ಸಿದ್ದರಾಮಯ್ಯ ತಾಯ್ತನದಿಂದ ತಬ್ಬಿಕೊಳ್ಳದಿದ್ದರೆ?

ಕರ್ನಾಟಕ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಸರಕಾರಕ್ಕೆ ಸಲ್ಲಿಸಿರುವ ವರದಿ ಬಗ್ಗೆ ಅವೈಜ್ಞಾನಿಕ, ಅಪೂರ್ಣ ಎಂಬಿತ್ಯಾದಿ ಅಪಸ್ವರಗಳು ಕೇಳಿಬರುತ್ತಿವೆ. ಪ್ರಬಲ ಸಮುದಾಯಗಳು ಸಂಖ್ಯಾಬಲದ ಪಾರುಪತ್ಯಕ್ಕೆ ಪಟ್ಟು ಹಾಕುತ್ತಿದ್ದಾರೆ. ಕ್ಷೀಣ ದನಿಯ ಸಣ್ಣಪುಟ್ಟ ಜಾತಿಗಳು ಅಳಲಾಗದೆ, ಅಭಿವ್ಯಕ್ತಿಸಲಾಗದೆ ಹೊಸ ಆತಂಕದಲ್ಲಿ, ಅದಕ್ಕೂ ಮಿಗಿಲಾದ ಗೊಂದಲದಲ್ಲಿ ಸಿಲುಕಿವೆ.
ಪ್ರಬಲರಿಗೆ ಪ್ರಥಮ ಪ್ರಾಶಸ್ತ್ಯ. ಅವರ ಬಗ್ಗೆ ಈಗಾಗಲೇ ಬಹಳಷ್ಟು ಚರ್ಚೆಯಾಗಿದೆ. ಅವರ ಆಗ್ರಹಗಳನ್ನು ಸರಕಾರಗಳು ಯಥಾವತ್ತು ಕೇಳಿವೆ. ಅವರ ಪರ ವಕಾಲತ್ತು ವಹಿಸಿವೆ. ಈಗಲಾದರೂ ಹಿಂದುಳಿದ ಜಾತಿಗಳ, ಅದರಲ್ಲೂ ಅತಿ ಹಿಂದುಳಿದ ಜಾತಿಗಳ, ಸಣ್ಣ ಪುಟ್ಟ ಜಾತಿಗಳ ಅಳಲನ್ನು ಆಲಿಸಬೇಕಿದೆ. ಹಿಂದೆ ಒಮ್ಮೆ ಮಾತ್ರ ಹಿಂದುಳಿದವರ ಧ್ವನಿಗೆ ಕಿವಿ ಕೊಟ್ಟು ಹೃದಯ ಮುಟ್ಟಿತ್ತು ಸರಕಾರ. ಅಂದು ಹುಟ್ಟಿದ ಭರವಸೆಗಳೇ ಇಂದು ಬೆಳೆದು ದೊಡ್ಡದಾಗಿವೆ. ಆಗ ಹಿಂದುಳಿದವರ ಕಲ್ಯಾಣ ರಥವನ್ನು ಶಕ್ತಿಮೀರಿ ಮುನ್ನಡೆಸಿದ್ದವರು ದೇವರಾಜ ಅರಸು ಎಂಬ ಧೀಮಂತ ನಾಯಕ. ಈಗ ಸಿದ್ದರಾಮಯ್ಯ ‘ಹೃದಯ ಶ್ರೀಮಂತ’ನಾಗಿ ಆ ರಥ ಇನ್ನಷ್ಟು ಮುಂದೆ ಸಾಗುವಂತೆ ಮಾಡಬೇಕಾಗಿದೆ.
‘ನಾನು ಸಾಮಾಜಿಕ ನ್ಯಾಯದ ರಥವನ್ನು ಇಲ್ಲಿಯವರೆಗೆ ಎಳತಂದಿದ್ದೇನೆ. ಸಾಧ್ಯವಾದರೆ ಮುಂದಕ್ಕೆ ತೆಗೆದುಕೊಂಡು ಹೋಗಿ. ಸಾಧ್ಯವಾಗದಿದ್ದರೆ ಬಿಟ್ಟುಬಿಡಿ. ಯಾವುದೇ ಕಾರಣಕ್ಕೂ ಹಿಂದಕ್ಕೆ ಕೊಂಡೊಯ್ಯುವಂತಹ ಕೆಲಸ ಮಾಡಬೇಡಿ’ ಎಂಬ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಮಾತುಗಳನ್ನು ಸಿದ್ದರಾಮಯ್ಯ ಆಗಾಗ ಹೇಳುತ್ತಾರೆ. ಮೊನ್ನೆ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲೂ ಉಲ್ಲೇಖಿಸಿದ್ದರು. ಈಗ ಅವರು ಹಿಂದುಳಿದವರ ಕಲ್ಯಾಣ ರಥವನ್ನು ಮುಂದೆ ಸಾಗಿಸಿ ತಾನು ನಿಜ ಅರ್ಥದ ಅಂಬೇಡ್ಕರ್ ವಾದಿ ಎಂಬುದನ್ನು ನಿರೂಪಿಸಬೇಕಾಗಿದೆ.
ಸಿದ್ದರಾಮಯ್ಯ ಹಿಂದುಳಿದವರ ಕಲ್ಯಾಣ ರಥವನ್ನು ಮುಂದಕ್ಕೆ ಕೊಂಡೊಯ್ಯುವ ಮೂಲಕ ಸಾಮಾಜಿಕ ನ್ಯಾಯದ ರಥವನ್ನೂ ಇನ್ನೊಂದಷ್ಟು ದೂರ ಎಳೆಯಬಲ್ಲೆ ಎಂಬ ಭರವಸೆಯನ್ನು ಪರಿಶಿಷ್ಟ ಜಾತಿ, ಪಂಗಡ ಮತ್ತು ಅಲ್ಪಸಂಖ್ಯಾತರಲ್ಲೂ ಮೂಡಿಸಬಹುದು. ಇದರಿಂದ ಅವರೇ ಹುಟ್ಟುಹಾಕಿದ ಅಹಿಂದ ಹೆಸರಿನ ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ಪರಿಶಿಷ್ಟ ಜಾತಿ, ಪಂಗಡದವರು ಬಹುಕಾಲ ಜೊತೆಜೊತೆಗೆ ಹೆಜ್ಜೆ ಹಾಕುವಂತಾಗಬಹುದು.
ಸಾಮಾಜಿಕ ಮತ್ತು ಶೈಕ್ಷಣಿಕ ವರದಿ ಜಾರಿ ಆಗುವ ವಿಷಯದಲ್ಲಿ ಏನೇ ವಿವಾದವಾದರೂ, ಯಾರು ಏನೇ ಹೇಳಿದರೂ ಅಂತಿಮವಾಗಿ ಪರಿಹಾರ ಇರುವುದು ಸಿದ್ದರಾಮಯ್ಯ ಬಳಿ ಮಾತ್ರ. ಸುಲಭ ಅಲ್ಲದಿರಬಹುದು, ಆದರೆ ಸಿದ್ದರಾಮಯ್ಯ ಮನಸ್ಸು ಮಾಡಿದರೆ ವರದಿ ಜಾರಿಯಾಗುವುದರಲ್ಲಿ ಯಾವ ಅನುಮಾನವೂ ಇಲ್ಲ. ಹೀಗೆ ಸಿದ್ದರಾಮನ ಹುಂಡಿಯ ಸಾಮಾನ್ಯ ಕುಟುಂಬವೊಂದರ ಕುಡಿ ಇಂದು ‘ತನ್ನ ಮಾತೇ ಶಾಸನ’ ಎನ್ನುವ ಮಟ್ಟಕ್ಕೆ ಬೆಳೆಯಲು ಕುರುಬ ಸಮುದಾಯ ಮಾತ್ರ ಕಾರಣವಲ್ಲ. ಕುರುಬರು ಜಾತಿ ಕಾರಣಕ್ಕೆ ಪ್ರೀತಿಸಬಹುದು. ಸಿದ್ದರಾಮಯ್ಯ ಅವರನ್ನು ವ್ಯಕ್ತಿತ್ವ, ವೈಚಾರಿಕತೆ, ಸೈದ್ಧಾಂತಿಕ ಸ್ಪಷ್ಟತೆ, ಬಡವರ ಬಗೆಗಿನ ಬದ್ಧತೆಗಳ ಕಾರಣಕ್ಕೆ ಮೆಚ್ಚಿಕೊಂಡಿರುವುದು, ನೆಚ್ಚಿಕೊಂಡಿರುವುದು ಮತ್ತು ಬೆಂಬಲಿಸುತ್ತಿರುವುದು ಇತರೆ ಹಿಂದುಳಿದ ಜಾತಿಗಳು, ಪರಿಶಿಷ್ಟ ಜಾತಿ, ಪಂಗಡದವರು ಮತ್ತು ಅಲ್ಪಸಂಖ್ಯಾತರು.
ಜಾತಿ ಜನಗಣತಿ ವರದಿಯಲ್ಲಿ ನೀಡಲಾಗಿರುವ ಹಿಂದುಳಿದವರ ಮೀಸಲಾತಿ ಮಿತಿಯನ್ನು ಶೇಕಡಾ 32ರಿಂದ ಶೇಕಡಾ 51ಕ್ಕೆ ಹೆಚ್ಚಳದ ಶಿಫಾರಸು ಜಾರಿಯಾದರೆ ಪ್ರಬಲ ಜಾತಿಗಳಾದ ಒಕ್ಕಲಿಗ, ಲಿಂಗಾಯತರಂತೆ ಕುರುಬ ಮತ್ತು ಈಡಿಗರಿಗೂ ಅಗ್ರ ಪಾಲು ಸಿಗುತ್ತವೆ. 3ಂ ಪ್ರವರ್ಗದಲ್ಲಿ ಹೆಗಡೆ, ಕೊಡಗರು, ಕೊಡವರು ಮತ್ತು ಬಲಿಜ ಸಮುದಾಯದ 35 ಉಪಜಾತಿಗಳು ಒಕ್ಕಲಿಗರ ಜೊತೆ ಸ್ಪರ್ಧೆ ಮಾಡಿ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಲಾಭ ಪಡೆಯುವುದು ತುಂಬಾ ಕಷ್ಟ. ರಾಜಕೀಯ ಪ್ರಾತಿನಿಧ್ಯ ಪಡೆಯುವುದಂತೂ ಇನ್ನೂ ಕಷ್ಟ. 3ಃ ಪ್ರವರ್ಗದಲ್ಲಿ ಕ್ರಿಶ್ಚಿಯನ್, ಬಂಟ್ಸ್, ಪರಿವಾರ ಬಂಟ್ಸ್, ಹರೆಯ, ಜೈನ ದಿಗಂಬರರು, ಜೈನ ಚತುರ್ಥ ಹಾಗೂ ಸಾತಾನಿ ಜಾತಿಗಳು ವೀರಶೈವ/ಲಿಂಗಾಯತರ ಜೊತೆ ಪೈಪೋಟಿ ಮಾಡುವುದು ಕೂಡ ಕಡುಕಷ್ಟವೇ.
ಇದೇ ರೀತಿ 1ಃ ಪ್ರವರ್ಗದಲ್ಲಿ ಕುರುಬರ ಜೊತೆ 80 ಜಾತಿಗಳ 386 ಉಪ ಜಾತಿಗಳ 73,92,313 ಜನ ಇದ್ದಾರೆ. ಗಮನಾರ್ಹ ವಿಷಯವೇನೆಂದರೆ ಈ ಪೈಕಿ ಲಕ್ಷ ಜನಸಂಖ್ಯೆಗೂ ಹೆಚ್ಚಿರುವ ಸಮುದಾಯಗಳು ಕೇವಲ 6 (ಯಾದವ/ಗೊಲ್ಲ, ಅಗಸ/ಮಡಿವಾಳ, ಸವಿತಾ ಸಮಾಜ, ಕುಂಬಾರ, ಹೂವಾಡಿಗ ಮತ್ತು ಹಾಲಕ್ಕಿ ಒಕ್ಕಲ). ಉಳಿದವೆಲ್ಲಾ ಸಣ್ಣ ಮತ್ತು ಅತಿ ಸಣ್ಣ ಜಾತಿಗಳು. ಹೇಗೆಂದರೆ 5 ಸಾವಿರಕ್ಕಿಂತಲೂ ಕಮ್ಮಿ ಜನಸಂಖ್ಯೆ ಇರುವ ಜಾತಿಗಳು 305. 1 ಸಾವಿರಕ್ಕಿಂತ ಕಮ್ಮಿ ಜನಸಂಖ್ಯೆ ಇರುವ ಜಾತಿಗಳು 105. ಈ ಸಣ್ಣ ಮತ್ತು ಅತಿ
ಸಣ್ಣ ಜಾತಿಗಳು 43,72,847 ಜನಸಂಖ್ಯೆ ಇರುವ ಕುರುಬ ಮತ್ತದರ 11 ಉಪಜಾತಿಗಳ (ಇಲ್ಲೂ 7 ಜಾತಿಗಳ ಜನಸಂಖ್ಯೆ 5 ಸಾವಿರಕ್ಕಿಂತ ಕಮ್ಮಿ ಇದೆ, 4 ಜಾತಿಗಳ ಜನಸಂಖ್ಯೆ 20 ಸಾವಿರಕ್ಕಿಂತ ಸ್ವಲ್ಪ ಜಾಸ್ತಿ ಇದೆ. ಕುರುಬ ಜಾತಿಯ 42,71,399 ಜನರ ಜೊತೆಗೆ ಅಂತಿಮ ಪೈಪೋಟಿ-ಆ ಉಪಜಾತಿಗಳಿಗೂ) ನಡುವೆ ಸ್ಪರ್ಧಿಸಿ ಮೀಸಲಾತಿ ಸೌಲಭ್ಯ ಪಡೆಯುವುದು ಬಹುತೇಕ ಸಾಧ್ಯವೇ ಇಲ್ಲ ಎನ್ನುವಂಥ ಪರಿಸ್ಥಿತಿ.
ಪ್ರವರ್ಗ 2ಂಯಲ್ಲಿ 14 ಲಕ್ಷ ಜನಸಂಖ್ಯೆಗೂ ಹೆಚ್ಚಿರುವ ಈಡಿಗ ಮತ್ತು ಮರಾಠಾ ಜೊತೆಗೆ 94 ಪ್ರಮುಖ ಜಾತಿಗಳ 354 ಉಪ ಜಾತಿಗಳಿವೆ. ದೇವಾಡಿಗ, ದೇವಾಂಗ, ವಿಶ್ವಕರ್ಮ, ತಿಗಳ, ಗಾಣಿಗ, ಹಿಂದೂ ಸಾದರ, ಕ್ಷತ್ರೀಯ, ದರ್ಜಿ, ನೇಕಾರ ಮತ್ತು ರಜಪೂತ್ ಮತ್ತು ಅವುಗಳ ಉಪಜಾತಿಗಳು ಈ ಪ್ರವರ್ಗದಲ್ಲಿ ಪ್ರಬಲ ಎಂದು ಕಾಣುತ್ತವೆ. ಆದರೆ ಈವರೆಗೆ ರಾಜಕೀಯದಲ್ಲಿ ಅತಿ ಹೆಚ್ಚು ಪಾತಿನಿಧ್ಯ ಸಿಕ್ಕಿರುವುದು ಈಡಿಗರಿಗೆ ಮಾತ್ರ. ಈಡಿಗರ ಪೈಕಿ ಅತಿ ಹೆಚ್ಚು ಜನ ಕರಾವಳಿ ಭಾಗವೊಂದರಲ್ಲೇ ನೆಲೆಸಿರುವುದರಿಂದ ಶಾಸನಸಭೆಯಲ್ಲಿ ಯಾವತ್ತೂ ಅವರ ಪ್ರಾತಿನಿಧ್ಯ ಕಡಿಮೆಯಾಗೇ ಇಲ್ಲ. ಸದ್ಯೋಭವಿಷ್ಯದಲ್ಲೂ ಹಾಗೆ ಮುಂದುವರಿಯಲಿದೆ.
ಅಂತಿಮವಾಗಿ ಎಲ್ಲಾ ಪ್ರವರ್ಗಗಳಲ್ಲೂ ಅನ್ಯಾಯ ಆಗುವುದು ಮಾತ್ರ ಸಣ್ಣ, ಅತಿ ಸಣ್ಣ ಅನಾಥ ಜಾತಿಗಳಿಗೆ. ಇದರಿಂದಾಗಿಯೇ ದುರ್ಬಲ ಜಾತಿಗಳಿಗೀಗ ಜಾತಿ ಜನಗಣತಿಯನ್ನು ಸಾರಾ ಸಗಟಾಗಿ ವಿರೋಧಿಸುತ್ತಿರುವ ಮುಂದುವರಿದ ಪ್ರಬಲ ಜಾತಿಗಳನ್ನು ದೂರಬೇಕೋ ಅಥವಾ ತಮ್ಮದೇ ಪಂಕ್ತಿಯಲ್ಲಿ ಕೂತು ತಮ್ಮ ಎಲೆಗೇ ಕೈ ಹಾಕುತ್ತಿರುವ ತಮ್ಮದೇ ಮನೆಯ ‘ಹಿರಿಯಣ್ಣರನ್ನು’ ವಿರೋಧಿಸಬೇಕೋ ಎನ್ನುವ ದೈನೇಸಿ ಗೊಂದಲ ಉಂಟಾಗಿದೆ. ಒಂದೆಡೆ ವರದಿ ಜಾರಿಯಾಗಿ ಮೀಸಲಾತಿ ಮಿತಿ ಹೆಚ್ಚಳವಾದರೆ ತಮ್ಮ ಪಾಲೂ ಹೆಚ್ಚಾಗಬಹುದು ಎನ್ನುವ ಆಸೆ. ಇನ್ನೊಂದೆಡೆ ಅದನ್ನೂ ಹಿರಿಯಣ್ಣನೇ ಕಬಳಿಸಿಬಿಟ್ಟರೆ ಎಂಬ ಆತಂಕ. ಇದೇ ಕಾರಣಕ್ಕೆ ಅಂಕಣದ ಆರಂಭದಲ್ಲಿ ಕ್ಷೀಣ ದನಿಯ
ಸಣ್ಣಪುಟ್ಟ ಜಾತಿಗಳು ಅಳಲಾಗದೆ, ಅಭಿವ್ಯಕ್ತಿಸಲಾಗದೆ ಹೊಸ ಬಗೆಯ ಆತಂಕದಲ್ಲಿ, ಅದಕ್ಕೂ ಮಿಗಿಲಾದ ಗೊಂದಲದಲ್ಲಿ ಸಿಲುಕಿವೆ ಎಂದು ಹೇಳಿದ್ದು.
ಅಬಲ ಜಾತಿಗಳು ಅಳುತ್ತಿಲ್ಲ ಎಂದ ಮಾತ್ರಕ್ಕೆ ನೋವೇ ಇಲ್ಲ ಎಂದು ಅರ್ಥವಲ್ಲ. ಅನಾಥ, ಅಲ್ಪಸಂಖ್ಯಾತ, ಅವಮಾನಿತರ ಅಳಲು ಯಾವತ್ತೂ ಕ್ಷೀಣವಾಗಿಯೇ ಇರುತ್ತದೆ. ‘ದೊಡ್ಡವರಿಗೆ’ ಕಿವಿ ಕೊಟ್ಟು ಆಲಿಸುವ ಹೃದಯ ವೈಶಾಲ್ಯ ಇರಬೇಕಷ್ಟೆ. ಈಗ ಕಿವಿ ಕೊಟ್ಟು ಹೃದಯ ಮುಟ್ಟಬೇಕಾದದ್ದು ಸಿದ್ದರಾಮಯ್ಯ ಅವರ ಆದ್ಯ ಕರ್ತವ್ಯವಾಗಬೇಕಿದೆ. ಸ್ವಜಾತಿಯ ಒತ್ತಡದ ನಡುವೆ ಅದು ಕಷ್ಟವಾಗಲಿದೆ ಎನ್ನುವುದನ್ನು ಮತ್ತು ಈ ವಿಷಯದಲ್ಲಿ ದಿವಂಗತ ದೇವರಾಜ ಅರಸು ಅವರಿಗಿದ್ದ ಅನುಕೂಲ ಸಿದ್ದರಾಮಯ್ಯ ಅವರಿಗಿಲ್ಲ ಎನ್ನುವುದನ್ನು ಒಪ್ಪಲೇಬೇಕು. ಆದರೆ ಈ ಒತ್ತಡ ಮೀರಿದರೆ ಮಾತ್ರ ಅವರು ನಿಜವಾದ ಅಹಿಂದ ನಾಯಕ ಎನಿಸಿಕೊಳ್ಳುವರು. ಅಲ್ಪಸಂಖ್ಯಾತರು, ಹಿಂದುಳಿದವರು ಹಾಗೂ ಪರಿಶಿಷ್ಟ ಜಾತಿ, ಪಂಗಡದವರು ‘ತಮ್ಮವರನ್ನೂ’ ಬಿಟ್ಟು ಸಿದ್ದರಾಮಯ್ಯನೇ ನಮ್ಮ ನಾಯಕ ಎಂದು ಒಪ್ಪಿ ಅಪ್ಪಿಕೊಂಡಿದ್ದಾರೆ. ಇದರಲ್ಲಿ ಔದಾರ್ಯವೂ ಇದೆ. ಅನಿವಾರ್ಯತೆ, ಅಸಹಾಯಕತೆಯೂ ಇದೆ. ಈಗ ಹಿರಿಯಣ್ಣನಂತೆ ಎನ್ನುವುದಕ್ಕೂ ಮಿಗಿಲಾಗಿ ಸಿದ್ದರಾಮಯ್ಯ ತಾಯ್ತನದಿಂದ ತಬ್ಬಿಕೊಳ್ಳದಿದ್ದರೆ ಅಬಲ ಜಾತಿಗಳ ಅತಂತ್ರ ಮತ್ತು ಆತಂಕದ ಪರಿಸ್ಥಿತಿ ದೂರವಾಗಲು ಇನ್ನೊಂದಷ್ಟು ದಶಕಗಳು ಕಾಯಬೇಕಾಗುತ್ತದೆ.
ಮೀಸಲಾತಿ ಮಿತಿ ಹೆಚ್ಚಳ ಎಂಬ ಸರ್ವರ ಹಿತ ಕಾಪಾಡುವ ಸೂತ್ರವೊಂದು ಅಡಕವಾಗಿರುವುದರಿಂದ ಯಾವುದೇ ಜಾತಿಯ, ಯಾವುದೇ ಪಕ್ಷದ ನಾಯಕರು ಎಷ್ಟೇ ಉಗ್ರ ಭಾಷಣ ಮತ್ತು ಹೋರಾಟಗಳನ್ನು ಮಾಡಿದರೂ ಸಿದ್ದರಾಮಯ್ಯ ಮನಸ್ಸು ಮಾಡಿದರೆ ಜಾತಿಗಣತಿ ವರದಿಯನ್ನು ಜಾರಿಗೊಳಿಸಬಹುದು. ಇದಲ್ಲದೆ ವರದಿಯನ್ನು ಪೂರ್ತಿಯಾಗಿ ಒಪ್ಪಲೇಬೇಕು ಎಂಬ ಕಡ್ಡಾಯ ಇಲ್ಲದಿರುವುದರಿಂದ ಭಾಗಶಃ ಒಪ್ಪಿ ಆಕ್ಷೇಪಾರ್ಹ ಕೆಲವು ಅಂಶಗಳನ್ನು ಮಾರ್ಪಾಡು ಮಾಡಿಕೊಡುವಂತೆ ಹಿಂದುಳಿದ ವರ್ಗಗಳ ಆಯೋಗಕ್ಕೆ ಕೇಳಬಹುದು. ಅಂಥದೇ ಸಂದರ್ಭವನ್ನು ಬಳಸಿಕೊಂಡು ದಿಕ್ಕು-ದೆಸೆಯಿಲ್ಲದ ದುರ್ಬಲ ಜಾತಿಗಳಿಗಾಗಿರುವ ಅನ್ಯಾಯವನ್ನು ಸರಿಪಡಿಸುವ ಕೆಲಸವನ್ನೂ ಮಾಡಬಹುದು.
ಇಷ್ಟಕ್ಕೂ ಮೀರಿ ತೀವ್ರ ಸ್ವರೂಪದ ವಿರೋಧ ವ್ಯಕ್ತವಾದರೆ, ಸಿದ್ದರಾಮಯ್ಯ ಆಗಲೂ ವರದಿ ಜಾರಿ ಮಾಡಲು ಮುಂದಾದರೆ ಅವರ ಸರಕಾರವೇ ಉರುಳಬಹುದು. ಆ ರೀತಿ ಆಗುವ ಸಾಧ್ಯತೆ ತುಂಬಾ ಕಮ್ಮಿ. ಒಂದೊಮ್ಮೆ ಆಗಿಬಿಟ್ಟರೆ ಸಿದ್ದರಾಮಯ್ಯ ರಾಜಕೀಯವಾಗಿ ಹೊಸ ಅವತಾರದಲ್ಲಿ ಉದ್ಭವಿಸುತ್ತಾರೆ. ಹುತಾತ್ಮನ ಪಟ್ಟ ಅವರ ಮುಡಿಗೇರಿರುತ್ತದೆ. ಹಿಂದೊಮ್ಮೆ ಇದೇ ಅಂಕಣದಲ್ಲಿ ಸಿದ್ದರಾಮಯ್ಯ ಮುಂದೆ ಇರುವುದೇ ಎರಡು ಆಯ್ಕೆ. ಒಂದು ಜಾತಿ ಜನಗಣತಿ ವರದಿಯನ್ನು ಜಾರಿ ಮಾಡಿ ಹೀರೋ ಆಗುವುದು. ಇನ್ನೊಂದು ವರದಿ ಜಾರಿ ಮಾಡದೆ ಖಳನಾಯಕ ಆಗುವುದು ಎಂದು ಬರೆದಿದ್ದೆ. ಈಗ ಸಿದ್ದರಾಮಯ್ಯ ಅವರಿಗೆ ಹುತಾತ್ಮರಾಗುವ ಆಯ್ಕೆಯೂ ತೆರೆದುಕೊಂಡಿದೆ. ಏನಾಗಬೇಕು ಎಂಬುದನ್ನು ಸಿದ್ದರಾಮಯ್ಯ ಅವರೇ ನಿರ್ಧರಿಸಬೇಕು.
ಆಫ್ ದಿ ರೆಕಾರ್ಡ್...
ಇತಿಹಾಸ ಸದಾ ಸಹೃದಯತೆಯಿಂದ ಸ್ಮರಿಸುವ ನಾಯಕರೆಲ್ಲರನ್ನೂ ವರ್ತಮಾನ ಅತ್ಯಂತ ಕ್ರೂರವಾಗಿ ನಡೆಸಿಕೊಂಡಿದೆ. ಬುದ್ಧ, ಬಸವಣ್ಣ, ಅಂಬೇಡ್ಕರ್, ಮಹಾತ್ಮಾ ಗಾಂಧಿ, ಜವಾಹರ ಲಾಲ್ ನೆಹರೂ, ದೇವರಾಜ ಅರಸು, ಡಾ. ಮನಮೋಹನ್ ಸಿಂಗ್... ಎಲ್ಲರೂ. ಸಿದ್ದರಾಮಯ್ಯ ಆಗಾಗ ಈ ಮಹನೀಯರ ಹೆಸರುಗಳನ್ನು ನೆನಪಿಸುತ್ತಿರುತ್ತಾರೆ. ಸಾಮಾಜಿಕ ಮತ್ತು ಶೈಕ್ಷಣಿಕ ವರದಿಯನ್ನು ಜಾರಿ ಮಾಡುವ ವಿಷಯ ಬಂದಾಗ ಈ ಮುತ್ಸದ್ದಿಗಳನ್ನೊಮ್ಮೆ ನೆನಪು ಮಾಡಿಕೊಳ್ಳಲಿ.