ದಲಿತರಿಗೆ ಬಂತೇ ಸ್ವಾತಂತ್ರ್ಯ?

Update: 2024-08-15 07:35 GMT

ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳೇ ಕಳೆದುಹೋದರೂ, ದಲಿತರು ಮತ್ತು ದಲಿತೇತರರ ನಡುವಿನ ತಾರತಮ್ಯ ಹೆಚ್ಚಾಗುತ್ತಿದೆಯೇ ಹೊರತು ಕಡಿಮೆಯಾಗಲಿಲ್ಲ. ಸಾಮಾಜಿಕ-ಆರ್ಥಿಕವಾಗಿ ದಲಿತರಿಗೆ ಸಮಾನತೆ ಸಿಗಲೇ ಇಲ್ಲ. ಪ್ರಪಂಚದ ಬಹುದೊಡ್ಡ ಪ್ರಜಾಪ್ರಭುತ್ವ ದೇಶವೆಂದು ಬಾಯಿ ಮಾತಿಗೆ ಹೆಮ್ಮೆ ಪಡುವುದಾಯಿತೇ ಹೊರತು ಪ್ರಜಾಪ್ರಭುತ್ವದ ಬುನಾದಿ ಯಾದ ಸ್ವಾತಂತ್ರ್ಯ, ಸಮಾನತೆ, ಸಮಾನ ನ್ಯಾಯ ಹಾಗೂ ಬಂಧುತ್ವವನ್ನು ಎದೆಯೊಳಗೆ ಇಳಿಸಿಕೊಳ್ಳಲೇ ಇಲ್ಲ

ಕನ್ನಡದ ಪ್ರಸಿದ್ಧ ಕವಿ ಸಿದ್ಧಲಿಂಗಯ್ಯನವರ ‘‘ಯಾರಿಗೆ ಬಂತು.. ಎಲ್ಲಿಗೆ ಬಂತು.. 47ರ ಸ್ವಾತಂತ್ರ್ಯ’’ ಕವಿತೆ ಅಪ್ರಸ್ತುತವಾದಾಗ ದಲಿತರಿಗೆ, ದೇಶಕ್ಕೆ ನಿಜವಾದ ಸ್ವಾತಂತ್ರ್ಯ ದಕ್ಕಿರುತ್ತದೆ. ಆದರೆ ದಿನದಿಂದ ದಿನಕ್ಕೆ ಬ್ರಿಟಿಷರಿಂದ ಪಡೆದುಕೊಂಡಿರುವ ಸ್ವಾತಂತ್ರ್ಯವೇ ಕಳೆದು ಹೋಗುತ್ತಿದೆ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿರುವ ಈ ಸಂದರ್ಭದಲ್ಲಿ ದಲಿತರಿಗೆ ಸ್ವಾತಂತ್ರ್ಯ ಸಿಕ್ಕಿದೆಯೇ ಎಂಬ ಪ್ರಶ್ನೆಗೆ ನಿಖರವಾಗಿ ಇಲ್ಲವೆಂಬ ಉತ್ತರ ಸಿಗುತ್ತದೆ.

ಭಾರತದ ಸಂವಿಧಾನ ರಚನಾ ಸಭೆಯಲ್ಲಿ ಬ್ರಿಟಿಷರಿಂದ ಅಧಿಕಾರವನ್ನು ತಮ್ಮ ಕೈಗೆ ಹಸ್ತಾಂತರ ಮಾಡಿಸಿಕೊಂಡ ದೇಶದ ಮೇಲ್ಜಾತಿ-ಭೂಮಾಲಕ ವರ್ಗ ಎಂದಿನಂತೆ ಅಸ್ಪಶ್ಯತೆಯ ನಿವಾರಣೆಯನ್ನು ಕೇವಲ ಹತ್ತು ವರ್ಷಗಳಲ್ಲಿಯೇ ನಾಶ ಮಾಡುವುದಾಗಿ ಹೇಳಿತ್ತು. ಆದರೆ ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳೇ ಕಳೆದುಹೋದರೂ, ದಲಿತರು ಮತ್ತು ದಲಿತೇತರರ ನಡುವಿನ ತಾರತಮ್ಯ ಹೆಚ್ಚಾಗುತ್ತಿದೆಯೇ ಹೊರತು ಕಡಿಮೆಯಾಗಲಿಲ್ಲ. ಸಾಮಾಜಿಕ-ಆರ್ಥಿಕವಾಗಿ ದಲಿತರಿಗೆ ಸಮಾನತೆ ಸಿಗಲೇ ಇಲ್ಲ. ಪ್ರಪಂಚದ ಬಹುದೊಡ್ಡ ಪ್ರಜಾಪ್ರಭುತ್ವ ದೇಶವೆಂದು ಬಾಯಿ ಮಾತಿಗೆ ಹೆಮ್ಮೆ ಪಡುವುದಾಯಿತೇ ಹೊರತು ಪ್ರಜಾಪ್ರಭುತ್ವದ ಬುನಾದಿ ಯಾದ ಸ್ವಾತಂತ್ರ್ಯ, ಸಮಾನತೆ, ಸಮಾನ ನ್ಯಾಯ ಹಾಗೂ ಬಂಧುತ್ವವನ್ನು ಎದೆಯೊಳಗೆ ಇಳಿಸಿಕೊಳ್ಳಲೇ ಇಲ್ಲ.

ದಲಿತರು ಮತ್ತು ಸಾಮಾಜಿಕ ನ್ಯಾಯ

ದಿನಪತ್ರಿಕೆಯ ಸುದ್ದಿಗಳು ದಿನ ದಿನವೂ ಬದಲಾಗುತ್ತಲೇ ಇರಬೇಕಲ್ಲವೇ? ಆದರೆ ದಲಿತರ ಮೇಲಿನ ದೌರ್ಜನ್ಯಗಳು ಯಾವುದೋ ಮೂಲೆಯಲ್ಲಿ ಸುದ್ದಿಯಾಗುವುದು ನಿಂತೇ ಇಲ್ಲ. ದಲಿತರ ಮೇಲೆ ದೌರ್ಜನ್ಯವೆಸಗದೆ ಇದ್ದರೆ ಮೇಲ್ಜಾತಿಗಳಿಗೆ ತಿಂದನ್ನವೇ ಜೀರ್ಣವಾಗುವುದಿಲ್ಲ ಎಂಬ ಮಟ್ಟಿಗೆ ಅವುಗಳ ಸಂಖ್ಯೆ ಹೆಚ್ಚಾಗುತ್ತಿವೆ. ಎನ್‌ಸಿಆರ್‌ಬಿ (ರಾಷ್ಟ್ರೀಯ ಅಪರಾಧ ವರದಿ ಸಂಸ್ಥೆ) ಪ್ರಕಾರ 2012ರಲ್ಲಿ ಪ್ರತೀ 18 ನಿಮಿಷಗಳಿಗೆ ಒಂದರಂತೆ ದಲಿತರ ಮೇಲೆ ದೌರ್ಜನ್ಯವಾಗುತ್ತಿತ್ತು. ಪ್ರತಿದಿನ 3 ದಲಿತ ಮಹಿಳೆಯರ ಮೇಲೆ ಅತ್ಯಾಚಾರವಾಗುತ್ತಿತ್ತು. ದಿನಕ್ಕೊಂದು ದಲಿತರ ಹತ್ಯೆಯಾಗುತ್ತಿತ್ತು. 2014ರ ನಂತರ ಕೋಮುವಾದಿ ರಾಜಕಾರಣ ‘ಹಿಂದೂ ನಾವೆಲ್ಲ ಒಂದು’ ಎನ್ನುತ್ತಿದ್ದ ಸಂದರ್ಭದಲ್ಲಿ 2019ರ ಎನ್‌ಸಿಆರ್‌ಬಿ ವರದಿ ಪ್ರಕಟಿಸಿದಂತೆ 15 ನಿಮಿಷಗಳಿಗೊಂದು ದಲಿತರ ದೌರ್ಜನ್ಯವಾಗುತ್ತಿತ್ತು. ಪ್ರತಿದಿನ 6 ದಲಿತ ಮಹಿಳೆಯರ ಮೇಲೆ ಅತ್ಯಾಚಾರ ನಡೆಯಲಾರಂಭಿಸಿತು. ಇಬ್ಬರು ಹತರಾಗುತ್ತಿದ್ದರು. ಅಷ್ಟೇ ಅಲ್ಲ ದಲಿತರ ಮೇಲೆ ಗುಂಪು ಹಲ್ಲೆಗಳು (ಲಿಂಚಿಂಗ್) ಹೆಚ್ಚಾದವು. ಇಂತಹ 28 ಗುಂಪು ಹಲ್ಲೆಗಳು ದಾಖಲಾಗಿದ್ದು ಅದರಲ್ಲಿ 8 ದಲಿತರನ್ನು ಕೊಂದು ಹಾಕಲಾಗಿದೆ. ಅದೇ ಎನ್‌ಸಿಆರ್‌ಬಿಯ 2021ರ ವರದಿ ಪ್ರಕಾರ ಅದೊಂದು ವರ್ಷದಲ್ಲಿ 60,045 ದಲಿತರ ಮೇಲಿನ ದೌರ್ಜನ್ಯಗಳು ದಾಖಲಾಗಿವೆ. ಇದು ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ಅತಿ ಹೆಚ್ಚು. ಶೇ. 25.82ರಷ್ಟು ದೌರ್ಜನ್ಯಗಳು ಉತ್ತರಪ್ರದೇಶ ಒಂದರಲ್ಲಿಯೇ ನಡೆದಿವೆ. ಕಣ್ಣು ಕೆಂಪಗಾಗಿಸುವ ಮತ್ತೊಂದು ಅಂಶವೆಂದರೆ ಒಟ್ಟಾರೆ ದೌರ್ಜನ್ಯಗಳಲ್ಲಿ ಶೇ. 22.64ರಷ್ಟು ದಲಿತ ಮಹಿಳೆಯರ ಮೇಲಿನ ಅತ್ಯಾಚಾರಗಳಾಗಿವೆ. ಪ್ರತೀ 6 ನಿಮಿಷಕ್ಕೊಂದರಂತೆ ದಲಿತರ ಮೇಲೆ ಒಂದು ದೌರ್ಜನ್ಯವಾಗುತ್ತಿದೆ. ಪ್ರತಿದಿನ 14 ಅತ್ಯಾಚಾರ ನಡೆಯುತ್ತಿದೆ. ಅದರಲ್ಲಿ 4 ಅತ್ಯಾಚಾರಗಳು ದಲಿತ ಬಾಲಕಿಯರ ಮೇಲೆ ನಡೆಯುತ್ತಿದೆ! ಪ್ರತಿ ದಿನ 3 ದಲಿತರನ್ನು ಕೊಲ್ಲಲಾಗುತ್ತಿದೆ. ಇನ್ನು ದಲಿತರ ಮೇಲಿನ ದೌರ್ಜನ್ಯಗಳ ವಿರುದ್ಧವಾಗಿ ಭಾರತದ ನ್ಯಾಯಾಲಯಗಳು ನೀಡಿದ ನ್ಯಾಯದ ಬಗ್ಗೆ ಹೇಳುವುದಾದರೆ, 2021ರಷ್ಟೊತ್ತಿಗೆ ಬರೋಬ್ಬರಿ 82,977 ಪ್ರಕರಣಗಳಲ್ಲಿ ಪೊಲೀಸರು ತನಿಖೆಯನ್ನು ಪೂರ್ಣಗೊಳಿಸಿಲ್ಲ! 3,06,024 ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿ ಉಳಿದಿವೆ, ಅಂದರೆ ಶೇ. 96ರಷ್ಟು ಪ್ರಕರಣಗಳು ಬಾಕಿ ಉಳಿದಿವೆ. ನರಕದ ಕಥೆ ಹೀಗಿದೆ. ಈಗ ಹೇಳಿ, ನಲವತ್ತೇಳರ ಸ್ವಾತಂತ್ರ್ಯ ದಲಿತರ ಮನೆಗೆ ಬಂತಾ? ಬೆಳಕಿನ ಕಿರಣವ ತಂದಿತಾ?

ದಲಿತರು ಮತ್ತು ಆರ್ಥಿಕತೆ

World inequality lab - 2023 ಭಾರತದ ಸಂಪತ್ತಿನ ಹಂಚಿಕೆಯನ್ನು ಅಧ್ಯಯನ ಮಾಡಿದೆ. ಅದರ ಪ್ರಕಾರ ಭಾರತದ ಶೇ.1ರಷ್ಟು ಶತಕೋಟ್ಯಧಿಪತಿಗಳ ಬಳಿ ದೇಶದ ಶೇ.40 ರಷ್ಟು ಸಂಪತ್ತಿದೆ! ತಳಮಟ್ಟದ ಶೇ. 50ರಷ್ಟು ಭಾರತೀಯರ ಬಳಿ ಅಂದರೆ ಸುಮಾರು 46 ಕೋಟಿ ಭಾರತೀಯ ಬಡವರ ಬಳಿ ಕೇವಲ ಶೇ.6.4ರಷ್ಟು ಸಂಪತ್ತಿದೆ. ಶೇ. 88ರಷ್ಟು ಸಂಪತ್ತನ್ನು ಹೊಂದಿರುವವರು ಮೇಲ್ಜಾತಿಗಳೇ ಆಗಿದ್ದಾರೆ!. ಮತ್ತಷ್ಟು ಆಳಕ್ಕಿಳಿದು ನೋಡಿದಾಗ ಶೇ. 0.001ರಷ್ಟು ಶ್ರೀಮಂತರ ಬಳಿ ದೇಶದ ಶೇ.17ರಷ್ಟು ಸಂಪತ್ತಿದೆ. ಇವರ ಜನಸಂಖ್ಯೆ ಹತ್ತು ಸಾವಿರಕ್ಕಿಂತಲೂ ಕಡಿಮೆ ಇದೆ. ಈ ಶತಕೋಟ್ಯಧಿಪತಿಗಳ ಪಟ್ಟಿಯಲ್ಲಿ ಒಬ್ಬರೂ ಆದಿವಾಸಿಗಳಿಲ್ಲ! ಇದನ್ನು ಸರಳವಾಗಿ ವಿವರಿಸಬೇಕೆಂದರೆ ಭಾರತದ 100 ಶತಕೋಟ್ಯಧಿಪತಿಗಳಲ್ಲಿ 88 ಜನ ಮೇಲ್ಜಾತಿಗೆ ಸೇರಿದವರು. 9 ಜನ ಹಿಂದುಳಿದ ಜಾತಿಗೆ ಸೇರಿದವರು. 3 ಜನ ದಲಿತರು. ಇದರಲ್ಲಿ ಆದಿವಾಸಿಗಳಿಲ್ಲ.

All india debt and investment survey (AIDIS) for 2018-19 ಪ್ರಕಾರ ಭಾರತದ ಮೇಲ್ಜಾತಿಗಳ ಬಳಿ ದೇಶದ ಶೇ.55ರಷ್ಟು ಸಂಪತ್ತು ಕೊಳೆಯುತ್ತಿದೆ. ಇದನ್ನು ಮತ್ತಷ್ಟು ಬಿಡಿಸಿ ನೋಡಿದಾಗ, ಶೇ. 27.2ರಷ್ಟು ಮೇಲ್ಜಾತಿಗಳ ಬಳಿ ದೇಶದ ಶೇ. 53.7ರಷ್ಟು ಸಂಪತ್ತಿದೆ. ಶೇ. 43.9ರಷ್ಟು ಹಿಂದುಳಿದ ಜಾತಿಗಳ ಬಳಿ ದೇಶದ ಶೇ. 33.9ರಷ್ಟು ಸಂಪತ್ತಿದೆ. ಶೇ. 19.7ರಷ್ಟಿರುವ ಪರಿಶಿಷ್ಟ ಜಾತಿಯವರ ಬಳಿ ಶೇ. 8.4ರಷ್ಟು ಸಂಪತ್ತಿದೆ. ಶೇ. 9ರಷ್ಟಿರುವ ಪರಿಶಿಷ್ಟ ಪಂಗಡದವರ ಬಳಿ ಶೇ. 4 ರಷ್ಟು ಸಂಪತ್ತಿದೆ. ಇದನ್ನು ಸರಳವಾಗಿ ವಿವರಿಸುವುದಾದರೆ, (100 ಜನಸಂಖ್ಯೆಯ ದೇಶದಲ್ಲಿ 100 ರೂ. ಸಂಪತ್ತಿರುವಾಗ) ದೇಶದ 27 ಮೇಲ್ಜಾತಿಯವರಲ್ಲಿ 54 ರೂ. ಇದೆ. 44 ಹಿಂದುಳಿದ ಜಾತಿಯವರಲ್ಲಿ 34 ರೂ. ಇದೆ. 20 ದಲಿತರ ಬಳಿ 8 ರೂ. ಇದೆ ಮತ್ತು 9 ಆದಿವಾಸಿಗಳ ಬಳಿ 4 ರೂ. ಇದೆ.

ಹೀಗೆ ಆರ್ಥಿಕ ಪರಿಸ್ಥಿತಿಯಲ್ಲಿ ದಲಿತರು ಕಡೆಯ ವರು ಹಾಗೂ ನಿರ್ಗತಿಕರು. ಹೇಳಿ, ನಲವತ್ತೇಳರ ಸ್ವಾತಂತ್ರ್ಯ ‘ಅದಾನಿ-ಅಂಬಾನಿಗಳ ಜೇಬಿಗೆ ಬಂದಿತಲ್ಲವೇ..’

ದಲಿತರು ಮತ್ತು ಧಾರ್ಮಿಕತೆ

ಹಿಂದೂ ಧರ್ಮದ ದೃಷ್ಟಿಯಲ್ಲಿ ದಲಿತರು ಅಸ್ಪಶ್ಯರು. ಹಿಂದೂಗಳು ಅದೆಷ್ಟೇ ಬದಲಾಗಿದ್ದೇವೆ ಹಾಗೂ ಬದಲಾಗುತ್ತೇವೆ ಎಂದು ಹೇಳಿದರೂ ದಲಿತರ ಮೇಲಿನ ದೌರ್ಜನ್ಯದ ವಿಚಾರಕ್ಕೆ ಬಂದಾಗ ತಮ್ಮ ಜಾತಿಗಳ ಪರವಾಗಿ ನಿಂತ ಉದಾಹರಣೆಗಳೇ ಹೆಚ್ಚಿವೆ. ಮೇಲ್ಜಾತಿ ಹಿಂದೂಗಳು ದಲಿತರ ಕೇರಿಗೆ ಬಂದು ಪಾದಪೂಜೆ ಮಾಡಿಸಿಕೊಂಡು, ಪ್ರವಚನ ಕೊಡುವಲ್ಲಿ ನಿಸ್ಸೀಮರೇ ಹೊರತು ತಮ್ಮ ತಮ್ಮ ಕೇರಿಗಳಿಗೆ ತೆರಳಿ ಪಟ್ಟಭದ್ರರನ್ನು ಎದುರು ಹಾಕಿಕೊಳ್ಳಲು ಅಥವಾ ಮನವೊಲಿಸಲು ಬಯಸುವುದಿಲ್ಲ. ಇನ್ನು ದಲಿತರ ಮನೆಯಲ್ಲಿ ಊಟ ಮಾಡುವ, ತಮ್ಮ ಮನೆಗೆ ದಲಿತರಿಗೆ ಪ್ರವೇಶ ನೀಡುವ ತೋರಿಕೆ ವಿಚಾರಗಳು ಅಲ್ಲಲ್ಲಿ ಕಂಡುಬರುತ್ತಿದ್ದು, ಮೇಲ್ನೋಟಕ್ಕೆ ಕ್ರಾಂತಿಕಾರಿ ಎನಿಸಿದರೂ ಆ ಆಚರಣೆ ಸಹಜವಾಗದವರೆಗೂ ನಂಬಲಾಗದು. ಈ ತೋರಿಕೆ ಆಚರಣೆಗಳು ದಲಿತರಲ್ಲಿ ಸ್ವಾಭಿಮಾನ ಹಾಗೂ ದಲಿತೇತರರಲ್ಲಿ ಮಾನವೀಯತೆ ಮೂಡಿಸುವುದಕ್ಕಿಂತ ಹೆಚ್ಚಾಗಿ ‘ದಲಿತರು ತಿರುಗಿ ಬೀಳದಂತೆ’ ನೋಡಿಕೊಳ್ಳುವ ಹಾಗೂ ‘ತಮ್ಮೊಡನೆ ಬೀಗರೂಟ’ವನ್ನು ತಡೆಗಟ್ಟುವ ತಂತ್ರಗಳಾಗಿ ಕಂಡುಬರುತ್ತವೆ. ಜಾತಿವಿನಾಶ ಬಯಸದ ಮನಸ್ಸು ಅಸ್ಪಶ್ಯತೆಯನ್ನು ನಾಶ ಮಾಡುತ್ತೇನೆ ಎಂದುಕೊಳ್ಳುವುದು ಬಾಬಾಸಾಹೇಬ್ ಅಂಬೇಡ್ಕರ್ ಅವರು ಹೇಳಿದಂತೆ ‘ವಿಷದಲ್ಲಿ ಸಿಹಿ ಬೆರೆಸುವ’ ತಂತ್ರವಷ್ಟೆ! ಇಂತಹ ಸುಧಾರಣಾ ತಂತ್ರಗಳು ಪ್ರಸಕ್ತದಲ್ಲಿ ಕ್ರಾಂತಿಕಾರಿಯಾಗಿ ಕಾಣುತ್ತವೆಯಾದರೂ ದೂರಗಾಮಿಯಾಗಿ ದಲಿತರನ್ನು ನಿಯಂತ್ರಣದಲ್ಲಿಡುವ ಸನಾತನ ಸಂಸ್ಕೃತಿಯ ಭಾಗವೇ ಆಗಿರುತ್ತವೆ.

ಇನ್ನು ಹಿಂದುತ್ವವಾದಿಗಳ ಪ್ರಕಾರ ದಲಿತರು ಮತಾಂತರವೇ ಆಗಬಾರದು. ಅವರು ಅಸ್ಪಶ್ಯರಾಗಿಯೇ ಬದುಕಿ ಸಾಯಬೇಕು. ಹಾಗಾಗಿ ಮತಾಂತರವಾಗುವ ದಲಿತರನ್ನು ಬುದ್ಧಿಮಾಂಧ್ಯರೊಂದಿಗೆ ಹೋಲಿಸಿ ಮತಾಂತರ ನಿಷೇಧ ಕಾನೂನು ಮಾಡಿದ್ದಾರೆ! ಹಿಂದೂ ದೇವಾಲಯಗಳಿಗೆ ಪ್ರವೇಶವನ್ನೂ ನೀಡುವುದಿಲ್ಲ. ಮತಾಂತರವಾಗಲೂ ಬಿಡುವುದಿಲ್ಲ. ಅಂದರೆ ದಲಿತರು ಹಿಂದೂ ಸಮಾಜದ ತಳಪಾಯವಾಗಿ ಇಡೀ ಸಮಾಜವನ್ನು ಹೊಟ್ಟೆಯ ಮೇಲೆ ಹೊತ್ತು ನಿಲ್ಲಬೇಕು. ಈಗ ಹೇಳಿ, ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ.

ಆಧುನಿಕ ಭಾರತದಲ್ಲಿ ಸಂವಿಧಾನ ಜಾರಿಯಾಗಿದ್ದರೂ ಅದನ್ನು ಜಾರಿಗೊಳಿಸುವ ಜಾಗದಲ್ಲಿ ಮೇಲ್ಜಾತಿ-ಮೇಲ್ವರ್ಗ ಕುಳಿತುಕೊಂಡಿದೆ. ಅದು ತನಗಿರುವ ಜಾತಿಯಾಧಾರಿತ ಸವಲತ್ತನ್ನು ಉಳಿಸಿಕೊಳ್ಳಬೇಕೆಂಬ ಕಾರಣಕ್ಕೆ ಅಧಿಕಾರವನ್ನು ಸದಾ ಬಯಸುತ್ತದೆ, ಬಯಸಿದಂತೆ ಪ್ರತಿಷ್ಠಾಪಿಸಿಕೊಳ್ಳುತ್ತದೆ. ಈ ಪ್ರತಿಷ್ಠಾಪನೆಯ ಮುಂದಾಳತ್ವವನ್ನು ಹಿಂದಿನಂತೆಯೇ ಮನುವಾದಿ-ಬಂಡವಾಳಶಾಹಿ ವಹಿಸಿಕೊಂಡಿದ್ದು, ತನ್ನ ರೂಪವನ್ನು ಬದಲಾಯಿಸಿಕೊಂಡಿದೆ. ದಲಿತರೊಳಗಿನ ಮೇಲ್ವರ್ಗ ಮನಸ್ಥಿತಿಯವರ ತಲೆಯ ಮೇಲೆ ಕೈ ಇಟ್ಟು ಇಡೀ ಸಮುದಾಯದ ಮೇಲೆ ಕಾಲಿಡುವ ವಾಮನಾವತಾರ ತಾಳಿದೆ. ಹಾಗಾಗಿ ಇದನ್ನು ಎದುರಿಸಿ ನಿಲ್ಲುವ ದಲಿತ ಚಳವಳಿಗೆ ತಲೆಬಾಗದ ಬಲಿ, ಕೈಬೆರಳು ನೀಡದ ಏಕಲವ್ಯ, ಕರ್ಣ ಕುಂಡಲ-ಕವಚ ದಾನ ಮಾಡದ ಕರ್ಣ, ಎದೆ ಕತ್ತರಿಸಿಕೊಂಡೇನು ನಿನ್ನೆದುರು ತಲೆತಗ್ಗಿಸುವುದಿಲ್ಲವೆಂಬ ನಂಗಲಿ ಅವರಂತಹ ನಾಯಕತ್ವ ಬೇಕಿದೆ. ಚುನಾವಣಾ ರಾಜಕೀಯಕ್ಕೆ ಸೀಮಿತಗೊಳ್ಳದ, ಸಮಾಜೋ-ಆರ್ಥಿಕ ಹಾಗೂ ಸಾಂಸ್ಕತಿಕ ರಾಜಕೀಯದ ಮೇಲೆ ರಾಜಕೀಯ ಸ್ವಾತಂತ್ರ್ಯದ ಕನಸು ಕಾಣುವ ಚಳವಳಿ ದಲಿತರಿಗೆ ಅತ್ಯಗತ್ಯವಾಗಿ ಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಿಕಾಸ್ ಆರ್. ಮೌರ್ಯ

contributor

Similar News

ಗೀಳಿಗರು