ಮರೆಯಬಾರದ ದಲಿತ ನಾಯಕ: ಚಂದ್ರಶೇಖರ ತೋರಣಘಟ್ಟ

ಕೊಡಗಿನ ಬುಡಕಟ್ಟುಗಳ ಪರವಾಗಿ ನಿಲ್ಲುವುದೆಂದರೆ, ಅಲ್ಲಿನ ಬಲಾಢ್ಯ ಎಸ್ಟೇಟ್ ಮಾಲಕರ ಎದುರು ನಿಲ್ಲುವುದು ಎಂದೇ ಅರ್ಥ. ಅದೊಂದು ತುಂಬಾ ಕಠಿಣವಾದ ಹೋರಾಟದ ಹಾದಿ. ಇದು ಚಂತೋ ಅವರ ದಿಟ್ಟತನವನ್ನೂ, ಬುಡಕಟ್ಟುಗಳ ಬಗೆಗಿನ ಕರುಳಬಳ್ಳಿಯಂತಹ ಸಂಬಂಧದ ಸಾಂಗತ್ಯವನ್ನ್ನೂ ಕಾಣಿಸುತ್ತದೆ. ಹಾಗಾಗಿ ಚಂತೋ ರೂಪಿಸಿದ ಬುಡಕಟ್ಟು ಅಲೆಮಾರಿಗಳ ಹೋರಾಟ ಭಿನ್ನವಾಗಿದೆ. ಈ ಮಾದರಿ ಆದಿವಾಸಿಗಳಲ್ಲಿ ಸಂಘಟನೆಯ ಪ್ರಜ್ಞೆಯನ್ನು ಹುಟ್ಟುಹಾಕುತ್ತದೆ.;

Update: 2025-04-02 11:54 IST
ಮರೆಯಬಾರದ ದಲಿತ ನಾಯಕ: ಚಂದ್ರಶೇಖರ ತೋರಣಘಟ್ಟ
  • whatsapp icon

ದಲಿತ ಸಂಘರ್ಷ ಸಮಿತಿಯ ಚಳವಳಿಗೆ 50 ವರ್ಷ ತುಂಬಿದ ನೆನಪಿಗೆ ಚಳವಳಿಯ ಅವಲೋಕನ ನಡೆಯುತ್ತಿದೆ. ಚಳವಳಿಗಾಗಿ ದುಡಿದು ದಣಿದವರ, ಅಗಲಿದವರನ್ನು ನೆನಪಿಸಿಕೊಳ್ಳಲಾಗುತ್ತಿದೆ. ಹೀಗೆ ನೆನಪಿಸಿಕೊಳ್ಳದೆ ಇರುವ ಎಲೆಮರೆಯ ನಾಯಕರೂ ಇದ್ದಾರೆ. ಈ ಹೊತ್ತಲ್ಲಿ ದಲಿತ ಚಳವಳಿ ನೆನೆಯಬೇಕಾದ ನಾಯಕರಲ್ಲಿ ಚಂದ್ರಶೇಖರ ತೋರಣಘಟ್ಟ ಪ್ರಮುಖರು. ನಾಲ್ಕು ದಶಕಗಳ ಕಾಲ ಧೀನ ದಲಿತ ಆದಿವಾಸಿ ಬುಡಕಟ್ಟುಗಳ ಅಧಿಕಾರ ರಹಿತ ಜನರ ಬದುಕನ್ನು ಹಸನು ಮಾಡಲೆಂದು ಧಣಿವರಿಯದೆ ಬದ್ಧತೆಯಿಂದ ಹೋರಾಡಿ, ಅರ್ಧಕ್ಕೆ ತನ್ನ ಪಯಣ ನಿಲ್ಲಿಸಿ ಅಗಲಿದ ಹಿರಿಯ ಸಂಗಾತಿ ಚಂದ್ರಶೇಖರ ತೋರಣಘಟ್ಟ

ಅವಿಭಜಿತ ಚಿತ್ರದುರ್ಗ ಜಿಲ್ಲೆಯ (ಈಗ ದಾವಣಗೆರೆ ಜಿಲ್ಲೆ) ಜಗಳೂರು ತಾಲೂಕಿನ ತೋರಣಘಟ್ಟ ಗ್ರಾಮದ ಸ್ವಾತಂತ್ರ ಹೋರಾಟಗಾರ ಕೃಷ್ಣಪ್ಪ ಮತ್ತು ಗೌರಮ್ಮನ ಮಗನಾಗಿ 24 ಜೂನ್ 1962 ರಲ್ಲಿ ಜನಿಸಿದ ಚಂದ್ರಶೇಖರ್ ಅವರು ಅಪ್ಪನ ಹೋರಾಟದ ಹಾದಿಯಲ್ಲಿ ಮುನ್ನಡೆಯುತ್ತಾರೆ. ಹೋರಾಟದ ಬದುಕಿನಲ್ಲಿ ಅನಾರೋಗ್ಯಕ್ಕೆ ತುತ್ತಾಗಿ 58 ವರ್ಷದಲ್ಲಿಯೇ, 21.02.2020 ರಲ್ಲಿ ಅಕಾಲಿಕ ಮರಣ ಹೊಂದುತ್ತಾರೆ.

`ವಿಪ್ಲವ’ ಎಂದರೆ ಕ್ರಾಂತಿ, ಅವಳೇ ನಮ್ಮ ತಾಯಿ, ಅದಕ್ಕಾಗಿ ವಿಪ್ಲವ ತಾಯಿಗೆ ಎಂದೂ ದ್ರೋಹ ಬಗೆಯಬಾರದು ಎನ್ನುವುದು ಚಳವಳಿಗಾರ ಚಂದ್ರಶೇಖರ ತೋರಣಘಟ್ಟ (ಚಂತೋ) ಅವರು ನಂಬಿದ ನಂಬುಗೆಯಾಗಿತ್ತು. ಸಂಧಾನ ಸಾವು ತಂದರೆ, ಸಂಘರ್ಷ ಜೀವ ತುಂಬುತ್ತದೆ ಎನ್ನುವುದು ಬದುಕಿನ ಧ್ಯೇಯವಾಗಿತ್ತು. ತನ್ನ ಸ್ವಾರ್ಥಕ್ಕಾಗಿ ಬದುಕುವ ಜೀವನ ಹಕ್ಕಿಯ ಪುಕ್ಕದಷ್ಟೇ ಹಗುರ, ಇನ್ನೊಬ್ಬರ ಬದುಕಿಗಾಗಿ ಬದುಕುವ ಜೀವನ ಹಿಮಾಲಯ ಪರ್ವತಕ್ಕಿಂತಲೂ ಭಾರ! ಎನ್ನುವುದು ಚಂತೋ ಅವರು ಕಾರ್ಯಕರ್ತರಿಗೆ ಹೇಳುವ ಮಾತುಗಳಾಗಿದ್ದವು. ಇವು ಕೇವಲ ಮಾತುಗಳಾಗಿರಲಿಲ್ಲ. ಇದು ಅವರ ನಡೆಯೂ ಆಗಿತ್ತು. ಹೀಗಾಗಿಯೇ ಚಂದ್ರಶೇಖರ ತೋರಣಘಟ್ಟ ಅವರ ಘನತೆಯ ಬದುಕಿನ ಬಗ್ಗೆ ಹೆಮ್ಮೆ ಅನ್ನಿಸುತ್ತದೆ.

ಚಂದ್ರಶೇಖರ ತೋರಣಘಟ್ಟ ಅವರು ಭದ್ರಾವತಿಯಲ್ಲಿ ಪದವಿ ಓದುತ್ತಿರುವಾಗಲೆ ಚಳವಳಿಯಲ್ಲಿ ದುಮುಕುತ್ತಾರೆ. ಪ್ರಗತಿಪರ ವಿದ್ಯಾರ್ಥಿ ಒಕ್ಕೂಟದ ನಾಯಕತ್ವದಲ್ಲಿ ಕುದರಮೋತಿ ಕಾಮುಕ ಸ್ವಾಮಿಯ ವಿರುದ್ಧ ಸಾವಿರಾರು ವಿದ್ಯಾರ್ಥಿಗಳನ್ನು ಸೇರಿಸಿ ದೊಡ್ಡ ಪ್ರತಿರೋಧ ರೂಪಿಸುತ್ತಾರೆ. ಆ ನಂತರ ಚಂದ್ರಗುತ್ತಿ ಬೆತ್ತಲೆಸೇವೆ ನಿಲ್ಲಿಸುವ ಹೋರಾಟದಲ್ಲಿ ಬಿ.ಕೃಷ್ಣಪ್ಪರ ಜೊತೆಗೂಡಿ ಸಾವುಬದುಕಿನ ಹೋರಾಟದಂತೆ ಈ ಚಳವಳಿಯನ್ನು ರೂಪಿಸುತ್ತಾರೆ. ಇದರಲ್ಲಿ ಚಂತೋ ತೋರಿದ ದಿಟ್ಟತನ, ಸಮಯಪ್ರಜ್ಞೆ, ಎದೆಗುಂದದ ದೈರ್ಯ ಅವರನ್ನು ಗಟ್ಟಿಗೊಳಿಸುತ್ತದೆ.

ನಮ್ಮಲ್ಲಿ ಅಲೆಮಾರಿ ಬುಡಕಟ್ಟು ಸಮುದಾಯಗಳ ಬಗೆಗಿನ ಅಧ್ಯಯನ ಮತ್ತು ಹೋರಾಟದ ಹಲವು ಮಾದರಿಗಳಿವೆ. ಬುಡಕಟ್ಟುಗಳನ್ನು ಅಧ್ಯಯನದ ಸರಕನ್ನಾಗಿ ಭಾವಿಸಿ ಅಂಕೆಸಂಖ್ಯೆಗಳಂತೆ ದಾಖಲಿಸುವ ಸುಕುಮಾರತನದ ಅಕಾಡೆಮಿಕ್ ಮಾದರಿಯಿದೆ. ಅಧ್ಯಯನ ಪೂರ್ವದಲ್ಲಿ ದಾರುಣವಾಗಿ ಚಿತ್ರಿಸಿ, ಅಧ್ಯಯನದ ನಂತರ ಸಮಸ್ಯೆಗಳೆಲ್ಲಾ ಬಗೆಹರಿದು ಸುಖವಾಗಿದ್ದಾರೆ ಎಂದು ಫಂಡ್ ಖರ್ಚು ತೋರಿಸುವ ಎನ್.ಜಿ.ಓ ಮಾದರಿಗಳಿವೆ. ಈ ಎರಡೂ ಬಗೆಯ ಅಧ್ಯಯನಗಳಿಂದ ಅಲೆಮಾರಿ ಬುಡಕಟ್ಟುಗಳು ಬೇಸತ್ತಿವೆ. ನಿಮ್ಮ ನಿಮ್ಮ ಲಾಭಕ್ಕಾಗಿ ನಮ್ಮನ್ನೇಕೆ ಬಳಸಿಕೊಳ್ಳುತ್ತಿದ್ದೀರಿ ಎಂದು ತರಾಟೆಗೆ ತೆಗೆದುಕೊಳ್ಳುವ ಹಂತಕ್ಕೆ ಸಮುದಾಯಗಳು ಬಂದಿವೆ. ಆದರೆ ಚಂದ್ರಶೇಖರ ತೋರಣಘಟ್ಟ ಅವರ ಅಲೆಮಾರಿ ಬುಡಕಟ್ಟುಗಳ ಹೋರಾಟದ ಮಾದರಿ ಇವೆರಡಕ್ಕಿಂತ ಭಿನ್ನವಾದುದು. ಈ ಹೋರಾಟ ಅಲೆಮಾರಿ, ಬುಡಕಟ್ಟುಗಳ ಒಳಿತಿಗಾಗಿಯೇ ತುಡಿಯುವಂಥದ್ದು. ಕೊಡಗಿನಲ್ಲಿ ಉಸಿರು ಬಿಗಿ ಹಿಡಿದು ಬದುಕುತ್ತಿದ್ದ ಜೇನುಕುರುಬ, ಹಾಲುಕುರುಬ, ಕುಂಬಳ ಕುರುಬ, ಮುಳ್ಳುಕುರುಬ, ಸೊಪ್ಪು ಕುರುಬ, ಅಂಡೆಕುರುಬ, ಪಂಜರ ಎರವರು, ಬಡಗ ಎರವ, ಬೈನಾಡ ಎರವ ಮುಂತಾದ ಬುಡಕಟ್ಟುಗಳ ಜತೆ ದಶಕಗಳ ಕಾಲ ಜೊತೆ ಜೊತೆಗೆ ಬದುಕಿ ಅವರೊಳಗೆ ಹೋರಾಟದ ಬೆಳಕು ಕಾಣಿಸುತ್ತಾರೆ. ಅವರ ಜತೆಯೇ ಇದ್ದು, ಅವರ ಜತೆಯೇ ಕೂಲಿಮಾಡಿ, ಅವರ ಜತೆಯೇ ಉಂಡುಟ್ಟು ಮಲಗಿ ಆ ಸಮುದಾಯಗಳ ನಾಡಿಮಿಡಿತವನ್ನು ಅರಿಯುತ್ತಾರೆ.

ಕೊಡಗಿನ ಬುಡಕಟ್ಟುಗಳ ಪರವಾಗಿ ನಿಲ್ಲುವುದೆಂದರೆ, ಅಲ್ಲಿನ ಬಲಾಡ್ಯ ಎಷ್ಟೇಟ್ ಮಾಲಿಕರ ಎದುರು ನಿಲ್ಲುವುದು ಎಂತಲೇ ಅರ್ಥ. ಅದೊಂದು ತುಂಬಾ ಕಠಿಣವಾದ ಹೋರಾಟದ ಹಾದಿ. ಇದು ಚಂತೋ ಅವರ ದಿಟ್ಟತನವನ್ನೂ, ಬುಡಕಟ್ಟುಗಳ ಬಗೆಗಿನ ಕರುಳಬಳ್ಳಿಯಂಥಹ ಸಂಬಂಧದ ಸಾಂಗತ್ಯವನ್ನು ಕಾಣಿಸುತ್ತದೆ. ಹಾಗಾಗಿ ಚಂತೋ ರೂಪಿಸಿದ ಬುಡಕಟ್ಟು ಅಲೆಮಾರಿಗಳ ಹೋರಾಟ ಭಿನ್ನವಾಗಿದೆ. ಈ ಮಾದರಿ ಆದಿವಾಸಿಗಳಲ್ಲಿ ಸಂಘಟನೆಯ ಪ್ರಜ್ಞೆಯನ್ನು ಹುಟ್ಟುಹಾಕುತ್ತದೆ. ಕೊಡಗು ಜಿಲ್ಲೆಯ ಸೋಮವಾರ ಪೇಟೆ ತಾಲೂಕಿನಲ್ಲಿ `ಆದಿವಾಸಿ ಸಮರ ಸಂಘ’ ಕಟ್ಟುತ್ತಾರೆ. ಹತ್ತಾರು ಆದಿವಾಸಿ ಬುಡಕಟ್ಟು ಯುವಕರನ್ನು ಹೋರಾಟದ ಮುನ್ನಲೆಗೆ ತರುತ್ತಾರೆ. ತಮ್ಮ ಸಮಸ್ಯೆಗಳ ಬಗ್ಗೆ ತಾವೇ ಸಂಘಟಿತರಾಗಿ ಧ್ವನಿ ಎತ್ತುವ ಸ್ವಾಭಿಮಾನದ ಹೋರಾಟದ ಮಾದರಿ ರೂಪಿಸುತ್ತಾರೆ.

ಬದುಕಿಗೆ ಜೊತೆಯಾದ ಸಿ.ವೈ.ಯಶೋಧ ಅವರು ತೋರಣಘಟ್ಟ ಅವರ ಚಳವಳಿಗೆ ಸಾತಿಯಾಗುತ್ತಾರೆ. ಹೋರಾಟದ ಜತೆ ಸಾಹಿತ್ಯದ ನಂಟನ್ನು ಬೆಸೆಯುವುದು ಚಂತೋ-ಯಶೋಧ ಅವರ ಒಂದು ವಿಶಿಷ್ಠತೆಯಾಗಿದೆ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಎಂ.ಎ ಮುಗಿಸಿದ ಯಶು-ಚಂದು ತೆರಳುವುದು ಸಿದ್ಧರಹಳ್ಳಿಯ ಹೋರಾಟ ರೂಪಿಸುತ್ತಿರುವ ಹಕ್ಕಿಪಿಕ್ಕಿಗಳ ಜಾಗಕ್ಕೆ. ಅಲ್ಲಿಯೇ ಉಳಿಯುತ್ತಾರೆ. ಗುಡಿಸಲಲ್ಲಿ ಹಕ್ಕಿಪಿಕ್ಕಿಗಳ ಜತೆಜತೆಗೇ ಬದುಕಿಬಿಡುತ್ತಾರೆ. ಇದೆಲ್ಲಾ ಸಾಹಿತ್ಯದ ಓದಿನ ಸೂಕ್ಷ್ಮತೆಯಿಂದ ಬಂದ ಗ್ರಹಿಕೆ. ಹಕ್ಕಿಪಿಕ್ಕಿಗಳ ವಸತಿ ಹೋರಾಟ ಮಾಡಿ ನೆಲೆ ಒದಗಿಸಿದ ನಗರ `ಗೌತಮ ನಗರ’ ವಾಗುತ್ತದೆ. 1985-86 ರಲ್ಲಿ ಭದ್ರಾವತಿ ನಗರದ ದಲಿತ ಆಟೋಚಾಲಕರ ವಿಪರೀತ ಕಿರುಕುಳ ತಪ್ಪಿಸಿ ಚನ್ನಗಿರಿಗೆ ಹೋಗುವ ದಾರಿಯಲ್ಲಿ ಖಾಯಂ ಜಾಗ ಕಲ್ಪಿಸಿದ ಆಟೋ ನಿಲ್ದಾಣಕ್ಕೆ ಇಡುವ ಹೆಸರು `ಕುವೆಂಪು ಆಟೋರಿಕ್ಷಾ ನಿಲ್ದಾಣ’. ಚಂತೋ ಒಂದು ಕಡೆ, `ಸಾಹಿತ್ಯವೆಂದರೆ ಭಜನೆ ಮಾಡುವ ಕೆಲಸವಲ್ಲ ಸಮಾಜದಲ್ಲಿ ನಡೆಯುವ ಒಳ-ಹೊರ ಕ್ರಿಯೆ ಮತ್ತು ಪ್ರತಿಕ್ರಿಯೆಗಳ ಪ್ರತಿಬಿಂಬ’ ಎನ್ನುತ್ತಾರೆ. ಕುವೆಂಪು ಅವರ ಸರಳವಿವಾಹ ಪದ್ದತಿಯ `ಮಂತ್ರ ಮಾಂಗಲ್ಯ’ ದ ಮೋಹಿತರಾಗಿದ್ದ ಇವರು ಸ್ವತಃ ಅಂತರ್ಜಾತಿಯ ಸರಳ ವಿವಾಹ ಮಾಡಿಕೊಂಡು ಪಾಲಿಸುತ್ತಾರೆ. ಚಳವಳಿಯ ಸಂಗಾತಿಗಳಿಗೂ ಮಂತ್ರಮಾಂಗಲ್ಯ ಮಾದರಿ ವಿವಾಹಗಳನ್ನು ಮಾಡಿಸುತ್ತಾರೆ.

ಚಂದ್ರಶೇಖರ ತೋರಣಘಟ್ಟ ಅವರ ಬಗೆಗಿನ ಆಪ್ತವಾದ ಪುಸ್ತಕವನ್ನು ಗೆಳೆಯ ಕೈದಾಳ ಕೃಷ್ಣಮೂರ್ತಿ ಸಂಪಾದಿಸಿದ್ದಾರೆ. `ಚಂದ್ರ ಶಿಖಾರಿ’ ಚಂತೋ ಅವರ ಹೋರಾಟಕ್ಕೆ ರೂಪಕವೆಂಬಂತೆ ಕೃತಿ ಮೈದಾಳಿದೆ. ಈ ಕೃತಿಯು ಕರ್ನಾಟಕದ ದಲಿತ ಹೋರಾಟದ ಚರಿತ್ರೆಯ ಆಕರವೂ ಆಗಿದೆ. ದಲಿತ ಸಂಘರ್ಷ ಸಮಿತಿಯ ಹೋರಾಟದ ತೀವ್ರತೆಯನ್ನೂ, ಇಳಿಮುಖವನ್ನೂ, ಈ ಕಥನ ಕಾಣಿಸುತ್ತದೆ. ಬಿ.ಕೃಷ್ಣಪ್ಪ ಅವರ ನಾಯಕತ್ವದಲ್ಲಿ ಚಂದ್ರಗುತ್ತಿಯ ಬೆತ್ತಲೆ ಪೂಜೆ ವಿರೋಧಿಸಿ ನಡೆದ ಧೀರೋದತ್ತ ಹೋರಾಟವನ್ನು ಮೊದಲುಗೊಂಡು, ಬಿ.ಕೃಷ್ಣಪ್ಪ 1991 ರಲ್ಲಿ ಕೋಲಾರ ಲೋಕಸಭಾ ಚುನಾವಣ ಅಭ್ಯರ್ಥಿಯಾಗಿ ನಿಲ್ಲುವ ಸಂದರ್ಭದ ತನಕದ ವಿವರಗಳು ದಾಖಲಾಗಿವೆ. ಚಂತೋ ಅವರು ಮುಂದೆ ದಸಂಸದಿಂದ ಎಡಪಂಥೀಯ ಸಂಘಟನೆಗಳ ಕಡೆ ಚಲಿಸುತ್ತಾರೆ. ದಾವಣಗೆರೆಯಲ್ಲಿ ಕೋಮುಸೌಹಾರ್ಧ ಚಳವಳಿಯನ್ನು ಕಟ್ಟಲು ಶ್ರಮಿಸುತ್ತಾರೆ.

ಕರ್ನಾಟಕದ ಭೂ ಹೋರಾಟಗಳ ಚರಿತ್ರೆಯಲ್ಲಿ ಅಷ್ಟಾಗಿ ದಾಖಲಾಗದ ಕೆಲವು ಭೂ ಹೋರಾಟಗಳನ್ನು ಚಂತೋ ರೂಪಿಸುತ್ತಾರೆ. ಹನ್ನೊಂದು ದಿನಗಳ ಕಾಲ ಸಾವಿರಾರು ರೈತರು ಒಟ್ಟಾಗಿ ನಡೆಸುವ ಕಾರೇಹಳ್ಳಿ ಭೂ ಹೋರಾಟ, 1989 ರಿಂದ 1992 ರ ತನಕ ಪಿ.ಟಿ.ಸಿ.ಎಲ್ ಜಮೀನುಗಳ ತೆರವುಗೊಳಿಸುವುದರ ವಿರುದ್ಧದ ಹೋರಾಟದಲ್ಲಿ ಅರಣ್ಯ ಇಲಾಖೆಯು ತೆರವುಗೊಳಿಸುವ ಭೂಮಿಯನ್ನು ಹೋರಾಟ ಮೂಲಕ ಪಡೆಯುವುದು, 1993-96 ರಲ್ಲಿ ಕೇಂದ್ರ ಸಚಿವೆಯಾಗಿದ್ದ ಬಸವರಾಜೇಶ್ವರಿ ಅಕ್ರಮವಾಗಿ ಕಬಳಿಸಿದ್ದ 300 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲು ರೂಪಿಸಿದ ರಾಯಚೂರು ಸಮೀಪದ ಗೆಜ್ಜಲಗಟ್ಟೆ ಭೂ ಹೋರಾಟ ಪ್ರಮುಖವಾದವು.

ತೋರಣಘಟ್ಟ ಅವರು ರಾಜಿಯಿಲ್ಲದ ಹೋರಾಟ ನಡೆಸಿ, ಕೊನೆಗಾಲದಲ್ಲಿ ಅನಾರೋಗ್ಯದಿಂದ ನೋವುಂಡು ಅಗಲುತ್ತಾರೆ. ಹೀಗೆ ದಲಿತ ಹೋರಾಟವನ್ನು ಕಟ್ಟಿದ ನಿಷ್ಠಾವಂತ ಪ್ರಾಮಾಣಿಕ ಹೋರಾಟಗಾರರ ಸಂಖ್ಯೆಯೂ ದೊಡ್ಡದಿದೆ. ಕವಿ ಸಿದ್ದಲಿಂಗಯ್ಯ ಅವರ ಕಾವ್ಯ ಭಾಷೆಯಲ್ಲಿ ಹೇಳುವುದಾದರೆ ದಸಂಸ ಹೋರಾಟಕ್ಕೆ ಸಾವಿರಾರು ನದಿಗಳು ಸೇರಿ ಹರಿದಿವೆ. ಅಂತಹ ನದಿಯ ಒಂದು ತೊರೆಯಾಗಿ ಚಂದ್ರಶೇಖರ ತೋರಣಘಟ್ಟ ಬಹುಕಾಲ ನೆನಪಿನಲ್ಲುಳಿಯುತ್ತಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ. ಅರುಣ್ ಜೋಳದಕೂಡ್ಲಿಗಿ

contributor

Similar News