ವಿಜ್ಞಾನ ಪದ ಕಟ್ಟಿದ ಜನಪದ ಕವಿ ಸೋಮಲಿಂಗ

ಸಾಮಾಜಿಕವಾದ ಕೆಲವು ಅಸಮಾನ ಗ್ರಹಿಕೆಗಳೂ ಸೋಮಲಿಂಗ ಅವರ ಪದಗಳಲ್ಲಿವೆ. ಆಧುನಿಕ ಹೆಣ್ಣಿನ ಬಗೆಗಿನ ಲಾವಣಿಗಳಲ್ಲಿ ಈ ಬಗೆಯ ಗಂಡು ಪ್ರಧಾನ ಸಮಾಜದ ಗ್ರಹಿಕೆ ಇದೆ. ಅಂತೆಯೇ ಅಂಬೇಡ್ಕರ್ ಪದದಲ್ಲಿ ಜಾತೀಯತೆ ಮತ್ತು ಅಸ್ಪಶ್ಯತೆ ಕುರಿತು ಉಲ್ಲೇಖಿಸಿದ್ದು ಬಿಟ್ಟರೆ ಪ್ರತ್ಯೇಕವಾಗಿ ಜಾತಿ ಸಮಸ್ಯೆಯನ್ನು ಕುರಿತು ಲಾವಣಿ ಕಟ್ಟಿದಂತಿಲ್ಲ. ಇಂತಹ ಮಿತಿಗಳನ್ನು ಗುರುತಿಸಬಹುದಾದರೂ ಸ್ವಾತಂತ್ರ್ಯ ಹೋರಾಟಕ್ಕೂ, ನಂತರದ ಆಧುನಿಕ ಸರಕಾರಕ್ಕೂ ಒಂದು ಪ್ರಭಾವಿ ಮಾಧ್ಯಮವಾಗಿ ಸೋಮಲಿಂಗ ಕವಿ ದುಡಿದಿದ್ದಾರೆ. ಇಲ್ಲಿನ ಕೆಲವು ಪದಗಳನ್ನು ನೋಡಿದರೆ ಸೋಮಲಿಂಗ ಕವಿಗೆ ಓದಿನ ಹಿನ್ನೆಲೆಯೂ ಇತ್ತು. ಇಂತಹ ಮಹತ್ವದ ಜನಪದ ಕವಿಗಳು ಶಾಲಾ ಪಠ್ಯಗಳಲ್ಲಿ ಬರಬೇಕಿದೆ. ಆದರೆ ಇಂದು ಶಾಲಾ ಪಠ್ಯದ ಆದ್ಯತೆಗಳೇ ಬದಲಾಗಿವೆ.;

Update: 2025-04-22 12:31 IST
ವಿಜ್ಞಾನ ಪದ ಕಟ್ಟಿದ ಜನಪದ ಕವಿ ಸೋಮಲಿಂಗ
  • whatsapp icon

ನಮ್ಮ ಶಾಲೆಗಳಲ್ಲಿ ಕುವೆಂಪು, ಬೇಂದ್ರೆ ಮೊದಲಾದ ಶಿಷ್ಟ ಕವಿಗಳ ಫೋಟೊಗಳನ್ನು ತೂಗುಹಾಕಲಾಗುತ್ತದೆ. ಶಾಲಾ ಪಠ್ಯಗಳಲ್ಲಿಯೂ ಇಂತಹ ಶಿಷ್ಟ ಕವಿಗಳದೇ ಕವಿತೆಗಳಿರುತ್ತವೆ. ಆದರೆ ಹೀಗೆ ಶಾಲೆಯಲ್ಲಿ ಪಟ ಹಾಕಲಾಗದ, ಶಾಲಾ ಪಠ್ಯಗಳಲ್ಲಿ ಪಠ್ಯ ಆಗಲಾರದ ಸಾವಿರಾರು ಜನಪದ ಕವಿಗಳು ನಮ್ಮ ನಾಡಿನಲ್ಲಿದ್ದಾರೆ. ಅವರ ಪದಗಳು ಇಂದಿಗೂ ಜನಮಾನಸದಲ್ಲಿ ಪಠ್ಯಗಳಾಗಿವೆ. ಜನಚರಿತೆ ಸರಣಿಯಲ್ಲಿ ಅಂತಹ ಕೆಲವು ಜನಪದ ಕವಿಗಳನ್ನು ಪರಿಚಯಿಸಿದ್ದೇನೆ. ಇಂತಹ ಮತ್ತೊಬ್ಬ ವಿಶಿಷ್ಟ ಜನಪದ ಕವಿಯನ್ನು ನಿಮಗೆ ಪರಿಚಯಿಸುವೆ.

ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮುರಗೋಡ ಪರಿಸರದ ಹೊಸೂರ ಗ್ರಾಮದಲ್ಲಿ ದೊಡವಾಡ ಮನೆತನದ ಫಕ್ಕೀರಪ್ಪನವರ ಮಗ ಸೋಮಲಿಂಗ ಅಂತಹ ಜನಪದ ಕವಿ. ಫೆಬ್ರವರಿ 14, 1911ರಲ್ಲಿ ಜನಿಸಿದ ಇವರು ಬರೋಬ್ಬರಿ 104 ವರ್ಷ ತುಂಬು ಬಾಳುವೆ ನಡೆಸಿ ಬೈಲಹೊಂಗಲದಲ್ಲಿ ಫೆಬ್ರವರಿ 26, 2015ರಲ್ಲಿ ನಮ್ಮನ್ನು ಅಗಲಿದರು. ನಾಲ್ಕನೆಯ ತರಗತಿಯ ತನಕ ಓದಿದ ಸೋಮಲಿಂಗ ಬಾಲ್ಯದಲ್ಲಿಯೇ ಭಜನೆ, ಕೋಲಾಟ, ಲಾವಣಿ ಪದಗಳನ್ನು ಕೇಳುತ್ತಾ ಜತೆಗೆ ಹಾಡುತ್ತಾ ಬೆಳೆದವರು. ಹುಟ್ಟೂರಿನ ಮಲ್ಲಪ್ಪ ಸಂಗಪ್ಪ ಸಂಪಗಾಂವ ಅವರ ನಾಟಕ ಕಂಪೆನಿಯಲ್ಲಿ ಸೋಮಲಿಂಗ ಬಾಲಪಾತ್ರಗಳಲ್ಲಿ ನಟಿಸಿ ಗಮನಸೆಳೆದರು. ಮುಂದೆ ನಾಟಕ ಕಂಪೆನಿಯಲ್ಲಿ ನಟನಾಗಿ ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿದರು. ಕಂಪೆನಿ ಮಾಲಕ ಸಂಗಪ್ಪ ಅವರಿಂದ ಕರ್ನಾಟಕ ಸಂಗೀತವನ್ನೂ ಕಲಿತರು.

ಭಾರತ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಸೋಮಲಿಂಗ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದರು. ಅಂತೆಯೇ ಸ್ವಾತಂತ್ರ್ಯ ಹೋರಾಟದ ಗೀತೆಗಳು ಈ ಯುವಕನ ಮೇಲೆ ಪ್ರಭಾವ ಬೀರಿದವು. 1930ರ ಸಂದರ್ಭದಲ್ಲಿ ಹುಲಕುಂದದ ಜನಪದ ಕವಿ ಭೀಮಕವಿಗಳು ಬ್ರಿಟಿಷರ ವಿರುದ್ಧ ಪದ ಕಟ್ಟಿ ಹಾಡುತ್ತಿದ್ದರು. ಈ ಹಾಡಿಕೆ ತಂಡದಲ್ಲಿ ಜೊತೆಯಾದ ಸೋಮಲಿಂಗ ಕವಿ ತನ್ನ ಇಪ್ಪತ್ತನೆಯ ವಯಸ್ಸಿನಲ್ಲಿ ತಾನೂ ಹಾಡುವುದು, ಸ್ವಾತಂತ್ರ್ಯ ಹೋರಾಟದ ಬಗ್ಗೆ ಪದಗಳನ್ನು ರಚಿಸುವುದು ಮಾಡತೊಡಗಿದರು. ಈ ಕಾರಣಕ್ಕಾಗಿ ದೇಶ ವಿರೋಧಿ ಚಟುವಟಿಕೆಯ ಆರೋಪದ ಮೇಲೆ ಸೋಮಲಿಂಗರನ್ನು ಒಳಗೊಂಡಂತೆ 22 ಯುವಕರನ್ನು ಬ್ರಿಟಿಷ್ಸರಕಾರ ಬಂಧಿಸಿತು. 1943ರಲ್ಲಿ ಬಂಧನಕ್ಕೆ ಒಳಗಾಗಿ ಬೆಳಗಾವಿ ಹಿಂಡಲಗಾ ಜೈಲಿನಲ್ಲಿ 16 ದಿನಗಳ ಕಾಲ ಇದ್ದರು. ಮುಂದೆ ಡೆಟೆನ್ಯೂ ಅಂತ ಎಂಟು ತಿಂಗಳು 16 ದಿನಗಳ ಕಾಲ ಜೈಲಿನಲ್ಲಿದ್ದರು. ಮಗ ಸೋಮಲಿಂಗ ಜೈಲು ಸೇರಿದ್ದು ಕಂಡು ಆತನ ತಾಯಿ ಹುಚ್ಚಿಯಾಗಿದ್ದರು. ಇಂತಹ ಸಂದರ್ಭದಲ್ಲಿ ಸೋಮಲಿಂಗ ಸ್ವಾತಂತ್ರ್ಯ ಹೋರಾಟದ ಬಗ್ಗೆ ಗೀಗೀ ಪದ ಕಟ್ಟಿ ಜೈಲಿನ ಕೈದಿಗಳಿಗಾಗಿ ಹಾಡುತ್ತಿದ್ದರು. ಆಸಕ್ತರ ಮೂಲಕ ಹಾಡಿಸುತ್ತಿದ್ದರು. ಈ ಕಾರಣಕ್ಕಾಗಿ ಪೊಲೀಸರ ಬೂಟಿನ ಏಟಿಗೆ ಮತ್ತೆ ಮತ್ತೆ ಒಳಗಾದರು.

ಸ್ವಾತಂತ್ರ್ಯಾನಂತರವೂ ಗೀಗೀ ಮಾಸ್ತರನಾಗಿ ಸೋಮಲಿಂಗ ಕವಿ ನೂರಾರು ಪದಗಳನ್ನು ಕಟ್ಟಿ, ತಂಡ ಕಟ್ಟಿಕೊಂಡು ಊರು ಊರು ತಿರುಗಿ ಹಾಡಿದರು. ಹತ್ತಾರು ಶಿಷ್ಯಬಳಗಕ್ಕೆ ಹಾಡಿಕೆ, ಕವಿತೆರಚನೆ ಕಲಿಸಿದರು. ಆಧುನಿಕ ಸರಕಾರದ ಕಾರ್ಯಗಳನ್ನು ಗೀಗೀ ಮೂಲಕ ಜನರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದರು. ಗರಗದ ಮಡಿವಾಳ ಸ್ವಾಮಿಯ ಭಕ್ತರಾದ ಕಾರಣ ಪದಗಳಿಗೆ ‘ಮಡಿವಾಳೇಶ್ವರ’ ಎಂಬ ಮುದ್ರಿಕೆ ಹಾಕಿದರು. ಕವಿ ಬೇಂದ್ರೆ ಅವರ ಇಷ್ಟದ ಜನಪದ ಕವಿ ಇವರಾಗಿದ್ದರು. ಕನ್ನಡ ರಾಜ್ಯೋತ್ಸವದಂದು ಅಂದಿನ ಪ್ರಧಾನಿ ಇಂದಿರಾಗಾಂಧಿ ಎದುರಿಗೆ ಕನ್ನಡಮ್ಮನ ಸ್ತೋತ್ರ ಹೇಳಿ ಅವರ ಮೆಚ್ಚುಗೆ ಜತೆಗೆ ಹದಿನೈದು ಸಾವಿರ ನಗದು ಬಹುಮಾನ ಪಡೆದಿದ್ದರು. ಮುಂದೆ ಇಂದಿರಾ ಅವರು ಜಾರಿಗೊಳಿಸಿದ ಇಪ್ಪತ್ತು ಅಂಶಗಳ ಕಾರ್ಯಕ್ರಮದ ಬಗ್ಗೆಯೂ ಪದ ಕಟ್ಟಿ ಜನರಿಗೆ ಮನವರಿಕೆ ಮಾಡಿದರು. ಈ ಎಲ್ಲಾ ವಿವರ ಮತ್ತು ಹಾಡಿಕೆಯನ್ನು ಗೋಕಾಕದಲ್ಲಿ ನೆಲೆಸಿದ ಜಾನಪದ ವಿದ್ವಾಂಸರಾದ ಡಾ. ಸಿ.ಕೆ. ನಾವಲಗಿ ಅವರು ‘ಶತಮಾನ ಕಂಡ ಸೋಮಲಿಂಗ ಕವಿಯ ಲಾವಣಿಗಳು’ ಕೃತಿಯಲ್ಲಿ ದಾಖಲಿಸಿದ್ದಾರೆ. ಈ ಬರಹಕ್ಕೂ ಈ ಕೃತಿಯೆ ಆಕರವಾಗಿದೆ. ಇದೊಂದು ಮಹತ್ವಪೂರ್ಣ ದಾಖಲೆ.

ಸೋಮಲಿಂಗ ಕವಿ ಬಸವೇಶ್ವರ, ಅಕ್ಕಮಹಾದೇವಿ, ಅಲ್ಲಮ, ಬೇಡರ ಕಣ್ಣಪ್ಪ, ಕುಂಬಾರ ಗುಂಡಯ್ಯ, ವೀರ ಗೊಲ್ಲಾಳ, ಬೆಳವಡಿ ಮಲ್ಲಮ್ಮ, ಸ್ವಾತಂತ್ರ್ಯ ಯೋಧರು, ಸಂತ ತುಕಾರಾಮ, ವೀರರಾಣಿ ಚನ್ನಮ್ಮ, ಸುಭಾಷ್ ಚಂದ್ರ ಬೋಸ್, ಗಾಂಧಿ, ಅಂಬೇಡ್ಕರ್ ಅವರನ್ನು ಒಳಗೊಂಡಂತೆ ಅನೇಕರ ವ್ಯಕ್ತಿಚಿತ್ರಗಳ ಲಾವಣಿ ಕಟ್ಟಿದ್ದಾರೆ. ಅಂತೆಯೇ ಸ್ವಾತಂತ್ರ್ಯ ಚಳವಳಿ, ಕನ್ನಡ ನಾಡು, ಭಾರತ ದೇಶ ತರಹದ ಚರಿತ್ರೆಯ ಪದ ಕಟ್ಟಿದ್ದಾರೆ. ಆಧುನಿಕ ವಿದ್ಯಮಾನಗಳಾದ ವಿಜ್ಞಾನ-ತಂತ್ರಜ್ಞಾನದಂತಹ ಪದಗಳನ್ನೂ ಕಟ್ಟಿದ್ದಾರೆ. ಲಂಚಾವತಾರ, ಭ್ರಷ್ಟಾಚಾರ, ಲಾಟರಿ, ಮಟ್ಕಾ, ವರದಕ್ಷಿಣೆ ಮುಂತಾದ ಸಾಮಾಜಿಕ ಪಿಡುಗುಗಳ ಬಗ್ಗೆಯೂ ಪದ ಕಟ್ಟಿ ಜನರನ್ನು ಜಾಗೃತಗೊಳಿಸಲು ಪ್ರಯತ್ನಿಸಿದ್ದಾರೆ. ಕೃಷಿ, ಏಡ್ಸ್, ಅಪೌಷ್ಟಿಕತೆ, ಪೋಲಿಯೊ, ಕುಟುಂಬ ಯೋಜನೆ, ದೇವದಾಸಿ ಪದ್ಧತಿ, ಕ್ಷಯ ರೋಗ, ಮದ್ಯಪಾನ ಮತ್ತು ಧೂಮಪಾನದಿಂದ ಆರೋಗ್ಯಕ್ಕೆ ಆಗುವ ಅಪಾಯಗಳು ಹೀಗೆ ಸೋಮಲಿಂಗ ಕವಿಗಳಲ್ಲಿ ಪರಂಪರೆ ಮತ್ತು ಆಧುನಿಕತೆ ಮುಖಾಮುಖಿಯಾಗಿವೆ. ಈ ಹಾಡಿಕೆಗಾಗಿ 1982ರಲ್ಲಿ ಜಾನಪದ ಅಕಾಡಮಿಯು ಜಾನಪದ ಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಸಾಮಾಜಿಕವಾದ ಕೆಲವು ಅಸಮಾನ ಗ್ರಹಿಕೆಗಳೂ ಸೋಮಲಿಂಗ ಅವರ ಪದಗಳಲ್ಲಿವೆ. ಆಧುನಿಕ ಹೆಣ್ಣಿನ ಬಗೆಗಿನ ಲಾವಣಿಗಳಲ್ಲಿ ಈ ಬಗೆಯ ಗಂಡು ಪ್ರಧಾನ ಸಮಾಜದ ಗ್ರಹಿಕೆ ಇದೆ. ಅಂತೆಯೇ ಅಂಬೇಡ್ಕರ್ ಪದದಲ್ಲಿ ಜಾತೀಯತೆ ಮತ್ತು ಅಸ್ಪಶ್ಯತೆ ಕುರಿತು ಉಲ್ಲೇಖಿಸಿದ್ದು ಬಿಟ್ಟರೆ ಪ್ರತ್ಯೇಕವಾಗಿ ಜಾತಿ ಸಮಸ್ಯೆಯನ್ನು ಕುರಿತು ಲಾವಣಿ ಕಟ್ಟಿದಂತಿಲ್ಲ. ಇಂತಹ ಮಿತಿಗಳನ್ನು ಗುರುತಿಸಬಹುದಾದರೂ ಸ್ವಾತಂತ್ರ್ಯ ಹೋರಾಟಕ್ಕೂ, ನಂತರದ ಆಧುನಿಕ ಸರಕಾರಕ್ಕೂ ಒಂದು ಪ್ರಭಾವಿ ಮಾಧ್ಯಮವಾಗಿ ಸೋಮಲಿಂಗ ಕವಿ ದುಡಿದಿದ್ದಾರೆ. ಇಲ್ಲಿನ ಕೆಲವು ಪದಗಳನ್ನು ನೋಡಿದರೆ ಸೋಮಲಿಂಗ ಕವಿಗೆ ಓದಿನ ಹಿನ್ನೆಲೆಯೂ ಇತ್ತು. ಇಂತಹ ಮಹತ್ವದ ಜನಪದ ಕವಿಗಳು ಶಾಲಾ ಪಠ್ಯಗಳಲ್ಲಿ ಬರಬೇಕಿದೆ. ಆದರೆ ಇಂದು ಶಾಲಾ ಪಠ್ಯದ ಆದ್ಯತೆಗಳೇ ಬದಲಾಗಿವೆ. ಸೋಮಲಿಂಗ ಕವಿಯ ‘ವಿಜ್ಞಾನ’ ಎನ್ನುವ ಒಂದು ಪದವನ್ನು ನೋಡೋಣ.

ವಿಜ್ಞಾನ ಪದ

ಅಜ್ಞಾನ ಅಳಿದ್ಹೋಗಿ ವಿಜ್ಞಾನ ಬಂದದ ಸುಜ್ಞಾನ ಆಗರಿ ನೀವಿನ್ನ |

ಮುಂದೋಡು ಜಗದಾಗ ಹಿಂದೇಟ ಬಿದ್ದರ ಮುಂದೊಮ್ಮೆ ಆಗುದು ಅವಮಾನಾ ॥1॥

ದೂರವಾಣಿಯಿಂದ ಭಾರಿ ಅನಕೂಲ ಪೂರಾ ರೈತರಿಗೆ ಶಿಕ್ಷಣ|

ಬತ್ತ ಬರಗ ರಾಗಿ ಹತ್ತಿ ಕಬ್ಬು ಜೋಳ ಬಿತ್ತಿ ಬೆಳೆಯುವ ಸಾಧನ ॥2॥

ಭಾರತ ಸರಕಾರ ಹಾರಿಸಿ ಮೊದಲ ಆರ್ಯಭಟ ಉಪಗ್ರಹವನ್ನ

ಇದರ ಲಾಭ ಏನ ಕೆದರಿ ಕೇಳರಿ ಹೆದರಿಕೇನ ಈಗ ಹೇಳುವೆನ ॥3॥

ಹೊಸದಾಗಿ ಭಾಸ್ಕರ ತುಸುದಿನದ್ಹಿಂದೆ ವಸುಧೆಗೆ ನಡಿಸೆದ ಉಢಾನ|

ಪೃಥ್ವಿಯ ಸುತ್ತುತ ನಿತ್ಯ ಉಪಗ್ರಹ ಚಿತ್ರಿಸತದ ಇನ್ಫಾರೆಡವನ್ ॥4॥

ಭಾಸ್ಕರುಪಗ್ರಹ ಎಷ್ಟ ತಿರಗತದ ವರ್ಷದ ಅವಧಿ ಪರಿಪೂರ್ಣ|

ಖನಿಜ ಪದಾರ್ಥ ಅನುದಿನ ಶೋಧಿಸಿ ತಾನೆ ತಿಳಸತದ ಬಲು ಹಸನ ॥5॥

ಚಾಲ: ಗಾಳಿಯಲ್ಲಿ ನೀರಿನ ಅಂಶ ಅಳೆಯತದ ಸರಸ ಹೇಳುವೆ ಕೂಗಿ ಕೇಳಿದರ ಬರತದ ನಗಿ ॥1॥

ಸಾಗರದ ಉಷ್ಣತಾಮಾನ ತಕ್ಕೊಂಡ ತಾನ ಬರುವುದು ತಿರಿಗಿ ತಿಳಿಸುವುದು ದಿಲ್ಲಿ ಕಚೇರಿಗಿ ॥2॥

ಕೂಡಪಲ್ಲ : ಹಿಂದೆ ಅಮೆರಿಕ ಚಂದ್ರಗ್ರಹದ ಮೇಲೆ ತಂದ್ರ ಇಳಿದು ಅಲ್ಲಿಯ ಮಣ್ಣ

-2-

ಟೆಲಿಫೋನ್ ತಾರ ವಿದ್ಯುತ್ ಶಕ್ತಿ ನೆಲಿ ಇಲ್ಲ ಇದರಂತ ಹೇಳುವದು|

ಎಲ್ಲೋ ಮಾತಾಡಿದರ ಎಲ್ಲೋ ಕೇಳತದ ಎಲ್ಲಿಂದಲೋ ಸುದ್ದಿ ತಿಳಿಯುವುದು ॥1॥

ಕಟಗಿಯ ಕೆತ್ತಿ ಪೆಟಗಿಯ ಮಾಡಿ ಪುಟ್ಟ ಮಿಶನ್ ಹಚ್ಚುವುದು

ಪೆಟಿನ್ಯಾಗ ಆಟ ಪೆಟಿಗ್ಯಾಗ ಕುಣತ ಪೆಟಿಗ್ಯಾಗ ಸಂಗೀತ ಹತ್ತುವದು ॥2॥

ಜಲಮಾರ್ಗದಲ್ಲಿ ಸುಲಭ ಏಷ್ಟರಿ ನೆಲಿ ಇಲ್ಲ ಸಾಗರ ದಾಟುವದು

ಹಡಗು ಪಡೆಗಳು ಕಡಲ ವಡಲದಾಟ ವಡನೆ ದಡಾ ಹೋಗಿ ಸೇರುವದು ॥3॥

ಎಂಥ ಕಾಲ ಇದು ಅಂತರ ಮಾರ್ಗಕ್ಕ ಬಂತ ವಿಮಾನ ಹತ್ತುವುದು

ಭರ್ರ್ ಅಂತ ಹೋಗಿ ಗಿರ್ರ್ ಅಂತ ಹಾರಿ ಸರ್ರ್ ಅಂತ ಕೆಳಗ ಇಳಿಯುವುದು ॥4॥

ಚಾಲ: ಇಷ್ಟೆಲ್ಲ ಅನೂಕೂಲ ಇದ್ದ ಎಲ್ ತಪ್ಪೇದ ತಿಳಿಯವಲ್ದ ಏನ ಮತ್ತು ಯಾಕ ನಮಗ ಬಡತಾನ|

ವಿಜ್ಞಾನ ಬೆಳದ ಬಂದತಿ ಬೇಸಾಯ ಪ್ರಗತಿ ಮಾಡಿಕೋ ಇನ್ನಾ ಇಲ್ಲದಿದ್ರ ಆಗತದ ಕಠಿಣ ॥2॥

ಕೂಡಪಲ್ಲ: ಆಡಿದಷ್ಟ ನೀ ಮಾಡಿ ತೋರಿಸಂತ ಮಡಿವಾಳ ಸ್ವಾಮಿ ಕವಿ ರಚನಾ

ಶಿವಲಿಂಗ ಮಾಡತಾನ ನಿತ್ಯ ಹೊಸ ಹೊಸ ಕವನಾ

ಈ ಲಾವಣಿಯನ್ನು ಓದಿದರೆ ವಿವರಣೆ ಬೇಕಿಲ್ಲ ಅನ್ನಿಸುತ್ತದೆ. ಸಾಮಾನ್ಯವಾಗಿ ಜನ ಸಾಮಾನ್ಯರಿಗೆ ಅರ್ಥವಾಗುವ ಹಾಗೆ ಲಯಬದ್ಧವಾಗಿಯೂ ವ್ಯಂಗ್ಯದಲ್ಲಿಯೂ ಈ ಪದವನ್ನು ಕಟ್ಟಿದ್ದಾರೆ. ಈ ಲಾವಣಿಯನ್ನು ಗಮನಿಸಿದರೆ ಜನಪದ ಕವಿಗೆ ವಿಜ್ಞಾನದ ಬಗ್ಗೆ ಅತೀವ ಬೆರಗಿರುವುದು ತಿಳಿಯುತ್ತದೆ. ಅಂತೆಯೇ ಈ ಪದದಲ್ಲಿ ಉಪಗ್ರಹ ಉಡಾವಣೆಯ ಬಗ್ಗೆ ಕವಿ ಬರೆದಿದ್ದಾರೆ. ‘ಮುಂದೋಡು ಜಗದಾಗ ಹಿಂದೇಟು ಬೀಳುವುದು ಬ್ಯಾಡ’ ಎಂದು ಜನರಿಗೆ ಕವಿ ಮನವರಿಕೆ ಮಾಡಿಕೊಡುತ್ತಿದ್ದಾರೆ. ಟೆಲಿಫೋನು, ಟಿ.ವಿ., ವಿಮಾನದಂತಹ ಆಧುನಿಕ ಪರಿಕರಗಳನ್ನು ಜನಪದ ಕವಿಯೊಬ್ಬ ಗ್ರಹಿಸಿರುವ ಕ್ರಮವೇ ಭಿನ್ನವಾಗಿದೆ.

ಜನಪದ ಕವಿಗಳು ದಿನ ದಿನವೂ ಜನರ ಎದುರು ನಿಂತು ಹಾಡಬೇಕಿತ್ತು. ಕೇಳುಗರ ವಯೋಮಾನ ಕೂಡ ಬೇರೆ ಬೇರೆಯಾಗಿರುತ್ತಿತ್ತು. ಇದರಿಂದಾಗಿ ಜನಪದ ಕವಿ ಎಲ್ಲಾ ವಯೋಮಾನದವರಿಗೂ ಸಲ್ಲಬೇಕಿತ್ತು. ಅಕ್ಷರಸ್ಥರು ಅಕ್ಷರ ಕಲಿಯದ ಅನಕ್ಷರಸ್ಥರೂ ಇದ್ದರು. ಈ ಇಬ್ಬರನ್ನೂ ಒಳಗೊಳ್ಳಬೇಕಿತ್ತು. ಅಂತೆಯೇ ಬಹು ಸಂಖ್ಯೆಯಲ್ಲಿ ಗಂಡಸರು ಪ್ರೇಕ್ಷಕರಾಗಿರುತ್ತಿದ್ದರು. ಇನ್ನು ಹಾಡಿಕೆಯ ಆಯೋಜನೆಯನ್ನು ಆಯಾ ಊರಿನ ಧಣಿಗಳು, ಗೌಡರು ಅಥವಾ ಮೇಲು ಜಾತಿ ಅಥವಾ ಮೇಲು ವರ್ಗದ ಪ್ರತಿನಿಧಿಗಳು ಮಾಡುತ್ತಿದ್ದರು. ಜನಪದ ಕವಿಯೊಬ್ಬ ಈ ಎಲ್ಲರನ್ನೂ ತಲುಪಬೇಕಿತ್ತು. ಕೇಳುಗರಲ್ಲಿ ಗಂಡಸರು ಹೆಚ್ಚಿರುವ ಕಾರಣ ಹೆಣ್ಣಿನ ಬಗ್ಗೆ ಗಂಡಿನ ದರ್ಪದ ಪದ ಹೇಳುತ್ತಿದ್ದರು. ಧಣಿಗಳು ಮೇಲುಜಾತಿಯವರು ಕಾರ್ಯಕ್ರಮ ಆಯೋಜಿಸುತ್ತಿದ್ದುದರಿಂದ ಅವರ ಶೋಷಣೆಗೆ ಒಳಗಾಗುವವರ ಬಗ್ಗೆ ಮತ್ತು ಜಾತೀಯತೆ ಅಸ್ಪಶ್ಯತೆಯ ಬಗ್ಗೆ ಧ್ವನಿ ಎತ್ತುವುದು ಸಾಧ್ಯವಿರಲಿಲ್ಲ. ಇನ್ನು ಯುವಕರನ್ನು ಸೆಳೆಯಲು ಆಧುನಿಕ ವಿದ್ಯಮಾನಗಳ ಬಗ್ಗೆಯೂ ಗಮನಸೆಳೆಯ ಬೇಕಿತ್ತು. ಅಂತೆಯೇ ತನ್ನ ಜತೆಗಾರ ಜನಪದ ಕವಿಗಳಿಗಿಂತ ಭಿನ್ನವಾಗಿರಬೇಕಿತ್ತು. ಈ ಎಲ್ಲಾ ಒತ್ತಡಗಳೂ ಸೋಮಲಿಂಗ ಕವಿಯನ್ನು ಪ್ರಭಾವಿಸಿರುವುದು ಈ ಲಾವಣಿಯಲ್ಲಿ ಕಾಣುತ್ತದೆ.

ಕಡೆಯದಾಗಿ ಲಾವಣಿಯ ಚಾಲದಲ್ಲಿ ‘ಇಷ್ಟೆಲ್ಲ ಅನೂಕೂಲ ಇದ್ದ ಎಲ್ ತಪ್ಪೇದ ತಿಳಿಯವಲ್ದ ಏನ ಮತ್ತು ಯಾಕ ನಮಗ ಬಡತಾನ|’ ಎಂಬ ಪ್ರಶ್ನೆ ಸೂಕ್ಷ್ಮವಾಗಿದೆ. ಇಷ್ಟೆಲ್ಲಾ ವಿಜ್ಞಾನ -ತಂತ್ರಜ್ಞಾನ ಅಭಿವೃದ್ದಿ ಹೊಂದಿದ್ದರೂ ನಮಗೆ ಬಡತನ ಏಕಿದೆ ಎನ್ನುವ ಪ್ರಶ್ನೆ ಆಳುವ ಪ್ರಭುತ್ವದ ಮುಖಕ್ಕೆ ಹೊಡೆದಂತಿದೆ. ಎಷ್ಟೇ ವಿಜ್ಞಾನ ಅಭಿವೃದ್ಧಿ ಹೊಂದಿದರೂ ಬಡತನ ನಿವಾರಣೆಯಾಗದ ವಿಜ್ಞಾನದಿಂದ ಜನಸಾಮಾನ್ಯರಿಗೆ ಏನು ಲಾಭ ಎನ್ನುವ ಸರಳವಾದ ಪ್ರಶ್ನೆಯನ್ನು ಕವಿ ಎತ್ತಿದ್ದಾನೆ. ಇಡಿಯಾದ ಲಾವಣಿಯಲ್ಲಿ ವಿಜ್ಞಾನದ ಬಗ್ಗೆ ಬೆರಗಾದ ಕವಿ ಮೈಮರೆಯದೆ ಕೊನೆಗೆ ಜನಸಾಮಾನ್ಯರ ಬದುಕಿನ ಪ್ರಶ್ನೆಯನ್ನು ಮುನ್ನೆಲೆಗೆ ತಂದಿದ್ದು ಮುಖ್ಯವಾಗಿದೆ. ಇದುವೇ ಜನಪದ ಕವಿಯ ನಿಜದ ಕಾಳಜಿಯಾಗಿದೆ.

ಫೋಟೊ ಕೃಪೆ: ಡಾ.ಸಿ.ಕೆ.ನಾವಲಗಿ

Tags:    

Writer - ವಾರ್ತಾಭಾರತಿ

contributor

Editor - Naufal

contributor

Contributor - ಡಾ. ಅರುಣ್ ಜೋಳದಕೂಡ್ಲಿಗಿ

contributor

Similar News