‘ಹೈದರಾಬಾದ್ ಕರ್ನಾಟಕ’ ಚರಿತ್ರೆಯ ಮರುಓದು
ಮೈಸೂರು ಕರ್ನಾಟಕಕ್ಕೆ ಹೋಲಿಸಿಕೊಂಡರೆ ಹಲವು ಕ್ಷೇತ್ರಗಳಲ್ಲಿ ಹೈದರಾಬಾದ್ ಕರ್ನಾಟಕ ದಯನೀಯ ಸ್ಥಿತಿಯಲ್ಲಿ ಹಿಂದುಳಿದಿತ್ತು. ಈ ಭಾಗ ಎರಡು ಬಗೆಯ ವಿಮೋಚನೆಗಾಗಿ ಕಾದಿದೆ. ಮೊದಲನೆಯದಾಗಿ ಹೈದರಾಬಾದ್ ಕರ್ನಾಟಕದ ಬಗ್ಗೆ ಈ ತನಕ ಬಂದಿರುವ ಕೋಮುವಾದಿ ನೆಲೆಯ ಆಕರಗಳು ಕಟ್ಟಿದ ಒಮ್ಮುಖ ಚರಿತ್ರೆಯ ಪಾಠಗಳಿಂದ. ಎರಡನೆಯದಾಗಿ ನಿಜಾಮರಿಂದ ಈ ಭಾಗ ವಿಮೋಚನೆ ಆಗಿ 75 ವರ್ಷ ಪೂರೈಸಿದೆ. 1948ರ ನಂತರದ ಸ್ವತಂತ್ರ ಭಾರತದಲ್ಲಿ ಈ ಭಾಗದ ಅಭಿವೃದ್ಧಿ ಹೊಂದಿದ್ದು ಎಷ್ಟು? ಇಂದಿನ ಕಲ್ಯಾಣ ಕರ್ನಾಟಕ ಯಾವ ಯಾವ ಕ್ಷೇತ್ರಗಳಲ್ಲಿ, ಯಾವ ಯಾವ ಸಂಗತಿಗಳ ವಿಮೋಚನೆಗಾಗಿ ಕಾದಿದೆ ಎನ್ನುವುದನ್ನು ಪರಿಶೀಲಿಸಬೇಕಿದೆ.;

ವಿಶಾಲ ಹೈದರಾಬಾದ್ ಕರ್ನಾಟಕದ ಮೊದಲ ರಾಜನೆಂದರೆ ಮೌರ್ಯರ ಸಾಮ್ರಾಟ್ ಅಶೋಕ. ಚರಿತ್ರೆಯ ಏಳು-ಬೀಳುಗಳ ಪಯಣದಲ್ಲಿ ಹೈರಾಬಾದ್ ಸಂಸ್ಥಾನದ ಮೇಲೆ ಅಸಫ್ ಜಾಹಿ ಮನೆತನ ವಿಜಯ ಸಾಧಿಸಿ 1724ರಿಂದ 1948ರ ತನಕ ಅಂದರೆ 224 ವರ್ಷಗಳ ಕಾಲ ಈ ಭಾಗವನ್ನು ಆಳಿದವು. ಬಹಮನಿ ಆದಿಲ್ ಶಾಹಿಗಳಿಂದ ನಿಜಾಮರವರೆಗೆ ಈ ಭಾಗ 600 ವರ್ಷಗಳ ಕಾಲ ಮುಸ್ಲಿಮ್ ಆಡಳಿತಕ್ಕೆ ಒಳಗಾಗಿತ್ತು. 1948ರ ಸೆಪ್ಟಂಬರ್ 17ರಂದು ಭಾರತೀಯ ಸೈನ್ಯದ ಕಾರ್ಯಾಚರಣೆಯ ಮೂಲಕ ಹೈದರಾಬಾದ್ ಕರ್ನಾಟಕ ಸ್ವಾತಂತ್ರ್ಯ ಪಡೆಯಿತು. ಆ ದಿನವನ್ನು ಈ ಭಾಗದಲ್ಲಿ ‘ಹೈದರಾಬಾದ್ ಕರ್ನಾಟಕದ ವಿಮೋಚನಾ ದಿನ’ವನ್ನಾಗಿ ಆಚರಿಸುತ್ತಾ ಬರಲಾಗಿದೆ. ಸಹಜವಾಗಿ ಹೈದರಾಬಾದ್ ಕರ್ನಾಟಕದ ವಿಮೋಚನೆಗಾಗಿ ಹೋರಾಟ ಮಾಡಿದವರ, ರಜಾಕಾರರ ಹಾವಳಿಗೆ ಪ್ರಾಣತೆತ್ತವರನ್ನು ನೆನೆಯಲಾಗುತ್ತದೆ.
ಮೈಸೂರು ಕರ್ನಾಟಕಕ್ಕೆ ಹೋಲಿಸಿಕೊಂಡರೆ ಹಲವು ಕ್ಷೇತ್ರಗಳಲ್ಲಿ ಈ ಭಾಗ ದಯನೀಯ ಸ್ಥಿತಿಯಲ್ಲಿ ಹಿಂದುಳಿದಿತ್ತು. ಈ ಭಾಗ ಎರಡು ಬಗೆಯ ವಿಮೋಚನೆಗಾಗಿ ಕಾದಿದೆ. ಮೊದಲನೆಯದಾಗಿ ಹೈದರಾಬಾದ್ ಕರ್ನಾಟಕದ ಬಗ್ಗೆ ಈ ತನಕ ಬಂದಿರುವ ಕೋಮುವಾದಿ ನೆಲೆಯ ಆಕರಗಳು ಕಟ್ಟಿದ ಒಮ್ಮುಖ ಚರಿತ್ರೆಯ ಪಾಠಗಳಿಂದ. ಎರಡನೆಯದಾಗಿ ನಿಜಾಮರಿಂದ ಈ ಭಾಗ ವಿಮೋಚನೆ ಆಗಿ 75 ವರ್ಷ ಪೂರೈಸಿದೆ. 1948ರ ನಂತರದ ಸ್ವತಂತ್ರ ಭಾರತದಲ್ಲಿ ಈ ಭಾಗದ ಅಭಿವೃದ್ಧಿ ಹೊಂದಿದ್ದು ಎಷ್ಟು? ಇಂದಿನ ಕಲ್ಯಾಣ ಕರ್ನಾಟಕ ಯಾವ ಯಾವ ಕ್ಷೇತ್ರಗಳಲ್ಲಿ, ಯಾವ ಯಾವ ಸಂಗತಿಗಳ ವಿಮೋಚನೆಗಾಗಿ ಕಾದಿದೆ ಎನ್ನುವುದನ್ನು ಪರಿಶೀಲಿಸಬೇಕಿದೆ.
ಮೊದಲನೆಯದಾಗಿ ಒಮ್ಮುಖ ಚರಿತ್ರೆಯ ಪಾಠಗಳಿಂದ ಬಿಡುಗಡೆ ಹೊಂದುವುದು ಹೇಗೆ? ಎಂದು ಯೋಚಿಸುವಾಗ, ಪ್ರಮೋದ್ ಮಂದಾಡೆ, ಅಫ್ಸರ್ ಮುಹಮ್ಮದ್, ಸ್ವಾತಿ ಶಿವಾನಂದ್, ಸುನೀತಾ ಮುಂತಾದ ಹೊಸತಲೆಮಾರಿನ ವಿದ್ವಾಂಸರು ‘ಖಿಡ್ಕಿ’ ಎನ್ನುವ ವೇದಿಕೆಯ ಮೂಲಕ ನಿಜಾಮರ ಆಡಳಿತದ ಕಾಲಘಟ್ಟದ ಬಗ್ಗೆ ಬರೆದ ಹೊಸ ಬಗೆಯ ಸಂಶೋಧನೆ ಮತ್ತು ಅಧ್ಯಯನದ ಬರಹಗಳನ್ನು ಗಮನಿಸಬೇಕು.
ಸದಾ ಹೊಸ ಆಲೋಚನೆಗೆ ತುಡಿಯುವ ಹಿರಿಯ ಲೇಖಕ ಕೆ.ಪಿ. ಸುರೇಶ್ ಅವರು ‘ಖಿಡ್ಕಿ’ ವೇದಿಕೆಯ ಯುವ ಸಂಶೋಧಕರ ಕೆಲವು ಲೇಖನಗಳನ್ನು ಅನುವಾದಿಸಿ ‘ವಾರ್ತಾಭಾರತಿ’ಯಲ್ಲಿ ಸರಣಿಯಲ್ಲಿ ಪ್ರಕಟಿಸಿದರು. ಈ ಲೇಖನಗಳು ಹೈದರಾಬಾದ್ ನಿಜಾಮರು ಸ್ವತಂತ್ರ ಭಾರತದಲ್ಲಿ ಸೇರಲು ನಿರಾಕರಿಸಿ, ಈ ನಿರಾಕರಣೆಗೆ ಜನರನ್ನು ಒಗ್ಗಿಸಲು ಖಾಸಿಂ ರಜ್ವಿ ಎಂಬ ಹಿಂಸಾವಾದಿಯು ಖಾಸಗಿ ಸೇನೆಯಿಂದ ನಡೆಸಿದ ಹಿಂಸೆಯ ಮತ್ತೊಂದು ಮಗ್ಗುಲನ್ನು ಕಾಣಿಸುತ್ತವೆ. ಅಂತೆಯೇ ಸರದಾರ ವಲ್ಲಭಬಾಯಿ ಪಟೇಲ್ ಅವರು 1948 ಸೆಪ್ಟಂಬರ್ 13ರಿಂದ 17ರವರೆಗೆ ‘ಹೈದರಾಬಾದ್ ವಿಮೋಚನೆ’ಗಾಗಿ ನಡೆಸಿದ ಸೈನಿಕ ಕಾರ್ಯಾಚರಣೆ ಕುರಿತು ಭಿನ್ನವಾದ ನೋಟಗಳನ್ನು ಕೊಡುತ್ತವೆ. ಈ ಎರಡೂ ಚಾರಿತ್ರಿಕ ಸಂಗತಿಗಳ ಬಗ್ಗೆ ಕೆಲವು ಏಕರೂಪಿ ಸಿದ್ಧ ಗ್ರಹಿಕೆಗಳಿವೆ. ಅವುಗಳೆಂದರೆ ನಿಜಾಮರ ಆಡಳಿತವು ಸವರ್ಣೀಯ ಹಿಂದೂ ಮತ್ತು ಮುಸ್ಲಿಮ್ ಜಮೀನ್ದಾರರ ಪರವಾಗಿಯೂ, ಸಾಮಾನ್ಯ ಬಡವರು, ರೈತರು, ಕೂಲಿಕಾರರ ಜೀವ ಹಿಂಡುವವರಾಗಿಯೂ ನೋಡಲಾಗಿದೆ. ಈ ದೃಷ್ಟಿಕೋನದ ಹಿಂದೆ ಎಡಪಂಥೀಯ ಆಲೋಚನೆಯ ಎಳೆ ಇದೆ.
ಇನ್ನೊಂದು ಮಗ್ಗುಲಲ್ಲಿ ನಿಜಾಮರ ಕಾಲದಲ್ಲಿ ತತ್ತರಿಸಿದ್ದ ಹಿಂದೂಗಳನ್ನು ಭಾರತದ ಸೇನೆ ಕಾಪಾಡಿತು ಎನ್ನುವುದು. ಇದರ ಹಿಂದೆ ಹಿಂದೂ-ಮುಸ್ಲಿಮ್ ಎಂಬ ಎದುರಾಳಿ ಕೋಮುವಾದಿ ದೃಷ್ಟಿಕೋನವಿದೆ. ಈ ಎರಡೂ ನೆಲೆಗಳಾಚೆ ನಿಜಾಮನ ವೈಯಕ್ತಿಕ ಬದುಕಿನ ನೆಲೆಯೊಂದಿದೆ. ಅದೆಂದರೆ ವೈಯಕ್ತಿಕವಾಗಿ ನಿಜಾಮನು ಒಳ್ಳೆಯವನಾಗಿದ್ದ. ಆಗರ್ಭ ಶ್ರೀಮಂತನಾಗಿದ್ದ, ಭಾರತದ ರಕ್ಷಣಾ ಇಲಾಖೆಗೆ ಅಪಾರ ಬಂಗಾರವನ್ನು ಕೊಟ್ಟವನು, ಆತನ ಆಡಳಿತ ಕಲ್ಯಾಣರಾಜ್ಯವಾಗಿತ್ತು ಎನ್ನುವುದು. ಇಂತಹ ಆಡಳಿತದ ವಿರುದ್ಧ ಕೆಲವು ದಂಗೆಕೋರರ ಗಲಭೆಗಳಿಂದ ನಿಜಾಮರ ಆಡಳಿತಕ್ಕೆ ಕೆಟ್ಟ ಹೆಸರು ಬಂತು ಎನ್ನುವವರಿದ್ದಾರೆ.
ಈ ಬಗೆಯ ಗ್ರಹಿಕೆಗಳಲ್ಲಿ ಒಂದಷ್ಟು ಸತ್ಯ ಇದೆಯಾದರೂ ಒಂದು ದೀರ್ಘ ಕಾಲಘಟ್ಟವನ್ನೂ ಒಂದು ಸಾರ್ವಜನಿಕ ವಿದ್ಯಮಾನವನ್ನು ಹೀಗೆ ಕಪ್ಪು-ಬಿಳುಪಿನ ಹಾಗೆ ಸರಳರೇಖಾತ್ಮಕವಾಗಿ ನೋಡಲಾಗದು. ನೋಡಬಾರದು ಕೂಡ. ಇಂತಹ ವಿದ್ಯಮಾನಗಳಿಗೆ ಏಕಕಾಲಕ್ಕೆ ಹಲವು ಪದರುಗಳಿರುತ್ತವೆ. ಹಲವು ಮಗ್ಗುಲುಗಳಿಂದ ಪರಿಶೀಲಿಸಿದರೆ ಬೇರೆ ಬೇರೆ ಕಾಣದ ಮುಖಗಳು ಅನಾವರಣಗೊಳ್ಳುತ್ತವೆ. ಇತಿಹಾಸ ಬರೆಯುವಲ್ಲಿ ಹಲವು ಆಯಾಮಗಳಿರುವ ಆಕರಗಳ ಏಕಮುಖವನ್ನು ವಿಶ್ಲೇಷಿಸುವುದು ಅಥವಾ ಬೇರೆ ಬಗೆಯ ಸತ್ಯಗಳನ್ನು ಹೇಳುವ ಆಕರಗಳನ್ನು ಗೈರುಹಾಜರು ಮಾಡುವುದು ನಡೆದೇ ಇದೆ. ತಾವು ಏನು ಹೇಳಬೇಕೋ ಅದಕ್ಕೆ ಬೇಕಾದ ಆಧಾರಗಳನ್ನು ಜೋಡಿಸುವ ವಿಧಾನ ಇತಿಹಾಸ ರಚನೆಯಲ್ಲಿ ವ್ಯಾಪಕವಾಗಿದೆ. ಹೈದರಾಬಾದ್ ಕರ್ನಾಟಕದ ಚರಿತ್ರೆಯ ಬರವಣಿಗೆಯಲ್ಲಿ ಆಗಿರುವುದು ಇಂತಹದ್ದೇ ಸಮಸ್ಯೆ. ಕೆಲವು ಕೋಮುದ್ವೇಷವನ್ನು ಶಾಶ್ವತಗೊಳಿಸಲು ಅಂತಹದ್ದೇ ಆಕರಗಳನ್ನು ತಮ್ಮ ದೃಷ್ಟಿಕೋನದಲ್ಲಿ ವಿಶ್ಲೇಷಣೆ ಮಾಡಿದರು. ಇದೊಂದು ರಾಜಕೀಯ ಚಟುವಟಿಕೆ. ಹಾಗಾಗಿಯೇ ಸತ್ಯವನ್ನು ಗೈರುಹಾಜರಾದ ಆಕರಗಳ ಮೂಲಕ ಹೊಸ ನೆಲೆಯನ್ನು ಕಟ್ಟಿಕೊಡಲು ‘ಖಿಡ್ಕಿ’ ಮೂಲದ ಲೇಖನಗಳು ಪ್ರಯತ್ನಿಸುತ್ತವೆ. ಇವು ಸಾಮಾಜಿಕ, ಆರ್ಥಿಕ, ಧಾರ್ಮಿಕ ನೆಲೆಯಲ್ಲಿ ಹೈದರಾಬಾದ್ ಘಟನೆಯನ್ನು ನೋಡುವಂತೆ ಮಾನವೀಯ ಕಣ್ಣೋಟದಲ್ಲಿಯೂ ವಿಶ್ಲೇಷಣೆ ಮಾಡಲು ಪ್ರಯತ್ನಿಸಿವೆ. ಈಗಿನ ಚರಿತ್ರೆಯ ಸಂಶೋಧನಾ ವಿದ್ಯಾರ್ಥಿಗಳಿಗೆ ಈ ಲೇಖನಗಳು ಹೊಸ ಬಾಗಿಲೊಂದನ್ನು ತೆರೆದು ತೋರಿಸುತ್ತವೆ.
‘ಖಿಡ್ಕಿ’ ಯುವ ಸಂಶೋಧಕರು ಮೊದಲಿಗೆ ಈ ವಿಷಯದಲ್ಲಿ ಗೈರು ಹಾಜರಾದ ಅಥವಾ ಕಡೆಗಣಿಸಲ್ಪಟ್ಟ ಆಕರಗಳ ಧೂಳು ಕೊಡವಿ ಬಯಲಿಗೆ ತಂದರು. ಇದರಲ್ಲಿ ಹೈದರಾಬಾದ್ ಪೊಲೀಸ್ ಕಾರ್ಯಾಚರಣೆ ಕುರಿತು ನೂರಾರು ಜನರನ್ನು, ಅಧಿಕಾರಿಗಳನ್ನು ಮಾತಾಡಿಸಿ ಸಿದ್ಧಪಡಿಸಿದ ಸುಂದರಲಾಲ್ ಪಂಡಿತ ನೇತೃತ್ವದ ನಿಯೋಗದ ಗುಪ್ತವರದಿ ಮುಖ್ಯವಾಗಿದೆ. ಹೈದರಾಬಾದ್ ಕಾರ್ಯಾಚರಣೆಯನ್ನು ಕಣ್ಣಾರೆ ಕಂಡವರ ಅಭಿಪ್ರಾಯಗಳು ದಾಖಲಾಗಿವೆ. ಇದರಲ್ಲಿ ಮುಸ್ಲಿಮ್ ನಾಯಕ ಬಹದೂರ್ ಯಾರ್‌ಜಂಗ್, ಕವಿ ಪಂಡಿತ್ ಮುಹಿಯುದ್ದೀನ್ ಮಕ್ತೂಂ ಮೊದಲಾದವರ ಅಭಿಪ್ರಾಯವನ್ನು ಉಲ್ಲೇಖಿಸಲಾಗಿದೆ. ನೇರವಾಗಿ ಹಿಂಸೆಗೆ ಒಳಗಾದ ಜನರ ಕಡು ದುಃಖದ ಮಾತುಗಳು ದಾಖಲಾಗಿವೆ. ವಿಶೇಷವಾಗಿ ಸಬಾಲ್ಟ್ರನ್ ಎಂದು ಕರೆಯಬಹುದಾದ ಬೇರೆ ಬೇರೆ ಜಾತಿ-ವರ್ಗದ ಮಹಿಳೆ, ದಲಿತ-ದಮನಿತರ ಕಣ್ಣೋಟದಿಂದ ಚರಿತ್ರೆಯನ್ನು ಬರೆಯಲಾಗಿದೆ.
ಕೆಲವು ಮುಖ್ಯ ಅಂಶಗಳನ್ನು ಹೀಗೆ ಗುರುತಿಸಬಹುದು. ಆಳುವ ವರ್ಗಕ್ಕೆ ನೋವಾಗದಂತೆ ಇತಿಹಾಸ ರಚಿಸುವ ಮಾದರಿಯ ಹಂಗನ್ನು ಈ ಲೇಖನಗಳು ಮೀರಿವೆ. ವಿಶೇಷವಾಗಿ ಹೈದರಾಬಾದ್ ಸಂಘರ್ಷದಲ್ಲಿ ಮೇಲ್ಜಾತಿ ಹಿಂದೂಗಳನ್ನು ರಕ್ಷಿಸುವ ನೆಲೆಯೊಂದಿತ್ತು. ಇದರ ಪರಿಣಾಮ ಸಂಸ್ಥಾನವನ್ನು ಸ್ವತಂತ್ರ ಭಾರತದೊಂದಿಗೆ ಸೇರ್ಪಡೆ ಮಾಡದೆ ತಮ್ಮ ಜಮೀನು ಅಧಿಕಾರವನ್ನು ರಕ್ಷಣೆ ಮಾಡಿಕೊಳ್ಳುವ ಹುನ್ನಾರವನ್ನು ಗೌಪ್ಯವಾಗಿ ಕಾರ್ಯಾಚರಣೆಗೆ ತಂದರು.
ಸುಂದರ್ ಲಾಲ್ ವರದಿ, ‘‘ರಜಾಕಾರರು ಮುಖ್ಯವಾಗಿ ಪ್ರತೀ ಹಳ್ಳಿ, ಪಟ್ಟಣಗಳಲ್ಲಿ ಸಣ್ಣ ಪ್ರಮಾಣದ ಲೂಟಿ/ವಸೂಲಿ ಕಂದಾಯ ಹೇರಿದ್ದರು. ಇದನ್ನು ಪಾವತಿಸಿದ ಮೇಲೆ ಯಾವುದೇ ತೊಂದರೆ ನೀಡುತ್ತಿರಲಿಲ್ಲ. ಪ್ರತಿರೋಧ ಒಡ್ಡಿದಲ್ಲೆಲ್ಲಾ ಬಲಾತ್ಕಾರದ ಲೂಟಿಯಾಯಿತು. ಪ್ರತಿರೋಧ ಇನ್ನಷ್ಟು ಹೆಚ್ಚಿದಲ್ಲಿ ಕೊಲೆ, ಮಾನಭಂಗಗಳೂ ನಡೆದವು. ‘ರಜಾಕಾರ್’ ಎಂಬ ಪದ, ಈ ಪ್ರದೇಶದಲ್ಲಿ ನಡೆದ ಎಲ್ಲಾ ಹಿಂಸಾತ್ಮಕ ಚಟುವಟಿಕೆಗಳಲ್ಲಿ ಬಳಕೆಯಾಗಿತ್ತು. ಸ್ಥಳೀಯ ದರೋಡೆಕೋರರು, ರೌಡಿಗಳೆಲ್ಲಾ ರಜಾಕಾರರ ಹೆಸರಿನಲ್ಲಿ ಲೂಟಿ ಮಾಡಿದರು. ಈಗ ನಾವು ರಜಾಕಾರರ ಹಿಂಸೆಯನ್ನು ನಿರಾಕರಿಸದೆ, ಇತರೇ ಗುಂಪಿನವರ, ವ್ಯಕ್ತಿಗಳ ಕಾರ್ಯಾಚರಣೆಯನ್ನು ವಿಶ್ಲೇಷಿಸಬೇಕಿದೆ..’’ ಎನ್ನುತ್ತದೆ. ಇಲ್ಲಿ ರಜಾಕಾರರ ಹಿಂಸೆಯನ್ನು ಮರೆಮಾಚಬೇಕೆಂಬ ಉದ್ದೇಶವಿಲ್ಲ. ಬದಲಾಗಿ ರಜಾಕಾರರ ಹೆಸರನ್ನು, ಅವರ ಬಗೆಗಿನ ಭಯವನ್ನು ಬಂಡವಾಳ ಮಾಡಿಕೊಂಡು ಬೇರೆ ಬೇರೆಯವರು ನಡೆಸಿದ ಹಿಂಸೆಯನ್ನು ಮತ್ತೊಂದು ಮಗ್ಗುಲಲ್ಲಿ ನೋಡಬೇಕು ಎಂದು ಒತ್ತಾಯಿಸುತ್ತದೆ.
ರಜಾಕಾರರ ಹಾವಳಿಯ ಮತ್ತು ಸೈನಿಕ ಕಾರ್ಯಾಚರಣೆಯ ಸಂದರ್ಭದಲ್ಲಿ ಹೈದರಾಬಾದಿನ ಮುಸ್ಲಿಮರು ಅತ್ಯಂತ ನತದೃಷ್ಟ ಸ್ಥಿತಿಯಲ್ಲಿದ್ದರು ಎನ್ನುವುದನ್ನು ಈ ಅಧ್ಯಯನಗಳು ದಾಖಲಿಸುತ್ತವೆ. ಕೋಮು ಸೌಹಾರ್ದ, ಭ್ರಾತೃತ್ವದ ಹತ್ತಾರು ಉದಾಹರಣೆಗಳು ದಾಖಲಾಗಿವೆ. ರಜಾಕಾರರ ಕಾರ್ಯಾಚರಣೆ ತೀವ್ರವಾಗಿದ್ದಾಗಲೂ, ಸ್ಥಳೀಯವಾಗಿ ಮುಸ್ಲಿಮರು ತಮ್ಮ ಹಿಂದೂ ನೆರೆಹೊರೆಯವರಿಗೆ ಯಾವ ಅಪಾಯವೂ ಆಗದಂತೆ ನೋಡಿಕೊಂಡಿದ್ದರು. ಸೂಫಿ ಆಧ್ಯಾತ್ಮಿಕ ನಾಯಕರು ಈ ರಕ್ಷಣೆಯ ಮುಂಚೂಣಿಯಲ್ಲಿದ್ದರು. ಪೊಲೀಸ್ ಕಾರ್ಯಾಚರಣೆ ಮತ್ತು ತರುವಾಯದ ದಿನಗಳಲ್ಲಿ ಹಿಂದೂಗಳೂ ಇದೇ ರೀತಿ ಮುಸ್ಲಿಮರನ್ನು ರಕ್ಷಿಸಿದರು. ಪಂಡಿತ್ ಸುಂದರ್ ಲಾಲ್ ವರದಿಯು ಹಿಂದೂ ನೇಕಾರರು ಮುಸ್ಲಿಮ್ ನೇಕಾರರನ್ನು ರಕ್ಷಿಸಿದ್ದನ್ನು ದಾಖಲಿಸುತ್ತದೆ. ಮುಸ್ಲಿಮ್ ಮಹಿಳೆಯರ ಅಪಹರಣವಾದಾಗಲೂ ಹಿಂದೂಗಳು ಅವರನ್ನು ರಕ್ಷಿಸಿದ್ದರು. ಇಂತಹ ಕೋಮು ಸೌಹಾರ್ದ, ಭ್ರಾತೃತ್ವದ ಕತೆಗಳನ್ನು ನಾವು, ಹೆಚ್ಚು ಹೆಚ್ಚು ಪ್ರಚುರಪಡಿಸಬೇಕಿದೆ. ಮುನ್ನೆಲೆಗೆ ತರಬೇಕಿದೆ ಎಂದು ಲೇಖಕರು ಅಭಿಪ್ರಾಯ ಪಡುತ್ತಾರೆ.
ಎ. ಸುನೀತಾ ಅವರು ವಿಶ್ಲೇಷಿಸುತ್ತಾ ‘‘ಅಲ್ಲಿ ಬಹುಬಗೆಯ ‘ಸ್ವಾತಂತ್ರ್ಯ ಹೋರಾಟಗಾರ’ರಿದ್ದರು. ರಜಾಕಾರರು ಹೈದರಾಬಾದ್ ಸಂಸ್ಥಾನ ಮತ್ತು ಗ್ರಾಮೀಣ ತೆಲಂಗಾಣದ ಭೂಮಾಲಕ ವರ್ಗವನ್ನು ರಕ್ಷಿಸಲು ಸೃಷ್ಟಿಯಾಗಿದ್ದರು. ಗಡಿಗುಂಟ ಇದ್ದ ‘ಭಾರತದ ಸ್ವಾತಂತ್ರ್ಯ ಹೋರಾಟಗಾರರು’ ‘ಮುಸ್ಲಿಮ್ ದೊರೆಯ ಕಪಿಮುಷ್ಟಿಯಿಂದ’ ಹೈದರಾಬಾದ್ ಸಂಸ್ಥಾನವನ್ನು ವಿಮೋಚನೆಗೊಳಿಸಲು ಸೃಷ್ಟಿಯಾಗಿದ್ದರು. ಪೊಲೀಸ್ ಕಾರ್ಯಾಚರಣೆಯ ಬಳಿಕ ಸಿಕ್ಕಿದ ಹೊಸ ಬಗೆಯ ಸ್ವಾತಂತ್ರ್ಯದ ಅವಕಾಶ ಬಳಸಿಕೊಂಡ ಹಿಂಸಾತ್ಮಕ ದುಷ್ಟಪಡೆಗಳು ಹಿಂದೂ ಶಕ್ತಿಯನ್ನು ಸ್ಥಾಪಿಸಲು ಮುಸ್ಲಿಮರ ಮೇಲೆ ದಾಳಿ ನಡೆಸಿದರು’’ ಎನ್ನುತ್ತಾರೆ.
ರಜಾಕಾರರ ದಾಳಿಯ ಸಂದರ್ಭದಲ್ಲಿ ರಾತ್ರಿ ಬರುತ್ತಿದ್ದವರು ಮತ್ತು ರಜಾಕಾರರ ನಡುವೆ ಇದ್ದ ವ್ಯತ್ಯಾಸವನ್ನು ಗುಂಟೂರಿನ ಇರಾವತಿ ಎಂಬವರು ಸ್ಪಷ್ಟವಾಗಿ ಗುರುತಿಸಿದ್ದನ್ನು ಉಲ್ಲೇಖಿಸಲಾಗಿದೆ. ಅದು ಹೀಗಿದೆ, ‘‘ರಜಾಕಾರರು ಹಗಲು ಬಂದು ಒಂದೋ ಎರಡೋ ಅಕ್ಕಿ ಮೂಟೆ ಕೇಳುತ್ತಿದ್ದರು. ಹಗಲು ಬರುತ್ತಿದ್ದವರು ಮುಸ್ಲಿಮರೇನೂ ಆಗಿರಲಿಲ್ಲ. ಅವರೆಲ್ಲಾ ತಿಂಗಳ ಸಂಬಳಕ್ಕೆ ದುಡಿಯುತ್ತಿದ್ದ ಸಮವಸ್ತ್ರ ಧರಿಸಿದ ಕೆಳ ಜಾತಿಯವರಾಗಿದ್ದರು. ಅವರು ಬಂದು ಅನ್ನ ಆಹಾರ ಕೇಳೋರು. ಅದೇನೋ ಪರವಾಗಿಲ್ಲ, ರಾತ್ರಿ ಹಳ್ಳಿಗಳಿಗೆ ದಾಳಿ ಮಾಡುತ್ತಿದ್ದವರಾರು? ದಶಕದ ಮೇಲೆಯಷ್ಟೇ ಅವರು ಯಾರು ಅಂತ ನನಗೆ ಗೊತ್ತಾಗಿದ್ದು. ಹೈದರಾಬಾದ್ ಸಂಸ್ಥಾನವನ್ನು ‘ವಿಮೋಚನೆ’ಗೊಳಿಸಲು ಗೆರಿಲ್ಲಾ ದಾಳಿ ಮಾಡಲು ಸಂಸ್ಥಾನಾದ್ಯಂತ ಕ್ಯಾಂಪ್‌ಗಳನ್ನು ಸ್ಥಾಪಿಸಿ, ಗೆರಿಲ್ಲಾ ದಾಳಿ ನಡೆಸುತ್ತಿದ್ದ ‘ಸ್ವಾತಂತ್ರ್ಯ ಹೋರಾಟಗಾರ’ರೇ ಈ ರಾತ್ರಿ ದಾಳಿ ಮಾಡುತ್ತಿದ್ದವರು. ರಜಾಕಾರರು ಹೈದರಾಬಾದ್ ಸಂಸ್ಥಾನದ ಸ್ವಾಯತ್ತತೆ ಉಳಿಸಲು ಹೋರಾಡುತ್ತಿದ್ದೇವೆ ಅಂದರೆ, ಇವರು ಹೈದರಾಬಾದ್‌ನ್ನು ವಿಮೋಚನೆಗೊಳಿಸುತ್ತಿದ್ದೇವೆ ಎನ್ನುತ್ತಿದ್ದರು. ಈ ಪ್ರಕ್ರಿಯೆಯಲ್ಲಿ ಇಬ್ಬರೂ ಗಲಭೆ ಸೃಷ್ಟಿಸಿದ್ದರು’’.
ಹೀಗೆ ಚರಿತ್ರೆಯನ್ನು ಏಕಮುಖವಾಗಿ ನೋಡದೆ ದ್ವೇಷ ಅಥವಾ ಕುರುಡು ಪ್ರೀತಿಯಿಂದ ದಾಖಲಿಸದೆ ಈ ಲೇಖನಗಳು ವಾಸ್ತವದ ಬೇರೆ ಬೇರೆ ನೆಲೆಗಳನ್ನು ಕಾಣಿಸುತ್ತಿವೆ. ರಹಮತ್ ತರೀಕೆರೆ ಅವರು ಈ ಲೇಖನಗಳನ್ನು ವಿಶ್ಲೇಷಿಸುತ್ತಾ, ‘‘ಹೈದರಾಬಾದ್ ಸಂಘರ್ಷವನ್ನು ಅಖಂಡ ಭಾರತ, ನಿಜಾಮ್ ಆಳ್ವಿಕೆ ಮತ್ತು ಸ್ಥಳೀಯ ಭೂಮಾಲಕತ್ವವನ್ನು ರಕ್ಷಿಸಲು ನಿರತವಾಗಿದ್ದ ಶಕ್ತಿಗಳು ಸೇರಿ ಮಾಡಿದ ಹೋರಾಟವೆಂದೂ, ದುಡಿವ ಜನರ ಮೇಲೆ ದಬ್ಬಾಳಿಕೆ ಮಾಡುವಲ್ಲಿ ನಿಜಾಮ್ ಸೈನ್ಯ ರಜಾಕಾರ್ ಸೈನ್ಯ ಭಾರತೀಯ ಸೈನ್ಯಗಳಲ್ಲಿ ವ್ಯತ್ಯಾಸವಿರಲಿಲ್ಲ ಎಂಬ ಘೋರಸತ್ಯವನ್ನು ಇವು ಪ್ರಸ್ತಾಪಿಸುತ್ತವೆ. ಮತೀಯ ಬಣ್ಣಕೊಟ್ಟು ಅಧಿಕಾರಸ್ಥ ರಾಜಕಾರಣ ಬಳಸಿಕೊಳ್ಳುವ ಚರಿತ್ರೆಯ ವಿದ್ಯಮಾನಗಳು, ವಾಸ್ತವದಲ್ಲಿ ಸೂಕ್ಷ್ಮವಾದ ಸಾಮಾಜಿಕ ಮತ್ತು ಆರ್ಥಿಕ ವರ್ಗಗಳ ಹಿನ್ನೆಲೆಯಲ್ಲಿ ರೂಪುಗೊಂಡಿರುತ್ತವೆ. ಹೈದರಾಬಾದಿನ ಆಳುವವರ್ಗ ಮುಸ್ಲಿಮರು ಆಗಿದ್ದರೂ, ಸಂಸ್ಥಾನದ ಬಹುತೇಕ ಮುಸ್ಲಿಮರು ಬಡವರಾಗಿದ್ದುದರ ವೈರುಧ್ಯವನ್ನು ಇವು ತೋರಿಸುತ್ತವೆ’’ ಎನ್ನುತ್ತಾರೆ.