ಭಾರತೀಯ ದಂಡ ಶಾಸನಗಳು

Update: 2023-08-24 05:00 GMT

- ಬಾಲಸುಬ್ರಹ್ಮಣ್ಯ ಕಂಜರ್ಪಣೆ

ವಿವೇಕವನ್ನು ಕಾಯದೆ, ಕಾಯ್ದೆಗಾಗಿ ಕಾಯ್ದೆಯನ್ನು ತರುವಾಗ ಅಲ್ಲಿ ರಾಜಕಾರಣವಷ್ಟೇ ಇರುತ್ತದೆ. ಸಾಮಾನ್ಯ ಜನರಿಗೆ ಇವು ಅರ್ಥವಾಗುವುದಿಲ್ಲ. ಸ್ವಘೋಷಿತ ಬುದ್ಧಿವಂತರೆಂದು ಗುರುತಿಸಿಕೊಂಡವರಿಗೆ ಇದು ಅವರವರ ರಾಜಕೀಯ ಒಲವಿನ ಆಧಾರದಲ್ಲಿ ಹೊಗಳುವ, ಇಲ್ಲವೇ ತೆಗಳುವ ಸಾಧನ ಮಾತ್ರ. ಇತ್ತೀಚೆಗಿನ ವರ್ಷಗಳಲ್ಲಿ ಪಕ್ಷಭೇದವಿಲ್ಲದೆ ಮೂರ್ಖರ ಕೈಯಲ್ಲಿ ಶಾಸನಗಳ ನಿರ್ಮಾಣ ಮತ್ತು ಅನುಷ್ಠಾನವಿರುವುದರಿಂದ ಅವುಗಳು ನೇರ ನಮಗೆ ತಟ್ಟಿದರೆ ಅಥವಾ ಒದ್ದರೆ ಮಾತ್ರ ನಮಗೆ ಅದರ ಭಯಾನಕ ಪರಿಣಾಮಗಳು ಅರ್ಥವಾಗುವವು. ಎಲ್ಲೋ ಯಾರಿಗೋ ಮಾತ್ರವಲ್ಲ, ನೆರೆಮನೆಯವನಿಗೆ ತೊಂದರೆಯಾದರೂ ಗಣಿಸದ ‘ಫ್ಲ್ಯಾಟ್ ಕಲ್ಚರ್’ನ ಇಂದಿನ ಸಮಾಜದಲ್ಲಿ ಬರುವ ಹಾನಿಯನ್ನು ಮತ್ತು ಅದರ ಹಿಂದಿನ ದುರುದ್ದೇಶವನ್ನು ತಡೆಯುವವರು ಇರುವುದಿಲ್ಲ.

ಕೇಂದ್ರ ಸರಕಾರದ ಗೃಹ ಮತ್ತು ಸಹಕಾರ ಇಲಾಖೆಯ ಮಂತ್ರಿ ಅಮಿತ್‌ಶಾ ೧೧/೦೮/೨೦೨೩ರಂದು ಮೂರು ಭಾರತೀಯ ಶಾಸನಗಳ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿದರು. ಅವು ಮಂಡನೆಗೆ ತೆಗೆದುಕೊಂಡಷ್ಟು ಹೊತ್ತೂ ಅವುಗಳನ್ನು ಅಂಗೀಕರಿಸಲು ಬೇಕಾಗಲಿಲ್ಲ. ಈಗ ಅವನ್ನು ಸಂಸತ್ತಿನ ಸಮಿತಿಯೊಂದಕ್ಕೆ ಪರಿಷ್ಕರಣೆಗೆ ಸಲ್ಲಿಸಲಾಗಿದೆ. ಅವು ಹೊರಬರುವ ಹೊತ್ತಿಗೆ ಶಾಸನಗಳಾಗಿರುತ್ತವೆ. ಅವನ್ನು ಕೇಂದ್ರ ಸರಕಾರ ನಿಗದಿ ಪಡಿಸಿದಲ್ಲಿಂದ ಜಾರಿಗೊಳಿಸಲಾಗುತ್ತದೆ.

ಇವುಗಳು ೩ ಮುಖ್ಯ ಕ್ರಿಮಿನಲ್ ಕಾನೂನುಗಳೆಂದು ಪ್ರಸಿದ್ಧವಾಗಿವೆ:

1. ಇಂಡಿಯನ್ ಪೀನಲ್ ಕೋಡ್ (ಭಾರತೀಯ ದಂಡ ಸಂಹಿತೆ) ಹೊಸ ಸ್ವರೂಪದ ‘ಭಾರತೀಯ ನ್ಯಾಯ ಸಂಹಿತಾ’ ಆಗುತ್ತದೆ.

2. ಕ್ರಿಮಿನಲ್ ಪ್ರೊಸೀಜರ್ ಕೋಡ್ (ದಂಡ ಪ್ರಕ್ರಿಯಾ ಸಂಹಿತೆ) ಹೊಸ ಸ್ವರೂಪದ ‘ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ’ಯಾಗುತ್ತದೆ.

3. ಇಂಡಿಯನ್ ಎವಿಡೆನ್ಸ್ ಆ್ಯಕ್ಟ್ (ಭಾರತೀಯ ಸಾಕ್ಷ್ಯ ಅಧಿನಿಯಮ) ಹೊಸ ಸ್ವರೂಪದ ಭಾರತೀಯ ಸಾಕ್ಷ್ಯ ಅಧಿನಿಯಮವಾಗುತ್ತದೆ.

ಆಶ್ಚರ್ಯವಾದರೂ ನಿಜವೆಂಬ ಒಂದೆರಡು ಘಟನೆ/ನಟನೆಗಳನ್ನು ಗಮನಿಸಬಹುದು: ಕಾನೂನಿಗೆ ಸಂಬಂಧಿಸಿದ ಈ ಮಸೂದೆಗಳನ್ನು ಮಂಡಿಸಿದ್ದು ಕಾನೂನು ಸಚಿವರೂ ಅಲ್ಲ; ಸಂಸದೀಯ ವ್ಯವಹಾರಗಳ ಸಚಿವರೂ ಅಲ್ಲ. ಬದಲಿಗೆ ಗೃಹ ಮತ್ತು ಸಹಕಾರ ಸಚಿವರು. ಅವರ ಖಾತೆಯ ಪ್ರಯುಕ್ತ ಅವರು ಇದನ್ನು ಮಂಡಿಸಿರಲಿಕ್ಕಿಲ್ಲ. ಆದರೆ ಆಡಳಿತದಲ್ಲಿ ನಿಕಟ ದ್ವಿತೀಯ ಸ್ಥಾನದಲ್ಲಿರುವುದರಿಂದ ಅವರು ಮಂಡಿಸುವುದನ್ನು ತಡೆಯುವವರು ಅಥವಾ ಇದು ತನಗೆ ಸಂಬಂಧಿಸಿದ್ದು ಎಂದು ಹೇಳುವ ಎಂಟೆದೆಯವರು ಅಲ್ಲಿಲ್ಲ. ಹೋಗಲಿ, ಯಾರೇ ಶಾಸನವನ್ನು ಮಂಡಿಸಿದರೂ ಅದು ಸರಿಯಾಗಿದ್ದರೆ ಸಾಕು, ಅನ್ನಿಸುತ್ತದೆ. ಆದರೆ ಅದು ಜನಹಿತವನ್ನು, ಜನೋಪಯೋಗವನ್ನು, ಒಟ್ಟಿನಲ್ಲಿ ಸಾಮಾಜಿಕ ಒಳಿತನ್ನು ಸಾಧಿಸದಿದ್ದರೆ ಯಾರು ಮಂಡಿಸಿದರೂ ಅದು ತನ್ನ ಮೂಲದ ಟೊಳ್ಳನ್ನು, ಶೂನ್ಯತೆಯನ್ನು ಕಳೆದುಕೊಳ್ಳಲಾರದು.

ಹೆಸರು ಬದಲಾವಣೆಗೆ ಹೆಸರುವಾಸಿಯಾದ ಈಗಿನ ಕೇಂದ್ರ ಸರಕಾರವು ಈ ಕಾಯ್ದೆಗಳನ್ನು ತಂದದ್ದರಲ್ಲಿ ವಿಶೇಷವೇನಿಲ್ಲ. ಆದರೆ ಇವುಗಳಲ್ಲಿ ಹೊಸತನ ವೇನಿದೆಯೆಂದು ಹುಡುಕಿದರೆ ಕೆಲವು ಅಂಶಗಳು ಕಾಣಿಸುತ್ತವೆ. ಉಳಿದದ್ದೆಲ್ಲ ಉಪೇಂದ್ರನ ಸಿನೆಮಾದ ‘ಬರಿಯೋಳು’ ಅಷ್ಟೇ ಅನ್ನಿಸಿದರೆ ವಿಚಿತ್ರವೇನಿಲ್ಲ.

ಮೊದಲನೆಯದಾಗಿ ಕಳೆದ ಒಂದು ಶತಮಾನಕ್ಕೂ ಮಿಕ್ಕಿ ಚಾಲನೆಯಲಿದ್ದ ಕಾನೂನುಗಳನ್ನು ಪೂರ್ತಿ ಬದಲಾಯಿಸುವಾಗ ಅದು ಸುಧಾರಣೆಯೆನ್ನಿಸದೆ, ಗೊಂದಲಗಳನ್ನು ಸೃಷ್ಟಿಸುವ ಸಾಧ್ಯತೆಯೇ ಹೆಚ್ಚು. ಅನನುಕೂಲತೆಗಳನ್ನು ಉಂಟುಮಾಡುವ ಅಂಶಗಳ ಸೇರ್ಪಡೆಗೆ, ರದ್ದತಿಗೆ, ತಿದ್ದುಪಡಿಗೆ ಸಾಕಷ್ಟು ಅವಕಾಶಗಳಿವೆ. ಈ ವರೆಗೂ ಆಗಿರುವುದು ಅದೇ. ಇನ್ನು ಮುಂದೆ ‘೪೨೦’ ಎಂಬುದು ಮೋಸಕ್ಕೆ ನಾಣ್ಣುಡಿಯಾಗದು. ಅದನ್ನು ‘೩೧೬’ ಎಂದು ನಮೂದಿಸಲಾಗಿದೆ. ಇಂತಹ ಹಾವು-ಏಣಿ ಆಟದ ವಿಧಿ ಅನೇಕ ಪ್ರಮುಖ ಕಲಮುಗಳಿಗೆ ಒದಗಿದೆ. ಆಗಿದೆ. ಹೊಸ ಕಲಮುಗಳನ್ನು ಅಧ್ಯಯನ ಮಾಡಬೇಕಾದರೆ, ಹಳತಿಗೆ ಹೋಲಿಸಬೇಕಾದರೆ ನ್ಯಾಯಾಂಗವು ಮತ್ತು ಇನ್ನೂ ಪ್ರಮುಖವಾಗಿ ಪೊಲೀಸ್ ಮುಂತಾದ ಕಾನೂನಿನ ನಿರ್ಮಾಪಕರೂ ನಿರ್ನಾಮಕರೂ ಎಷ್ಟು ಕಷ್ಟಪಡಬೇಕಾಗುತ್ತದೆಯೋ ಹೇಳಲು ಸಾಧ್ಯವಾಗದು.

ಸದ್ಯ ಈ ಮೂರು ಕಾನೂನುಗಳ ಹೊಸ ಶಾಸನಗಳ ಉದ್ದೇಶಗಳನ್ನು ಹೇಳುವಾಗ ಸಚಿವರು ಎರಡು ಅಂಶಗಳನ್ನು ಹೇಳುವುದಕ್ಕೆ ಮರೆತಿಲ್ಲ: ಒಂದು, ಇದು ವಸಾಹತುಶಾಹಿ ಮನಸ್ಥಿತಿಯದ್ದು; ಎರಡು, ಇದು ನಾವು ಅನುಭವಿಸಿದ ಬ್ರಿಟಿಷ್ ಗುಲಾಮಗಿರಿಯನ್ನು ನೆನಪಿಗೆ ತರುವಂಥಾದ್ದು. ಆದರೆ ಹೊಸ ಕಾಯ್ದೆಗಳ ಜಾರಿಗೆ ಇವು ಕಾರಣವಾದರೆ, ಇಂತಹ ಇನ್ನೂ ಅಸಂಖ್ಯವೆನ್ನಿಸಬಹುದಾದಷ್ಟು ವಸಾಹತುಶಾಹಿ ಕಾಯ್ದೆಗಳು ನಮ್ಮ ದೇಶದಲ್ಲಿವೆ. ಉದಾಹರಣೆಗೆ, ಭಾರತೀಯ ಒಪ್ಪಂದ ಅಧಿನಿಯಮ ೧೮೭೨ (ದಿ ಇಂಡಿಯನ್ ಕಾಂಟ್ರಾಕ್ಟ್ ಆ್ಯಕ್ಟ್, ೧೮೭೨), ಆಸ್ತಿ ವರ್ಗಾವಣೆ ಅಧಿನಿಯಮ ೧೮೮೨ (ಟ್ರಾನ್ಸ್‌ಫರ್ ಆಫ್ ಪ್ರಾಪರ್ಟಿ ಅಧಿನಿಯಮ, ೧೮೮೨), ವರ್ಗಾಯಿಸಬಹುದಾದ ದಾಖಲೆಗಳ ಅಧಿನಿಯಮ ೧೮೮೧ (ದಿ ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆ್ಯಕ್ಟ್, ೧೮೮೧), ಭಾರತೀಯ ವಿಶ್ವಸ್ತ ಅಧಿನಿಯಮ, ೧೮೮೨ (ದಿ ಇಂಡಿಯನ್ ಟ್ರಸ್ಟ್ಸ್ ಆ್ಯಕ್ಟ್, ೧೮೮೨), ಭಾರತೀಯ ಮಾಮೂಲು ಹಕ್ಕಿನ ಅಧಿನಿಯಮ ೧೮೮೨ (ದಿ ಇಂಡಿಯನ್ ಈಸ್‌ಮೆಂಟ್ಸ್ ಆ್ಯಕ್ಟ್, ೧೮೮೨) ಹೀಗೆ ಹಲವನ್ನು ಸಾಂದರ್ಭಿಕವಾಗಿ ಉಲ್ಲೇಖಿಸಬಹುದು. ಎಲ್ಲ ಸ್ವಾತಂತ್ರ್ಯಪೂರ್ವ ಕಾಯ್ದೆಗಳನ್ನೂ ಬದಲಾಯಿಸಬೇಕಲ್ಲವೇ? ಹಾಗಾದರೆ ಇದು ಕಾರಣವಲ್ಲ, ನೆಪ ಮಾತ್ರ.

ಇನ್ನೊಂದು ಮುಖ್ಯ ಅಂಶವನ್ನು ಹೇಳಬಹುದಾದರೆ ಈ ಹೊಸ ಕಾಯ್ದೆಗಳು ಸಂಸ್ಕೃತ ಅಥವಾ ಹಿಂದಿ (ಮತ್ತು ಕನ್ನಡ ಮುಂತಾದ ಇತರ ಭಾಷೆಗಳಿಗೆ ಭಟ್ಟಿಯಿಳಿಸಲಾದ) ಪದಗಳನ್ನು ಹೊಂದಿವೆ. ನಮ್ಮ ಸಂವಿಧಾನದ ಆರಂಭದಲ್ಲೇ ‘ಇಂಡಿಯಾ ಅಂದರೆ ಭಾರತ’ ಎಂಬ ಉಲ್ಲೇಖವಿದೆ. ಹಾಗಿರುವಾಗ ಇಂಡಿಯಾ ಎಂಬ ಪದ ಭಾರತವನ್ನೇ ಸೂಚಿಸುತ್ತದೆ. ಆದರೆ ಈಗ ಈ ಎಲ್ಲ ಕಾಯ್ದೆಗಳಲ್ಲಿ ‘ಭಾರತೀಯ’ ಎಂಬ ಪದವನ್ನು ಮೂಲದಲ್ಲೇ ಬಳಸಲಾಗಿದೆ. ಇದು ಹಿಂದಿಯನ್ನು ಹೇರುವ ಯತ್ನವೆಂದು ಈಗಾಗಲೇ ಡಿಎಂಕೆ ಪಕ್ಷವು ಸಾರಿ ತಾನಿದನ್ನು ವಿರೋಧಿಸುವುದಾಗಿ ಹೇಳಿದೆ.

ಈ ಒಂದೊಂದು ಕಾಯ್ದೆಗಳಲ್ಲೂ ಬಳಸಲಾದ ಶೀರ್ಷಿಕೆಗಳನ್ನು ಗಮನಿಸೋಣ:

ಈ ಮೂರೂ ಕಾಯ್ದೆಗಳಲ್ಲಿ ಬಳಸಲಾದ ‘ಭಾರತೀಯ’ ಎಂಬ ಪದವನ್ನು ನಾಮಪದವಾಗಿ ಸ್ವೀಕರಿಸಿದರೆ ಅದು ಇಂಗ್ಲಿಷ್‌ನಲ್ಲೂ ಹಾಗೆಯೇ ಉಳಿಯುತ್ತದೆ. ಸದ್ಯ ಭಾರತೀಯ ಜನತಾ ಪಕ್ಷವು ಅಧಿಕಾರದಲ್ಲಿರುವುದರಿಂದ ಪಕ್ಷದ ಹೆಸರೂ ಜನಮಾನಸದಲ್ಲಿ ಉಳಿಯಲೆಂಬ ಆಶಯವೂ ಇದರಲ್ಲಿದೆಯೆಂದು ಅನ್ನಿಸಿದರೆ ತಪ್ಪಿಲ್ಲ. ಹೇಗೂ ಇರಲಿ, ಇದನ್ನು ಸಂವಿಧಾನ ವಿರೋಧಿಯೆಂದು ಹೇಳಲಾಗದು. ‘ಯಾವ ಹೆಸರಿನಲ್ಲಿ ಕರೆದರೂ ಗುಲಾಬಿ ಸಿಹಿಯಾದ ಪರಿಮಳವನ್ನು ನೀಡುತ್ತದೆ’ಯೆಂಬ ಉಕ್ತಿಯಿದೆ. ಇಂಡಿಯನ್ ಪೀನಲ್ ಕೋಡ್ (ಭಾರತೀಯ ದಂಡ ಸಂಹಿತೆ) ಹೊಸ ಸ್ವರೂಪದ ‘ಭಾರತೀಯ ನ್ಯಾಯ ಸಂಹಿತಾ’ ಎಂದು ಬದಲಾಯಿಸುವ ಹುಮ್ಮಸ್ಸಿನಲ್ಲಿ ‘ಪೀನಲ್’ ಎಂಬ ಪದದ ಬದಲಿಗೆ ‘ನ್ಯಾಯ’ ಎಂಬ ಪದ ಎಷ್ಟು ಸಾಧುವೆಂದು ಯೋಚಿಸಬೇಕು. ನಾವಿನ್ನೂ ಅರಳೀಕಟ್ಟೆಯ ನ್ಯಾಯಕ್ಕೆ ಹೋಗಿಲ್ಲ. (ಉತ್ತರ ಭಾರತದಲ್ಲಿ ಈಗ ಶಕ್ತಿವರ್ಧನೆಯಾಗಿರುವ ಮಹಾ ಪಂಚಾಯತ್‌ಗಳು, ಹಿಂದೂ ಸಂಘಟನೆಗಳು ಸರಕಾರದ ಕಾನೂನುಗಳನ್ನು ಲೆಕ್ಕಿಸದೆ ತಮ್ಮಿಷ್ಟದಂತೆ ಸಮಾನಾಂತರ ನ್ಯಾಯ ನಿರ್ಣಯ ನೀಡುವ ಹೊಸ ಬದಲಾವಣೆ ಕಳೆದೊಂದು ದಶಕದಿಂದ ಕಾಣಿಸುತ್ತಿದೆ!) ಅದು ‘ದಂಡ’ಕ್ಕೆ ಸಂಬಂಧಿಸಿದ್ದು ಎಂಬ ಕಾರಣದಿಂದಲೇ ಅದು ‘ದಂಡ ಸಂಹಿತೆ’. ನಾವಿನ್ನೂ ನ್ಯಾಯದ ಹೆಬ್ಬಾಗಿಲ ಬಳಿಯೂ ತಲುಪಿಲ್ಲ. ಎಲ್ಲಿಯ ವರೆಗೆ ನ್ಯಾಯನಿರ್ಣಯವು ಕಾನೂನಿಗನುಸಾರವಾಗಿಯೇ ನಡೆಯಬೇಕೋ ಅಲ್ಲಿಯವರೆಗೂ ಇದು ‘ದಂಡನೀತಿ’ಯೇ ವಿನಾ ‘ನ್ಯಾಯಸಂಹಿತೆ’ಯಲ್ಲ.

ಕ್ರಿಮಿನಲ್ ಪ್ರೊಸೀಜರ್ ಕೋಡ್ (ದಂಡ ಪ್ರಕ್ರಿಯಾ ಸಂಹಿತೆ) ಒಂದು ವೇಳೆ ‘ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ’ಯಾದರೂ ‘ದಂಡ ಪ್ರಕ್ರಿಯಾ’ ‘ನಾಗರಿಕ ಸುರಕ್ಷಾ’ ಹೇಗಾದೀತು? ಈಗ ಮಾಡಲಾದ ಬದಲಾವಣೆಗಳ ಮೂಲಕ ಹೆಚ್ಚೆಂದರೆ ಅದು ‘ಅಧಿಕಾರ ಸುರಕ್ಷಾ’ ಆಗಬಹುದು. ನಾಗರಿಕರಿಗೆ ಸುರಕ್ಷತೆಯನ್ನು ತರುವ ಕಾಯ್ದೆ ಜನರ ನಡುವೆ ಚರ್ಚೆಯಾಗಬೇಕು. ಯಾರೋ ಕೆಲವರು ತಾವು ಜನಪ್ರತಿನಿಧಿಗಳೆಂಬ ಗರ್ವದಿಂದ ಏಕಪಕ್ಷೀಯವಾಗಿ ಮಾಡಿದ ಕಾಯ್ದೆ ನಾಗರಿಕರಿಗೆ ಸುರಕ್ಷೆಯನ್ನು ತರಲು ಸಾಧ್ಯವಿಲ್ಲ.

ಇವುಗಳ ಪೈಕಿ ‘ಭಾರತೀಯ ಸಾಕ್ಷ್ಯ ಸಂಹಿತೆ’ಯೊಂದೇ ಹಳತಿಗೆ ಹೊಸ ಹೊಳಪು ನೀಡಿದ ಶೀರ್ಷಿಕೆ. ಆದರೆ ಇಲ್ಲೂ ಪ್ರಜ್ಞಾಪೂರ್ವಕವಾಗಿ ಬಳಸಲಾದ ‘ಭಾರತೀಯ’ ಎಂಬ ಪದವು ಅಧಿಕಾರಸ್ಥರು ಹಳತನ್ನು ಮರೆಸಿ ತಮ್ಮ ಇರವನ್ನು ಸಾಬೀತುಪಡಿಸಲು ಹೆಣೆದ ಕಾಯ್ದೆಯಂತೆ ಕಾಣಿಸುತ್ತದೆ. ಇದು ಸಿವಿಲ್ ನಡವಳಿಕೆಗಳಿಗೂ ಅನ್ವಯಿಸುತ್ತದೆಯೆಂಬುದನ್ನು ಸರಕಾರದ ಪಂಡಿತರು ಮರೆತಂತಿದೆ. ಈಗ ನಡೆಯುತ್ತಿರುವುದು ಹಳತರ ಬದಲಾವಣೆಯಲ್ಲ. ‘೧೯೮೪’ ಕಾದಂಬರಿಯ ಮಾದರಿಯಲ್ಲಿ ಇತಿಹಾಸವನ್ನು ಮರೆಸುವ ಯತ್ನ. ಇದರ ತಾರ್ಕಿಕ ಕೊನೆಯೆಂದರೆ ನಮ್ಮ ಸಂವಿಧಾನದಲ್ಲಿ ಬಳಸಲಾದ ‘ಇಂಡಿಯಾ’ ಎಂಬ ಪದವನ್ನು ಅಳಿಸುವುದು.

ಈ ಮೂರು ಕಾಯ್ದೆಗಳನ್ನು ಪೂರ್ಣವಾಗಿ ಮತ್ತು ತಾಂತ್ರಿಕವಾಗಿ, ವೈಜ್ಞಾನಿಕವಾಗಿ ಚರ್ಚಿಸಲು ಇದು ವೇದಿಕೆಯೂ ಅಲ್ಲ, ಪದವ್ಯಾಪ್ತಿಯೂ ಇಲ್ಲ. ಇದರಲ್ಲಿರುವ ವ್ಯಾಕರಣ ದೋಷ, ಭಾಷಾ ಅಪದ್ಧತೆ ಪ್ರತ್ಯೇಕ. ‘called as’, ‘It shall applies’ ಮುಂತಾದ ಬಳಕೆಗಳು ಮೇಲ್ನೋಟಕ್ಕೇ ಗಮನ ಸೆಳೆಯುತ್ತವೆ. ಇವೆಲ್ಲ ಭಾರತೀಯ ಆಡಳಿತ ಸೇವೆಗಳು.

ಕಾಯ್ದೆಗಳ ಕೆಲವು ಮುಖ್ಯಾಂಶಗಳನ್ನು ಗುರುತಿಸಬಹುದು.

ಭಾರತೀಯ ನ್ಯಾಯ ಸಂಹಿತೆಯು ಈ ಹಿಂದಿನ ಕಾಯ್ದೆಯಲ್ಲಿದ್ದ ೫೧೧ ಕಲಮುಗಳಿಗೆ ಬದಲಾಗಿ ೩೫೬ ಕಲಮುಗಳನ್ನು ಹೊಂದಿದೆ; ೭೫ ಕಲಮುಗಳನ್ನು ತಿದ್ದುಪಡಿಮಾಡಲಾಗಿದೆ; ೨೨ ಕಲಮುಗಳನ್ನು ರದ್ದುಗೊಳಿಸಲಾಗಿದೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯಲ್ಲಿ ಹಿಂದೆ ಇದ್ದ ೪೮೪ ಕಲಮುಗಳಿಗೆ ಬದಲಾಗಿ ೫೩೩ ಕಲಮುಗಳನ್ನು ಹೊಂದಿದೆ; ಈ ಪೈಕಿ ೧೬೦ನ್ನು ತಿದ್ದುಪಡಿಮಾಡಲಾಗಿದೆ; ೯ ಕಲಮುಗಳನ್ನು ಸೇರಿಸಲಾಗಿದೆ; ೯ನ್ನು ರದ್ದುಗೊಳಿಸಲಾಗಿದೆ. ಭಾರತೀಯ ಸಾಕ್ಷ್ಯ ಅಧಿನಿಯಮವು ತನ್ನ ೧೭೦ ಕಲಮುಗಳ ಬದಲಾಗಿ ೧೬೭ನ್ನು ಒಳಗೊಂಡಿದೆ; ಈ ಪೈಕಿ ೨೩ನ್ನು ತಿದ್ದುಪಡಿಮಾಡಲಾಗಿದೆ; ೧ನ್ನು ಸೇರಿಸಲಾಗಿದೆ; ಮತ್ತು ೫ನ್ನು ರದ್ದುಪಡಿಸಲಾಗಿದೆ.

ಒಂದು ಸಾಮಾನ್ಯ ಹರಾಜಿನ ಪ್ರಕಟಣೆಯನ್ನು ಕನಿಷ್ಠ ೨ ವೃತ್ತಪತ್ರಿಕೆಗಳಲ್ಲಿ ಪ್ರಕಟಿಸಬೇಕೆಂಬ ಬಹುವೆಚ್ಚದ ನಿಯಮಗಳನ್ನು ಅನುಸರಿಸುವ, ತನ್ನ ಪ್ರಚಾರ ಜಾಹೀರಾತುಗಳಿಗೆ ಕೋಟ್ಯಂತರ ರೂಪಾಯಿ ವ್ಯಯಿಸುವ ಸರಕಾರಕ್ಕೆ ದೇಶದ ೧೪೦ಕ್ಕೂ ಅಧಿಕ ಕೋಟಿ ಜನರನ್ನು ಬಾಧಿಸಬಹುದಾದ, ಕಾಡಬಹುದಾದ, ನಿಯಮಗಳನ್ನು ಜಾರಿಗೊಳಿಸುವ ಮೊದಲು ಪ್ರಚಾರ ಕೊಡಬೇಕೆಂದು ಅನ್ನಿಸದೇ ಇರುವುದು ಸರ್ವಾಧಿಕಾರದ ದಿಟ್ಟ ಹೆಜ್ಜೆ ಮತ್ತು ಪ್ರಜಾಪ್ರಭುತ್ವದ ಅಣಕ ಅಥವಾ ಅದರ ಶವಪೆಟ್ಟಿಗೆಯ ಮೇಲೆ ಹೊಡೆದ ಕೊನೆಯ ಮೊಳೆ ಎನ್ನಿಸುವುದಿಲ್ಲವೇ?

ಪರಂಪರೆಯ ವಕ್ತಾರರು ಹೊಸಮನೆಯ ನೆಪದಲ್ಲಿ ಹಳೆಯಮನೆಯನ್ನು ಕೆಡವಬಾರದು. ಕೆಡವಿ ಬೀಳಿಸುವುದೇ ಉದ್ದೇಶವಾದರೆ ಆಗ ಅದನ್ನು ಪರಂಪರೆಯೆಂದು ನೆನಪಿಡಬೇಕಾದ ಅಗತ್ಯವಿಲ್ಲ. ಉದಾಹರಣೆಗೆ ದಿ ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆ್ಯಕ್ಟ್, ೧೮೮೧ ಎಂಬ ಕಾಯ್ದೆಗೆ ಕಲಮು ೧೩೮ರಿಂದ ೧೪೬ನ್ನು ಸೇರಿಸಿದಾಗ ಭಾರತೀಯ ವ್ಯವಹಾರ ಪ್ರಪಂಚದಲ್ಲೇ ಹೊಸ ಕ್ರಾಂತಿಯಾಯಿತು. ೧೯೫೬ರ ಭಾರತೀಯ ವಾರಸುದಾರಿಕೆ ಅಧಿನಿಯಮಕ್ಕೆ ೨೦೦೫ರಲ್ಲಿ ಕಲಮು ೬ಎ ಯನ್ನು ಸೇರಿಸಿದಾಗ ಹೆಣ್ಣುಮಕ್ಕಳಿಗೆ ಅಭೂತಪೂರ್ವ ಹಕ್ಕು ಲಭ್ಯವಾಯಿತು. ಇಂತಹ ತಿದ್ದುಪಡಿಗಳು ನಮ್ಮ ದೇಶದ ಕಾನೂನುಗಳಲ್ಲಿ ಆಯಾಯ ಸಂದರ್ಭಗಳಿಗೆ, (ಕೆಲವೊಮ್ಮೆ ಅನುಕೂಲಗಳಿಗೆ) ತಕ್ಕಂತೆ ಮೂಡಿವೆ. ಆಧುನಿಕ ವಿಜ್ಞಾನ ಬೆಳೆದಂತೆ ವಿದ್ಯುನ್ಮಾನ ತಂತ್ರಗಳು ಬೆಳೆದಾಗ ‘ಮಾಹಿತಿ ತಂತ್ರಜ್ಞಾನ ಕಾಯ್ದೆ’ ಜಾರಿಯಾಯಿತು; ಅದಕ್ಕೆ ಸೂಕ್ತವಾಗಿ ಭಾರತೀಯ ಸಾಕ್ಷ್ಯ ಅಧಿನಿಯಮ (ಕಲಮು ೩೪, ೩೫)ಕ್ಕೆ ತಿದ್ದುಪಡಿಯಾಯಿತು. ಮಹಿಳೆಯರಿಗೆ ಕಿರುಕುಳ ನೀಡುವ ಕುರಿತು ಸಾಕಷ್ಟು ಚರ್ಚೆಯಾಗಿ ಇಂಡಿಯನ್ ಪೀನಲ್ ಕೋಡ್ (ಭಾರತೀಯ ದಂಡ ಸಂಹಿತೆ), ಕ್ರಿಮಿನಲ್ ಪ್ರೊಸೀಜರ್ ಕೋಡ್ (ದಂಡ ಪ್ರಕ್ರಿಯಾ ಸಂಹಿತೆ) ಮತ್ತು ಇಂಡಿಯನ್ ಎವಿಡೆನ್ಸ್ ಆ್ಯಕ್ಟ್ (ಭಾರತೀಯ ಸಾಕ್ಷ್ಯ ಅಧಿನಿಯಮ) ಈ ಮೂರೂ ಕ್ರಿಮಿನಲ್ ಕಾಯ್ದೆಗಳಿಗೆ ಸೂಕ್ತ ತಿದ್ದುಪಡಿಯಾಯಿತು.

ತಿದ್ದುಪಡಿ ತಪ್ಪಲ್ಲ. ನಮ್ಮ ಸಂವಿಧಾನವು ಕಾಲಾನುಕಾಲಕ್ಕೆ ತಿದ್ದುಪಡಿಯನ್ನು ಕಂಡಿದೆ. ಬದಲಾವಣೆಯೊಂದೇ ಶಾಶ್ವತ ಎಂಬ ಮಾತನ್ನು ನಾವು ನೆನಪಿನಲ್ಲಿಟ್ಟರೆ ಎಲ್ಲವೂ ಸುಗಮ. ಆದರೆ ಹೆಸರು ಬದಲಾಯಿಸಿದ್ದರಿಂದ ಗುಣ ಬದಲಾಗುವುದಿಲ್ಲ. ಬ್ರಿಟಿಷರ, ಅಥವಾ ವಸಾಹತುಶಾಹಿ ಆಡಳಿತದ ಕಹಿನೆನಪುಗಳನ್ನು, ಗುಲಾಮಗಿರಿಯ ಮನಸ್ಥಿತಿಯನ್ನು ಮರೆಯುವುದೆಂದರೆ ಹೆಸರು ಬದಲಾಯಿಸುವುದಲ್ಲ. ನಮ್ಮತನವನ್ನು ಉಳಿಸಿಕೊಂಡು ಇತರರ ಒಳ್ಳೆಯದನ್ನು ಉಳಿಸಿಕೊಳ್ಳುವುದು. ಬ್ರಿಟಿಷರು ಮಾಡಿದ್ದಾರೆಂಬ ಕಾರಣಕ್ಕೆ ಯಾವ ಕಾನೂನೂ ಅಪಥ್ಯವಾಗಬಾರದು. ನಮ್ಮ ಸಂವಿಧಾನದ ೧೭ನೇ ಭಾಗದ ೧ನೇ ಅಧ್ಯಾಯವು ದೇಶದ ಭಾಷೆಯ ಕುರಿತು ಅಗತ್ಯ ಧೋರಣೆಯನ್ನು ನಿರೂಪಿಸಿದೆ. ಇದನ್ನು ನಾವು ಮರೆಯಲಾಗದು. ಹಾಗೆಯೇ ದೇಶದ ವೈವಿಧ್ಯತೆಯನ್ನು, ಭಿನ್ನಾತಿಭಿನ್ನ ಸಂಸ್ಕೃತಿಯನ್ನು ತೊರೆಯಲಾಗದು.

ತಕ್ಷಣಕ್ಕೆ ಎರಡು ಅಂಶಗಳು ನಮ್ಮ ವಿಸ್ಮತಿಯನ್ನು ಹೊಂದಿವೆ: ಒಂದು, ಭಾರತೀಯತೆಯ ವಾರಸುದಾರಿಕೆಯ ಸ್ವಘೋಷಣೆಯ ರಾಷ್ಟ್ರೀಯ ಸ್ವಯಂಸೇವಕ ಸಂಘ ಆರಂಭದಿಂದಲೂ ಪ್ರಚಲಿತವಿದ್ದ ‘ಚಡ್ಡಿ’ಗಳನ್ನು ಕಳಚಿ ಈಗ ವಸಾಹತುಶಾಹಿಯ ‘ಪ್ಯಾಂಟು’ಗಳನ್ನು ಹೊದ್ದಿದೆ. ಎರಡು: ಭಾರತದಲ್ಲಿ ವಕೀಲರಿಗೆ ಬ್ರಿಟಿಷ್ ರಾಜಸತ್ತೆಯ ಯಾವುದೋ ಸಂದರ್ಭವನ್ನು ನೆನಪಿಸುವ ಸಾಂಪ್ರದಾಯಿಕ ‘ಕಪ್ಪುಕೋಟು’ ಭಾರತದಲ್ಲೂ ಕಡ್ಡಾಯವಾಗಿದೆ. ಅದನ್ನು ಕಳಚುವ ಮನಸ್ಥತಿ ನಮ್ಮ ರಾಷ್ಟ್ರೀಯರಿಗೆ, ದೇಶಭಕ್ತರಿಗಿಲ್ಲ. ಬರಿಯ ಕೆಲವು ಕಾನೂನುಗಳಲ್ಲಿ ಹೊಸ ಹೆಸರುಗಳನ್ನಿಟ್ಟು ಪ್ರಚಾರ ಪಡೆಯುವುದರಿಂದ ಇತಿಹಾಸ ಬದಲಾಗುವುದೂ ಇಲ್ಲ, ಹೊಸತು ನಿರ್ಮಾಣವಾಗುವುದೂ ಇಲ್ಲ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News

ಪತನದ ಕಳವಳ