ಸಿದ್ದರಾಮಯ್ಯ ಮಾಸ್ಟರ್ ಸ್ಟ್ರೋಕ್!

Update: 2025-04-14 09:23 IST
ಸಿದ್ದರಾಮಯ್ಯ ಮಾಸ್ಟರ್ ಸ್ಟ್ರೋಕ್!
  • whatsapp icon

ಸಿದ್ದರಾಮಯ್ಯ ಸರಕಾರ ಎರಡು ವರ್ಷ ಪೂರೈಸುತ್ತಿದೆ. ಈ ಹಿನ್ನೆಲೆಯಲ್ಲಿ ಕೆಲವರು ಸಿದ್ದರಾಮಯ್ಯ ಎರಡು ವರ್ಷಕ್ಕೆ ಕುರ್ಚಿ ಬಿಟ್ಟುಕೊಡುತ್ತಾರೆ ಎನ್ನುತ್ತಿದ್ದಾರೆ. ಇನ್ನು ಕೆಲವರು ಡಿಸೆಂಬರ್ ಕ್ರಾಂತಿಯಾಗುತ್ತದೆ, ಅಂದರೆ ಎರಡೂವರೆ ವರ್ಷಕ್ಕೆ ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಕೆಳಗಿಳಿಯುತ್ತಾರೆ ಎಂದು ಹೇಳುತ್ತಿದ್ದಾರೆ. ಈ ಬೆಳವಣಿಗೆಗಳನ್ನು ಗಮನಿಸಿದರೆ ಐದು ವರ್ಷವೂ ಅವರು ಸಿಎಂ ಆಗಿ ಮುಂದುವರಿಯುವ ಲಕ್ಷಣಗಳು ಸ್ಪಷ್ಟವಾಗಿ ಕಾಣಿಸುತ್ತಿವೆ.

ಯಾವ ಸಂದರ್ಭದಲ್ಲಿ ಯಾವ ದಾಳವನ್ನು ಉರುಳಿಸಬೇಕೆಂದು ಚೆನ್ನಾಗಿ ಬಲ್ಲ ಸಿದ್ದರಾಮಯ್ಯ ತಮ್ಮ ಸರಕಾರಕ್ಕೆ ಎರಡು ವರ್ಷ ತುಂಬುತ್ತಿರುವ ಹೊತ್ತಿನಲ್ಲಿ ಜಾತಿ ಜನಗಣತಿ ಅಸ್ತ್ರ ಪ್ರಯೋಗಿಸಿದ್ದಾರೆ. ಸಿದ್ದರಾಮಯ್ಯ ಎರಡನೇ ಬಾರಿ ಸಿಎಂ ಆದ ಮೊದಲ ದಿನದಿಂದಲೂ ಅಹಿಂದ ವರ್ಗಗಳಿಂದ ಜಾತಿ ಜನಗಣತಿ ವರದಿ ಜಾರಿ ಮಾಡಲೇಬೇಕೆಂಬ ಒತ್ತಡವಿತ್ತು. ಜೊತೆಗೆ ಮುಂದುವರಿದ ಜಾತಿಗಳ ವಿರೋಧವೂ ಇತ್ತು. ಜಾತಿ ಜನಗಣತಿ ವರದಿ ಜಾರಿ ಆಗಬೇಕು ಎನ್ನುವವರ ಒತ್ತಡಕ್ಕಿಂತ ಬೇಡ ಎನ್ನುವವರ ಒತ್ತಡ ಜಾಸ್ತಿಯಾಗಿತ್ತು. ಎರಡೂ ಬಗೆಯ ಒತ್ತಡವನ್ನು ವಿಷಕಂಠನಂತೆ ನುಂಗಿಕೊಂಡಿದ್ದ ಸಿದ್ದರಾಮಯ್ಯ ಈಗ ಜಾತಿ ಜನಗಣತಿ ಜಾರಿ ಮಾಡಲು ಸಾಗಬೇಕಿರುವ ಬಲುದೂರದ ಪಯಣಕ್ಕೆ ಮೊದಲ ಹೆಜ್ಜೆ ಇಟ್ಟಿದ್ದಾರೆ. ಅಷ್ಟೇಯಲ್ಲ, ಅಗತ್ಯ ತಯಾರಿಯೊಂದಿಗೆ ಅಖಾಡಕ್ಕಿಳಿದಿದ್ದಾರೆ.

ಸಿದ್ದರಾಮಯ್ಯ ಇತ್ತೀಚೆಗೆ ಬೆಂಗಳೂರಿನಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದಾಗ, ತದನಂತರ ದಿಲ್ಲಿಯಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದಾಗ ಪ್ರಧಾನವಾಗಿ ಪ್ರಸ್ತಾವ ಮಾಡಿರುವುದು ಜಾತಿ ಜನಗಣತಿ ವರದಿ ಜಾರಿಗೊಳಿಸುವ ಕುರಿತು. ಕೆಪಿಸಿಸಿ ಅಧ್ಯಕ್ಷಗಾದಿ ಬದಲಾವಣೆ, ಸಚಿವ ಸಂಪುಟ ಪುನರ್‌ರಚನೆ, ವಿಧಾನ ಪರಿಷತ್ ನಾಮನಿರ್ದೇಶನ ವಿಷಯಗಳ ಚರ್ಚೆ ಕೂಡ ನಡೆದಿವೆಯಾದರೂ ಅವುಗಳಿಗಿದ್ದದ್ದು ನಂತರದ ಆದ್ಯತೆಗಳು.

ಬಿಜೆಪಿ-ಜೆಡಿಎಸ್ ವಿರೋಧವನ್ನು ನಿಭಾಯಿಸು ವುದು ಸಿದ್ದರಾಮಯ್ಯ ಅವರಿಗೆ ನೀರು ಕುಡಿದಷ್ಟು ಸುಲಭ. ಸ್ವಪಕ್ಷೀಯರಿಂದ ಎದುರಾಗುವ ವಿರೋಧ ತುಸು ಸಂಕೀರ್ಣ. ಜಾತಿ ಎಂಬ ಜೇನುಗೂಡಿಗೆ ಕೈ ಹಾಕಿದಾಗ ಸಿಹಿ ಸಿಗುವ ಸಾಧ್ಯತೆಯ ಜೊತೆಗೆ ಜೇನ್ನೊಣಗಳ ಕಡಿತಕ್ಕೊಳಗಾಗುವ ಸಂಭವವೂ ಇರುತ್ತದೆ. ಈ ಅಪಾಯದ ಮುನ್ಸೂಚನೆಯಿಂದಾಗಿಯೇ ಮೊದಲಿಗೆ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರಿಗೆ ಮನವೊಲಿಸಿದ್ದಾರೆ. ದೇಶದುದ್ದಕ್ಕೂ ಜಾತಿ ಜನಗಣತಿಯ ಜಪ ಮಾಡುತ್ತಿರುವ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಯಾವ ಕಾರಣಕ್ಕೂ ವಿರೋಧ ಮಾಡಲ್ಲ ಎನ್ನುವುದು ಗೊತ್ತಿದ್ದರೂ ಜಾತಿ ಜನಗಣತಿ ವರದಿ ಜಾರಿ ಮಾಡುವುದರಿಂದ ಮುಂದುವರಿದ ಜಾತಿಗಳೂ ಸೇರಿದಂತೆ ಯಾವುದೇ ಸಮುದಾಯದಕ್ಕೆ ಅನ್ಯಾಯ ಆಗುವುದಿಲ್ಲ. ಮೀಸಲಾತಿ ಹಂಚಿಕೆಯಲ್ಲಿ ಯಾವುದೇ ಜಾತಿಗೆ ಈಗಿರುವ ಪಾಲಿಗಿಂತ ಕಮ್ಮಿಯಾಗುವುದಿಲ್ಲ. ಈಗ ವರದಿ ನೋಡದೆ ವಿರೋಧಿಸುತ್ತಿರುವವರಿಗೆ ನಾಳೆ ಅವರ ಪಾಲು ಏರಿಕೆಯಾದಾಗ ವಿರೋಧಿಸಲು ಬಾಯಿ ಇರುವುದಿಲ್ಲ. ಇದೆಲ್ಲವೂ ಮೀಸಲಾತಿ ಮಿತಿಯನ್ನು ಹೆಚ್ಚು ಮಾಡುವುದರಿಂದ ಮಾತ್ರ ಸಾಧ್ಯ ಎನ್ನುವುದನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ.

ವರದಿಯಲ್ಲಿ ಮೀಸಲಾತಿ ಮಿತಿ ಹೆಚ್ಚಳ ಕುರಿತಾದ ಶಿಫಾರಸು ಇಲ್ಲದಿದ್ದರೆ ಏನು ಮಾಡಬೇಕೆಂಬ ಪ್ರಶ್ನೆ ಸಹಜವಾಗಿ ಎದುರಾಗಿದೆ. ಅದಕ್ಕೆ ‘ವರದಿಯನ್ನು ಯಥಾವತ್ ಜಾರಿ ಮಾಡಲೇಬೇಕೆಂಬ ನಿಯಮವಿಲ್ಲ. ಪರಿಶೀಲನೆಗೆ ವಾಪಸ್ ಕಳುಹಿಸಬಹುದು. ಕೆಲವು ನಿರ್ದಿಷ್ಟ ವಿಷಯಗಳಿಗೆ ಸಂಬಂಧಿಸಿದಂತೆ ಸ್ಪಷ್ಟೀಕರಣ ಕೇಳಬಹುದು. ಕೆಲ ಅಂಶಗಳ ಬಗ್ಗೆ ಪುನರ್ ಸಮೀಕ್ಷೆಯನ್ನೂ ಮಾಡಿಸಬಹುದು. ಇಷ್ಟೆಲ್ಲಾ ಸಾಧ್ಯತೆ ಇರುವಾಗ ಮೀಸಲಾತಿ ಹೆಚ್ಚಳದ ಸಾಧ್ಯತೆ ಬಗ್ಗೆಯೂ ಸಲಹೆ-ಶಿಫಾರಸು ಪಡೆದುಕೊಳ್ಳುವ ಅವ ಕಾಶ ಇರುತ್ತದೆ. ಆಯೋಗದಿಂದ ಅಂತಹ ಅಗತ್ಯ ಶಿಫಾರಸು ಪಡೆದು ಜಾರಿ ಮಾಡಬಹುದು’ ಎಂಬ ಉತ್ತರ ನೀಡಿದ್ದಾರೆ. ಹೈಕಮಾಂಡ್ ನಾಯಕರಿಗೆ ಇಲ್ಲ ಎಂದು ಹೇಳಲು ಸಾಧ್ಯವೇ ಆಗಿಲ್ಲ ಎನ್ನುತ್ತವೆ ದಿಲ್ಲಿ ಮೂಲಗಳು.

► ದೇವೇಗೌಡರಿಗೆ ತಿಳಿಸಿದ್ದರಾ ಸಿದ್ದರಾಮಯ್ಯ?

ಇತ್ತೀಚೆಗೆ ಸತೀಶ್ ಜಾರಕಿಹೊಳಿ ದಿಲ್ಲಿಯಲ್ಲಿ ದಿಢೀರನೇ ಎಚ್.ಡಿ. ದೇವೇಗೌಡ ಮತ್ತು ಎಚ್. ಡಿ. ಕುಮಾರಸ್ವಾಮಿಯನ್ನು ಭೇಟಿ ಮಾಡಿದ್ದರು. ಆ ಭೇಟಿ ಬಗ್ಗೆ ನಾನಾ ರೀತಿಯ ವ್ಯಾಖ್ಯಾನವಾಗಿದ್ದವು. ಸಿದ್ದರಾಮಯ್ಯ ಬೆಂಬಲದಿಂದ ಸಿಎಂ ಆಗಬೇಕೆಂದು ಅಣಿಯಾಗುತ್ತಿರುವ ಸತೀಶ್ ಜಾರಕಿಹೊಳಿ, ಸಿದ್ದ ರಾಮಯ್ಯ ಸಮ್ಮತಿ ಇಲ್ಲದೆ ದೇವೇ ಗೌಡ-ಕುಮಾರಸ್ವಾಮಿ ಭೇಟಿ ಮಾಡಿರಲು ಸಾಧ್ಯ ಎಂದು ನಂಬ ಬಹುದೆ? ಸಿದ್ದರಾಮಯ್ಯ ತಮ್ಮ ಪರಮಾಪ್ತನ ಮೂಲಕ ‘ಒಕ್ಕಲಿಗರಿಗೆ ಅನ್ಯಾಯವಾಗದಂತೆ ಜಾತಿ ಜನಗಣತಿ ವರದಿ ಮಾಡುವೆ. ನಾನು ಈ ಕೆಲಸ ಮಾಡದೆ, ನಿಮ್ಮ ರಾಜಕೀಯ ಕಡುವಿರೋಧಿ ಡಿ.ಕೆ.ಶಿವಕುಮಾರ್ ಮಾಡಿದರೆ ಅದರಿಂದ ಒಕ್ಕಲಿಗರ ಹೆಸರಿನಲ್ಲಿ ರಾಜಕಾರಣ ಮಾಡುವ ನಿಮಗೆ ಆಗುವ ನಷ್ಟ ಅಪಾರ’ ಎಂಬ ಸಂದೇಶ ರವಾನಿಸಿಲ್ಲ ಎಂದುಕೊಳ್ಳಲು ಸಾಧ್ಯವೇ?

► ಒಕ್ಕಲಿಗ-ಲಿಂಗಾಯತರ ವಿರೋಧವೂ ಇರಲ್ಲ!

ಈವರೆಗೆ ಜಾತಿ ಜನಗಣತಿ ವರದಿಯನ್ನು ತೀವ್ರವಾಗಿ ವಿರೋಧಿಸಿದ ಒಕ್ಕಲಿಗ ಮತ್ತು ಲಿಂಗಾಯತ ನಾಯಕರು ಮುಂದೆ ಏಕೆ ವಿರೋಧಿಸಲಾರರು ಎನ್ನುವುದನ್ನು ತಿಳಿಯಲು ರಾಜ್ಯ ಸಚಿವ ಸಂಪುಟದಲ್ಲಿ ಮಂಡನೆಯಾದ ವರದಿಯ ಸೋರಿಕೆಯಾದ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. ಸೋರಿಕೆಯಾದ ಅಂಶಗಳ ಪ್ರಕಾರ ಆಯೋಗವು 3ಎನಲ್ಲಿ ಒಕ್ಕಲಿಗ ಮತ್ತು ಉಪಜಾತಿಗಳಿಗೆ ಇದ್ದ ಶೇಕಡಾ 4ರಷ್ಟು ಮೀಸಲಾತಿಯನ್ನು ಶೇಕಡಾ 7ಕ್ಕೆ ಏರಿಸಬೇಕೆಂದು ಹಾಗೂ 3ಬಿನಲ್ಲಿ ಲಿಂಗಾಯತ ಮತ್ತು ಉಪಜಾತಿಗಳಿಗೆ ಇದ್ದ ಶೇಕಡಾ 5ರಷ್ಟು ಮೀಸಲಾತಿಯನ್ನು ಶೇಕಡಾ 8ಕ್ಕೆ ಹೆಚ್ಚಿಸಬೇಕೆಂದು ಶಿಫಾರಸು ಮಾಡಲಾಗಿದೆ. ಎರಡೂ ದೊಡ್ಡ ಸಮುದಾಯಗಳಿಗೆ ತಲಾ ಶೇಕಡಾ 3ರಷ್ಟು ಮೀಸಲಾತಿ ಹೆಚ್ಚಾಗುವುದರಿಂದ ಒಕ್ಕಲಿಗ ಮತ್ತು ಲಿಂಗಾಯತ ನಾಯಕರು ವಿರೋಧಿಸಲು ಸಾಧ್ಯವಾಗುವುದಾದರೂ ಹೇಗೆ?

► ವಿರೋಧಿಸಿದಷ್ಟೂ ನಷ್ಟ!

ಇಷ್ಟಕ್ಕೂ ಮೀರಿ ಲಿಂಗಾಯತ ಮತ್ತು ಒಕ್ಕಲಿಗ ಮತಗಳನ್ನೇ ನಂಬಿಕೊಂಡು ರಾಜಕಾರಣ ಮಾಡುವ ಬಿಜೆಪಿ-ಜೆಡಿಎಸ್ ಪಕ್ಷಗಳು ಜಾತಿ ಜನಗಣತಿ ಜಾರಿಯನ್ನು ವಿರೋಧ ಮಾಡಿದರೆ ಅವುಗಳಿಗೇ ಹೆಚ್ಚು ನಷ್ಟವಾಗಲಿದೆ. ಹೇಗೆಂದರೆ, ಸೋರಿಕೆಯಾಗಿರುವ ಮಾಹಿತಿ ಪ್ರಕಾರ ಮೀಸಲಾತಿ ಮಿತಿಯನ್ನು ಶೇಕಡಾ 75.1ರಷ್ಟು ಹೆಚ್ಚಿಸಿದರೆ ಮುಸ್ಲಿಮ್ ಧರ್ಮದ ಕೆಲ ಹಿಂದುಳಿದ ಜಾತಿಗಳೂ ಸೇರಿದಂತೆ ಹಿಂದುಳಿದ ವರ್ಗಗಳ ಮೀಸಲಾತಿ ಶೇಕಡಾ 23ರಿಂದ 36ಕ್ಕೆ ಏರಿಕೆಯಾಗಲಿದೆ. ಸಹಜವಾಗಿ ಹಿಂದುಳಿದ ವರ್ಗಗಳಿಗೆ ಹೆಚ್ಚಿನ ಫಲ ಆಗಲಿದೆ. ಆದುದರಿಂದ ಹಿಂದುಳಿದ ಜಾತಿಗಳು ಧ್ರುವೀಕರಣ ಆಗಲಿವೆ. ಮೇಲಾಗಿ ಸಿವಿಲ್ ಕಾಮಗಾರಿಗಳಲ್ಲಿ ಮುಸ್ಲಿಮ್ ಸಮುದಾಯಕ್ಕೆ ಶೇಕಡಾ 4ರಷ್ಟು ಮೀಸಲಾತಿ ನೀಡಿರುವುದರಿಂದ ಮತ್ತು ಒಳ ಮೀಸಲಾತಿ ಜಾರಿ ಮಾಡಿರುವುದರಿಂದ ಸಿದ್ದರಾಮಯ್ಯ ಪರ ಅಹಿಂದ ಧ್ರುವೀಕರಣವೂ ಆಗಲಿದೆ.

► ಸಿದ್ದರಾಮಯ್ಯ ಅಗತ್ಯ ಹೆಚ್ಚಾಗುವ ಸಾಧ್ಯತೆ!

ಸದ್ಯಕ್ಕೆ ಸೋರಿಕೆಯಾಗಿರುವ ಮಾಹಿತಿಗಳು ಮುಂದಿನ ಸಚಿವ ಸಂಪುಟ ಸಭೆಯ ಬಳಿಕ ಅಧಿಕೃತವಾಗಿ ಘೋಷಣೆಯಾಗಲಿವೆ. ಅದಾದ ಮೇಲೆ ಸಮೀಕ್ಷೆ ಮತ್ತು ದತ್ತಾಂಶಗಳ ಬಗ್ಗೆ ಯಾರಾದರೂ ನ್ಯಾಯಾಲಯದ ಕದ ತಟ್ಟುವುದು ಗ್ಯಾರಂಟಿ. ಇದಲ್ಲದೆ ಸಿದ್ದರಾಮಯ್ಯ ಜನಪ್ರಿಯತೆ ಇನ್ನಷ್ಟು ಹೆಚ್ಚಾಗಲಿದೆ. ಆಧುನಿಕ ದೇವರಾಜ ಅರಸು ಎಂಬಂತೆ ಬಿಂಬಿತವಾಗಲಿದ್ದಾರೆ. ಈ ಬೆಳವಣಿಗೆಗಳು ಸಹಜವಾಗಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಪಾಲಿಗೆ ಮುಳುವಾಗಲಿವೆ. ಅನಿವಾರ್ಯವಾಗಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಸಿದ್ದರಾಮಯ್ಯ ವಿರುದ್ಧ ಲಿಂಗಾಯತರು ಮತ್ತು ಒಕ್ಕಲಿಗರನ್ನು ಎತ್ತಿ ಕಟ್ಟುವ ಪ್ರಯತ್ನ ಮಾಡಲಿವೆ. ಜಾತಿ ಜನಗಣತಿ ಜಾರಿ ವಿರೋಧಿಸಿ ಪ್ರಬಲ ಜಾತಿಗಳು ಹೋರಾಟಕ್ಕಿಳಿಯಲಿವೆ. ಜಾರಿಗೆ ಆಗ್ರಹಿಸಿ ಅಹಿಂದ ಸಮುದಾಯಗಳು ಬೀದಿಗಿಳಿಯಲಿವೆ. ರಾಜ್ಯ ರಾಜಕಾರಣ ರಾಡಿಯಾಗುತ್ತದೆ. ಅಂಥ ಸಂದರ್ಭದಲ್ಲಿ ಪರಿಸ್ಥಿತಿಯನ್ನು ನಿಭಾಯಿಸಲು ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯ ಇರುವುದೇ ಸೂಕ್ತ ಎಂದು ಅಹಿಂದ ವರ್ಗ ಮತ್ತು ಹೈಕಮಾಂಡ್ ಬಯಸುತ್ತವೆ. ಅಲ್ಲಿಗೆ ಸಿದ್ದರಾಮಯ್ಯ ಐದು ವರ್ಷ ಪೂರೈಸುವುದು ಖಚಿತವಾಗುತ್ತದೆ. ಈ ಎಲ್ಲಾ ಹಿನ್ನೆಲೆಯಲ್ಲೇ ಸಿದ್ದರಾಮಯ್ಯ ಪ್ರಸಕ್ತ ನಿರ್ಣಾಯಕ ಹಂತದಲ್ಲಿ ಜಾತಿ ಜನಗಣತಿ ವರದಿಯನ್ನು ಸಚಿವ ಸಂಪುಟ ಸಭೆಗೆ ತಂದಿದ್ದಾರೆ ಮತ್ತು ಜಾರಿಗೊಳಿಸಲು ಮುಂದಡಿ ಇಟ್ಟಿದ್ದಾರೆ.

► ಲೀಕ್ ಎಂಬ ಲಾಜಿಕ್ ಇಲ್ಲದ ವಾದ

ರಾಜ್ಯದ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನಡೆಸಿರುವ ಎಲ್ಲಾ ಜಾತಿಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿಯಲ್ಲಿ ಸೋರಿಕೆ ಆಗಿದೆ ಎಂದು ಹೇಳುತ್ತಿರುವುದು ‘ಯಾವ ಜಾತಿಗಳ ಜನಸಂಖ್ಯೆ ಎಷ್ಟಿದೆ?’ ಎಂಬ ಒಂದೇ ಒಂದು ಪುಟವನ್ನು ಆಧರಿಸಿ. ಒಟ್ಟು 50 ಸಂಪುಟಗಳ ಸಾವಿರಾರು ಪುಟಗಳ ಪೈಕಿ ಒಂದೇ ಒಂದು ಪುಟ ಸೋರಿಕೆಯಾಗಿದೆಯೇ? ಒಂದೊಮ್ಮೆ ಬೇರೆ ಪುಟಗಳು ಅಥವಾ ಅದೊಂದೇ ಪುಟ ಸೋರಿಕೆಯಾಗಿದ್ದರೆ ಈವರೆಗೆ ಯಾವುದೇ ಸಮುದಾಯ ಅಥವಾ ರಾಜಕೀಯ ಪಕ್ಷಗಳು ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಕ್ಷಿ ಸಮೇತ ದೂರು ನೀಡಿಲ್ಲ ಏಕೆ? ನ್ಯಾಯಾಲಯದ ಮೆಟ್ಟಿಲು ಹತ್ತುವ ಧೈರ್ಯ ತೋರಿಲ್ಲ ಏಕೆ? ಉತ್ತರ ಬಹಳ ಸರಳ. ಸೂಕ್ತವಾದ ಸಾಕ್ಷಿ ಅಥವಾ ದಾಖಲೆ ಸಿಕ್ಕಿಲ್ಲ ಎನ್ನುವ ಕಾರಣಕ್ಕಾಗಿಯೇ ದೂರು ನೀಡುವ ಧೈರ್ಯ ಯಾರೂ ಮಾಡಿಲ್ಲ.

► ಅವೈಜ್ಞಾನಿಕ ಸಮೀಕ್ಷೆ ಎಂಬ ಇನ್ನೊಂದು ಸುಳ್ಳು!

ಬಿಜೆಪಿ ಮತ್ತು ಜೆಡಿಎಸ್ ನಾಯಕರು, ವಿಶೇಷವಾಗಿ ಆ ಪಕ್ಷಗಳ ಜನಪ್ರತಿನಿಧಿಗಳು ‘ಇದು ಅವೈಜ್ಞಾನಿಕ ಸಮೀಕ್ಷೆ’ ಎಂದು ಹೇಳುತ್ತಿದ್ದಾರೆ. ಹಾಗೆ ಹೇಳುವ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಅತ್ಯಂತ ಬೇಜವಾಬ್ದಾರಿ ಜನಪ್ರತಿನಿಧಿಗಳು. ಹೇಗೆಂದರೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ರಾಜ್ಯ ಸರಕಾರದ ಕಾರ್ಯಕ್ರಮ. ಕಾಂಗ್ರೆಸ್ ಪಕ್ಷದ ಅಥವಾ ಸಿದ್ದರಾಮಯ್ಯ ಅವರ ಕಾರ್ಯಕ್ರಮ ಅಲ್ಲ. ರಾಜ್ಯ ಸರಕಾರದ ಯಾವುದೇ ಯೋಜನೆ ಅಥವಾ ಕಾರ್ಯಕ್ರಮ ಸರಿಯಾಗಿ ಜಾರಿಯಾಗದಿದ್ದರೆ ಆಯಾ ಕ್ಷೇತ್ರದ ಶಾಸಕರು ಜವಾಬ್ದಾರರು. ಜಾತಿ ಜನಗಣತಿ ಸಮೀಕ್ಷೆ ಸರಿಯಾಗಿ ನಡೆದಿಲ್ಲ ಎಂದರೆ ಅದಕ್ಕೂ ಆಯಾ ಕ್ಷೇತ್ರದ ಶಾಸಕರು ಹೊಣೆಗಾರರು. ಸಮೀಕ್ಷೆ ನಡೆಯುವಾಗ ಮೌನವಾಗಿದ್ದು ಈಗ ಸಮೀಕ್ಷೆ ಅವೈಜ್ಞಾನಿಕವಾಗಿದೆ ಎಂದು ಬಿಂಬಿಸುತ್ತಿರುವುದರ ಹುನ್ನಾರ ಜಾತಿ ಜನಗಣತಿಯನ್ನು ವಿರೋಧ ಮಾಡಬೇಕು ಎನ್ನುವುದನ್ನು ಬಿಟ್ಟು ಬೇರೇನಿಲ್ಲ.

► ದತ್ತಾಂಶದ ತಕರಾರು

ಜಾತಿ ಜನಗಣತಿಯಲ್ಲಿ 40 ಲಕ್ಷ ಜನರು ಮಾತ್ರ ಸಮೀಕ್ಷೆಗೆ ಒಳಪಟ್ಟಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಅವರೇ ಹೇಳಿದ್ದಾರೆ. ಇದನ್ನೇ ನೆಪ ಮಾಡಿಕೊಂಡು ಇಡೀ ಸಮೀಕ್ಷೆಯನ್ನು ವಿರೋಧಿಸಲಾಗುತ್ತಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಮಾಡಿದ ಮಿಲ್ಲರ್ ಆಯೋಗದ ವರದಿಯಿಂದ ಹಿಡಿದು ಸ್ವಾತಂತ್ರ್ಯಾ ನಂತರದಲ್ಲಿ ನಡೆಸಲಾದ ಆರ್. ನಾಗನಗೌಡ ಆಯೋಗದ ವರದಿ, ಎಲ್.ಜಿ. ಹಾವನೂರ್ ಆಯೋಗದ ವರದಿ, ಟಿ. ವೆಂಕಟಸ್ವಾಮಿ ಆಯೋಗದ ವರದಿ ಮತ್ತು ನ್ಯಾ. ಚಿನ್ನಪ್ಪ ರೆಡ್ಡಿ ಆಯೋಗದ ವರದಿಯೆಲ್ಲವೂ ‘ಸ್ಯಾಂಪಲ್ ಬೇಸಿಸ್ ಸಮೀಕ್ಷೆ’ ಆಧಾರಿತವಾಗಿ ರೂಪುಗೊಂಡವು. ರಾಷ್ಟ್ರ ಮಟ್ಟದಲ್ಲಿ ಬಿ.ಪಿ.ಮಂಡಲ್ ಆಯೋಗ ವರದಿ ನೀಡಿದ್ದು ಕೂಡ ‘ಸ್ಯಾಂಪಲ್ ಬೇಸಿಸ್ ಸಮೀಕ್ಷೆ’ ಆಧರಿಸಿ. ಹೀಗೆ 75 ವರ್ಷಗಳಿಂದ ‘ಸ್ಯಾಂಪಲ್ ಬೇಸಿಸ್ ಸಮೀಕ್ಷೆ’ ಆಧರಿಸಿ ಮೀಸಲಾತಿ ವರ್ಗೀಕರಣವಾಗಿದೆ. ಅದನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ. ಆದರೆ ಈಗ ಮಾತ್ರ ಕೇವಲ 40 ಲಕ್ಷ ಜನರನ್ನು ಬಿಟ್ಟು ಉಳಿದೆಲ್ಲರ ಮಾಹಿತಿ ಸಂಗ್ರಹಿಸಲಾಗಿದೆ ಎನ್ನುವ ಕಾರಣಕ್ಕೆ ವಿರೋಧ ಮಾಡಲಾಗುತ್ತಿದೆ.

► ಇಕ್ಕಟ್ಟಿನಲ್ಲಿ ಬಿಜೆಪಿ

ಜಾತಿ ಜನಗಣತಿ ಮತ್ತು ಗ್ಯಾರಂಟಿ ಯೋಜನೆಗಳನ್ನು ತೀವ್ರವಾಗಿ ವಿರೋಧಿಸಬೇಡಿ. ವಿರೋಧಿಸುವುದಿದ್ದರೂ ಅತ್ಯಂತ ಎಚ್ಚರದಿಂದ ಮಾತನಾಡಿ. ಯಾರಿಗೆ ವಿಷಯ ಜ್ಞಾನ ಇರುತ್ತದೆಯೋ ಅವರು ಮಾತ್ರ ಮಾತನಾಡಿ ಎಂದು ಬಿಜೆಪಿ ಹೈಕಮಾಂಡ್ ರಾಜ್ಯ ಬಿಜೆಪಿ ನಾಯಕರಿಗೆ ಸೂಚನೆ ನೀಡಿದೆ. ಇದು ಈಗಲ್ಲ, ಬಹಳ ಹಿಂದೆಯೇ ಇಂಥದೊಂದು ನಿರ್ದೇಶನ ನೀಡಿದೆ. ಜೊತೆಗೆ ಈ ಅಂಕಣದಲ್ಲೇ ಉಲ್ಲೇಖಿಸಿದಂತೆ ಜಾತಿ ಜನಗಣತಿ ಎನ್ನುವುದು ಎರಡಂಚಿನ ಕತ್ತಿ. ಹಾಗಾಗಿ ಬಿಜೆಪಿ ಇಕ್ಕಟ್ಟಿಗೆ ಸಿಲುಕಿದೆ. ಬಿಜೆಪಿಗೆ ಮುಂದೆಯೂ ಅಂಕಿ ಅಂಶ, ಸಾಕ್ಷಿ, ದಾಖಲೆ ಸಮೇತ ಖಡಾಖಂಡಿತವಾಗಿ ಜಾತಿ ಜನಗಣತಿಯನ್ನು ವಿರೋಧಿಸುವುದು ಕಷ್ಟವಾಗಬಹುದು. ಯಾವುದೇ ಸಂದರ್ಭದಲ್ಲಿ ಯಾವುದೇ ನಿಲವು ತೆಗೆದುಕೊಳ್ಳುವ ಜೆಡಿಎಸ್ ಪಕ್ಷಕ್ಕೆ ಈ ಸಮಸ್ಯೆ ಇಲ್ಲವೇ ಇಲ್ಲ.

► ಮುಸ್ಲಿಮರ ಬಗ್ಗೆ ದಾರಿ ತಪ್ಪಿಸುವ ಕೆಲಸ

ಆರೆಸ್ಸೆಸ್ ಮತ್ತು ಅದರ ಅಂಗ ಸಂಸ್ಥೆಗಳು ನಿರಂತರವಾಗಿ ಮುಸ್ಲಿಮ್‌ರ ಜನಸಂಖ್ಯೆ ಜಾಸ್ತಿಯಾಗಿದೆ ಎಂದು ಬಿಂಬಿಸಲು ಪ್ರಯತ್ನಿಸುತ್ತಿವೆ. ಈಗ ಜಾತಿ ಜನಗಣತಿ ವರದಿ ಬಹಿರಂಗ ಆಗುತ್ತಿರುವ ಸಂದರ್ಭದಲ್ಲೂ ‘ರಾಜ್ಯದ ಜನಸಂಖ್ಯೆಯಲ್ಲಿ ಮುಸ್ಲಿಮರೇ ನಂಬರ್ 1’ ಎಂದು ದಾರಿ ತಪ್ಪಿಸಲಾಗುತ್ತಿದೆ. ಒಕ್ಕಲಿಗ ಮತ್ತು ಲಿಂಗಾಯತರಿಗೂ ಮೀಸಲಾತಿ ಹೆಚ್ಚಿಸುತ್ತಿರುವುದರಿಂದ ಜಾತಿ ಜನಗಣತಿ ವರದಿ ಸುಸೂತ್ರವಾಗಿ ಜಾರಿಯಾಗಿಬಿಡಬಹುದೆಂದು ‘ಮುಸ್ಲಿಮರೇ ನಂಬರ್ 1, ಜನಗಣತಿ ಸರಿ ಇಲ್ಲ’ ಎನ್ನುವ ಪ್ರಪೋಗಂಡಾವನ್ನು ಹರಿಯಬಿಡಲಾಗುತ್ತಿದೆ. ಮುಸ್ಲಿಮರ ವಿರುದ್ಧ ಇತರರನ್ನು ಎತ್ತಿಕಟ್ಟಿ ಅಂತಿಮವಾಗಿ ಜಾತಿ ಜನಗಣತಿ ವರದಿ ಜಾರಿಯಾಗದಂತೆ ತಡೆಯುವ ಷಡ್ಯಂತ್ರ ನಡೆಯುತ್ತಿದೆ.

ಆದರೆ ಸೋರಿಕೆಯಾಗಿರುವ ಮಾಹಿತಿಗಳ ಪ್ರಕಾರ 1,16,89,533 (ಶೇಕಡಾ 19.55) ಜನಸಂಖ್ಯೆ ಇರುವ ಪರಿಶಿಷ್ಟ ಜಾತಿಗೆ ಸಂಬಂಧಿಸಿದ ಸಮುದಾಯಗಳೇ ನಂಬರ್ 1. ಬಳಿಕ 76,76,247 (ಶೇಕಡಾ 12.83) ಜನಸಂಖ್ಯೆ ಇರುವ ಮುಸ್ಲಿಮರು ನಂಬರ್ 2. ಮೊದಲ ಮತ್ತು ಎರಡನೇ ಅತಿ ಹೆಚ್ಚು ಜನಸಂಖ್ಯೆ ಇರುವ ಸಮುದಾಯಗಳ ಪೈಕಿ 40,13,286 (ಶೇಕಡಾ 06.69) ಜನರ ಅಂತರವಿದೆ. ಅದಕ್ಕಿಂತ ಹೆಚ್ಚಾಗಿ 2011ರ ಜನಗಣತಿಯಲ್ಲಿ 78,93,065 (ಶೇಕಡಾ 12.92) ಇದ್ದ ಜನಸಂಖ್ಯೆ ಈಗ 76,76,247 (ಶೇಕಡಾ 12.83)ಕ್ಕೆ ಕುಸಿದಿದೆ. ಗಮನಿಸಬೇಕಿರುವ ಇನ್ನೊಂದು ಸಂಗತಿ ಎಂದರೆ ಮುಸ್ಲಿಮ್ ಎನ್ನುವುದು ಧರ್ಮ, ಜಾತಿಯಲ್ಲ. ಪರಿಶಿಷ್ಟ ಜಾತಿಗಳು ಎನ್ನುವುದು ವರ್ಗ. ಆದರೂ ಧರ್ಮ ಮತ್ತು ವರ್ಗದ ನಡುವೆ ವ್ಯತ್ಯಾಸವೇ ಇಲ್ಲ ಎನ್ನುವಂತೆ ಎರಡನ್ನೂ ಒಂದೇ ತಕ್ಕಡಿಗೆ ಹಾಕಿ ತೂಗಲಾಗುತ್ತಿದೆ ಮತ್ತು ಮುಸ್ಲಿಮರೇ ನಂಬರ್ 1 ಎಂದು ಉದ್ದೇಶಪೂರ್ವಕವಾಗಿ ಹೇಳಲಾಗುತ್ತಿದೆ.

ನ್ಯಾ. ರಾಜೇಂದ್ರ ಸಾಚಾರ್ ಆಯೋಗವು ದೇಶದ ಮುಸ್ಲಿಮರು ಪರಿಶಿಷ್ಟ ಜಾತಿಗಳಿಗಿಂತಲೂ ಹಿಂದುಳಿದಿದ್ದಾರೆ ಎಂಬ ವರದಿ ನೀಡಿದೆ. ಇದರ ಬಳಿಕ ಮುಸ್ಲಿಮ್ ಸಮುದಾಯವನ್ನು ಹಿಂದುಳಿದ ವರ್ಗಗಳಿಗೆ ಸೇರಿಸಿ ಮೀಸಲಾತಿ ಕೊಡಲು ನಿರ್ಧರಿಸಲಾಯಿತು. ಇದೇ ಆಧಾರದಲ್ಲಿ ಈಗ ಸಿವಿಲ್ ಕಾಮಗಾರಿಗಳಲ್ಲಿ ಶೇಕಡಾ 4ರಷ್ಟು ಮೀಸಲಾತಿ ಕೊಡುತ್ತಿರುವ ಬಗ್ಗೆಯೂ ‘ಅದು ಧರ್ಮಾಧಾರಿತ’ ಎಂದು ದಾರಿ ತಪ್ಪಿಸಲಾಗುತ್ತಿದೆ. ಒಂದೇ ಸುಳ್ಳನ್ನು ಸಾವಿರ ಸಲ ಹೇಳಿ ಸತ್ಯ ಮಾಡಲು ಪ್ರಯತ್ನಿಸಲಾಗುತ್ತಿದೆ. ಸಮುದಾಯದ ಮೇಲೆ ಹೀಗೆ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದ್ದರೂ ಸರಕಾರವಾಗಲಿ ಅಥವಾ ಸಮುದಾಯದಿಂದ ರಾಜಕೀಯ ಲಾಭ ಪಡೆಯುತ್ತಿರುವ ಜನಪ್ರತಿನಿಧಿಗಳಾಗಲಿ ಈ ಹುನ್ನಾರದ ಬಗ್ಗೆ ತಿಳಿಸಿ ಹೇಳದಿರುವುದು ಮುಸ್ಲಿಮರಿಗೆ ಮಾಡುತ್ತಿರುವ ಇನ್ನೊಂದು ಘೋರ ಅನ್ಯಾಯ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಧರಣೀಶ್ ಬೂಕನಕೆರೆ

contributor

Similar News