ಜಾತಿ ಗಣತಿ ಜಾರಿಯಿಂದ ಒಕ್ಕಲಿಗರು, ಲಿಂಗಾಯತರಿಗೇ ಹೆಚ್ಚು ಲಾಭ!

ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ರಾಜ್ಯ ಸರಕಾರಕ್ಕೆ ಸಲ್ಲಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿ (ಜಾತಿ ಜನಗಣತಿ) ಬಗ್ಗೆ ಮೂರು ಪ್ರಮುಖ ಆರೋಪಗಳು ಕೇಳಿಬರುತ್ತಿವೆ. ಮೊದಲನೆಯದು ಸಮೀಕ್ಷೆ ಅವೈಜ್ಞಾನಿಕವಾಗಿದೆ ಎಂದು. ಎರಡನೆಯದಾಗಿ ಸಮೀಕ್ಷೆ ಪೂರ್ಣ ಪ್ರಮಾಣದಲ್ಲಿ ನಡೆದಿಲ್ಲ ಎಂದು. ಮೂರನೆಯದಾಗಿ ನಮ್ಮ ಸಮುದಾಯದ ಜನಸಂಖ್ಯೆ ಕಮ್ಮಿ
ಯಾಗಿದೆ ಎಂದು. ವಿಶೇಷ ಎಂದರೆ ಇವ್ಯಾವುವೂ ಹೊಸ ಆರೋಪಗಳಲ್ಲ. 2017ರಲ್ಲಿ ಆಡಿದ್ದ ಮಾತುಗಳನ್ನೇ ಈಗ ಮತ್ತೊಮ್ಮೆ ಆಡಿ ಅವನ್ನೇ ಸತ್ಯ ಮಾಡಲು ಪ್ರಯತ್ನಿಸಲಾಗುತ್ತಿದೆ. ವಿಪರ್ಯಾಸ ಎಂದರೆ ಆಗ ಸಾವಿರಾರು ಪುಟಗಳ ಪೈಕಿ ‘ಯಾವ್ಯಾವ ಜಾತಿಗಳು ಎಷ್ಟೆಷ್ಟು ಜನಸಂಖ್ಯೆ ಹೊಂದಿವೆ’ ಎಂಬ ಒಂದೇ ಒಂದು ಪುಟ ಆಧರಿಸಿ ಹೆಣೆದ ಹುಸಿ ನಿರೂಪಣೆಗೆ ಈಗಲೂ ಮಣೆ ಹಾಕುತ್ತಿರುವುದು.
ಈಗ 306 ಪುಟಗಳು ಸೋರಿಕೆಯಾಗಿವೆ. ಆ ಪೈಕಿ ಅಧ್ಯಯನ ವರದಿ ಭಾಗ -2ರಲ್ಲಿ ಜಾತಿ/ಸಮುದಾಯಗಳ ಪ್ರವರ್ಗವಾರು ವರ್ಗೀಕರಣ, ಹೆಚ್ಚುವರಿಯಾಗಿ ಜಾತಿ/ಸಮುದಾಯಗಳನ್ನು ಮೀಸಲಾತಿ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿರುವ ಬಗ್ಗೆ ಸ್ಪಷ್ಟೀಕರಣ, ಶೇಕಡಾವಾರು ಮೀಸಲಾತಿ ಪ್ರಮಾಣದ ಹಂಚಿಕೆ ಮತ್ತು ಶಿಫಾರಸುಗಳು ಎಂಬ ಪ್ರಮುಖ ಅಧ್ಯಾಯಗಳಿವೆ. ಇವುಗಳಲ್ಲಿ ಕೆಲ ವಿಚಾರಗಳನ್ನು ಮಾಧ್ಯಮಗಳು ವರದಿ ಮಾಡಿವೆ. ಆದರೂ ಚರ್ಚೆಯನ್ನು ಆರಂಭದಲ್ಲೇ ಹೇಳಿದ ಅದೇ ಹಳೆಯ ಮೂರು ವಿಷಯಗಳಿಗೆ ಎಳತಂದು ನಿಲ್ಲಿಸಲಾಗುತ್ತಿದೆಯೇ ವಿನಃ ಪ್ರಮುಖ ಸಂಗತಿಗಳ ಬಗ್ಗೆ ಮಾತನಾಡುತ್ತಿಲ್ಲ.
ಉಳಿದೆಲ್ಲಾ ಸಮುದಾಯಗಳಿಗೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿ ಸಂಪೂರ್ಣವಾಗಿ ಸಂತೃಪ್ತಿ ತಂದಿದೆ ಎಂದಲ್ಲ. ಆದರೆ ಅನ್ಯಾಯಕ್ಕೊಳಗಾಗಿರುವ ಅದೆಷ್ಟೋ ಸಮುದಾಯಗಳಿಗೆ ಬಾಯೇ ಇಲ್ಲ, ಹಾಗಾಗಿ ಧ್ವನಿಯೂ ಇಲ್ಲ. ದೊಡ್ಡ ಬಾಯಿ ಮತ್ತು ಬಾಹು ಇರುವ ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯಗಳ ರಾಜಕೀಯ ನಾಯಕರು ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತಿದ್ದಾರೆ. ದಶಕಗಳಿಂದ ತಮ್ಮದೇ ದೊಡ್ಡ ಜಾತಿ, ಬಲಿಷ್ಠ ಜಾತಿ ಎಂದು ಬಿಂಬಿಸಿ, ನಂಬಿಸಿ ಅಧಿಕಾರ ಅನುಭವಿಸಿದ್ದ ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯಗಳ ಕೆಲವೇ ಕೆಲವು ಉಪ ಜಾತಿಗಳ ನಾಯಕರು ಈಗ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ‘ಇಡೀ ಸಮುದಾಯಕ್ಕೇ ಅನ್ಯಾಯವಾಗಿದೆ’ ಎಂಬ ಕೂಗೆಬ್ಬಿಸುತ್ತಿದ್ದಾರೆ.
ಮೀಸಲಾತಿ ಹಂಚಿಕೆಯಲ್ಲಿ ಆಗುತ್ತಿರುವ ಅನ್ಯಾಯಗಳನ್ನು ಸರಿಪಡಿಸಲು ಮೀಸಲಾತಿ ಮಿತಿ ಹೆಚ್ಚಿಸುವುದೇ ಸೂಕ್ತ ಪರಿಹಾರ ಎನ್ನುವುದು ತಜ್ಞರ ಅಭಿಪ್ರಾಯ. ಇದಕ್ಕೆ ಪೂರಕ ಎನ್ನುವಂತೆ ಸದ್ಯ ಸಂಪುಟ ಸಭೆಯಲ್ಲಿ ಮಂಡನೆಯಾಗಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿಯು ರಾಜ್ಯದಲ್ಲಿ ಸದ್ಯ ಇರುವ ಶೇಕಡಾ 56.10ರಷ್ಟು ಮೀಸಲಾತಿ ಮಿತಿಯನ್ನು ಶೇಕಡಾ 75ಕ್ಕೆ ಏರಿಸಬೇಕು ಎಂಬ ಶಿಫಾರಸು ಮಾಡಿದೆ. ಈ ಶಿಫಾರಸು ಎಲ್ಲಾ ಮಿಥ್ಯಾರೋಪಗಳನ್ನು ಮೀರಿ, ಶಾಸನಸಭೆಯ ಅನುಮೋದನೆ ಪಡೆದು, ಸುಪ್ರೀಂ ಕೋರ್ಟಿನ ಕಟಕಟೆಯನ್ನು ದಾಟಿ ಜಾರಿಯಾಗಿಬಿಟ್ಟರೆ ಅತಿ ಹೆಚ್ಚು ಲಾಭ ಆಗುವುದು ಇದೇ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯಗಳಿಗೆ.
ಹೇಗೆಂದರೆ, ಈಗ ಸೋರಿಕೆಯಾಗಿರುವ ಮಾಹಿತಿಗಳ ಪ್ರಕಾರ 48 ಉಪಜಾತಿಗಳನ್ನೊಳಗೊಂಡ ಒಕ್ಕಲಿಗ ಸಮುದಾಯ ಇರುವ ಪ್ರವರ್ಗ 3ಂಗೆ ಈವರೆಗೆ ಇದ್ದ ಮೀಸಲಾತಿ ಶೇಕಡಾ 4ರಷ್ಟು. ಈಗ ಶೇಕಡಾ 7ರಷ್ಟಾಗಬೇಕು ಎಂಬ ಶಿಫಾರಸು ಮಾಡ
ಲಾಗಿದೆ. 3ಂ ಪ್ರವರ್ಗಕ್ಕೆ ಶಿಫಾರಸು ಮಾಡಿರುವ ಮೀಸಲಾತಿ ಹೆಚ್ಚಳದ ಪ್ರಮಾಣವನ್ನು ಇದೇ 3ಂ ಪ್ರವರ್ಗಕ್ಕೆ ಹೋಲಿಸಿದರೆ ಶೇಕಡಾ 75ರಷ್ಟು ಹೆಚ್ಚಾಗಲಿದೆ. ಇದರಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿಯನ್ನು ಸರಕಾರ ಒಪ್ಪಿ ಜಾರಿ ಮಾಡಿದರೆ ಎಲ್ಲರಿಗಿಂತ ಹೆಚ್ಚು ಲಾಭ ಆಗುವುದು ಒಕ್ಕಲಿಗರಿಗೆ ಎನ್ನುವ ಸಂಗತಿ ಬಹಳ ಸ್ಪಷ್ಟವಾಗಿ ಅರ್ಥವಾಗುತ್ತದೆ. ಇದೇ ರೀತಿ 95 ಉಪಜಾತಿಗಳನ್ನು ಹೊಂದಿರುವ ವೀರಶೈವ/ಲಿಂಗಾಯತ ಸಮುದಾಯ ಇರುವ ಪ್ರವರ್ಗ 3ಃ ಪ್ರವರ್ಗಕ್ಕೆ ಈವರೆಗೆ ಇದ್ದ ಮೀಸಲಾತಿ ಶೇಕಡಾ 5ರಷ್ಟು. ಈಗ ಶೇಕಡಾ 8ರಷ್ಟಾಗಬೇಕು ಎಂಬ ಶಿಫಾರಸು ಮಾಡಲಾಗಿದೆ. 3ಃ ಪ್ರವರ್ಗಕ್ಕೆ ಶಿಫಾರಸ್ಸು ಮಾಡಿರುವ ಮೀಸಲಾತಿ ಹೆಚ್ಚಳದ ಪ್ರಮಾಣವನ್ನು ಇದೇ 3ಃ ಪ್ರವರ್ಗಕ್ಕೆ ಹೋಲಿಸಿದರೆ ಅದು ಶೇಕಡಾ 50ರಿಂದ 60ರಷ್ಟು ಹೆಚ್ಚಾಗಲಿದೆ. ಇದರ ಅರ್ಥ ಒಕ್ಕಲಿಗರ ನಂತರ ಅತಿ ಹೆಚ್ಚು ಲಾಭ ಆಗುವುದು ಲಿಂಗಾಯತರಿಗೆ ಎಂದು.
ಈಗ ಹೇಳಿ ಒಕ್ಕಲಿಗ ಹಾಗೂ ಲಿಂಗಾಯತ ನಾಯಕರು ತಮ್ಮ ಸಮುದಾಯಗಳ ಕಟ್ಟ ಕಡೆಯ ಜನರ ಮನೆಮನೆಗೆ ಹುಡುಕಿಕೊಂಡು ಬರುತ್ತಿರುವ ಮೀಸಲಾತಿ ಎಂಬ ಮಹಾಬೆಳಕನ್ನು ಮನೆಯ ಹೊಸ್ತಿಲಲ್ಲೇ ತಡೆದು ಮಹಾಪರಾಧ ಮಾಡುತ್ತಿಲ್ಲವೇ? ಯಾರದೋ ನೂರಿನ್ನೂರು ರಾಜಕಾರಣಿಗಳ ಭವಿಷ್ಯಕ್ಕಾಗಿ ಲಕ್ಷಾಂತರ ಯುವತಿ-ಯುವಕರ ವಿದ್ಯಾಭ್ಯಾಸದ ಅವಕಾಶವನ್ನು ಉದ್ಯೋಗದ ಸುವರ್ಣಾವಕಾಶವನ್ನು ಕಾಲಡಿಗೆ ಹಾಕಿಕೊಂಡು ಹೊಸಕಿಹಾಕುತ್ತಿಲ್ಲವೇ? ಡೈನೋಸಾರ್ ಬಾಲಕ್ಕೆ ಏಟು ಬಿದ್ದರೆ ಅದಕ್ಕೆ ಆ ನೋವಿನ ಅನುಭವವಾಗಲು ಹದಿನೈದು ದಿನ ಬೇಕಾಗುತ್ತದೆಯಂತೆ. ನೋವು ತೀವ್ರವಾಗುವ ಹೊತ್ತಿಗೆ ನೋವು ಆಗಿದ್ದೇಗೆ ಎನ್ನುವುದೇ ಗೊತ್ತಾಗುವುದಿಲ್ಲ. ಮೀಸಲಾತಿಯ ನೋವು ಕೂಡ ಅಷ್ಟೇ. ಬೇಗ ಗ್ರಹಿಸದಿದ್ದರೆ ವಾಸಿ ಮಾಡಿಕೊಳ್ಳಲು ದಶಕಗಳ ಕಾಲ ರಕ್ತ-ಬೆವರನ್ನು ಬಸಿಯಬೇಕಾಗುತ್ತದೆ.
1960ರಲ್ಲಿ ಆರ್. ನಾಗನಗೌಡ ಆಯೋಗ, 1975ರಲ್ಲಿ ನ್ಯಾಯವಾದಿ ಎಲ್.ಜಿ. ಹಾವನೂರು ಆಯೋಗ, 1986ರಲ್ಲಿ ವೆಂಕಟಸ್ವಾಮಿ ಆಯೋಗ ಮತ್ತು 1990ರಲ್ಲಿ ನ್ಯಾಯಮೂರ್ತಿ ಓ. ಚಿನ್ನಪ್ಪ ರೆಡ್ಡಿ ಆಯೋಗಗಳು ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯಗಳನ್ನು ಹಿಂದುಳಿದ ಜಾತಿಗಳು ಎಂದು ಪರಿಗಣಿಸಿರಲಿಲ್ಲ. ಲಿಂಗಾಯತರನ್ನು ಹಿಂದುಳಿದ ಜಾತಿಗಳ ಪಟ್ಟಿಗೆ ಸೇರಿಸಿಲ್ಲವೆಂದು 1977ರಲ್ಲಿ ಹಾವನೂರು ಆಯೋಗದ ಶಿಫಾರಸುಗಳನ್ನು ವಿರೋಧಿಸಿ ಶಾಸಕ ಭೀಮಣ್ಣ ಖಂಡ್ರೆ ಶಿಫಾರಸು ಪ್ರತಿಗಳನ್ನು ಸದನದಲ್ಲೇ ಸುಟ್ಟುಹಾಕಿದ್ದರು. ಹಿಂದುಳಿದ ಜಾತಿಗಳ ಪಟ್ಟಿಗೆ
ಒಕ್ಕಲಿಗರನ್ನು ಸೇರಿಸಬೇಕೆಂದು 1994ರಲ್ಲಿ ಎಚ್.ಡಿ. ದೇವೇಗೌಡರು ಕಬ್ಬನ್ ಪಾರ್ಕಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದರು. ಹೀಗೆ 1994ರವರೆಗೂ ಹಿಂದುಳಿಯದಿದ್ದ ಒಕ್ಕಲಿಗ ಹಾಗೂ ಲಿಂಗಾಯತರು ಕ್ರಮೇಣ ರಾಜಕೀಯ ಒತ್ತಡ ಹೇರಿ ಹಿಂದುಳಿದ ಜಾತಿಗಳ ಪಟ್ಟಿ ಸೇರಿದ್ದರು. ಇಂದು ಎಲ್.ಜಿ. ಹಾವನೂರು ಅವರಂಥವರು ಆಯೋಗದ ಅಧ್ಯಕ್ಷರಾಗಿದ್ದು ಮತ್ತೆ ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯಗಳನ್ನು ಹಿಂದುಳಿದ ಜಾತಿಗಳ ಪಟ್ಟಿಯಿಂದ ಕೈಬಿಟ್ಟಿದ್ದಿದ್ದರೆ ಸಿಡಿದೇಳುವುದು ನಿಜಕ್ಕೂ ಅನಿವಾರ್ಯವಾಗಿರುತ್ತಿತ್ತು. ಆದರೆ ಜಯಪ್ರಕಾಶ್ ಹೆಗ್ಡೆ ನೇತೃತ್ವದ ಆಯೋಗ ಅದಕ್ಕೆ ತದ್ವಿರುದ್ಧವಾಗಿ ಈ ಎರಡೂ ಪ್ರಬಲ ಸಮುದಾಯಗಳಿಗೆ ಮೀಸಲಾತಿಯನ್ನು ಹೆಚ್ಚಿಸ ಬೇಕೆಂದು ಶಿಫಾರಸು ಮಾಡಿದೆ. ಆದರೂ ಒಕ್ಕಲಿಗ ಹಾಗೂ ಲಿಂಗಾಯತ ನಾಯಕರು ವಿರೋಧ ಮಾಡುತ್ತಿರುವುದನ್ನು ಅದೇ ಸಮುದಾಯದ ಪ್ರಜ್ಞಾವಂತರು ಒಪ್ಪುವರೆ?
► ಕಳಚಿದ ದೊಡ್ಡ ಜಾತಿ ಎಂಬ ಕಿರೀಟ
ಸೋರಿಕೆಯಾಗಿರುವ ಮಾಹಿತಿ ಪ್ರಕಾರ ಲಿಂಗಾಯತ ಮತ್ತು ವೀರಶೈವರ ಜನಸಂಖ್ಯೆ 66,35,233. ಆದರೆ ಲಿಂಗಾಯತ ನಾಯಕರು ತಮ್ಮ ಜನಸಂಖ್ಯೆ 1 ಕೋಟಿಗೂ ಹೆಚ್ಚಿದೆ ಎಂದು ಹೇಳುತ್ತಿದ್ದಾರೆ. ವಾಸ್ತವವಾಗಿ ಅವರ ಜನಸಂಖ್ಯೆ ಕಮ್ಮಿಯಾಗಲು ಲಿಂಗಾಯತ ಮತ್ತು ವೀರಶೈವ ಸಮುದಾಯಗಳು ಉಪಜಾತಿಗಳನ್ನು ಉಪೇಕ್ಷೆ ಮಾಡಿದ್ದು ಕಾರಣ. ಪ್ರಾತಿನಿಧ್ಯ- ಪ್ರಾಮುಖ್ಯ ಕೊಡದಿರುವುದು ಕಾರಣ. ತಮ್ಮ ಪ್ರವರ್ಗಕ್ಕೆ ಸಿಗುವ ಎಲ್ಲಾ ಸೌಲಭ್ಯ ಉಳ್ಳವರ ಪಾಲಾಗುತ್ತಿರುವುದು ಕಾರಣ. ಬಸವಣ್ಣ ಹೇಳಿದಂತೆ ಇವ ನಮ್ಮವ ಎಂದು ಬಿಗಿದಪ್ಪಿಕೊಳ್ಳದೆ ನೀನು ಕೀಳೆಂದು ಹೀಯಾಳಿಸಿ ಹೊರದಬ್ಬುತ್ತಿರುವುದು ಕಾರಣ.
ಸಮೀಕ್ಷೆ ವೇಳೆ ‘ಲಿಂಗಾಯತ ಮಡಿವಾಳ’ ಎಂದು 25,363, ‘ಮಡಿವಾಳ’ ಎಂದು 4,62,235 ಜನ ಬರೆಸಿದ್ದಾರೆ. ಪ್ರವರ್ಗ 1ಂನಲ್ಲಿ ಹೆಚ್ಚು ಮೀಸಲಾತಿ ಸಿಗುತ್ತೆ ಅನ್ನುವ ಕಾರಣಕ್ಕೆ ಹೀಗೆ ಹೇಳಿಕೊಂಡಿರುತ್ತಾರೆ. ಇದರಿಂದಾಗಿ ಲಿಂಗಾಯತ ಮತ್ತು ವೀರಶೈವ ಸಮುದಾಯದಿಂದ ಒಂದೇ ಸಲಕ್ಕೆ 4,62,235 ಜನ ಹೊರಹೋಗಿದ್ದಾರೆ. ಇದೇ ರೀತಿ ‘ಅಂಬಿಗ ಲಿಂಗಾಯತ’ ಎಂದು 3,086 ಜನ, ‘ಅಂಬಿಗ’ ಎಂದು 1,34,230 ಜನ ಬರೆಸಿದ್ದಾರೆ. ಇದಲ್ಲದೆ 3,861 ಜನ ‘ಅಂಬಿ’ ಎಂದು ಬರೆಸಿದ್ದಾರೆ. ಅಲ್ಲಿಗೆ 4,62,235+1,34,230+3,861= 6,00,326 ಜನ ಲಿಂಗಾಯತ ಮತ್ತು ವೀರಶೈವ ಸಮುದಾಯದಿಂದ ಹೊರಹೋದಂತಾಯಿತು.
ಬಳಿಕ ‘ಅಗಸ ಲಿಂಗಾಯತ’ ಎಂದು ಬರೆಸಿರುವವರು 5,644 ಜನ. ‘ಅಗಸ’ ಎಂದು ಬರೆಸಿರುವವರು 1,14,201 ಜನ. ಅಲ್ಲಿಗೆ 6,00,326+1,14,201= 7,14,527 ಜನ ಲಿಂಗಾಯತ ಮತ್ತು ವೀರಶೈವ ಸಮುದಾಯದಿಂದ ಹೊರಹೋದಂತಾಯಿತು. ನಂತರ ‘ಭಜಂತ್ರಿ ಲಿಂಗಾಯತ’ ಎಂದು ಬರೆಸಿರುವವರು 1,894 ಜನ. ಬರಿ ‘ಬಜಂತ್ರಿ’ ಮತ್ತು ‘ಭಜಂತ್ರಿ’ ಎಂದು ಬರೆಸಿರುವವರು 1,01,728 ಜನ. ಅಲ್ಲಿಗೆ 7,14,527+1,01,728= 8,16,255 ಜನ ಲಿಂಗಾಯತ ಮತ್ತು ವೀರಶೈವ ಸಮುದಾಯದಿಂದ ಹೊರಹೋದಂತಾಯಿತು. ‘ಗಂಗಾಮತ ಲಿಂಗಾಯತ’ ಎಂದು ಹೇಳಿಕೊಂಡವರು 6,084 ಜನ ಮಾತ್ರ. ಬರಿ ‘ಗಂಗಾಮತ’ ಎಂದು ಬರೆಸಿರುವವರು 73,627 ಜನ. ಇದಲ್ಲದೆ ಗಂಗೆ ಮಕ್ಕಳು, ಗಂಗಾಕುಲ, ಗಂಗಾಮತಸ್ಥ, ಗಂಗಾಪುತ್ರ, ಗೌರಿಮತ ಎಂಬ ಉಪಜಾತಿಗಳಲ್ಲಿ ಗುರುತಿಸಿಕೊಂಡವರು 14,436 ಜನ. ಅಲ್ಲಿಗೆ 8,16,255+ 73,627+14,436= 9,04,318 ಜನ ಲಿಂಗಾಯತ ಮತ್ತು ವೀರಶೈವ ಸಮುದಾಯದಿಂದ ಹೊರಹೋದಂತಾಯಿತು.
ಇದು ಕೇವಲ 5 ಜಾತಿಯ ವಿವರಗಳು. ಇದಲ್ಲದೆ ಇನ್ನುಳಿದ 50ಕ್ಕೂ ಹೆಚ್ಚು ಉಪಜಾತಿಗಳಿಂದ ಕನಿಷ್ಠ 2-3 ಲಕ್ಷ ಜನ, ಒಟ್ಟು 10-12 ಲಕ್ಷ ಜನ ಮೀಸಲಾತಿಗಾಗಿ ತಮ್ಮ ‘ಮೂಲಜಾತಿಗೆ’ ಮರಳಿದ್ದಾರೆ. ಆ ಮೂಲಕ ಲಿಂಗಾಯತ ಮತ್ತು ವೀರಶೈವರು ಧರಿಸಿದ್ದ ‘ದೊಡ್ಡ ಜಾತಿ’ ಎಂಬ ಕಿರೀಟವನ್ನು ಕಿತ್ತು ಬಿಸಾಕಿದ್ದಾರೆ. ಇತಿಹಾಸದಲ್ಲಿ ಎಲ್ಲವೂ ವ್ಯವಸ್ಥಿತವಾಗಿಯೇ ನಡೆಯುವುದಿಲ್ಲ. ಕೆಲ ಸಮಸ್ಯೆಗಳಿಗೆ ಕ್ರಮೇಣವಾಗಿ ಸಹಜವಾದ ನ್ಯಾಯವೂ ಸಿಕ್ಕಿಬಿಡುತ್ತದೆ.
► ಸಚಿವರಿಗೆ ಸಂಕಟ
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿಯ ಬಗ್ಗೆ ಆಕ್ಷೇಪಗಳಿದ್ದರೆ ಲಿಖಿತವಾಗಿ ಕೊಡಿ ಎಂದು ಹೇಳಿರುವುದು ಸಚಿವರನ್ನು ಸಂಕಟಕ್ಕೆ ಸಿಲುಕಿಸಿದಂತಾಗಿದೆ. ಅದರಲ್ಲೂ ವರದಿ ಜಾರಿಗೆ ವಿರೋಧಿಸುತ್ತಿರುವ ಒಕ್ಕಲಿಗ ಹಾಗೂ ಲಿಂಗಾಯತ ಸಚಿವರಿಗೆ ಹೆಚ್ಚು ಸಂಕಟವಾಗುತ್ತಿದೆ. ವರದಿ ಜಾರಿಯಾಗಬಾರದು ಎನ್ನುವ ಲಿಖಿತ ಉತ್ತರ ಕೊಟ್ಟರೆ ಇತಿಹಾಸದಲ್ಲಿ ದಾಖಲಾಗುತ್ತದೆ. ಇದರಿಂದ ಚುನಾವಣೆ ವೇಳೆ ಅಹಿಂದ ವರ್ಗದ ಮತಗಳು ಕೈ ಕೊಡಲಿವೆ ಎಂಬ ಭಯ ಕಾಡುತ್ತಿದೆ. ಇದಲ್ಲದೆ ರಾಹುಲ್ ಗಾಂಧಿ ಅವರೇ ಜಾತಿಗಣತಿ ಜಾರಿಯ ಪರ ಇರುವುದರಿಂದ ವಿರುದ್ಧವಾದ ಅಭಿಪ್ರಾಯ ವ್ಯಕ್ತಪಡಿಸಿದರೆ ಅವರ ಬಳಿ ದೂರು ಹೋಗಬಹುದು. ಮುಂದೆ ಅದು ಸಚಿವ ಸ್ಥಾನಕ್ಕೆ ಕುತ್ತು ತರಬಹುದು ಎನ್ನುವ ಆತಂಕ ಆವರಿಸಿದೆ. ‘ಅತಿಥಿ ಬರಹಗಾರರ’ ಮೊರೆ ಹೋಗಿರುವ ಮಂತ್ರಿಗಳು ‘ನಮ್ಮ ಜಾತಿಯ ವಿಷಯವನ್ನು ಮಾತ್ರ ಬರೆಯಿರಿ’ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಮಂತ್ರಿಗಳು ತಮ್ಮ ತಮ್ಮ ಸಮುದಾಯದ ಜನಕ್ಕೆ ಏನು ಹೇಳಬೇಕು? ಸ್ವಾಮೀಜಿಗಳಿಗೆ ಏನು ಹೇಳಬೇಕು ಎಂದು ತಲೆಕೆಡಿಸಿಕೊಂಡಿದ್ದರೆ ಸಿಎಂ ಸಿದ್ದರಾಮಯ್ಯ ತಣ್ಣಗೆ ಐಪಿಎಲ್ ಪಂದ್ಯ ನೋಡುತ್ತಾ ಎಂಜಾಯ್ ಮಾಡುತ್ತಿದ್ದಾರೆ.
► ಶಾಸಕರಿಗೂ ಕಾದಿದೆ ಶಾಕ್
ಕೆಲ ಶಾಸಕರು ಕೂಡ ಜಾತಿ ಜನಗಣತಿ ಜಾರಿಯಾಗುವುದನ್ನು ವಿರೋಧಿಸುತ್ತಿದ್ದಾರೆ. ಅವರ ವಾದ ಹೀಗೆ ಮುಂದುವರಿದರೆ ಅಹಿಂದ ನಾಯಕರು ಪ್ರತೀ ವಿಧಾನಸಭಾ ಕ್ಷೇತ್ರದಲ್ಲೂ ಜಾತಿವಾರು ವಿವರವನ್ನು ಬಿಡುಗಡೆ ಮಾಡಿ ಎಂದು ಒತ್ತಾಯಿಸಲು ಅಗತ್ಯ ತಯಾರಿಗಳು ನಡೆಯುತ್ತಿವೆ. ಅದೂ ಆಗಿಬಿಟ್ಟರೆ ಕೆಲವು ಕ್ಷೇತ್ರಗಳಲ್ಲಿ ಒಟ್ಟಾರೆಯಾಗಿ ಅವರದೇ ಸಮುದಾಯದ ಜನಸಂಖ್ಯೆ ಹೆಚ್ಚಾಗಿದ್ದರೂ ಉಪ ಜಾತಿಗಳನ್ನು ಕಡೆಗಣಿಸಲಾಗುತ್ತಿದೆ, ಅವುಗಳಿಗೂ ಆದ್ಯತೆ ಕೊಡಬೇಕೆನ್ನುವ ಕೂಗೇಳುತ್ತದೆ. ಪರಿಣಾಮವಾಗಿ ಕೆಲವರ ರಾಜಕೀಯ ಜೀವನವೇ ಮೊಟಕುಗೊಳ್ಳುವ ಸಾಧ್ಯತೆ ಇರುತ್ತದೆ. ಆದುದರಿಂದ ಜಾತಿ ಜನಗಣತಿ ಜಾರಿಯನ್ನು ವಿರೋಧಿಸುವ ಶಾಸಕರು ಈಗ ಅಳೆದು ತೂಗಿ ಮಾತನಾಡಬೇಕಾಗಿದೆ.
► ಬಿಜೆಪಿ ನಾಯಕರಿಗೆ ಪೀಕಲಾಟ
ರಾಜ್ಯ ಬಿಜೆಪಿ ನಾಯಕರು ಜಾತಿಗಣತಿಯನ್ನು ವಿರೋಧಿಸಲೂ ಆಗದೆ ಒಪ್ಪಿಕೊಳ್ಳಲೂ ಆಗದೆ ಇಕ್ಕಟ್ಟಿಗೆ ಸಿಲುಕಿದ್ದಾರೆ. ಜಾತಿಗಣತಿಯನ್ನು ವಿರೋಧಿಸಿದರೆ ಹಿಂದುಳಿದ ಮತ್ತು ಪರಿಶಿಷ್ಟ ಜಾತಿ-ಪಂಗಡದವರ ಕಂಗೆಣ್ಣಿಗೆ ಗುರಿಯಾಗಲಿದ್ದಾರೆ. ಒಪ್ಪಿದರೆ ದಿಲ್ಲಿಯಲ್ಲಿ ಕುಳಿತಿರುವ ಹೈಕಮಾಂಡ್ ನಾಯಕರ ಕೃಪೆಯನ್ನು ಕಳೆದುಕೊಳ್ಳಲಿದ್ದಾರೆ. ಏಕೆಂದರೆ ರಾಷ್ಟ್ರಮಟ್ಟದಲ್ಲಿ ರಾಹುಲ್ ಗಾಂಧಿ ಜಾತಿಗಣತಿ ಜಾರಿ ಪರ ಇರುವುದರಿಂದ ಬಿಜೆಪಿ ನಾಯಕರು ಅದಕ್ಕೆ ವಿರುದ್ಧ ಇದ್ದಾರೆ. ಕರ್ನಾಟಕದ ಕಾರಣಕ್ಕೆ ದಿಲ್ಲಿಯ ಬಿಜೆಪಿ ನಾಯಕರು ರಾಷ್ಟ್ರ ಮಟ್ಟದಲ್ಲಿ ರಾಹುಲ್ ಗಾಂಧಿ ಎದುರು ಮಂಡಿಯೂರಲು ಸಿದ್ಧರಿಲ್ಲ. ರಾಜ್ಯದಲ್ಲಿ ಆರ್. ಅಶೋಕ್ ಮತ್ತು ವಿಜಯೇಂದ್ರಗೆ ಪೀಕಲಾಟ ತಪ್ಪಿದ್ದಲ್ಲ.
► ಇದು ಆಫ್ ದಿ ರೆಕಾರ್ಡ್
ಕಳೆದ ಸಚಿವ ಸಂಪುಟ ಸಭೆಯಲ್ಲಿ ಜಾತಿಗಣತಿ ವರದಿ ಅಧ್ಯಯನಕ್ಕೆ ಸಂಪುಟ ಉಪ ಸಮಿತಿ ರಚಿಸಬೇಕೆಂಬ ಸಲಹೆ ಬಂದಿತ್ತು. ಸಿದ್ದರಾಮಯ್ಯ ‘ಬೇಡ, ನೇರವಾಗಿ ಸದನಕ್ಕೆ ತೆಗೆದುಕೊಂಡು ಹೋಗೋಣ’ ಎಂದರಂತೆ. ಇದರ ಬಗ್ಗೆ ಮಾತನಾಡುತ್ತಿದ್ದ ಸಚಿವರೊಬ್ಬರು ‘ಕೆಲವೊಮ್ಮೆ ತರಗತಿಯಲ್ಲಿ ತುಂಟ ವಿದ್ಯಾರ್ಥಿಯನ್ನು ಮಾನಿಟರ್ ಮಾಡುವಂತೆ ಡಿಕೆಶಿ ಅಧ್ಯಕ್ಷತೆಯಲ್ಲೇ ಸಂಪುಟ ಉಪ ಸಮಿತಿ ರಚಿಸಬೇಕಿತ್ತು. ವಿರೋಧ ಮಾಡುವವರನ್ನೆಲ್ಲಾ ಆ ಸಮಿತಿಗೆ ಹಾಕಬೇಕಿತ್ತು’ ಎಂದರು. ಇದೇ ಹಿನ್ನೆಲೆಯಲ್ಲಿ ಸಲಹೆ ಕೊಟ್ಟಿರಬಹುದು. ಯಾರಿಗೆ ಗೊತ್ತು?