ಗಂಡನ್ನು ಕಿತ್ತೊಗೆದು ಹೆಣ್ಣಾಗಿಸುವ ‘ನಿರ್ವಾಣ’

ಲಿಂಗಾಂತರಿ (ಟ್ರಾನ್ಸ್ ಜೆಂಡರ್) ಸಮುದಾಯದಲ್ಲೂ ‘ನಿರ್ವಾಣ’ವು ಗಂಡಿನಿಂದ ಬಿಡುಗಡೆ ಹೊಂದುವ ಪ್ರಕ್ರಿಯೆಯ ಸೂಚಕ. ಲಿಂಗಾಂತರಿ ಮಹಿಳೆಯರ ಬದುಕಿನಲ್ಲಿ ‘ನಿರ್ವಾಣ’ ಹುಟ್ಟಿಸಿದ ಭಯ, ಆತಂಕ, ದುಗುಡವನ್ನು ಪದಗಳಲ್ಲಿ ಹಿಡಿದು ಹೇಳಲಾಗದು. 16ನೇ ಶತಮಾನದಿಂದ ನಿರ್ವಾಣಗಳು ನಡೆದಿವೆ ಎನ್ನುವ ಊಹೆಯನ್ನು ಹಿಜ್ರಾಗಳ ಕುರಿತ ಅಧ್ಯಯನಗಳಲ್ಲಿ ಉಲ್ಲೇಖವಾಗಿದೆ.;

Update: 2025-02-11 11:53 IST
ಗಂಡನ್ನು ಕಿತ್ತೊಗೆದು ಹೆಣ್ಣಾಗಿಸುವ ‘ನಿರ್ವಾಣ’
  • whatsapp icon

ಗಂಡಿನಿಂದ ಹೆಣ್ಣಾದ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಲಿಂಗಾಂತರಿ ಮಹಿಳೆಯರನ್ನು (ಟ್ರಾನ್ಸ್ ಜೆಂಡರ್ಸ್‌/ಟ್ರಾನ್ಸ್ ವುಮೆನ್) ಕಂಡಾಗ ಲೋಕದ ಕಣ್ಣಲ್ಲಿ ಗಂಡು ಬರಿ ಸೀರೆ ಉಟ್ಟಿದ್ದಾರಾ? ಪೂರ್ತಿ ಹೆಣ್ಣಾಗಿದ್ದಾರಾ? ಅದೇಗೆ ಹೆಣ್ಣಾದರು? ಮುಂತಾದ ತೀರದ ಕುತೂಹಲದ ಪ್ರಶ್ನೆಗಳು ಹುಟ್ಟುತ್ತವೆ. ಉತ್ತರದ ಹುಡುಕಾಟದಲ್ಲಿ ನಾನಾ ಬಗೆಯ ಊಹೆಗಳನ್ನೂ, ಗೂಗಲ್ ನೀಡಿದ ಮಾಹಿತಿಗಳನ್ನು ಪಡೆದು ಕುತೂಹಲವನ್ನು ತಣಿಸಿಕೊಳ್ಳುತ್ತಾರೆ. ಹೀಗೆ ಗಂಡನ್ನು ಹೆಣ್ಣಾಗಿಸುವ ನಿರ್ಣಾಯಕ ಘಟ್ಟವೇ ‘ನಿರ್ವಾಣ’. ಇದನ್ನೇ ವೈದ್ಯಕೀಯ ಪರಿಭಾಷೆಯಲ್ಲಿ ‘ಸೆಕ್ಸ್ ರಿ ಅರೇಂಜ್‌ಮೆಂಟ್ ಸರ್ಜರಿ’ ಎಂದು ಕರೆಯುತ್ತಾರೆ.

ನಿರ್ವಾಣ ಎಂದರೆ ಸ್ವಾತಂತ್ರ್ಯ ಎನ್ನುವ ಅರ್ಥವಿದೆ. ಅಂತೆಯೇ ಕನ್ನಡದಲ್ಲಿ ನಂದುವುದು, ಆರುವುದು, ಶಾಂತವಾಗು, ಶಾಂತತೆ ಎಂಬ ಅರ್ಥಗಳಿವೆ. ಅಂತೆಯೇ ಸಾವು, ಮರಣ ಎನ್ನುವುದೂ ಇದೆ. ಹಿಂದೂ ಧಾರ್ಮಿಕ ಗ್ರಂಥಗಳು ನಿರ್ವಾಣಕ್ಕೆ ಮುಕ್ತಿ, ಮೋಕ್ಷ ಎಂತಲೂ, ಸಾಮಾನ್ಯ ಅರ್ಥದಲ್ಲಿ ಪೂರ್ತಿ, ಅಂತ್ಯ, ಕೊನೆ ಎಂತಲೂ, ಜೈನ ಧರ್ಮದಲ್ಲಿ ಶೂನ್ಯ, ಬರಿದು, ಬತ್ತಲೆ, ದಿಗಂಬರತ್ವ ಎಂತಲೂ, ಬೌದ್ಧ ದಮ್ಮವು ನಿರ್ವಾಣವನ್ನು ರಾಗ, ದ್ವೇಷ, ಮೋಹದ ಬಿಡುಗಡೆ ಎಂತಲೂ ವ್ಯಾಖ್ಯಾನಿಸಿವೆ. ಲಿಂಗಾಂತರಿ (ಟ್ರಾನ್ಸ್ ಜೆಂಡರ್) ಸಮುದಾಯದಲ್ಲೂ ಇದು ಗಂಡಿನಿಂದ ಬಿಡುಗಡೆ ಹೊಂದುವ ಪ್ರಕ್ರಿಯೆಯ ಸೂಚಕ. ಲಿಂಗಾಂತರಿ ಮಹಿಳೆಯರ ಬದುಕಿನಲ್ಲಿ ‘ನಿರ್ವಾಣ’ ಹುಟ್ಟಿಸಿದ ಭಯ, ಆತಂಕ, ದುಗುಡವನ್ನು ಪದಗಳಲ್ಲಿ ಹಿಡಿದು ಹೇಳಲಾಗದು. 16ನೇ ಶತಮಾನದಿಂದ ನಿರ್ವಾಣಗಳು ನಡೆದಿವೆ ಎನ್ನುವ ಊಹೆಯನ್ನು ಹಿಜ್ರಾಗಳ ಕುರಿತ ಅಧ್ಯಯನಗಳಲ್ಲಿ ಉಲ್ಲೇಖವಾಗಿದೆ.

ಸರಳವಾಗಿ ಶಸ್ತ್ರಚಿಕಿತ್ಸೆಯ ಮೂಲಕ ಗಂಡಿನ ಶಿಶ್ನವನ್ನು ತೆಗೆದು ಹೆಣ್ಣಾಗಿಸುವ ಪ್ರಕ್ರಿಯೆಯೆ ನಿರ್ವಾಣ. ಮುಂಬೈನ ಹಿಜ್ರಾ ಪರಂಪರೆಯಲ್ಲಿ ‘ನಿರ್ವಾಣ’ ಪೂರ್ವದ ಪೊಟ್ಟೈಗಳು ನಿರ್ವಾಣದ ಖರ್ಚಿಗಾಗಿಯೇ ಭಿಕ್ಷೆ ಬೇಡುತ್ತಾರೆ. ಅಂತೆಯೇ ಘರಾನದ ನಾಯಕ್‌ಗಳು ನಿರ್ವಾಣಕ್ಕೆ ಖರ್ಚಾಗುವ ಹಣದ ಮೂರ್ನಾಲ್ಕುಪಟ್ಟು ಭಿಕ್ಷೆಯಿಂದ ಕೂಡಿಸಲು ಪೊಟ್ಟೈಗಳಿಗೆ ತಾಕೀತು ಮಾಡುತ್ತಾರೆ. ನಿರ್ವಾಣ ಹಿಜ್ರಾಗಳನ್ನು ಜೀತದಂತೆ ದುಡಿಸಿಕೊಳ್ಳಲು ಒಂದು ‘ಅಸ್ತ್ರ’ವಾಗಿತ್ತು. ಹಿಜ್ರಾ ಪರಂಪರೆಯಲ್ಲಿ ‘ಸಟ್ಲಾ’ ಎನ್ನುವುದು ನಿರ್ವಾಣಕ್ಕೆ ತಯಾರಾಗುವ ಪೂರ್ವಾವಧಿ. ಈ ಅವಧಿಯಲ್ಲಿ ಗಂಡು ಹೆಣ್ಣಿನಂತೆ ಜೀವಿಸಬೇಕಾಗುತ್ತದೆ. ಸಾಮಾನ್ಯವಾಗಿ ಸಟ್ಲಾದಲ್ಲಿರುವ ಹಿಜ್ರಾಗಳಿಗೆ ಮರ್ಯಾದೆ ಕಡಿಮೆ.

ಸಟ್ಲಾದಲ್ಲಿರುವ ಸಂದರ್ಭದಲ್ಲಿ ನಿರ್ವಾಣ ಮಾಡಿಸಿಕೊಂಡವರ ಅನುಭವಗಳನ್ನು ಕೇಳುತ್ತಾ, ನಿಧಾನಕ್ಕೆ ನಿರ್ವಾಣಕ್ಕೆ ಮಾನಸಿಕವಾಗಿ ಸಿದ್ಧಗೊಳ್ಳುತ್ತಿರುತ್ತಾರೆ. ಅಂತೆಯೇ ಸಾಮಾನ್ಯವಾಗಿ ಸಟ್ಲಾದಲ್ಲಿರುವವರು ಹಿಜ್ರಾ ಪರಂಪರೆಯ ಕಠಿಣ ಕಟ್ಟುಪಾಡುಗಳಿಗೆ ಹೊಂದಿಕೊಳ್ಳಬೇಕಾಗುತ್ತದೆ. ಈ ಸಂದರ್ಭದಲ್ಲಿ ಕೂದಲನ್ನು ಉದ್ದಕ್ಕೆ ಬೆಳೆಸುವುದು, ಎದೆ ಬೆಳೆಸಿಕೊಳ್ಳುವುದು, ಮಹಿಳೆಯರ ಉಡುಪು ಧರಿಸುವುದನ್ನು ಕಲಿಯುವುದು ಇತ್ಯಾದಿ. ಗುರುಗಳು ಚೇಲಾ ಮಾಡಿಕೊಳ್ಳುವ ಆಚರಣೆಯನ್ನು ‘ರೀತ್’ ಎನ್ನುತ್ತಾರೆ. ಈ ಸಂದರ್ಭದಲ್ಲಿ ಮದುವೆಯ ಎಲ್ಲಾ ಆಚರಣೆಗಳನ್ನು ಮಾಡಲಾಗುತ್ತದೆ. ಹೊಸಬರಿಗಿಂತ ಬೇರೊಬ್ಬರ ಚೇಲಾ ಆಗಿದ್ದವರನ್ನು, ಮತ್ತೊಬ್ಬ ಗುರು ತನ್ನ ಚೇಲಾ ಮಾಡಿಕೊಳ್ಳಲು ಹಲಬಗೆಯ ಕಟ್ಟುನಿಟ್ಟುಗಳಿವೆ.

ನಿರ್ವಾಣದ ಸಾಂಪ್ರದಾಯಿಕ ಪರಂಪರೆ ಭಯಭೀತವಾಗಿತ್ತು. ಹಿಜ್ರಾಗಳಲ್ಲಿ ಹಿರಿಯ ಗುರುವೊಬ್ಬರು ಶಸ್ತ್ರಚಿಕಿತ್ಸೆಯ ತರಬೇತಿ ಪಡೆದಿರುತ್ತಿದ್ದರು. ಇವರನ್ನು ದಾಯಮ್ಮ/ತಾಯಮ್ಮ ಎನ್ನುತ್ತಿದ್ದರು. ದಾಯಮ್ಮನ ಆಪರೇಷನ್ ಅಂದರೆ ದಾಯಮ್ಮನೇ ಕಾಡಿನ ಮಧ್ಯದಲ್ಲಿ ಶಿಶ್ನವನ್ನು ಕತ್ತರಿಸಿ ಗಿಡಮೂಲಿಕೆಗಳ ಔಷಧಿಯಿಂದ ಗಾಯವನ್ನು ಗುಣಪಡಿಸುತ್ತಿದ್ದಳು. ಸದ್ಯಕ್ಕೆ ದಾಯಮ್ಮನ ಆಪರೇಷನ್ ಪೂರ್ಣ ನಿಂತಿದೆ. ಇದೀಗ ಹಾರ್ಮೋನ್ಸ್ ಥೆರಪಿಯ ಪೂರ್ವ ತಯಾರಿಯೊಂದಿಗೆ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮೂಲಕ ನಿರ್ವಾಣ ಮಾಡಿಸಿಕೊಳ್ಳುತ್ತಾರೆ. ನಿರ್ವಾಣದ ಸಂದರ್ಭದಲ್ಲಿ ಗುಜರಾತಿನಲ್ಲಿ ಆರಾಧಿಸುವ ಬಹುಚರಾ ಮಾತಾಳನ್ನು ನೆನೆಯುತ್ತಾರೆ. ಬಹುಚರಾ ಮಾತೆ ಷಂಡನಾದ ತನ್ನ ಗಂಡನ ಶಿಶ್ನವನ್ನು ಕತ್ತರಿಸಿ ಹೆಣ್ಣಾಗಿಸಿದ ಕತೆಯಂತೆ ಈಕೆಯೇ ಮೊದಲ ಶಸ್ತ್ರಚಿಕಿತ್ಸೆ ಮಾಡಿದ ಹೆಣ್ಣು ಎಂದು ನಂಬುತ್ತಾರೆ.

ನಿರ್ವಾಣದ ಕುರಿತಾಗಿಯೇ ಹಿಜ್ರಾ ಪರಂಪರೆಯಲ್ಲಿ ಹಲಬಗೆಯ ನಂಬಿಕೆಗಳಿವೆ. ನಿರ್ವಾಣಕ್ಕೆ ಹೋಗುವಾಗ ಹಾಕುವ ಬಟ್ಟೆಗಳನ್ನು ಮತ್ತೆ ತೊಡುವಂತಿಲ್ಲ. ಹಾಗೆ ನೋಡಿದರೆ ಮದುವೆಯ ಮದುಮಕ್ಕಳ ಅರಿಶಿಣ ಶಾಸ್ತ್ರಕ್ಕೆ ಒಳಗಾದ ಬಟ್ಟೆಯನ್ನೂ, ಹುಡುಗಿ ಮೈನೆರೆದಾಗ (ಋತುಮತಿ) ಉಟ್ಟ ಬಟ್ಟೆಯನ್ನೂ, ತಾಯಿ ಹೆರಿಗೆಯಾದಾಗ ತೊಟ್ಟ ಬಟ್ಟೆಯನ್ನು ಮತ್ತೆ ತೊಡುವಂತಿಲ್ಲ. ಅಂದರೆ ದೇಹದ ಮೇಲಿನ ಬಟ್ಟೆಗಳನ್ನು ಬಿಡುವುದಕ್ಕೂ ಫಲವಂತಿಕೆಗೂ ಸಂಬಂಧವಿದ್ದಂತಿದೆ. ಇದು ದೇಹದ ಒಂದು ಸ್ಥಿತಿಯಿಂದ ಮತ್ತೊಂದು ಸ್ಥಿತಿಗೆ ಮರಳುವ ಸಂಕೇತಿಕತೆ. ಹೀಗಾಗಿ ನಿರ್ವಾಣವೂ ಕೂಡ ಜೈವಿಕವಾಗಿ ದೇಹದೊಳಗಣ ಹೆಣ್ಣಾಗಿರುವವ, ಶಸ್ತ್ರಚಿಕಿತ್ಸೆಯ ಮೂಲಕ ಸಂಪೂರ್ಣ ಹೆಣ್ಣೇ ಆಗುವ ಪ್ರಕ್ರಿಯೆಯಾಗಿದೆ.

ನಿರ್ವಾಣಕ್ಕೆ ಹೋಗುವಾಗ ಮುರಘ ಮಾತಾ/ಸಂತೋಷಿ ಮಾತಾ ಚಿತ್ರವನ್ನು ನೋಡುತ್ತಾರೆ. ಅಂತೆಯೇ ನಿರ್ವಾಣ ಮುಗಿವ ತನಕ ‘ಮಾತಾ ಮಾತಾ ಮಾತಾ’ ಎಂದು ಮಂತ್ರ ಪಠಿಸುತ್ತಾರೆ. ಹೀಗೆ ಮಾತಾಳನ್ನು ನೆನೆಯುವುದರಿಂದ ನಿರ್ವಾಣ ಸುಸೂತ್ರವಾಗುತ್ತದೆ ಎಂದು ನಂಬುತ್ತಾರೆ. ಕರ್ನಾಟಕದಲ್ಲಿ ಜೋಗತಿಯರು ನಿರ್ವಾಣ (ಆಪರೇಷನ್) ಮಾಡಿಸಿಕೊಂಡರೆ, ಮತ್ತೊಮ್ಮೆ ಮುತ್ತು ಕಟ್ಟಿಸುತ್ತಾರೆ. ಹಿಜ್ರಾ ಪರಂಪರೆಯಲ್ಲಿ ನಿರ್ವಾಣ ಮಾಡಿಸಿಕೊಂಡು ನಾನಿಯರ ಮನೆಗೆ ಹೋದಾಗ ತೆಂಗಿನ ಕಾಯಿ ಮೇಲೆ ಕರ್ಪೂರ ಬೆಳಗಿ, ಆರತಿ ಮಾಡಿ ಬನ್ನಿ ಹೆಣ್ಮಗಳೇ ಎಂದು ಬರಮಾಡಿಕೊಳ್ಳುತ್ತಾರೆ.

ಆಪರೇಷನ್ ಆಗಿ 45 ದಿನಗಳವರೆಗೆ ಆಹಾರದ ಕಟ್ಟುಪಾಡು ಗಳಿರುತ್ತವೆ. ಹಾಲು ಮತ್ತು ಹಣ್ಣುಗಳನ್ನು ದೂರವಿಡಬೇಕು. ಚಪಾತಿ, ಹಾಗಲಕಾಯಿ ಪಲ್ಯ, ಮಟನ್ ಸೂಪು, ತಲೆಮಾಂಸವನ್ನು ಹೆಚ್ಚು ತೆಗೆದುಕೊಳ್ಳಬೇಕಾಗುತ್ತದೆ. ಇದನ್ನೆಲ್ಲಾ ಗುರು ಅಥವಾ ನಾನಿ ಈಡೇರಿಸುತ್ತಾರೆ. ಈ ಸಂದರ್ಭದಲ್ಲಿ ಕನ್ನಡಿಯಲ್ಲಿ ಮುಖ ನೋಡಿಕೊಳ್ಳುವಂತಿಲ್ಲ. ಗಂಡಸರನ್ನು ನೋಡುವಂತಿಲ್ಲ, ತಲೆ ಬಾಚುವಂತಿಲ್ಲ, ಹಿರಿಯರಿಗೆ ಈ ಸಂದರ್ಭದಲ್ಲಿ ಪಾಮ್ ಪಡುತಿ ಮಾಡುವಂತಿಲ್ಲ ಎನ್ನುವ ನಿಯಮಗಳನ್ನು ನಿರ್ವಾಣಕ್ಕೆ ಒಳಗಾದವರು ಅನುಸರಿಸಬೇಕಾಗುತ್ತದೆ. 12 ಮತ್ತು 20ನೇ ದಿನ ಅಕ್ಕಪಕ್ಕದ ಹಿಜ್ರಾಗಳನ್ನು ತಲೆಗೆ ನೀರು ಹಾಕಲು ಕರೆಯುತ್ತಾರೆ. ಆಗ ಹಿರಿಯರು ಮೈಗೆಲ್ಲಾ ಅರಿಷಿಣ ಹಚ್ಚಿ, ಆರತಿ ಮಾಡಿ ನಿರ್ವಾಣವಾದವರ ಬಾಯಿಗೆ ಸಕ್ಕರೆ ಹಾಕಲಾಗುತ್ತದೆ. ಇವರನ್ನು ನೋಡಲು ಬರುವ ಹಿಜ್ರಾಗಳು ಗೋಧಿ, ಸಕ್ಕರೆ, ತುಪ್ಪ, ಟೀ ಸೊಪ್ಪನ್ನು ಉಡುಗೊರೆಯಾಗಿ ಕೊಡುತ್ತಾರೆ.

ನಿರ್ವಾಣದ 40ನೇ ದಿನ ಹಳದಿ-ಮೆಹಂದಿ ಆಚರಣೆ ಮತ್ತು ಮಾತಾ ಪೂಜೆಯ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಬಣ್ಣ ಬಣ್ಣದ ಸೀರೆಯುಟ್ಟ ಹಿರಿಯ, ಕಿರಿಯ ಹಿಜ್ರಾಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ನಿರ್ವಾಣಕ್ಕೆ ಒಳಗಾದವರನ್ನು ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಿರುತ್ತಾರೆ. ಹಿಜ್ರಾಗಳು ಖುಷಿಯಿಂದ ಡಾನ್ಸ್ ಮಾಡುವುದು, ಸಂಗೀತ ಕೇಳುವುದು, ಹಾಡು ಹೇಳುವುದನ್ನು ಮಾಡುತ್ತಾರೆ. ಕಾರ್ಯಕ್ರಮಕ್ಕೆ ಬಂದ ಹಿಜ್ರಾಗಳು ಹೆಣ್ಣುಗಳು ಎಲ್ಲಿ? ಎಂದು ಹುಡುಕಿಕೊಂಡು ಕೊಠಡಿಗೆ ಹೋಗಿ ಹಾಸ್ಯ ಮಾಡುವುದು, ಛೇಡಿಸುವುದೂ ಮಾಡುತ್ತಾರೆ. ಆ ದಿನ ರಾತ್ರಿ ನೃತ್ಯ ಸಂಗೀತವು ನಡೆದಾದ ಮೇಲೆ ಊಟದ ವ್ಯವಸ್ಥೆ ಇರುತ್ತದೆ. ಮಧ್ಯ ರಾತ್ರಿಯ ಹೊತ್ತಿಗೆ ಹೆಣ್ಣುಗಳಿಗೆ ಮೆಹಂದಿ ಮತ್ತು ಅರಿಶಿಣವನ್ನು ಲೇಪಿಸಲಾಗುತ್ತದೆ. ಕೆಲವರು ಮಾತಾ ಫೋಟೊವನ್ನು ಅಲಂಕರಿಸುತ್ತಾರೆ.

ಗುರುಗಳು ನಿರ್ವಾಣ ಮಾಡಿಸಿಕೊಂಡ ತಮ್ಮ ಚೇಲಾಗಳಿಗೆ ಉಡುಗೊರೆ ಕೊಡುವ ಆಚರಣೆಯನ್ನು ಜೋಕ್ ಎನ್ನುತ್ತಾರೆ. ಹಸಿರು ಸೀರೆ, ರವಿಕೆ, ಒಳಲಂಗ, ಮೂಗುತಿ, ಗೆಜ್ಜೆ ಮತ್ತು ಕಾಲುಂಗುರಗಳನ್ನು ಜೋಕ್ ಒಳಗೊಂಡಿರುತ್ತದೆ. ನಿರ್ವಾಣವಾದವಳು ಜೋಕ್‌ನಲ್ಲಿರುವ ಬಟ್ಟೆ, ಒಡವೆಗಳನ್ನು ತೊಡಬೇಕಾಗುತ್ತದೆ. ಸೆರಗಿನ ತುದಿಯಿಂದ ಮುಖ ಕಾಣದಂತೆ ಸೆರಗು ಹೊದಿಸುತ್ತಾರೆ.

ಸಾಮಾನ್ಯವಾಗಿ ಈ ಸಂದರ್ಭದಲ್ಲಿ ಹಸಿರು ಸೀರೆ ಉಡಿಸಿ ಅಲಂಕರಿಸಿ ಮಾತಾ ದೇವಿಯ ಹತ್ತಿರ ಕರೆದುಕೊಂಡು ಹೋಗುತ್ತಾರೆ. ಆ ಸಂದರ್ಭಕ್ಕೆ ಮಾತಾಳನ್ನು ಕೊಂಡಾಡುವ ಹಾಡುಗಳನ್ನು ಹಾಡಲಾಗುತ್ತದೆ. ತೆಂಗಿನ ಕಾಯಿ ಹೊಡೆದು ಪೂಜೆ ಮಾಡುತ್ತಾರೆ. ನಂತರ ನಿರ್ವಾಣದ ಹೆಣ್ಣುಮಕ್ಕಳಿಗೆ ಎಲೆ ಅಡಿಕೆಯ ಉಡಿತುಂಬಿ ‘ಜೈ ಜೈ ಮಾತಾ, ಸಂತೋಷಿಮಾತಾ’ ಎಂದು ಭಕ್ತಿಯಿಂದ ಹಾಡುತ್ತಾರೆ. ದೇವಿ ಆವಾಹನೆಗಾಗಿ ಹೆಣ್ಣುಮಕ್ಕಳನ್ನು ಕುಳ್ಳಿರಿಸಿ ಉಳಿದ ಹಿಜ್ರಾಗಳು ಅವರ ಸುತ್ತಲೂ ಸುತ್ತುತ್ತಾ ಪ್ರಾರ್ಥನೆ ಮಾಡುತ್ತಾರೆ. ಆಗ ಎಲ್ಲರೂ ದೇವಿಯನ್ನು ಜಪಿಸುತ್ತಾರೆ. ದೇವಿಯ ಕೊರಳ ತಾಳಿಯನ್ನು ಕಟ್ಟುತ್ತಾರೆ. ಅಂತೆಯೇ ದೇವಿಯ ತುಂಬಿದಕೊಡವೊಂದನ್ನು ತಲೆ ಮೇಲೆ ಹೊರಿಸಿ ಕರೆದುಕೊಂಡು ಹೋಗಿ ಕೊಡವನ್ನು ಬೆಳಗಿನ ಜಾವ 3-4 ಗಂಟೆಯ ಹೊತ್ತಿಗೆ ಹಿಜ್ರಾಗಳು ದೇವಿಯನ್ನು ಕರೆಯುವುದು ದೊಡ್ಡ ಧ್ವನಿಗೆ ಏರುತ್ತದೆ. ದೊಡ್ಡದಾಗಿ ಚಪ್ಪಾಳೆ ತಟ್ಟುತ್ತಾ ಮೈಮರೆತಂತೆ ಅಮಲಿಗೆ ಒಳಗಾಗುತ್ತಾರೆ. ಈ ಇಡೀ ವಾತಾವರಣವೇ ನಿರ್ವಾಣಗೊಂಡ ಹೆಣ್ಣುಮಕ್ಕಳಲ್ಲಿ ದೇವಿ ಆವಾಹನೆಯಾದಂತೆ ಜೋಮು ಬಂದವರಂತೆ ತಮ್ಮನ್ನು ತಾವು ಮರೆಯುತ್ತಾರೆ. ಮುಂಬೈ ಮತ್ತು ಚೆನ್ನೈಗಳಲ್ಲಿ ‘ಗಂಗೆ ಪೂಜೆ’ಯನ್ನು ಸಮುದ್ರದ ಅಂಚಿನಲ್ಲಿ ಮಾಡುತ್ತಾರೆ. ಕೊನೆಗೆ ಸಮುದ್ರಕ್ಕೆ ನಾನು ಹೆಣ್ಣಾಗಿದ್ದೇನೆ ಎಂದು ಸೀರೆ ಎತ್ತಿ ತೋರಿಸಲಾಗುತ್ತದೆ. ಈ ಮೂಲಕ ನಿಸರ್ಗಕ್ಕೆ ಹೆಣ್ಣಾಗಿದ್ದನ್ನು ಮನವರಿಕೆ ಮಾಡಿಕೊಡಲಾಗುತ್ತದೆ.

ಈ ಅನುಭವವನ್ನು ರೇವತಿ ಹೀಗೆ ದಾಖಲಿಸುತ್ತಾರೆ ‘ಆಗ ಬೆಳಗಿನ ಜಾವ 4 ಗಂಟೆಯಾಗಿರಬೇಕು. ಆ ಹೊತ್ತಿನಲ್ಲಿ ಕರ್ಪೂರದ ಗಮಲಿನೊಂದಿಗೆ ನಮ್ಮ ಸುತ್ತಲಿದ್ದ ಹಿಜ್ರಾಗಳು ದೇವಿಯನ್ನು ಕರೆಯುತ್ತಾ ಚಪ್ಪಾಳೆ ತಟ್ಟುತ್ತಿದ್ದರು. ಈ ಅನುಭವದ ಪರಿಣಾಮಕ್ಕೆ ನಾನು ಒಳಗಾದೆ. ನನ್ನ ದೇಹ ಲಯದಿಂದ ತೂಗತೊಡಗಿತು. ಇಂತಹ ಗಳಿಗೆಗಾಗಿಯೇ ಕಾಯುತ್ತಿದ್ದವರಂತೆ ದೇವಿಯ ಕುರಿತ ಹಾಡಿನ ಮೇಳ ಇನ್ನೂ ಜೋರಾಯಿತು. ಹಾಲಿನ ಮಡಕೆಯನ್ನು ನನ್ನ ತಲೆಯ ಮೇಲಿಟ್ಟರು. ಇಬ್ಬರು ಹಿಜ್ರಾಗಳು ಮಡಕೆ ಅಲ್ಲಾಡದಂತೆ ನೋಡಿಕೊಳ್ಳಲು ನನ್ನ ಹಿಂದೆ ನಿಂತರು. ನನ್ನ ಗುರುಭಾಯ್ ಚೇಲಾಗಳಿಗೂ ಹಾಗೆ ಮಾಡಿದರು. ಇನ್ನಿಬ್ಬರು ಹಿಜ್ರಾಗಳು ಸೇರಿಕೊಂಡು ನಮ್ಮಿಬ್ಬರನ್ನು ಹತ್ತಿರದ ಬಾವಿಯೆಡೆಗೆ ಕರೆದುಕೊಂಡು ಹೋದರು. ಮಡಕೆಯನ್ನು ತಲೆಯಿಂದ ತೆಗೆಯದೆಯೇ ಹಾಲನ್ನು ಬಾವಿಯೊಳಗೆ ಹಾಕಲು ಹೇಳಿದರು. ಹೀಗೆ ಮಾಡಲು ತಲೆ ಬಾಗಿಸಬೇಕಿತ್ತು. ಮತ್ತೆ ಮಡಕೆಗೆ ನೀರು ತುಂಬಿ ಬಾವಿಗೆ ಹಾಕಬೇಕಿತ್ತು. ಎರಡು ಸಾರಿ ಹೀಗೆ ಮಾಡಿದ ಮೇಲೆ ಮಡಕೆಯಲ್ಲಿ ನೀರು ತುಂಬಿ ತಲೆಯ ಮೇಲೆ ಹೊತ್ತು ಹಿಂದಕ್ಕೆ ಬರುವಾಗ ಸೀರೆ ಎತ್ತಿ ಹಸಿರು ಮರಕ್ಕೋ, ಕಪ್ಪು ನಾಯಿಗೋ ತೋರಿಸಬೇಕು. ನಾನು ನಿಜವಾಗಲೂ ಹೆಣ್ಣು ಎಂದು ಪ್ರಕೃತಿಗೆ ತೋರಿಸಲು ಹೀಗೆ ಮಾಡುತ್ತಾರೆ’.

ಈ ಆಚರಣೆ ಆದ ನಂತರ ಬಹುಚರಾ ಮಾತಾ ಫೋಟೊದ ಮುಂದೆ ನಿಲ್ಲಿಸಿ ಮುಖದ ಸೆರಗು ತೆಗೆದು ಆಕೆಯ ಮುಖವನ್ನು ನೋಡಲು ಹೇಳುತ್ತಾರೆ. ಆಗ ನಿರ್ವಾಣದ ಹೆಣ್ಣು ‘ನನ್ನ ಸ್ವರೂಪವನ್ನು ತೆಗೆದುಕೊಂಡು ನಿನ್ನ ರೂಪವನ್ನು ಕೊಡು’ ಎಂದು ಬೇಡಿಕೊಳ್ಳುತ್ತಾಳೆ. ಆಗ ದೇವಿಗೆ ನಮಸ್ಕಾರ ಮಾಡಿ 40 ದಿನದ ನಂತರ ಕನ್ನಡಿಯಲ್ಲಿ ಮುಖ ನೋಡಿಕೊಳ್ಳಲು ಹೇಳುತ್ತಾರೆ. ಆಗ ನಿರ್ವಾಣದ ಹೆಣ್ಣು ನಿಜಕ್ಕೂ ಬದಲಾದ ತನ್ನ ಮುಖ ಚಹರೆಯನ್ನು ನೋಡಿ ಬೆರಗಾಗುತ್ತಾಳೆ.

ಆಗ ದೇವಿ ಮುಂದೆ ಇಟ್ಟ ಆಹಾರ ಮತ್ತು ಹಣ್ಣುಗಳಲ್ಲಿ ಯಾವುದು ಇಷ್ಟವೋ ಅದನ್ನು ತೆಗೆದುಕೊಳ್ಳಿ ಎಂದು ಸೂಚಿಸಲಾಗುತ್ತದೆ. ಆಗ ನಿರ್ವಾಣದ ಹೆಣ್ಣು ಯಾವ ಪದಾರ್ಥವನ್ನು ಆಯ್ದುಕೊಳ್ಳುತ್ತಾಳೋ ಅದನ್ನು ಆಧರಿಸಿ ಮುಂದಿನ ಜೀವನ ಇರುತ್ತದೆಂದು ನಂಬುತ್ತಾರೆ. ಸೇಬು ಹಣ್ಣು, ಅಡುಗೆಯಲ್ಲಿ ಸಿಹಿ ಪದಾರ್ಥವನ್ನು ತೆಗೆದುಕೊಂಡರೆ ಬದುಕು ಸಿಹಿಯಾಗಿ, ಸುಮಧುರವಾಗಿರುತ್ತದೆಯೆಂದು ನಂಬುತ್ತಾರೆ. ಸಿಹಿಯನ್ನು ತೆಗೆದುಕೊಂಡರೆ ಹಿಜ್ರಾಗಳು ಸೀಸಾ..ಸೀಸಾ..(ಒಳ್ಳೇದು) ಎಂದು ಉದ್ಘರಿಸುತ್ತಾರೆ. ಈ ವಿಷಯವನ್ನು ಮೊದಲು ನಿರ್ವಾಣದ ಹೆಣ್ಣುಗಳಿಗೆ ತಿಳಿಸದೆ ಗೌಪ್ಯತೆ ಕಾಪಾಡಿರುತ್ತಾರೆ. ಅಂತೆಯೇ ಖಾರದ ತಿನಿಸುಗಳನ್ನು ಆಯ್ದುಕೊಂಡರೆ ಮುಂದೆ ಅವರ ಬದುಕು ಕೂಡ ಕಷ್ಟದ್ದಾಗಿರುತ್ತದೆ ಎಂದು ನಂಬುತ್ತಾರೆ. ಇದಾದ ನಂತರ ನೆರೆದಿದ್ದವರಿಗೆಲ್ಲಾ ಪಾಮ್ ಪಡುತಿ ಮಾಡಿ ಆಶೀರ್ವಾದ ಪಡೆಯುತ್ತಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ. ಅರುಣ್ ಜೋಳದಕೂಡ್ಲಿಗಿ

contributor

Similar News