ಜಾಗತಿಕ ಸರ್ವಾಧಿಕಾರದ ವಿರುದ್ಧ ಬಂಡೆದ್ದ ಫ್ರಾನ್ಸ್ ಮಹಿಳೆಯರು
ಅಂತರ್‌ರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಮಹಿಳೆಯ ಹೆಸರಲ್ಲಿ ಆಚರಿಸುತ್ತಿರುವುದಕ್ಕೂ, ಫ್ರಾನ್ಸ್ ಮಹಿಳೆಯರು ಜಾಗತಿಕ ಸರ್ವಾಧಿಕಾರ ಅದರಲ್ಲೂ ಪಿತೃಪ್ರಧಾನ ಪುರುಷ ಪಾರಮ್ಯದ ಸರ್ವಾಧಿಕಾರದ ವಿರುದ್ಧ ಧ್ವನಿ ಎತ್ತಿರುವುದು ಜಾಗತಿಕ ಮಹಿಳಾ ಹೋರಾಟಕ್ಕೆ ಒಂದು ದಿಕ್ಕು ತೋರಿದಂತಾಗಿದೆ.;

ಈಬಾರಿ ಮಾರ್ಚ್ ಎಂಟರ ಅಂತರ್‌ರಾಷ್ಟ್ರೀಯ ಮಹಿಳಾ ದಿನದ ಆಚರಣೆಯ ಒಂದು ವೀಡಿಯೊ ವ್ಯಾಪಕವಾಗಿ ವೈರಲ್ ಆಯಿತು. ಇದು ಪ್ಯಾರಿಸ್ ನಗರದಲ್ಲಿ ಪ್ರೆಂಚ್ ಮಹಿಳೆಯರು ಮಾಡಿದ ಒಂದು ಬೆತ್ತಲೆ ಎದೆ ಭಾಗದ ಪ್ರತಿರೋಧ. ಅದೊಂದು ಬಹಳ ವಿಶಿಷ್ಟವಾದ ಪ್ರತಿಭಟನೆಯನ್ನು ದಾಖಲಿಸುವಂತಿತ್ತು. ಕಪ್ಪು ಶೂ ಮತ್ತು ಕಪ್ಪು ಪ್ಯಾಂಟ್ ತೊಟ್ಟು, ಎರಡನೇ ಮಹಾಯುದ್ಧದ ಶೈಲಿಯ ಮಿಲಿಟರಿ ಗ್ಯಾರಿಸನ್ ಕ್ಯಾಪ್‌ಗಳನ್ನು ಹಾಕಿಕೊಂಡು, ತೋಳುಗಳಿಗೆ ಕೆಂಪು ಬಣ್ಣ ಬಳಿದುಕೊಂಡು, ತೆರೆದ ಎದೆಯಲ್ಲಿ ಎದೆಯ ಮೇಲೆ ‘US-EU’ ಮತ್ತು ರಶ್ಯ, ಅಮೆರಿಕದ ಧ್ವಜಗಳನ್ನು ಚಿತ್ರಿಸಿಕೊಂಡಿದ್ದಾರೆ. ಈ ಎರಡೂ ದೇಶಗಳಲ್ಲಿ ಹೆಚ್ಚುತ್ತಿರುವ ಸರ್ವಾಧಿಕಾರವನ್ನು ಸಾಂಕೇತಿಸಲು ನಾಝಿಸಮ್‌ನ್ನು ಪ್ರತಿನಿಧಿಸಲು ಸ್ವಸ್ತಿಕ್ ಚಿತ್ರವನ್ನು ಚಿತ್ರಿಸಿಕೊಂಡಿದ್ದಾರೆ. ಎದೆಯ ಮೇಲೆ ‘FASICIST EPIDEMIC’ ಎಂದು ಬರೆದುಕೊಂಡಿದ್ದಾರೆ. ಮೂಗಿನ ಕೆಳಗೆ ಹಿಟ್ಲರ್‌ನ ಮೀಸೆಯನ್ನು ಹೋಲುವಂತೆ ‘NO’ ಎಂದು ಚಿತ್ರಿಸಿಕೊಂಡಿದ್ದರು. ಎಪಿಡೆಮಿಕ್ ಫ್ಯಾಶಿಸ್ಟ್, ರಿಪೋಸ್ಟ್ ಫೆಮಿನೈನ್ (ಸಾಂಕ್ರಾಮಿಕ ಸರ್ವಾಧಿಕಾರವೇ, ಇದು ಮಹಿಳೆಯರ ಪ್ರತಿರೋಧ) ಎಂದು ದೃಢವಾಗಿ ಕೂಗುತ್ತಿದ್ದಾರೆ. ಈ ವೀಡಿಯೋ ಜಗತ್ತಿನಾದ್ಯಂತ ವೈರಲ್ ಆಗಿದೆ. 1.3 ಮಿಲಿಯನ್‌ಗಿಂತ ಹೆಚ್ಚು ಜನರು ನೋಡಿದ್ದಾರೆ. 43 ಮಿಲಿಯನ್‌ಗಿಂತ ಹೆಚ್ಚುಬಾರಿ ನೋಡಲ್ಪಟ್ಟಿದೆ. ಈ ಪ್ರತಿಭಟನೆ ಮಾಡಿದ 40 ಜನ ದಿಟ್ಟ ಮಹಿಳೆಯರು ‘ಈಇಒಇಓ’ ಎನ್ನುವ ಒಂದು ಸಂಘಟನೆಯವರು.
ಯಾರು ಈ ಫೆಮೆನ್ ಸಂಘಟನೆಯವರು ಎಂದು ಹುಡುಕಿದಾಗ, 2008ರಲ್ಲಿ ಉಕ್ರೇನ್‌ನಲ್ಲಿ ಸ್ಥಾಪನೆಯಾದ ಮತ್ತು ಈಗ ಫ್ರಾನ್ಸ್‌ನಲ್ಲಿ ಚಟುವಟಿಕೆ ಶುರುಮಾಡಿರುವ ಸ್ತ್ರೀವಾದಿ ಕಾರ್ಯಕರ್ತರ ತೀವ್ರವಾದಿ ಗುಂಪು ‘FEMEN’. ಈ ಗುಂಪು ಜಾಗತಿಕ ಮಹಿಳಾ ಹಕ್ಕುಗಳು ಮತ್ತು ಪಿತೃಪ್ರಧಾನ ವ್ಯವಸ್ಥೆಯ ವಿಮೋಚನೆಗಾಗಿ ತೆರೆದೆದೆಯ ಪ್ರತಿಭಟನೆಗಳನ್ನು ಮಾಡುತ್ತಾ ಬಂದಿದ್ದಾರೆ. ಫೆಲೆಸ್ತೀನ್ ಯುದ್ಧ ವಿರೋಧಿಸಿ ಅಲ್ಲಿನ ಮಹಿಳೆಯರ ಪರವಾಗಿ ದನಿ ಎತ್ತಿದ್ದಾರೆ. ಅವರ ಅಧಿಕೃತ ವೆಬ್ ಪೇಜಿನಲ್ಲಿ ‘‘ನಾವು ಜಗತ್ತಿಗೆ ಹೇಳುತ್ತೇವೆ, ನಮ್ಮ ದೇವರು ಒಬ್ಬ ಮಹಿಳೆ, ನಮ್ಮ ಧ್ಯೇಯ ಪ್ರತಿಭಟನೆ, ನಮ್ಮ ಆಯುಧ ಬೆತ್ತಲೆ ಮೊಲೆಗಳು’’ ಎಂದು ಬರೆದುಕೊಂಡಿದ್ದಾರೆ. ‘FEMEN’ನ ಮಹಿಳಾ ಕಾರ್ಯಕರ್ತರು ವಿಶೇಷ ತರಬೇತಿ ಪಡೆದ ಮಹಿಳೆಯರು. ದೈಹಿಕವಾಗಿ ಮತ್ತು ಮಾನಸಿಕವಾಗಿ ಪ್ರಬಲ, ತಾತ್ವಿಕವಾಗಿ ಪ್ರಬುದ್ಧ ಮಹಿಳೆಯರ ಸಂಘಟನೆ ಇದಾಗಿದೆ. ಪಿತೃಪ್ರಧಾನ ಪುರುಷಾಧಿಕಾರದ ಜಗತ್ತಿನ ಯಾವುದೇ ಬಗೆಯ ಹಿಂಸೆಯ ವಿರುದ್ಧ ದಿಟ್ಟವಾಗಿ ದನಿ ಎತ್ತುತ್ತಾರೆ. ತಮ್ಮ ಸಂಘಟನೆಯ ವಿರುದ್ಧ ಎಂತಹ ಪ್ರಬಲ ಶಕ್ತಿಗಳು ದಾಳಿ ಮಾಡಿದರೂ ಈ ದಾಳಿಯನ್ನು ಎದುರಿಸಲು ಸಿದ್ಧರಾಗಿದ್ದಾರೆ. ಇದೀಗ ಜಗತ್ತಿನಲ್ಲಿ ಈ ತಂಡ ಬಹಳ ದಿಟ್ಟವಾಗಿ ಮಹಿಳಾ ದನಿಯನ್ನು ಜಾಗತಿಕ ಮಟ್ಟದಲ್ಲಿ ದೊಡ್ಡದಾಗಿ ಎತ್ತುತ್ತಿರುವ ಒಂದು ಧೀರೆಯರ ಪಡೆಯಾಗಿದೆ. ‘‘ನಾವು ಕಾಲ್ದಳದವರು, ನಿರಾಯುಧರು ಮತ್ತು ಅಹಿಂಸಾವಾದಿಗಳು ಪುರುಷರ ಹಿಂಸಾವಾದಿ ಸರ್ವಾಧಿಕಾರ ಜಗತ್ತನ್ನು ವ್ಯಾಪಿಸುತ್ತಿರುವಾಗ ನಾವು ಸುಮ್ಮನೆ ಕೂರುವುದಿಲ್ಲ’’ ಎನ್ನುತ್ತಾರೆ.
ಹಾಗೆ ನೋಡಿದರೆ ಈ ‘FEMEN’ ಮಹಿಳೆಯರು ಮಾತ್ರ ಯೂರೋಪ್‌ನಲ್ಲಿ ಹೆಚ್ಚುತ್ತಿರುವ ಸರ್ವಾಧಿಕಾರವನ್ನು ವಿರೋಧಿಸಿದರೇ ಎಂದು ಪರಿಶೀಲಿಸಿದರೆ, ಫ್ರಾನ್ಸ್‌ನ ‘ಗ್ರೇವ್ ಫೆಮಿನಿಸ್ಟ್’ ಎಂಬ ಸಂಸ್ಥೆಯು, 2025ರ ಮಹಿಳಾ ದಿನವನ್ನು ‘ಫ್ಯಾಶಿಸ್ಟ್’ ವಿರುದ್ಧದ ದೊಡ್ಡ ಮಹಿಳಾ ದನಿಯನ್ನಾಗಿ ದಾಖಲಿಸಲು ಫ್ರಾನ್ಸ್ ದೇಶದ ಮಹಿಳಾ ಕಾರ್ಯಕರ್ತೆಯರಿಗೆ ಕರೆ ಕೊಟ್ಟಿತ್ತು. ಈ ಕರೆಗೆ ಸ್ಪಂದಿಸಿದ 25 ಲಕ್ಷದಷ್ಟು ಫ್ರಾನ್ಸ್ ಮಹಿಳೆಯರು ಫ್ರಾನ್ಸ್ ನಾದ್ಯಂತ ಸುಮಾರು 150 ಪ್ರದರ್ಶನಗಳಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಪ್ಯಾರಿಸ್ ಒಂದರಲ್ಲೇ ಒಂದು ಲಕ್ಷದ ಇಪ್ಪತ್ತು ಸಾವಿರದಷ್ಟು ಮಹಿಳೆಯರು ಫ್ಯಾಶಿಸ್ಟ್ ವಿರೋಧಿ ಹೋರಾಟದಲ್ಲಿ ಭಾಗಿಯಾಗಿದ್ದಾರೆ ಎಂದು ಗ್ರೇವ್ ಫೆಮಿನಿಸ್ಟ್ ಸಂಘಟಕರು ಹೇಳುತ್ತಾರೆ. ಈ ಪ್ರತಿಭಟನೆಯು ಜಾಗತಿಕ ಮಹಿಳೆಯ ಹೋರಾಟಕ್ಕೂ ಒಂದು ದಿಕ್ಸೂಚಿಯಾಗಿದೆ.
ಈ ಸಂಘಟನೆಗಳು ಜಾಗತಿಕ ಸರ್ವಾಧಿಕಾರವನ್ನು ಹೆಚ್ಚಿಸುತ್ತಿರುವ ವ್ಲಾದಿಮಿರ್ ಪುಟಿನ್, ಎಲಾನ್ ಮಸ್ಕ್ ಮತ್ತು ಡೊನಾಲ್ಡ್ ಟ್ರಂಪ್ ಅವರನ್ನು ‘ಫ್ಯಾಶಿಸಂ’ ಹರಡುತ್ತಿರುವ ದುಷ್ಟ ಶಕ್ತಿಗಳು ಎಂದು ಪ್ರತಿಭಟನೆಯಲ್ಲಿ ಕೂಗಿದರು. ಅಮೆರಿಕ ಸರಕಾರವು ‘ಮಹಿಳೆಯರು’, ‘ಸಲಿಂಗಕಾಮಿ’ ಮೊದಲಾದ ಪದಗಳನ್ನು ತನ್ನ ಅಧಿಕೃತ ವೆಬ್‌ಸೈಟಿಂದ ಅಳಿಸಿ ಹಾಕುತ್ತಿರುವುದರ ವಿರುದ್ಧವೂ ಪ್ರತಿಭಟನಾಕಾರರು ದೊಡ್ಡ ದನಿಯಲ್ಲಿ ಕೂಗಿದರು. ‘‘ಫ್ಯಾಶಿಸಂ ವಿರುದ್ಧ ಮಹಿಳೆಯರು ಯುದ್ಧ ಹೂಡಿದ್ದಾರೆ, ಇದು ಮುಗಿಯುವುದಿಲ್ಲ. ನಾವು ಸರಿಯಾದ ದಿಕ್ಕಿನೆಡೆಗೆ ಹೋಗುತ್ತಿದ್ದೇವೆ. ಟ್ರಂಪ್ ಮೊದಲಾದ ಪುರುಷವಾದಿಗಳು ಸಾಕಷ್ಟು ದರ್ಪದಿಂದ ಮೆರೆಯುತ್ತಿದ್ದಾರೆ. ಆದರೆ ಅವರು ನಮ್ಮಷ್ಟು ಬಲಶಾಲಿಗಳಲ್ಲ’’ ಎಂದು ಏಳು ವರ್ಷದ ಮಗನೊಂದಿಗೆ ಮೆರವಣಿಗೆಯಲ್ಲಿ ನಡೆಯುತ್ತಿದ್ದ 49 ವರ್ಷದ ಸಬೀನ್ ಹೇಳುತ್ತಾರೆ.
ಈ ಪ್ರತಿಭಟನೆಯಲ್ಲಿ ಭಾಗವಹಿಸಿದ ಕೆಲವು ಮಹಿಳೆಯರು ಫ್ರಾನ್ಸ್‌ನಲ್ಲಿ ದೊಡ್ಡ ಮಟ್ಟದಲ್ಲಿ ಪುರುಷ ಮತ್ತು ಮಹಿಳೆಯರ ಮಧ್ಯೆ ವೇತನ ತಾರತಮ್ಯವಾಗುತ್ತಿದೆ ಎಂದು ಧ್ವನಿ ಎತ್ತಿದರು. ಪುರುಷರಿಗಿಂತ ಶೇ. 14ರಷ್ಟು ವೇತನ ಕಡಿಮೆಯಾಗಿದೆ ಎನ್ನುವುದು ಇಲ್ಲಿನ ಮಹಿಳೆಯರ ದೂರಾಗಿತ್ತು. ‘‘ಯುರೋಪ್ ಇರುವುದು ಮಹಿಳೆಯರಿಗಾಗಿಯೇ ಹೊರತು ಫ್ಯಾಶಿಸ್ಟ್ ಪುರುಷರಿಗಲ್ಲ’’ ಎನ್ನುವ ಘೋಷಣೆಯನ್ನು ಸೇರಿಸಿದ್ದರು. ‘‘ಸ್ತ್ರೀಯರು ಯಾವಾಗಲೂ ಬಲಪಂಥೀಯತೆಯನ್ನು ವಿರೋಧಿಸುತ್ತಾರೆ. ಯುದ್ಧಕ್ಕೆ ಸನ್ನದ್ಧವಾದ ಕುದುರೆಗಳಂತೆ ನಾವಿರುವುದಿಲ್ಲ, ನಿಮ್ಮ ಸರ್ವಾಧಿಕಾರದ ವಿರುದ್ಧ ಬಂಡೇಳುತ್ತೇವೆ’’ ಮುಂತಾದ ಘೋಷಣೆಗಳನ್ನು ಕೂಗಿದರು. ಯಾಕೆ ಫ್ರಾನ್ಸ್ ಮಹಿಳೆಯರು ಹೆಚ್ಚುತ್ತಿರುವ ಸರ್ವಾಧಿಕಾರದ ವಿರುದ್ಧ ಧ್ವನಿ ಎತ್ತಿದರು ಎಂದು ನೋಡಿದರೆ 2024ರ ಪ್ರಜಾಪ್ರಭುತ್ವದ ಸೂಚ್ಯಂಕದಲ್ಲಿ ಫ್ರಾನ್ಸ್ ಕೂಡ ಸರ್ವಾಧಿಕಾರಿ ಆಡಳಿತದ ಕಡೆ ವಾಲುತ್ತಿರುವ ವರದಿಯಾಗಿದೆ. ಅಂದರೆ ಫ್ರಾನ್ಸ್ ಜೊತೆಗೆ ಇಡೀ ಯುರೋಪ್‌ನಲ್ಲಿ ಸರ್ವಾಧಿಕಾರದ ಆಡಳಿತಗಳು ತಲೆ ಎತ್ತುತ್ತಿರುವ ಆತಂಕಕ್ಕೆ ಈ ಮಹಿಳೆಯರು ದನಿಯಾಗಿದ್ದಾರೆ.
ಹಾಗಾದರೆ ಜಗತ್ತಿನಲ್ಲಿ ಪ್ರಜಾಪ್ರಭುತ್ವದ ಸ್ಥಿತಿ ಏನಾಗಿದೆ? ಎಂದು ನೋಡುವುದಾದರೆ ಇಕನಾಮಿಕ್ ಇಂಟಲಿಜೆಂಟ್ ಯೂನಿಟ್‌ನವರ ಸಮೀಕ್ಷೆಯ ಜಾಗತಿಕ ಪ್ರಜಾಪ್ರಭುತ್ವ ಸೂಚ್ಯಂಕ 2024ರ ಪ್ರಕಾರ ವಿಶ್ವದ ಜನಸಂಖ್ಯೆಯ ಮೂರನೇ ಒಂದು ಭಾಗಕ್ಕಿಂತ ಹೆಚ್ಚಿನ ಜನರು ಈಗ ಸರ್ವಾಧಿಕಾರಿ ಆಡಳಿತದಲ್ಲಿ ವಾಸಿಸುತ್ತಾರೆ. ಒಟ್ಟಾರೆ ಜಾಗತಿಕ ಪ್ರಜಾಪ್ರಭುತ್ವದ ಸೂಚ್ಯಂಕದ ಅಂಕವು 2006ರಲ್ಲಿ 5.52ರಷ್ಟಿದ್ದರೆ, 2024ರಲ್ಲಿ ಶೇ. 5.17ಕ್ಕೆ ಇಳಿದಿದೆ. ಇದು ಐತಿಹಾಸಿಕ ಇಳಿಕೆಯಾಗಿದೆ. ಸೂಚ್ಯಂಕವು ಒಳಗೊಂಡಿರುವ ಒಟ್ಟು 167 ದೇಶಗಳಲ್ಲಿ 130 ದೇಶಗಳು ತಮ್ಮ ಅಂಕಗಳಲ್ಲಿ ಕುಸಿದಿವೆ ಅಥವಾ ಯಾವುದೇ ಸುಧಾರಣೆಯಾಗಿಲ್ಲ. ವಿಶ್ವದ ಜನಸಂಖ್ಯೆಯ ಮೂರನೇ ಒಂದು ಭಾಗಕ್ಕಿಂತ ಹೆಚ್ಚು (ಶೇ. 39.2) ಜನರು ಸರ್ವಾಧಿಕಾರಿ ಆಳ್ವಿಕೆಯಲ್ಲಿ ವಾಸಿಸುತ್ತಿದ್ದಾರೆ. ಅರವತ್ತು ದೇಶಗಳನ್ನು ಈಗ ‘ಸರ್ವಾಧಿಕಾರಿ ಆಡಳಿತದ ದೇಶ’ ಗಳೆಂದು ಗುರುತಿಸಲಾಗಿದೆ, 2023ರ ಸೂಚ್ಯಂಕಕ್ಕೆ ಹೋಲಿಸಿದರೆ ಶೇಕಡವಾರು ಒಂದರಷ್ಟು ಹೆಚ್ಚಳವಾಗಿದೆ ಮತ್ತು 2014ರ ಸೂಚ್ಯಂಕಕ್ಕೆ ಹೋಲಿಸಿದರೆ ಎಂಟರಷ್ಟು ಹೆಚ್ಚಳವಾಗಿದೆ.
ಜಗತ್ತಿನಲ್ಲಿ 2008ರ ನಂತರ ತುಂಬಾ ಆಘಾತಕ್ಕೆ ಒಳಗಾದ ಸಂಗತಿಯೆಂದರೆ, ಜಾಗತಿಕ ನಾಗರಿಕ ಸ್ವಾತಂತ್ರ್ಯ ಶೇ. 0-10 ರಿಂದ -1.00ಕ್ಕೆ ಇಳಿಕೆಯಾಗಿದೆ. ಚುನಾವಣಾ ಪ್ರಕ್ರಿಯೆ ಮತ್ತು ಬಹುತ್ವದ ಸೂಚ್ಯಂಕವು ಶೇಕಡ -0.66ರಷ್ಟಿದೆ. ಆದರೂ, 2008 ಮತ್ತು 2024ರ ನಡುವೆ ಜನರ ರಾಜಕೀಯ ಭಾಗವಹಿಸುವಿಕೆಗೆ ಜಾಗತಿಕ ಸರಾಸರಿ ಸ್ಕೋರ್ 0.74ರಷ್ಟು ಸುಧಾರಿಸಿದೆ. ಪಶ್ಚಿಮ ಯುರೋಪ್ ಜಗತ್ತಿನ ಬೇರೆ ಭಾಗಗಳಿಗಿಂತ ಅತ್ಯಧಿಕ ಸೂಚ್ಯಂಕವನ್ನು ಹೊಂದಿದೆ, ಇದು 8.38ರಷ್ಟಿದೆ. ಯುನೈಟೆಡ್ ಕಿಂಗ್‌ಡಮ್ ತನ್ನ ಸೂಚ್ಯಂಕವನ್ನು ಒಂದಷ್ಟು ಸುಧಾರಿಸಿಕೊಂಡಿದೆ. 2023ರಲ್ಲಿ 18ನೇ ಸ್ಥಾನದಲ್ಲಿದ್ದ ಶ್ರೇಯಾಂಕಗಳನ್ನು 17ನೇ ಸ್ಥಾನಕ್ಕೆ ಏರಿಸಿಕೊಂಡಿದೆ. 2024ರಲ್ಲಿ ಅಮೆರಿಕದ ಸೂಚ್ಯಂಕದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಈಗ ಅಮೆರಿಕವು ‘ದೋಷಪೂರಿತ ಪ್ರಜಾಪ್ರಭುತ್ವ’ ಎಂದು ವರ್ಗೀಕರಿಸಲ್ಪಟ್ಟಿದೆ, 28ನೇ ಸ್ಥಾನದಲ್ಲಿದೆ. ನಾರ್ಡಿಕ್ ದೇಶಗಳು (ನಾರ್ವೆ, ಐಸ್‌ಲ್ಯಾಂಡ್, ಸ್ವೀಡನ್, ಫಿನ್‌ಲ್ಯಾಂಡ್ ಮತ್ತು ಡೆನ್ಮಾರ್ಕ್) ಪ್ರಜಾಪ್ರಭುತ್ವ ಸೂಚ್ಯಂಕ ಶ್ರೇಯಾಂಕದಲ್ಲಿ ಪ್ರಾಬಲ್ಯ ಮುಂದುವರಿಸಿದ್ದು, ಮೊದಲ ಏಳು ಸ್ಥಾನಗಳಲ್ಲಿ ಐದು ಸ್ಥಾನಗಳನ್ನು ಪಡೆದುಕೊಂಡಿವೆ. ನ್ಯೂಝಿಲ್ಯಾಂಡ್ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ ಮತ್ತು ಸ್ವಿಟ್ಜರ್‌ಲ್ಯಾಂಡ್ ಐದನೇ ಸ್ಥಾನಕ್ಕೆ ಏರಿದೆ. ಭಾರತದ ಸ್ಥಾನವೂ ಕೂಡ ಸರ್ವಾಧಿಕಾರಿ ದೇಶಗಳ ಪಟ್ಟಿಯತ್ತ ಧಾವಿಸುತ್ತಿದೆ.
ಜಾಗತಿಕವಾಗಿ ಕುಸಿಯುತ್ತಿರುವ ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿಹಿಡಿಯುವುದು, ವಿಶ್ವದ ಶಾಂತಿಗಾಗಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ಆಶಯವನ್ನು ಜಾಗತಿಕವಾಗಿ ಮನವರಿಕೆ ಮಾಡಲು ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯು ಸೆಪ್ಟಂಬರ್ 15ನ್ನು ಅಂತರ್‌ರಾಷ್ಟೀಯ ದಿನವನ್ನಾಗಿ ಆಚರಿಸುವ ಘೋಷಣೆ ಮಾಡಿತು. ಇಂಟರ್ ಪಾರ್ಲಿಮೆಂಟರಿ ಯೂನಿಯನ್ (ಐಪಿಯು) 2008ರಿಂದ ಅಂತರ್‌ರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನಾಗಿ ಆಚರಣೆ ಆರಂಭಿಸಿತು. ಇದೀಗ ಜಾಗತಿಕವಾಗಿ ಅಂತರ್‌ರಾಷ್ಟ್ರೀಯ ದಿನವನ್ನಾಗಿ ಆಚರಿಸಲಾಗುತ್ತಿದೆ. ಫಿಲಿಪ್ಪೀನ್ಸ್ ನ ಜನಚಳವಳಿಯ ಹೋರಾಟಗಾರ್ತಿ ಕೊರಾಜನ್ ಸಿ. ಅಕ್ವಿನೋ ‘ಪೀಪಲ್ ಪವರ್ ರೆವಲೂಷನ್’ ಮೂಲಕ ಫರ್ಡಿನಾಂಡ್ ಮಾರ್ಕೋಸ್‌ನ 20 ವರ್ಷಗಳ ಸರ್ವಾಧಿಕಾರವನ್ನು ಕೊನೆಗೊಳಿಸಿ 1986ರ ಸೆಪ್ಟಂಬರ್ 15ರಂದು ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸುತ್ತಾಳೆ. ಇದು ಗಂಡಿನ ವಿರುದ್ಧದ ಹೆಣ್ಣಿನ ವಿಜಯದ ಸಂಕೇತವೂ ಕೂಡ. ಅಂತರ್‌ರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಮಹಿಳೆಯ ಹೆಸರಲ್ಲಿ ಆಚರಿಸುತ್ತಿರುವುದಕ್ಕೂ, ಫ್ರಾನ್ಸ್ ಮಹಿಳೆಯರು ಜಾಗತಿಕ ಸರ್ವಾಧಿಕಾರ ಅದರಲ್ಲೂ ಪಿತೃಪ್ರಧಾನ ಪುರುಷ ಪಾರಮ್ಯದ ಸರ್ವಾಧಿಕಾರದ ವಿರುದ್ಧ ಧ್ವನಿ ಎತ್ತಿರುವುದು ಜಾಗತಿಕ ಮಹಿಳಾ ಹೋರಾಟಕ್ಕೆ ಒಂದು ದಿಕ್ಕು ತೋರಿದಂತಾಗಿದೆ. ಭಾರತದಲ್ಲಿಯೂ ಗಂಡಾಳ್ವಿಕೆಯ ಸರ್ವಾಧಿಕಾರದ ವಿರುದ್ಧ ಈಗಷ್ಟೇ ಧ್ವನಿ ಎತ್ತಬೇಕಾಗಿದೆ.