ಸಿಎಂ ಆಗಲು ಹೊರಟಿರುವ ಡಿಕೆಶಿ ಎಡುವುತ್ತಿರುವುದೆಲ್ಲಿ?
ಮತ್ತೆ ಅಧಿಕಾರ ಹಂಚಿಕೆ ವಿಷಯ ಚರ್ಚೆಯಾಗುತ್ತಿದೆ. ಅಧಿಕಾರ ಉಳಿಸಿಕೊಳ್ಳಲು ಸಿದ್ದರಾಮಯ್ಯ, ಪಡೆದುಕೊಳ್ಳಲು ಡಿ.ಕೆ. ಶಿವಕುಮಾರ್ ಪಟ್ಟು ಹಾಕುತ್ತಿದ್ದಾರೆ. ಸದ್ಯದ ಬೆಳವಣಿಗೆಗಳು ಚತುರ ರಾಜಕಾರಣಿ ಸಿದ್ದರಾಮಯ್ಯ ಈ ಸಲವೂ ಮೇಲುಗೈ ಸಾಧಿಸಿರುವುದನ್ನು ಸಾರಿ ಹೇಳುತ್ತಿವೆ. ಸಿದ್ದರಾಮಯ್ಯ ಗೆದ್ದಿದ್ದಾರೆ ಎನ್ನುವುದಕ್ಕಿಂತ ಮಿಗಿಲಾಗಿ ಡಿ.ಕೆ. ಶಿವಕುಮಾರ್ ಅವಸರಪಟ್ಟು ಅವಾಂತರ ಸೃಷ್ಟಿಸಿಕೊಂಡಂತೆ ಕಾಣುತ್ತಿದೆ.
ಅಧಿಕಾರ ಹಂಚಿಕೆ ಆಗಿದೆಯೋ, ಇಲ್ಲವೋ? ಎರಡು ವರ್ಷವೋ, ಎರಡೂವರೆ ವರ್ಷವೋ? ಒಂದೊಮ್ಮೆ ಅಂಥದ್ದೊಂದು ಸೂತ್ರ ಏರ್ಪಟ್ಟಿದ್ದರೆ ಅದನ್ನು ಹೈಕಮಾಂಡ್ ನಿಭಾಯಿಸುತ್ತಿತ್ತು. ಏಕೆಂದರೆ ಅದು ಹೈಕಮಾಂಡ್ ನಾಯಕರೇ ಹೆಣೆದ ಸೂತ್ರವಾಗಿರುತ್ತಿತ್ತು. ಸಿದ್ದರಾಮಯ್ಯ ಬಣದ ಔತಣಕೂಟಕ್ಕೆ ಡಿಕೆಶಿ ಅಂಜುವ ಅಗತ್ಯ ಇರಲಿಲ್ಲ. ಒತ್ತಡತಂತ್ರದ ಭಾಗವಾಗಿ ಔತಣಕೂಟ ನಡೆಸಿದ್ದರೆಂದರೆ ಅದನ್ನು ‘ವೈರಿ ಹೆದರಿದ್ದಾನೆ’ ಎಂದು ಪರಿಗಣಿಸಬೇಕಿತ್ತು.
ಪರಿಶಿಷ್ಟ ಜಾತಿ-ಪಂಗಡದ ಸಚಿವರು ಮತ್ತು ಶಾಸಕರ ಸಭೆ ಅಥವಾ ಔತಣಕೂಟ ನಡೆದಿದ್ದರೆ ಇಷ್ಟೊತ್ತಿಗೆ ಅದು ಕೂಡ ಕಾಲಗರ್ಭ ಸೇರಿರುತ್ತಿತ್ತು. ತಡೆದದ್ದರಿಂದ ವಿಷಯವಿನ್ನೂ ಜೀವಂತವಾಗಿದೆ. ದಮನಿತರು ಒಗ್ಗೂಡುವುದನ್ನು ತಡೆದ ಅಪಕೀರ್ತಿ ಡಿಕೆಶಿ ಹೆಗಲೇರಿ ಕೂತಿದೆ. ಆಕ್ರೋಶಗೊಂಡಿರುವ ಪರಿಶಿಷ್ಟ ಜಾತಿ-ಪಂಗಡದ ಸಚಿವರು, ಶಾಸಕರು ಸಭೆ ಮಾಡಿಯೇ ತಿರುತ್ತೇವೆ ಎಂದು ತಿರುಗೇಟು ನೀಡುತ್ತಿದ್ದಾರೆ. ಸಿದ್ದರಾಮಯ್ಯ ಅವರ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತಾಗಿದೆ.
► ನೇರವಾಗಿ ರಾಜನನ್ನೇ ಗೆಲ್ಲಲು ಹೊರಟ ಡಿಕೆಶಿ!
ಡಿಕೆಶಿ, ಸಿದ್ದರಾಮಯ್ಯ ಅವರಿಂದ ಕಲಿಯಬೇಕಿರುವುದು ಬಹಳಷ್ಟಿದೆ. 2013 ಅಥವಾ 2023ರಲ್ಲಿ ಮುಖ್ಯಮಂತ್ರಿ ವಿಷಯ ಪ್ರಸ್ತಾವ ಬಂದಾಗೆಲ್ಲಾ ಸಿದ್ದರಾಮಯ್ಯ ಹೇಳುತ್ತಿದ್ದುದು ಒಂದೇ ಮಾತು; ಶಾಸಕರು ಯಾರನ್ನು ನಾಯಕ ಎಂದು ಒಪ್ಪಿಕೊಳ್ಳುತ್ತಾರೋ ಅವರು ಸಿಎಂ ಆಗುತ್ತಾರೆ ಎಂದು. ಆ ಮೂಲಕ ಅವರು ಶಾಸಕರ ವಿಶ್ವಾಸ ಗಳಿಸುತ್ತಿದ್ದರು ಮತ್ತು ಹೈಕಮಾಂಡಿಗೂ ‘ಮುಖ್ಯಮಂತ್ರಿಯನ್ನು ಶಾಸಕರೇ ಆಯ್ಕೆ ಮಾಡಲಿ’ ಎಂಬ ಸಂದೇಶ ರವಾನಿಸುತ್ತಿದ್ದರು.
ಈಗಿನ ವಿಷಯಕ್ಕೆ ಮರಳುವುದಾದರೆ ಡಿಕೆಶಿ ನೇರವಾಗಿ ಸಿದ್ದರಾಮಯ್ಯ ವಿರುದ್ಧ ಸಮರ ಸಾರಿದ್ದಾರೆ. ಆದರೆ, ಸದಾ ವಿಧುರನ ಯುದ್ಧ ನೀತಿ ಬಗ್ಗೆ ಮಾತನಾಡುವ ಅವರು ಯುದ್ಧ ಘೋಷಣೆಗೂ ಮುನ್ನ ಮಂತ್ರಿಗಳನ್ನು ವಿಶ್ವಾಸಕ್ಕೆ ಪಡೆಯಬೇಕೆಂಬುದನ್ನೇ ಮರೆತಿದ್ದಾರೆ. ಡಾ. ಜಿ. ಪರಮೇಶ್ವರ್, ಸತೀಶ್ ಜಾರಕಿಹೊಳಿ, ಎಂ.ಬಿ. ಪಾಟೀಲ್ ಅವರಂತಹ ಹಿರಿಯರನ್ನು ವಿಶ್ವಾಸಕ್ಕೆ ಪಡೆಯುವುದಿರಲಿ, ವೈರಿಗಳಂತೆ ಕಾಣುತ್ತಿದ್ದಾರೆ.
ಮೊದಲಿಗೆ ಸಿದ್ದರಾಮಯ್ಯ ಮತ್ತು ಪರಮೇಶ್ವರ್ ಒಂದಾಗಿರಲಿಲ್ಲ. 2013ರಲ್ಲಿ ತನ್ನ ಸೋಲಿಗೆ ಕಾರಣರಾದರೆಂದು ಸಿದ್ದರಾಮಯ್ಯ ವಿರುದ್ಧ ಕತ್ತಿ ಮಸೆಯುತ್ತಿದ್ದರು ಪರಮೇಶ್ವರ್. ಪರಮೇಶ್ವರ್ ಒಬ್ಬರ ವಿಶ್ವಾಸಗಳಿಸಿದ್ದರೂ ಇವತ್ತು ಸಿದ್ದರಾಮಯ್ಯ ಉರುಳಿಸುತ್ತಿರುವ ‘ದಲಿತ ಸಿಎಂ’ ದಾಳವನ್ನು ಡಿಕೆಶಿ ತನ್ನದಾಗಿಸಿಕೊಳ್ಳಬಹುದಿತ್ತು. ತಾನು ಸಿಎಂ ಆಗದಿದ್ದರೂ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸುವ ಆಟ ಹೂಡಬಹುದಿತ್ತು. ಯಶಸ್ವಿಯಾಗಿದ್ದರೆ ದಲಿತ ಸಿಎಂ ಮಾಡಿದೆ ಎಂಬ ಕಿರೀಟಧಾರಿ ಆಗಬಹುದಿತ್ತು.
ಅತ್ಯಂತ ಸ್ಪಷ್ಟ ಮತ್ತು ನಿಗೂಢ ನಡೆಗಳಿಗೆ ಹೆಸರುವಾಸಿಯಾಗಿರುವ ಸತೀಶ್ ಜಾರಕಿಹೊಳಿ ವಿಷಯದಲ್ಲಿ ಡಿಕೆಶಿ ಇನ್ನೂ ಹೆಚ್ಚಿನ ಎಚ್ಚರಿಕೆಯ ಹೆಜ್ಜೆ ಇಡಬೇಕಿತ್ತು. ಬೆಳಗಾವಿಯನ್ನು ಸತೀಶ್ ಸುಪರ್ದಿಗೆ ಬಿಟ್ಟು ಬೆಂಗಳೂರಿನ ಕೆಂಪೇಗೌಡನಾಗುವ ಅವಕಾಶ ಇತ್ತು. ಬೇಡದ ಬೆಳಗಾವಿ ವಿಷಯದಲ್ಲಿ ಮೂಗು ತೂರಿಸಿ ಸತೀಶ್ ವಿರೋಧ ಕಟ್ಟಿಕೊಂಡದ್ದಷ್ಟೇ ನಷ್ಟವಲ್ಲ. ಅಷ್ಟಕ್ಕಷ್ಟೇ ಎನ್ನುವಂತಿದ್ದ ಸಿದ್ದರಾಮಯ್ಯ ಮತ್ತು ಸತೀಶ್ ಜಾರಕಿಹೊಳಿ ಸಂಬಂಧಕ್ಕೆ ಬೆಸುಗೆ ಹಾಕಿದರು.
ಎಂ.ಬಿ. ಪಾಟೀಲ್ ವಿಷಯದಲ್ಲೂ ಡಿಕೆಶಿಯದ್ದು ಇದೇ ಸಮಸ್ಯೆ. ಡಿಕೆಶಿಗೂ ಮುನ್ನವೇ ಹೈಕಮಾಂಡ್ ಎಂ.ಬಿ. ಪಾಟೀಲ್ ಬಳಿ ಕೆಪಿಸಿಸಿ ಸಾರಥ್ಯ ವಹಿಸಿಕೊಳ್ಳುವಂತೆ ಕೇಳಿತ್ತು. ಎಂಬಿಪಿ ಒಪ್ಪಿರಲಿಲ್ಲ. ಇದು ಗೊತ್ತಿದ್ದ ಡಿಕೆಶಿ ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದ ಎಂಬಿಪಿಗೆ ಪ್ರತಿಹಂತದಲ್ಲಿ ಕಿರಿಕಿರಿ ಉಂಟುಮಾಡಿದರು. ಇದೇ ಕಾರಣಕ್ಕೆ ದಿಲ್ಲಿಯಲ್ಲಿ ಮುಖ್ಯಮಂತ್ರಿ ಆಯ್ಕೆ ವಿಚಾರದ ವೇಳೆ ಮಾಧ್ಯಮದವರು ಎಂ.ಬಿ.ಪಾಟೀಲ್ ಮುಂದೆ ಮೈಕು ಹಿಡಿದಾಗ ಮಾರ್ಮಿಕವಾಗಿ ಡಿಕೆಶಿಗೆ ತಿರುಗೇಟು ನೀಡಿದ್ದರು. ‘ನಮ್ಮ ಪಕ್ಷದಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ಸಿದ್ದರಾಮಯ್ಯ ಉನ್ನತ ನಾಯಕರು. ಅವರ ಸರದಿ ಮುಗಿದ ಮೇಲೆ ಎರಡನೇ ಸಾಲಿನಲ್ಲಿ ನಾನು, ಪರಮೇಶ್ವರ್, ಡಿಕೆಶಿ, ಕೆ.ಜೆ. ಜಾರ್ಜ್ ಇದ್ದೇವೆ’ ಎಂದು ಹೇಳುವ ಮೂಲಕ ಡಿಕೆಶಿ ಅವರನ್ನು ತಮ್ಮ ಪಕ್ಕಕ್ಕೆ ಎಳೆದು ನಿಲ್ಲಿಸಿಕೊಂಡಿದ್ದರು.
ಎಚ್.ಸಿ. ಮಹದೇವಪ್ಪ, ಕೆ.ಎನ್. ರಾಜಣ್ಣ, ಎಚ್.ಕೆ. ಪಾಟೀಲ್ ಜೊತೆಗಿನ ಸಂಬಂಧವೂ ಅಷ್ಟಕ್ಕಷ್ಟೇ. ಕೃಷ್ಣಬೈರೇಗೌಡ, ದಿನೇಶ್ ಗುಂಡೂರಾವ್, ಪ್ರಿಯಾಂಕ್ ಖರ್ಗೆ ಮತ್ತಿತರರು ಸಿದ್ದರಾಮಯ್ಯ ಸಂಪುಟದಲ್ಲಿ ಮೊದಲ ಬಾರಿ ಮಂತ್ರಿಗಳು. ಇವೆಲ್ಲವೂ
ಹೈಕಮಾಂಡಿಗೆ ಗೊತ್ತಿಲ್ಲದೇ ಇಲ್ಲ. ಜೊತೆಗಿರುವವರ ವಿಸ್ವಾಸಗಳಿಸದೆ ಹೈಕಮಾಂಡ್ ಮೂಲಕ ಮುಖ್ಯಮಂತ್ರಿ ಆಗುತ್ತೇನೆ ಎನ್ನುವುದು ರಾಹುಲ್ ಗಾಂಧಿ ಕಾಲದಲ್ಲಿ ಕಷ್ಟ. ಅದು ಡಿಕೆಶಿಗೆ ಯಾಕೆ ಅರ್ಥವಾಗುತ್ತಿಲ್ಲವೋ ಗೊತ್ತಿಲ್ಲ.
► ಹೈಕಮಾಂಡ್ ಮಟ್ಟದಲ್ಲಿ ಹೇಗಿದೆ?
ಡಿಕೆಶಿ ಹೈಕಮಾಂಡ್ ಮೂಲಕ ಸಿಎಂ ಆಗುವುದು ಕೂಡ ಕಷ್ಟ. ಸದ್ಯದ ಮಾಹಿತಿಗಳ ಪ್ರಕಾರ ದಿಲ್ಲಿ ಮಟ್ಟದಲ್ಲಿ ಡಿಕೆಶಿ ಪರ ಇರುವ ಏಕೈಕ ನಾಯಕ ರಣದೀಪ್ ಸಿಂಗ್ ಸುರ್ಜೆವಾಲ. ಸರಕಾರ ಬಂದಾಗಲೇ ಡಿಕೆಶಿಗೆ ಮುಖ್ಯಮಂತ್ರಿ ಪಟ್ಟ ಕಟ್ಟಲು ಸುರ್ಜೆವಾಲ ಬಹಳ ಪ್ರಯತ್ನಿಸಿದರು. ಆದರೆ ಸಿದ್ದರಾಮಯ್ಯ ಪಟ್ಟಿನ ಮುಂದೆ ಸುರ್ಜೆವಾಲ ವಿಫಲರಾದರು. ಬಿಕ್ಕಟ್ಟು ಬಗೆಹರಿದು ಕೆ.ಸಿ. ವೇಣುಗೋಪಾಲ್ ಪತ್ರಿಕಾಗೋಷ್ಠಿಯಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಎಂದು ಘೋಷಿಸಿದ ಬಳಿಕ ಇದೇ ಸುರ್ಜೆವಾಲ ಖುದ್ದಾಗಿ ರಾಜ್ಯದ ಇಂಗ್ಲಿಷ್ ಪತ್ರಿಕೆಯೊಂದಕ್ಕೆ ಕರೆ ಮಾಡಿ ಅಧಿಕಾರ ಹಂಚಿಕೆಯಾಗಿದೆ ಎಂದು ಬರೆಸಿದರು.
ಹೈಕಮಾಂಡ್ ನಾಯಕರು ಸಂದರ್ಭ ನೋಡಿ ಆಟ ಆಡಲೆತ್ನಿಸುತ್ತಾರೆ. ಅದೇ ರೀತಿ ಸುರ್ಜೆವಾಲ ಕೆಲ ದಿನಗಳ ಬಳಿಕ ದಿಲ್ಲಿಯಲ್ಲಿ ನಡೆದ ಮತ್ತೊಂದು ಸಭೆಯಲ್ಲಿ ‘ಪರಿಸ್ಥಿತಿ ಬಂದರೆ ಅಧಿಕಾರ ಬಿಟ್ಟುಕೊಡಬೇಕಾಗುತ್ತೆ’ ಅಂತ ಹೇಳಿದ್ದಾರೆ. ಸಿದ್ದರಾಮಯ್ಯ ತಿರುಗಿನೋಡಿದ್ದೇ ತಡ ಸುರ್ಜೆವಾಲ ಥಂಡಾ ಹೊಡೆದುಹೋಗಿದ್ದಾರೆ. ಕ್ಷಣಮಾತ್ರದಲ್ಲಿ ಮಾತು ಬೇರೆ ವಿಷಯದೆಡೆಗೆ ಹೊರಳಿದೆ. ಅಂದಿನಿಂದ ಸಿದ್ದರಾಮಯ್ಯ-ಸುರ್ಜೆವಾಲ ಸಂಬಂಧ ಕೂಡ ಹಳಸಿದೆ. ಇದಾದ ಸ್ವಲ್ಪ ದಿನಗಳ ಬಳಿಕ ಸುರ್ಜೆವಾಲ ಆಡಳಿತಾತ್ಮಕ ವಿಷಯದಲ್ಲಿ ಮೂಗು ತೂರಿಸಲು ಬಂದಾಗ ಸಿದ್ದರಾಮಯ್ಯ ಏರು ದನಿಯಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ಸಿದ್ದರಾಮಯ್ಯ ಅವರ ರೌದ್ರಾವತಾರ ಕಂಡು ಬೆಚ್ಚಿ ಬಿದ್ದ ಸುರ್ಜೆವಾಲ ‘I am like your son, why are you raising the voice? Cool Sir… ಎಂದು ಅಂಗಲಾಚಿಕೊಂಡಿದ್ದರಂತೆ. ಇಷ್ಟೆಲ್ಲಾ ಆದ ಮೇಲೂ ಸುರ್ಜೆವಾಲ, ಡಿಕೆಶಿ ಪರ ವಕಾಲತ್ತು ವಹಿಸುತ್ತಾರಾ ಎನ್ನುವುದನ್ನು ಕಾದುನೋಡಬೇಕು. ಎಐಸಿಸಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವ ಕೆ.ಸಿ. ವೇಣುಗೋಪಾಲ್ ತಮ್ಮ ಪರ ಇರುವುದು ಸಿದ್ದರಾಮಯ್ಯಗೆ ಹೆಚ್ಚಿನ ಬಲ.
► ಡಿಕೆಶಿ ಬಗೆಗಿನ ಭಯವೇ ಸಿದ್ದುಗೆ ವರದಾನ
ಅದು ಕೆಪಿಸಿಸಿ ಅಧ್ಯಕ್ಷ ಸ್ಥಾನ ಪಡೆಯಲು ಡಿಕೆಶಿ ಹರಸಾಹಸ ಪಡುತ್ತಿದ್ದ ಕಾಲ. ಬೆಂಗಳೂರಿಗಿಂತ ಹೆಚ್ಚಾಗಿ ದಿಲ್ಲಿಯಲ್ಲೇ ಠಿಕಾಣಿ ಹೂಡಿರುತ್ತಿದ್ದ ಕಾಲ. ಡಿಕೆಶಿಗೆ ಅಧ್ಯಕ್ಷ ಪಟ್ಟ ನೀಡಲಾಗುತ್ತೆ, ಜೊತೆಗೆ ಚೆಕ್ ಮೆಟ್ ಇಡಲು ಮೂರ್ನಾಲ್ಕು ಕಾರ್ಯಾಧ್ಯಕ್ಷ ಹುದ್ದೆ ಸೃಷ್ಟಿಸಲಾಗುತ್ತೆ ಎಂದು ಹೇಳಲಾಗುತ್ತಿತ್ತು. ಇದರ ಬಗ್ಗೆ ಈ ಅಂಕಣಕಾರ ಡಿಕೆಶಿ ಜೊತೆ ಚರ್ಚಿಸಿದಾಗ ‘ಮೂರ್ನಾಲ್ಕಲ್ಲ, ನೂರನಾಲ್ಕು ಹುದ್ದೆ ಮಾಡಿಕೊಳ್ಳಲಿ, ಅವರನ್ನು ಹೇಗೆ ಆಡಿಸಬೇಕು ಅಂತ ನನಗೆ ಗೊತ್ತು’ ಎಂದಿದ್ದರು. ಇದು ಡಿಕೆಶಿ ಕಾರ್ಯವೈಖರಿ. ಇದೇ ಡಿ.ಕೆ. ಶಿವಕುಮಾರ್ ಅವರ ಬಗ್ಗೆ ಇತರ ನಾಯಕರಿಗೆ ಇರುವ ಭಯ. ಡಿಕೆಶಿ ಬಗ್ಗೆ ಇರುವ ಈ ಭಯವೇ ಸಿದ್ದರಾಮಯ್ಯ ಅವರಿಗೆ ವರದಾನ.
ಮುಖ್ಯಮಂತ್ರಿ ಆದಮೇಲಾದರೂ ಡಿಕೆಶಿ ಬದಲಾಗುತ್ತಾರೆ ಎಂಬ ವಿಶ್ವಾಸ ಯಾರಿಗೂ ಇಲ್ಲ. ಬದಲಿಗೆ ಸಿಎಂ ಹುದ್ದೆಯೊಂದನ್ನು ಡಿಕೆಶಿಗೆ ಕೊಟ್ಟು ಯಾರಿಗೆ ಯಾವ ಖಾತೆ ಕೊಟ್ಟರೂ ಪರಿಸ್ಥಿತಿ ಮಾತ್ರ ಭೀಕರವಾಗಿರುತ್ತದೆ ಎನ್ನುತ್ತಾರೆ ಹಲವರು. ಸದ್ಯಕ್ಕೆ ರಾಜ್ಯದಲ್ಲಿ ಡಿಕೆಶಿಯನ್ನು ನಿಯಂತ್ರಿಸಲು ಇಬ್ಬರಿಂದ ಮಾತ್ರ ಸಾಧ್ಯ. ಒಂದು ಸಿದ್ದರಾಮಯ್ಯ, ಇನ್ನೊಂದು ಮಲ್ಲಿಕಾರ್ಜುನ ಖರ್ಗೆ. ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯ ರಾಜಕಾರಣಕ್ಕೆ ಬರುವ ಸಾಧ್ಯತೆಗಳಿಲ್ಲ. ಹಾಗಾಗಿ ಸಿದ್ದರಾಮಯ್ಯ ಮುಂದುವರಿಯಲಿ ಎನ್ನುವ ಕೂಗು ಇನ್ನೂ ಹೆಚ್ಚಾಗಬಹುದು!