ಮಾನವರ ವಿರುದ್ಧ ಜಾತಿಜಂತುಗಳ ಅಮಾನುಷ ದೌರ್ಜನ್ಯಗಳು

ರಾಷ್ಟ್ರೀಯ ದಲಿತ ಮಾನವಹಕ್ಕು ಅಭಿಯಾ (NCDH) ಸಂಸ್ಥೆಯ ವರದಿ ಪ್ರಕಾರ ನಮ್ಮ ದೇಶದಲ್ಲಿ ಮಾನವರ ಒಂದು ನಿರ್ದಿಷ್ಟ ವರ್ಗದ ಸರಾಸರಿ ಸ್ಥಿತಿಗತಿ ಹೀಗಿದೆ:
ಪ್ರತೀ 18 ನಿಮಿಷಕ್ಕೊಮ್ಮೆ ಒಬ್ಬ ದಲಿತನ ವಿರುದ್ಧ ಒಂದು ಅಪರಾಧಕೃತ್ಯ ನಡೆಯುತ್ತದೆ.
ಪ್ರತಿದಿನ 3 ದಲಿತ ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತದೆ.
ಪ್ರತಿವಾರ 13 ದಲಿತರ ಹತ್ಯೆ ನಡೆಯುತ್ತದೆ.
ಪ್ರತಿವಾರ 6 ಮಂದಿ ದಲಿತರ ಅಪಹರಣ ನಡೆಯುತ್ತದೆ.
ರಾಷ್ಟ್ರೀಯ ಅಪರಾಧ ದಾಖಲೆ ಸಂಸ್ಥೆ (NCRB) ಪ್ರಕಾರ 2022 ರಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗಗಳಿಗೆ ಸೇರಿದವರ ವಿರುದ್ಧ ದೌರ್ಜನ್ಯಕ್ಕೆ ಸಂಬಂಧಿಸಿದ 67,000 ಕ್ಕೂ ಹೆಚ್ಚಿನ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು. ಅಂದರೆ ದೇಶದಲ್ಲಿ ಆ ವರ್ಷ ಪ್ರತಿದಿನ ದಲಿತರ ಮೇಲೆ ದೌರ್ಜನ್ಯದ ಸುಮಾರು 183 ಪ್ರಕರಣಗಳು ನಡೆದಿದ್ದವು. ಪ್ರಸ್ತುತ 67,000 ಪ್ರಕರಣಗಳ ಪೈಕಿ 17,166 ಪ್ರಕರಣಗಳಲ್ಲಿ ವರ್ಷಾಂತ್ಯದ ವರೆಗೂ ಪ್ರಾಥಮಿಕ ತನಿಖೆ ಪೂರ್ತಿಯಾಗಿರಲಿಲ್ಲ. ಪ್ರಸ್ತುತ ಪ್ರಕರಣಗಳ ಪೈಕಿ ಶೇ.98 ಪ್ರಕರಣಗಳು ದೇಶದ ಕೇವಲ 13 ರಾಜ್ಯಗಳಲ್ಲಿ ದಾಖಲಾಗಿದ್ದವು. ಉತ್ತರಪ್ರದೇಶ (ಶೇ.23.78), ರಾಜಸ್ಥಾನ (ಶೇ.16.75) ಮತ್ತು ಮಧ್ಯಪ್ರದೇಶ (ಶೇ.14.97) -
ಈ ಮೂರು ರಾಜ್ಯಗಳು ದಲಿತ ವಿರೋಧಿ ಅಪರಾಧಕೃತ್ಯಗಳ ವಿಷಯದಲ್ಲಿ ಮುಂಚೂಣಿಯಲ್ಲಿದ್ದವು.
ನಮ್ಮ ಸಮಾಜದಲ್ಲಿ ಮಾನವರ ವಿರುದ್ಧ ದೌರ್ಜನ್ಯಗಳು ಯಾವೆಲ್ಲ ಸ್ವರೂಪದಲ್ಲಿ ನಡೆಯುತ್ತವೆ ಎಂಬುದು ಕುತೂಹಲಕಾರಿಯಾಗಿದೆ.
ದೇಶದಲ್ಲಿ ದಲಿತರ ಸ್ಥಿತಿಗತಿಗಳ ಕುರಿತು ಅಧ್ಯಯನ ನಡೆಸಿದ ‘ಸಿಟಿಝನ್ಸ್ ಫಾರ್ ಜಸ್ಟಿಸ್ ಆಂಡ್ ಪೀಸ್’ (CJP) ತಂಡದವರು, ವರ್ಷ 2022 ರ ನಾಲ್ಕು ತಿಂಗಳ ದಿನಪತ್ರಿಕೆಗಳಿಂದ ಸಂಗ್ರಹಿಸಿದ ಕೆಲವು ಸುದ್ದಿ ಶೀರ್ಷಿಕೆಗಳು ಹೀಗಿದ್ದವು:
ಮದುವೆ ಸಮಾರಂಭದಲ್ಲಿ ಆಹಾರವನ್ನು ಮುಟ್ಟಿದ್ದಕ್ಕಾಗಿ ದಲಿತ ಯುವಕನ ಮೇಲೆ, ಹಲ್ಲೆ ಎಳೆಯ ದಲಿತ ಬಾಲಕಿಯ ಮೇಲೆ ಸತತ ಸಾಮೂಹಿಕ ಅತ್ಯಾಚಾರ.
ಆರು ಮಂದಿ ದಲಿತ ಬಾಲಕರಿಂದ ಕಕ್ಕಸು ತೊಳೆಯಿಸಿದ ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯಿನಿ.
ಟಾಂಕಿಯಿಂದ ದಲಿತ ಮಹಿಳೆ ನೀರು ಕುಡಿದಿದ್ದಕ್ಕಾಗಿ ಗೋಮೂತ್ರದಿಂದ ಟಾಂಕಿಯ ಶುಚೀಕರಣ. ಒಂದು ಪದವನ್ನು ತಪ್ಪಾಗಿ ಉಚ್ಚರಿಸಿದ್ದಕ್ಕಾಗಿ ಹದಿಹರೆಯದ ವಿದ್ಯಾರ್ಥಿಯ ಮೇಲೆ ಮೇಲ್ಜಾತಿಯ ಶಿಕ್ಷಕನಿಂದ ಹಲ್ಲೆ, ವಿದ್ಯಾರ್ಥಿ ಮರಣ.
ಇಬ್ಬರು ದಲಿತ ಬಾಲಕಿಯರ ಶವ ನೇಣುಹಾಕಿದ ಸ್ಥಿತಿಯಲ್ಲಿ ಪತ್ತೆ. ಅತ್ಯಾಚಾರದ ಬಳಿಕ ಅವರನ್ನು ಕೊಂದು ಮರಕ್ಕೆ ನೇಣು ಹಾಕಲಾಗಿತ್ತು.
ತನ್ನ ಬೈಕ್ ಮುಟ್ಟಿದ್ದಕ್ಕಾಗಿ ಎಳೆಯ ದಲಿತ ಬಾಲಕನ ಮೇಲೆ ಹಲ್ಲೆ ನಡೆಸಿದ ಮುಖ್ಯೋಪಾಧ್ಯಾಯ.
ಮೇಲ್ಜಾತಿಯ ಶಿಕ್ಷಕಿಯರು ನನ್ನನ್ನು ಕೀಳಾಗಿ ಕಾಣುತ್ತಾರೆ -
ದಲಿತ ಶಿಕ್ಷಕಿಯ ದೂರು.
2023ಮಾರ್ಚ್ ನಲ್ಲಿ ಬಿಎಸ್ಪಿ ಸಂಸದ ಗಿರೀಶ್ ಚಂದ್ರ ಅವರ ಪ್ರಶ್ನೆಯೊಂದಕ್ಕೆ ಉತ್ತರವಾಗಿ ಕೇಂದ್ರ ಗೃಹ ಇಲಾಖೆಯ ರಾಜ್ಯ ಸಚಿವ ಅಜಯ್ ಕುಮಾರ್ ಮಿಶ್ರಾ ಅವರು ಸಂಸತ್ತಿನಲ್ಲಿ ಕೆಲವು ಮಹತ್ವದ ಮಾಹಿತಿಗಳನ್ನು ನೀಡಿದರು.
ಆ ಪ್ರಕಾರ 2018 ಮತ್ತು 2021ರ ನಡುವಣ ನಾಲ್ಕು ವರ್ಷಗಳ ಅವಧಿಯಲ್ಲಿ ದೇಶದಲ್ಲಿ ದಲಿತರ ವಿರುದ್ಧ 1,89,945 ಅಪರಾಧ ಪ್ರಕರಣಗಳು ದಾಖಲಾಗಿದ್ದವು. ಆಪೈಕಿ 27,754 ಪ್ರಕರಣಗಳಲ್ಲಿ ಮಾತ್ರ ಆರೋಪಿಗಳಿಗೆ ನ್ಯಾಯಾಲಯದಲ್ಲಿ ಶಿಕ್ಷೆ ವಿಧಿಸಲಾಗಿತ್ತು. ಅಂದರೆ ದಲಿತರ ಮೇಲಿನ ದೌರ್ಜನ್ಯದ ಪ್ರಕರಣಗಳು ನ್ಯಾಯಾಲಯಕ್ಕೆ ತಲುಪಿದರೂ ಆರೋಪಿಗಳಿಗೆ ಶಿಕ್ಷೆಯಾಗುವುದು ಶೇ.15 ಕ್ಕಿಂತ ಕಡಿಮೆ ಪ್ರಕರಣಗಳಲ್ಲಿ ಮಾತ್ರ.
ಜಾತಿ ತಾರತಮ್ಯವೆಲ್ಲ ಹಳೆಯ ಕಥೆ, ಕಾಲಕ್ರಮೇಣ ಅದು ಇಲ್ಲವಾಗುತ್ತಿದೆ ಎಂಬ ಭ್ರಮೆಯಲ್ಲಿರುವವರು ಗಮನಿಸಬೇಕು. ದಲಿತರ ಮೇಲಿನ ದೌರ್ಜನ್ಯದ ಪ್ರಕರಣಗಳು ಕ್ರಮೇಣ ಕಡಿಮೆಯಾಗುವ ಬದಲು ಹೆಚ್ಚುತ್ತಲೇ ಇವೆ. ಭಾರತದ ‘ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ’ (NCRB) ದವರ 2022 ರ ವರದಿ ಪ್ರಕಾರ, ಹಿಂದಿನ ವರ್ಷಕ್ಕೆ ಹೋಲಿಸಿದರೆ ಆವರ್ಷ ದೇಶದಲ್ಲಿ ಪರಿಶಿಷ್ಟ ಜಾತಿಗಳ ಜನರ ವಿರುದ್ಧ ಅಪರಾಧ ಪ್ರಕರಣಗಳಲ್ಲಿ ಶೇ.13.1 ಮತ್ತು ಪರಿಶಿಷ್ಟ ಪಂಗಡಗಳ ಜನರ ವಿರುದ್ಧ ಅಪರಾಧ ಪ್ರಕರಣಗಳಲ್ಲಿ ಶೇ.14.3 ಹೆಚ್ಚಳವಾಗಿತ್ತು.
ದುರಂತದ ಮಟ್ಟ ನೋಡಿ: ದಲಿತರ ಮೇಲಿನ ದೌರ್ಜನ್ಯದ ಅದೆಷ್ಟೋ ಘಟನೆಗಳ ದೂರು ಪೊಲೀಸ್ ಠಾಣೆಗಳಿಗೂ ತಲುಪುವುದಿಲ್ಲ. ಅಪರಾಧ ಮಾಡಿದವರು, ಸಂತ್ರಸ್ತರನ್ನು ಹೆದರಿಸಿ, ಬೆದರಿಸಿ ಅವರು ಠಾಣೆಗೆ ದೂರು ನೀಡದಂತೆ ನೋಡಿಕೊಳ್ಳುತ್ತಾರೆ. ಸಂತ್ರಸ್ತರ ಬಾಯಿ ಮುಚ್ಚಿಸುವ ಈ ಒಂದು ಅಪರಾಧವು ಎಷ್ಟೋ ದೊಡ್ಡ ದೊಡ್ಡ ಅಪರಾಧಗಳ ಮೇಲೆ ತೆರೆ ಎಳೆದು ಬಿಡುತ್ತದೆ. ಇನ್ನು ದೂರು ಪೊಲೀಸ್ ಠಾಣೆಯ ತನಕ ತಲುಪಿ ಬಿಟ್ಟರೂ, ಅದು ಯಾವುದಾದರೂ ಪ್ರಭಾವಶಾಲಿ ವ್ಯಕ್ತಿ, ಕುಟುಂಬ ಅಥವಾ ಜಾತಿಯವರ ವಿರುದ್ಧವಾಗಿದ್ದರೆ, FIR ದಾಖಲಾಗುವ ಸಾಧ್ಯತೆ ಕಡಿಮೆ. ಪೊಲೀಸರೇ ವಿವಿಧ ಸಬೂಬುಗಳನ್ನೊಡ್ಡಿ ದೂರುದಾರರನ್ನು ಮನೆಗೆ ಮರಳಿಸುವ ಸಾಧ್ಯತೆಗಳೂ ಇರುತ್ತವೆ. ಒಂದುವೇಳೆ FIR ದಾಖಲಿಸಿದರೂ, ಚಾರ್ಜ್‌ಶೀಟ್ ಆಗುವ ಮುನ್ನ ಎಲ್ಲರೂ ಎಲ್ಲವನ್ನೂ ಮರೆತು ಸುಮ್ಮನಾಗಿ ಬಿಡುವಂತೆ ನೋಡಿಕೊಳ್ಳಲಾಗುತ್ತದೆ. ತನಿಖೆಯ ಹೆಸರಲ್ಲಿ, ಸಾಕ್ಷ್ಯಗಳನ್ನು ಅಳಿಸಿ ಅಥವಾ ನಿರ್ಲಕ್ಷಿಸಿ ಅಪರಾಧಿಗಳನ್ನು ರಕ್ಷಿಸುವ ಕವಾಯತ್ತು ನಡೆಯುವ ಸಾಧ್ಯತೆ ಇರುತ್ತದೆ. ಅನಿವಾರ್ಯವಾಗಿ ತನಿಖೆ ನಡೆದು ಚಾರ್ಜ್‌ಶೀಟ್ ಆಗಿ ಬಿಟ್ಟರೂ, ದಂಡ ಸಂಹಿತೆಯ ಯಾವ ನಿಯಮಗಳನ್ವಯ ಆರೋಪವನ್ನು ನಿರ್ಧರಿಸಬೇಕಿತ್ತೋ ಅವುಗಳ ಬದಲು, ತೀರಾ ಲಘು ಪರಿಣಾಮಗಳಿರುವ ಕೇವಲ ಸಣ್ಣ ಅಪರಾಧಗಳಿಗೆ ಸಂಬಂಧಿಸಿದ ನಿಯಮಗಳ ಅಧೀನ ದೂರು ದಾಖಲಿಸುವ ಮೂಲಕ ಅಪರಾಧಿಗಳನ್ನು ರಕ್ಷಿಸುವ ಸಾಧ್ಯತೆಗಳಿರುತ್ತವೆ. ಮುಂದೆ ಪ್ರಕರಣ ಕೋರ್ಟಿಗೆ ಹೋದರೆ ಅಲ್ಲೂ ನ್ಯಾಯ ಸಿಗುವುದು ನಮ್ಮ ನ್ಯಾಯಾಂಗ ವ್ಯವಸ್ಥೆಯ ಪರಿಚಿತ ಇತಿಮಿತಿಗಳನ್ನು ಅವಲಂಬಿಸಿರುತ್ತದೆ. ನ್ಯಾಯಾಲಯವನ್ನು ತಲುಪುವ ಹೆಚ್ಚಿನ ಪ್ರಕರಣಗಳಲ್ಲಿ, ಸಂತ್ರಸ್ತರ ಬದಲು ಅಪರಾಧಿಗಳೇ ನ್ಯಾಯಾಧೀಶರ ಕೃಪೆಗೆ ಪಾತ್ರರಾಗುತ್ತಾರೆ ಮತ್ತು ಬಿಡುಗಡೆ ಪಡೆಯುತ್ತಾರೆ. ದಲಿತರು ಮತ್ತು ನ್ಯಾಯದ ನಡುವೆ ಇರುವ ಈ ಅಪಾರ ಅಂತರ ಎಷ್ಟೇ ಗಟ್ಟಿ ಮನಸ್ಸಿನ ನ್ಯಾಯಪ್ರಿಯರನ್ನು ಕೂಡಾ ಹತಾಶರಾಗಿಸಿ ಬಿಡುತ್ತದೆ.
ಕಳೆದ ವರ್ಷ ರಾಜ್ಯಸಭೆಯಲ್ಲಿ, ಮಾಜಿ ಕೇಂದ್ರ ಸಚಿವ ಮತ್ತು ಸಂಸದ ಮುಕುಲ್ ವಾಸ್ನಿಕ್ ಅವರು ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳ ಕುರಿತಂತೆ ಕೇಳಿದ್ದ ಪ್ರಶ್ನೆಯೊಂದಕ್ಕೆ ಉತ್ತರವಾಗಿ ಕೇಂದ್ರ ಗೃಹ ಇಲಾಖೆಯ ರಾಜ್ಯ ಸಚಿವ ಬಂಡಿ ಸಂಜಯ್ ಕುಮಾರ್ ಅವರು ಕೆಲವು ಮಹತ್ವದ ಅಧಿಕೃತ ಅಂಕಿ ಅಂಶಗಳನ್ನು ಬಿಡುಗಡೆ ಗೊಳಿಸಿದ್ದರು. ಆ ಪ್ರಕಾರ 2018-2020ರ ಸಾಲಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳಿಗೆ ಸೇರಿದವರ ದೌರ್ಜನ್ಯದ 45,948 ಪ್ರಕರಣಗಳು ದಾಖಲಾಗಿದ್ದವು. ಆ ಪೈಕಿ 34,741 ಪ್ರಕರಣಗಳಲ್ಲಿ ತನಿಖೆ ನಡೆದು ಚಾರ್ಜ್ ಶೀಟ್ ದಾಖಲಾಗಿತ್ತು. ಆದರೆ 4,007 ಪ್ರಕರಣಗಳಲ್ಲಿ ಮಾತ್ರ ಆರೋಪಿಗಳಿಗೆ ಶಿಕ್ಷೆಯಾಗಿತ್ತು. ರಾಷ್ಟ್ರೀಯ ಅಪರಾಧ ದಾಖಲೆ ಸಂಸ್ಥೆ (ಓಅಖಃ) ಒದಗಿಸಿರುವ ಮಾಹಿತಿಗಳ ಪ್ರಕಾರ, 2018 ರಿಂದ 2022ರ ವರೆಗಿನ ಅವಧಿಯಲ್ಲಿ ದಾಖಲಾದ ಪರಿಶಿಷ್ಟ ಜಾತಿಗಳ ಜನರ ವಿರುದ್ಧ ದೌರ್ಜನ್ಯದ ಪ್ರಕರಣಗಳ ಪೈಕಿ ಶೇ.28.5 ರಿಂದ ಶೇ. 42.4 ಪ್ರಕರಣಗಳಲ್ಲಿ ಮಾತ್ರ ಅಪರಾಧಿಗಳಿಗೆ ಶಿಕ್ಷೆ ಘೋಷಿಸಲಾಗಿದೆ.
ರಾಷ್ಟ್ರ ಮಟ್ಟದ ಈ ದಾರುಣ ಪರಿಸ್ಥಿತಿಗೆ ಹೋಲಿಸಿದರೆ ನಮ್ಮ ಕನ್ನಡ ನಾಡಿನ ದುರವಸ್ಥೆಯಂತೂ ತೀರಾ ಲಜ್ಜ್ಜಾಸ್ಪದವಾಗಿದೆ. ಇಲ್ಲಿ ಪರಿಶಿಷ್ಟ ಜಾತಿಯವರು ಮತ್ತು ಪರಿಶಿಷ್ಟ ವರ್ಗದವರ ವಿರುದ್ಧ ದೌರ್ಜನ್ಯದ ನೂರಾರು ಪ್ರಕರಣಗಳು ಪ್ರತಿವರ್ಷ ದಾಖಲಾಗುತ್ತವೆ. ಆದರೆ ಅಂತಹ ಎಷ್ಟು ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗುತ್ತದೆ ಎಂಬುದನ್ನು ಗಮನಿಸಿದರೆ ಹೃದಯವುಳ್ಳವರಿಗೆ ಆಘಾತವಾಗುವುದು ಖಚಿತ. ಉದಾ:
ವರ್ಷ 2021 ರಲ್ಲಿ ದಾಖಲಾದ ಪ್ರಕರಣಗಳು 2,129. ಆಪೈಕಿ, ಅಪರಾಧಿಗಳಿಗೆ ಶಿಕ್ಷೆಯಾದ ಪ್ರಕರಣಗಳು ಕೇವಲ 46 (ಶೇ.2.16).
ವರ್ಷ 2022 ರಲ್ಲಿ ದಾಖಲಾದ ಪ್ರಕರಣಗಳು 2,515. ಆಪೈಕಿ, ಅಪರಾಧಿಗಳಿಗೆ ಶಿಕ್ಷೆಯಾದ ಪ್ರಕರಣಗಳು ಕೇವಲ 24 (ಶೇ.0.95).
ವರ್ಷ 2023 ರಲ್ಲಿ ದಾಖಲಾದ ಪ್ರಕರಣಗಳು 2,553. ಆಪೈಕಿ, ಅಪರಾಧಿಗಳಿಗೆ ಶಿಕ್ಷೆಯಾದ ಪ್ರಕರಣಗಳು ಕೇವಲ 16 (ಶೇ.0.62).
ವರ್ಷ 2024 ರಲ್ಲಿ ದಾಖಲಾದ ಪ್ರಕರಣಗಳು 2,524. ಆಪೈಕಿ, ಅಪರಾಧಿಗಳಿಗೆ ಶಿಕ್ಷೆಯಾದ ಪ್ರಕರಣಗಳು ಕೇವಲ 02 (ಶೇ.0.07).
ಒಂದು ಕಡೆ ದಲಿತರ ವಿರುದ್ಧ ಅಪರಾಧಗಳ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತಿದೆ. ಇನ್ನೊಂದು ಕಡೆ ಶಿಕ್ಷೆ ಘೋಷಿತವಾಗುವ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಕುಸಿಯುತ್ತಾ ಹೋಗುತ್ತಿದೆ. ಕರ್ನಾಟಕದಲ್ಲಿ 2021 ರಲ್ಲಿ ದಲಿತರ ಮೇಲಿನ ದೌರ್ಜನ್ಯಗಳಿಗೆ ಸಂಬಂಧಿಸಿದ 2,129 ಪ್ರಕರಣಗಳು ದಾಖಲಾಗಿದ್ದರೆ, ಆನಂತರದ ಮೂರೂ ವರ್ಷಗಳಲ್ಲಿ ಪ್ರಕರಣಗಳ ಸಂಖ್ಯೆ 2,500 ಮೀರಿದೆ. ಇದಕ್ಕೆ ತದ್ವಿರುದ್ಧವಾಗಿ 2021 ರಲ್ಲಿ ಇಂತಹ 46 ಪ್ರಕರಣಗಳಲ್ಲಿ ಮಾತ್ರ ಅಪರಾಧಿಗಳಿಗೆ ಶಿಕ್ಷೆಯಾಗಿದ್ದರೆ 2024 ರಲ್ಲಿ ಶಿಕ್ಷೆಯಾಗಿರುವುದು ಕೇವಲ 2 ಪ್ರಕರಣಗಳಲ್ಲಿ ಮಾತ್ರ! 2022 ರಲ್ಲಿ ಶಿಕ್ಷೆಯಾದ ಪ್ರಕರಣಗಳ ಸಂಖ್ಯೆ ಶೇ.1 ಕ್ಕಿಂತ ಕೆಳಮಟ್ಟಕ್ಕೆ ಕುಸಿದಿದ್ದರೆ 2024 ರ ಹೊತ್ತಿಗೆ ಶಿಕ್ಷೆಯಾದ ಪ್ರಕರಣಗಳ ಸಂಖ್ಯೆ ಬಹುತೇಕ ಶೂನ್ಯ ಮಟ್ಟಕ್ಕೆ ಕುಸಿದು ಬಿದ್ದಿದೆ. ಅಂದರೆ ಖುಲಾಸೆಯಾ ಪ್ರಮಾಣ ಬಹುತೇಕ ಶೇ.100 !!!
ನೀವು ದಲಿತರ ಮೇಲೆ ಎಷ್ಟು ಬೇಕಾದರೂ ದೌರ್ಜನ್ಯಗಳನ್ನು ಮಾಡಿ, ನಿಮಗೆ ಯಾವುದೇ ಶಿಕ್ಷೆಯಾಗದಂತೆ ನಾವು ನೋಡಿಕೊಳ್ಳುತ್ತೇವೆ ಎಂದು ಈತನಕ ನಮ್ಮ ಕರ್ನಾಟಕ ಸರಕಾರವಾಗಲಿ, ಇಲ್ಲಿಯ ನ್ಯಾಯಾಲಯಗಳಾಗಲಿ, ಪೊಲೀಸ್ ಇಲಾಖೆಯಾಗಲಿ ಅಧಿಕೃತವಾಗಿ ಘೋಷಿಸಿಲ್ಲ ಎಂಬುದು ನಿಜ. ಆದರೆ ಅನಧಿಕೃತವಾಗಿ ಅವರು ನೀಡಿರುವ ಸಂದೇಶ ಇದುವೇ ತಾನೇ? ಶಿಕ್ಷೆಯಾಗುವ ಪ್ರಕರಣಗಳ ಆಘಾತಕಾರಿ ಕನಿಷ್ಠ ಅನುಪಾತವು ಸೂಚಿಸುವುದು ಇದನ್ನೇ ತಾನೇ?
ಕರ್ನಾಟಕದಲ್ಲಿ ಈ ಸನ್ನಿವೇಶಕ್ಕೆ ಪರಿಹಾರವಾಗಿ, ದಲಿತರ ಮೇಲಿನ ದೌರ್ಜನ್ಯಗಳಿಗೆ ಸಂಬಂಧಿಸಿದ ದೂರುಗಳನ್ನು ದಾಖಲಿಸಿ ತನಿಖೆ ನಡೆಸಲಿಕ್ಕೆಂದೇ ಮೀಸಲಾಗಿರುವ 33 ವಿಶೇಷ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗುತ್ತಿದೆ. ಈ ಕುರಿತು ನಿರ್ಧಾರವನ್ನು ರಾಜ್ಯ ಮುಖ್ಯಮಂತ್ರಿಗಳು ಎರಡು ವರ್ಷಗಳ ಹಿಂದೆಯೇ ಪ್ರಕಟಿಸಿದ್ದರಾದರೂ ಅದರ ಅನುಷ್ಠಾನಕ್ಕೆ ಇಷ್ಟು ಸಮಯ ತಗಲಿತು. ಎಪ್ರಿಲ್ 14ರಂದು ಕಾರ್ಯಾರಂಭ ಮಾಡಲಿರುವ ಪ್ರಸ್ತುತ ವಿಶೇಷ ಪೊಲೀಸ್ ಠಾಣೆಗಳ ಸ್ಥಾಪನೆಯೊಂದಿಗೆ ದಲಿತರ ಮೇಲಿನ ದೌರ್ಜನ್ಯಗಳ ಸಮಸ್ಯೆಗಳೆಲ್ಲಾ ಪರಿಹಾರವಾಗಿ ಬಿಟ್ಟವು ಎನ್ನುವಂತಿಲ್ಲ. ಏಕೆಂದರೆ ಪ್ರಸ್ತುತ ಠಾಣೆಗಳಿಗೆ ಸಂಬಂಧಿಸಿದಂತೆ ಬಜೆಟ್, ಸಿಬ್ಬಂದಿ, ಸ್ವಾಯತ್ತತೆ ಇತ್ಯಾದಿ ವಿಷಯಗಳಲ್ಲಿ ಸಾಕಷ್ಟು ಅಸ್ಪಷ್ಟತೆ ಈಗಲೂ ಇದೆ. ಇನ್ನು ಒಂದು ವೇಳೆ ಈ ಎಲ್ಲ ಠಾಣೆಗಳು ಬಹಳ ಸಮರ್ಥವಾಗಿ ಕಾರ್ಯ ನಿರ್ವಹಿಸಲು ಆರಂಭಿಸಿದರೂ ಅಂತಿಮವಾಗಿ ಸಂತ್ರಸ್ತರಿಗೆ ನ್ಯಾಯ ಒದಗಿಸುವ ಕೃಪೆ ತೋರಬೇಕಾದದ್ದು ಈಹಿಂದೆ ದೌರ್ಜನ್ಯಕೋರ ಜಂತು ಗಳಿಗೆ ಬಹುತೇಕ ಶೇ.100 ಪ್ರಕರಣಗಳಲ್ಲಿ ಖುಲಾಸೆ ತೀರ್ಪು ಕೊಟ್ಟು ಬಿಟ್ಟ ಅದೇ ನಮ್ಮ ಹಳೆಯ, ಉದಾರ, ಸಾಂಪ್ರದಾಯಿಕ ನ್ಯಾಯಾಲಯಗಳು ಮತ್ತು ಅದೇ ನಮ್ಮ ಬಹುಮಾನ್ಯ ಮೈಲಾರ್ಡ್‌ಗಳು.