ಭಾರತ-ಚೀನಾ ಯುದ್ಧದ ಬಗ್ಗೆ ಜನಪದ ಕವಿ ಲಾವಣಿ ಕಟ್ಟಿದ್ದೇಕೆ?

ಜನಪಠ್ಯವೊಂದು ದೇಶದ ಪರವಾದ ಪಠ್ಯವಾಗಿ ರೂಪಾಂತರವಾಗುವುದನ್ನು ಇಲ್ಲಿ ನೋಡಬಹುದು. ಮುಖ್ಯವಾಗಿ ಈ ಪದ ಯುದ್ಧಕ್ಕೆ ಹಣಕಾಸು ಹೊಂದಿಸಲು ಪ್ರಚಾರಕ್ಕೆ ಬಳಕೆಯಾದಂತೆ ಕಾಣುತ್ತದೆ. ಆದರೆ ಯುದ್ಧದ ಬಗೆಗೆ ಯಾವುದೇ ನೀತಿಯನ್ನಾಗಲಿ ನಿಲುವನ್ನಾಗಲಿ ತಾಳುವುದಿಲ್ಲ. ಬದಲಾಗಿ ದೇಶಕ್ಕಾಗಿ ಸ್ವಾರ್ಥದ ಗುಣ ಬಿಡಬೇಕು, ರಾಜ ಅಥವಾ ದೇಶ ಸುಖವಾಗಿದ್ದರೆ ನಂತರ ರೈತರು ಸುಖವಾಗಿರುತ್ತಾರೆ ಎನ್ನುವ ತತ್ವವನ್ನು ಹಾಡುತ್ತಾರೆ. ಕಷ್ಟ ಬಂದ ಮೇಲೆ ಸುಖ ಬರುತ್ತದೆ ಎನ್ನುವ ಒಂದು ಭರವಸೆಯನ್ನು ಈ ಪದ ಹೇಳುತ್ತದೆ.;

Update: 2025-02-18 12:36 IST
ಭಾರತ-ಚೀನಾ ಯುದ್ಧದ ಬಗ್ಗೆ ಜನಪದ ಕವಿ ಲಾವಣಿ ಕಟ್ಟಿದ್ದೇಕೆ?
  • whatsapp icon

ಸಾಮಾನ್ಯವಾಗಿ ಜನಪಠ್ಯಗಳು ಸ್ಥಳೀಯತೆಗೆ ಹೆಚ್ಚು ಹೊಂದಿಕೊಂಡಿರುತ್ತವೆ. ಆಯಾ ಭಾಗದ ಪಠ್ಯಗಳ ಭೌಗೋಳಿಕ ವಿವರಗಳನ್ನು ಆಧರಿಸಿ ಮ್ಯಾಪಿಂಗ್ ಮಾಡಿದರೆ ಇದನ್ನು ಸ್ಪಷ್ಟವಾಗಿ ಗುರುತಿಸಬಹುದು. ಪ್ರಾದೇಶಿಕವಾದ ಸ್ಥಳ, ವ್ಯಕ್ತಿ, ಘಟನೆಗಳನ್ನು ಒಳಗೊಂಡಂತೆ ಪದ ಐತಿಹ್ಯ ಮೌಖಿಕ ರಚನೆಗಳಿರುವುದು ಹೆಚ್ಚು. ದಾಸಪರಂಪರೆಯ ಅಂಚಿನಲ್ಲಿ ಜನಪದ ಕವಿಗಳು ತಮ್ಮ ಗುರುತುಗಳನ್ನು ದಾಖಲಿಸಿ ಪದ ಕಟ್ಟಲು ಶುರುಮಾಡಿದಂತೆ ಕಾಣುತ್ತದೆ. ಅದು ಮುಂದುವರಿದು ತತ್ವಪದಕಾರರಲ್ಲಿ ಇನ್ನಷ್ಟು ಸ್ಪಷ್ಟವಾಯಿತು. ಬ್ರಿಟಿಷರ ಆಡಳಿತದ ಸಂದರ್ಭದಲ್ಲಿ ಇಡೀ ದೇಶವೇ ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಅಣಿಯಾದಾಗ ಜನಪದ ಕಾವ್ಯದಲ್ಲಿ ಬ್ರಿಟಿಷ್ ವಿರೋಧಿ ಪ್ರತಿರೋಧದ ಪಠ್ಯಗಳು ಹುಟ್ಟತೊಡಗಿದವು. ಇಂತಹ ಸಂದರ್ಭದಲ್ಲಿ ವೈಯಕ್ತಿಕ ಅಸ್ಮಿತೆ ದೇಶಭಕ್ತಿಯ ಜತೆ ತಳಕು ಹಾಕಿಕೊಳ್ಳುವ ಕಾರಣಕ್ಕೂ ಪದಕಟ್ಟಿದವರು ತಮ್ಮ ಹೆಸರಿನ ಮುದ್ರೆ ಹಾಕತೊಡಗಿದರು. ಅಂತೆಯೇ ಪರಂಪರೆಯಿಂದ ಬಂದ ಸಾಮೂಹಿಕ ರಚನೆಯ ಮಾದರಿಯೂ ಹೋರಾಟಗಾರರ ಗೌಪ್ಯತೆ ಕಾಪಾಡಲು ನೆರವಾಯಿತು. ಹೀಗಾಗಿ ವೈಯಕ್ತಿಕ ಅಸ್ಮಿತೆಯ ಗುರುತು ಮತ್ತು ತೆರೆಮರೆಯ ಹೋರಾಟದ ಸಾಮೂಹಿಕತೆ ಎರಡೂ ಜತೆ ಜತೆಗೆ ಸಾಗಿದಂತೆ ಕಾಣುತ್ತದೆ.

ಹೀಗೆ ತನ್ನ ಕಾಲದ ವಿದ್ಯಮಾನಗಳ ಬಗ್ಗೆ ಪದ ಕಟ್ಟಿ ಅದಕ್ಕೆ ಮುದ್ರೆ ಒತ್ತುವ ಪರಂಪರೆ ದೊಡ್ಡದಾಗಿ ಚಾಲ್ತಿಗೆ ಬಂದಾಗ ಜನಪದ ಕವಿಗಳಿಗೆ ತನ್ನ ಕಾಲಬುಡದಲ್ಲಿ ಘಟಿಸುವ ಘಟನೆಗಳಿಗೆ ಸಾಕ್ಷಿಯಾದಂತೆ ಲೋಕದ ವಿದ್ಯಮಾನಗಳನ್ನು ರೇಡಿಯೊ ಮತ್ತು ಪತ್ರಿಕೆಗಳಲ್ಲಿ ತಿಳಿದು ಹಳ್ಳಿ ಜನರಿಗೆ ಮನವರಿಕೆ ಮಾಡುವ ಪದಗಳನ್ನೂ ಕಟ್ಟತೊಡಗಿದರು. ಹೀಗೆ ಕಟ್ಟಿದ ಒಂದು ಪದ ‘ಚೀನಾ ಯುದ್ಧದ ಪದ’.

ಭಾರತ ಚೀನಾ ಗಡಿ ವಿವಾದ ಇಂದು ನಿನ್ನೆಯದಲ್ಲ. 19ನೇ ಶತಮಾನದ ಆರಂಭದಿಂದಲೂ ಶುರುವಾಗಿದೆ. 1914 ಸಿಮ್ಲಾ ಒಪ್ಪಂದ, 1962ರಲ್ಲಿ ಸಿನೋ- ಇಂಡಿಯನ್ ಯುದ್ಧವನ್ನು ಒಳಗೊಂಡಂತೆ ಈ ತನಕವೂ ಮುಂದುವರಿದಿದೆ. ಭಾರತ ಮತ್ತು ಚೀನಾದ ನಡುವೆ 1962ರಲ್ಲಿ ಒಂದು ಗಡಿಯುದ್ಧ ನಡೆಯುತ್ತದೆ. 1959ರ ಟಿಬೆಟ್ ದಂಗೆಯ ನಂತರ ಭಾರತವು ದಲೈಲಾಮ ಅವರಿಗೆ ಆಶ್ರಯ ನೀಡಿತ್ತು. ಇದರಿಂದಾಗಿ ಚೀನಾವು ಅಕ್ಸಾಯ್ ಚಿನ್ ಮತ್ತು ಅರುಣಾಚಲ ಪ್ರದೇಶದ ಗಡಿ ಪ್ರದೇಶಗಳ ಸಾರ್ವಭೌಮತ್ವದ ಮೇಲಿನ ವಿವಾದಕ್ಕಾಗಿ ಈ ಯುದ್ಧ ನಡೆಸಿತು. ಈ ಯುದ್ಧ ಭಾರತಕ್ಕೆ ಸಂಕಷ್ಟ ತಂದಿತ್ತು. ಸೋಲಿನ ಅಂಚಿಗೂ ಹೋಗಿತ್ತು. ಕಡೆಯದಾಗಿ ಚೀನಿಯರು ತಾವಾಗಿಯೇ ಯುದ್ಧ ವಿರಾಮ ಘೋಷಿಸಿದರು. ಆಗ ಭಾರತದ ಪ್ರಧಾನಿ ಜವಹರಲಾಲ್ ನೆಹರೂ ಇದ್ದರೆ, ಮಾವೊ ಝೆಡಾಂಗ್ ಚೀನಾದ ಅಧ್ಯಕ್ಷರಾಗಿದ್ದರು. ಎರಡೂ ಕಡೆಯೂ ಸಾವಿರಾರು ಸಾವು ನೋವುಗಳು ಸಂಭವಿಸಿದವು. ಈ ಸಂದರ್ಭ ವನ್ನು ಪ್ರಧಾನಿ ನೆಹರೂ ಬಹಳ ಸಮರ್ಥವಾಗಿ ನಿಭಾಯಿಸಿದ್ದರು.

‘ಚೀನಾ ಯುದ್ಧದ ಪದ’ವು 1962ರಲ್ಲಿ ಭಾರತ-ಚೀನಾ ಯುದ್ಧ ನಡೆಯುತ್ತಿರುವಾಗಲೇ ರಚಿತವಾಗಿರುವ ಮೌಖಿಕ ಚರಿತ್ರೆಯ ಪಠ್ಯವಾಗಿದೆ. ಬಿಜಾಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಬೀಬೀ ಇಂಗಳಗಿ ಪರಿಸರದ ಕೋರಳ್ಳಿಯ ಜನಪದ ಕವಿ ಸಿದರಾಯ ಈ ಪದ ಕಟ್ಟಿದ್ದಾನೆ. ಜತೆಗಾರ ಮೌಲಾಲಿ ಜತೆ ಪದವನ್ನು ಹಳ್ಳಿ ಹಳ್ಳಿಗಳಲ್ಲಿ ಹಾಡಿ ಯುದ್ಧದ ಬಗ್ಗೆ ಜನರಿಗೆ ತಿಳಿಸಿದ್ದಾರೆ. ಪದದ ಆರಂಭಕ್ಕೆ ಹಾಡಿನ ಮೀಮಾಂಸೆಯಲ್ಲಿ ಈ ಪದದಲ್ಲಿ ಕಟ್ಟಿಕೊಡುತ್ತಾರೆ..

ಆಡುನ ಬಾರವ್ವಾ ಅನುಭವದಾಟ|

ನೆಂಬಿಗಿ ಎಂಬುವ ತಂಬೂರಿ ಹಿಡಿಯ|

ಚ್ಯಾಲ ಎಂಬುದು ಕೋಲ ಜಡಿಯ

ಶಾಂತ ಗುಣಾ ಎಂಬುವ ತಂತಿಯ ಬಿಗಿಯ|

ಆಡುನ ಬಾರವ್ವಾ ಅನುಭವದಾಟ|

ಧರ‌್ಮ ಎಂಬುವದು ದಮಡಿಯ ಬಡಿಯ

ಕರ್ಮ ಎಂಬುವದು ಕೈತಾಳ ಹಿಡಿಯ

ಪರಮಾನಂದ ಎಂಬುವ ಪದಗಳ ಕಲಿಯ

ಆಡುನ ಬಾರವ್ವಾ ಅನುಭವದಾಟ|

ಅನುಭವ ಪ್ರಧಾನವಾದ ಪದ ಹಾಡೋಣ ಎನ್ನುತ್ತಾ ನಂಬಿಕೆ, ಶಾಂತತೆ, ಧರ್ಮ, ಕರ್ಮವನ್ನೇ ಹಾಡಿಕೆ ಪರಿಕರಗಳ ಜತೆ ಜೋಡಿಸುತ್ತಲೇ ಪದಕಾರ ಪದಮೀಮಾಂಸೆಯನ್ನು ಕಟ್ಟುತ್ತಾನೆ.

ಚಂದ್ರಲೋಕದಂಗ ಸುಂದರ ನಮ್ಮ ಹಿಂದುಸ್ಥಾನಕ

ತೊಂದರಿ ಬಂದು ಹತ್ತಿತಪಾ ಬಾಳ ದುಸ್ತಾರಾ|

ಕುಂತ ಕೇಳರಿ ಹೇಳೀನಿ ಎಲ್ಲಾ ವಿಸ್ತಾರಾ|

ಹೌದು ಎಲ್ಲಾ ವಿಸ್ತಾರಾ|

1962ರ ಸಂದರ್ಭದಲ್ಲಿ ಭಾರತ ಜನಪದ ಕವಿಗಳಿಗೆ ‘ಹಿಂದುಸ್ಥಾನ’ವಾಗಿತ್ತು. ‘ಹಿಂದುಸ್ಥಾನಕ್ಕೆ ತೊಂದರಿ ಹತ್ತಿತಪಾ’ ಎನ್ನುವ ಆತಂಕವನ್ನು ಕತೆ ಮಾಡಿ ಹೇಳುವ ವಾಗ್ದಾನವನ್ನು ಪದದ ಆರಂಭಕ್ಕೆ ಕವಿ ಹೇಳುತ್ತಾನೆ. ಕವಿ ಹಾಡಿಕೆಯಲ್ಲಿ ಮಹಾಭಾರತದ ರೂಪಕಗಳಲ್ಲಿ ವಿವರಿಸಿಕೊಳ್ಳುವುದನ್ನು ನೋಡಬಹುದು. ದೇಶದ ವಿರುದ್ಧ ಯುದ್ಧ ಸಾರಿದ ಚೀನಾ ಪದದಲ್ಲಿ ‘ಬಕಾಸುರ’ನಾಗಿ ಕಾಣುತ್ತದೆ. ಅಂತೆಯೇ ಆಗಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರು ‘ಬಕಾಸುರನ ಕೊಲ್ಲುವಂತಾ ಬಾದ್ದೂರ ನಮ್ಮ ಭೀಮನ ಅವತಾರ ಪಂಡಿತ ನೆಹರೂ ಬಿರದು ಅವರಿಗಿ ಪಡದ ಬಂದೈತಿ|’ ಎನ್ನುತ್ತಾರೆ. ಪದದ ಆರಂಭಕ್ಕೆ ‘ನಮ್ಮ ನೆಹರೂ ಪಂಡಿತರಿದ್ದರು ಸೂರ‌್ಯ ಚಂದರಾ’ ಎನ್ನುತ್ತಾ ನೆಹರೂ ಅವರನ್ನು ನಿಸರ್ಗಾರಾಧನೆಯ ಸೂರ್ಯ ಚಂದ್ರರಿಗೆ ಹೋಲಿಸಿದರೆ, ಯುದ್ಧದ ಪರಿಭಾಷೆಯಲ್ಲಿ ಅದೇ ಪ್ರಧಾನಿ ನೆಹರೂ ಭೀಮನ ಅವತಾರವಾಗಿ ಕಾಣುತ್ತಾರೆ.

ಜನಪದ ಕವಿಯೊಬ್ಬ ಅಂತರ್‌ರಾಷ್ಟ್ರೀಯ ಸಂಬಂಧಗಳನ್ನು ಜನರಿಗೆ ಮನವರಿಕೆ ಮಾಡುವುದು ವಿಶೇಷವಾಗಿದೆ.

ಜರ‌್ಮನ್ ಜಪಾನ ತುರತಕ ಬಂಗಾಲ ಭಾರತಕ

ಬ್ರಿಟನ್ ನಡಬರಕ ಅಮೆರಿಕ ಸರಕ ॥ ಜೀಜೀ ॥

ನಮ್ಮ ದೇಶಕಾ ಉರಿ ತೊಟ್ಟು ನಿಂತಾರೊ ತರತಕ

ಹೌದು ತೊಟ್ಟ ನಿಂತಾರೊ ತರತಕ | ॥ ಜೀಜೀ ॥

ಇಲ್ಲಿ ಜನಪದ ಕವಿ ಚೀನಾ ಯುದ್ಧದ ಪದವನ್ನು ಕಟ್ಟಿದ್ದೇಕೆ ಎನ್ನುವ ಪ್ರಶ್ನೆ ಮುನ್ನ್ನೆಲೆಗೆ ಬರುತ್ತದೆ. ಈ ದೀರ್ಘವಾದ ಲಾವಣಿಯಲ್ಲಿ ಭಾರತದ ಅಂದಿನ ಸದ್ಯದ ಸ್ಥಿತಿಯನ್ನು ಮನಮುಟ್ಟುವಂತೆಯೂ, ಕಣ್ಣಿಗೆ ಕಟ್ಟುವಂತೆಯೂ ನಿರೂಪಿಸುತ್ತಲೇ ದೇಶಕ್ಕೆ ಈಗ ಹಣದ ಅವಶ್ಯಕತೆ ಬಿದ್ದಿದೆ. ಮದ್ದು ಗುಂಡು ತರಿಸಲು ದೇಶದ ಸರಕಾರಕ್ಕೆ ಹಣ ಬೇಕಾಗಿದೆ. ಹಾಗಾಗಿ ನಿಮ್ಮ ನಿಮ್ಮ ಬಳಿ ಇರುವ ಹಣವನ್ನೂ, ಬಂಗಾರವನ್ನೂ ದೇಶಕ್ಕಾಗಿ ದಾನ ಮಾಡಿ ಎಂದು ಜನಪದ ಕವಿ ದೇಶದ ಪರವಾಗಿ ಜನತೆಯನ್ನು ಮನವಿ ಮಾಡುತ್ತಿದ್ದಾನೆ.

ಯುದ್ಧ ನಿಧಿ ಕೊಡ್ರಿ ಅಂತಾ ಕಾಲಬಿದ್ದು ಹೇಳೀನಿ

ಜಾಲದಲ್ಲಿ ಬಿದ್ದದ ನಮ್ಮ ದೇಶ ಬೈಲಿಗಿ

ಯಾವ ತರಹದು ಮಾಡಬ್ಯಾಡರಿ ಏನು ತಕರಾರ

ಬಲ್ಲವರಿಗಿ ಬಾಗಿ ನಾನು ಮಾಡುವೆನು ನಮಸ್ಕಾರ

ಜನಪದ ಕವಿ ದೇಶದ ಪರವಾಗಿ ದೇಶಕ್ಕೆ ಸಹಾಯವಾಗಲು ನಿಧಿ ಸಂಗ್ರಹ ಮಾಡುವುದನ್ನು ಗಮನಿಸಬಹುದು. ಅಂತೆಯೇ ಯಾರುಯಾರು ಹೇಗೆ ಯುದ್ಧಕ್ಕೆ ತಮ್ಮ ತಮ್ಮ ಹಣ ಮತ್ತು ಬಂಗಾರದ ವಂತಿಕೆಯನ್ನು ಕೊಟ್ಟರು ಎನ್ನುವುದನ್ನೂ ಸಹ ಕವಿ ವರ್ಣನೆ ಮಾಡಿ ಹೇಳಿದ್ದಾನೆ.

ದೂರ ಕುತ್ತ ಕೇಳತೀರಿ ಯಾರ ಸುದ್ದಿ ಯಾರಿಗೇನ|

ಮೀರಿ ಬಂದದ ನಮ್ಮ ದೇಶದ ಹೆಸರ ಆಗರಿ ಮಿಗಿಲಾನಾ

ಎಷ್ಟೋ ಮಂದಿ ಕೊಟ್ಟ ಕೀರ್ತಿ ಪಡದಾರಾ|

ಒಬ್ಬ ಅಡವಿ ಮನುಷ್ಯಾನ ಮಾಣಿಯವಾ ಕೊಟ್ಟ ಸಾವಿರಾ|

ಮುರಾರಜಿ ದೇಸಾಯಿವರ ತೂಕ ತೂಗಿ ಕೊಟ್ಟಾರ

ಎಲ್ಲಾ ಜಿಲ್ಲಾದಗ ನೋಡರಿ ವಿಜಾಪುರ ಜಿಲ್ಲಾ ಮೇಲಾ

ನಿಜಲಿಂಗಪ್ಪನವರ ಮಂತ್ರಿಯವರ ತೂಕದ ಬಂಗಾರಾ |

ಕೊಟ್ಟಿದ್ದು ನೋಡು ಎಲ್ಲಾರು ಕಣ್ಣಾರಾ

ನೀವು ನೋಡಿರಿ ಕಣ್ಣಾರಾ

ವಿದ್ಯಾ ಕಲಿಯುವ ವಿದ್ಯಾರ್ಥಿಗಳು ಸದ್ಯ ನಮ್ಮ ಹಾಯಸ್ಕೂಲದಲ್ಲಿ

ಮುದ್ದಾತ ಮಾಡಿ ಹಣ ಕೊಟ್ಟರೊ ಒಂದನೆ ನಂಬರಾ

ತಮ್ಮ ತಾಯಿ ತಂದಿಗಿ ಹೇಳತಾರ

ಕೊಡರಿ ಮನ್ಯಾನ ಬಂಗಾರಾ

ಇಲ್ಲದಿದ್ದರ ನಾವು ಮಿಲಟರಿಗಿ ಹೋಗ್ತಿವಿ ಅಂತಾರ

ಅಂತಿಂತಾ ಹುಡುಗರೆಲ್ಲಾ ಹುರುಪು ತೊಟ್ಟು ನಿಂತಾರಪ್ಪಾ

ದೊಂತ ಮಂದಿಗೆ ತಿಳಿಸಿ ಹೇಳರಿ ಬರಲಿ ವಿಚಾರಾ

ಅದಕ ಮೀರಿದರ ಬರತದ ನಮ್ಮ ಸರಕಾರಾ | ಹೌದು ನಮ್ಮ ಸರಕಾರಾ|

ದೂರ ಕುಂತ ಕೇಳತಿರಿ ಯಾರ ಸುದ್ದಿ ಯಾರಿಗೇನು

ಮೀರಿ ಬಂದುದ ನಮ್ಮ ದೇಶದ ಆಗಲೇ ಹೆಸರ

ಎಷ್ಟೋ ಮಂದಿ ಹೆಣ್ಮಕ್ಕಳು ಉಚ್ಚಿ ಕೊಟ್ಟರೆ ಕೊರಳಾನ ಬಂಗಾರ| ॥ ಜೀಜೀ ॥

ಹೀಗೆ ಯುದ್ಧಕ್ಕೆ ಯಾರು ಯಾರು ಧನ ಸಹಾಯ ಮಾಡಿದ್ದಾರೆ. ಯಾರು ಬಂಗಾರ ಕೊಟ್ಟಿದ್ದಾರೆ ಎನ್ನುವ ಪಟ್ಟಿಯನ್ನು ಹಾಡಿನಲ್ಲಿ ಹಾಡುತ್ತಾ, ಕೊನೆಗೆ ಎಷ್ಟೋ ಹೆಣ್ಣುಮಕ್ಕಳು ತಮ್ಮ ಒಡವೆಗಳನ್ನೇ ಬಿಚ್ಚಿ ಕೊಡುತ್ತಾರೆ ಎಂದು ಹೇಳುತ್ತಾನೆ. ಜನಪದ ಪಠ್ಯಗಳಲ್ಲಿ ಈ ಒಂದು ತಂತ್ರ ಹಲವು ಪ್ರಕಾರಗಳಲ್ಲಿದೆ. ದುರುಗಮುರುಗಿಯರು ದುರುಗಿಯ ಬುಟ್ಟಿ ಹಿಡಿದು ಭಿಕ್ಷಕ್ಕೆ ಬಂದಾಗ ಗಂಡ ಯಾವ ಯಾವ ಊರಿನ ಗೌಡ ಜಮೀನ್ದಾರ ಏನೇನು ಕೊಡುಗೆ ಕೊಟ್ಟಾರ ಎಂದು ಕೊಡುಗೆಯ ಸಾಮಾನುಗಳನ್ನು ವರ್ಣಿಸುತ್ತಾನೆ. ಆಗ ಅದೆಲ್ಲ ಸುಳ್ಳು ಎಂದು ಆತನ ಹೆಂಡತಿ ಯಾರೂ ಕೊಟ್ಟಿಲ್ಲ ಎಲ್ಲವನ್ನು ತಾನೇ ತಂದಾನ ಎನ್ನುವ ಸತ್ಯವನ್ನು ಜನರ ಎದುರೇ ಬಹಿರಂಗ ಪಡಿಸುತ್ತಾಳೆ. ಆದರೆ ಉರುಮೆಯ ನಾದದ ಜತೆ ‘ತಾನಾ ತಂದಾನ’ ಎಂದು ರಾಗಬದ್ಧವಾಗಿ ಹೇಳುವಾಗ ಅದೊಂದು ಪದ ಇರಬೇಕೆಂದು ಜನರು ಇದನ್ನು ಗಮನಿಸುವುದಿಲ್ಲ. ಅಂತೆಯೇ ಬುಡುಗ ಜಂಗಾಲು ಸಮುದಾಯದ ಹಗಲು ವೇಷಗಾರರು ವಾರ ಪೂರ್ತಿ ವೇಷ ಹಾಕಿ, ವಾರದ ಕೊನೆಯಲ್ಲಿ ಊರವರ ವಂತಿಗೆ ಎತ್ತಲು ತೊಡಗುತ್ತಾರೆ. ಆಗ ಬೇರೆ ಬೇರೆ ಊರಿನವರು ಎಷ್ಟು ವಂತಿಗೆ ಕೊಟ್ಟರೆಂದು ಕತೆ ಕಟ್ಟಿ ವರ್ಣನೆ ಮಾಡಿ ಹೇಳುತ್ತಾರೆ. ಅಂತೆಯೇ ಅದೇ ಊರಲ್ಲಿ ಯಾರು ಯಾರು ಎಷ್ಟು ಕೊಟ್ಟರು ಎಂದು ಹೇಳುತ್ತಾ, ವಂತಿಗೆ ಕೊಡುವವರಲ್ಲಿ ಸ್ಪರ್ಧೆಯನ್ನು ಏರ್ಪಡಿಸುವ ತಂತ್ರವನ್ನು ಹೆಣೆಯುತ್ತಾರೆ. ಹೀಗೆ ಜನರಿಂದ ವಂತಿಗೆ ಸಂಗ್ರಹಿಸುವ ದೇಸಿ ತಂತ್ರವನ್ನು ದೇಶ ಬಿಕ್ಕಟ್ಟಿನಲ್ಲಿ ಸಿಲುಕಿದಾಗ ದೇಶಕ್ಕಾಗಿ ಜನರು ವಂತಿಗೆ ಕೊಡುವಂತೆ ಪ್ರೇರೇಪಿಸಲು ಬಳಸಿರುವುದನ್ನು ನೋಡಬಹುದು.

ಭಾರತದ ಜನಪದ ಪರಂಪರೆಯಲ್ಲಿ ಯಾವುದೇ ವರ್ತಮಾನದ ವಿದ್ಯಮಾನಗಳನ್ನು ಪರಂಪರೆಯ ಜತೆ ಹೋಲಿಸು ವಾಗ ರಾಮಾಯಣ-ಮಹಾಭಾರತದ ಘಟನೆ, ಪಾತ್ರ, ವಿವರಗಳು ನುಗ್ಗಿ ಬರುತ್ತವೆ. ಈ ಮೂಲಕವೂ ರಾಮಾಯಣ- ಮಹಾಭಾರತ ಪಠ್ಯಗಳು ವ್ಯಾಸ, ವಾಲ್ಮೀಕಿಗಿಂತ ಮುಂಚೆಯೇ ಜನಪಠ್ಯಗಳಾಗಿದ್ದವು ಎನ್ನುವುದನ್ನು ತೋರಿಸುತ್ತವೆ. ನಂತರ ವ್ಯಾಸ, ವಾಲ್ಮೀಕಿಯರು ಈ ಜನಪಠ್ಯಗಳನ್ನು ಆಯ್ದುಕೊಂಡು ಕಾವ್ಯರಚಿಸಿದ್ದಾರೆ. ಈ ಕುರಿತು ದೇವಿಪ್ರಸಾದ ಚಟ್ಟೋಪಾಧ್ಯಾಯ, ಡಿ.ಡಿ.ಕೋಸಂಬಿ, ಸಾಂಕಾಲಿಯ ಮೊದಲಾದವರು ಅಧ್ಯಯನಪೂರ್ಣ ಆಧಾರಗಳೊಂದಿಗೆ ಚರ್ಚಿಸಿದ್ದಾರೆ. ಚೀನಾದ ಯುದ್ಧದ ಪದದಲ್ಲಿಯೂ ಭಾರತ ಚೀನಾ ಯುದ್ಧವನ್ನು ರಾಮಾಯಣ ಮಹಾಭಾರತದ ಜತೆ ತಳಕು ಹಾಕುತ್ತಾರೆ.

ಮದಾಂಧ ಚೀನಾ ಮರ್ದನ ಮಾಡಿರಿ

ಭಪ್ಪರೆ ಭಾರತಾ ಪಾಂಡವತರೊಳು ಪರತಾ

ಸುಟ್ಟಂಗ ಲಂಕಾ ಮಾರುತಾ

ಸೇತುವೆ ಹಾಕಿ ಸಮುದ್ರಾಕ ಕಟ್ಟಿ

ಸೈನ್ಯ ಹೋಗಿ ಮಾಡೇದ ಲೂಟಿ

ಭಪ್ಪರೆ ಭಾರತ ಪಾಂಡವರೊಳೆ ಪರತಾ

ಸುಟ್ಟಂಗ ಲಂಕಾ ಮಾರುತಾ |

ಎಲ್ಲ ರಾಷ್ಟ್ರದ ಪ್ರೇಮ ಆದ ನಮ್ಮ ಮ್ಯಾಲಾ

ಭಯಾ ಸೇರಿ ಚೀನಿ ಯುದ್ಧ ವಿರಾಮಾ

ಯುದ್ಧದ ಮಾತ ಸದ್ಯ ಹೇಳತಾನ ಸಿದರಾಮಾ

ಬಪ್ಪರೆ ಭಾರತ ಪಾಂಡವರೊ ॥

ಹೀಗೆ ಜನಪಠ್ಯವೊಂದು ದೇಶದ ಪರವಾದ ಪಠ್ಯವಾಗಿ ರೂಪಾಂತರವಾಗುವುದನ್ನು ಇಲ್ಲಿ ನೋಡಬಹುದು. ಮುಖ್ಯವಾಗಿ ಈ ಪದ ಯುದ್ಧಕ್ಕೆ ಹಣಕಾಸು ಹೊಂದಿಸಲು ಪ್ರಚಾರಕ್ಕೆ ಬಳಕೆಯಾದಂತೆ ಕಾಣುತ್ತದೆ. ಆದರೆ ಯುದ್ಧದ ಬಗೆಗೆ ಯಾವುದೇ ನೀತಿಯನ್ನಾಗಲಿ ನಿಲುವನ್ನಾಗಲಿ ತಾಳುವುದಿಲ್ಲ. ಬದಲಾಗಿ ದೇಶಕ್ಕಾಗಿ ಸ್ವಾರ್ಥದ ಗುಣ ಬಿಡಬೇಕು, ರಾಜ ಅಥವಾ ದೇಶ ಸುಖವಾಗಿದ್ದರೆ ನಂತರ ರೈತರು ಸುಖವಾಗಿರುತ್ತಾರೆ ಎನ್ನುವ ತತ್ವವನ್ನು ಹಾಡುತ್ತಾರೆ. ಕಷ್ಟ ಬಂದ ಮೇಲೆ ಸುಖ ಬರುತ್ತದೆ ಎನ್ನುವ ಒಂದು ಭರವಸೆಯನ್ನು ಈ ಪದ ಹೇಳುತ್ತದೆ. ಹಿಂದುಸ್ಥಾನವನ್ನು ಜಾತಿ, ಮತ, ಧರ್ಮಗಳ ಆಚೆ ಒಗ್ಗೂಡಿಸುವ ಆಶಯ ಈ ಪದದಲ್ಲಿದೆ. ಆದರೆ ಇದನ್ನು ಮೀರಿ ಯುದ್ಧವನ್ನು ಅರ್ಥೈಸಲು ಜನಪದ ಕವಿ ಪ್ರಯತ್ನ ಪಟ್ಟಂತೆ ಕಾಣುವುದಿಲ್ಲ.

ಆಕರ: ಬೀಬಿ ಇಂಗಳಗಿ ಪರಿಸರದ ಗೀಗೀ ಪದಗಳು ಸಂಪುಟ-2

ಸಂ: ಡಾ.ಎಂ.ಜಿ.ಬಿರಾದಾರ, ಡಾ.ಬಿ.ಎಸ್.ಕೋಟ್ಯಾಳ

2014, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ. ಅರುಣ್ ಜೋಳದಕೂಡ್ಲಿಗಿ

contributor

Similar News