂಬ ಸರಕಾರದ ವಾದವನ್ನು ಪರಿಗಣಿಸಿ, ರಸ್ತೆ ನಿರ್ಮಾಣಕ್ಕೆ 2022ರಲ್ಲಿ ಅನುಮತಿ ನೀಡಿತು. ರವಿ ಚೋಪ್ರಾ ಸಮಿತಿಗೆ ರಾಜೀನಾಮೆ ನೀಡಿದರು. ಜುಲೈನಲ್ಲಿ ಈ ಯೋಜನೆಯ ಭಾಗವಾದ ಚುಂಗ್ರಿ-ಬಡೇತಿ ಸುರಂಗ ಮಾರ್ಗದಲ್ಲಿ ಭೂಕುಸಿತ ಸಂಭವಿಸಿತು.

ಈಶಾನ್ಯ ಭಾರತ ಕೂಡ ಅಭಿವೃದ್ಧಿ ಜ್ವರಪೀಡಿತವಾಗಿದೆ. ಅರುಣಾಚಲ ಪ್ರದೇಶ, ಅಸ್ಸಾಂ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ತ್ರಿಪುರ ಮತ್ತು ಸಿಕ್ಕಿಂ ವಿಶಿಷ್ಟ ಜೀವವೈವಿಧ್ಯ ತಾಣಗಳು. ಗ್ರೇಟರ್ ಹಿಮಾಲಯನ್ ಪರಿಸರ ವ್ಯವಸ್ಥೆಯ ಭಾಗಗಳು. ಅರುಣಾಚಲ ಪ್ರದೇಶದಲ್ಲಿ 170 ಜಲವಿದ್ಯುತ್ ಯೋಜನೆಗಳನ್ನು ಯೋಜಿಸಲಾಗಿದೆ. ಈಶಾನ್ಯ ಭಾರತದ ಬೆಟ್ಟಗಳು ಕರಗುತ್ತಿವೆ. ಅಸ್ಸಾಂ-ಮೇಘಾಲಯದಲ್ಲಿ ಪೆಟ್ರೋಲಿಯಂ-ಸ್ವಾಭಾವಿಕ ಅನಿಲ, ಕಲ್ಲಿದ್ದಲು, ಸುಣ್ಣದ ಕಲ್ಲು ನಿಕ್ಷೇಪ ಹಾಗೂ ಖಾಸಿ ಬೆಟ್ಟದಲ್ಲಿ ಯುರೇನಿಯಂ ನಿಕ್ಷೇಪ ಇದೆ. ಈ ರಾಜ್ಯಗಳ ಗಣಿಗಾರಿಕೆ ಕಾರ್ಯನೀತಿಯಲ್ಲಿನ ಗೊಂದಲ ಮತ್ತು ನಿಯಂತ್ರಣದಲ್ಲಿನ ಅಡೆತಡೆಗಳಿಂದ ಅಪಾರ ಭ್ರಷ್ಟಾಚಾರ ಮತ್ತು ಪರಿಸರ ನಾಶ ಆಗುತ್ತಿದೆ. ಮೇಘಾಲಯದಿಂದ ಕಲ್ಲುಗಳು ಬಾಂಗ್ಲಾ ಮೂಲಕ ಶಾರ್ಜಾ-ದುಬೈಗೆ ರವಾನೆಯಾಗುತ್ತಿವೆ. ಈಗ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಕಲ್ಲಿದ್ದಲು ಗಣಿಗಾರಿಕೆಗೆ ನಿರ್ಬಂಧ ವಿಧಿಸಿದೆ.

‘ಹೀನಯಿಸುವಿಕೆ, ನಿರ್ಲಕ್ಷ್ಯ, ಒಂಟಿತನ ಮತ್ತು ಅವಮಾನ ನನ್ನನ್ನು ಇನ್ನಷ್ಟು ಬಲಪಡಿಸುತ್ತವೆ’ ಎಂದು ಹೇಳುತ್ತಿದ್ದ ಅವರು, ‘ಇಕಾಲಜಿ ಎನ್ನುವುದು ಶಾಶ್ವತ ಆರ್ಥಿಕತೆ; ಮನುಕುಲವನ್ನು ಕಾಡುತ್ತಿರುವ ಸಮಸ್ಯೆಗಳಾದ ಯುದ್ಧ, ಮಾಲಿನ್ಯ ಹಾಗೂ ಬಡತನವನ್ನು ನಿವಾರಿಸಬಲ್ಲದು’ ಎಂದು ನಂಬಿದ್ದರು; ಅಂತೆಯೇ ಬದುಕಿದರು. ನಾವು?

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ಋತ

contributor

Similar News

ಪತನದ ಕಳವಳ