ದೂರದೃಷ್ಟಿಯ ಸುಧಾರಕ ಅಂಬೇಡ್ಕರ್

Update: 2025-04-14 09:19 IST
ದೂರದೃಷ್ಟಿಯ ಸುಧಾರಕ ಅಂಬೇಡ್ಕರ್
  • whatsapp icon

ಇಂದು ಭಾರತದ ಶ್ರೇಷ್ಠ ದಾರ್ಶನಿಕರಲ್ಲಿ ಒಬ್ಬರಾದ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜನ್ಮ ದಿನೋತ್ಸವ. ಡಾ.ಅಂಬೇಡ್ಕರ್ ಅವರ ಪರಂಪರೆಯನ್ನು ಕಡೆಗಣಿಸಲು ಉದ್ದೇಶಪೂರ್ವಕ ಮತ್ತು ಅನ್ಯಾಯದ ಪ್ರಯತ್ನಗಳು ನಡೆದಿವೆ. ಒಂದು ಶತಮಾನಕ್ಕೂ ಹೆಚ್ಚು ಸಮಯದ ನಂತರ, ಅವರನ್ನು ಒಬ್ಬ ದಲಿತ ನಾಯಕನ ಸ್ಥಾನಕ್ಕೆ ಇಳಿಸುವುದು ಅವರ ಪರಂಪರೆಗೆ ಮಾಡಿದ ಅತಿದೊಡ್ಡ ಅನ್ಯಾಯ. ಇಂದು, ಅವರನ್ನು ದಲಿತರು ಮತ್ತು ಸಮಾಜದ ಅಂಚಿನಲ್ಲಿರುವವರ ಪ್ರತಿರೋಧದ ಸಂಕೇತವಾಗಿ ಮಾತ್ರ ನೋಡಬಾರದು, ಅವರ ಬೆಂಬಲ ನಿಸ್ಸಂದೇಹವಾಗಿ ಮತ್ತು ಸದಾ ಆ ಸಮುದಾಯಕ್ಕೆ ಇದ್ದೇ ಇದೆ. ಆದರೆ ಆಧುನಿಕ ಭಾರತದ ಅಗ್ರಗಣ್ಯ ಚಿಂತಕರಲ್ಲಿ ಒಬ್ಬರಾಗಿಯೂ ಅಂಬೇಡ್ಕರ್ ಅವರನ್ನು ನೋಡುವುದು ಬಹಳ ಮುಖ್ಯ.

ಅವರು ಶಾಲೆಯಲ್ಲಿದ್ದಾಗ, ಇತರ ಮಕ್ಕಳು ನೀರು ಕುಡಿಯುತ್ತಿದ್ದಂತಹ ನಲ್ಲಿಯಿಂದ ನೀರನ್ನು ಕುಡಿಯಲು ಸಹ ಅವರಿಗೆ ಅನುಮತಿಸಲಾಗಲಿಲ್ಲ ಎಂದು ದಾಖಲಿಸಲಾಗಿದೆ. ಒಂದು ದಿನ, ಉರಿ ಬಿಸಿಲಿನಲ್ಲಿ, ಅವರು ತಮ್ಮ ಹತ್ತಿರದ ಕೊಳವೊಂದರಲ್ಲಿ ನೀರು ಕುಡಿಯಲು ನಿರ್ಧರಿಸುವ ಮೂಲಕ ಮೇಲು ವರ್ಗದವರು ದಬ್ಬಾಳಿಕೆಯಿಂದ ಹೇರಿದ್ದ ನಿಷೇಧವನ್ನು ಉಲ್ಲಂಘಿಸುವ ಧೈರ್ಯ ಮಾಡಿದ್ದಕ್ಕಾಗಿ ಅವರ ಮೇಲೆ ಹಲ್ಲೆ ನಡೆಸಲಾಯಿತು. ಅಂತಹ ಘಟನೆಯ ನಂತರ, ಬೇರೆ ಯುವಕರಾಗಿದ್ದರೆ ತಮ್ಮ ಹಣೆಬರಹ ಎಂದುಕೊಂಡು ರಾಜಿಯಾಗುತ್ತಿದ್ದರು. ಅಥವಾ ಆ ಯುವಕರು ಪ್ರತಿಗಾಮಿಗಳಾತ್ತಿದ್ದರು, ಹಿಂಸಾತ್ಮಕ ಕ್ರಿಯೆಯ ಮೂಲಕ ಅನ್ಯಾಯದ ವ್ಯವಸ್ಥೆಯ ವಿರುದ್ಧ ದಂಗೆ ಏಳುತ್ತಿದ್ದರು. ಆದರೆ ಅಂಬೇಡ್ಕರ್ ಅವರು ತಮ್ಮ ಆಂತರಿಕ ಉದ್ವೇಗವನ್ನು ಕಲಿಕೆಯ ಉತ್ಸಾಹವಾಗಿ ಮಾರ್ಪಡಿಸಿದರು. ಅವರು ‘ಕೊಲಂಬಿಯಾ’ ಮತ್ತು ‘ಲಂಡನ್ ಸ್ಕೂಲ್ ಆಫ್ ಇಕನಾಮಿಕ್ಸ್’ನಲ್ಲಿ ಪದವಿಗಳನ್ನು ಒಳಗೊಂಡಂತೆ ಎಂಎ, ಎಂಎಸ್ಸಿ, ಪಿಎಚ್.ಡಿ, ಡಿಎಸ್ಸಿ, ಡಿಲಿಟ್ ಮತ್ತು ‘ಬಾರ್-ಅಟ್-ಲಾ’ ಪದವಿಗಳನ್ನು ಪಡೆದರು. ಸಮಾಜವು ಅವರಿಗೆ ಯಾವುದೋ ಒಂದು ನಲ್ಲಿಯಿಂದ ನೀರು ಕುಡಿಯಲು ಅಥವಾ ಅದೇ ಶಾಲೆಗಳಲ್ಲಿ ಅಧ್ಯಯನ ಮಾಡಲು ಬಿಡದಿದ್ದರೇನಂತೆ, ಅವರು ಅವೆಲ್ಲವುಗಳನ್ನೂ ಸಂಪೂರ್ಣವಾಗಿ ಮೀರಿ ವಿದೇಶದಲ್ಲಿ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದರು. ಇದರ ಹೊರತಾಗಿಯೂ, ಅವರು ತಮ್ಮ ಮಾತೃಭೂಮಿ ಮತ್ತು ಕರ್ಮಭೂಮಿಯಾದ ಭಾರತಕ್ಕೆ ಮರಳುವ ಬಗ್ಗೆ ಸದಾ ತುಡಿತ ಹೊಂದಿದ್ದರು.

ಡಾ. ಅಂಬೇಡ್ಕರ್ ಅವರಿಗೆ ಸಾಟಿಯಿಲ್ಲದ ಧೈರ್ಯ, ಬುದ್ಧಿವಂತಿಕೆ ಮತ್ತು ಪ್ರಾಮಾಣಿಕತೆಗಳು ದೈವದತ್ತವಾಗಿ ಬಂದಿವೆ. ಅವುಗಳನ್ನು ಅವರು ಸಮಾಜ ಸುಧಾರಕರಾಗಿ, ನ್ಯಾಯಶಾಸ್ತ್ರಜ್ಞರಾಗಿ, ಅರ್ಥಶಾಸ್ತ್ರಜ್ಞರಾಗಿ, ತತ್ವಜ್ಞಾನಿಯಾಗಿ, ಮಾನವ ಹಕ್ಕುಗಳ ಹೋರಾಟಗಾರರಾಗಿ ಮತ್ತು ರಾಷ್ಟ್ರ ನಿರ್ಮಾತೃವಾಗಿ ಬಳಸಿದರು. ಡಾ. ಅಂಬೇಡ್ಕರ್ ಅವರ ಪಾಂಡಿತ್ಯದ ಆಳ ಮತ್ತು ಅಗಲಕ್ಕೆ ಸಾಟಿಯಿಲ್ಲ. ಅವರು ರಾಜಕೀಯದಿಂದ ನೀತಿಶಾಸ್ತ್ರದವರೆಗೆ, ಸಮಾಜಶಾಸ್ತ್ರದಿಂದ ಮಾನವಶಾಸ್ತ್ರದವರೆಗೆ, ಅರ್ಥಶಾಸ್ತ್ರದಿಂದ ಕಾನೂನಿನವರೆಗೆ ಮತ್ತು ರಾಜಕೀಯ ಅರ್ಥಶಾಸ್ತ್ರದಿಂದ ಧರ್ಮಶಾಸ್ತ್ರದವರೆಗೆ ಅನೇಕ ವಿಷಯಗಳು ಮತ್ತು ವಿಚಾರಗಳ ಬಗ್ಗೆ ವ್ಯಾಪಕವಾಗಿ ಬರೆದಿದ್ದಾರೆ.

ಸಾಂಸ್ಥಿಕ ನಿರ್ಮಾತೃವಾಗಿ ಡಾ. ಅಂಬೇಡ್ಕರ್ ಅವರ ಪಾತ್ರವನ್ನು ಸಹ ಎತ್ತಿ ತೋರುವುದು ಮುಖ್ಯವಾಗಿದೆ. ಆಧುನಿಕ ಭಾರತದಲ್ಲಿ ‘ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ’(ಆರ್‌ಬಿಐ) ಮತ್ತು ‘ಕೇಂದ್ರ ಜಲ ಆಯೋಗ’ದಂತಹ ಹಲವಾರು ಸಂಸ್ಥೆಗಳ ಮೂಲವು ಬಾಬಾ ಸಾಹೇಬ್ ಅವರ ದೂರದೃಷ್ಟಿಯಲ್ಲಿ ಅಡಗಿದೆ. ಅರ್ಥಶಾಸ್ತ್ರ ಮತ್ತು ಆರ್ಥಿಕ ಇತಿಹಾಸದಲ್ಲಿ ಅವರ ಪಾಂಡಿತ್ಯವನ್ನು ಆಧರಿಸಿ, ಅವರು ‘ರಾಯಲ್ ಕಮಿಷನ್ ಆನ್ ಇಂಡಿಯನ್ ಕರೆನ್ಸಿ ಆಂಡ್ ಫೈನಾನ್ಸ್’ಗೆ ನೀಡಿದ ಸಾಕ್ಷ್ಯದಲ್ಲಿ ಭಾರತ ಎದುರಿಸುತ್ತಿರುವ ವಿತ್ತೀಯ ಸಮಸ್ಯೆಗಳನ್ನು ವಿಶ್ಲೇಷಿಸಿದರು. ಈ ಪ್ರಬಂಧದಲ್ಲಿ, ಬ್ರಿಟಿಷರು ನಿರ್ವಹಿಸುತ್ತಿದ್ದ ಸ್ಥಿರ ವಿನಿಮಯ ವ್ಯವಸ್ಥೆಯು ಭಾರತದಲ್ಲಿ ಹೇಗೆ ಅವರ ಹಿತಾಸಕ್ತಿಗಳನ್ನಷ್ಟೇ ಪೂರೈಸುತ್ತದೆ ಎಂಬುದನ್ನು ಅಂಬೇಡ್ಕರ್ ಅವರು ವಿವರಿಸಿದರು. ಅಂತಿಮವಾಗಿ, ಇದು ಕೇಂದ್ರ ಬ್ಯಾಂಕಿನ ಕಾರ್ಯಗಳನ್ನು ನಿರ್ವಹಿಸಲು ‘ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ’ದ ಸ್ಥಾಪನೆಗೆ ಅಡಿಪಾಯವಾಯಿತು.

ಡಾ. ಅಂಬೇಡ್ಕರ್ ಅವರು ಕಟ್ಟಾ ಪ್ರಜಾಪ್ರಭುತ್ವವಾದಿಯಾಗಿದ್ದರು. ಪ್ರಜಾಪ್ರಭುತ್ವ ಸ್ವರೂಪದ ಸರಕಾರವೊಂದು ಪ್ರಜಾಪ್ರಭುತ್ವದ ಸ್ವರೂಪದ ಸಮಾಜದ ಪರಿಕಲ್ಪನೆಯನ್ನು ಆಧರಿಸುತ್ತದೆ ಎಂದು ಅವರು ಬಲವಾಗಿ ನಂಬಿದ್ದರು. ಸಮಾಜದಲ್ಲಿ ನೈತಿಕತೆಯ ನೆಲಗಟ್ಟಿಲ್ಲದೆ, ಪ್ರಜಾಪ್ರಭುತ್ವ ಮತ್ತು ಕಾನೂನಿನ ನಿಯಮ ಇರಲು ಸಾಧ್ಯವಿಲ್ಲ ಎಂದು ಅವರು ನಂಬಿದ್ದರು. ಅವರ ಪಾಲಿಗೆ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದಂತೆಯೇ ಪ್ರಜಾಪ್ರಭುತ್ವ, ರಾಜಕೀಯ ಮತ್ತು ನೈತಿಕತೆಗಳು ‘ತ್ರಿಮೂರ್ತಿ’ಗಳಾಗಿದ್ದವು ಎಂದು ಹೇಳಬಹುದು. ನೀವು ರಾಜಕೀಯವನ್ನು ಕಲಿಯಬಹುದು ಮತ್ತು ನೈತಿಕತೆಯ ಬಗ್ಗೆ ನಿಮಗೆ ಕಿಂಚಿತ್ತೂ ತಿಳಿದಿಲ್ಲದಿರಬಹುದು, ಅಷ್ಟು ಮಾತ್ರವಲ್ಲ ರಾಜಕೀಯವು ನೈತಿಕತೆ ಇಲ್ಲದೆಯೂ ಕೆಲಸ ಮಾಡಬಹುದು. ನನ್ನ ಪ್ರಕಾರ, ಇದು ಅತ್ಯಂತ ಆಶ್ಚರ್ಯಕರವಾದ ಪ್ರಸ್ತಾಪ ಮತ್ತು ನೈತಿಕ ವ್ಯವಸ್ಥೆ ಇಲ್ಲದಿದ್ದರೆ, ಪ್ರಜಾಪ್ರಭುತ್ವವು ಛಿದ್ರವಾಗುತ್ತದೆ ಎಂದು ಅವರು ಪ್ರತಿಪಾದಿಸುತ್ತಿದ್ದರು. ತಮ್ಮ ಮಹಾನ್ ನಾಯಕ ಗಾಂಧೀಜಿಯವರಂತೆ ಅಂಬೇಡ್ಕರ್ ಕೂಡ ಮೂಲಭೂತ ಸಾಮಾಜಿಕ ಸುಧಾರಣೆಗೆ ಬದ್ಧರಾಗಿದ್ದರು.

ಏಕೆಂದರೆ ಅವರು ಭಾರತದ ಭವಿಷ್ಯ, ಅದರ ಪ್ರಜಾಪ್ರಭುತ್ವ ಮತ್ತು ಕಷ್ಟಪಟ್ಟು ಗಳಿಸಿದ ಸ್ವಾತಂತ್ರ್ಯದ ಬಗ್ಗೆ ಆಳವಾಗಿ ಚಿಂತಿತರಾಗಿದ್ದರು. ಸಂವಿಧಾನ ರಚನಾ ಸಭೆಯಲ್ಲಿ ತಮ್ಮ ಕೊನೆಯ ಭಾಷಣದಲ್ಲಿ ಅವರ ಈ ಕಳವಳ ಸ್ಪಷ್ಟವಾಗಿ ಗೋಚರವಾಗುತ್ತಿತ್ತು. ‘‘ನಮ್ಮ ಕೊನೆಯ ಹನಿ ರಕ್ತದಿಂದಲಾದರೂ ನಮ್ಮ ಸ್ವಾತಂತ್ರ್ಯವನ್ನು ರಕ್ಷಿಸಲು ನಾವು ದೃಢನಿಶ್ಚಯ ಮಾಡಬೇಕು’’ ಎಂದು ಡಾ. ಅಂಬೇಡ್ಕರ್ ಅವರು ಭಾರೀ ಹರ್ಷೋದ್ಗಾರಗಳ ನಡುವೆ ಹೇಳಿದ್ದರು. ಭಾರತೀಯರು ಅಲ್ಪತೃಪ್ತರಾದರೆ ಭಾರತವು ಎರಡನೇ ಬಾರಿಗೆ ತನ್ನ ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತದೆ ಎಂದು ಅವರು ಎಚ್ಚರಿಸಿದ್ದಾರೆ. ಪೂನಾದಲ್ಲಿ ತಮ್ಮ ಭಾಷಣವೊಂದರಲ್ಲಿ ಅವರು ಹೀಗೆ ಹೇಳಿದ್ದರು: ನಾವು ಪ್ರಜಾಪ್ರಭುತ್ವವನ್ನು ದಯಪಾಲಿಸುವ ಸಂವಿಧಾನವನ್ನು ಹೊಂದಿದ್ದೇವೆ. ಸರಿ, ನಮಗೆ ಇನ್ನೇನು ಬೇಕು’’ ಸಂವಿಧಾನದ ರಚನೆಯೊಂದಿಗೆ ನಮ್ಮ ಕೆಲಸ ಮುಗಿದಿದೆ ಎಂಬಂತಹ ಉದ್ಧಟತನದ ಭಾವನೆಗೆ ಒಳಗಾಗದಂತೆ ನಾನು ನಿಮ್ಮನ್ನು ಎಚ್ಚರಿಸುತ್ತಿದ್ದೇನೆ. ಆ ಕಾರ್ಯವು ಪೂರ್ಣವಾಗಿಲ್ಲ. ಅದು ಈಗಷ್ಟೇ ಪ್ರಾರಂಭವಾಗಿದೆ. ಸಂವಿಧಾನದ ಪ್ರಧಾನ ವಾಸ್ತುಶಿಲ್ಪಿಯೊಬ್ಬರು ಈ ಮಾತನ್ನು ಹೇಳುತ್ತಾರೆಂದರೆ ಅವರು ನಿಜವಾಗಿಯೂ ಎಷ್ಟು ದೂರದೃಷ್ಟಿಯುಳ್ಳವರಾಗಿದ್ದರು ಎಂಬುದನ್ನು ಇದು ಸೂಚಿಸುತ್ತದೆ.

ಅವರ ಎಚ್ಚರಿಕೆಯ ಮಾತುಗಳು ಭಾರತವನ್ನು ಸುಮಾರು ಎಂಟು ದಶಕಗಳ ಕಾಲ ಸದೃಢ ಪ್ರಜಾಪ್ರಭುತ್ವದ ಹಾದಿಯಲ್ಲಿ ಮುನ್ನಡೆಸಿದವು. ಆದರೆ ಇಂದು, ಜಾತಿ, ಧರ್ಮ, ಜನಾಂಗೀಯತೆ, ಭಾಷೆ ಮುಂತಾದ ಸಾಮಾಜಿಕ ವಿಭಜನೆಗಳ ಆಧಾರದ ಮೇಲೆ ಭಾರತೀಯರ ನಡುವಿನ ಭ್ರಾತೃತ್ವವನ್ನು ಕಡಿಮೆ ಮಾಡಲು ಕೆಲವರು ಮಾಡುತ್ತಿರುವ ಪ್ರಯತ್ನಗಳನ್ನು ನಾವು ನೋಡುತ್ತೇವೆ. ಜಾಗರೂಕರಾಗಿ ಇರುವ ಮೂಲಕ ಈ ವಿಭಜಕ ಪ್ರವೃತ್ತಿಗಳು ಕೇವಲ ವಿಫಲ ಪ್ರಯತ್ನಗಳಾಗುವಂತೆ ನಾವು ಖಚಿತಪಡಿಸಿಕೊಳ್ಳಬೇಕು. ಡಾ. ಅಂಬೇಡ್ಕರ್ ಅವರ ವಿಚಾರಗಳನ್ನು ಮರು ಓದುವುದು ಮತ್ತು ಅವರೊಂದಿಗೆ ಮತ್ತೆ ತೊಡಗಿಸಿಕೊಳ್ಳುವುದು ಈ ಅನ್ವೇಷಣೆಯಲ್ಲಿ ನಮ್ಮ ಪಾಲಿಗೆ ದಾರಿ ದೀಪವಾಗಬಹುದು.

ಉದಾಹರಣೆಗೆ, ಆರ್ಯ-ದ್ರಾವಿಡ ವಿಭಜನೆಯಿಂದ ಹೆಚ್ಚಿನ ಲಾಭವನ್ನು ಪಡೆಯಬಹುದಾಗಿದ್ದಂತಹ ಸಮಯದಲ್ಲಿ ಅಂಬೇಡ್ಕರ್ ಅವರು ಆರ್ಯರ ಆಕ್ರಮಣ ಸಿದ್ಧಾಂತವನ್ನು ಅಪಹಾಸ್ಯ ಮಾಡಿದರು. ಒಂದು ಬುಡಕಟ್ಟು ಅಥವಾ ಕುಟುಂಬವು ಜನಾಂಗೀಯವಾಗಿ ‘‘ಆರ್ಯರದ್ದೇ ಅಥವಾ ದ್ರಾವಿಡರದ್ದೇ ಎಂಬ ಪ್ರಶ್ನೆಯು ವಿದೇಶಿ ವಿದ್ವಾಂಸರು ಬಂದು ವಿಭಜನೆಯ ರೇಖೆಯನ್ನು ಎಳೆಯಲು ಪ್ರಾರಂಭಿಸುವವರೆಗೂ ಭಾರತದ ಜನರನ್ನು ಎಂದಿಗೂ ಕಾಡಿರಲಿಲ್ಲ’’ ಎಂದು ಬಾಬಾ ಸಾಹೇಬ್ ಅವರು 1918ರಲ್ಲಿ ಪ್ರಕಟವಾದ ಪ್ರಬಂಧದಲ್ಲಿ ಬರೆದಿದ್ದಾರೆ. ಮತ್ತೊಂದೆಡೆ, ಯಜುರ್ವೇದ ಮತ್ತು ಅಥರ್ವ ವೇದದ ಋಷಿಗಳು ಶೂದ್ರರಿಗೆ ವೈಭವವನ್ನು ಹಾರೈಸಿದ ಹಲವಾರು ನಿದರ್ಶನಗಳನ್ನು ಅವರು ಉಲ್ಲೇಖಿಸಿದ್ದಾರೆ ಮತ್ತು ಹಲವಾರು ಸಂದರ್ಭಗಳಲ್ಲಿ ಶೂದ್ರನು ಸ್ವತಃ ರಾಜನಾಗಿದ್ದನ್ನೂ ಉಲ್ಲೇಖಿಸಿದ್ದಾರೆ. ಅಸ್ಪಶ್ಯರು ಆರ್ಯರು ಮತ್ತು ದ್ರಾವಿಡರಿಗಿಂತ ಜನಾಂಗೀಯವಾಗಿ ಭಿನ್ನರಾಗಿದ್ದಾರೆ ಎಂಬ ಸಿದ್ಧಾಂತವನ್ನು ಅವರು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ.

ಇದಲ್ಲದೆ, ತಮ್ಮ ಸಂಕುಚಿತ ಮತ್ತು ಪಂಥೀಯ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಭಾಷಾ ಸಮಸ್ಯೆಗಳನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಿರುವವರು, ರಾಷ್ಟ್ರದ ಏಕತೆ ಮತ್ತು ಅದರಲ್ಲಿ ಭಾಷೆಯ ಪಾತ್ರದ ಬಗ್ಗೆ ಡಾ.ಅಂಬೇಡ್ಕರ್ ಅವರ ದೃಷ್ಟಿಕೋನಗಳನ್ನು ಓದುವ ಮೂಲಕ ಸಾಕಷ್ಟು ಪ್ರಯೋಜನ ಪಡೆಯಬಹುದು. ಸೆಪ್ಟಂಬರ್ 10, 1949ರಂದು ಅವರು ಸಂವಿಧಾನ ರಚನಾ ಸಭೆಯಲ್ಲಿ ತಾವು ಕರಗತ ಮಾಡಿಕೊಂಡ ಒಂಭತ್ತು ಭಾಷೆಗಳಲ್ಲಿ ಒಂದಾದ ಸಂಸ್ಕೃತವನ್ನು ಭಾರತ ಒಕ್ಕೂಟದ ಅಧಿಕೃತ ಭಾಷೆಯಾಗಿ ಬೆಂಬಲಿಸುವ ತಿದ್ದುಪಡಿಯನ್ನು ಮಂಡಿಸಿದರು. ತಮ್ಮ ‘ಭಾಷಾವಾರು ರಾಜ್ಯಗಳ ಚಿಂತನೆಗಳು’ ಎಂಬ ಪುಸ್ತಕದಲ್ಲಿ ಅವರು ಹಿಂದಿಯನ್ನು ತಮ್ಮ ಭಾಷೆಯಾಗಿ ಹೊಂದುವುದು ಎಲ್ಲ ಭಾರತೀಯರ ಕರ್ತವ್ಯ ಎಂದು ಘೋಷಿಸಿದ್ದರು. ಬಾಬಾ ಸಾಹೇಬ್ ಅವರು ಸ್ಥಳೀಯ ಹಿಂದಿ ಭಾಷಿಕರಲ್ಲದಿದ್ದರೂ, ಅವರು ರಾಷ್ಟ್ರಕ್ಕೆ ಮೊದಲ ಸ್ಥಾನ ನೀಡಿದ್ದರಿಂದ ಇದನ್ನು ಹೇಳಿದರು ಎಂಬುದನ್ನು ಇಲ್ಲಿ ಗಮನಿಸಬೇಕು.

1952ರ ಡಿಸೆಂಬರ್ 22ರಂದು ನೀಡಿದ ‘ಪ್ರಜಾಪ್ರಭುತ್ವದ ಯಶಸ್ವಿ ಕಾರ್ಯನಿರ್ವಹಣೆಗೆ ಪೂರ್ವಭಾವಿ ಪರಿಸ್ಥಿತಿಗಳು’ ಎಂಬ ಶೀರ್ಷಿಕೆಯ ತಮ್ಮ ಭಾಷಣವೊಂದರಲ್ಲಿ, ಡಾ. ಅಂಬೇಡ್ಕರ್ ಅವರು ಪ್ರಜಾಪ್ರಭುತ್ವದ ಸ್ವರೂಪ ಮತ್ತು ಉದ್ದೇಶವು ಕಾಲಾನಂತರದಲ್ಲಿ ಬದಲಾವಣೆಗೆ ಒಳಗಾಗುತ್ತದೆ ಮತ್ತು ಆಧುನಿಕ ಪ್ರಜಾಪ್ರಭುತ್ವದ ಮೂಲ ಉದ್ದೇಶವು ಜನರ ಕಲ್ಯಾಣವೇ ಆಗಿದೆ ಎಂದು ಹೇಳಿದ್ದರು. ಈ ದೃಷ್ಟಿಕೋನದೊಂದಿಗೆ ದಣಿವರಿಯದೆ ಕೆಲಸ ಮಾಡಿದ ನಮ್ಮ ಸರಕಾರ ಕಳೆದ 10 ವರ್ಷಗಳಲ್ಲಿ 25 ಕೋಟಿ ಜನರನ್ನು ಬಡತನದಿಂದ ಮೇಲೆತ್ತುವಲ್ಲಿ ಯಶಸ್ವಿಯಾಗಿದೆ. ನಾವು 16 ಕೋಟಿ ಮನೆಗಳಿಗೆ ನಲ್ಲಿ ನೀರನ್ನು ಒದಗಿಸಲು ಕೆಲಸ ಮಾಡಿದ್ದೇವೆ. ನಾವು ಬಡ ಕುಟುಂಬಗಳಿಗೆ 5 ಕೋಟಿ ಮನೆಗಳನ್ನು ನಿರ್ಮಿಸಿದ್ದೇವೆ. 2023ರಲ್ಲಿ, ‘ಜನ ಮನ್’ ಅಭಿಯಾನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರಾರಂಭಿಸಿದರು. ಇದು ವಿಶೇಷವಾಗಿ ದುರ್ಬಲ ಬುಡಕಟ್ಟು ವರ್ಗಗಳ(ಪಿವಿಟಿಜಿ) ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳನ್ನು ಸುಧಾರಿಸುವ ಮತ್ತು ‘ಪಿವಿಟಿಜಿ’ ಕುಟುಂಬಗಳು ಮತ್ತು ಜನವಸತಿಗಳನ್ನು ಮೂಲಭೂತ ಸೌಲಭ್ಯಗಳೊಂದಿಗೆ ಸಮೃದ್ಧಗೊಳಿಸುವ ಗುರಿಯನ್ನು ಹೊಂದಿದೆ. ‘ಸಾರ್ವತ್ರಿಕ ಆರೋಗ್ಯ ರಕ್ಷಣೆ’ಯ(ಯುಎಚ್ಸಿ) ದೃಷ್ಟಿಕೋನವನ್ನು ಸಾಧಿಸಲು ನಾವು ‘ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ’ಯನ್ನು ಪ್ರಾರಂಭಿಸಿದ್ದೇವೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವ ಮತ್ತು ಮಾರ್ಗದರ್ಶನದಲ್ಲಿ ನಮ್ಮ ಸರಕಾರ ಜನರಿಗಾಗಿ ಕೈಗೊಂಡಿರುವ ಕಲ್ಯಾಣ ಕಾರ್ಯಗಳು ಪ್ರಜಾಪ್ರಭುತ್ವಕ್ಕೆ ನಮ್ಮ ಸಮರ್ಪಣೆ ಮತ್ತು ಬಾಬಾ ಸಾಹೇಬ್ ಅವರ ಬಗ್ಗೆ ನಮಗಿರುವ ಪೂಜ್ಯಭಾವನೆಯನ್ನು ತೋರಿಸುತ್ತದೆ.

ಡಾ. ಬಿ.ಆರ್.ಅಂಬೇಡ್ಕರ್ ಅವರು ಸಾಮಾಜಿಕ ಮತ್ತು ಆರ್ಥಿಕ ಪ್ರಜಾಪ್ರಭುತ್ವವು ರಾಜಕೀಯ ಪ್ರಜಾಪ್ರಭುತ್ವದೊಂದಿಗೆ ಜೊತೆಯಲ್ಲೇ ಸಾಗುತ್ತದೆ ಎಂದು ನಂಬಿದ್ದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2047ರ ವೇಳೆಗೆ ‘ವಿಕಸಿತ ಭಾರತ’ ಸಾಧನೆಯ ಗುರಿಯನ್ನು ಹೊಂದಿದ್ದಾರೆ. ಈ ಗುರಿಯು ಬಾಬಾ ಸಾಹೇಬ್ ಅವರ ದೃಷ್ಟಿಕೋನಕ್ಕೆ ಅನುಗುಣವಾಗಿದೆ. ಇದಲ್ಲದೆ, ಭವಿಷ್ಯದ ಪೀಳಿಗೆಗೆ ಬಾಬಾ ಸಾಹೇಬ್ ಅವರ ಪರಂಪರೆ ಮತ್ತು ಕೊಡುಗೆಗಳ ಬಗ್ಗೆ ಹೆಚ್ಚಿನ ಅರಿವನ್ನು ಖಚಿತಪಡಿಸಿಕೊಳ್ಳಲು, ನಮ್ಮ ಸರಕಾರವು ‘ಪಂಚತೀರ್ಥ’ವನ್ನು ಅಭಿವೃದ್ಧಿಪಡಿಸುವತ್ತ ಕೆಲಸ ಮಾಡಿದೆ. ಡಾ. ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ಈ ಐದು ಅಪ್ರತಿಮ ಸ್ಥಳಗಳಲ್ಲಿ ಇಂದೋರ್ ಜಿಲ್ಲೆಯ ‘ಮಹೂ’ (ಮಧ್ಯಪ್ರದೇಶ); ನಾಗ್ಪುರದ ‘ದೀಕ್ಷಾ ಭೂಮಿ’(ಮಹಾರಾಷ್ಟ್ರ); ಲಂಡನ್‌ನ ‘ಡಾ.ಅಂಬೇಡ್ಕರ್ ಸ್ಮಾರಕ ಗೃಹ’; ಅಲಿಪುರ್ ರಸ್ತೆಯ (ದಿಲ್ಲಿ) ‘ಮಹಾಪರಿನಿರ್ವಾಣ ಭೂಮಿ’ ಮತ್ತು ಮುಂಬೈನ (ಮಹಾರಾಷ್ಟ್ರ) ‘ಚೈತ್ಯ ಭೂಮಿ’ ಸೇರಿವೆ.

ಕಳೆದ ತಿಂಗಳು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ‘ದೀಕ್ಷಾಭೂಮಿ’ಗೆ ಭೇಟಿ ನೀಡಿದಾಗ, ಬಾಬಾ ಸಾಹೇಬ್ ಅವರ ಕನಸಿನ ಭಾರತವನ್ನು ಸಾಕಾರಗೊಳಿಸಲು ಇನ್ನೂ ಹೆಚ್ಚು ಶ್ರಮಿಸುವ ಸರಕಾರದ ಬದ್ಧತೆಯನ್ನು ಪುನರುಚ್ಚರಿಸಿದರು. ಬಾಬಾ ಸಾಹೇಬ್ ಅವರ ಜನ್ಮ ವಾರ್ಷಿಕೋತ್ಸವವು ಅವರು ನೀಡಿದ ಮೌಲ್ಯಗಳು ಮತ್ತು ಆದರ್ಶಗಳಿಗೆ ನಮ್ಮ ಪ್ರತಿಜ್ಞೆಯನ್ನು ಮರುಸಂಕಲ್ಪಿಸುವ ಅವಕಾಶವನ್ನು ಎಲ್ಲಾ ಭಾರತೀಯರಿಗೆ ನೀಡುತ್ತದೆ. ನಾವು ನಮ್ಮ ಜನಾಂಗ, ಧರ್ಮ, ಪ್ರದೇಶ, ಜಾತಿ ಮತ್ತು ಮತವನ್ನು ಮೀರಿ ‘ಭಾರತೀಯ’ರಾಗೋಣ. ಅಂಬೇಡ್ಕರ್ ಅವರ ಪರಂಪರೆಯನ್ನು ನಿಜವಾಗಿಯೂ ಗೌರವಿಸಲು, ನಾವು ಅವರ ಚಿಂತನೆಯ ಪೂರ್ಣ ವ್ಯಾಪ್ತಿ ಮತ್ತು ಪರಿಪೂರ್ಣತೆಯೊಂದಿಗೆ ಕಾರ್ಯೋನ್ಮುಖರಾಗಬೇಕು ಮತ್ತು ಅವರನ್ನು ಪಂಥೀಯ ನಾಯಕನ ಸ್ಥಾನಕ್ಕೆ ಇಳಿಸುವ ಎಲ್ಲಾ ಪ್ರಯತ್ನಗಳನ್ನು ವಿರೋಧಿಸಬೇಕು. ‘ಸೈಮನ್ ಆಯೋಗ’ಕ್ಕೆ ಸಾಕ್ಷ್ಯ ನೀಡುವಂತೆ ಕೇಳಿದಾಗ ಅಂಬೇಡ್ಕರ್ ಅವರು ಹೇಳಿದಂತೆ, ಜನರಲ್ಲಿ ಅವರು ಮೊದಲು ಭಾರತೀಯರು ಮತ್ತು ಅಂತಿಮವಾಗಿಯೂ ಭಾರತೀಯರು ಎಂಬ ಭಾವನೆಯನ್ನು ಮೂಡಿಸುವುದು ಹಾಗೂ ಸ್ಥಳೀಯ ದೇಶಭಕ್ತಿ ಮತ್ತು ಗುಂಪುಗಾರಿಕೆಗೆ ಶರಣಾಗುವುದರ ವಿರುದ್ಧ ಜನರನ್ನು ಎಚ್ಚರಿಸುವುದು ಅತ್ಯಂತ ಅಗತ್ಯವಾಗಿದೆ. ಬಾಬಾ ಸಾಹೇಬ್ ಅವರು ಭಾರತಕ್ಕೆ ದೇವರು ನೀಡಿದ ಕೊಡುಗೆ ಮತ್ತು ವಿಶ್ವಕ್ಕೆ ಭಾರತ ನೀಡಿದ ಕೊಡುಗೆ. ಇಂದು, 135 ವರ್ಷಗಳ ನಂತರವಾದರೂ, ಬ್ರಿಟಿಷ್ ಭಾರತ ಮತ್ತು ನೂತನ ಸ್ವಾತಂತ್ರ್ಯೋತ್ತರ ಭಾರತವು ನಿರಾಕರಿಸಿರುವ ಅರ್ಹ ಸ್ಥಾನವನ್ನು ಡಾ. ಅಂಬೇಡ್ಕರ್ ಅವರಿಗೆ ನೀಡಿ ಗೌರವಿಸೋಣ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News

ನಿರಾಳತೆ