ರೈತರು ಇರಬೇಕು, ಆದರೆ ಇರಬಾರದು!

Update: 2024-08-15 05:38 GMT

ಬೆಳೆಗೊಂದು ಬೆಲೆ ನಿಗದಿ ಮಾಡದ ಪ್ರಭುತ್ವ; ಪರಿಣಾಮ ಸಾಲಸೋಲ ಮಾಡಿದ ಎಷ್ಟೋ ರೈತರು ಸಹಜವಾಗಿ ಆತ್ಮಹತ್ಯೆಯ ದಾರಿ ಹಿಡಿಯಬೇಕಾಗಿತ್ತು. ಭಾರತದ ಗ್ರಾಮೀಣ ಅಧ್ಯಯನಕಾರ, ಪತ್ರಕರ್ತ ಸಾಯಿನಾಥ್ ಅವರ ಪ್ರಕಾರ ಸುಮಾರು ಎರಡೂವರೆ ಲಕ್ಷಕ್ಕಿಂತ ಹೆಚ್ಚು ರೈತರು ಈ ದೇಶದಲ್ಲಿ ಈವರೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ!

ಭಾರತ ಒಂದೇ ಅಲ್ಲ, ಈ ಜಗತ್ತಿನ ಯಾವುದೇ ದೇಶದ ಕೃಷಿರಂಗವನ್ನು ಮಣ್ಣು, ರೈತ, ಪ್ರಭುತ್ವ ಮತ್ತು ಬಳಕೆದಾರನ ದಾರಿಯಲ್ಲಿ ವಿಶ್ಲೇಷಣೆ ಮಾಡುವುದು ಸರಿಯಾದ ಕ್ರಮ. ಸ್ವಾತಂತ್ರ್ಯ ಪೂರ್ವದಿಂದಲೇ ಭಾರತದ ರೈತರನ್ನು ‘ಅನ್ನದಾತ, ಕಷ್ಟ ಜೀವಿ, ಬೆನ್ನೆಲುಬು’ ಎಂಬಿತ್ಯಾದಿ ಪುಣ್ಯ ವಿಶೇಷಣಗಳಿಂದ ಕರೆದುಕೊಂಡು ಬರಲಾಯಿತು. ‘ರೈತನಿಂದಲೇ ದೇಶ, ದೇಶವೇ ರೈತ’ ಎಂಬ ನಿರ್ವಚನ ಕ್ರಮ ಇವತ್ತಿಗೂ ಇಲ್ಲಿ ಜೀವಂತವಿದೆ. ಆದರೆ ರೈತನ ಸ್ಥಿತಿ ಮಾತ್ರ ಯಾವತ್ತೂ ಆರಕ್ಕೆ ಏರಲೇ ಇಲ್ಲ.

ಮೊನ್ನೆ ಮೊನ್ನೆಯವರೆಗೆ ಇದು ಜಗತ್ತಿನ ಸಮಸ್ಯೆಯೂ ಹೌದು. ನಿಮಗೆ ಗೊತ್ತಿರಬೇಕು, ಪ್ರಪಂಚದ ವಿಸ್ಮಯಗಳಲ್ಲಿ ಒಂದಾದ ಚೀನಾದ ಗೋಡೆಯ ನಿರ್ಮಾಣದ ನಿಜ ಉದ್ದೇಶ ರಾಷ್ಟ್ರರಕ್ಷಣೆಯಲ್ಲವಂತೆ. ಬದಲಾಗಿ ಒಳಗಡೆಯ ರೈತರು ಹೊರಗಡೆ ಓಡಬಾರದು ಎಂಬುದೇ ಆಗಿತ್ತಂತೆ.! ಪ್ರಪಂಚದ ಬಹುಪಾಲು ದೇಶಗಳು ಹೀಗೆಯೇ, ರೈತಾಪಿಗಳಿಗೆ ಸೆರೆಮನೆ ಕಟ್ಟುವುದು ಹೇಗೆ ಎಂಬುದನ್ನೇ ಯೋಚಿಸುವಂತಿದೆ.

‘ರೈತರು ಇರಬೇಕು, ಆದರೆ ಇರಬಾರದು’ ಎಂಬಂತಹ ತ್ರಿಶಂಕು ಸ್ಥಿತಿಯಲ್ಲಿ ಈ ಸಮುದಾಯ ಬದುಕುತ್ತಿದೆ. ಅದಕ್ಕೆ ನಾನು ಪದೇಪದೇ ಹೇಳುತ್ತಿರುವುದು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಒಂದು ಸಲ ಹೋಗಿ ಬನ್ನಿ. ಸಂಸತ್ತು, ವಿಧಾನಸೌಧ, ವಿಶ್ವವಿದ್ಯಾನಿಲಯ, ಮಹಾನಗರಗಳ ಆಯಕಟ್ಟಿನ ಜಾಗಗಳಲ್ಲಿ ಈ ದೇಶದ ಸಮಾಜ ಸುಧಾರಕರ, ಮುತ್ಸದ್ದಿಗಳ, ಬುದ್ಧಿಜೀವಿಗಳ, ಕಲಾವಿದರ, ಸ್ವಾತಂತ್ರ್ಯ ಹೋರಾಟಗಾರರ ಪ್ರತಿಮೆಗಳು ನೋಡಲು ಸಿಗುತ್ತವೆ. ವರ್ಷಕ್ಕೊಮ್ಮೆ ಆ ಮೂರ್ತಿಗಳ ಮೇಲೆ ಏಣಿ ಇಟ್ಟು ಮಾಲೆ ಏರಿಸುವ ರಾಜಕಾರಣಿಗಳು ಸಿಗುತ್ತಾರೆ. ಆದರೆ ಈ ದೇಶದ ನೂರಕ್ಕೆ ನೂರರಷ್ಟು ಜನರ ಹೊಟ್ಟೆ ತುಂಬಿಸುವ ರೈತರ ಒಂದೇ ಒಂದು ಮೂರ್ತಿಯನ್ನು ನೀವು ಎಲ್ಲಿಯಾದರೂ ನೋಡಿದ್ದೀರಾ? ಇದೇ ರಾಜಕಾರಣಿಯ, ಮುತ್ಸದ್ದಿಯ, ವಿಜ್ಞಾನಿಯ, ಬುದ್ಧಿಜೀವಿಯ ಹೊಟ್ಟೆ ತುಂಬಿಸುವ ಪೂರ್ತಿ ಜವಾಬ್ದಾರಿಯನ್ನು ವಹಿಸಿಕೊಂಡ ರೈತರ ಪಾಡು ಏನಾಗಿದೆ ಎಂಬುದನ್ನು ಗಂಭೀರವಾಗಿ ಯೋಚಿಸ ಬೇಕಾದವರು ಯಾರು?

ಭಾರತ ಒಂದೇ ಅಲ್ಲ, ಪ್ರಪಂಚದ ಅನೇಕ ದೇಶಗಳು ರೈತರಿಗೆ ಸೆರೆಮನೆ ಕಟ್ಟುವ- ನಿರ್ಬಂಧಿಸುವ ಪ್ರಯತ್ನವನ್ನು ಬಹಳ ನಾಜೂಕಿನಿಂದ ಮಾಡುತ್ತಿವೆ. ಅಮೆರಿಕಕ್ಕೆ ಸಂಬಂಧಪಟ್ಟ ಹಾಗೆ ಒಂದು ದೃಷ್ಟಾಂತ ಗಮನಿಸಿ. ನೀವು ಆ ದೇಶದ ಯಾವುದೇ ಮೂಲೆಯ ಯಾವುದೇ ಅಂಗಡಿಯಿಂದ ಒಂದು ಕೆ.ಜಿ. ಕೋಳಿ ಮಾಂಸ ಖರೀದಿಸಿದರೂ ಅದು ಆ ದೇಶದ ಮೂವರು ಕುಕ್ಕುಟ ಉದ್ಯಮಿಗಳಲ್ಲಿ ಒಬ್ಬನದಾಗಿರುತ್ತದೆ.!

ಅಂದರೆ ಇಡೀ ಅಮೆರಿಕದ ಕೋಳಿ ಸಾಕಣೆ ಮೂರು ಕಂಪೆನಿಗಳಿಗೆ ಒಳಪಟ್ಟಿದೆ. ಇಡೀ ದೇಶದ ಕುಕ್ಕುಟ ಉದ್ಯಮವನ್ನು ಅಲ್ಲಿಯ ಮೂರು ಉದ್ದಿಮೆದಾರರು ನಿಯಂತ್ರಿಸುತ್ತಾರಂತೆ. ಅವರು ಮಾಡಿದ ಮೊದಲನೇ ಕೆಲಸ ಹಳ್ಳಿ ಕೇಂದ್ರಿತ ನೆಲೆಗಳಲ್ಲಿ ಚದುರಿಹೋಗಿದ್ದ ರೈತರೇ ಸಾಕುತ್ತಿದ್ದ ಕೋಳಿ ಸಾಕಣೆಯನ್ನು ಬದಿಗೆ ಸರಿಸಿದ್ದು. ಮೊದಲು ಕೋಳಿ ಸಾಕಣೆಗೆ ಪೂರಕವಾದ ಪರಿಕರ ವಾತಾವರಣವನ್ನು ಸೃಷ್ಟಿಸಿದ್ದು. ಗೂಡು, ಮರಿ, ಫೀಡ್, ಇಂಜೆಕ್ಷನ್, ಟಾನಿಕ್ ಎಲ್ಲವುಗಳನ್ನು ತಾವೇ ಕೊಟ್ಟು ಕೋಳಿ ಉದ್ದಿಮೆಯನ್ನು ಪ್ರೋತ್ಸಾಹಿಸಿದ್ದು. ಈ ಮೂಲಕ ರೈತರೇ ಬಿಡಿಬಿಡಿಯಾಗಿ ಬೆಳೆಸುತ್ತಿದ್ದ ಸಣ್ಣಪುಟ್ಟ ಕೋಳಿ ಉದ್ದಿಮೆಯನ್ನು ಪರಿದಿಗೆ ಸರಿಸಿ ಇಡೀ ಉದ್ದಿಮೆಯನ್ನು ಈ ಮೂವರೇ ತಮ್ಮ ತೆಕ್ಕೆಗೆ ಒಳಪಡಿಸಿದ್ದು.

ಭಾರತವು ಸೇರಿ 90ರ ದಶಕದವರೆಗೆ ಇದನ್ನೇ ಮಾನ್ಸಂಟೋ ಕಂಪೆನಿ ಜಗತ್ತಿನಾದ್ಯಂತ ಮಾಡುತ್ತಿತ್ತು. ರೈತಾಪಿಗಳಿಗೆ ಬೇಕಾಗಿರುವ ಬೀಜ ಗೊಬ್ಬರ ಕೀಟನಾಶಕ ಎಲ್ಲವನ್ನೂ ಕೊಟ್ಟು ಕೊಟ್ಟು ಕೃಷಿಯನ್ನು ನಿಯಂತ್ರಿಸಿತ್ತು. ಮಣ್ಣು, ನೀರು, ಪರಿಶ್ರಮ ಮಾತ್ರ ರೈತರದ್ದು. ಉಳಿದ ಎಲ್ಲಾ ಒಳಸುರಿಗಳು ಕಂಪೆನಿಯದ್ದು. ಉತ್ಪಾದಿತ ಉತ್ಪನ್ನಗಳ ಖರೀದಿದಾರ ಕೂಡ ಕಂಪೆನಿಯವನೇ. ಹೀಗಾದಾಗ ರೈತ ಬೀಜ ತರಲು ಅದೇ ಅಂಗಡಿಗೆ ಹೋಗಬೇಕು. ಉತ್ಪನ್ನಗಳನ್ನು ಮಾರಲು ಮತ್ತದೇ ಅಂಗಡಿಗೆ ಓಡಬೇಕು. ಬೆಲೆ ನಿಗದಿ ಮಾಡುವುದು ಕಂಪೆನಿಯೇ. ಮಾರಾಟ- ಖರೀದಿ ಎರಡೂ ದಾರಿಯಲ್ಲೂ ಏಕಕಾಲದಲ್ಲಿ ಕಂಪೆನಿಯೇ ಮಾಲಕ-ಮಾರಕವಾಗಿ ಬಿಡುವ ಈ ಹುನ್ನಾರ ನಮ್ಮ ದೇಶದ ರೈತ ಸಮುದಾಯದ ಪರಂಪರಾಗತ ಮೌಲ್ಯ, ಸ್ವಾತಂತ್ರ್ಯವನ್ನು ಕಸಿದಿತ್ತು.

‘ಒಂದೇ ಬೀಜಕ್ಕೆ ಒಂದೇ ಮೊಳಕೆ’ ಎಂಬ ತಳಿ ತಂತುಗಳನ್ನು ಕಿತ್ತು ಹಾಕುವ ಟರ್ಮಿನೇಟರ್ (ಕುಲಾಂತರಿ)ಬೀಜಜ್ಞಾನ ಈ ಹಂತದಲ್ಲಿ ಭಾರತೀಯ ಸಾಂಪ್ರದಾಯಿಕ ಕೃಷಿಕರನ್ನು ತತ್ತರಿಸುವಂತೆ ಮಾಡಿತ್ತು. ಕಂಪೆನಿಯಿಂದ ಖರೀದಿಸಿದ ತಳಿ ಮರು ಬಿತ್ತನೆಯಲ್ಲಿ ಮೊಳಕೆ ಒಡೆಯದೆ ಇದ್ದರೆ ರೈತ ಮತ್ತೆ ಕಂಪೆನಿಯ ಬಾಗಿಲು ತಟ್ಟಬೇಕಾಗುತ್ತದೆ. ಒಂದು ಬೀಜ ಒಂದೇ ಮೊಳಕೆಯಿಂದಾಗಿ ಕೃಷಿರಂಗ ಪರಂಪರೆಗೆ ವಿಮುಖವಾಗಿ ಕಂಪೆನಿಯ ಕೈಯ ನಿಯಂತ್ರಣಕ್ಕೆ ಒಳಪಟ್ಟಿತು. ರಾಸಾಯನಿಕ ಗೊಬ್ಬರ, ಬೀಜ, ಕೀಟನಾಶಕಗಳಿಗೆ ಅಂಗಡಿಯ ಮುಂದೆ ಕ್ಯೂ ನಿಲ್ಲುವ ಪರಿಸ್ಥಿತಿ ಸೃಷ್ಟಿಯಾಯಿತು.

ಭಾರತೀಯ ರೈತರು ಈ ಕೃತಕ ರಾಸಾಯನಿಕ ಹೊರಸುರಿಯಿಂದಾಗಿ ಸಾಂಪ್ರದಾಯಿಕ ನೆಲದ ಸತ್ಯ ಶಕ್ತಿಗಳನ್ನು ನಿಧಾನವಾಗಿ ಕಳೆದುಕೊಂಡರು. ಈ ಬೀಜ ಹುನ್ನಾರದ ವಿರುದ್ಧ ಎಚ್ಚೆತ್ತ ರೈತ ಸಮುದಾಯ ಪ್ರತಿಭಟನೆಗೆ ತೊಡಗಿತು. ಕಾರ್ಗಿಲ್, ಕೆಂಟಕಿ ಚಿಕನ್‌ಗಳಿಗಾದ ಅವಸ್ಥೆ ತಮಗೂ ಬರಬಾರದೆಂದು ಮಾನ್ಸಂಟೋ ಭವಿಷ್ಯದ ಭದ್ರತೆಗಾಗಿ ಕೋರ್ಟಿಗೆ ಮೊರೆಹೋಯಿತು.

ಕೃಷಿ ಚರಿತ್ರೆಯಲ್ಲಿ ಭಾರತದ ಮಣ್ಣಿನ ಸಾರ ಶಕ್ತಿಯ, ಸಾವಯುವ ಸುಸ್ಥಿರತೆಯನ್ನು ಕುಲಗೆಡಿಸಿ ಭೂಮಿಗೆ ವಿಷ ಪ್ರವೇಶಿಸಿದ ಸಂದರ್ಭ ಒಂದನ್ನು ಇಲ್ಲಿ ಉಲ್ಲೇಖಿಸಲೇಬೇಕು. ಪ್ರಾಣಿಜನ್ಯ, ಸಸ್ಯಜನ್ಯ ಗೊಬ್ಬರಗಳನ್ನಷ್ಟೇ ಬಳಸಿ ಭೂಮಿಯ ಮತ್ತು ತಮ್ಮ ಆರೋಗ್ಯವನ್ನು ಕೆಡಿಸಿಕೊಳ್ಳದೆ ಹಿರಿಯರು ಕಾಪಾಡಿಕೊಂಡು ಬಂದ ಭೂಮಿಯ ಸಾರ ತಪ್ಪಿದ ಕಥೆ ಬಹುರೋಚಕವಾಗಿದೆ.

19ನೇ ಶತಮಾನದ ಮೊದಲ ಭಾಗದಲ್ಲಿ ಇಂಗ್ಲೆಂಡಿನಿಂದ ಬಂದ ಕೃಷಿ ಅಧ್ಯಯನಕಾರ ಭಾರತದ ಉದ್ದಗಲದಲ್ಲಿ ಸಂಚರಿಸಿ ಬ್ರಿಟಿಷ್ ಸರಕಾರಕ್ಕೊಂದು ವರದಿ ಸಲ್ಲಿಸುತ್ತಾನೆ. ಆ ವರದಿಯಲ್ಲಿ ದಕ್ಷಿಣ ಭಾರತದ ಕೊಪ್ಪಳ ಎನ್ನುವ ಪ್ರದೇಶದಲ್ಲಿ ನೇಗಿಲು ಎಂಬ ಸಲಕರಣೆಯಲ್ಲಿ ಭೂಮಿಯನ್ನು ರೈತರು ಅಡ್ಡಡ್ಡ ಸಿಗಿದು ನೆಲದೊಳಗೆ ಹಸುರೆಲೆ ಗೊಬ್ಬರವನ್ನು ತೂರಿಸುವ ಪದ್ದತಿ ಒಂದು ಚಾಲ್ತಿಯಲ್ಲಿದೆ, ಇದರಿಂದ ಭೂಮಿ ಮತ್ತಷ್ಟು ಸಾರಯುಕ್ತವಾಗುತ್ತದೆ. ನಾನು ಕಣ್ಣಾರೆ ಕಂಡ ಅನುಭವದ ದಾರಿಯಲ್ಲಿ ಭಾರತದ ಕೃಷಿಯನ್ನು ಬದಲಾಯಿಸುವ ಅಗತ್ಯವಿಲ್ಲ. ಬದಲಾಯಿಸುವುದಾದರೆ ಇಂಗ್ಲೆಂಡಿನ ಕೃಷಿಯನ್ನೇ ಭಾರತದ ಮಾದರಿಯಲ್ಲಿ ಬದಲಾಯಿಸಬಹುದೆಂದು ಆಂಗ್ಲ ಸರಕಾರಕ್ಕೆ ಆ ಪ್ರವಾಸಿ ಅಧ್ಯಯನಕಾರ ವರದಿ ಸಲ್ಲಿಸುತ್ತಾನೆ. ಆಗ ಭಾರತದಲ್ಲಿ ಅದೇ ಬ್ರಿಟಿಷ್ ಆಡಳಿತವಿತ್ತು.

ಯಾವಾಗ ಭಾರತಕ್ಕೆ ಸ್ವಾತಂತ್ರ್ಯ ಸಿಗುತ್ತದೋ ನೂತನ ಯುವ ಪ್ರಧಾನಿ ನೆಹರೂ ಅವರಿಗೆ ಈ ದೇಶದ ಆಹಾರ ಉತ್ಪಾದನೆಯನ್ನು ಇಮ್ಮಡಿಗೊಳಿಸುವ ತುರ್ತು ಇತ್ತು. ಆಹಾರದ ಕೊರತೆಯೊಂದಿಗೆ ಪ್ಲೇಗ್ ಬರಗಾಲ ಬಡತನವನ್ನು ಹೆಚ್ಚಿಸಿತ್ತು. ಇದೇ ಹೊತ್ತಿಗೆ ಮಹಾಯುದ್ಧ ಮುಗಿದು ಅಮೋನಿಯಯುಕ್ತ ಯುದ್ಧೋಪಕರಣಗಳನ್ನು ಸೃಷ್ಟಿಸುವ ಕಾರ್ಖಾನೆಗಳಲ್ಲಿ ಅದೇ ಕಚ್ಚಾ ವಸ್ತುವಿನಿಂದ ರಾಸಾಯನಿಕ ಗೊಬ್ಬರಗಳನ್ನು ಉತ್ಪಾದಿಸಿ ಅವುಗಳನ್ನು ಖರೀದಿಸುವ ದೇಶಗಳಿಗಾಗಿ ಆ ಕಂಪೆನಿಗಳು ಹುಡುಕುತ್ತಿದ್ದವು.

ನೆಹರೂ ಆ ರಾಸಾಯನಿಕ ಚೋಧಕಗಳ ಬಗ್ಗೆ ಭರವಸೆ ಇಡುತ್ತಾರೆ. ವಿದೇಶದಿಂದ ಆಮದಾದ ಎನ್.ಪಿ.ಕೆ.ಯನ್ನು ರಾತೋರಾತ್ರಿ ಭಾರತದ ಗದ್ದೆಗಳಿಗೆ ಬೆಳೆಗಳಿಗೆ ಸುರಿಯಲಾಗುತ್ತದೆ. ಒಂದೇ ವಾರದಲ್ಲಿ ನಳನಳಿಸುವ ಗಿಡಬಳ್ಳಿಗಳನ್ನು ಕಂಡು ನಿಜವಾಗಿ ಇದು ಮಂತ್ರದ ಪುಡಿಯೇ ಎಂದು ಭಾವಿಸಲಾಗುತ್ತದೆ.

ಆವತ್ತಿನಿಂದ ಇವತ್ತಿನವರೆಗೆ ಕೃಷಿಯ ನೆಪದಲ್ಲಿ ಭಾರತದ ಗದ್ದೆಗಳಿಗೆ ಸುರಿಯಲಾದ ರಾಸಾಯನಿಕ ಕೀಟನಾಶಕಗಳಿಗೆ ಲೆಕ್ಕವಿಲ್ಲ. ಇದರಿಂದ ಭೂಮಿಯ ನಿಜಸಾರ ಶಕ್ತಿ ಬರಿದಾಗಿದೆ. ವಿಷದ ನೀರಿನಲ್ಲಿ ಮಿಂದು ಬರುವ ಉತ್ಪನ್ನಗಳನ್ನು ತಿಂದ ಮನುಷ್ಯನ ಜೀವಶಕ್ತಿಯು ನಿಶ್ತೇಜಗೊಂಡಿದೆ.

21ನೇ ಶತಮಾನದ ಆಸುಪಾಸಿಗೆ ಮನಮೋಹನ್ ಸಿಂಗ್ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಸಹಜವಾಗಿಯೇ ಕೃಷಿಕೇಂದ್ರಿತ ರೈತಾಪಿಗಳ ನಿಬಿಡತೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಅವರನ್ನೆಲ್ಲ ನಗರ ಕೇಂದ್ರಿತರನ್ನಾಗಿ ಮಾಡುವ ಉದ್ದೇಶ ಬಲವಾಯಿತು. ಹಳ್ಳಿ, ಗ್ರಾಮದ ಶೇ.65ರಷ್ಟು ಇದ್ದ ಜನನಿಬಿಡತೆಯನ್ನು ಶೇ. 40ಕ್ಕೆ ಇಳಿಸುವ ಕೆಲಸವಾಯಿತು. ನಗರದ ಕಡೆಗೆ ವಲಸೆ ಮಿತಿಮೀರಿದ್ದು, ನಗರ ಸೇರಿದ ಜನರಿಗೆ ಸುಲಭ ಬದುಕಿಗೆ ಒಂದೋ ವೇತನ ಹೆಚ್ಚಾಗಬೇಕು, ಇಲ್ಲ ಸುಲಭದಲ್ಲಿ ಆಹಾರ ಲಭ್ಯವಾಗಬೇಕು.

ಇಲ್ಲಿ ಎರಡನೆಯದಕ್ಕೆ ಆದ್ಯತೆ ನೀಡಿ ಗ್ರಾಮದಲ್ಲೇ ಉಳಿದ ರೈತರ ಕೃಷಿ ಉತ್ಪಾದನೆಯನ್ನು ವೃದ್ಧಿಸುವ ಉದ್ದೇಶದಿಂದ ಪ್ರಭುತ್ವ ರೈತ ವಲಯಕ್ಕೆ ಬಹುದಾರಿಯಲ್ಲಿ ಸಬ್ಸಿಡಿಯನ್ನು ಪ್ರಕಟಿಸುವುದಕ್ಕೆ ತೊಡಗಿತು. ನೀರಾವರಿ, ಕೊಳವೆಬಾವಿ, ಬೀಜ, ಗೊಬ್ಬರ, ಕೀಟನಾಶಕ, ಎಲ್ಲದಕ್ಕೂ ಸಬ್ಸಿಡಿ ಜೊತೆಗೆ ಸಾಲಮನ್ನವೂ ಸೇರಿಕೊಂಡಿತು. ರೈತರೇನೋ ಹೆಚ್ಚು ಹೆಚ್ಚು ಉತ್ಪಾದಿಸಿದರು. ಸಹಜವಾಗಿಯೇ ಬೆಲೆ ಕುಸಿಯಿತು. ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡಲು ಸಿದ್ಧರಿಲ್ಲದಿದ್ದಾಗ ಬೆಂಬಲ ಬೆಲೆ ನಿಗದಿಗೆ ಪ್ರತಿಭಟನೆ ಬಲವಾಯಿತು.

ಬೆಳೆಗೊಂದು ಬೆಲೆ ನಿಗದಿ ಮಾಡದ ಪ್ರಭುತ್ವ; ಪರಿಣಾಮ ಸಾಲಸೋಲ ಮಾಡಿದ ಎಷ್ಟೋ ರೈತರು ಸಹಜವಾಗಿ ಆತ್ಮಹತ್ಯೆಯ ದಾರಿ ಹಿಡಿಯಬೇಕಾಗಿತ್ತು. ಭಾರತದ ಗ್ರಾಮೀಣ ಅಧ್ಯಯನಕಾರ, ಪತ್ರಕರ್ತ ಸಾಯಿನಾಥ್ ಅವರ ಪ್ರಕಾರ ಸುಮಾರು ಎರಡೂವರೆ ಲಕ್ಷಕ್ಕಿಂತ ಹೆಚ್ಚು ರೈತರು ಈ ದೇಶದಲ್ಲಿ ಈವರೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ!

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ನರೇಂದ್ರ ರೈ ದೇರ್ಲ

contributor

Similar News