ಜಾರಕಿ‘ಹೋಳಿಗೆ’ ಊಟದ ಸಂದೇಶವೇನು?

ರಾಜ್ಯ ಕಾಂಗ್ರೆಸ್‌ನಲ್ಲಿ ಸದ್ಯಕ್ಕೆ ಯದ್ವಾತದ್ವಾ ಸಕ್ರಿಯವಾಗಿರುವುದು ಡಿ.ಕೆ. ಶಿವಕುಮಾರ್. ಉದ್ಯಮ, ಕೆಪಿಸಿಸಿ ಮತ್ತು ಎರಡೆರಡು ಇಲಾಖೆಗಳ ಕಾರ್ಯಭಾರದ ಒತ್ತಡಗಳು ಆಗಾಗ ಅವರನ್ನು ಅಲುಗಾಡಿಸುತ್ತವೆ. ನಲುಗಾಡಿಸುತ್ತವೆ. ನಂತರ ಸಿದ್ದರಾಮಯ್ಯ. ಅವರು ಅದೃಷ್ಟದ ರಾಜಕಾರಣಿ. ಅವರ ಪರವಾಗಿ ಅನೇಕರು ತಂತ್ರ-ಪ್ರತಿತಂತ್ರ ಮಾಡುತ್ತಿದ್ದಾರೆ. ಈ ನಡುವೆ ಆಡಳಿತದ ಉಸಾಬಾರಿಯನ್ನೂ ಬೇರೆಯವರು ನಿಭಾಯಿಸುತ್ತಿದ್ದಾರೆ. ಹೆಚ್ಚು ಸಕ್ರಿಯರಾಗಿರುವವರ ಪೈಕಿ ಮೂರನೆಯವರು ಸತೀಶ್ ಜಾರಕಿಹೊಳಿ.
ಸತೀಶ್ ಜಾರಕಿಹೊಳಿ, ಸಿದ್ದರಾಮಯ್ಯ ಅವರಿಗಿಂತಲೂ ಹೆಚ್ಚು ನಿಗೂಢ, ಡಿಕೆಶಿಗಿಂತಲೂ ಹೆಚ್ಚು ತಂತ್ರಗಾರಿಕಾ ನಿಪುಣ. ಸಿದ್ದರಾಮಯ್ಯಗಿರುವ ಜನಪ್ರಿಯತೆ, ಡಿಕೆಶಿಗಿರುವ ಧೈರ್ಯ- ಭಂಡಧೈರ್ಯಗಳು ಇಲ್ಲದಿದ್ದರೂ ದಾರಿ ಮತ್ತು ಗುರಿ ಬಗ್ಗೆ ಸತೀಶ್ ಸ್ಪಷ್ಟವಾಗಿದ್ದಾರೆ. ಇದಕ್ಕೆ ದೇವೇಗೌಡರ ಭೇಟಿ ಮತ್ತು ಕುಮಾರಸ್ವಾಮಿ ಜೊತೆಗಿನ ಡಿನ್ನರ್ ಮೀಟಿಂಗ್ ಬಗ್ಗೆ ಸತೀಶ್ ಜಾರಕಿಹೊಳಿ ನೀಡಿದ ಉತ್ತರವೇ ಉತ್ತಮ ನಿದರ್ಶನ. ‘‘ನಾನು ರಿಸರ್ವೇಶನ್ ಅಗೈನೆಸ್ಟ್ ಕ್ಯಾನ್ಸಲೇಷನ್ (ಆರ್‌ಎಸಿ) ಟಿಕೆಟ್‌ನಲ್ಲಿದ್ದೇನೆ. ನಾನು ಕಾಂಗ್ರೆಸ್‌ನಲ್ಲೇ ಸಿಎಂ ಆಗಬೇಕು’’ ಎಂದಿದ್ದಾರೆ. ಇದಲ್ಲದೆ ಆಗಾಗ ‘‘ನನ್ನ ಗುರಿ 2028’’ ಎಂದೂ ಹೇಳುತ್ತಿರುತ್ತಾರೆ.
ದಾರಿ ಬಗ್ಗೆ ಹೇಳುವುದಾದರೆ, ಸತೀಶ್ ಜಾರಕಿಹೊಳಿ ಅವಸರದಲ್ಲಿದ್ದಾರೆ. ಕರ್ನಾಟಕದ ಏಕನಾಥ್ ಶಿಂದೆ ಆಗುತ್ತಾರೆ. ಬಿಜೆಪಿ-ಜೆಡಿಎಸ್ ಮೈತ್ರಿ ಜೊತೆ ಕೈಜೋಡಿಸಿ ಹೊಸ ಸರಕಾರ ರಚಿಸಲು ಮುನ್ನುಡಿ ಬರೆಯುತ್ತಿದ್ದಾರೆ ಎಂಬಿತ್ಯಾದಿ ಚರ್ಚೆಗಳು ನಡೆಯುತ್ತಿವೆ. ಆದರೆ ಸದ್ಯದ ರಾಜ್ಯ ರಾಜಕೀಯ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಕಣ್ಸನ್ನೆ ಇಲ್ಲದೆ ತೃಣಮಾತ್ರದ ಬದಲಾವಣೆಯೂ ಆಗದು. ಇದು ಸತೀಶ್ ಜಾರಕಿಹೊಳಿಗೆ ಚೆನ್ನಾಗಿ ಗೊತ್ತಿದೆ. ಏಕೆಂದರೆ ಈಗ ಸಿಎಂ ಸ್ಥಾನವನ್ನು ಎದುರು ನೋಡುತ್ತಿರುವ ಬೇರೆಲ್ಲರಿಗಿಂತ ಅತಿ ಹೆಚ್ಚು ಸಮಯ ಮತ್ತು ಅತಿ ಹೆಚ್ಚು ಹತ್ತಿರದಿಂದ ಸಿದ್ದರಾಮಯ್ಯ ಅವರನ್ನು ಬಲ್ಲವರು ಸತೀಶ್.
ಸಿದ್ದರಾಮಯ್ಯ ಅವರೇ ಹೇಳಿ ಕಳುಹಿಸಿದ್ದರೆ, ಅದು ಬೇರೆ ಮಾತು. ಆದರೆ ಸಿದ್ದರಾಮಯ್ಯ ಅವರಿಗೆ ಅಂಥ ಅನಿವಾರ್ಯವಿಲ್ಲ. ಹಾಗಾಗಿ ಸತೀಶ್ ಜಾರಕಿಹೊಳಿ ದಿಲ್ಲಿಯಲ್ಲಿ ಮಾಡಿದ ದೇವೇಗೌಡ ಮತ್ತು ಕುಮಾರಸ್ವಾಮಿ ಭೇಟಿಯನ್ನು ಸಂಚಲನ ಸ್ವರೂಪಿ ಎನ್ನಲಾಗದು. ಇದರ ಹೊರತಾಗಿ ಸಿದ್ದರಾಮಯ್ಯ ಮನಸ್ಸು ಮಾಡಿದರೂ 138 ಶಾಸಕರ ಬಲದ ಸರಕಾರವನ್ನು ಕೆಡುವುದು ಕಷ್ಟ. 3ನೇ 2ರಷ್ಟು ಶಾಸಕರನ್ನು ಸೆಳೆಯುವುದು ಇನ್ನೂ ಕಷ್ಟ. ಅವರೆಲ್ಲಾ ಸತೀಶ್ ಜಾರಕಿಹೊಳಿ ಪರ ಕೈ ಎತ್ತುತ್ತಾರೆ ಎನ್ನುವುದಂತೂ ಊಹೆಗೂ ನಿಲುಕದ ತರ್ಕ. ಮೇಲಾಗಿ 3ನೇ 2ರಷ್ಟು ಶಾಸಕರು ಬಂಡೇಳುವ ಪರಿಸ್ಥಿತಿ ಬಂದರೆ ಬಿಜೆಪಿ ನಾಯಕರು ನಡುರಾತ್ರಿ ಕದ್ದು ಮುಚ್ಚಿ ಹೋಗಿ ಪ್ರಮಾಣವಚನ ಸ್ವೀಕರಿಸಲು ಸಿದ್ಧರಾಗುತ್ತಾರೆಯೇ ವಿನಃ ಸತೀಶ್ ಜಾರಕಿಹೊಳಿ ಅವರನ್ನು ಸಿಎಂ ಮಾಡುವುದಿಲ್ಲ. ಮೇಲಾಗಿ ವೈಚಾರಿಕ ಚಿಂತನೆಯ ಸತೀಶ್ ಜಾರಕಿಹೊಳಿ ಬಿಜೆಪಿಗೆ ಅಪಥ್ಯ. ಜೆಡಿಎಸ್ ನಾಯಕರ ವಿಚಾರ ಬಿಡಿ ಉರಿಯುವ ಮನೆಯಲ್ಲಿ ಬೆಂಕಿ ಕಾಯಿಸಿಕೊಂಡು ಬೆಚ್ಚಗಿರಲು ಬಯಸುತ್ತಾರೆ. ಇವೆಲ್ಲದರ ಅರಿವು ಸತೀಶ್ ಜಾರಕಿಹೊಳಿಗೆ ಇಲ್ಲ ಎಂದರೆ ಒಪ್ಪಲಾಗದು.
ನಿಧಾನವಾಗಿ ಸಿಎಂ ಸ್ಥಾನಕ್ಕೆ ಜಿ. ಪರಮೇಶ್ವರ್ ಬದಲು ಸತೀಶ್ ಜಾರಕಿಹೊಳಿ ಹೆಸರು ಮುಂಚೂಣಿಗೆ ಬರುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ‘ಹರ್ಷದ ಕೂಳಿಗಾಗಿ ವರ್ಷದ ಕೂಳು’ ಕಳೆದುಕೊಳ್ಳುವವರಲ್ಲ ಸತೀಶ್ ಜಾರಕಿಹೊಳಿ. ಏಕೆಂದರೆ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಈಗ ಕಾಂಗ್ರೆಸ್ ಸಂಸದೆ. ಪುತ್ರ ರಾಹುಲ್ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ. ಇಬ್ಬರೂ ಬೆಳೆಯುವ ಕುಡಿಗಳು. ಸಹೋದರರಾದ ರಮೇಶ್ ಜಾರಕಿಹೊಳಿ ಬಿಜೆಪಿಯ ಬಂಡಾಯ ನಾಯಕ. ಬಾಲಚಂದ್ರ ಜಾರಕಿಹೊಳಿ ಸೈಲೆಂಟ್ ಆಪರೇಟರ್. ಒಟ್ಟಿನಲ್ಲಿ ಸತೀಶ್ ಜಾರಕಿಹೊಳಿಯೂ ಸೇರಿದಂತೆ ಅವರ ಕುಟುಂಬದವರಿಗೆ ರಾಜಕಾರಣಕ್ಕಿಂತ ಕುಟುಂಬ ಮುಖ್ಯ. ರಾಜಕಾರಣದ ಮೇಲೆ ತಮ್ಮ ಕುಟುಂಬ ಸದಾ ಬಿಗಿ ಹಿಡಿತ ಸಾಧಿಸುವುದು ಮುಖ್ಯ. ದೀರ್ಘಾವಧಿಗೆ ಪ್ರಸ್ತುತವಾಗಿರುವುದು ಮುಖ್ಯ. ಮೊದಲೆಲ್ಲಾ ಬೆಳಗಾವಿಗೆ ಸೀಮಿತವಾಗಿದ್ದ ಜಾರಕಿಹೊಳಿ ಕುಟುಂಬ 2011ರಿಂದ ಬೆಂಗಳೂರು ರಾಜಕಾರಣದ ಮೇಲೂ ಹೆಗ್ಗುರುತು ಮೂಡಿಸುತ್ತಿದೆ.
2011ರಲ್ಲಿ ಯಡಿಯೂರಪ್ಪ ಸರಕಾರವನ್ನು ಸ್ವಲ್ಪ ದಿನ ಸಂಕಟಕ್ಕೆ ದೂಡಿದ್ದವರು ಬಾಲಚಂದ್ರ ಜಾರಕಿಹೊಳಿ. 2019ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಕೆಡವಲು ಮುಹೂರ್ತ ನಿಗದಿ ಮಾಡಿದ್ದವರು ರಮೇಶ್ ಜಾರಕಿಹೊಳಿ. ಕೆಲದಿನಗಳ ಬಳಿಕ ಯಡಿಯೂರಪ್ಪ ಅವರನ್ನು ಕೆಳಗಿಳಿಸಲು ಕಂಕಣ ಕಟ್ಟಿಕೊಂಡು ಕುಣಿದಾಡಿದ್ದು ಕೂಡ ಇದೇ ರಮೇಶ್ ಜಾರಕಿಹೊಳಿ. ಈಗ 2025ರಲ್ಲಿ ಸತೀಶ್ ಜಾರಕಿಹೊಳಿ ಅಖಾಡಕ್ಕೆ ಇಳಿದಿದ್ದಾರೆ. ರಮೇಶ್ ಮತ್ತು ಬಾಲಚಂದ್ರಗಿಂತ ಸತೀಶ್ ಜಾರಕಿಹೊಳಿ ಚಾಣಾಕ್ಷ. ಸೂಕ್ಷ್ಮಮತಿ. ತಾಳ್ಮೆ ಇರುವ ನಾಯಕ. ಇಂತಹ ಸತೀಶ್ ಜಾರಕಿಹೊಳಿ ಸುಮ್ಮನೆ ದೇವೇಗೌಡ ಮತ್ತು ಕುಮಾರಸ್ವಾಮಿ ಭೇಟಿ ಮಾಡಿರಲು ಸಾಧ್ಯವಿಲ್ಲ.
ಸತೀಶ್ ಜಾರಕಿಹೊಳಿ ಮಾತನಾಡುವುದು ಕಮ್ಮಿ. ಆದರೆ ಅವರಿಗೆ ಯಾರಿಗೆ, ಯಾವಾಗ, ಯಾವ ಸಂದೇಶವನ್ನು ಕಳುಹಿಸಬೇಕೆಂಬುದು ಚೆನ್ನಾಗಿ ಗೊತ್ತು. ದಿಲ್ಲಿ ಮೂಲಗಳ ಪ್ರಕಾರ ಡಿ.ಕೆ. ಶಿವಕುಮಾರ್, ಜಗ್ಗಿ ವಾಸುದೇವ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಹೈಕಮಾಂಡ್ ನಾಯಕರ ನಡು ತುಸು ಬಗ್ಗಿತ್ತು. ಪದೇ ಪದೇ ದಿಲ್ಲಿಗೆ ಹೋಗುವ ಸತೀಶ್ ಜಾರಕಿಹೊಳಿ ತಮ್ಮ ನಾಯಕರ ವರಸೆಯನ್ನು ಸರಿಯಾಗಿ ಗ್ರಹಿಸಿ ಈಗ ಅದೇ ಧಾಟಿಯಲ್ಲಿ ತಿರುಗೇಟು ನೀಡಿದ್ದಾರೆ. ಇದನ್ನು ನಂಬಲು ಕಷ್ಟವಾಗಬಹುದು. ಆದರೆ ರಾಜಕಾರಣದ ಒಳಮನೆಯಲ್ಲಿ ನಡೆಯುವ ಅದೆಷ್ಟೋ ಸಂಗತಿಗಳು ಹೇಳಿದ ತಕ್ಷಣಕ್ಕೆ ಅರಗಿಸಿಕೊಳ್ಳುವಂಥ ವಿಷಯಗಳಾಗಿರುವುದಿಲ್ಲ ಎನ್ನುವುದು ವಾಸ್ತವ.
ನಮ್ಮನ್ನು ಕಂಡರೆ ಏಕೆ ಇಷ್ಟೊಂದು ದ್ವೇಷ?
ಸಿದ್ದರಾಮಯ್ಯ ಜೊತೆಗೆ ಮಾತ್ರವಲ್ಲ, ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೂ ಸತೀಶ್ ಜಾರಕಿಹೊಳಿ ಸಂಬಂಧ ಅತ್ಯಂತ ಸದೃಢವಾಗಿದೆ, ಸಮೃದ್ಧವಾಗಿದೆ. ಸದ್ಯದ ಮಾಹಿತಿ ಪ್ರಕಾರ ಮಲ್ಲಿಕಾರ್ಜುನ ಖರ್ಗೆ ಬಳಿ ಸತೀಶ್ ಜಾರಕಿಹೊಳಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ‘‘ಡಿಕೆಶಿ ಹಿಂದೆ ರಮೇಶ್ ಜಾರಕಿಹೊಳಿಯನ್ನು ರಾಜಕೀಯವಾಗಿ ಮುಗಿಸಿದರು. ನಂತರ ಬೆಳಗಾವಿಯಲ್ಲಿ ನನ್ನ ರಾಜಕೀಯಕ್ಕೆ ಅಡ್ಡಗಾಲು ಹಾಕಿದರು. ಈಗ ನಮ್ಮ ಸಮುದಾಯದ ಕೆ.ಎನ್. ರಾಜಣ್ಣ ಮತ್ತು ಅವರ ಮಗ ಆರ್. ರಾಜೇಂದ್ರ ಮೇಲೆ ಕೆಂಗೆಣ್ಣು ಬೀರಿದ್ದಾರೆ. ಡಿಕೆಶಿಗೆ ನಮ್ಮ ಸಮುದಾಯವನ್ನು ಹುಡುಕುಡುಕಿ ಕಾಡುತ್ತಿರುವುದೇಕೆ? ನಮ್ಮನ್ನು ಕಂಡರೆ ಯಾಕಿಷ್ಟು ದ್ವೇಷ?’’ ಎಂದು ಆಕ್ರೋಶಭರಿತರಾಗಿ ಕೇಳಿದ್ದಾರೆ. ಹನಿ ಟ್ರ್ಯಾಪ್ ಗದ್ದಲ ಜೋರಾಗಿರುವ ಸಂದರ್ಭದಲ್ಲೇ ಸತೀಶ್, ದೇವೇಗೌಡ ಮತ್ತು ಕುಮಾರಸ್ವಾಮಿ ಭೇಟಿ ಮಾಡಲು ಇದೂ ಒಂದು ಕಾರಣವಾಗಿರಬಹುದು.
ಎಲ್ಲಾ ರೀತಿಯಲ್ಲೂ ತಯಾರಿ
ಡಿಕೆಶಿ ಮಾತ್ರವಲ್ಲದೆ ಪರಮೇಶ್ವರ್, ಎಂ.ಬಿ. ಪಾಟೀಲ್ ಕೂಡ ಸಿಎಂ ಹುದ್ದೆಯನ್ನು ಎದುರುನೋಡುತ್ತಿದ್ದಾರೆ. ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಆದರೆ ಸತೀಶ್ ಜಾರಕಿಹೊಳಿ ಅವಕಾಶವನ್ನು ಸೃಷ್ಟಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಎಲ್ಲಾ ರೀತಿಯಲ್ಲೂ ತಯಾರಿ ನಡೆಸುತ್ತಿದ್ದಾರೆ. ಸಿದ್ದರಾಮಯ್ಯ ಮತ್ತು ಡಿಕೆಶಿ ಅವರಿಗಿಂತಲೂ ಮಿಗಿಲಾಗಿ ಎಲ್ಲಾ ಆಯಾಮಗಳಲ್ಲೂ ತಮ್ಮ ಕಾಲ ಮೇಲೆ ತಾವೇ ನಿಲ್ಲುವ ತಯಾರಿಯಲ್ಲಿದ್ದಾರೆ. ರಾಜಕಾರಣದಲ್ಲಿ ನಿಗೂಢವಾಗಿರುವವರಿಗೆ ಆಯಸ್ಸು ಮತ್ತು ಶಕ್ತಿ ಜಾಸ್ತಿ. ಸದ್ಯಕ್ಕೆ ಸತೀಶ್ ಜಾರಕಿಹೊಳಿ ನಡೆಗಳನ್ನು ಉಪೇಕ್ಷಿಸುವಂತಿಲ್ಲ. ಹಾಗೆಯೇ ಅವರ ದೇವೇಗೌಡ ಮತ್ತು ಕುಮಾರಸ್ವಾಮಿ ಭೇಟಿಗೆ ಮಹತ್ವ ಕೊಡಬೇಕಾಗಿಯೂ ಇಲ್ಲ.
ಕೆಪಿಸಿಸಿಯೇ ಮೊದಲ ಗುರಿ
ಸತೀಶ್ ಜಾರಕಿಹೊಳಿಗೆ ಅರ್ಜೆಂಟಾಗಿ ಸಿಎಂ ಆಗುವುದು ಸಾಧ್ಯವಿಲ್ಲ ಎಂಬುದು ಗೊತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ 2028ಕ್ಕೂ ‘ಸಿದ್ದರಾಮಯ್ಯ ಇರಲಿ’ ಎಂಬ ಕೂಗೇಳಬಹುದು. ಸದ್ಯದ ಸ್ಪರ್ಧೆ ಡಿಕೆಶಿ ಜೊತೆ ಮಾತ್ರ. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ಎಂ.ಬಿ. ಪಾಟೀಲ್ ಲಿಂಗಾಯತ ಕೋಟಾದಡಿ ಸಿಎಂ ಸ್ಥಾನ ಕೇಳಲಿದ್ದಾರೆ. ಮತ್ಯಾವ ಹೊಸ ಮುಖಗಳ ರಂಗಪ್ರವೇಶವಾಗಲಿವೆಯೋ ಗೊತ್ತಿಲ್ಲ. ಅಂಥ ಪ್ರತಿಕೂಲ ಪರಿಸ್ಥಿತಿಯಲ್ಲೂ ಸಿಎಂ ಸ್ಥಾನ ಕೇಳಬೇಕಾದರೆ ಅದಕ್ಕೂ ಮೊದಲು ಕೆಪಿಸಿಸಿಯನ್ನು ಮುನ್ನಡೆಸಬೇಕು. ತನ್ನ ಅಧ್ಯಕ್ಷಗಾದಿಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂತು ಎಂಬ ಸಂದೇಶ ಕಳುಹಿಸಬೇಕು. ಆಗ ಮಾತ್ರ ಮುಖ್ಯಮಂತ್ರಿ ಸ್ಥಾನದೆಡೆಗಿನ ತಮ್ಮ ಪಯಣದ ಆರ್‌ಎಸಿ ಟಿಕೆಟ್ ಕನ್ಫರ್ಮ್ ಆಗಲಿದೆ ಎನ್ನುವ ಲೆಕ್ಕಾಚಾರ ಸತೀಶ್ ಜಾರಕಿಹೊಳಿ ಅವರದು. ಸದ್ಯಕ್ಕೆ ಇದೇ ಅವರ ದಿಲ್ಲಿಯಾತ್ರೆಗಳ ಏಕಮೇವ ಉದ್ದೇಶ.
ಕಡೆ ತುತ್ತು
ಸದ್ಯಕ್ಕೆ ರಾಜ್ಯ ಕಾಂಗ್ರೆಸ್‌ನಲ್ಲಿ ಏನೇ ಸಂಭವಿಸಿದರೂ ಅವೆಲ್ಲವೂ ಸಿದ್ದರಾಮಯ್ಯ ಅವರಿಗೆ ಲಾಭ ಮಾಡಿಕೊಡುತ್ತಿವೆ. ಯಾರು ಯಾವ ಮರಕ್ಕೆ ಗುರಿ ಇಟ್ಟು ಬಾಣ ಬಿಟ್ಟರೂ ಹಣ್ಣುಗಳು ಮಾತ್ರ ಸಿದ್ದರಾಮಯ್ಯ ಬುಟ್ಟಿ ಸೇರುತ್ತಿವೆ. ಸಿದ್ದರಾಮಯ್ಯ ಅದೃಷ್ಟವನ್ನು ನಂಬಲ್ಲ, ಅದೃಷ್ಟ ಸಿದ್ದರಾಮಯ್ಯ ಅವರನ್ನು ಬಿಡಲ್ಲ. ಅಂದಹಾಗೆ ಸತೀಶ್ ಜಾರಕಿಹೊಳಿ ಕೂಡ ಅದೃಷ್ಟ ನಂಬಲ್ಲ.