ಮಹಿಳಾ ಚಳವಳಿಗೆ ‘ಪ್ರೀತಿ’ಯ ಕಣ್ಣು ಕೊಟ್ಟ ಬೆಲ್ ಹುಕ್ಸ್

ಬೆಲ್‌ಹುಕ್ಸ್ ಹೇಳುವ ಬಹಳಷ್ಟು ಒಳನೋಟಗಳು ಭಾರತದ ದಲಿತರ ಶೋಷಣೆಯ ನೆಲೆಯಲ್ಲಿಯೂ ಅನ್ವಯವಾಗುತ್ತವೆ. ಜನರಲ್ಲಿ ಪರಸ್ಪರ ಬಂಧುತ್ವ ಬೆಳೆಯದೆ ಸ್ವಾತಂತ್ರ್ಯ ಸಮಾನತೆಗೆ ಅರ್ಥವಿಲ್ಲ ಎಂದು ಹೇಳುವ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಾತಿಗೂ, ಕಪ್ಪು ಜನರಲ್ಲಿ ಗಾಢವಾದ ಪ್ರೀತಿ ಮೊಳೆಯದೆ ಬದಲಾವಣೆ ಸಾಧ್ಯವಿಲ್ಲ ಎಂದು ಹೇಳುವ ಬೆಲ್‌ಹುಕ್ಸ್ ಮಾತಿಗೂ ಸಾಮ್ಯವಿದೆ. ಈ ನೆಲೆಯಲ್ಲಿ ಬೆಲ್ ಹುಕ್ಸ್ ಚಿಂತನೆಗಳು ಡಾ.ಅಂಬೇಡ್ಕರ್ ಚಿಂತನೆಯ ವಿಸ್ತರಣೆಯಂತೆಯೂ ಕಾಣುತ್ತವೆ.;

Update: 2025-03-18 13:14 IST
ಮಹಿಳಾ ಚಳವಳಿಗೆ ‘ಪ್ರೀತಿ’ಯ ಕಣ್ಣು ಕೊಟ್ಟ ಬೆಲ್ ಹುಕ್ಸ್
  • whatsapp icon

ಲೋಕವನ್ನು ಆಳುತ್ತಿರುವುದು ಪಿತೃಪ್ರಧಾನತೆಯ ಗಂಡಾಳ್ವಿಕೆ. ಹಾಗಾಗಿ ಇದು ಸಮಾಜದ ಎಲ್ಲಾ ವಲಯಗಳಲ್ಲಿ ಆಳದಲ್ಲಿ ಬೇರೂರಿರುವ ಒಂದು ರೋಗ. ಈ ರೋಗವು ಗಂಡು ಹೆಣ್ಣನ್ನು ಕೂಡಿಯೇ ಬಲಿ ಪಡೆಯುತ್ತಿದೆ. ಪಿತೃಪ್ರಧಾನತೆಯು ಬೇಟೆಗಾರನ ಸ್ಥಾನದಲ್ಲಿದ್ದರೆ, ಗಂಡು ಹೆಣ್ಣುಗಳಿಬ್ಬರೂ ಬಲಿಪಶುವಿನ ಸ್ಥಾನದಲ್ಲಿದ್ದಾರೆ. ಆದರೆ ಗಂಡು ತನ್ನನ್ನೂ ಬಲಿ ಪಡೆಯುತ್ತಿರುವ ‘ಪಿತೃಪ್ರಧಾನತೆ’ಯ ಒಳಗೇ ಸೇರಿಕೊಂಡು ತನ್ನನ್ನು ಬೇಟೆಗಾರನ ಅಂದರೆ ಆಳುವ ‘ಯಜಮಾನ’ನ ಸ್ಥಾನದಲ್ಲಿಯೂ, ಮಹಿಳೆಯನ್ನು ಬಲಿಪಶುವಿನ ಅಂದರೆ ‘ಗುಲಾಮ’ಳ ಸ್ಥಾನದಲ್ಲಿಯೂ ನೋಡುತ್ತಿದ್ದಾನೆ. ಸ್ತ್ರೀವಾದದ ತೊಡಕೆಂದರೆ ಈ ಎದುರಾಳಿತನವನ್ನೇ ತನ್ನ ಅಸ್ತ್ರವನ್ನಾಗಿಸಿಕೊಂಡಿರುವುದು. ಇದನ್ನು ಕಂಡುಕೊಳ್ಳುವ ಮೊದಲ ಹಂತದಲ್ಲಿ ಬೆಲ್‌ಹುಕ್ಸ್ ಈ ತನಕ ಚಾಲ್ತಿಯಲ್ಲಿದ್ದ ಸ್ತ್ರೀವಾದಿ ಸಿದ್ಧಾಂತಗಳನ್ನು ಶಸ್ತ್ರಚಿಕಿತ್ಸೆಗೆ ಒಳಗುಮಾಡುತ್ತಾಳೆ. ಅದರಲ್ಲೂ ಮುಖ್ಯವಾಗಿ ಬಿಳಿ ಮಹಿಳೆಯರು ಕಟ್ಟಿದ ಸ್ತ್ರೀವಾದಿ ದೃಷ್ಟಿಕೋನದಲ್ಲಿದ್ದ ಪುರುಷ-ಮಹಿಳೆಯ ಎದುರಾಳಿತನದ ವ್ಯಾಖ್ಯಾನಗಳನ್ನು ಪ್ರಶ್ನಿಸುತ್ತಾಳೆ.

ಆಫ್ರೋ-ಅಮೆರಿಕನ್ ಬರಹಗಾರ್ತಿ, ಸ್ತ್ರೀವಾದಕ್ಕೆ ಪ್ರೀತಿಯ ಕಣ್ಣು ಕೊಟ್ಟ ಚಿಂತಕಿ ಮೂಲತಃ ಗ್ಲೋರಿಯಾ ಜೀನ್ ವಾಟ್ಕಿನ್ ಆದ ‘ಬೆಲ್‌ಹುಕ್ಸ್’ ಮತ್ತೆ ಮತ್ತೆ ಕನ್ನಡಕ್ಕೆ ಬರುತ್ತಿದ್ದಾರೆ. ನಿಧಾನಕ್ಕೆ ಆಕೆಯ ಆಲೋಚನೆಗಳು ಕನ್ನಡದ ಚಿಂತನೆಯ ಜತೆಗೆ ಬೆರೆಯುತ್ತಿವೆ. ಅವಳ ಮುಖ್ಯವಾದ ಐದು ಕೃತಿಗಳನ್ನು ಕನ್ನಡದ ಹಿರಿಯ ಚಿಂತಕಿ ಎಚ್.ಎಸ್. ಶ್ರೀಮತಿ ಅವರು ಅನುವಾದಿಸಿದ್ದಾರೆ. ಈ ತನಕ ‘ಎಲ್ಲರಿಗಾಗಿ ಸ್ತ್ರೀವಾದ’ (2020) (ಫೆಮಿನಿಜಮ್ ಫಾರ್ ಎವೆರಿಬಡಿ: ಪ್ಯಾಶನೇಟ್ ಪಾಲಿಟಿಕ್ಸ್) ‘ಸ್ತ್ರೀವಾದ: ಅಂಚಿನಿಂದ ಕೇಂದ್ರದೆಡೆಗೆ’ (2020) (ಫೆಮಿನಿಜಮ್ ಥಿಯರಿ: ಫ್ರಂ ಮಾರ್ಜಿನ್ ಟು ಸೆಂಟರ್) ‘ಬಾರಯ್ಯ ಮಮಬಂಧು’ (2023) (ದ ವಿಲ್ ಟು ಚೇಂಜ್: ಮೆನ್, ಮಸ್ಕುಲಿನಿಟಿ ಆಂಡ್ ಲವ್) ‘ಸಾಂಗತ್ಯ’ (2023) (ಕಮ್ಯೂನಿಯನ್: ದಿ ಫೀಮೇಲ್ ಸರ್ಚ್ ಫಾರ್ ಲವ್, ‘ಬಂಧಮುಕ್ತ’ (2024) (ಸಾಲ್ವೇಷನ್: ಬ್ಲ್ಯಾಕ್ ಪೀಪಲ್ ಆಂಡ್ ಲವ್) ನಾಲ್ಕು ವರ್ಷದ ಅವಧಿಯಲ್ಲಿ ಐದು ಪುಸ್ತಕಗಳು ಕನ್ನಡಕ್ಕೆ ಬಂದಿವೆ.

ಬೆಲ್ ಹುಕ್ಸ್ 19 ವರ್ಷದ ಹುಡುಗಿ ಇರುವಾಗಲೇ ಬರಹ ಆರಂಬಿಸಿ ತನ್ನ 29ನೇ ವಯಸ್ಸಿನಲ್ಲಿ 1981ರಲ್ಲಿ ‘ಏಂಟ್ ಐ ಎ ವುಮನ್: ಬ್ಲಾಕ್ ವುಮನ್ ಆಂಡ್ ಫೆಮಿನಿಜಮ್’ ಕೃತಿಯಲ್ಲಿ ಪಿತೃಪ್ರಾಧಾನ್ಯತೆಯ ಪ್ರಶ್ನೆಗಳನ್ನು ಎತ್ತುತ್ತಾಳೆ. ಇದನ್ನು ಇನ್ನಷ್ಟು ಸ್ಪಷ್ಟವಾಗಿ ಮೊದಲನೆಯದಾಗಿ 1984ರಲ್ಲಿ ಬರೆದ ‘ಸ್ತ್ರೀವಾದ: ಅಂಚಿನಿಂದ ಕೇಂದ್ರದೆಡೆಗೆ ಎನ್ನುವ ಕೃತಿಯಲ್ಲಿ ಎಳೆಎಳೆಯಾಗಿ ಬಿಡಿಸಿಡುತ್ತಾಳೆ. ಎರಡನೆಯದಾಗಿ ‘ಗಂಡು-ಹೆಣ್ಣಿನ ಎದುರಾಳಿತನವನ್ನು ಮೀರಿ ಬೆಲ್ ಹುಕ್ಸ್ ‘ಪಿತೃಪ್ರಾಧಾನ್ಯತೆ’ ಹೇಗೆ ಗಂಡು ಹೆಣ್ಣುಗಳನ್ನು ಕೂಡಿಯೇ ಬಲಿಪಶುಗಳನ್ನಾಗಿಸಿದೆ ಎನ್ನುವುದನ್ನು ವಿವರಿಸುತ್ತಾಳೆ. ಜಗತ್ತಿನ ಗಂಡುಗಳಿಗೆ ತಗಲಿದ ‘ಪುರುಷಪಾರಮ್ಯ’ವೆಂಬ ಮಾರಣಾಂತಿಕ ರೋಗವನ್ನು ಗುರುತಿಸಿ, ನಂತರ ಈ ರೋಗವನ್ನು ವಾಸಿಮಾಡಲು ಮದ್ದನ್ನು ಕಂಡುಹಿಡಿಯಲು ತನ್ನ ಅಧ್ಯಯನ ವಿಶ್ಲೇಷಣೆಯ ದೃಷ್ಟಿಕೋನವನ್ನು ತಿರುಗಿಸುತ್ತಾಳೆ. ಮೂರನೇ ಹಂತದಲ್ಲಿ ಗಂಡೆಜಮಾನಿಕೆಯ ರೋಗವನ್ನು ವಾಸಿಮಾಡಲು, ಆಳವಾಗಿ ಬೇರೂರಿದ ಪುರುಷಾಧಿಪತ್ಯದ ಬೇರುಗಳನ್ನು ಕೀಳಲು ಗಂಡು ಹೆಣ್ಣು ಒಟ್ಟಾಗಿ ಹೇಗೆ ಕೂಡು ಹೋರಾಟ ಮಾಡಬೇಕು ಎನ್ನುವುದನ್ನು ಬೆಲ್ ಹುಕ್ಸ್ ಹೇಳತೊಡಗುತ್ತಾಳೆ. ಬೆಲ್ ಹುಕ್ಸ್ ಹೇಳುವ ಪ್ರೀತಿಯು ‘ವೈಯಕ್ತಿಕ ನೆಲೆಯದಲ್ಲದೆ ಸಮುದಾಯಗಳ ಒಳಗಣ ಬಸಿಯುವ ಒರತೆಯಾಗಿದೆ. ಈ ಪ್ರೀತಿಯೇ ಪಿತೃಪ್ರಧಾನತೆಯ ಪೆಡಸುತನವನ್ನು ಮೆದುಗೊಳಿಸಿ ರೂಪಾಂತರಕ್ಕೆ ಅಣಿಗೊಳಿಸುತ್ತಲೇ ಗುಣಮುಖವಾಗಿಸುವ ಔಷಧವಾಗಿದೆ ಎನ್ನುತ್ತಾರೆ ಬೆಲ್ ಹುಕ್ಸ್.

ಮಹಿಳೆಯರು ಈ ಪ್ರೀತಿಯ ಸೆಲೆಗಳನ್ನು ಕಟ್ಟಿಕೊಳ್ಳುವ ನೆಲೆಯನ್ನು ‘ಕಮ್ಯೂನಿಯನ್’ (ಸಾಂಗತ್ಯ) ವಿವರಿಸಿದರೆ, ಗಂಡುಗಳು ಪ್ರೀತಿಯನ್ನು ಕಂಡುಕೊಳ್ಳುವ ಬಗೆಯನ್ನು ‘ದ ವಿಲ್ ಟು ಚೇಂಚ್’ (ಬಾರಯ್ಯ ಮಮಬಂಧು) ಕೃತಿಯಲ್ಲಿ ಚರ್ಚಿಸುತ್ತಾಳೆ. ಕಪ್ಪು ಜನರು ಮೊದಲಿಗೆ ತಮ್ಮನ್ನು ತಾವು ಪ್ರೀತಿಸುವುದು ಹೇಗೆ, ಏಕೆ ಕಪ್ಪುಜನರಲ್ಲಿ ತಮ್ಮ ಬಗೆಗೆ ಕೀಳರಿಮೆ ಬೆಳೆಸುವಂತೆ ಪೂರ್ವಗ್ರಹಗಳನ್ನು ಹೆಣೆಯಲಾಗಿದೆ. ಕಪ್ಪು ಜನರು ಮತ್ತೆ ಪ್ರೀತಿಯ ಮಡಿಲಿಗೆ ಏಕೆ ಬರಬೇಕು? ಪ್ರೀತಿಯನ್ನೇ ವೇದಿಕೆಯನ್ನಾಗಿಸಿಕೊಂಡು ಜನಾಂಗೀಯ ಹೋರಾಟಗಳನ್ನು ಮುನ್ನಡೆಸಬೇಕಾದ ದಾರಿ ಯಾವುದು ಎನ್ನುವುದನ್ನು ‘ಸಾಲ್ವೇಷನ್’ (ಬಂಧಮುಕ್ತ) ಕೃತಿಯಲ್ಲಿ ಬೆಲ್‌ಹುಕ್ಸ್ ಶೋಧಿಸಿದ್ದಾಳೆ. ಕಪ್ಪು ಜನರು ಪ್ರೀತಿಯ ನೈತಿಕತೆಗೆ ಮರಳಲು ಈ ಕೃತಿಯಲ್ಲಿ ಕರೆ ಕೊಡುತ್ತಾಳೆ.

ಆಧುನಿಕ ಪಾಶ್ಚಿಮಾತ್ಯ ಚಿಂತನೆಯಲ್ಲಿ ‘ಪ್ರೀತಿ’ಯ ಪರಿಕಲ್ಪನೆಯನ್ನು ಪ್ರಣಯದ ಜತೆ ಗಟ್ಟಿಯಾಗಿ ಸಮೀಕರಿಸಲಾಗಿತ್ತು. ಕೆಲವೇ ಕೆಲವು ಸ್ತ್ರೀವಾದಿ ಚಿಂತಕಿಯರು ಪ್ರೀತಿಯನ್ನು ಲೈಂಗಿಕ ಭಾವನೆ ಇರದ ಮುಕ್ತತೆಯಲ್ಲಿ ವಿಶ್ಲೇಷಿಸಿದ್ದಾರೆ. ಬೆಲ್ ಹುಕ್ಸ್ ಪ್ರೀತಿಯನ್ನು ‘ನೈತಿಕತೆ’ ಜತೆ ವಿಶ್ಲೇಷಿಸುತ್ತಾರೆ. ಅದೊಂದು ರಾಜಕೀಯ ನೈತಿಕತೆ. ಅಂದರೆ, ಸ್ನೇಹ, ಸಮುದಾಯದ ಪ್ರೀತಿ, ನೆರೆಹೊರೆಯವರ ಪ್ರೀತಿ, ತನ್ನನ್ನು ಹೊರತುಪಡಿಸಿ ಉಳಿದೆಲ್ಲರನ್ನೂ ಸಮತೆಯ ಪ್ರೀತಿಯ ಕಣ್ಣೋಟದಿಂದ ನೋಡುವ ನೋಟಕ್ರಮವನ್ನು ಬೆಲ್ ಹುಕ್ಸ್ ಶೋಧಿಸುತ್ತಾರೆ. ಬೆಲ್ ಹುಕ್ಸ್ ಮತ್ತು ಜೂಲಿಯಾ ಕ್ರಿಸ್ಟೇವಾ ಇಬ್ಬರೂ ರಾಜಕೀಯ ಮೈತ್ರಿಗಳನ್ನು ಸೃಷ್ಟಿಸಿ ಜೀವನವನ್ನು ಸ್ಥಿರಗೊಳಿಸುವ ಗುರುತುಗಳು ಮತ್ತು ಮಾನವ ಸಮುದಾಯಗಳನ್ನು ಮಾನವೀಯಗೊಳಿಸಲು ಪ್ರೀತಿಯು ನಿರ್ಣಾಯಕ ಎಂದು ಗುರುತಿಸುತ್ತಾರೆ.

‘ಸಾಲ್ವೇಷನ್: ಬ್ಲ್ಯಾಕ್ ಪೀಪಲ್ ಆಂಡ್ ಲವ್’ ಕೃತಿಯಲ್ಲಿನ ಕಪ್ಪು ಜನರ ಬದಲಿಗೆ ಅಸ್ಪಶ್ಯರು, ಬಿಳಿಯರು ಬದಲಿಗೆ ಮೇಲ್ಜಾತಿಗಳು ಎಂದು ಬದಲಿಸಿಕೊಂಡು ಓದಿದರೆ, ಬೆಲ್‌ಹುಕ್ಸ್ ಹೇಳುವ ಬಹಳಷ್ಟು ಒಳನೋಟಗಳು ಭಾರತದ ದಲಿತರ ಶೋಷಣೆಯ ನೆಲೆಯಲ್ಲಿಯೂ ಅನ್ವಯವಾಗುತ್ತವೆ. ಜನರಲ್ಲಿ ಪರಸ್ಪರ ಬಂಧುತ್ವ ಬೆಳೆಯದೆ ಸ್ವಾತಂತ್ರ್ಯ ಸಮಾನತೆಗೆ ಅರ್ಥವಿಲ್ಲ ಎಂದು ಹೇಳುವ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಾತಿಗೂ, ಕಪ್ಪು ಜನರಲ್ಲಿ ಗಾಢವಾದ ಪ್ರೀತಿ ಮೊಳೆಯದೆ ಬದಲಾವಣೆ ಸಾಧ್ಯವಿಲ್ಲ ಎಂದು ಹೇಳುವ ಬೆಲ್‌ಹುಕ್ಸ್ ಮಾತಿಗೂ ಸಾಮ್ಯವಿದೆ. ಈ ನೆಲೆಯಲ್ಲಿ ಬೆಲ್ ಹುಕ್ಸ್ ಚಿಂತನೆಗಳು ಡಾ.ಅಂಬೇಡ್ಕರ್ ಚಿಂತನೆಯ ವಿಸ್ತರಣೆಯಂತೆಯೂ ಕಾಣುತ್ತವೆ. ನಮ್ಮನ್ನು ಮನುಷ್ಯರಂತೆ ಪ್ರೀತಿಸದ ಸನಾತನ ಧರ್ಮದ ಕಾರಣಕ್ಕೆ ಬೌದ್ಧ ದಮ್ಮಕ್ಕೆ ಮತಾಂತರವಾದ ಬಗ್ಗೆ ಅಂಬೇಡ್ಕರ್ ಹೇಳುವಾಗ ಇಲ್ಲಿಯೂ ‘ಪ್ರೀತಿ’ ಹಂಬಲವೇ ಮುಖ್ಯವಾಗುತ್ತದೆ.

ನ್ಯೂಯಾರ್ಕ್‌ನ ರೌಟ್ಲೆಡ್ಜ್ ಪ್ರಕಾಶನ 2009ರಲ್ಲಿ ಪ್ರಕಟಿಸಿದ ‘ಕ್ರಿಟಿಕಲ್ ಪ್ರಸ್ಪೆಕ್ಟಿವ್ಸ್ ಆನ್ ಬೆಲ್ ಹುಕ್ಸ್’ ಎನ್ನುವ ವಿಮರ್ಶಾ ಕೃತಿಯನ್ನು ಮಾರಿಯ ಡೆಲ್ ಮತ್ತು ಜಾರ್ಜ್ ಆನ್ಸಿ ಎನ್ನುವವರು ಸಂಪಾದಿಸಿದ್ದಾರೆ. ಈ ಕೃತಿಯಲ್ಲಿ ಕಪ್ಪು ಮಕ್ಕಳು ಕಲಿಯುವ ಶಾಲೆಗಳ ಪಠ್ಯಕ್ರಮವನ್ನು (ಪೆಡಗಾಗಿ) ಬೆಲ್ ಹುಕ್ಸ್ ಹೇಗೆ ಪ್ರಭಾವಿಸಿದಳು ಎನ್ನುವ ವಿಶ್ಲೇಷಣೆಗಳಿವೆ. ಬೆಲ್‌ಹುಕ್ಸ್ ‘ಎಲ್ಲರಿಗಾಗಿ ಸ್ತ್ರೀವಾದ’ ಎಂದು ಬರೆದಳು, ಅಂತೆಯೇ ತನ್ನ ಬರಹ ಮತ್ತು ಹೊಸ ಆಲೋಚನೆಗಳ ಮೂಲಕ ‘ಎಲ್ಲರಿಗಾಗಿ ಬೆಲ್‌ಹುಕ್ಸ್ ಸ್ತ್ರೀವಾದ’ ಎನ್ನುವ ಹಂತಕ್ಕೆ ಹೇಗೆ ಏರಿದಳು ಮತ್ತು ಜಾಗತಿಕ ಸ್ತ್ರೀವಾದಿ ಚಿಂತನೆಯ ಕಣ್ಣೋಟವನ್ನು ಬದಲಿಸಿದವಳು ಎಂದು ವಿಶ್ಲೇಷಿಸಲಾಗಿದೆ. ಈ ಕೃತಿ ಬೆಲ್‌ಹುಕ್ಸ್ ಗೆ ಸಲ್ಲಿಸಿದ ಅತ್ತುತ್ತಮ ಗೌರವವಾಗಿದೆ.

ಕನ್ನಡದ ಚಿಂತನ ಪರಂಪರೆ ಬೆಲ್‌ಹುಕ್ಸ್‌ಳಿಂದ ಕಲಿಯುವ ಮತ್ತೊಂದು ಸಂಗತಿ ಇದೆ. ಆಕೆ ತಾನು ಮಂಡಿಸುವ ಸ್ತ್ರೀವಾದಿ ಕಣ್ಣೋಟವನ್ನು ಎಳೆ ಮಕ್ಕಳ ಮನಸ್ಸಲ್ಲಿ ಬಿತ್ತುವ ಕನಸು ಕಟ್ಟುತ್ತಾಳೆ. ಹಾಗಾಗಿ ಮಕ್ಕಳಿಗಾಗಿ ಹ್ಯಾಪಿ ಟು ಬಿ ನ್ಯಾಪಿ(1999), ಬಿ ಬಾಯ್ ಬುಜ್(2002), ಹೋಮ್ ಮೇಡ್ ಲವ್(2002), ಸ್ಕಿನ್ ಅಗೇನ್ (2004) ಕೃತಿಗಳನ್ನು ಬರೆಯುತ್ತಾಳೆ. ಎಲ್ಲಾ ಮಕ್ಕಳಿಗೆ ಈ ಕೃತಿಗಳು ಸಿಗುವಂತೆ ಮಾಡುತ್ತಾಳೆ. ಮಕ್ಕಳ ಗಮನಸೆಳೆಯಲು ಬೆಲ್‌ಹುಕ್ಸ್ ಕುರಿತು ಕಾರ್ಟೂನ್ ವೀಡಿಯೊಗಳನ್ನು ಚಿತ್ರಿಸಲಾಗುತ್ತದೆ. ಕನ್ನಡದಲ್ಲಿ ಹಿರಿಯ ಚಿಂತಕರು ಮಕ್ಕಳಿಗಾಗಿ ಜನಪರವಾದ ಪುಸ್ತಕಗಳನ್ನು ಬರೆದದ್ದು ಕಡಿಮೆ. ಸ್ತ್ರೀವಾದಿ ಚಿಂತನೆಯಂತೂ ಪದವಿ ಹಂತದಲ್ಲಿ ಪರಿಚಯವಾಗುತ್ತದೆ. ಹಾಗಾಗಿ ಹೊಸ ಆಲೋಚನೆ ಮೊಳೆಯಬೇಕಿರುವುದು ಮಕ್ಕಳ ಮನಸ್ಸಲ್ಲಿ ಎನ್ನುವುದನ್ನು ಬೆಲ್‌ಹುಕ್ಸ್ ನಂಬಿದಂತೆ ಕಾಣುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ. ಅರುಣ್ ಜೋಳದಕೂಡ್ಲಿಗಿ

contributor

Similar News