ಒಲ್ಲೆ ಒಲ್ಲೆ ಎನ್ನುತ್ತಾ ಒಲೆ ಗಾತ್ರ ಉಣ್ಣುವ ಬೊಮ್ಮಾಯಿ!

ರಾಜ್ಯ ಬಿಜೆಪಿ ನಾಯಕರು 2028ಕ್ಕೆ ನಮ್ಮ ಸರಕಾರ ಬರುವುದು ಗ್ಯಾರಂಟಿ ಅಂತಾ ಅಂದುಕೊಂಡಿದ್ದಾರೆ. ಹಾಗಾಗಿ ರಾಜ್ಯಾಧ್ಯಕ್ಷ ಹುದ್ದೆ ಆಕಾಂಕ್ಷಿಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದಾರೆ. ಈ ಪೈಕಿ ಕೆಲವರದು ‘ಒಂದು ಕೈ ನೋಡೋಣ’ ಎನ್ನುವ ಪ್ರಯತ್ನ. ಇನ್ನು ಕೆಲವರದು ಶತಾಯಗತಾಯ ಪಡೆದೇ ತೀರಬೇಕೆನ್ನುವ ಪ್ರತಿಜ್ಞೆ. ಈ ಕಿತ್ತಾಟದಲ್ಲಿ ಬಿಜೆಪಿಯ ಮಾನ ವಿಧಾನಸೌಧದ ಕೂಗಳತೆ ದೂರದಲ್ಲಿರುವ ಚಾಲುಕ್ಯ ವೃತ್ತದಲ್ಲಿ ಮೂರು ಕಾಸಿಗೆ ಹರಾಜಾಗುತ್ತಿದೆ.
ದಿಲ್ಲಿ ಬೆಳವಣಿಗೆಗಳಿಂದಾಗಿ ಭಿನ್ನಮತೀಯರಿಗೆ ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಪಟ್ಟ ತಪ್ಪಿಸುವುದು ಕಷ್ಟವಾಗುತ್ತಿದೆ. ಕೆಲವೊಮ್ಮೆ ರಾಜಕಾರಣಿಗಳು ‘ಇದೆ’ ಎಂದರೆ ‘ಇಲ್ಲ’ ಎಂದು ಅರ್ಥ ಮಾಡಿಕೊಳ್ಳಬೇಕು. ಭಿನ್ನರು ಪದೇ ಪದೇ ‘ದಿಲ್ಲಿ ಭೇಟಿ ಫಲಪ್ರದ’ ಎನ್ನುತ್ತಿರುವುದನ್ನು ಕೂಡ ಹೀಗೆಯೇ ಗ್ರಹಿಸಬೇಕು. ಬಿ.ಎಲ್. ಸಂತೋಷ್ ಮುತುವರ್ಜಿಯ ನಡುವೆಯೂ ದಿಲ್ಲಿಯಲ್ಲೇ ಇದ್ದರೂ ಅಮಿತ್ ಶಾ ಮತ್ತು ಜೆ.ಪಿ. ನಡ್ಡಾ ಭಿನ್ನರಿಗೆ ತಮ್ಮ ಮನೆಯ ಕದ ತೆರೆಯಲಿಲ್ಲ ಎನ್ನುವುದು ಪೂರಕ ಸಂಗತಿಯಷ್ಟೇ. ಇದರಿಂದಾಗಿ ಘೋಷಿತ ಭಿನ್ನಮತೀಯ ಬಣದ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಹಿಂದೆ ಸರಿದಿದ್ದಾರೆ. ಯತ್ನಾಳ್ ಹಿಂದೆಸರಿಯುತ್ತಿದ್ದಂತೆ ಇಷ್ಟು ದಿನ ತಟಸ್ಥ ಬಣದ ಹೆಸರಿನಲ್ಲಿ ತೆರೆಯ ಹಿಂದೆ ನಿಂತು ತಮಾಷೆ ನೋಡುತ್ತಿದ್ದ ಬಸವರಾಜ ಬೊಮ್ಮಾಯಿ ಮಂದಹಾಸದೊಂದಿಗೆ ಮುಂದೆ ಬಂದಿದ್ದಾರೆ.
ತಲೆಕೆಳಗಾದ ಬೊಮ್ಮಾಯಿ ಲೆಕ್ಕಾಚಾರ
ಸದ್ಯ ಬಸವರಾಜ ಬೊಮ್ಮಾಯಿ ಎರಡು ಯೋಜನೆಗಳನ್ನು ಕೈಗೆತ್ತಿಕೊಂಡಿದ್ದಾರೆ. ಒಂದು ವಿಜಯೇಂದ್ರ ವಿರುದ್ಧ ಬಂಡೆದ್ದಿರುವ ಲಿಂಗಾಯತ ನಾಯಕರನ್ನು ಒಗ್ಗೂಡಿಸುವುದು. ಇನ್ನೊಂದು ವಿಜಯೇಂದ್ರ ವಿರುದ್ಧ ಸೆಟೆದು ನಿಂತಿರುವ ಇತರ ವರ್ಗದ ಮುಖಂಡರ ಮನಗೆಲ್ಲುವುದು. ಎರಡೂ ಕೈಂಕರ್ಯಗಳಿಗೂ ಬಿ.ಎಲ್. ಸಂತೋಷ್ ಸಲಹೆ-ಸೂಚನೆ- ಮಾರ್ಗ ದರ್ಶನಗಳು ಇವೆಯಂತೆ. ಪ್ರಹ್ಲಾದ್ ಜೋಶಿ ಮೀನಾಮೇಷ ಎಣಿಸುತ್ತಿದ್ದಾರಂತೆ.
ಮೊದಲನೆಯದಾಗಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ಹೆಸರನ್ನು ಪರಿಗಣಿಸುವುದೇ ಲಿಂಗಾಯತ ಎಂಬ ಕಾರಣಕ್ಕೆ. ಈ ಹಿನ್ನೆಲೆಯಲ್ಲಿ ‘ಲಿಂಗಾಯತ ನಾಯಕರ ಬೆಂಬಲ ವಿಜಯೇಂದ್ರಗೆ ಇಲ್ಲ’ ಎಂದು ಬಿಂಬಿಸಬೇಕು. ಅದಕ್ಕಾಗಿ ಸೋಮಣ್ಣ, ಯತ್ನಾಳ್, ಜಿ.ಎಂ. ಸಿದ್ದೇಶ್ವರ, ಅಣ್ಣಾ ಸಾಹೇಬ್ ಜೊಲ್ಲೆ, ಬಿ.ಪಿ. ಹರೀಶ್ ಸೇರಿದಂತೆ ಎರಡಂಕಿ ನಾಯಕರು ‘ವಿಜಯೇಂದ್ರಗೆ ನಮ್ಮ ಬೆಂಬಲ ಇಲ್ಲ’ ಎಂಬ ನಿರ್ಣಯ ಕೈಗೊಂಡರೆ ಹೈಕಮಾಂಡ್ ಮಣಿಯುತ್ತದೆ ಎನ್ನುವುದು ಆಲೋಚನೆ. ಆದರೆ ಸದ್ಯದ ಮಾಹಿತಿ ಪ್ರಕಾರ ಬೊಮ್ಮಾಯಿ ತಂಡದ ಸದಸ್ಯರ ಸಂಖ್ಯೆ ಎರಡಂಕಿ ದಾಟುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ.
ಎರಡನೆಯದಾಗಿ ಪರಿಶಿಷ್ಟ ಜಾತಿಯ ಗೋವಿಂದ ಕಾರಜೋಳ, ಅರವಿಂದ ಲಿಂಬಾವಳಿ, ಪರಿಶಿಷ್ಟ ಪಂಗಡದ ಶ್ರೀರಾಮುಲು, ರಮೇಶ್ ಜಾರಕಿಹೊಳಿ, ಹಿಂದುಳಿದ ವರ್ಗದ ಕುಮಾರ್ ಬಂಗಾರಪ್ಪ, ಒಕ್ಕಲಿಗ ನಾಯಕರಾದ ಆರ್. ಅಶೋಕ್, ಸಿ.ಟಿ. ರವಿ, ಶೋಭಾ ಕರಂದ್ಲಾಜೆ,
ಡಾ. ಕೆ. ಸುಧಾಕರ್ ಮತ್ತಿತರರನ್ನು ಕಲೆಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಆರಂಭದಲ್ಲೇ ಅಪಶಕುನ ಎದುರಾಗಿದೆ. ಬಿ.ಎಲ್. ಸಂತೋಷ್ ತಾಳಕ್ಕೆ ತಕ್ಕಂತೆ ಕುಣಿಯಲಾರೆ ಅಂತಾ ಅರವಿಂದ
ಲಿಂಬಾವಳಿ ಕೈ ಎತ್ತಿಬಿಟ್ಟಿದ್ದಾರೆ. ಶ್ರೀರಾಮುಲು ‘ನಾನೇ
ಅಧ್ಯಕ್ಷನಾಗುತ್ತೇನೆ’ ಎಂಬ ಶಾಕ್ ಟ್ರೀಟ್ಮೆಂಟ್ ಕೊಟ್ಟಿದ್ದಾರೆ.
ಸಿ.ಟಿ. ರವಿ ಮತ್ತು ಶೋಭಾ ಕರಂದ್ಲಾಜೆ ಕಾದುನೋಡುವ ತಂತ್ರ ಅನುಸರಿಸುತ್ತಿದ್ದಾರೆ. ಆರ್. ಅಶೋಕ್ ಎದುರು ಬಹಳ ಗಂಭೀರವಾಗಿ ವಿಷಯ ಪ್ರಸ್ತಾವಿಸಿದರೆ ಅವರು ಕೂಲ್ ಆಗಿ ‘ನಾನು ಕೂಡ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ’ ಎಂದು
ಜೋಕ್ ಕಟ್ ಮಾಡಿದ್ದಾರೆ. ಅಲ್ಲಿಗೆ ಬೊಮ್ಮಾಯಿ ಯೋಜನೆಗಳು ಒಂದೊಂದಾಗಿ ಬಾವಿಗೆ ನೆಗೆದುಬಿದ್ದಿವೆ ಎಂದು ಬಿದ್ದು ಬಿದ್ದು ನಕ್ಕರು ಬಿಜೆಪಿ ನಾಯಕರೊಬ್ಬರು.
ಒಲ್ಲೆ ಒಲ್ಲೆ ಎನ್ನುತ್ತಾ ಒಲೆ ಗಾತ್ರ ಉಣ್ಣುವ ಬೊಮ್ಮಾಯಿ!
ಬಸವರಾಜ ಬೊಮ್ಮಾಯಿ ಅವರ ಹತ್ತಿರ ನೀವು ಯಾವುದೇ ಹುದ್ದೆಯ ಬಗ್ಗೆ ಕೇಳಿ. ಅವರು ‘ನನಗೆ ಆಸಕ್ತಿ ಇಲ್ಲ, ನಾನು ಪ್ರಯತ್ನ ಪಡುತ್ತಿಲ್ಲ’ ಎನ್ನುತ್ತಾರೆ. ತಕ್ಷಣವೇ ಮೇಲೆ ಹೇಳಿದಂತೆ ಅವರಿಗೆ ಆಸಕ್ತಿ ಇದೆ, ತೀವ್ರವಾಗಿ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅರ್ಥ ಮಾಡಿಕೊಳ್ಳಬೇಕು. ಉದಾಹರಣೆಗೆ ಮುಖ್ಯಮಂತ್ರಿ ಆಗುವಾಗ ಹೀಗೆ ಹೇಳುತ್ತಲೇ ಡಾಲರ್ಸ್ ಕಾಲನಿಯ ದವಳಗಿರಿಗೆ ಹೋಗಿ ‘ಒಂದು ಅವಕಾಶ ಮಾಡಿಕೊಡಿ ಸಾರ್’ ಎಂದು ಕೇಳಿಕೊಂಡಿದ್ದರು. ಜೊತೆಜೊತೆಯಲ್ಲಿ ದಿಲ್ಲಿ ನಾಯಕರ ಮುಂದೆಯೂ ಮಂಡಿಯೂರಿದ್ದರು.
ಮುಖ್ಯಮಂತ್ರಿಯಾಗಿ, ಅವರದೇ ನೇತೃತ್ವದಲ್ಲಿ ಚುನಾವಣೆಗೆ ಹೋಗಿ ಹೀನಾಯ ಸೋಲು ಕಂಡ ಮೇಲೆ ಮತ್ತೊಂದು ಸಂದರ್ಭ ಬಂತು. ವಿಪಕ್ಷ ನಾಯಕನ ಆಯ್ಕೆಯ ಸಮಯ. ಆಗಲೂ ಒಲ್ಲೆ ಒಲ್ಲೆ ಎನ್ನುತ್ತಿದ್ದರು. ಒಳಗೊಳಗೆ ಪ್ರಯತ್ನ ಮಾಡುತ್ತಲೇ ಇದ್ದರು. ಅದಾದ ಮೇಲೆ ಅವರಿಗೆ ಕೇಂದ್ರ ಮಂತ್ರಿಯಾಗುವ ಕನಸು ಬಿತ್ತು. ನಾನು ದಿಲ್ಲಿಗೆ ಶಿಫ್ಟ್ ಆಗಿಬಿಟ್ಟರೆ ಕೇಂದ್ರ ಮಂತ್ರಿಯೂ ಆಗಬಹುದು, ಪುತ್ರನ ರಾಜಕೀಯ ಪ್ರವೇಶವೂ ಸಲೀಸಾಗಿಬಿಡುತ್ತದೆ ಎಂಬ ಲೆಕ್ಕಾಚಾರ ಮಾಡಿದರು. ಎಂದಿನಂತೆ ‘ನಾನು ಟಿಕೆಟ್ ಕೇಳುತ್ತಿಲ್ಲ, ಪಕ್ಷದ ತೀರ್ಮಾನಕ್ಕೆ ಬದ್ಧ’ ಎನ್ನುವ ಹಳೆಯ ಕ್ಯಾಸೆಟ್ ಅನ್ನೇ ಮತ್ತೊಮ್ಮೆ ಪ್ಲೇ ಮಾಡಿ ಕಡೆಗೆ ಟಿಕೆಟ್ ತಂದೇಬಿಟ್ಟರು. ಬೊಮ್ಮಾಯಿ ತಂತ್ರ ಟಿಕೆಟ್ ತರುವ ವಿಚಾರದಲ್ಲಿ ಫಲಿಸಿತು, ಆದರೆ ಬೊಮ್ಮಾಯಿ ಬಹಳ ಶಾಣ್ಯತನ ಮಾಡಿದ್ದರಿಂದ ಮಗನ ರಾಜಕೀಯ ಭವಿಷ್ಯ ಹಳಸಿತು.
ಈಗ ಬಸವರಾಜ ಬೊಮ್ಮಾಯಿ ರಾಜ್ಯ ಬಿಜೆಪಿಯ ನೊಗ ಎಳೆಯುವ ಬಲಭೀಮನಾಗಬಲ್ಲೆ ಎಂದು ಎದ್ದುಕುಳಿತಿದ್ದಾರೆ. ಮೈಸೂರು ದಸರಾ ಅಂಬಾರಿಯನ್ನು ಹೊರುವ ಆನೆಯು ಯಾವ ಕಾರಣಕ್ಕೂ ವಿಚಲಿತವಾಗ ಬಾರದು ಎಂದು ಅಕ್ಕಪಕ್ಕ ಎರಡು ಕುಮ್ಕಿ ಆನೆಗಳು ಇರುವಂತಹ ವ್ಯವಸ್ಥೆ ಮಾಡಲಾಗಿರುತ್ತದೆ. ಇದೇ ರೀತಿ ಬೊಮ್ಮಾಯಿ ಅಕ್ಕ ಪಕ್ಕ ಸದ್ಯ ಆರ್. ಅಶೋಕ್ ಮತ್ತು ಸುಧಾಕರ್ ಮಾತ್ರ ಕುಮ್ಕಿ ಆನೆಗಳಂತೆ ಇದ್ದಾರೆ. ಉಳಿದವರು ಯಾವತ್ತಿಗೆ, ಯಾರ ಬಣ ಸೇರುವರು ಎನ್ನುವುದು ಯಾರಿಗೂ ಗೊತ್ತಿಲ್ಲ. ಏಕೆಂದರೆ ಬಿಜೆಪಿಯಲ್ಲಿ ಈಗ ಎಲ್ಲವೂ ಅಯೋಮಯ.
ನಿರಾಣಿ ಡಾರ್ಕ್ ಹಾರ್ಸ್!
ಈ ಎಲ್ಲದರ ನಡುವೆ ಮಾಜಿ ಸಚಿವ ಮುರುಗೇಶ್ ನಿರಾಣಿ ಡಾರ್ಕ್ ಹಾರ್ಸ್ ಆಗಬಹುದೆಂಬ ಗುಸುಗುಸು ಕೇಳಿಬರುತ್ತಿದೆ. ಬಸವರಾಜ ಬೊಮ್ಮಾಯಿ ವಿಷಯದಲ್ಲಿ ಪ್ರಹ್ಲಾದ್ ಜೋಶಿ ಅಂತರ ಕಾಯ್ದುಕೊಳ್ಳುತ್ತಿರುವುದನ್ನು ನೋಡಿದರೆ ಅವರು ನಿರಾಣಿ ಜೊತೆ ನಿಂತಿರಬಹುದೆಂಬ ಗುಮಾನಿ ಇದೆ. ರಾಜಕೀಯದಲ್ಲಿ ನೆಟ್ ವರ್ಕ್ ಮತ್ತು ನೆಟ್ ವರ್ತ್ ಎರಡೂ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ. ನಿರಾಣಿ ಬಳಿ ಇವೆರಡೂ ಇವೆ. ಜೊತೆಗೆ ಜಾತಿ ಇದೆ. ಅದರಲ್ಲೂ ಲಿಂಗಾಯತ ಪಂಗಡಗಳಲ್ಲೇ ಪ್ರಭಾವಶಾಲಿಯಾಗಿರುವ ಪಂಚಮಸಾಲಿ ಅವರು. ಮೂರು ಸಲ ಮಂತ್ರಿ, ಹಲವು ಸಕ್ಕರೆ ಕಾರ್ಖಾನೆಗಳ ಒಡೆಯನಾಗಿರುವ ಮುರುಗೇಶ್ ನಿರಾಣಿ ಸದ್ದಿಲ್ಲದೆ ಅಮಿತ್ ಶಾ, ದೇವೇಂದ್ರ ಫಡ್ನವೀಸ್ ಮತ್ತು ಸಂಘದ ನಾಯಕರನ್ನು ಭೇಟಿಮಾಡಿದ್ದಾರೆ ಎನ್ನುತ್ತವೆ ದಿಲ್ಲಿ ಮೂಲಗಳು. ಯಾರಿಗೆ ಗೊತ್ತು, ಯಾವ ಹುತ್ತದಲ್ಲಿ ಯಾವ ಹಾವು ಇರುತ್ತದೆ, ಮತ್ತದು ಯಾರಿಗೆ ಕಡಿಯುತ್ತದೆ ಎಂದು?
ಈ ಕುತೂಹಲಕ್ಕಾಗಿ ಕ್ಷಮಿಸಿ?
ಈ ರಾಜಕಾರಣಿಗಳು, ಅಧಿಕಾರಿಗಳು, ಪವರ್ ಬ್ರೋಕರ್‌ಗಳು ಸಿಎಂ ಸಿದ್ದರಾಮಯ್ಯ ಅವರ ಕಾಲು ನೋವಾದರೆ ಬಸವರಾಜ ಬೊಮ್ಮಾಯಿ ಅವರ ಕುಂಟು ನಡಿಗೆಯ ಬಗ್ಗೆ ಚರ್ಚೆ ಮಾಡುವುದು ಏಕೆ?