ಬಿಜೆಪಿ ಬುಡಕ್ಕೆ ಬಿಸಿ ನೀರು ಬಿಟ್ಟ ರೆಡ್ಡಿ-ರಾಮುಲು!

Update: 2025-01-27 10:46 IST
ಬಿಜೆಪಿ ಬುಡಕ್ಕೆ ಬಿಸಿ ನೀರು ಬಿಟ್ಟ ರೆಡ್ಡಿ-ರಾಮುಲು!
  • whatsapp icon

ಅಧಿಕಾರವೇ ಹಾಗೆ; ಏನೇನೋ ಕನಸು ಬಿತ್ತುತ್ತದೆ. ಮುನಿಸು ತರಿಸುತ್ತದೆ. ವಿರಸ ಉಂಟುಮಾಡುತ್ತದೆ. ಅದರಿಂದಾಗಿ ಅಧಿಕಾರದಲ್ಲಿದ್ದಾಗ ಕಿತ್ತಾಡುವುದು ಸಹಜ. ಆದರೆ ರಾಜ್ಯ ಬಿಜೆಪಿ ನಾಯಕರು ವಿಪಕ್ಷದಲ್ಲಿರುವಾಗಲೂ ವಿರಮಿಸದೆ ಪರಸ್ಪರ ವಿಷ ಕಾರಿಕೊಳ್ಳುತ್ತಿದ್ದಾರೆ. ಮೊದಲು ವಿಜಯೇಂದ್ರ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಬಣ ಬಡಿದಾಟ. ನಂತರ ವಿಜಯೇಂದ್ರ-ರಮೇಶ್ ಜಾರಕಿಹೊಳಿ, ವಿಜಯೇಂದ್ರ-ಯತ್ನಾಳ್ ನಡುವೆ ವೈಯಕ್ತಿಕ ಕಚ್ಚಾಟ. ನಡುವೆ ರೇಣುಕಾಚಾರ್ಯ ಮತ್ತಿತರರದ್ದು ಪೋಷಕ ಪಾತ್ರದಲ್ಲಿ ಉತ್ತಮ ಪ್ರದರ್ಶನ.

ಇವರೆಲ್ಲಾ ವರ್ಷದಿಂದ ನಡೆಸಿದ್ದ ಕಾದಾಟವನ್ನು ಕ್ಷಣ ಮಾತ್ರದಲ್ಲಿ ಕಣ್ಮರೆ ಮಾಡಿದ್ದಾರೆ ರೆಡ್ಡಿ-ರಾಮುಲು. ಒಂದು ಕಾಲದ ಆಪ್ತಮಿತ್ರರು, ಹಾಲಿ ಬದ್ಧ ವೈರಿಗಳೂ ಆದ ಜನಾರ್ದನ ರೆಡ್ಡಿ-ಶ್ರೀರಾಮುಲು ರಂಪಾಟಕ್ಕೆ ಬಿಜೆಪಿ ಹೈಕಮಾಂಡ್ ನಾಯಕರೇ ಬೆಚ್ಚಿ ಬಿದ್ದಿದ್ದಾರೆ. ಅಷ್ಟಲ್ಲದಿದ್ದರೆ ಪತ್ರಿಕಾಗೋಷ್ಠಿ ಮಾಡುತ್ತಿದ್ದಂತೆ ರಾಮುಲುಗೆ ಜೆ.ಪಿ. ನಡ್ಡಾ ಫೋನ್ ಮಾಡುತ್ತಿರಲಿಲ್ಲ. ಮರುದಿನವೇ ದಿಲ್ಲಿಗೆ ಬರುವಂತೆ ವಿಜಯೇಂದ್ರಗೆ ಕರೆ ಬರುತ್ತಿರಲಿಲ್ಲ. ಇಷ್ಟು ದಿನ ತಾವೇ ನೇಮಿಸಿದ ರಾಜ್ಯಾಧ್ಯಕ್ಷರ ಅರ್ಹತೆ-ಸಾಮರ್ಥ್ಯಗಳನ್ನು ಹಾದಿ-ಬೀದಿಯಲ್ಲಿ ಹರಾಜಿಗಿಟ್ಟಾಗಲೂ ಹಾಜರಾಗದಿದ್ದ ಹೈಕಮಾಂಡ್ ನಾಯಕರು ರೆಡ್ಡಿ-ರಾಮುಲು ಗುಟುರಿಗೆ ಗಲಿಬಿಲಿಯಾಗಿದ್ದಾರೆ ಎನ್ನುವುದಕ್ಕೆ ಇದಕ್ಕಿಂತ ಉದಾಹರಣೆ ಬೇಕೇ?

ಅನುಮಾನವೇ ಇಲ್ಲ, ಇದು ರೆಡ್ಡಿ-ರಾಮುಲು ನಡುವಿನ ವೈಯಕ್ತಿಕ ಸಮಸ್ಯೆ. ಅದಕ್ಕೆ ಹಣವೂ ಸೇರಿದಂತೆ ಹಲವು ಆಯಾಮಗಳಿವೆ. ತಾನು ಜೈಲಿಗೆ ಹೋದಾಗ ಅಂತರ ಕಾಯ್ದುಕೊಂಡರು, ಮರಳಿ ಬಿಜೆಪಿಗೆ ಸೇರಿಸಲು ಪ್ರಯತ್ನಿಸಲಿಲ್ಲ, ಹೊಸ ಪಕ್ಷ ಕಟ್ಟಿದಾಗ ಜೊತೆಗೆ ಬರಲಿಲ್ಲ ಎನ್ನುವವು ರಾಮುಲು ಬಗ್ಗೆ ರೆಡ್ಡಿಗೆ ಇರುವ ರಾಜಕೀಯ ತಕರಾರುಗಳು. ರೆಡ್ಡಿಯಿಂದ ನನ್ನ ರಾಜಕೀಯ ಹಾದಿಗೆ ಎಡರು-ತೊಡರಾಯಿತು. ಬಿಜೆಪಿಗೆ ಸೇರಿಸುವ ನನ್ನ ಪ್ರಯತ್ನ ಗೌಣವಾಯಿತು. ಹೊಸ ಪಕ್ಷ ಕಟ್ಟಿ ಸೊತ್ತಿದ್ದ ನಾನು ಮತ್ತೊಂದು ಪ್ರಯೋಗಕ್ಕೆ ಒಡ್ಡಿಕೊಳ್ಳಲು ಒಪ್ಪದಿದ್ದುದೇ ಪ್ರಮಾದವಾಯಿತು ಎನ್ನುವವು ರೆಡ್ಡಿ ಬಗ್ಗೆ ರಾಮುಲುಗಿರುವ ಸಮಸ್ಯೆಗಳು.

ಆದರೆ ಬಿಜೆಪಿಗಿರುವ ಸಮಸ್ಯೆಗಳು ಬೇರೆ. ಬಿಜೆಪಿಗೆ ರೆಡ್ಡಿಯೂ ಬೇಕು. ರಾಮುಲುನೂ ಬೇಕು. ಯಾಕೆ ಬೇಕು ಎನ್ನುವುದನ್ನು ತಿಳಿಯಲು ಕಳೆದ ವಿಧಾನಸಭಾ ಮತ್ತು ಲೋಕಸಭಾ ಚುನಾವಣಾ ಫಲಿತಾಂಶಗಳನ್ನು ನೋಡಬೇಕು. ರೆಡ್ಡಿ-ರಾಮುಲು ಪ್ರಾಬಲ್ಯ ಇರುವ ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿ ಮಕಾಡೆ ಮಲಗಿತ್ತು. ರೆಡ್ಡಿ-ರಾಮುಲು ಜೊತೆಗಿದ್ದಿದ್ದರೆ ಪರಿಸ್ಥಿತಿ ಇಷ್ಟು ಹೀನಾಯವಾಗುತ್ತಿರಲಿಲ್ಲವೇನೋ. ಇತಿಹಾಸವೂ ಇದನ್ನು ಪುಷ್ಟಿಕರಿಸುತ್ತದೆ. ಹಿಂದೆ ರಾಜ್ಯದಲ್ಲಿ ಬಿಜೆಪಿಯನ್ನು ನೂರು ಸೀಟು ದಾಟಿಸಲು ಇವರಿಬ್ಬರೂ ಜೋಡೆತ್ತಿನಂತೆ ದುಡಿದಿದ್ದರು. ತನು-ಮನ-ಧನ ವ್ಯಯಿಸಿದ್ದರು. ಆಪರೇಷನ್ ಕಮಲದ ಮೂಲಕ ಬಿಜೆಪಿಯನ್ನು ಅಧಿಕಾರದ ಗದ್ದುಗೆಗೆ ಏರಿಸಲು ಶ್ರಮಿಸಿದ್ದರು. ಮುಂದೆಯೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ ಭದ್ರ ನೆಲೆ ಒದಗಿಸಲು ರೆಡ್ಡಿ-ರಾಮುಲು ಪ್ರಮುಖ ಪಾತ್ರವಹಿಸಬೇಕಾಗಿದೆ. ಆದರದು ಇಬ್ಬರೂ ಒಟ್ಟಿಗಿದ್ದರೆ ಮಾತ್ರ ಸಾಧ್ಯ. ಇಬ್ಬರೂ ಪ್ರತ್ಯೇಕವಾದರೆ ಮತ್ತೆ ಕಾಂಗ್ರೆಸಿಗೆ ಲಾಭ ಎನ್ನುವುದು ಬಿಜೆಪಿಗಿರುವ ಆತಂಕ.

ಇದೇ ಆತಂಕದಿಂದ ಹೈಕಮಾಂಡ್ ನಾಯಕರು ಮಧ್ಯಪ್ರವೇಶಿಸಿದ್ದಾರೆ. ರಾಜ್ಯ ನಾಯಕರು ‘ನಮ್ಮಿಂದ ಆಗಲ್ಲ, ನೀವೇ ಸಮಸ್ಯೆ ಬಗೆಹರಿಸಿ’ ಅಂತಾ ಕೈತೊಳೆದುಕೊಂಡಿದ್ದಾರೆ. ಇದರಿಂದ ಯಾವಾಗಬೇಕಾದರೂ ದಿಲ್ಲಿಗೆ ಬರುವಂತೆ ರೆಡ್ಡಿ-ರಾಮುಲುಗೆ ಕರೆ ಬರಬಹುದು. ಆದರೆ ರಾಮುಲು-ರೆಡ್ಡಿಯನ್ನು ಬಲ್ಲವರು ಹೇಳುವ ಪ್ರಕಾರ ಅವರು ಮತ್ತೆ ಒಂದಾಗುವ ಸಾಧ್ಯತೆ ಇಲ್ಲವೇ ಇಲ್ಲ.

ರಾಮುಲು ಕೋಪ ರೆಡ್ಡಿ ಮೇಲೆ ಮಾತ್ರನಾ?

ಶ್ರೀರಾಮುಲು ಇದ್ದಕ್ಕಿದ್ದಂತೆ ವೀರಾವೇಶ ಪ್ರದರ್ಶಿಸಲು ಇನ್ನೂ ಕೆಲ ಕಾರಣಗಳಿವೆ. ನಮ್ಮ ಸಂಬಂಧ ಹಳಸಿದೆ ಎಂದು ಗೊತ್ತಿದ್ದ ರಾಜ್ಯ ಬಿಜೆಪಿ ನಾಯಕರು ರೆಡ್ಡಿಗೆ ತೋರಿದ ಗೌರವಾದರಗಳಲ್ಲಿ ಕನಿಷ್ಠ ಕಾಲು ಭಾಗದಷ್ಟನ್ನು ನನಗೆ ತೋರಲಿಲ್ಲ. ಫಲಿತಾಂಶ ಬಂದ ಮೇಲೆ ಯಾರೊಬ್ಬರೂ ಫೋನ್ ಮಾಡಲಿಲ್ಲ. ಬಿಜೆಪಿಗೆ ರೆಡ್ಡಿ ಬೆಂಬಲ ಪಡೆಯುವಾಗ ಸೌಜನ್ಯಕ್ಕಾದರೂ ನನ್ನನ್ನು ಒಂದು ಮಾತು ಕೇಳಲಿಲ್ಲ. ರೆಡ್ಡಿ ಮಾತು ಕೇಳಿ ನನಗೆ ಸಂಡೂರು ಉಪಚುನಾವಣೆ ಟಿಕೆಟ್ ಕೊಡಲಿಲ್ಲ. ನನ್ನನ್ನು ಸಂಪೂರ್ಣವಾಗಿ ಕಡೆಗಣಿಸಲಾಯಿತು. ಮೇಲಾಗಿ ಸೋಲಿಗೆ ನನ್ನನ್ನು ಹೊಣೆ ಮಾಡಲಾಯಿತು ಎನ್ನುವುದು ರಾಮುಲು ಬೇಸರ.

ಮುಂದುವರಿದು ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್ ದಾಸ್ (ಆರ್‌ಎಂಡಿ) ಅಗರವಾಲ್ ಕೋರ್ ಕಮಿಟಿ ಸಭೆಯಲ್ಲಿ ರಾಮುಲು ಮೇಲೆ ಗುರುತರ ಆರೋಪ ಮಾಡುತ್ತಿದ್ದರೆ ವಿಜಯೇಂದ್ರ ಮುಸಿ ಮುಸಿ ನಗುತ್ತಿದ್ದರಂತೆ. ಯತ್ನಾಳ್, ಜಾರಕಿಹೊಳಿ ವಗೈರೆ ವಗೈರೆಗಳು ನನ್ನ ವಿರುದ್ಧ ಮಾತನಾಡುತ್ತಿದ್ದಾಗ ರಾಮುಲು ಸುಮ್ಮನಿದ್ದರು ಎನ್ನುವ ಕಾರಣಕ್ಕೋ ಏನೋ ವಿಜಯೇಂದ್ರ ಕೂಡ ಮೌನವಾಗಿದ್ದರು. ಆಗಲೇ ರಾಮುಲು ರೌದ್ರಾವತಾರ ತಾಳಿದ್ದು ಎನ್ನುತ್ತಾರೆ ಸಭೆಯಲ್ಲಿದ್ದವರೊಬ್ಬರು. ಎಲ್ಲರೊಂದಿಗೂ ಸೌಮ್ಯದಿಂದಲೇ ಇದ್ದ ಆರ್‌ಎಂಡಿ, ರಾಮುಲು ಜೊತೆ ಮಾತ್ರ ಏಕೆ ಹಾಗೆ ವರ್ತಿಸಿದರು? ಎನ್ನುವುದು ಸದ್ಯಕ್ಕೆ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ.

ರೆಡ್ಡಿಗಾಗಿ ರಾಮುಲು ಬಿಟ್ಟರಾ ವಿಜಯೇಂದ್ರ?

ಸದ್ಯ ರಾಜ್ಯ ಬಿಜೆಪಿಯಲ್ಲಿ ಇನ್ನೊಂದು ಮಾತು ಕೇಳಿಬರುತ್ತಿದೆ. ವಿಜಯೇಂದ್ರ ಮತ್ತು ಜನಾರ್ದನ ರೆಡ್ಡಿ ತುಂಬಾ ಹತ್ತಿರವಾಗಿದ್ದರಂತೆ. ರೆಡ್ಡಿ ಹತ್ತಿರ ಆಗುತ್ತಿದ್ದಂತೆ ರಾಮುಲು ಎಂಬ ಗ್ರಹ ವಿರುದ್ಧ ದಿಕ್ಕಿಗೆ ಚಲಿಸಿದೆಯಂತೆ. ಈಗ ಪರಿಶಿಷ್ಟ ಪಂಗಡದ ನಾಯಕತ್ವ ಸತೀಶ್ ಜಾರಕಿಹೊಳಿ ಪಾಲಾಗಿದೆ. ರಾಮುಲು ಎರಡು ಚುನಾವಣೆ ಸೋತಿರುವುದು ಮಾತ್ರವಲ್ಲ. ಸಮುದಾಯದಲ್ಲಿ ಅವರಿಗೀಗ ಕವಡೆ ಕಾಸಿನ ಕಿಮ್ಮತ್ತಿಲ್ಲ. ರೆಡ್ಡಿ ಈಗಲೂ ಬಳ್ಳಾರಿ ಮತ್ತು ಸುತ್ತಮುತ್ತ ಪ್ರಭಾವ ಹೊಂದಿದ್ದಾರೆ. ಅದಕ್ಕಿಂತಲೂ ಮಿಗಿಲಾಗಿ ಸಂಪನ್ಮೂಲದ ದೃಷ್ಟಿಯಲ್ಲಿ ರೆಡ್ಡಿ ಜೊತೆಗಿರುವುದೇ ಸರಿ ಎಂದು ವಿಜಯೇಂದ್ರ ನಿರ್ಧರಿಸಿದ್ದಾರಂತೆ. ಅದಕ್ಕಾಗಿಯೇ ವಿಜಯೇಂದ್ರ ಕೋರ್ ಕಮಿಟಿ ಸಭೆಯಲ್ಲಿ ರಾಮುಲು ಸಮರ್ಥನೆಗೆ ಬರಲಿಲ್ಲ ಎನ್ನುವ ಮಾತಿದೆ. ಇದರಿಂದ ರಾಮುಲು ಕೂಡ ಮುಂದೆ ವಿಜಯೇಂದ್ರ ವಿರೋಧಿ ಬಣ ಸೇರುವ ಸಾಧ್ಯತೆ ಇದೆಯಂತೆ.

ಒಡೆಯಲು ಹೋಗಿದ್ದ ಬಿಜೆಪಿ ನಾಯಕರು

ಧರ್ಮೇಂದ್ರ ಪ್ರಧಾನ್, ಪ್ರಕಾಶ್ ಜಾವಡೇಕರ್ ಅವರಂಥವರು ಬಿಜೆಪಿ ಉಸ್ತುವಾರಿಯಾಗಿದ್ದಾಗ ರಾಜ್ಯ ನಾಯಕರು ಕಮಕ್ ಗಿಮಕ್ ಎನ್ನುತ್ತಿರಲಿಲ್ಲ. ಅರುಣ್ ಜೈಟ್ಲಿ, ರಾಜನಾಥ್ ಸಿಂಗ್ ಅವರಂಥವರು ಯಡಿಯೂರಪ್ಪ-ಅನಂತಕುಮಾರ್ ಅವರಂಥವರನ್ನು ನಿಭಾಯಿಸುವಾಗಲೂ ನಿತ್ರಾಣರಾಗುತ್ತಿರಲಿಲ್ಲ. ಆದರೆ ಹಿಂದಿದ್ದ ಅರುಣ್ ಸಿಂಗ್ ಈಗಿರುವ ರಾಧಾಮೋಹನ್ ದಾಸ್ ಅಗರವಾಲ್ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಗೌರವ ಕೊಡುವುದು ಬೇರೆ ಮಾತು. ರಾಜ್ಯ ಬಿಜೆಪಿಯ ಎಲ್ಲಾ ಸಮಸ್ಯೆಗಳನ್ನು ಒಂದೇ ಏಟಿಗೆ ಬಗೆಹರಿಸಿಬಿಡುತ್ತೇನೆ ಎಂದು ಬೆಂಗಳೂರಿಗೆ ಬಂದಿದ್ದ ರಾಧಾಮೋಹನ್ ದಾಸ್ ಅಗರವಾಲ್ ಅವರಿಗೆ ವಿಜಯೇಂದ್ರ ಬಣದ ನಾಯಕರು ಹೊಡೆಯಲು ಹೋಗಿದ್ದರಂತೆ.

ಸ್ವಲ್ಪ ಯಾಮಾರಿದ್ದರೆ ಕೋರ್ ಕಮಿಟಿ ಸಭೆಯಲ್ಲಿ ರಾಮುಲು ಹೊಡೆಯುತ್ತಿದ್ದರು. ಹೊರಗೆ ಇನ್ನೊಂದೇ ಒಂದು ಹೆಚ್ಚು ಮಾತನಾಡಿದ್ದರೆ ವಿಜಯೇಂದ್ರ ಬಣದವರು ಹಲ್ಲೆ ಮಾಡುತ್ತಿದ್ದರು. ಇಂಥ ಪರಿಸ್ಥಿತಿ ಯಾವ ಉಸ್ತುವಾರಿಗೂ ಬೇಡ ಎಂದು ಏದುಸಿರು ಬಿಡುತ್ತಾ ಅಗರವಾಲ್ ದಿಲ್ಲಿ ವಿಮಾನ ಹತ್ತಿದರಂತೆ!

ಶಾಸಕರನ್ನು ಮಾತ್ರ ಕರೆದು ಸಭೆ ಮಾಡಿದರೆ ನಿಜವಾದ ಚಿತ್ರಣ ಸಿಗುವುದಿಲ್ಲ. ಬಹುತೇಕ ಶಾಸಕರು ಬಾಯಿ ಬಿಡುವುದಿಲ್ಲ. ಮಾಜಿ ಶಾಸಕರಾದ ನಮ್ಮ ಅಭಿಪ್ರಾಯಗಳನ್ನು ಸ್ವೀಕರಿಸಿ, ನಮ್ಮನ್ನೂ ಪರಿಗಣಿಸಿ ಎಂದು ವಿಜಯೇಂದ್ರ ಬಣದ ಮಾಜಿ ಶಾಸಕರು ಕೇಳಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅಗರವಾಲ್ ಸೋತಿರುವ ನಿಮ್ಮಿಂದ ಅಭಿಪ್ರಾಯ ಕೇಳುವ ಅಗತ್ಯ ಇಲ್ಲ ಎಂದಿದ್ದಾರೆ. ಅಗರವಾಲ್ ಹಾಗೆ ಹೇಳುತ್ತಿದ್ದಂತೆ ಪಿತ್ತ ನೆತ್ತಿಗೇರಿದ ವಿಜಯೇಂದ್ರ ಬಣದ ಮಾಜಿಗಳು ತೋಳೇರಿಸಿಕೊಂಡು ಹೊಡೆಯಲು ಹೋಗಿದ್ದಾರೆ.

ಇದಲ್ಲದೆ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ರಮೇಶ್ ಜಾರಕಿಹೊಳಿ ವಿರುದ್ಧ ಎಷ್ಟೇ ದೂರು ಕೊಟ್ಟರೂ ಕ್ರಮ ಕೈಗೊಳ್ಳುತ್ತಿಲ್ಲ. ಕಡೆಪಕ್ಷ ಒಂದು ನೋಟಿಸ್ ಕೊಡುತ್ತಿಲ್ಲ. ಬಿ.ಎಲ್. ಸಂತೋಷ್ ಆಣತಿಯಂತೆ ಕೆಲಸ ಮಾಡುತ್ತಿದ್ದಾರೆ ಎನ್ನುವ ಆಕ್ರೋಶ ಇತ್ತು. ಅದು ಈಗ ಸಿಟ್ಟಾಗಿ ವ್ಯಕ್ತವಾಗಿದೆ ಎನ್ನುತ್ತಾರೆ ಅವರ ಬಗಲಲ್ಲೇ ಇದ್ದ ಬಿಜೆಪಿ ನಾಯಕರು.

ಯತ್ನಾಳ್ ಮೇಲೆ ಕ್ರಮ ಕೈಗೊಳ್ಳಬೇಡಿ

ವಿಜಯೇಂದ್ರ ಮೇಲೆ ಮುಗಿಬಿದ್ದಿರುವ ಯತ್ನಾಳ್ ಮತ್ತು ಜಾರಕಿಹೊಳಿ ವಿರುದ್ಧ ಕ್ರಮ ಕೈಗೊಳ್ಳಬೇಡಿ. ಹಾಗೇನಾದರೂ ಕ್ರಮ ಕೈಗೊಂಡರೆ ವಿಜಯೇಂದ್ರ ಇನ್ನಷ್ಟು ಪ್ರಬಲರಾಗುತ್ತಾರೆ. ಈಗಲೇ ಅವರು ಯಾರ ಮಾತನ್ನು ಕೇಳುತ್ತಿಲ್ಲ. ಅವರ ವಿರೋಧಿಗಳ ಸದ್ದಡಗಿಸಿದರೆ ಬೇರೆ ಯಾರನ್ನೂ ಲೆಕ್ಕಕ್ಕೇ ತೆಗೆದುಕೊಳ್ಳುವುದಿಲ್ಲ. ಪಕ್ಷ ಮತ್ತು ಸಂಘಟನೆ ದೃಷ್ಟಿಯಿಂದ ಇಂಥ ಸರ್ವಾಧಿಕಾರಿ ಧೋರಣೆ ಸರಿಯಲ್ಲ ಎಂದು ಬಿಜೆಪಿ ಉಸ್ತುವಾರಿ ರಾಧಾಮೋಹನ್ ದಾಸ್ ಅಗರವಾಲ್ ಮೇಲೆ ಬಲವಾದ ಒತ್ತಡ ಹೇರುತ್ತಿದ್ದಾರಂತೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಧರಣೀಶ್ ಬೂಕನಕೆರೆ

contributor

Similar News