ಸಿದ್ದು-ಡಿಕೆಶಿ ಎಂಬ ಪಳಗಿದ ಪಟುಗಳು

ರಾಜ್ಯ ಬಿಜೆಪಿಯ ‘ವಿಪಕ್ಷ ನಾಯಕ’ ಬಸನಗೌಡ ಪಾಟೀಲ್ ಯತ್ನಾಳ್ ನಗುತ್ತಾ ವಿಧಾನಸಭೆಯಿಂದ ಹೊರಗೆ ಹೋಗುತ್ತಿದ್ದರು. ಪತ್ರಕರ್ತರು ‘ಹೊರಟ್ರಾ ಸಾರ್...?’ ಎಂದು ಕೇಳಿದರು. ‘ಹೌದು, ವಿಜಯೇಂದ್ರ ಮಾತಾಡೊಕೆ ಶುರು ಮಾಡ್ಡ?’ ಅಂತಾ ಒಂದೆರಡು ಸೆಕೆಂಡು Pause ಕೊಟ್ಟು, ನಗು ಚಿಮ್ಮಿಸಿ, ಆಮೇಲೆ ‘ಹೊರಟೆ’ ಎಂದರು.
ಅದೇ ದಿನ ಸಂಜೆ ಡಿಸಿಎಂ ಡಿಕೆಶಿ ಡಿನ್ನರ್ ಮೀಟಿಂಗ್ ಕರೆದಿದ್ದರು. ಡಿಕೆಶಿ ಪ್ರಕಾರ ಡಿನ್ನರ್ ಮೀಟಿಂಗ್ ಕರೆದಿದ್ದದ್ದು ಕೆಪಿಸಿಸಿ ಅಧ್ಯಕ್ಷರಾಗಿ ಅವರು 5 ವರ್ಷ ಪೂರೈಸುತ್ತಿರುವ ಖುಷಿಗಾಗಿ. ಚರ್ಚೆಯಾಗಿದ್ದು ‘ಡಿಕೆಶಿ ಸಿಎಂ ಆಗಲು ನಡೆಸುತ್ತಿರುವ ತಯಾರಿಯ ಭಾಗವಾಗಿ ಡಿನ್ನರ್ ಮೀಟಿಂಗ್ ಕರೆದಿದ್ದಾರೆ’ ಎಂದು. ಈ ಪೈಕಿ ಯಾವ ವಾದ ಸರಿ? ಯಾವುದು ತಪ್ಪು ಎನ್ನುವುದು ಮುಂದೆ ಗೊತ್ತಾಗಬಹುದು. ಆದರೆ ಅವತ್ತು ಸಿಎಂ ಸಿದ್ದರಾಮಯ್ಯ ಡಿನ್ನರ್ ಮೀಟಿಂಗ್ಗೆ ಹೋಗಿದ್ದರು. ಡಿಕೆಶಿಗೆ ಹೂಗುಚ್ಛ ಕೊಟ್ಟು ಹಾರೈಸಿದರು. ಜೊತೆಯಲ್ಲೇ ಕೂತು ಊಟ ಮಾಡಿದರು. ಇನ್ನೂ ವಿಶೇಷ ಎಂದರೆ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಲು ‘ಡಿಕೆಶಿ ನನ್ನ ಹೆಗಲಿಗೆ ಹೆಗಲಾಗಿ ನಿಂತಿದ್ದರು’ ಎಂದು ಮನಸಾರೆ ಕೊಂಡಾಡಿದರು.
ಸಿಎಂ ಕುರ್ಚಿಗಾಗಿ ಭಯಂಕರ ಕಿತ್ತಾಟ ನಡೆಸಿದ್ದಾರೆ ಎಂದು ಬಣ್ಣಿಸಲಾಗುತ್ತಿರುವ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಜೊತೆಯಾಗಿ ಬಿರಿಯಾನಿ ಸವಿದಂತೆ ಬಿಜೆಪಿಯ ವಿಜಯೇಂದ್ರ ಮತ್ತು ಯತ್ನಾಳ್ ಒಟ್ಟಿಗೆ
ಕೂತು ಉಪ್ಪಿಟ್ಟು ತಿನ್ನಬಲ್ಲರಾ? ಅವರು ಎಲ್ಲಿಯವರೆಗೆ ಒಟ್ಟಿಗೆ ಕೂತು ಉಪ್ಪಿಟ್ಟು ತಿನ್ನಲೊಲ್ಲರೋ ಅಲ್ಲಿಯವರೆಗೆ ಕೇಸರಿ ಪಾಳೆಯಕ್ಕೆ ಕೇಸರಿ ಬಾತ್ ಸಿಗದು.
ಜೊತೆಗೆ ಉಂಡರು ಎಂದ ಮಾತ್ರಕ್ಕೆ ಸಿದ್ದರಾಮಯ್ಯ-ಡಿ.ಕೆ. ಶಿವಕುಮಾರ್ ಮಧ್ಯೆ ಏನೇನು ಇಲ್ಲ, ಅವರು ಜನ್ಮಜನ್ಮಾಂತರದ ಜೋಡೆತ್ತುಗಳು ಎಂದೇನಲ್ಲ. ಇದು ಅಧಿಕಾರದ ಆಟ. ಅಧಿಕಾರಕ್ಕಾಗಿ ಅವರಿಬ್ಬರ ನಡುವೆ ಶೀತಲಸಮರ ಇರುವುದು ದಿಟ. ತೆರೆಮರೆಯಲ್ಲಿ ನಾನಾ ವರಸೆಗಳನ್ನು ಹಾಕುತ್ತಿರುವುದು ನಿಶ್ಚಿತ. ಆದರೆ ಸಾರ್ವಜನಿಕ ನಡೆ ಎಲ್ಲರೂ ಮೆಚ್ಚಿ ಅಹುದಹುದು ಎನ್ನುವಂತಿರಬೇಕು. ಸಿದ್ದರಾಮಯ್ಯ-ಡಿ.ಕೆ. ಶಿವಕುಮಾರ್ ಮಾಡಿರುವುದು ಮತ್ತು ವಿಜಯೇಂದ್ರ ಮತ್ತು ಯತ್ನಾಳ್ ಮಾಡದೇ ಇರುವುದು ಅದನ್ನೇ.
ರಾಜಕೀಯದಲ್ಲಿ ಆಗಾಗ ಹಿಂದಿರುಗಿ ನೋಡದಿದ್ದರೆ ಮುಂದಕ್ಕೆ ಹೋಗಲು ಸಾಧ್ಯವಿಲ್ಲ. ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಸಿದ್ದರಾಮಯ್ಯ ವಿಪಕ್ಷ ನಾಯಕ ಆಗಲು ಡಿ.ಕೆ. ಶಿವಕುಮಾರ್ ವಿರೋಧ ಮಾಡಿದ್ದರು. ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಲು ಸಿದ್ದರಾಮಯ್ಯ ಅಡ್ಡಗಾಲು ಹಾಕಿದ್ದರು. ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಇಬ್ಬರು ಪರಸ್ಪರ ಕತ್ತಿ ಮಸೆಯುತ್ತಲೇ ಇದ್ದರು. ಇವೆಲ್ಲದರ ನಡುವೆ ಸಾರ್ವಜನಿಕವಾಗಿ ಒಂದು ಹಂತದ ಸೌಜನ್ಯವನ್ನೂ ಪ್ರದರ್ಶಿಸಿದ್ದರು. ಆದರೆ, ‘ಇಷ್ಟು ಸಾಲದು’ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ಸಾರ್ವಜನಿಕ ನಡೆ ಸುಧಾರಣೆಯಾಗಬೇಕು’ ಎಂದು ಸೂಚಿಸಿದ್ದು ರಾಹುಲ್ ಗಾಂಧಿ.
ಅದು 2022ರ ಆಗಸ್ಟ್ 3. ಸಿದ್ದರಾಮಯ್ಯ ಹುಟ್ಟುಹಬ್ಬದ ಪ್ರಯುಕ್ತ ದಾವಣಗೆರೆಯಲ್ಲಿ ಸಿದ್ದರಾಮಯ್ಯೋತ್ಸವ ನಡೆಯುತ್ತಿತ್ತು. ಸಿದ್ದರಾಮಯ್ಯೋತ್ಸವದ ಬಗ್ಗೆಯೂ ಡಿಕೆಶಿಗೆ ಸಿಟ್ಟಿತ್ತು. ಸಿದ್ದರಾಮಯ್ಯೋತ್ಸವ ನಡೆಯದಂತೆ ತಡೆಯಲು ಯತ್ನಿಸಿದರು. ತನ್ನನ್ನು ಸಿಎಂ ಅಭ್ಯರ್ಥಿಯನ್ನಾಗಿ ಘೋಷಿಸಲಿ ಎಂದು ಸಿದ್ದರಾಮಯ್ಯ ಕಾಂಗ್ರೆಸ್ ಹೈಕಮಾಂಡಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎನ್ನುವ ರೀತಿಯಲ್ಲಿ ಬಿಂಬಿಸಲು ಪ್ರಯತ್ನಿಸಿದರು. ದಿಲ್ಲಿಯಲ್ಲಿ ಇದೇ ಅಂಕಣಕಾರನ ಜೊತೆ ಮಾತನಾಡುತ್ತಾ ‘ಕಾಂಗ್ರೆಸ್ ಹೈಕಮಾಂಡ್ ಬ್ಲ್ಯಾಕ್ ಮೇಲ್ ಮಾಡುವವರನ್ನು ಸಹಿಸುವುದಿಲ್ಲ. ಸಿದ್ದರಾಮಯ್ಯೋತ್ಸವಕ್ಕೆ ಒಪ್ಪಿಗೆ ನೀಡುವುದಿಲ್ಲ’ ಎಂದು ಹೇಳಿದ್ದರು. ಹೀಗೆ ಬೆಟ್ಟದಷ್ಟು ಆಕ್ರೋಶವಿದ್ದರೂ ಕಡೆಗೆ ಸಿದ್ದರಾಮಯ್ಯೋತ್ಸವಕ್ಕೆ ಹೋಗಿದ್ದರು. ಸಿದ್ದರಾಮಯ್ಯ ಅವರನ್ನು ಅಭಿನಂದಿಸಿದರು. ಆದರೆ ಡಿಕೆಶಿ ಅಭಿನಂದಿಸಿದ ರೀತಿ ರಾಹುಲ್ ಗಾಂಧಿ ಅವರಿಗೆ ‘ಇಷ್ಟು ಸಾಲದು’ ಎಂದೆನಿಸಿರಬಹುದು. ಕೂಡಲೇ ಸಿದ್ದರಾಮಯ್ಯ ಮತ್ತು ಡಿಕೆಶಿಗೆ ಪರಸ್ಪರ ತಬ್ಬಿಕೊಳ್ಳುವಂತೆ ಸೂಚಿಸಿದರು. ಆ ಮೂಲಕ ಸಿದ್ದು-ಡಿಕೆಶಿ ಸಾರ್ವಜನಿಕ ನಡೆಗೆ ರಾಹುಲ್ ಗಾಂಧಿ ಮುನ್ನುಡಿ ಬರೆದಿದ್ದರು.
ನಂತರ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು, ಆ ಅಧಿಕಾರದ ಪ್ರಥಮ ಅಥವಾ ಪೂರ್ಣ ಪ್ರಮಾಣದ ವಾರಸುದಾರ ಯಾರಾಗಬೇಕು ಎನ್ನುವುದು ಸೇರಿದಂತೆ ನಾನಾ ವಿಷಯಗಳಿಗೆ ಸಂಬಂಧಿದಂತೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಭಿನ್ನಾಭಿಪ್ರಾಯಗಳಿವೆ. ಆದರೆ ಅವರ ಸಾರ್ವಜನಿಕ ನಡೆಗಳು ಅಂದಿಗೂ-ಇಂದಿಗೂ ಭಿನ್ನವಾಗಿಲ್ಲ. ಈ ಪಳಗಿದ ಪಟುಗಳು ಒಳಗೊಳಗೆ ಒಬ್ಬರನ್ನೊಬ್ಬರು ಮಣಿಸಲು ಹಾಕುತ್ತಿರುವ ಪಟ್ಟುಗಳು ಒಂದಲ್ಲ, ಎರಡಲ್ಲ. ಒಬ್ಬರ ವಿರುದ್ಧ ಇನ್ನೊಬ್ಬರ ಬಳಿ ಇರುವ ದೂರುಗಳ ಪಟ್ಟಿ ನೂರಲ್ಲ, ಸಾವಿರವಲ್ಲ. ಆದರೂ ಅವರ ಸಾರ್ವಜನಿಕ ನಡೆಗಳು ಬದಲಾಗಿಲ್ಲ. ಇರಲಿ, ಇವರಿಬ್ಬರು ಒಂದಾಗಿದ್ದರೋ, ಬಿಟ್ಟಿದ್ದಾರೋ, ಆದರೆ ಒಟ್ಟಿಗೆ ನಗುನಗುತ್ತಾ ಫೋಟೊಗೆ ಪೋಸು ಕೊಡುತ್ತಿರುವುದು ಬಿಜೆಪಿಯವರು ಮಾತ್ರವಲ್ಲದೆ ಸಿಎಂ ಸ್ಥಾನದ ಕನಸು ಕಾಣುತ್ತಿರುವ ಸ್ವಪಕ್ಷೀಯರ ನಿದ್ದೆಯನ್ನೂ ಕೆಡಿಸಿದೆ.
ಸಮಾವೇಶಗಳ ಸಮರ
ಸಮಾವೇಶಗಳು ರಾಜಕೀಯದ ಪ್ರಮುಖ ಭಾಗ. ಮಾತಿನಿಂದ ಹೇಳಲಾಗದ ನಾನಾ ಸಂದೇಶಗಳನ್ನು ಸೂಕ್ತವಾಗಿ ಮತ್ತು ಸಮರ್ಥವಾಗಿ ಸಂಬಂಧಪಟ್ಟವರಿಗೆ ತಲುಪಿಸಲು ಇರುವ ಬಲು ದೊಡ್ಡ ಮಾಧ್ಯಮ. ಯಾವುದೇ ರಾಜಕಾರಣಿ ಶಕ್ತಿ ಪ್ರದರ್ಶನ ಮಾಡಲು ಅಥವಾ ಜಾತಿ ಅಸ್ತ್ರ ಬಳಸಲು ಮುಂದಾದ ಎಂದರೆ ಮೊದಲಿಗೆ ಅರ್ಥವಾಗಬೇಕಾದ ಸಂಗತಿ ಆತ ದುರ್ಬಲನಾಗಿದ್ದಾನೆ ಎಂದು. ತಾನು ಬಯಸಿದ್ದು ಸಿಗದೆ ಅಥವಾ ಸಿಗುವ ಖಾತರಿಯೂ ದೊರೆಯದೆ ಅಭದ್ರತೆಯಲ್ಲಿ ಇದ್ದಾನೆ ಎಂದು. ರಾಜ್ಯ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಎರಡೆರಡು ಬಣಗಳನ್ನು ಕಾಡುತ್ತಿರುವುದು ಇದೇ ಆತಂಕ.
ಬಿಜೆಪಿಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಬಣಕ್ಕೆ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಒಕ್ಕಲೆಬ್ಬಿಸುವ ಭರವಸೆ ಸಿಕ್ಕಿರುವ ಸಾಧ್ಯತೆಗಳಿಲ್ಲ. ವಿಜಯೇಂದ್ರ ಬಣಕ್ಕೆ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಮುಂದುವರಿಸುವ ಆಶ್ವಾಸನೆ ದೊರೆತಂತೆ ಕಾಣುತ್ತಿಲ್ಲ. ಈ ಅನಿಶ್ಚಿತತೆಯಿಂದಲೇ ಎರಡೂ ಬಣಗಳು ಸಮಾವೇಶದ ಮೂಲಕ ಹೈಕಮಾಂಡಿಗೆ ತಮ್ಮ ಸಾಮರ್ಥ್ಯದ ಸಂದೇಶ ಕಳುಹಿಸಲು ಸಜ್ಜಾಗಿದ್ದವು. ಬಲ ಪ್ರದರ್ಶನ ಮಾಡಿ ಅಂದುಕೊಂಡಿದ್ದನ್ನು ಗಿಟ್ಟಿಸಿಕೊಳ್ಳಲು ತಂತ್ರ ಹೂಡಿದ್ದವು. ಆದರೆ ಹೈಕಮಾಂಡ್ ನಾಯಕರು ಸಮಾವೇಶಗಳು ನಡೆಯಲು ಹಸಿರು ನಿಶಾನೆ ತೋರದೆ ತಮ್ಮ ಶಕ್ತಿ ಏನು ಎನ್ನುವುದನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ.
ಇನ್ನೊಂದೆಡೆ ಕಾಂಗ್ರೆಸ್ನಲ್ಲೂ ಸಿದ್ದರಾಮಯ್ಯಗೆ ಅಧಿಕಾರದಲ್ಲಿ ಮುಂದುವರಿಯುವ ಬಗ್ಗೆ ಅನುಮಾನ ಇರಬಹುದು. ಡಿಕೆಶಿಗೆ ಅಧಿಕಾರ ಮರೀಚಿಕೆಯಾಗುವ ಸಾಧ್ಯತೆಗಳು ಗೋಚರಿಸುತ್ತಿರಬಹುದು. ಅದರಿಂದಾಗಿ ಸಿದ್ದರಾಮಯ್ಯ ಮತ್ತು ಡಿಕೆಶಿ ಬಣಗಳು ಸಮಾವೇಶದ ಮೂಲಕ ಉದ್ದೇಶ ಸಾಧಿಸಿಕೊಳ್ಳಲು ಹವಣಿಸುತ್ತಿವೆ. ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯ ಅವರನ್ನು ಮುಂದುವರಿಸುವಂತೆ ಒತ್ತಡ ಹೇರಲು ದಲಿತ ಸಮಾವೇಶಗಳನ್ನು ಆಯೋಜಿಸುವ ತಯಾರಿ ನಡೆದಿತ್ತು. ಇದಕ್ಕೆ ಡಿಕೆಶಿ ಹೈಕಮಾಂಡ್ ಮೂಲಕ ತಡೆಯಾಜ್ಞೆ ತಂದರು. ಡಿಕೆಶಿ ನಡೆಗೆ ಕೆರಳಿದ ದಲಿತ ನಾಯಕರು ಶೋಷಿತರ ಸಮಾವೇಶ ಎಂಬ ಹೆಸರಿನಲ್ಲಿ ಬಲ ಪ್ರದರ್ಶನ ಮಾಡುವ ಪ್ಲ್ಯಾನ್ ಬಿ ರೂಪಿಸಿದ್ದಾರೆ. ಪರಿಸ್ಥಿತಿ ನೋಡಿಕೊಂಡು ಶೋಷಿತರ ಸಮಾವೇಶವನ್ನು ಯಾವಾಗ ಮತ್ತು ಎಲ್ಲಿ ಮಾಡಬೇಕೆಂದು ನಿರ್ಧರಿಸಲಾಗುತ್ತದೆ. ಶೋಷಿತರ ಸಮಾವೇಶ ಅಹಿಂದ ಸಮಾವೇಶಗಳ ಮತ್ತೊಂದು ಮಾದರಿಯಂತಿರುತ್ತದೆ. ಹಾಗಾಗಿ ಕಾಂಗ್ರೆಸ್ ಹೈಕಮಾಂಡ್ ಮುಂದಿನ ಬಾರಿ ನಿರಾಕರಿಸುವ ಸಾಧ್ಯತೆಗಳು ಕಮ್ಮಿ.
ಡಿಕೆಶಿ ಕಡೆ ನೋಡಿದರೆ ಅವರೂ ಸಮಾವೇಶದ ಮೊರೆಹೋಗಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿ 5 ವರ್ಷ ಪೂರೈಸುತ್ತಿರುವುದನ್ನೇ ನೆಪ ಮಾಡಿಕೊಂಡು ಸಮಾವೇಶ ಮಾಡಲು ಮುಂದಾಗಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ತನ್ನ ಪಾತ್ರವೇ ಪ್ರಮುಖ ಎಂದು ಬಿಂಬಿಸುವುದು ಸಮಾವೇಶದ ಕಾರ್ಯಸೂಚಿ. ಒಮ್ಮೆ ‘ಕಾಂಗ್ರೆಸ್ ಅಧಿಕಾರಕ್ಕೆ ಬರಲು ನಾನೇ ಪ್ರಮುಖ ಕಾರಣ ಎಂದು ಬಿಂಬಿತವಾದರೆ ಮುಂದಿನ ಆಟ ಸುಲಭ’ ಎನ್ನುವುದು ಅವರ ಲೆಕ್ಕಾಚಾರ. ಒಟ್ಟಿನಲ್ಲಿ ಬಿಜೆಪಿಯಲ್ಲಿ ಸಮಾವೇಶಗಳು ಘೋಷಣೆಯಾಗಿ ನಿಂತು ಹೋಗಿವೆ. ಕಾಂಗ್ರೆಸಿನಲ್ಲಿ ತಯಾರಿ ಜೋರಾಗಿದ್ದು ಘೋಷಣೆಗಳು ಬಾಕಿ ಉಳಿದಿವೆ.
ಗಾಸಿಪ್ ಅಂದುಕೊಂಡ್ರೆ ಗಾಸಿಪ್
ನಟಿ ರನ್ಯಾ ರಾವ್ ಗೋಲ್ಡ್ ಬ್ಯುಸಿನೆಸ್ ಹಿಂದೆ ಇಬ್ಬರು ಸಚಿವರಿದ್ದಾರೆ ಎಂಬ ವಿಷಯ ಒಂದು ದಿನ ವಿಧಾನಮಂಡಲದ ಅಧಿವೇಶನವನ್ನು ಅಪ್ಪಳಿಸಿ ಮರುದಿನವೇ ಮೆತ್ತಗಾಯಿತು. ಇಬ್ಬರು ಸಚಿವರಲ್ಲ, ಒಬ್ಬರು. ರಾಜ್ಯದವರಲ್ಲ, ಕೇಂದ್ರದವರು ಎಂದು ಚರ್ಚೆಯಾಗಿ ಕಡೆಗೀಗ ಪ್ರಭಾವಿ ಸ್ವಾಮೀಜಿಯೊಬ್ಬರ ಹೆಸರು ಕೇಳಿಬರುತ್ತಿದೆ. ಅದೂ ಸ್ವಂತ ಆಸ್ತಿಯನ್ನು ಸಮಾಜಸೇವೆಗೆ ಮೀಸಲಿಟ್ಟಿರುವ ಸ್ವಾಮೀಜಿಯ ಹೆಸರು ಕೇಳಿಬರುತ್ತಿದೆ. ಆದುದರಿಂದ ಆಡಳಿತ ಮತ್ತು ವಿರೋಧ ಪಕ್ಷಗಳು ಒಂದಾಗಿ ಸ್ವಾಮೀಜಿಯನ್ನು ರಕ್ಷಿಸುತ್ತಿವೆಯಂತೆ.