ಬೂಸಾ ಚಳವಳಿಯಿಂದ ಒಡಮೂಡಿದ ಕ್ರಾಂತಿ ಚಿಲುಮೆ ಹರಿಹರ ಆನಂದಸ್ವಾಮಿ

ಬೂಸಾ ಸಾಹಿತ್ಯದ ಹೋರಾಟದ ಹಾದಿಗೆ 50 ವರ್ಷಗಳು ಮತ್ತು ಮುಂದಿನ ಡಿಸೆಂಬರ್ ಹೊತ್ತಿಗೆ ಹರಿಹರ ಆನಂದಸ್ವಾಮಿಯವರಿಗೆ 75 ವರ್ಷಗಳು ತುಂಬುವ ಈ ಸಂದರ್ಭದಲ್ಲಿ ನೈಜ ಸಾಮಾಜಿಕ ಹೋರಾಟಗಾರನಿಗೆ ರಾಜ್ಯ ಸರಕಾರ 2023ನೇ ಸಾಲಿನ ‘ಡಾ. ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ’ಯನ್ನು ನೀಡುತ್ತಿರುವುದು ಸಾಮಾಜಿಕ ಹೋರಾಟಗಾರರಿಗೆ ಸಂದ ಗೌರವವಾಗಿದೆ.
ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ನಂತರ ದಲಿತರ ವಿಮೋಚನೆಗಾಗಿ ಡಾ. ಅಂಬೇಡ್ಕರ್ ತತ್ವ, ಸಿದ್ಧಾಂತಗಳ ಅಡಿಯಲ್ಲಿ ರೂಪುಗೊಂಡ ಕರ್ನಾಟಕ ದಲಿತ ಚಳವಳಿ ರಾಜ್ಯದಲ್ಲಿ ತಾಯಿ ಸಂಘಟನೆಯಾಗಿ ದಲಿತರ ನ್ಯಾಯ ಸಮ್ಮತ ಬೇಡಿಕೆಗಾಗಿ ಕನ್ನಡ ನಾಡಿನಲ್ಲಿ ಹೋರಾಡುತ್ತಿದೆ. ನಾಡಿನಾದ್ಯಂತ ಯಜಮಾನಿಕೆ ಮನಸ್ಥಿತಿಯ ಊಳಿಗಮಾನ್ಯ ಪದ್ಧತಿ ವಿರುದ್ಧ ಬಂಡೆದ್ದು, ದಲಿತರಲ್ಲಿರುವ ಅಲ್ಪಸ್ವಲ್ಪ ಭೂಮಿಯನ್ನು ಕಬಳಿಸುವ ಜಾತಿವಾದಿ ಭೂಮಾಲಕರನ್ನು ರಾಜ್ಯಾದ್ಯಂತ ಉಗ್ರವಾಗಿ ದಸಂಸ ಖಂಡಿಸುತ್ತಾ ಬಂದಿದೆ. ದಲಿತರ ಜ್ವಲಂತ ಸಮಸ್ಯೆಗಳಾದ ಜಾತಿ ಮತ್ತು ಅಸ್ಪಶ್ಯತೆ ವಿರುದ್ಧ ಬಂಡೇಳುತ್ತಲೇ ವ್ಯವಸ್ಥೆ ವಿರುದ್ಧ ಬಂಡಾಯ ಚಳವಳಿಯಾಗಿ, ಚಳವಳಿಗಳ ತಾಯಿಯಾಗಿ ರಾಜ್ಯದಲ್ಲಿ ದಸಂಸ ರೂಪುಗೊಂಡಿದೆ. ನಮ್ಮ ಸ್ಫೂರ್ತಿದಾತ, ಮಾರ್ಗದಾತ ಡಾ. ಅಂಬೇಡ್ಕರ್‌ಅವರ ‘‘ಸ್ವಾಭಿಮಾನ, ಸ್ವಾವಲಂಬನೆ ಇವೆರಡು ಇಲ್ಲದ ಮಾನವ ಜೀವಂತ ಶವದಂತೆ’’ ಎಂಬ ಘೋಷವಾಕ್ಯದಂತೆ ದಲಿತರ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಸಂವಿಧಾನ ಬದ್ಧ ಹೋರಾಟಗಳ ಮೂಲಕ ದಲಿತರು ಹಕ್ಕುಗಳನ್ನು ಜಯಿಸಲು, ಸ್ವಾಭಿಮಾನಿಗಳಾಗಲು, ವಿಚಾರಶೀಲ ವ್ಯಕ್ತಿಗಳಾಗಲು, ದಲಿತರ ವಿಮೋಚನೆಯ ಹೊಣೆ ಹೊತ್ತು ಸದಾ ದಲಿತರ ಅಸ್ಮಿತೆಗಾಗಿ ಹೋರಾಡುವ ಈ ಮಹಾ ಸಾಮಾಜಿಕ ಹೋರಾಟದ ಚಳವಳಿಗೀಗ 50ರ ವಸಂತಗಳು. ಇಂತಹ ಮಹಾ ಚಳವಳಿಯಲ್ಲಿ ಲಕ್ಷ ಲಕ್ಷ ಜನ ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳಾಗಿ ಸಾಗಿದ್ದಾರೆ.
ಇಂತಹ ಚಳವಳಿಯ ಸಾಗರದಲ್ಲಿ ಹೋರಾಟದ ನೊಗ ಹೊತ್ತು, ತಮ್ಮ ಜೀವನವನ್ನು ಹೋರಾಟಕ್ಕೇ ಮುಡಿಪಾಗಿಟ್ಟ ಹಲವು ಮಹನೀಯ ಸಾಮಾಜಿಕ ಚಳವಳಿಗಾರರಲ್ಲಿ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ರತ್ನಪುರಿ ಗ್ರಾಮದ ನರಸಿಂಹಯ್ಯ ಮತ್ತು ರಾಚಮ್ಮರ ಮಗನಾಗಿ ಹುಟ್ಟಿ ಬೆಳೆದ ಹರಿಹರ ಆನಂದಸ್ವಾಮಿಯವರು ಒಬ್ಬರು. ಬೂಸಾ ಪ್ರಕರಣದಿಂದ ಒಡಮೂಡಿದ ಮಹಾ ಚಳವಳಿಯ ಭಾಗವಾಗಿ ಸಾಗಿದ ಅವರಿಗೆ ರಾಜ್ಯ ಸರಕಾರ 2023ನೇ ಸಾಲಿನ ‘ಡಾ. ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ’ಯನ್ನು ದಿನಾಂಕ-14-4-2025ರಂದು ವಿಧಾನಸೌಧದಲ್ಲಿ ನೀಡುತ್ತಿರುವುದು ಸಾಮಾಜಿಕ ಹೋರಾಟಗಾರರಿಗೆ ಸ್ಫೂರ್ತಿ ನೀಡಿದೆ. ತನ್ನ ಜೀವನದ 50 ವರ್ಷಗಳನ್ನು ದಲಿತ ಚಳವಳಿಯಲ್ಲಿ ಸವೆಸಿದ ಹರಿಹರ ಆನಂದಸ್ವಾಮಿಯವರನ್ನು ಸರಕಾರ ಗುರುತಿಸಿರುವುದು ಸಾಮಾಜಿಕ ಹೋರಾಟಗಾರರಿಗೆ ಸಂದ ಗೌರವ.
ಮೈಸೂರು ವಿಶ್ವವಿದ್ಯಾನಿಲಯದ ಸರಸ್ವತಿಪುರಂನ 9ನೇ ಮೈನ್ ಹಾಸ್ಟೆಲ್‌ನಲ್ಲಿ ಉಳಿದುಕೊಂಡು ಯುವರಾಜ ಕಾಲೇಜಿನಲ್ಲಿ ಬಿ.ಎಸ್ಸಿ. ಪದವಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ದಿನಾಂಕ: 7-2-1974ರಲ್ಲಿ ಮೈಸೂರಿನ ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಕರ್ನಾಟಕದ ಕ್ರಾಂತಿಕಾರಿ ಮಂತ್ರಿ ಬಿ. ಬಸವಲಿಂಗಪ್ಪನವರು ‘ಹೊಸ ಅಲೆ’ ಎಂಬ ‘ವಿಚಾರ ಸಂಕಿರಣ’ದಲ್ಲಿ ಭಾಷಣ ಮಾಡುವುದನ್ನು ಕೇಳಿದ ನೂರಾರು ಸಭಿಕರಲ್ಲಿ ವಿದ್ಯಾರ್ಥಿ ಹರಿಹರ ಆನಂದಸ್ವಾಮಿಯವರು ಒಬ್ಬರು.
ಬಿ. ಬಸವಲಿಂಗಪ್ಪನವರು ಭಾಷಣ ಮಾಡುತ್ತಿದ್ದ ವೇದಿಕೆಯಲ್ಲಿ ಅರ್ಮುಗಂ, ರಾಮಕೃಷ್ಣ, ವಕೀಲ ಸಂಜೀವನ್ ಮುಂತಾದವರಿದ್ದರು. ವಕೀಲ ಸಂಜೀವನ್ ತಮ್ಮ ಭಾಷಣದಲ್ಲಿ ಫ್ರೆಂಚ್ ಇಂಗ್ಲಿಷ್‌ನಲ್ಲಿ ಮಾತಾಡುತ್ತಿದ್ದರು. ಇದನ್ನು ಕಂಡು ಕೆಲವು ಸಭಿಕರು ಕನ್ನಡದಲ್ಲಿ ಮಾತಾಡಿ ಎಂದು ಕೂಗಿಕೊಂಡರು. ಸಂಜೀವನ್ ಮಾತಾಡಿದ ನಂತರ ಬಿ. ಬಸವಲಿಂಗಪ್ಪ ಅವರು ತಮ್ಮ ಭಾಷಣದಲ್ಲಿ ‘‘ಸಂಜೀವನ್ ಇಂಗ್ಲಿಷ್ ಮಾತುಗಳನ್ನು ಮೆಚ್ಚಿ, ನಮ್ಮ ಜನ ಕನ್ನಡಕ್ಕಿಂತ ಇಂಗ್ಲಿಷ್ ಅನ್ನು ಹೆಚ್ಚು ಓದಬೇಕು, ಪ್ರಪಂಚದ ವಿಚಾರ ತಿಳಿಯುವ ಭಾಷೆ ಇಂಗ್ಲಿಷ್ ಎಂದು ಕನ್ನಡದಲ್ಲೇನಿದೆ ಬೂಸಾ’’ ಎಂದರು. ಕೆಲವರು ಬಿ. ಬಸವಲಿಂಗಪ್ಪನವರ ಈ ಹೇಳಿಕೆಯನ್ನು ವಿರೋಧಿಸಿದರು. ಸಣ್ಣ ಗದ್ದಲದ ನಡುವೆ ಸಮಾರಂಭ ಮುಗಿಯಿತು. ಅಂದು ರಾತ್ರಿ ಸರಸ್ವತಿಪುರಂನ 9ನೇ ಮೈನ್ ಹಾಸ್ಟೆಲ್‌ನ ವಿದ್ಯಾರ್ಥಿಗಳ ಜೊತೆ ಬಿ. ಬಸವಲಿಂಗಪ್ಪನವರು ದಲಿತರು ಸಂಘಟಿತರಾಗಿ ಹೋರಾಟ ಮಾಡುವ ರೀತಿ ನೀತಿಗಳ ಜೊತೆ ಸಂವಾದ ಮಾಡಿದರು. ಬಿ.ಬಸವಲಿಂಗಪ್ಪನವರ ಕ್ರಾಂತಿಕಾರಿ, ವಿಮೋಚನೆಯ ಮಾತುಗಳನ್ನು ಅಂದು ಆ ಹಾಸ್ಟೆಲ್ ವಿದ್ಯಾರ್ಥಿಯಾಗಿ ತದೇಕಚಿತ್ತದಿಂದ ಕೇಳುತ್ತಿದ್ದ ಹರಿಹರ ಆನಂದಸ್ವಾಮಿಯವರಲ್ಲಿ ಹೋರಾಟದ ಕಿಚ್ಚು ಬೆಳೆಯಿತು.
ಅಂದು 70ರ ದಶಕದಲ್ಲಿ ಎಲ್ಲಿ ನೋಡಿದರೂ ಜಾತಿ, ಅಸ್ಪಶ್ಯತೆ ಎಂಬ ವಿಷವ್ಯೆಹದಲ್ಲಿ ಶೋಷಿತರು ಬದುಕಬೇಕಾಗಿತ್ತು. ಮೇಲ್ಜಾತಿ ಹಿಂದೂಗಳು ದಲಿತರ ಆಸ್ತಿ, ಜಮೀನುಗಳನ್ನು ದಬ್ಬಾಳಿಕೆಯಿಂದ ಕಬಳಿಸಿಕೊಂಡು ದೌರ್ಜನ್ಯವೆಸಗುತ್ತಿದ್ದರು. ಜಾತಿವಾದಿಗಳಿಂದ ಅಸ್ಪಶ್ಯತೆ ಬಹಿರಂಗವಾಗಿ ನಡೆಯುತ್ತಿತ್ತು. ದಲಿತರು ಬೇಸಾಯ ಮಾಡುತ್ತಿದ್ದ ಅದೇಷ್ಟೋ ಭೂಮಿಯನ್ನು ಉಳ್ಳವರು ಕಿತ್ತುಕೊಂಡು ದಬ್ಬಾಳಿಕೆ ಮಾಡುತ್ತಿದ್ದರು. ಜಾತಿ ಎಂಬ ಪೆಡಂಭೂತ ಮೇಲ್ವರ್ಗಗಳ ತಲೆಯಲ್ಲಿ ಕೂತು ಕೇಕೆ ಹಾಕುತ್ತಿತ್ತು. ಕನಿಷ್ಠ ಮನುಷ್ಯರಂತೆ ದಲಿತರು ಬದುಕಲು ಕಷ್ಟವಾಗಿತ್ತು. ಮೇಲ್ಜಾತಿ ಹಿಂದೂಗಳು ಅಸ್ಪಶ್ಯರನ್ನು ಪ್ರಾಣಿಗಳಿಗಿಂತಲೂ ಕಡೆಯಾಗಿ ಕಾಣುತ್ತಿದ್ದರು.
ದಲಿತ ಚಳವಳಿ ಹುಟ್ಟಿದ ಪ್ರಾರಂಭದಲ್ಲಿ ಜಾತಿ, ಅಸ್ಪಶ್ಯತೆ ಮತ್ತು ಭೂ ಹೋರಾಟಗಳು ಹೆಚ್ಚು ನಡೆಯುತ್ತಿದ್ದವು. ಇಂತಹ ಭೂ ಹೋರಾಟಗಳಲ್ಲಿ ಆನಂದಸ್ವಾಮಿಯವರು ಹೆಚ್ಚು ಸಕ್ರಿಯವಾಗಿದ್ದರು. ದಲಿತ ಸಂಘಟನಾ ಸಮಿತಿಯಲ್ಲಿದ್ದ ಆನಂದಸ್ವಾಮಿಯವರು ತಮ್ಮ ಹುಟ್ಟೂರಾದ ರತ್ನಪುರಿಯಲ್ಲಿ ಕಾಬ್ಲರ್ ರಾಮಯ್ಯನ ಭೂಮಿ ಕಬಳಿಸಿದವರ ವಿರುದ್ಧ ಮೊತ್ತ ಮೊದಲ ಹೋರಾಟ ನಡೆಸುತ್ತಾರೆ. ಕಾಬ್ಲರ್ ರಾಮಯ್ಯನ ಜಮೀನು ಕಬಳಿಸಿದ ಸವರ್ಣೀಯರು ರಾಮಯ್ಯನ ಮನೆಯ ಮುಂದೆ ಹೇಸಿಗೆ ಸುರಿದು ಅವಮಾನಿಸುತ್ತಾರೆ. ಇಂತಹ ಜಾತಿ ವಿರೋಧಿಗಳ ವಿರುದ್ಧ ಪ್ರಥಮವಾಗಿ ಹೋರಾಡಿ ಹರಿಹರ ಆನಂದಸ್ವಾಮಿಯವರು ರಾಮಯ್ಯನಿಗೆ ಮರಳಿ ಭೂಮಿ ದೊರಕಿಸಿ ಕೊಡುತ್ತಾರೆ.
ಇಲ್ಲಿಂದ ಪ್ರಾರಂಭವಾದ ಅವರ ಚಳವಳಿ, ಹುಣಸೂರಿನ ರಂಗಯ್ಯನ ಕೊಪ್ಪಲಿನ ಆದಿವಾಸಿಗಳ ಭೂಮಿ ಕಬಳಿಸಿದವರ ವಿರುದ್ಧ ನಿಂತು, ಉಳ್ಳವರ ಉಪಟಳದಿಂದ ವಂಚನೆಗೆ ಒಳಗಾದ ಆದಿವಾಸಿಗಳಿಗೆ ಮರಳಿ ಭೂಮಿ ದೊರಕಿಸಿ ಕೊಟ್ಟಿದ್ದು ಅಂದಿನ ಒಂದು ಫಲಶೃತಿಯ ಹೋರಾಟವೇ ಸರಿ. ಮುಂದೆ ಸ್ವತಃ ತಮ್ಮ ಹುಟ್ಟೂರು ರತ್ನಪುರಿಯಲ್ಲಿ 1982 ಜೂನ್ 22ರಲ್ಲಿ ನಡೆದ ಜಾತಿ ಗಲಭೆಯಲ್ಲಿ ಸವರ್ಣೀಯರು ಗಲಭೆ ಸೃಷ್ಟಿಸಿ ದಲಿತರ ಮೇಲೆ ದೌರ್ಜನ್ಯವೆಸಗುತ್ತಾರೆ. ದಲಿತರ ಗುಡಿಸಲು, ಮನೆಗಳನ್ನು ಸುಟ್ಟು ಹಾಕುತ್ತಾರೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಹರಿಹರ ಆನಂದಸ್ವಾಮಿ ಮತ್ತು ಅವರ ಸೋದರ ಸಂಬಂಧಿ ಜ್ಞಾನಪ್ರಕಾಶ್ ಧೈರ್ಯದಿಂದ ಈ ಗಲಭೆ ಎದುರಿಸುತ್ತಾರೆ. ಇದು ರಾಜ್ಯದ ಪ್ರಥಮ ಪ್ರತಿರೋಧದ ಹೋರಾಟ ಎಂಬುದೀಗ ಇತಿಹಾಸವಾಗಿದೆ. ಇಂತಹ ಗಲಭೆ ನಡೆದದ್ದು ಮಾನ್ಯ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಕಾಲದಲ್ಲಿ ಎಂಬುದು ವಿಪರ್ಯಾಸ. ಈ ಗಲಭೆಯ ವಿರುದ್ಧ ಹೋರಾಟದಲ್ಲಿ ಸಕ್ರಿಯವಾಗಿ ಹೋರಾಡಿದ ಪರಿಣಾಮ ಕಾನೂನು ಹೋರಾಟದ ಮೂಲಕ ಜಯ ಪಡೆಯಲಾಯಿತು.
ಹೀಗೆ 1974ರಿಂದ ರಾಜ್ಯಾದ್ಯಂತ ಪ್ರಾರಂಭವಾದ ಭೂ ಹೋರಾಟಗಳ ಜೊತೆ ಶೋಷಿತ ಸಮುದಾಯಗಳನ್ನು ಕಾಡುವ ಹೆಂಡ, ಸಾರಾಯಿ ಮಾರಾಟದ ವಿರುದ್ಧ ಪ್ರಾರಂಭವಾದ ‘‘ಹೆಂಡ ಬೇಡ- ಭೂಮಿ ಬೇಕು’’ ಮತ್ತು ‘‘ಹೆಂಡ ಬೇಡ-ವಸತಿ ಶಾಲೆ ಬೇಕು’’ ಎಂಬ ಧ್ಯೇಯದೊಂದಿಗೆ ಅನೇಕ ಚಳವಳಿಗಳನ್ನು ಆನಂದಸ್ವಾಮಿಯವರು ರಾಜ್ಯ ಸಮಿತಿ ಕರೆಯ ಮೇರೆಗೆ ಮಾಡಿದ್ದಾರೆ. ಅಂದಿನ ಕಾಲದ ಸಾಮಾಜಿಕ ಪಿಡುಗಾದ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಚಂದ್ರಗುತ್ತಿ ಬೆತ್ತಲೆ ಸೇವೆ ವಿರುದ್ಧದ ಹೋರಾಟ, ಪ್ರೊ. ಬಿ. ಕೃಷ್ಣಪ್ಪನವರ ಜೊತೆ ಇದೇ ವಿಷಯಕ್ಕೆ ಮೈಸೂರಿನಲ್ಲಿ ಹೋರಾಟ, ಎಚ್.ಡಿ. ಕೋಟೆಯ ಹೊಮ್ಮರಗಳ್ಳಿಯ ದಲಿತರ ಮೇಲಿನ ದೌರ್ಜನ್ಯದ ವಿರುದ್ಧ ಹೋರಾಟ. ಸರಗೂರಿನ ಸವರ್ಣೀಯ ದಬ್ಬಾಳಿಕೆ ವಿರುದ್ಧದ ಹೋರಾಟ, ಚಂಡಗೂಡು ಭೂ ಹೋರಾಟ, ಮೆದಕಿನಾಳ ಭೂ ಹೋರಾಟ, ಕೋಲಾರ ಕುಂಬಾರ ಶೇಷಗಿರಿಯಪ್ಪನ ಕೊಲೆ ಮತ್ತು ಅವರ ಮಗಳು ಅನುಸೂಯಮ್ಮನ ಮೇಲೆ ನಡೆದ ಅತ್ಯಾಚಾರ ವಿರುದ್ಧ ಹೋರಾಟ, 1994ರಲ್ಲಿ ನಡೆದ ಬದನವಾಳು ದಲಿತರ ಕಗ್ಗೊಲೆ ವಿರುದ್ಧ ಹೋರಾಟ, ಅದೇ ವಿಚಾರದಲ್ಲಿ ನಡೆದ ಗೋಲಿಬಾರ್ ವಿರುದ್ಧ ಹೋರಾಟ, ಮಡೆಸ್ನಾನದ ವಿರುದ್ಧದ ಹೋರಾಟ. ಭ್ರಷ್ಟ ಆಧಿಕಾರಿಗಳ ವಿರುದ್ಧದ ಹೋರಾಟಗಳು ಅವರು ಮಾಡಿದ ಪ್ರಮುಖ ಹೋರಾಟಗಳೆನ್ನಬಹುದು.
ಅದೇ ರೀತಿ ಹುಣಸೂರಿನ ಹುಚ್ಚಯರಿಗೆ ಮರಳಿ ಭೂಮಿ ದೊರಕಿಸಿಕೊಟ್ಟಿದ್ದು, ಪೌರಕಾರ್ಮಿಕ ಚಲುವಯ್ಯರಿಗೆ ಭೂಮಿ ದೊರಕಿಸಿಕೊಟ್ಟಿದ್ದು ಅಲ್ಲದೆ ಮೈಸೂರು ಜಿಲ್ಲೆಯಾದ್ಯಂತ ಭೂ ವಂಚಿತರಿಗೆ ಹರಿಹರ ಆನಂದಸ್ವಾಮಿಯವರ ನೇತೃತ್ವದ ಹೋರಾಟಗಳಲ್ಲಿ ಭೂಮಿ ದೊರಕಿದೆ. 1996ರಲ್ಲಿ ಬೆಲವತ್ತ ಕೆ.ಆರ್.ಮಿಲ್ ಕಾರ್ಮಿಕರಿಗೆ ನಿವೇಶನಗಳಿಗಾಗಿ ದೀರ್ಘ ಹೋರಾಟಗಳನ್ನು ನಡೆಸಿದ್ದಾರೆ. ಅದೇ ವರ್ಷ ಮೈಸೂರಿನ ಸುತ್ತಮುತ್ತ ಸಣ್ಣ ರೈತರು ಮತ್ತು ಸಣ್ಣ ಬೆಳೆ ತೆಗೆಯುವ ಕೃಷಿ ರೈತರಿಗೆ ನಿತ್ಯ ತಾವು ಬೆಳೆದ ಸೊಪ್ಪು, ತರಕಾರಿ ಮಾರಾಟ ಮಾಡಲು ಸಂಘಟಿತ ಹೋರಾಟ ನಡೆಸಿ ಆಶ್ರಯ ಕಲ್ಪಿಸಿದ್ದಾರೆ. ಮುಂದುವರಿದು ಹಕ್ಕಿ ಪಿಕ್ಕಿ, ಸಿಳ್ಳೆಕ್ಯಾತ, ದೊಂಬಿದಾಸ ಹೀಗೆ ಅಲೆಮಾರಿಗಳ ಸೂರಿಗಾಗಿ ನಿರಂತರ ಹೋರಾಟ ನಡೆಸಿದ್ದಾರೆ. ದಲಿತರಲ್ಲಿ ಹೊಸ ಕ್ರಾಂತಿ ಕಿಡಿ ಹಚ್ಚಿದ ಬೂಸಾ ಚಳವಳಿಯ ನಂತರ ಹರಿಹರ ಆನಂದಸ್ವಾಮಿ ನಾಡಿನಾದ್ಯಂತ ಹಲವು ಚಳವಳಿಗಳನ್ನು ಕಟ್ಟಿದ್ದಾರೆ. 1974ರಿಂದ ಸತತ ಹೋರಾಟದ ಹಾದಿಯಲ್ಲಿ ಸಾಗಿದ ಹರಿಹರ ಆನಂದಸ್ವಾಮಿಯವರು ಬಿ. ಬಸವಲಿಂಗಪ್ಪನವರು ಹಚ್ಚಿದ ಭೂಸಾ ಚಳವಳಿ ಕಿಚ್ಚನ್ನು, ದಲಿತರ ಅಸ್ಮಿತೆ ಎಂದುಕೊಂಡು ಚಳವಳಿಯ ಭಾಗವಾಗಿ, ಸಮ ಸಮಾಜ ನಿರ್ಮಾಣದ ಕನಸನ್ನು ಹೊತ್ತು ಮುನ್ನಡೆಯುತ್ತಿದ್ದಾರೆ. 1974ರಲ್ಲಿ ಆರಂಭಗೊಂಡ ದಲಿತ ಚಳವಳಿಯ ಆರಂಭದ ದಿನಗಳ ಮೊದಲ್ಗೊಂಡು ಇಂದಿನವರೆಗೂ ನೂರಾರು ಸಾಮಾಜಿಕ ಹೋರಾಟಗಳು, ವಿಚಾರ ಸಂಕಿರಣ, ಅಸ್ಪಶ್ಯತೆಯ ವಿರುದ್ಧ ಜನಜಾಗೃತಿ, ಅಧ್ಯಯನ ಶಿಬಿರ ಹೀಗೆ ಸುಮಾರು 50 ವರ್ಷಗಳಿಂದ ಚಳವಳಿ ಕಾಯಕದಲ್ಲಿ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ.
ದಶಕಗಳ ಕಾಲ ದಸಂಸ ಪದಾಧಿಕಾರಿಯಾಗಿ ಜಿಲ್ಲಾ, ರಾಜ್ಯ, ವಿಭಾಗ ಮಟ್ಟದಲ್ಲಿ ಅನೇಕ ಜವಾಬ್ದಾರಿಗಳನ್ನು ವಹಿಸಿಕೊಂಡು ಸಾಮಾಜಿಕ ಕರ್ತವ್ಯದ ಮೂಲಕ ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ, ಅವರ ಮೇಲಿನ ದೌರ್ಜನ್ಯಗಳನ್ನು ಖಂಡಿಸಿ ಹೋರಾಡುತ್ತಿರುವ ಆನಂದಸ್ವಾಮಿಯವರು ಶೋಷಣೆಗೆ ಒಳಗಾದ ಶೋಷಿತರ ಪರವಾಗಿ, ಸಾಮಾಜಿಕ ಪಿಡುಗುಗಳಾದ ಅಸ್ಪಶ್ಯತೆ ಆಚರಣೆ, ದಲಿತರ ಮೇಲೆ ದೌರ್ಜನ್ಯ, ಮೂಢನಂಬಿಕೆಗಳ ವಿರುದ್ಧ ಹೋರಾಟಗಳನ್ನು ದಣಿವಿಲ್ಲದೆ ಇಂದು ಸಹ ಮುಂದುವರಿಸಿದ್ದಾರೆ. ಕರ್ನಾಟಕದ ಮಾತೃ ಚಳವಳಿಯಾದ ‘ದಲಿತ ಸಂಘರ್ಷ ಸಮಿತಿ’ ಮೂಲಕ ಚಳವಳಿ ಪ್ರಾರಂಭಿಸಿದ ಅವರು, ‘ಚಳವಳಿ ಸದಾ ಮರುಹುಟ್ಟು ಪಡೆಯುತ್ತಿರಬೇಕು’ ಎಂದು ಚಳವಳಿ ಕಟ್ಟುತ್ತಲೇ ಇದ್ದಾರೆ. ನಿತ್ಯ ತನ್ನೂರಿಂದ ಮೈಸೂರಿಗೆ ಬಂದು ಸಾಮಾಜಿಕ ನ್ಯಾಯಕ್ಕಾಗಿ ಸಂಘರ್ಷ ನಡೆಸುತ್ತಿದ್ದಾರೆ. ಅಂದು ಪ್ರಾರಂಭವಾದ ಬೂಸಾ ಸಾಹಿತ್ಯದ ಹೋರಾಟದ ಹಾದಿಗೆ 50 ವರ್ಷಗಳು ಮತ್ತು ಮುಂದಿನ ಡಿಸೆಂಬರ್ ಹೊತ್ತಿಗೆ ಹರಿಹರ ಆನಂದಸ್ವಾಮಿಯವರಿಗೆ 75 ವರ್ಷಗಳು ತುಂಬುವ ಈ ಸಂದರ್ಭದಲ್ಲಿ ನೈಜ ಸಾಮಾಜಿಕ ಹೋರಾಟಗಾರನಿಗೆ ರಾಜ್ಯ ಸರಕಾರ 2023ನೇ ಸಾಲಿನ ‘ಡಾ. ಬಿ.ಆರ್. ಅಂಬೇಡ್ಕರ್‌ಪ್ರಶಸ್ತಿ’ಯನ್ನು ನೀಡುತ್ತಿರುವುದು ಸಾಮಾಜಿಕ ಹೋರಾಟಗಾರರಿಗೆ ಸಂದ ಗೌರವವಾಗಿದೆ.