ಮುಂಬೈ ಸ್ವ-ಗತ: ಮುಂಬೈ ನಗರದಲ್ಲಿ ಕನ್ನಡದ ಬದುಕು

Update: 2024-06-07 10:12 GMT
Editor : Thouheed | Byline : ಕಾರುಣ್ಯಾ

ಲೇಖಕ ದಯಾನಂದ ಸಾಲಿಯಾನ್, ಒಳನಾಡಿನ ಹಾಗೂ ಹೊರನಾಡಿನ ಕನ್ನಡಿಗರಿಗೆ ‘ಸಾ. ದಯಾ’ ಎಂದೇ ಪರಿಚಿತರು. ನಾಟಕ, ಕಾವ್ಯ, ಕಥೆ, ಸಂಘಟನೆ ಎಂದು ಮುಂಬೈಯ ಕನ್ನಡದ ಓಣಿಗಳಲ್ಲಿ ಸದಾ ಕಾಲಿಗೆ ಚಕ್ರ ಕಟ್ಟಿ ಓಡಾಡುತ್ತಿರುವವರು. ಎರಡು ಕವನ ಸಂಕಲನ, ಒಂದು ಕಥಾ ಸಂಕಲನ, ಎರಡು ತುಳು ನಾಟಕಗಳು ಸೇರಿದಂತೆ ಹಲವು ಕೃತಿಗಳನ್ನು ಹೊರ ತಂದಿರುವ ಸಾ. ದಯಾ ಇದೀಗ ತನ್ನ ‘ಮುಂಬೈ ಸ್ವ-ಗತ’ ಕೃತಿಯ ಮೂಲಕ ಮುಂಬೈಯ ಶಹರದಲ್ಲಿ ಹರಡಿಕೊಂಡಿರುವ ಕನ್ನಡ ಮತ್ತು ತುಳುವಿನ ಬೇರುಗಳನ್ನು ತಡವುವ ಕೆಲಸವನ್ನು ಮಾಡಿದ್ದಾರೆ.

‘ಮುಂಬೈ ಸ್ವ-ಗತ’ ‘ವಾರ್ತಾಭಾರತಿ’ ದೈನಿಕದಲ್ಲಿ ಪ್ರಕಟಗೊಂಡಿರುವ ಅವರ ಅಂಕಣದ ಆಯ್ದ ಲೇಖನ ಗಳು. ಹೆಸರೇ ಹೇಳುವಂತೆ, ಮುಂಬೈಯಲ್ಲಿ ತಮ್ಮ ಬೇರುಗಳನ್ನು ಇಳಿ ಬಿಟ್ಟು ಸಾಧನೆ ಮಾಡಿದ ಹಲವು ಸಾಧಕರು, ಸಾಹಿತಿಗಳು, ಸಂಘಟಕರ ಪರಿಚಯವನ್ನು ಮಾಡುವ ಉದ್ದೇಶವನ್ನು ಈ ಕೃತಿ ಹೊಂದಿದೆ. ಆ ಪರಿಚಯವು ಕೇವಲ ವಿವರಗಳಿಗಷ್ಟೇ ಸೀಮಿತ ವಾಗುಳಿಯದೆ, ಒಳನಾಡು ಮತ್ತು ಹೊರ ನಾಡು ಕನ್ನಡಿಗರ ನಡುವಿನ ಬದುಕಿನ ಹತ್ತು ಹಲವು ಬಿಕ್ಕಟ್ಟುಗಳನ್ನು ಹೇಳಲು ಪ್ರಯತ್ನಿಸುತ್ತದೆ. ಕರ್ನಾಟಕದಿಂದ ವಲಸೆ ಹೋಗುವ ಅನಿವಾರ್ಯ ಸಂದರ್ಭದಲ್ಲಿ ಅವರಿಗೆ ಆಶ್ರಯ ನೀಡಿದ ಮಹಾರಾಷ್ಟ್ರ, ಮುಂಬೈಯ ಹಿರಿಮೆಯನ್ನು ಹೇಳುತ್ತಲೇ, ಅಲ್ಲಿ ಹೊಸದಾಗಿ ಕನ್ನಡ ಬದುಕು ಹೇಗೆ ರೂಪುಗೊಂಡಿತು ಎನ್ನುವ ಕುತೂಹಲಕಾರಿ ವಿವರಗಳು ಇಲ್ಲಿವೆ. ಹೊರನಾಡಿನ ಕನ್ನಡಿಗರ ಕುರಿತಂತೆ ಅಧ್ಯಯನ ಮಾಡುವವರಿಗೆ ಇದೊಂದು ಮಹತ್ವದ ಆಕರ ಗ್ರಂಥವೂ ಹೌದು.

ಮುಂಬೈ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಹಲವು ವರ್ಷಗಳ ಕಾಲ ಕೆಲಸ ಮಾಡಿ, ಮುಂಬೈ ಕನ್ನಡದ ಸಾಂಸ್ಕೃತಿಕ, ಶೈಕ್ಷಣಿಕ ಬದುಕಿಗೆ ಅಪಾರ ಕೊಡುಗೆಗಳನ್ನು ನೀಡಿದ ಡಾ. ತಾಳ್ತಜೆ ವಸಂತ ಕುಮಾರ್ ಅವರು ಈ ಕೃತಿಯ ಬಗ್ಗೆ ಹೀಗೆ ಬರೆಯುತ್ತಾರೆ. ‘‘.....ಇಲ್ಲಿಯ ಲೇಖನಗಳು ಕನ್ನಡ-ಕನ್ನಡಿಗ-ಮಹಾರಾಷ್ಟ್ರ ಈ ಅಂತರ್ ಸಂಬಂಧ ಹೊಂದಿದವೇ ಆಗಿವೆ. ಹಾಗಾಗಿ, ಮುಂಬೈಯ ಕನ್ನಡ ರಾತ್ರಿ ಶಾಲೆಗಳು, ಕನ್ನಡಿಗರು ಕಟ್ಟಿ ಬೆಳೆಸಿದ ಕನ್ನಡ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾನಿಲಯದ ಕನ್ನಡ ವಿಭಾಗ, ಮುಂಬೈ ಮನಪಾ ಶಾಲೆಗಳು, ಹೀಗೆ ಚೆಲ್ಲವರಿದಿವೆ. ಕನ್ನಡ ಸಾಧಕರ ನೆಲೆಯಲ್ಲಿ ಡಾ. ಸುನೀತಾ ಶೆಟ್ಟಿ, ಎಚ್.ಬಿ.ಎಲ್. ರಾವ್, ಎಂ.ಎಸ್. ಕೋಟ್ಯಾನ್ ಮುಂತಾದವರ ನಿರೂಪಣೆಗಳಿವೆ. ಇಲ್ಲಿ ಯಶಸ್ವಿಗಳಾದ ಇತರ ಸಾಧಕರನ್ನೂ ಪರಿಗಣಿಸುತ್ತಾ, ಕನ್ನಡಿಗ ನ್ಯಾಯವಾದಿಗಳು, ಕನ್ನಡಿಗ ಪಾನ್‌ವಾಲಾಗಳು, ಹಣಕಾಸು ಸಂಸ್ಥೆಗಳನ್ನು ಕಟ್ಟಿ ಬೆಳೆಸಿದವರು, ಪ್ರಕಾಶನ ಸಂಸ್ಥೆಗಳು, ಸಾಹಿತ್ಯದ ಅಡ್ಡೆಗಳು, ಮಂಗಳೂರು ಸ್ಟೋರ್‌ಗಳು, ಮುಂಬೈ ಪೋರ್ಟ್‌ನ

ಕನ್ನಡ ಪರಿಸರ, ಕರ್ನಾಟಕ ಸಂಘವೇ ಮೊದಲಾದ ಕನ್ನಡಿಗರ ಕೂಟಗಳು ಇವೆಲ್ಲವೂ ಇಲ್ಲಿ ವ್ಯಾವರ್ಣಿತವಾಗಿವೆ. ಸಾ. ದಯಾ ಅವರು ಕನ್ನಡ ಕರಾವಳಿ ಭಾಗದ ಹಿನ್ನೆಲೆ ಯವರು. ಹಾಗಾಗಿ ಸಹಜವಾಗಿಯೇ ಅವರ ಬರವಣಿಗೆಯಲ್ಲಿ ಈ ಪ್ರದೇಶದ ಬಗೆಗೆ ವಿಶೇಷ ಲಕ್ಷ್ಯವೂ ಇರುತ್ತದೆ. ತುಳುನಾಡಿನ ಭೂತಾರಾಧನೆಯು ಮುಂಬೈಯಲ್ಲಿ ಪಲ್ಲಟ ಗಳಿಗೆ ಪಕ್ಕಾಗಿರುವುದನ್ನು ವಿವರಿಸುತ್ತಾರೆ.....’’

ಬೆನ್ನುಡಿಯಲ್ಲಿ ಅಂತರ್‌ರಾಷ್ಟ್ರೀಯ ಖ್ಯಾತಿಯ ವ್ಯಂಗ್ಯ ಚಿತ್ರಕಾರ ಸತೀಶ್ ಆಚಾರ್ಯ ಹೀಗೆ ಬರೆಯುತ್ತಾರೆ ‘‘....ಮುಂಬೈಯಲ್ಲಿ ಒಂದಿಷ್ಟು ವರ್ಷ ಕಳೆದ ಪ್ರತಿ ಕನ್ನಡಿಗನಿಗೂ ಈ ಪುಸ್ತಕದ ಲೇಖನಗಳು ಅಪ್ಯಾಯಮಾನವಾದ ‘ಫ್ಲ್ಲಾಶ್ ಬ್ಯಾಕ್’ ಅನ್ನಿಸದೇ ಇರದು. ಈ ಮಾಯಾನಗರಿಯಲ್ಲಿಯೂ ಕನ್ನಡದ ನಂದಾದೀಪವನ್ನು ಉರಿಸುತ್ತಲೇ ಜೀವನ ಸವೆಸಿದ ಹಲವು ಕನ್ನಡಿಗರ ತ್ಯಾಗದ ದಾಖಲೆಯೂ ಹೌದು....’’

ಕೃತಿಯಲ್ಲಿ ಒಟ್ಟು 40 ಲೇಖನಗಳಿವೆ. ಮುಂಬೈ ಕನ್ನಡಕ್ಕೆ ಮುಸ್ಲಿಮರು, ಕ್ರೈಸ್ತರ ಕೊಡುಗೆಗಳು, ಜಾತಿ ಸಂಘಟನೆಗಳು ಕನ್ನಡವನ್ನು ಕಟ್ಟಿದ ಬಗೆ, ರಾತ್ರಿ ಶಾಲೆಗಳು ಹೇಗೆ ಕನ್ನಡದ ಮಕ್ಕಳನ್ನು ಪೊರೆದವು, ರಾತ್ರಿಶಾಲೆಗಳಲ್ಲಿ ಕಲಿತ ಮಕ್ಕಳು ಹೇಗೆ ಮುಂಬೈ ಶಹರಕ್ಕೆ ತಮ್ಮ ಕೊಡುಗೆಗಳನ್ನು ನೀಡಿದರು, ಹೊಟೇಲ್‌ಗಳಲ್ಲಿ ದುಡಿಯುತ್ತಾ ಶಾಲೆ ಕಲಿತು ಸಾಧನೆಗಳನ್ನು ಮಾಡಿದ ವಿವರಗಳು ಬರೇ ಹೊರನಾಡಿಗೆ ಸೀಮಿತವಾಗುಳಿಯದೇ ಒಳನಾಡಿನ ಉದ್ದಗಲಕ್ಕೆ ತನ್ನ ಬೇರುಗಳನ್ನು ವಿಸ್ತರಿಸಿಕೊಳ್ಳುತ್ತವೆ.

ಮಡಿಲು ಪ್ರಕಾಶನ, ಮೈಸೂರು ಈ ಕೃತಿಯನ್ನು ಹೊರತಂದಿದೆ. 292 ಪುಟಗಳ ಈ ಕೃತಿಯ ಮುಖಬೆಲೆ 330 ರೂಪಾಯಿ. ಆಸಕ್ತರು 98442 12231 ದೂರವಾಣಿಯನ್ನು ಸಂಪರ್ಕಿಸಬಹುದು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಕಾರುಣ್ಯಾ

contributor

Similar News

ಪತನದ ಕಳವಳ