ಕಾಂಗ್ರೆಸ್ ನಾಯಕರು ಕಿತ್ತಾಡುತ್ತಿರುವುದೇಕೆ?

ಕರ್ನಾಟಕದ ಜನ ನಿಷ್ಕ್ರಿಯ, ನಿರ್ಲಕ್ಷ್ಯ ಮತ್ತು ನಿರ್ಲಜ್ಜತೆಯನ್ನು ಎಂದೂ ಕ್ಷಮಿಸಿಲ್ಲ. ಸರಕಾರ ಮತ್ತು ಅದನ್ನು ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ ಕಾರ್ಯವೈಖರಿ ಬಗ್ಗೆ ಈ ಮಾತುಗಳು ಕಟುವಾದವೆನಿಸಿದರೂ ವಾಸ್ತವ. 1985ರ ಬಳಿಕ ರಾಜ್ಯದಲ್ಲಿ ಯಾವುದೇ ಪಕ್ಷದ ಸರಕಾರ ಮತ್ತೊಮ್ಮೆ ಅಧಿಕಾರ ಹಿಡಿಯಲು ಸಾಧ್ಯವಾಗದೇ ಇದ್ದದ್ದು ಇದೇ ಮೇಲ್ಕಂಡ ಕಾರಣಗಳಿಂದಾಗಿ ಎನ್ನುವುದನ್ನು ಯಾರೂ ಅಲ್ಲಗೆಳೆಯಲಾರರು. ಅಂದಿನಿಂದಲೂ ರಾಜ್ಯ ರಾಜಕಾರಣದಲ್ಲಿರುವ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಈ ಇತಿಹಾಸವನ್ನು ಮರೆತಂತಿದೆ.
ರಾಜ್ಯ ಕಾಂಗ್ರೆಸ್ ನಾಯಕರು ಕಿತ್ತಾಡಲು ಕಾರಣಗಳೇ ಇರಬಾರದಿತ್ತು. ಕೇಂದ್ರದ ಅಧಿಕಾರ ರಾಜ್ಯ ಸರಕಾರಗಳನ್ನು ಆಪೋಶನ ತೆಗೆದುಕೊಳ್ಳುವವರ ಕೈಯಲ್ಲಿದೆ ಎಂದರಿತ ರಾಜ್ಯದ ಪ್ರಬುದ್ಧ ಮತದಾರರೇ 2023ರಲ್ಲಿ ಕಾಂಗ್ರೆಸ್ ಪಕ್ಷವನ್ನು 136 ಸ್ಥಾನಗಳಲ್ಲಿ ಗೆಲ್ಲಿಸಿ ಸರಕಾರಕ್ಕೆ ಭದ್ರ ಬುನಾದಿ ಹಾಕಿದ್ದರು. ಇಡೀ ದೇಶದಲ್ಲಿ ಕಾಂಗ್ರೆಸ್ ಬೇರುಗಳು ಅತ್ಯಂತ ಆಳವಾಗಿ ಇಳಿದಿರುವ ರಾಜ್ಯ ಕರ್ನಾಟಕ. ಇಲ್ಲಿ ನಾಯಕತ್ವಕ್ಕೂ ಕೊರತೆ ಇಲ್ಲ. ಮೇಲಾಗಿ ಚುನಾವಣೆಗೂ ಮುನ್ನ ಹೇಳಿದ್ದ ಐದೂ ಗ್ಯಾರಂಟಿಗಳನ್ನು ಕಾಂಗ್ರೆಸ್ ಸರಕಾರ ಜಾರಿಗೊಳಿಸಿದೆ. ಹಿಂದಿನ ಬಿಜೆಪಿ ಸರಕಾರ ಬಿಟ್ಟುಹೋಗಿದ್ದ ಆರ್ಥಿಕ ಹೊರೆಯ ನಡುವೆಯೂ, ಹಲವು ಅಡಚಣೆಗಳಿದ್ದರೂ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. ಇದು ಎದೆ ತಟ್ಟಿಕೊಂಡು ಹೇಳುವ ವಿಷಯ, ತಲೆ ಎತ್ತಿಕೊಂಡು ಓಡಾಡಬಹುದಾಗಿದ್ದ ವಿಚಾರ. ಬಿಜೆಪಿ-ಜೆಡಿಎಸ್
ಪಕ್ಷಗಳು ಒಗ್ಗಟ್ಟಾಗಿ ಎಂಥದ್ದೇ ಹೋರಾಟ ರೂಪಿಸಿದ್ದರೂ ಅಷ್ಟೇ ಗಟ್ಟಿಯಾಗಿ ಎದುರಿಸಬಹುದಾಗಿದ್ದಂತಹ ಸಂಗತಿಗಳು. ಆದರೆ ನಡೆಯುತ್ತಿರುವುದು ಮಾತ್ರ ರಾಜಕೀಯ ಶಾಸ್ತ್ರಜ್ಞ ಲಾರ್ಡ್ ಆಕ್ಟನ್ ಅವರ ‘ಅಧಿಕಾರವು ಭ್ರಷ್ಟಗೊಳಿಸುತ್ತದೆ, ಸಂಪೂರ್ಣ ಅಧಿಕಾರವು ಸಂಪೂರ್ಣ ಭ್ರಷ್ಟಗೊಳಿಸುತ್ತದೆ’ ಎನ್ನುವ ಮಾತಿನಂತೆ.
ಭ್ರಷ್ಟ ಅಥವಾ ಭ್ರಷ್ಟಾಚಾರ ಪದಕ್ಕೆ ಕಳಂಕಿತ, ಕರ್ತವ್ಯಭ್ರಷ್ಟ, ಕಾನೂನುಬಾಹಿರ ಎಂಬಿತ್ಯಾದಿ ಅರ್ಥಗಳಿವೆ. ಸರಕಾರವೊಂದು ಗೊತ್ತು-ಗುರಿ ಇಲ್ಲದಂತೆ ನಡೆಯುವ, ಜನಹಿತ ಮರೆತು ಸಾಗುವ ದಾರಿಯನ್ನು ಭ್ರಷ್ಟ ಪಥವೆಂದು ಬಣ್ಣಿಸಬಹುದು. ಸರಕಾರವನ್ನು ನಡೆಸುವ ಪಕ್ಷದ ಸೈದ್ಧಾಂತಿಕ ಸಂಗತಿಗಳನ್ನು ನಿರ್ಗತಿಕವಾಗಿಸಿ ಗಾಳಿ ಬಂದ ಕಡೆಗೆ ತೂರಿಕೊಳ್ಳುವ ಅಸೂಕ್ಷ್ಮ ನಡೆಯನ್ನು ನೀತಿಭ್ರಷ್ಟ ಎಂದು ವ್ಯಾಖ್ಯಾನಿಸಬಹುದು. ಅಧಿಕಾರ ಕೊಟ್ಟ ಪಕ್ಷದ ವರ್ತಮಾನ ಮತ್ತು ಭವಿಷ್ಯಗಳ ಬಗ್ಗೆ ಕಿಂಚಿತ್ತೂ ಯೋಚಿಸದ ಅಸಂವೇದನೀಯ
ಹೆಜ್ಜೆಗಳನ್ನು ಮತಿಭ್ರಷ್ಟ ಎಂಬ ಮಾತಿನಿಂದ ಕರೆಯಬಹುದು. ರಾಜ್ಯ ಕಾಂಗ್ರೆಸ್ ನಾಯಕರು ಜವಾಬ್ದಾರಿ ಮರೆತು ವರ್ತಿಸುತ್ತಿರುವುದರಿಂದ, ಕಾರಣವೇ ಇಲ್ಲದೆ ಕಿತ್ತಾಡುತ್ತಿರುವುದರಿಂದ ಈ ನೈತಿಕ ಪಾಠದ ಪ್ರಶ್ನೆಗಳು ಉದ್ಭವಿಸುತ್ತವೆ.
ಅಧಿಕಾರ ಹಂಚಿಕೆ ಆಗಿದೆಯೇ?
ಹೈಕಮಾಂಡ್ ನಾಯಕರ ಸಮ್ಮುಖದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಅಧಿಕಾರದ ಹಂಚಿಕೆ ಒಪ್ಪಂದವಾಗಿದ್ದರೆ ಅದೇ ಪ್ರಕಾರ ಅಥವಾ ತುಸು ಬದಲಾವಣೆಗಳೊಂದಿಗೆ ಅದು ಕಾರ್ಯರೂಪಕ್ಕೆ ಬರುತ್ತದೆ. ಸಿದ್ದರಾಮಯ್ಯ ಪರ ಎಷ್ಟೇ ದೊಡ್ಡ ಸಂಖ್ಯೆಯ ಶಾಸಕರ ದಂಡಿದ್ದರೂ ಪದತ್ಯಾಗ ಅನಿವಾರ್ಯವಾಗುತ್ತದೆ. ಒಂದೊಮ್ಮೆ ಅಂಥ ಒಪ್ಪಂದ ಆಗಿಲ್ಲದಿದ್ದರೆ ಡಿಕೆಶಿಗೆ ಸದ್ಯದ ಪರಿಸ್ಥಿತಿಯನ್ನು ಬುಡಮೇಲು ಮಾಡಿ ಮುಖ್ಯಮಂತ್ರಿ ಪಟ್ಟ ದಕ್ಕಿಸಿಕೊಳ್ಳುವುದು ಆಗದ ಮಾತು. ಪರಿಸ್ಥಿತಿ ಹೀಗಿದ್ದರೂ ಸಿದ್ದರಾಮಯ್ಯ ಮತ್ತು ಡಿಕೆಶಿ ಬಣಗಳು ಏಕೆ ಬಡಿದಾಡುತ್ತಿವೆ?
ರೈಲ್ವೆ ಹಳಿಗಳಂತಿರುವ ಅಧಿಕಾರ ಮತ್ತು ಸಿದ್ದರಾಮಯ್ಯ
ಸಿದ್ದರಾಮಯ್ಯ ಬೆಂಬಲಿಗರು ಉರುಳಿಸುತ್ತಿರುವ ದಾಳಗಳೇ ಅಧಿಕಾರ ಹಂಚಿಕೆ ಒಪ್ಪಂದ ಆಗಿರಲೂಬಹುದು ಎನ್ನುವ ಅನುಮಾನವನ್ನು ಹುಟ್ಟುಹಾಕುತ್ತಿವೆ. ಏಕೆಂದರೆ ಅವರ ಪಟ್ಟುಗಳಲ್ಲಿ ಕುರ್ಚಿ ಉಳಿಸಿಕೊಳ್ಳುವುದರ ಹೊರತಾಗಿ ಬೇರೆ ಉದ್ದೇಶಗಳು ಗೋಚರಿಸುತ್ತಿಲ್ಲ. ಇತಿಹಾಸವೂ ಇದನ್ನು ಬಿಡಿಸಿ ಹೇಳುತ್ತದೆ. 1983ರಲ್ಲಿ ಮೊದಲ ಬಾರಿಗೆ ಶಾಸಕರಾದಾಗಲೇ ಸಿದ್ದರಾಮಯ್ಯ ತಾನೇನು ಎನ್ನುವುದನ್ನು ಸಾಬೀತು ಪಡಿಸಿದ್ದರು. ಆಗ ಪಕ್ಷೇತರರಾಗಿ ಗೆದ್ದಿದ್ದು ಸಿದ್ದರಾಮಯ್ಯ ಒಬ್ಬರೇ ಅಲ್ಲ. ಬರೋಬ್ಬರಿ 21 ಮಂದಿ. ಆದರೆ ಸಿದ್ದರಾಮಯ್ಯ ಚಾಣಾಕ್ಷತನ ಮೆರೆದು ಕನ್ನಡ ಕಾವಲು ಸಮಿತಿ ಅಧ್ಯಕ್ಷರಾದರು. ಎರಡೇ ವರ್ಷದ ಅಂತರದಲ್ಲಿ ಮಂತ್ರಿಯಾದರು. ಮುಂದಿನ ಚುನಾವಣೆಯಲ್ಲಿ ಸೋತರೂ ಜನತಾ ದಳದ ಸೆಕ್ರೆಟರಿ ಜನರಲ್ ಆದರು. 1994ರಲ್ಲಿ ಮೊದಲ ಬಾರಿಗೆ ಹಣಕಾಸು ಸಚಿವರಾದರು. ಮತ್ತೆ ಎರಡೇ ವರ್ಷದ ಅಂತರದಲ್ಲಿ ಡಿಸಿಎಂ ಆದರು. ಎರಡು ಬಾರಿ ಡಿಸಿಎಂ, ಎರಡು ಸಲ ವಿಪಕ್ಷ ನಾಯಕ ಮತ್ತು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ನಡುವೆ ಜನತಾದಳದ (ಎಸ್) ಅಧ್ಯಕ್ಷರಾಗಿದ್ದಾರೆ. ಹೀಗೆ ಅಧಿಕಾರದ ಜೊತೆಜೊತೆಗೇ ಸಾಗಿಬಂದ ಸಿದ್ದರಾಮಯ್ಯ ಈಗ ಸುಲಭದಲ್ಲಿ ಅದನ್ನು ಬಿಟ್ಟುಕೊಡುವರೇ ಎನ್ನುವುದು ಕುತೂಹಲಕಾರಿ ಪ್ರಶ್ನೆ.
ರಾಜ್ಯ ರಾಜಕಾರಣದ Unique Character ಸಿದ್ದು!
ಸಿದ್ದರಾಮಯ್ಯ ವ್ಯಕ್ತಿತ್ವದ ಹಿನ್ನೆಲೆ ನೋಡುವುದಾದರೆ ಸದ್ಯ ಅವರು ರಾಜ್ಯ ರಾಜಕಾರಣದ Unique Character. ಅವರ ರಾಜಕೀಯ ಜೀವನದ ಮೊದಲ ಮೂರು ದಶಕ ಮಾಗಿದ್ದು ಜಾರ್ಜ್ ಫೆರ್ನಾಂಡಿಸ್, ಆರ್.ಎಲ್. ಜಾಲಪ್ಪ, ರಾಮಕೃಷ್ಣ ಹೆಗಡೆ, ಎಚ್.ಡಿ. ದೇವೇಗೌಡ, ಎಸ್.ಆರ್. ಬೊಮ್ಮಾಯಿ, ಜೆ.ಎಚ್. ಪಟೇಲ್, ಎಂ.ಪಿ. ಪ್ರಕಾಶ್ ಮತ್ತಿತರ ಮುತ್ಸದ್ದಿಗಳ ಮಧ್ಯೆ. ಸಿದ್ದರಾಮಯ್ಯ ಸೈದ್ಧಾಂತಿಕವಾಗಿ ಸ್ಫುಟವಾಗಲು ಪ್ರೊ. ಎಂ.ಡಿ. ನಂಜುಂಡಸ್ವಾಮಿ, ಪ್ರೊ. ಕೆ. ರಾಮದಾಸ್, ಪಿ. ಲಂಕೇಶ್ ಮತ್ತಿತರರ ಕೊಡುಗೆ ಇದೆ. ಕುರುಬ ಸಮುದಾಯದ ಸಿದ್ದರಾಮಯ್ಯ ಅಹಿಂದ ನಾಯಕನಾಗಿ ಹೊರಹೊಮ್ಮಲು ಜಾಲಪ್ಪ ಸೇರಿದಂತೆ ಬಹುತೇಕರ ಬೆವರಿದೆ. ಹೀಗೆ ಭಿನ್ನವಾಗಿ ಬೆಳೆದು ಬಂದಿರುವ ಸಿದ್ದರಾಮಯ್ಯ ಅವರಿಗೆ ಸಾರ್ವಜನಿಕವಾಗಿ ಮತ್ತು ರಾಜಕೀಯವಾಗಿ ಯಾವಾಗ, ಯಾವ ನಡೆ ಇಡಬೇಕೆಂಬ ಸ್ಪಷ್ಟತೆ ಇದೆ. ಅದೇ ಕಾರಣಕ್ಕೆ ತಾನು ಒಂದೇ ಒಂದು ಮಾತನಾಡದೆ ಬೆಂಬಲಿಗರ ಮೂಲಕ ‘ಸಿದ್ದರಾಮಯ್ಯ ಅನಿವಾರ್ಯ’ ಎಂಬ ವಾತಾವರಣ ಸೃಷ್ಟಿಸುತ್ತಿದ್ದಾರೆ. ಹಾಗೆ ನೋಡಿದರೆ ಸಿದ್ದರಾಮಯ್ಯ ನಿಜಕ್ಕೂ ‘ಪುಡಿ’ (ಪಕ್ವವಾಗಿಲ್ಲದ) ರಾಜಕಾರಣಿಗಳ ಜೊತೆ ವ್ಯವಹರಿಸುತ್ತಿರುವುದು ಈಗಲೇ. ಹಣದ ಥೈಲಿ ಹೊಂದಿರುವವರ ಕೈಯಲ್ಲಿ ರಾಜಕೀಯ ಕ್ಷೇತ್ರದ ಕೀಲಿ ಕೈ ಸಿಲುಕಿಕೊಂಡಿರುವ ಪ್ರಸಕ್ತ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ.
ದೇವೇಗೌಡರಂಥ ದೇವೇಗೌಡರ ಹಿಡಿತಕ್ಕೇ ಸಿಲುಕದ ಇಂಥ ಸಿದ್ದರಾಮಯ್ಯ ಅವರಿಂದ ಅಧಿಕಾರವನ್ನು ಕಿತ್ತುಕೊಳ್ಳಬಲ್ಲೆ ಎಂಬ ಡಿಕೆಶಿಯ ಛಲವೂ ಮೆಚ್ಚುವಂಥದ್ದೇ. ಈ ಛಲವನ್ನು ಅವರು ‘ಬಲ’ಗಳಿಂದ ಈಡೇರಿಸಿಕೊಳ್ಳಬಹುದೆಂದು ನಂಬಿಕೊಂಡಂತಿದೆ. ಆದರೆ ರಾಜ್ಯ ರಾಜಕಾರಣದಲ್ಲಿ ಹಣಬಲ, ದೈವಬಲಗಳು ಅಧಿಕಾರ ತಂದುಕೊಟ್ಟ ಉದಾಹರಣೆಗಳು ವಿರಳ. ಜನಬಲ ನಂಬಿದ್ದಾಗ ಅಧಿಕಾರ ಅನುಭವಿಸಿದ್ದ ದೇವರಾಜ ಅರಸು ಅವರಂಥ ಮೇರು ವ್ಯಕ್ತಿತ್ವ ಮರೆಯಾಗಿದ್ದೇ ಹಣಬಲ ಹಾಗೂ ದೈವಬಲವನ್ನು ಅವಲಂಬಿಸಿದಾಗ. ದೇವೇಗೌಡ, ಅನಂತಕುಮಾರ್ ಅವರಂಥವರು ಕೊನೆವರೆಗೂ ಅಂದುಕೊಂಡಂತೆ ಆಗಲಾರದಿದ್ದದ್ದು ಇದೇ ಹಣಬಲ ಮತ್ತು ದೈವಬಲಗಳನ್ನು ನಂಬಿ ಕುಳಿತಿದ್ದರಿಂದ. ಉಳಿದಂತೆ ಹಣಬಲದಿಂದ ಫಲ ಉಂಡವರು ಎಚ್.ಡಿ. ಕುಮಾರಸ್ವಾಮಿ ಮತ್ತು ಬಿ.ಎಸ್. ಯಡಿಯೂರಪ್ಪ ಮಾತ್ರ.
ಡಿಕೆಶಿಗೆ ಛಲ ಮಾತ್ರವಲ್ಲ, ಧೈರ್ಯವೂ ಇದೆ. ಏಕೆಂದರೆ ಸಿದ್ದರಾಮಯ್ಯ ತನಗಿಂತ ಹಲವು ಪಟ್ಟು ಹೆಚ್ಚು ಶಕ್ತಿಶಾಲಿ ಎಂದು ಗೊತ್ತಿದ್ದೂ ಅವರಿಗೆ ಬಹಿರಂಗವಾಗಿ ಹಾರತುರಾಯಿ ಹಾಕಿ ಆಂತರ್ಯದಲ್ಲಿ ಪಂಥಾಹ್ವಾನ ನೀಡುತ್ತಿದ್ದಾರೆ. ಈಗ ಸಿದ್ದರಾಮಯ್ಯ ಜೊತೆ ಕುರುಬರು ಮತ್ತು ಮುಸ್ಲಿಮರು ಪೂರ್ಣ ಪ್ರಮಾಣದಲ್ಲಿದ್ದಾರೆ. ಉಳಿದ ಹಿಂದುಳಿದ ವರ್ಗಗಳು ವಿಧಿಯಿಲ್ಲದೆ ಸಿದ್ದರಾಮಯ್ಯ ಅವರನ್ನು ಹಿಂಬಾಲಿಸುತ್ತಿವೆ. ಬಹುತೇಕ ದಲಿತರ ಅಭಿಪ್ರಾಯ ತಮ್ಮ ಸಮುದಾಯದ ನಾಯಕರಿಗಿಂತ ಸಿದ್ದರಾಮಯ್ಯ ಅವರೇ ಪರವಾಗಿಲ್ಲ ಎನ್ನುವುದಾಗಿದೆ. ಒಕ್ಕಲಿಗ ನಾಯಕರ ಪೈಕಿ ಕೃಷ್ಣಭೈರೇಗೌಡ, ಚಲುವರಾಯಸ್ವಾಮಿ, ಪಿರಿಯಾಪಟ್ಟಣ ವೆಂಕಟೇಶ್, ಕೃಷ್ಣಪ್ಪ, ಪ್ರಿಯಾ ಕೃಷ್ಣಾ ಮತ್ತಿತರು ಸಿದ್ದರಾಮಯ್ಯ ಬೆನ್ನಿಗಿದ್ದಾರೆ. ಲಿಂಗಾಯತ ನಾಯಕರ ಪೈಕಿ ಸಿದ್ದರಾಮಯ್ಯ ಪಾಲಿಗೆ ಎಂ.ಬಿ. ಪಾಟೀಲ್ ಅತ್ಯಂತ ನಂಬಿಕಸ್ಥ ನಾಯಕ. ‘ಐದು ವರ್ಷವೂ ಸಿದ್ದರಾಮಯ್ಯ ಅವರೇ ಸಿಎಂ’ ಎಂದು ಮೊದಲು ಹೇಳಿದ್ದೇ ಎಂಬಿ ಪಾಟೀಲ್. ಇದೀಗ ಶಿವಾನಂದ ಪಾಟೀಲ್ ಕೂಡ ‘ಮುಂದಿನ ಅವಧಿಗೂ ಸಿದ್ದರಾಮಯ್ಯ ಅವರೇ ಸಿಎಂ ಆಗಲಿ’ ಎಂದಿದ್ದಾರೆ. ಅವರ ಕ್ಷೇತ್ರದ ಕುರುಬ ಮತಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಆ ಮಾತು ಹೇಳಿದ್ದರಾದರೂ, ಇದೇ ಕಾರಣಕ್ಕೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಲಿಂಗಾಯತರ ಬೆಂಬಲ ಇನ್ನೂ ಜಾಸ್ತಿ ಸಿದ್ದರಾಮಯ್ಯ ಕಡೆ ವಾಲುವುದು ನಿಶ್ಚಿತ. ಪ್ರತಿಯಾಗಿ ತಮ್ಮ ಜೊತೆಗಿರುವವರನ್ನು ಡಿಕೆಶಿಯೇ ‘ಸಾಕಬೇಕು’. ಇವೆಲ್ಲದರ ನಡುವೆಯೂ ಅಖಾಡಕ್ಕಿಳಿದಿದ್ದಾರೆ ಎಂದರೆ ಅವರು ‘ಹೈಕಮಾಂಡ್ ಬಲ’ದ ಮೇಲೆ ವಿಶ್ವಾಸವಿಟ್ಟಿರಬಹುದು ಅಥವಾ ಕೆಪಿಸಿಸಿ ಕುರ್ಚಿ ಕೈತಪ್ಪುತ್ತದೆ ಎನ್ನುವ ಭಯದಿಂದಿರಬಹುದು. ಇದು ಒಂಥರಾ ಚೌಕಾಸಿ. ಪದೇ ಪದೇ ಮುಖ್ಯಮಂತ್ರಿ ಸ್ಥಾನ ಕೇಳಿ ಈಗಾಗಲೇ ಇರುವ ಹುದ್ದೆಗಳನ್ನು ಉಳಿಸಿಕೊಳ್ಳುವ ಚೌಕಾಸಿ.
ರಾಜ್ಯ ಕಾಂಗ್ರೆಸ್‌ನಲ್ಲಿ ಇಷ್ಟೆಲ್ಲಾ ಆಗುತ್ತಿದ್ದರೂ ಮಲ್ಲಿಕಾರ್ಜುನ ಖರ್ಗೆ ಮೌನವಾಗಿದ್ದಾರೆ. ಅವರ ಮೌನಕ್ಕೆ ಹೆಚ್ಚು ಮಹತ್ವವಿದೆ. ಸಿದ್ದರಾಮಯ್ಯ ಮತ್ತು ಡಿಕೆಶಿ ನಿಯಂತ್ರಿಸಲಾಗದೆ ಸುಮ್ಮನಿದ್ದಾರೋ, ಪರ್ಯಾಯ ನಾಯಕತ್ವದ ಅನಿವಾರ್ಯತೆ ಸೃಷ್ಟಿಯಾಗಲಿ, ಸಂಧ್ಯಾಕಾಲದಲ್ಲಿ ತನಗೂ ಜೀವಮಾನದ ಆಸೆ ಈಡೇರಿಸಿಕೊಳ್ಳುವ ಅವಕಾಶ ಒದಗಿ ಬರಲೆಂದು ಸುಮ್ಮನಿದ್ದಾರೋ ಗೊತ್ತಿಲ್ಲ. ಆದರೆ ಅವರ ಮೌನ ಸರಕಾರದ ಮಾನಕ್ಕೆ ಕುತ್ತು ತರುತ್ತಿರುವುದು ಮಾತ್ರ ದಿಟ. ಕಿವಿ ಹಿಂಡಬೇಕಾದ ಹೈಕಮಾಂಡ್ ನಾಯಕರಾದ ಕೆ.ಸಿ. ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೆವಾಲಾ ದಿಲ್ಲಿಗೆ ಹೋಗುತ್ತಿರುವ ದೂರುಗಳಿಗೆ ಕಿವಿ ಮುಚ್ಚಿ ಕುಳಿತಿರುವುದೂ ಅಕ್ಷಮ್ಯ.