INDIA ಕೂಟ : ಖರ್ಗೆಯವರ ಸೈದ್ಧಾಂತಿಕ ಬದ್ಧತೆ

INDIA ಮೈತ್ರಿಕೂಟದ ನೇತೃತ್ವ ವಹಿಸಿಕೊಂಡಿರುವ ಖರ್ಗೆಯವರು ಯಾವುದೇ ಸ್ವಾರ್ಥ ಇಲ್ಲದೆ ಕೇವಲ ದೇಶದ ಒಳಿತಿಗಾಗಿ ಶ್ರಮಿಸುತ್ತಿದ್ದಾರೆ. ಉದ್ದೇಶ, ಗುರಿ, ಸೈದ್ಧಾಂತಿಕ ಸ್ಪಷ್ಟತೆಯೊಂದಿಗೆ ಬದ್ಧತೆಯಿಂದ ಮುನ್ನಡೆ ಯುತ್ತಿರುವುದು ಸದ್ಯದ ಮಟ್ಟಿಗೆ ಆಶಾದಾಯಕ ಬೆಳವಣಿಗೆ. ಮೋದಿಯವರು ಕಟ್ಟುವ ಹುಸಿ ಕಥಾನಕಗಳ ಬಣ್ಣ ಬಯಲು ಮಾಡುವುದು, 2024ರ ಲೋಕಸಭಾ ಚುನಾವಣೆಯನ್ನು ‘ಮೋದಿ’ ಕೇಂದ್ರಿತವಾಗದಂತೆ ತಡೆಯುವುದು ಅಗತ್ಯವಾಗಿದೆ.

Update: 2023-08-05 04:55 GMT

INDIA (indian national developmental inclusive alliance) ಕೂಟದ ಬಗ್ಗೆ ಬಿಜೆಪಿಗರು, ಮೋದಿ ಪ್ರಾಯೋಜಿತ ಮಾಧ್ಯಮದವರು ಹಗುರವಾಗಿ ಮಾತನಾಡುತ್ತಿದ್ದಾರೆ.

NDA v/s INDIA ಶೀರ್ಷಿಕೆಯಡಿ ಪ್ರತಿನಿತ್ಯ ನೂರಾರು ಕಟ್ಟು ಕತೆಗಳನ್ನು ಬಿತ್ತರಿಸುತ್ತಿದ್ದಾರೆ. ಅವರು ಜನಮಾನಸದಲ್ಲಿ ಬಿತ್ತಲು ಹೊರಟಿರುವ ಕಥಾನಕದ ಮೂಲ ತಿರುಳು: ಎನ್ಡಿಎ ಮೈತ್ರಿಕೂಟಕ್ಕೆ ನರೇಂದ್ರ ಮೋದಿಯಂತಹ ಪ್ರಬಲ ಹಾಗೂ ಜನಾನುರಾಗಿ ನಾಯಕನ ನೇತೃತ್ವ ಇದೆ. ಆದರೆ INDIA ಕೂಟವನ್ನು ಮುನ್ನಡೆಸಬಲ್ಲ ಸಮರ್ಥ ನಾಯಕ ಇಲ್ಲ ಎಂಬುದು. ಬಿಜೆಪಿಯವರನ್ನು ಮೊದಲು ಒಂದು ನ್ಯಾರೆಟಿವ್ ಸೆಟ್ ಮಾಡುತ್ತಾರೆ. ಅದಕ್ಕೆ ಪ್ರತಿಕ್ರಿಯೆಯಾಗಿ ಯಾವ ನಿರ್ಧಾರ ಕೈಗೊಂಡರೂ ಅದು ಬಿಜೆಪಿಗೇ ಲಾಭವಾಗಬೇಕು. INDIA ಕೂಟಕ್ಕೆ ನಾಯಕರಿಲ್ಲ ಎಂಬ ಟೀಕೆಗೆ ಪ್ರತಿಕ್ರಿಯೆ ನೀಡಲೆಂದು 26 ಪಕ್ಷಗಳಲ್ಲಿ ಒಂದು ಪಕ್ಷದ ಒಬ್ಬರನ್ನು ನಾಯಕನನ್ನಾಗಿ ಆಯ್ಕೆ ಮಾಡಿಕೊಂಡರೆ ಅದಕ್ಕೊಂದು ಕತೆಕಟ್ಟಿ ಮೈತ್ರಿ ಕೂಟದಲ್ಲಿ ಬಿರುಕು ಕಾಣಿಸಿಕೊಳ್ಳುವಂತೆ ಚಿತಾವಣೆ ಮಾಡುತ್ತಾರೆ.

ಈ ಹಿಂದೆ ಯುಪಿಎ ಮತ್ತು ಅದನ್ನು ಬೆಂಬಲಿಸುವ ವ್ಯಕ್ತಿ ಮತ್ತು ಸಂಘಟನೆಗಳನ್ನು ‘ತುಕ್ಡೆ ಗ್ಯಾಂಗ್’ ಎಂದೂ, ತುಕ್ಡೆ ಗ್ಯಾಂಗ್ನ ಸದಸ್ಯರೆಂದು ಕೀಳು ಮಟ್ಟದಲ್ಲಿ ಹೀಯಾಳಿಸುತ್ತಿದ್ದರು. ಹಾಗೆ ನೋಡಿದರೆ ಎನ್ಡಿಎ ಮೈತ್ರಿ ಕೂಟದಲ್ಲಿಯೂ ಸಣ್ಣ ಪುಟ್ಟ ಪಕ್ಷಗಳು ಸೇರಿಕೊಂಡಿವೆ. ಆ ಮೈತ್ರಿ ಕೂಟವನ್ನು ‘ತುಕ್ಡೆ ಗ್ಯಾಂಗ್’ ಎಂದು ಸಂಬೋಧಿಸಬಹುದಲ್ಲ..? ಸಂಸದೀಯ ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡು ಗೌರವಿಸುವ ಯಾರೊಬ್ಬರ ಬಾಯಿಯಲ್ಲೂ ‘ತುಕ್ಡೆ ಗ್ಯಾಂಗ್’ ಎಂಬ ಪದ ಬಳಕೆಯಾಗಬಾರದು. ಹಾಗೆ ಮಾಡುವುದೆಂದರೆ, ಒಕ್ಕೂಟ ವ್ಯವಸ್ಥೆಯನ್ನೂ, ಸಂಸದೀಯ ಪ್ರಜಾಪ್ರಭುತ್ವವನ್ನೂ ಅಪಮಾನಿಸಿದಂತೆ. INDIA ಮೈತ್ರಿಕೂಟದಲ್ಲಿ ಭಾರತದ ಸಂವಿಧಾನವನ್ನು ಒಪ್ಪಿರುವ ಮತ್ತು ಗೌರವಿಸುವ 26 ಪಕ್ಷಗಳಿವೆ. ಸೈದ್ಧಾಂತಿಕ ಬದ್ಧತೆಯುಳ್ಳ, ಸುದೀರ್ಘ ರಾಜಕೀಯ ಅನುಭವ ಹೊಂದಿರುವ, ಅಪ್ಪಟ ದೇಶ ಭಕ್ತರಾದ ಹಲವಾರು ಹಿರಿಯ ನಾಯಕರು ಆ ಕೂಟದಲ್ಲಿದ್ದಾರೆ. ಅವರಲ್ಲಿ ಕೆಲವರಂತೂ ಸರಕಾರದ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಿದವರು. ಅಧಿಕಾರದ ಆಸೆಗಾಗಿ INDIA ಮೈತ್ರಿ ಕೂಟಕ್ಕೆ ಸೇರಿಕೊಂಡವರಿಲ್ಲ. ಮೋದಿ ಆಡಳಿತದ ಒಂಭತ್ತು ವರ್ಷಗಳಲ್ಲಿ ಭಾರತದ ಸಂವಿಧಾನಕ್ಕೆ ಸಾಕಷ್ಟು ಬಾರಿ ಅಪಚಾರ ಮಾಡಲಾಗಿದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಲ ಕಸದಂತೆ ಕಾಣಲಾಗಿದೆ. ಸಂಸದೀಯ ಪ್ರಜಾಪ್ರಭುತ್ವವನ್ನು ಉಳಿಸಲು, ಪಾತಾಳ ತಲುಪಿದ ಹದಗೆಟ್ಟ ಆರ್ಥಿಕ ವ್ಯವಸ್ಥೆಯನ್ನು ಸರಿಪಡಿಸಲು, ಯುವ ಸಮುದಾಯವೂ ಸೇರಿದಂತೆ ಭಾರತದ ಸಾಮಾನ್ಯ ಜನರಿಗೆ ನೆಮ್ಮದಿಯ ಬದುಕು ಕಟ್ಟಿಕೊಡುವ ಸಂಕಲ್ಪದೊಂದಿಗೆ INDIA ಮೈತ್ರಿ ಕೂಟದ ನಾಯಕರು ಕ್ರಿಯಾಶೀಲರಾಗಿದ್ದರೆ.

ಹಾಗೆ ನೋಡಿದರೆ; ಎನ್ಡಿಎ ಮೈತ್ರಿ ಕೂಟದಲ್ಲಿ ಹಿರಿಯರು, ಅನುಭವಿಗಳ ಕೊರತೆ ಇದೆ. ಈ.ಡಿ., ಸಿಬಿಐಗಳಂತಹ ಅಸ್ತ್ರಗಳಿಗೆ ಭಯಭೀತರಾದವರ ಸಂಖ್ಯೆಯೇ ಜಾಸ್ತಿ ಇದೆ. ನಿಸ್ವಾರ್ಥಿಗಳು, ಪ್ರಜಾಪ್ರಭುತ್ವದ ಮೌಲ್ಯಗಳು ಉಳಿಯಲೆಂದು ಹಂಬಲಿಸುವವರೇ ಅಲ್ಲಿಲ್ಲ.

ಭಾರತದ ಸಂವಿಧಾನದ ಬಗ್ಗೆ ಕಿಂಚಿತ್ ಗೌರವ ಹೊಂದಿರದ, ಮನುಧರ್ಮ ಶಾಸ್ತ್ರದ ಸಾರವನ್ನೇ ಮೆದುಳಾಗಿಸಿಕೊಂಡ ಆರೆಸ್ಸೆಸ್ನ ಮಾರ್ಗದರ್ಶನದಲ್ಲಿ ಸರಕಾರ ನಡೆಸುವ ಮೋದಿಯವರಿಗೆ ದೇಶದ ಏಳ್ಗೆಗಿಂತಲೂ ‘ಪ್ರಧಾನಿ ಹುದ್ದೆ’ ಅಲಂಕರಿಸುವುದಷ್ಟೇ ಮುಖ್ಯ ಕಾಳಜಿ. ಕಳೆದ 9 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಯಾವ ಬಗೆಯಲ್ಲಿ ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ಮಾಡಿದ್ದಾರೆಂಬುದು ಭಾರತದ ಸಮಸ್ತ 135 ಕೋಟಿ ಜನ ಸ್ವತಃ ಅನುಭವಿಸಿದ್ದಾರೆ. ಮೋದಿಯವರ ಸಾಧನೆ ಮತ್ತು ವೈಫಲ್ಯಗಳ ನೈಜ ಚಿತ್ರಣವನ್ನು ಭಾರತದ ಮಾಧ್ಯಮದವರು ಮಾಡಲಾರರು. ಈ ಕುರಿತು ಪ್ರತ್ಯೇಕವಾಗಿ ಬರೆದರೆ ಮಾತ್ರ ಮಹಾನ್ ದೇಶಭಕ್ತನ ಮುಖವಾಡ ಕಳಚಬಹುದು. ಎನ್ಡಿಎ ಕೂಟದ ನೇತೃತ್ವ ವಹಿಸಿರುವ ಪ್ರಧಾನಿ ನರೇಂದ್ರ ಮೋದಿಯವರು ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲು ಹರಸಾಹಸ ಪಡುತ್ತಿದ್ದಾರೆ. ಅಂದರೆ ತಮ್ಮ ಸ್ವಾರ್ಥ ಸಾಧನೆಗೆ ಮೈತ್ರಿಕೂಟವನ್ನು ಮುನ್ನಡೆಸುತ್ತಿದ್ದಾರೆ. ಹತ್ತು ವರ್ಷಗಳ ಕಾಲ ಪ್ರಧಾನಿ ಹುದ್ದೆಯಲ್ಲಿದ್ದರೂ ಅವರ ಅಧಿಕಾರ ದಾಹ ತೀರಿಲ್ಲ. 2024ರ ಲೋಕಸಭಾ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟಕ್ಕೆ ಬಹುಮತ ತಂದುಕೊಟ್ಟು ಬಿಜೆಪಿಯಲ್ಲಿನ ರಾಜನಾಥ್ ಸಿಂಗ್ ಅವರಿಗೋ, ಇನ್ಯಾರಿಗೋ ಅಧಿಕಾರ ತ್ಯಾಗ ಮಾಡಲು ಇಷ್ಟೆಲ್ಲ ಪ್ರಯಾಸಪಡುತ್ತಿದ್ದಾರೆ ಎಂದು ಯಾರೂ ಭಾವಿಸಬಾರದು. ಯಾಕೆಂದರೆ; ತ್ಯಾಗದ ಮನೋಧರ್ಮ ಅವರ ವ್ಯಕ್ತಿತ್ವದಲ್ಲೇ ಇಲ್ಲ.

ಮೋದಿಯವರ ಬದುಕು ದೇಶಕ್ಕಾಗಿ ಸಮರ್ಪಿತ, ದೇಶವೆಂದರೆ ಮೋದಿ, ಮೋದಿಯೆಂದರೆ ದೇಶ ಎಂಬ ಹುಸಿ ಕಥಾನಕ ಸೃಷ್ಟಿಸಿ ಚುನಾವಣೆಗಳಲ್ಲಿ ಸಮೃದ್ಧ ಫಸಲು ತೆಗೆಯುತ್ತಾ ಬರಲಾಗಿದೆ. ಆದರೆ ಗುಜರಾತ್ನಿಂದ ದಿಲ್ಲಿಯವರೆಗಿನ ಅವರ ರಾಜಕೀಯ ಪಯಣ ಸ್ವಾರ್ಥದಿಂದ ಕೂಡಿದೆ. ಈ ಮಾತಿಗೆ ಸಾವಿರ ನಿದರ್ಶನಗಳನ್ನು ಕೊಡಬಹುದು. ತಮಗೆ ಲಾಭವಿಲ್ಲದೆ ಏನನ್ನೂ ಮಾಡಲಾರರು ಎಂಬ ಮಾತಿಗೆ ಒಂದು ಗಟ್ಟಿ ನಿದರ್ಶನ ಕೊಡುತ್ತೇನೆ. 2009ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಹಿರಿಯರಾದ ಲಾಲ್ಕೃಷ್ಣ ಅಡ್ವಾಣಿಯವರು ಪ್ರಧಾನಿ ಅಭ್ಯರ್ಥಿಯಾಗಿದ್ದರು. ಆಗ ಗುಜರಾತ್ನಲ್ಲಿ ಅಡ್ವಾಣಿಯವರ ಖಾಸಾ ಶಿಷ್ಯ ನರೇಂದ್ರ ಮೋದಿಯವರೇ ಮುಖ್ಯಮಂತ್ರಿಯಾಗಿದ್ದರು. ದೇಶದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ, ಮೋದಿಯವರಿಗೆ ರಾಜಕೀಯ ಬದುಕು ನೀಡಿದ ಗುರು ಅಡ್ವಾಣಿಯವರು ಪ್ರಧಾನಿಯಾಗಲೆಂದು ಗುಜರಾತ್ನಿಂದ 26ಕ್ಕೆ 26 ಲೋಕಸಭಾ ಕೇತ್ರಗಳನ್ನು ಗೆಲ್ಲಿಸಿ ಕೊಡಬೇಕಿತ್ತು. ಆದರೆ ಆಗ ಅಲ್ಲಿ ಬಿಜೆಪಿ ಗೆದ್ದದ್ದು ಕೇವಲ 15 ಲೋಕಸಭಾ ಕ್ಷೇತ್ರಗಳಲ್ಲಿ. ಕರ್ನಾಟಕದಿಂದ ಯಡಿಯೂರಪ್ಪ 19 ಜನ ಸಂಸದರನ್ನು ಕೊಡುಗೆಯಾಗಿ ನೀಡಿದ್ದರು. ಮೋದಿ ಪ್ರಧಾನಿ ಅಭ್ಯರ್ಥಿಯಾಗಿದ್ದಾಗ ಗುಜರಾತ್ನಿಂದ 26ಕ್ಕೆ 26 ಲೋಕಸಭಾ ಕ್ಷೇತ್ರಗಳು ಬಿಜೆಪಿ ಪಾಲಾಗುತ್ತವೆ.

ತಮ್ಮ ಸ್ವಾರ್ಥ ಸಾಧನೆಗೆ ಮೋದಿಯವರು ಏನು ಬೇಕಾದರೂ ಮಾಡಬಲ್ಲರು. ಇದಕ್ಕಾಗಿ ನೂರಾರು ನಿದರ್ಶನಗಳನ್ನು ಕೊಡಬಹುದು. ಕೃತಕ ಇಮೇಜ್ ಸೃಷ್ಟಿಸಿಕೊಳ್ಳುವಲ್ಲಿ, ದೇಶ ಭಕ್ತಿಯ ಕಥಾನಕ ಹೆಣೆಯುವಲ್ಲಿ, ವೈಫಲ್ಯಗಳನ್ನು ಮುಚ್ಚಿಕೊಳ್ಳುವಲ್ಲಿ ಮೋದಿ ಮತ್ತು ಮೋದಿ ಭಕ್ತರು ನಿಸ್ಸೀಮರು. ಯಾರಾದರೂ ಮೋದಿಯವರನ್ನು ಟೀಕಿಸಿದರೆ ಅವರ ವೈಫಲ್ಯಗಳ ನೈಜ ಚಿತ್ರಣ ನೀಡಿದರೆ ಅಂಥವರಿಗೆ ‘ದೇಶದ್ರೋಹಿ’ ಪಟ್ಟ ನೀಡುತ್ತಾರೆ. ಬಿಬಿಸಿಯಂತಹ ಸಂಸ್ಥೆಗೇ ‘ದೇಶದ್ರೋಹಿ’ ಪಟ್ಟ ಕಟ್ಟಬಲ್ಲರು. ಟೀಕೆ-ಟಿಪ್ಪಣಿಗಳನ್ನೂ ‘ಮೋದಿ ಪರ’ ಅನುಕಂಪದ ಅಲೆ ಸೃಷ್ಟಿಸಿಕೊಳ್ಳಲು ಬಳಸಿಕೊಳ್ಳುತ್ತಾರೆ. ಮೋದಿ ಆಡಳಿತ ವೈಖರಿ ಬಗ್ಗೆ ಸತ್ಯ ಹೇಳಿದರೆ ಯಾವುದೋ ಕಾಲದ ಕಾಂಗ್ರೆಸ್ ಸರಕಾರದಲ್ಲಿನ ಲೋಪಗಳನ್ನು ಎತ್ತಿ ತೋರಿಸುತ್ತಾರೆ. ಅಧಿಕಾರ ಉಳಿಸಿಕೊಳ್ಳಲು ಅರ್ಥಾತ್ ಸ್ವಾರ್ಥ ಸಾಧನೆಗೆ ಹಿಂದೂ-ಮುಸ್ಲಿಮ್ ಕಂದರವನ್ನೂ ಸೃಷ್ಟಿಸಬಲ್ಲರು. ‘ಸಬ್ಕಾ ಸಾಥ್, ಸಬಕಾ ವಿಕಾಸ್’ ಎಂದು ಹೇಳುತ್ತಲೇ ‘ಅಂಬಾನಿ, ಅದಾನಿಗಳ’ ವಿಕಾಸಕ್ಕೆ ಕಂಕಣ ಬದ್ಧರಾಗಿ ನಿಲ್ಲತ್ತಾರೆ. ಎನ್ಡಿಎ ಮೈತ್ರಿಕೂಟದ ಮಹಾನ್ ನಾಯಕನೇ ಈ ಪರಿ ಸ್ವಾರ್ಥಿಯಾಗಿರುವಾಗ ಆ ಕೂಟದ ಉಳಿದವರು ತಮ್ಮ ಬೇಳೆ ಬೇಯಿಸಿಕೊಳ್ಳಲು, ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಒಂದೆಡೆ ಸೇರಿದ ಸ್ವಾರ್ಥಿಗಳೇ... ಎನ್ಡಿಎ ಎಂದರೆ ಸ್ವಾರ್ಥಿಗಳ ಕೂಟ.

INDIA ಮೈತ್ರಿ ಕೂಟದಲ್ಲಿ ಕಾಂಗ್ರೆಸ್ ಸೇರಿ ೨೬ ಪಕ್ಷಗಳಿವೆ. ಆ ಮೈತ್ರಿಕೂಟದ ಹಿರಿಯ ನಾಯಕರಿಗೆ ಭಾರತದ ಬಹುತ್ವ ಮತ್ತು ಸೌಹಾರ್ದ ಬದುಕು ಪುನರ್ ಸ್ಥಾಪಿಸುವುದು ಮೊದಲ ಆದ್ಯತೆಯಾಗಿದೆ. ಪ್ರಜಾಪ್ರಭುತ್ವದ ಮೌಲ್ಯಗಳು ಉಳಿಯುವುದು, ಸಮೃದ್ಧ ಭಾರತ ನಿರ್ಮಿಸುವುದು ಅವರ ಕನಸಾಗಿದೆ. ಮೈತ್ರಿಕೂಟವನ್ನು ಸಂಘಟಿಸುತ್ತಿರುವ, ವಿವಿಧ ಪಕ್ಷಗಳ ನಡುವೆ ಸಮನ್ವಯ ತರಲು ಯತ್ನಿಸುತ್ತಿರುವ ಕಾಂಗ್ರೆಸ್ ಪಕ್ಷ ಉದಾರವಾಗಿ ನಡೆದುಕೊಳ್ಳುತ್ತಿದೆ. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆಯವರಂತೂ ಅಭಿಮಾನ ಪಡುವ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸುದೀರ್ಘ 55 ವರ್ಷಗಳ ರಾಜಕೀಯ ಬದುಕಿನಲ್ಲಿ ದಕ್ಕಿಸಿಕೊಂಡ ಅನುಭವಗಳನ್ನು ಪಣಕ್ಕಿಟ್ಟು ಅವರು INDIA ಮೈತ್ರಿಕೂಟವನ್ನು ಬಲಪಡಿಸುತ್ತಿದ್ದಾರೆ, ಮುನ್ನಡೆಸುತ್ತಿದ್ದಾರೆ. ಹಾಗೆ ನೋಡಿದರೆ, ಮಲ್ಲಿಕಾರ್ಜುನ ಖರ್ಗೆಯವರಿಗೆ ಸೈದ್ಧಾಂತಿಕ ಸ್ಪಷ್ಟತೆಯಿದೆ. ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಅವರ ತತ್ವಾದರ್ಶಗಳಲ್ಲಿ ಬಲವಾದ ನಂಬಿಕೆ ಇಟ್ಟು ರಾಜಕಾರಣ ಮಾಡಿದವರು. ಅಧಿಕಾರ ರಾಜಕಾರಣ ಅವರಿಗೆ ಸೈದ್ಧಾಂತಿಕ ರಾಜಕಾರಣದ ಒಂದು ಭಾಗ ಮಾತ್ರ. ಅಧಿಕಾರಕ್ಕಾಗಿ ಸಿದ್ಧಾಂತಗಳನ್ನು ಗಾಳಿಗೆ ತೂರಿದವರಲ್ಲ. ಅಧಿಕಾರ-ಜನರ ಕಲ್ಯಾಣಕ್ಕಾಗಿ ಇರುವ ಒಂದು ಸಮರ್ಥ ಸಾಧನೆ ಎಂದು ನಂಬಿದವರು.

1969ರಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಸೇವಕನಾಗಿ ದುಡಿಯುತ್ತಿರುವ ಮಲ್ಲಿಕಾರ್ಜುನ ಖರ್ಗೆಯವರು ಅನೇಕ ಏಳುಬೀಳುಗಳಲ್ಲೂ ಕಾಂಗ್ರೆಸ್ ಪಕ್ಷವನ್ನೇ ಅಪ್ಪಿಕೊಂಡಿದ್ದಾರೆ. 1972 ರಿಂದ 2009ರವರೆಗೆ ಸತತ ಒಂಭತ್ತು ಬಾರಿ ಕರ್ನಾಟಕ ವಿಧಾನ ಸಭೆಗೆ ಆಯ್ಕೆಯಾಗಿರುವ ಅವರು ಚುನಾವಣಾ ಗೆಲುವಿಗಾಗಿ ಜಾತಿ-ಧರ್ಮಗಳ ‘ಗಲಭೆ’ ಹುಟ್ಟು ಹಾಕಿದ ನಿದರ್ಶನ ಸಿಗುವುದಿಲ್ಲ. ಜಾತಿಬಲ, ತೋಳ್ಬಲ, ಹಣಬಲವನ್ನು ಆಶ್ರಯಿಸಿ ರಾಜಕಾರಣ ಮಾಡಿದವರಲ್ಲ. 1972ರಿಂದ 2004ರವರೆಗೆ ಗುರುಮಿಠಕಲ್ ವಿಧಾನಸಭಾ ಕ್ಷೇತ್ರದಲ್ಲಿ ನಿರಂತರ ಗೆಲುವು ಸಾಧಿಸಿದ್ದಾರೆ. ಅಷ್ಟಕ್ಕೂ ಗುರುಮಿಠಕಲ್ ಮತಕ್ಷೇತ್ರದಲ್ಲಿ ಖರ್ಗೆಯವರಿಗೆ ಪೂರಕವಾದ ‘ಜಾತಿ ಸಮೀಕರಣ’ವೇ ಇರಲಿಲ್ಲ. ಕಬ್ಬಲಿಗ, ರೆಡ್ಡಿ, ಲಿಂಗಾಯತ ಹಾಗೂ ದಲಿತರಲ್ಲಿನ ಎಡಗೈ ಸಮುದಾಯದ ಮತದಾರರ ಬಾಹುಳ್ಯ ಇರುವ ಈ ಕ್ಷೇತ್ರದಲ್ಲಿ ಜನಪರ ಅಭಿವೃದ್ಧಿ ರಾಜಕಾರಣ ಮಾಡಿಯೇ ಗೆಲುವು ಸಾಧಿಸುತ್ತಿದ್ದರು. ಎಂದೂ ಗುಡಿ-ಗುಂಡಾರ ಸುತ್ತಿ ಡಾಂಭಿಕ ಭಕ್ತಿ ಪ್ರದರ್ಶಿಸದ, ಯಾವ ಜ್ಯೋತಿಷಿಗೂ ‘ಕೈ’ ತೋರಿಸದ, ಕೇವಲ ಜನಸೇವೆಯಲ್ಲೇ ಜನಾರ್ದನನನ್ನು ಸಾಕ್ಷಾತ್ಕಾರ ಮಾಡಿಕೊಂಡ ಅಪರೂಪದ ರಾಜಕಾರಣಿ.

ರಾಜ್ಯದಲ್ಲಿ ಹಲವಾರು ವರ್ಷಗಳ ಕಾಲ ಕಂದಾಯ, ಗ್ರಾಮೀಣಾಭಿವೃದ್ಧಿ, ಗೃಹ ಸೇರಿದಂತೆ ಹತ್ತಾರು ಇಲಾಖೆಗಳ ಮಂತ್ರಿಯಾಗಿ ವಿಶೇಷ ಹೆಜ್ಜೆ ಗುರುತುಗಳನ್ನು ಮೂಡಿಸಿದವರು. ಭ್ರಷ್ಟಾಚಾರದ ಕಳಂಕ ಅಂಟಿಸಿಕೊಳ್ಳದ, ಹಗರಣಗಳಲ್ಲಿ ಸಿಲುಕದ; ದುರಂತವೆಂದರೆ; ತಮ್ಮ ಅಪರಿಮಿತ ಸಾಧನೆಗಳನ್ನು ಎಲ್ಲೂ ಪ್ರಚಾರ ಮಾಡಿಕೊಳ್ಳದ ಖರ್ಗೆಯವರು ಪ್ರಜಾಪ್ರಭುತ್ವದ ಮೌಲ್ಯಗಳ ಉಳಿವಿಗಾಗಿ ಶ್ರಮಿಸುತ್ತಾ ಬಂದವರು. ಟೀಕೆ-ಟಿಪ್ಪಣಿಗಳ ವಿರುದ್ಧ ಸೇಡಿನ ರಾಜಕಾರಣ ಮಾಡಿದವರಲ್ಲ. ‘ಖರ್ಗೆ’ ಮಾಡೆಲ್ ರಾಜಕಾರಣದ ವ್ಯಾಪಕ ಪ್ರಚಾರ ನಡೆದಿದ್ದರೆ ಮೋದಿ ಇಷ್ಟೆಲ್ಲಾ ಅನಾಹುತ ಮಾಡಿಯೂ ಮಹಾ ದೇಶಭಕ್ತರೆನಿಸಿಕೊಳ್ಳಲು ಅವಕಾಶವೇ ಇರುತ್ತಿರಲಿಲ್ಲ. ಪಕ್ಷನಿಷ್ಠೆ, ತ್ಯಾಗ ಮತ್ತು ತಾಳ್ಮೆಗೆ ಮತ್ತೊಂದು ಹೆಸರು ‘ಮಲ್ಲಿಕಾರ್ಜುನ ಖರ್ಗೆ’. ಕಾಂಗ್ರೆಸಿಗರಿಗೆ ಮಾತ್ರವಲ್ಲ ಎಲ್ಲಾ ಪಕ್ಷಗಳ ರಾಜಕಾರಣಿಗಳಿಗೆ ಅವರದು ಅನುಕರಣೀಯ ವ್ಯಕ್ತಿತ್ವ.

ಐಘೆಈಐಅ ಮೈತ್ರಿಕೂಟದ ನೇತೃತ್ವ ವಹಿಸಿಕೊಂಡಿರುವ ಖರ್ಗೆಯವರು ಯಾವುದೇ ಸ್ವಾರ್ಥ ಇಲ್ಲದೆ ಕೇವಲ ದೇಶದ ಒಳಿತಿಗಾಗಿ ಶ್ರಮಿಸುತ್ತಿದ್ದಾರೆ. ಉದ್ದೇಶ, ಗುರಿ, ಸೈದ್ಧಾಂತಿಕ ಸ್ಪಷ್ಟತೆಯೊಂದಿಗೆ ಬದ್ಧತೆಯಿಂದ ಮುನ್ನಡೆ ಯುತ್ತಿರುವುದು ಸದ್ಯದ ಮಟ್ಟಿಗೆ ಆಶಾದಾಯಕ ಬೆಳವಣಿಗೆ. ಮೋದಿಯವರು ಕಟ್ಟುವ ಹುಸಿ ಕಥಾನಕಗಳ ಬಣ್ಣ ಬಯಲು ಮಾಡುವುದು, 2024ರ ಲೋಕಸಭಾ ಚುನಾವಣೆಯನ್ನು ‘ಮೋದಿ’ ಕೇಂದ್ರಿತವಾಗದಂತೆ ತಡೆಯುವುದು ಅಗತ್ಯವಾಗಿದೆ. ಎನ್ಡಿಎ ಸರಕಾರದ ವೈಫಲ್ಯಗಳನ್ನು, ಜನಸಾಮಾನ್ಯರ ಕಷ್ಟ ಕಾರ್ಪಣ್ಯವನ್ನು, ಮೋದಿ ಭಕ್ತರ ಹುಸಿ ದೇಶಭಕ್ತಿಯನ್ನು ಮತದಾರರಿಗೆ ಮನವರಿಕೆ ಮಾಡಿಕೊಡಬೇಕು. ಅಪ್ಪಟ ದೇಶಭಕ್ತ ಕರ್ನಾಟಕದ ಹೆಮ್ಮೆಯಂತಿರುವ ಮಲ್ಲಿಕಾರ್ಜುನ ಖರ್ಗೆಯವರ ನೇತೃತ್ವದ ಐಘೆಈಐಅ ಕೂಟ ಯಶಸ್ವಿಯಾದರೆ ಪ್ರಜಾಪ್ರಭುತ್ವದ ಮೌಲ್ಯಗಳು ಗೆದ್ದಂತೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ಡಾ. ರಾಜಶೇಖರ ಹತಗುಂದಿ

ಹಿರಿಯ ಬರಹಗಾರ, ಪತ್ರಕರ್ತ

Similar News

ಪತನದ ಕಳವಳ