ಪ್ರತಿಪಕ್ಷ ನಾಯಕನಿಲ್ಲದ ವಿಧಾನ ಮಂಡಲ

ಕರ್ನಾಟಕ ವಿಧಾನ ಮಂಡಲಕ್ಕೆ ಅತ್ಯಂತ ಉನ್ನತ ಇತಿಹಾಸವಿದೆ. ಮೊದಲ ಮುಖ್ಯಮಂತ್ರಿ ಸಿಜಿಕೆ ರೆಡ್ಡಿ ,ನಂತರ ಬಂದ ನಿಜಲಿಂಗಪ್ಪ, ಬಿ.ಡಿ.ಜತ್ತಿ, ರಾಮಕೃಷ್ಣ ಹೆಗಡೆ, ಬಂಗಾರಪ್ಪ, ದೇವೇಗೌಡ, ಎಸ್.ಎಂ. ಕೃಷ್ಣರಿಂದ ಹಿಡಿದು ಇವತ್ತಿನ ಸಿದ್ದರಾಮಯ್ಯನವರ ವರೆಗೆ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿಗಳು, ಶಾಂತವೇರಿ ಗೋಪಾಲಗೌಡರು, ಎಸ್.ಶಿವಪ್ಪ, ಎಂ.ಎಸ್.ಕೃಷ್ಣನ್, ಬಿ.ವಿ. ಕಕ್ಕಿಲ್ಲಾಯರು, ಕಾಗೋಡು ತಿಮ್ಮಪ್ಪ ಮುಂತಾದವರು ಸದನದ ಘನತೆಯನ್ನು ಹೆಚ್ಚಿಸಿದ್ದಾರೆ. ಅದಕ್ಕೆ ಚ್ಯುತಿ ಬಾರದಿರಲಿ.

Update: 2023-07-17 18:29 GMT

ಕರ್ನಾಟಕದ ವಿಧಾನಸಭೆ ಮತ್ತು ವಿಧಾನ ಪರಿಷತ್ತುಗಳು ಅಸ್ತಿತ್ವಕ್ಕೆ ಬಂದ ನಂತರದ ಆರು ದಶಕಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿ ಅಧಿಕೃತ ಪ್ರತಿಪಕ್ಷ ನಾಯಕನಿಲ್ಲದೇ ಅಧಿವೇಶನ ನಡೆಯುತ್ತಿದೆ. ಇದು ಬರೀ ಬಿಜೆಪಿಯ ಆಂತರಿಕ, ಸಂಘಟನಾತ್ಮಕ ಪ್ರಶ್ನೆಯಲ್ಲ. ಪ್ರಜಾಪ್ರಭುತ್ವದಲ್ಲಿ ಆಡಳಿತ ಪಕ್ಷದ ನಾಯಕನಿಗಿರುವಂತೆ ಪ್ರತಿಪಕ್ಷ ನಾಯಕನಿಗೂ ಸಂವಿಧಾನಾತ್ಮಾಕ ಸ್ಥಾನಮಾನಗಳಿವೆ. ಸಾಮಾನ್ಯವಾಗಿ ಪ್ರತಿಪಕ್ಷ ನಾಯಕನನ್ನು ಛಾಯಾ ಮುಖ್ಯಮಂತ್ರಿ ಎಂದು ಕರೆಯಲಾಗುತ್ತದೆ. ಆದರೆ ಅತ್ಯಂತ ವಿಷಾದದ ಮತ್ತು ಆತಂಕದ ಸಂಗತಿಯೆಂದರೆ ಒಕ್ಕೂಟ ಸರಕಾರದ ಸೂತ್ರ ಹಿಡಿದಿರುವ ಹಾಗೂ ನರೇಂದ್ರ ಮೋದಿಯವರಂತೆ ಪ್ರಬಲ, ಪಕ್ಷದೊಳಗೆ ಪಕ್ಷಾತೀತ ನಾಯಕನನ್ನು ಹೊಂದಿರುವ ರಾಷ್ಟ್ರೀಯ ಪಕ್ಷಕ್ಕೆ ಚುನಾವಣೆ ಫಲಿತಾಂಶ ಬಂದ ಎರಡು ತಿಂಗಳ ನಂತರವೂ ಹಾಗೂ ವಿಧಾನ ಮಂಡಲ ಅಧಿವೇಶನ ಆರಂಭವಾಗಿ ಎರಡು ವಾರವಾಗುತ್ತ ಬಂದರೂ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಸಾಧ್ಯವಾಗುತ್ತಿಲ್ಲವೆಂದರೆ ಅದಕ್ಕಿಂತ ಶೋಚನೀಯ ಸಂಗತಿ ಇನ್ನೊಂದಿಲ್ಲ

ಸಾಮಾನ್ಯವಾಗಿ ಯಾವುದೇ ಚುನಾವಣೆ ನಡೆದಾಗ ಜಯಶಾಲಿಯಾದ ಪಕ್ಷದಲ್ಲಿ ನಾಯಕತ್ವದ ಸಮಸ್ಯೆ ಉಂಟಾಗುತ್ತದೆ. ನಾಯಕನ ಆಯ್ಕೆ ಅನೇಕ ಬಾರಿ ವಿಳಂಬವಾಗುತ್ತದೆ. ಆದರೆ ೧೩೫ ಸ್ಥಾನಗಳನ್ನು ಗೆದ್ದು ಭಾರೀ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವದ ಪ್ರಶ್ನೆ ಆರಂಭದಲ್ಲಿ ಬಿಕ್ಕಟ್ಟಿಗೆ ಕಾರಣವಾದರೂ ಒಂದೇ ವಾರದಲ್ಲಿ ಇತ್ಯರ್ಥವಾಯಿತು. ನಂತರ ಭರವಸೆ ನೀಡಿದಂತೆ ತಮ್ಮ ಗ್ಯಾರಂಟಿ ಯೋಜನೆಗಳನ್ನೂ ಅವರು ಜಾರಿಗೆ ತಂದರು. ಆದರೆ ಮುಖ್ಯ ವಿರೋಧ ಪಕ್ಷವಾದ ಬಿಜೆಪಿಯಲ್ಲಿ ವಿಧಾನಸಭೆ ಚುನಾವಣೆ ಮುಗಿದು ಎರಡು ತಿಂಗಳಾದರೂ, ವಿಧಾನಸಭಾ ಅಧಿವೇಶನ ಆರಂಭವಾಗಿ ಎರಡು ವಾರಗಳಾದರೂ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಸಾಧ್ಯವಾಗುತ್ತಿಲ್ಲವೆಂದರೆ ಏನರ್ಥ? ಪಕ್ಷದ ಒಳಗೆ ನಾಯಕನ ಆಯ್ಕೆಯಲ್ಲಿ ಒಮ್ಮತವಿಲ್ಲ ಎಂದಲ್ಲವೇ? ಕಟು ಶಿಸ್ತಿನ ಸಂಘಟನೆ ಆರೆಸ್ಸೆಸ್ನ ನೇರ ನಿಯಂತ್ರಣದಲ್ಲಿರುವ ಹಾಗೂ ನರೇಂದ್ರ ಮೋದಿಯವರಂಥ ಪ್ರಬಲ ನಾಯಕನನ್ನು ಹೊಂದಿರುವ ಪಕ್ಷದಲ್ಲೂ ಇಷ್ಟೊಂದು ಅಧ್ವಾನದ, ಒಳ ಜಗಳವಿದೆ ಎಂದರೆ ಈ ಪಕ್ಷದ ಬಗ್ಗೆ ಭ್ರಮೆ ಹೊಂದಿರುವ ಮಧ್ಯಮ ವರ್ಗದ ಜನರಲ್ಲಿ ಭ್ರಮ ನಿರಸನವಾಗುವುದು ಸಹಜ.

ಯಾವುದೇ ಶಾಸನ ಸಭೆಯ ಅಧಿವೇಶನದ ಕಲಾಪ ಆರಂಭವಾಗುವಾಗ ಸ್ಪೀಕರ್ ಕೊಠಡಿಯಲ್ಲಿ ಆಡಳಿತ ಹಾಗೂ ಪ್ರತಿಪಕ್ಷ ನಾಯಕರನ್ನು ಕರೆದು ಸದನದ ಕಲಾಪ ಸುಗಮವಾಗಿ ನಡೆದುಕೊಂಡು ಹೋಗುವಂತೆ ಒಂದು ತಿಳಿವಳಿಕೆಗೆ ಬರಲಾಗುತ್ತದೆ. ಕರ್ನಾಟಕ ವಿಧಾನಸಭೆಯ ಈ ಬಾರಿಯ ಅಧಿವೇಶನದಲ್ಲಿ ಇಂಥ ಸಂಪ್ರದಾಯ ಪಾಲನೆಯಾಗಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಸದನದ ಕಲಾಪಗಳನ್ನು ಗಮನಿಸಿದರೆ ಮುಖ್ಯ ಪ್ರತಿಪಕ್ಷ ನಾವಿಕನಿಲ್ಲದೇ ನೌಕೆಯಂತೆ ಓಲಾಡುತ್ತಿರುವುದು ಗಮನಕ್ಕೆ ಬರುತ್ತದೆ.

ಯಾವುದೇ ಸೇನೆಗೆ ಒಬ್ಬ ದಂಡನಾಯಕ ಬೇಕು. ಕ್ರಿಕೆಟ್ ತಂಡಕ್ಕೂ ಒಬ್ಬ ಕ್ಯಾಪ್ಟನ್ ಬೇಕು. ಅದೇ ರೀತಿ ಶಾಸಕಾಂಗ ಪಕ್ಷಕ್ಕೆ ಒಬ್ಬ ನಾಯಕ ಬೇಕು. ನಾಯಕನಿಲ್ಲದ ಕರ್ನಾಟಕದ ವಿಧಾನಸಭೆಯ ಮುಖ್ಯ ವಿರೋಧ ಪಕ್ಷ ದಿಕ್ಕು ದೆಸೆ ಇಲ್ಲದೇ ಹೊರಟಿದೆ. ಯಾರೂ ಪೂರ್ವ ಸಿದ್ಧತೆ ಮಾಡಿಕೊಂಡು ಬರುವುದಿಲ್ಲ. ಏನು ಮಾತಾಡುತ್ತೇವೆ ಎಂಬ ಖಬರಿಲ್ಲ. ಅವರದೇ ಪಕ್ಷದ ಒಬ್ಬರು ನಿಂತರೆ, ತಕ್ಷಣ ಇನ್ನೊಬ್ಬರು ಎದ್ದು ಕೂಗಾಡುತ್ತಾರೆ.

ಸದನದ ನಿಯಮಾವಳಿಗಳ ಅರಿವಿಲ್ಲ. ಅವನು ಮಾತಾಡಿದನೆಂದು ಇವನು, ಇವನು ಮಾತಾಡಿದನೆಂದು ಇನ್ನೊಬ್ಬನು, ಲಂಗು ಲಗಾಮಿಲ್ಲದೇ ನಾಲಿಗೆ ಹರಿ ಬಿಡುತ್ತಿದ್ದಾರೆ. ಶಿಸ್ತಿಗೆ ಹೆಸರಾದ ಪಕ್ಷ ಎಂದು ತನ್ನ ಬೆನ್ನನ್ನು ತಾನೇ ಚಪ್ಪರಿಸಿಕೊಳ್ಳುವ ರಾಷ್ಟ್ರೀಯ ಪಕ್ಷ ಇಂಥ ಅಧೋಗತಿಗೆ ತಲುಪಿದ್ದನ್ನು ಕಂಡು ಜನ ನಗುತ್ತಿದ್ದಾರೆ. ಬಿಜಾಪುರದ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಬೆಂಗಳೂರಿನ ಮಲ್ಲೇಶ್ವರದ ಶಾಸಕ ಅಶ್ವತ್ಥನಾರಾಯಣ ಮುಂತಾದವರು ಅರಚಾಡುವುದನ್ನು ನೋಡಿದರೆ ಶಾಸನ ಸಭೆ ತಲುಪಿದ ದುರವಸ್ಥೆಯ ಬಗ್ಗೆ ಕಳವಳ ಉಂಟಾಗುತ್ತದೆ.ಈಗ ವಿರೋಧ ಪಕ್ಷದ ನಾಯಕನ ಕೊರತೆಯನ್ನು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ತುಂಬುತ್ತಿದ್ದಾರೆ. ವಿಧಾನಸಭೆ ಮತ್ತು ವಿಧಾನ ಪರಿಷತ್ತುಗಳ ವಿರೋಧ ಪಕ್ಷಗಳ ಕುಳಿತುಕೊಳ್ಳುವ ಮುಂದಿನ ಸಾಲಿನ ಎರಡನೇ ಆಸನ ಖಾಲಿ ಉಳಿದಿದೆ.

ಯಾವುದೇ ರಾಷ್ಟ್ರೀಯ ಪಕ್ಷಕ್ಕೆ ಕರ್ನಾಟಕದ ಸೋಲು ಆಘಾತವನ್ನು ಉಂಟು ಮಾಡುವುದು ಸಹಜ. ಈ ಬಗ್ಗೆ ಆತ್ಮಾವಲೋಕನ ಸಭೆಯೂ ನಡೆಯಿತು. ಈ ಸಭೆಯಲ್ಲಿ ಬಿಜೆಪಿಯ ಕರ್ನಾಟಕದ ಉಸ್ತುವಾರಿ ಅರುಣ್ ಸಿಂಗ್ ಪಕ್ಷದ ಶಾಸಕರ ಅಭಿಪ್ರಾಯ ಸಂಗ್ರಹಿಸಿದರು. ಚುನಾವಣಾ ಸೋಲಿನ ಹೊಣೆ ಹೊತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ರಾಜೀನಾಮೆ ಸಲ್ಲಿಸಿರುವುದಾಗಿ ಬಹಿರಂಗವಾಗಿ ಹೇಳಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರು ನಂತರ ಉಲ್ಟಾ ಹೊಡೆದರು. ಇದಾದ ನಂತರ ಕೇಂದ್ರದ ವೀಕ್ಷಕರಾಗಿ ಬೆಂಗಳೂರಿಗೆ ಆಗಮಿಸಿದ್ದ ಕೇಂದ್ರ ಸಚಿವ ಮನ್ಸುಳಡ ಮಾಂಡವೀಯಾ ಮತ್ತು ಮಹಾರಾಷ್ಟ್ರದ ಮಾಜಿ ಸಚಿವ ವಿನೋದ ತಾವ್ಡೆ ಅವರು ನೂತನ ರಾಜ್ಯಾಧ್ಯಕ್ಷರು

ಹಾಗೂ ವಿಧಾನಸಭೆ ಹಾಗೂ ವಿಧಾನ ಪರಿಷತ್ಗಳ ನಾಯಕರ ಆಯ್ಕೆಗಾಗಿ ೭೨ ಪ್ರಮುಖರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಿದರು. ಮಾಜಿ ಮುಖ್ಯಮಂತ್ರಿ

ಗಳಾದ ಯಡಿಯೂರಪ್ಪಮತ್ತು ಬಸವರಾಜ ಬೊಮ್ಮಾಯಿಯವರ ಅಭಿಪ್ರಾಯಗಳನ್ನು ಪಡೆದು ವರಿಷ್ಠರಿಗೆ ಸಲ್ಲಿಸಿದರು. ವರಿಷ್ಠರು ಈ ಶಿಫಾರಸು ಗಳನ್ನೆಲ್ಲ ಅಡಿಗೆ ಹಾಕಿ ಸುಮ್ಮನೆ ಕುಳಿತಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವನ್ನು ತುಂಬುವ ಜೊತೆಗೆ ವಿಧಾನ ಮಂಡಲದ ಉಭಯ ಸದನಗಳ ಪಕ್ಷದ ನಾಯಕನ ಆಯ್ಕೆ ಈಗ ಕಗ್ಗಂಟಾಗಿ ಪರಿಣಮಿಸಿದಂತೆ ಕಾಣುತ್ತದೆ. ಸದನದಲ್ಲಿ ಪ್ರತಿಪಕ್ಷ ನಾಯಕನೆಂದರೆ ಸದನದ ಹೊರಗೆ ಪಡ್ಡೆ ಹುಡುಗರ, ಅಂಧ ಭಕ್ತರ ಸಭೆಯಲ್ಲಿ ಬಾಯಿಗೆ ಬಂದಂತೆ ಮಾತಾಡಿ ಚಪ್ಪಾಳೆ ಹೊಡೆಸಿಕೊಳ್ಳುವುದಲ್ಲ. ಶಾಸಕಾಂಗ ಪಕ್ಷದ ಎಲ್ಲರ ವಿಶ್ವಾಸವನ್ನು ತೆಗೆದುಕೊಂಡು ಹೋಗುವ ಜೊತೆಗೆ ವಾಕ್ಚಾತುರ್ಯ, ಸದನದ ನಿಯಮಾವಳಿಗಳ ಅರಿವು ಮತ್ತು ಶಾಸಕಾಂಗ ವ್ಯವಸ್ಥೆಯ ಅಧ್ಯಯನ, ಅಂಕಿ, ಅಂಶಗಳ ಮಾಹಿತಿ ಇರಬೇಕಾಗುತ್ತದೆ. ಬಿಜೆಪಿ ಶಾಸಕರಲ್ಲಿ ಇಂಥ ತಿಳುವಳಿಕೆ ಇದ್ದವರು ಕಡಿಮೆ. ಉಳಿದಂತೆ ಜನತಾ ಪರಿವಾರದಿಂದ ಬಿಜೆಪಿಗೆ ಬಂದಿರುವ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಇವೆಲ್ಲ ಅರ್ಹತೆ ಇದ್ದರೂ ಬಿಜೆಪಿ ಒಳಗಿನ ನಾಗಪುರ ಸಂವಿಧಾನೇತರ ಶಕ್ತಿ ಕೇಂದ್ರದ ಒಲವು ಅವರ ಕಡೆ ಇದ್ದಂತಿಲ್ಲ. ಪಕ್ಷದಲ್ಲೂ ಒಮ್ಮತವಿಲ್ಲ. ಅವರ ಆಯ್ಕೆ ಸದಾ ಮುಸಲ್ಮಾನರನ್ನು, ಜಾತ್ಯತೀತರನ್ನು ಅಸಭ್ಯ ಭಾಷೆಯಲ್ಲಿ ಬೈಯುವ ವ್ಯಕ್ತಿಯಾಗಿರಬೇಕು. ಯತ್ನಾಳ್ ಗೌಡರಿಗೆ ಆ ಅರ್ಹತೆ ಇದ್ದರೂ ಅವರ ನಾಲಿಗೆಗೆ ಲಂಗು ಲಗಾಮಿಲ್ಲ. ಸಿಟ್ಟು ಬಂದರೆ ತಮ್ಮ ಪಕ್ಷದ ನಾಯಕರನ್ನೇ ಪಿಂಪ್ ಎಂದು ಜರೆಯುತ್ತಾರೆ. ೨೫೦ ಕೋಟಿ ಹೈಕಮಾಂಡ್ಗೆ ಕೊಟ್ಟು ಮುಖ್ಯಮಂತ್ರಿಯಾಗುತ್ತಾರೆ ಎಂದು ಧಡಕ್ಕನೇ ಹೇಳಿ ಬಿಡುತ್ತಾರೆ. ಹೀಗಾಗಿ ಯಾರನ್ನು ಪ್ರತಿಪಕ್ಷ ನಾಯಕನನ್ನಾಗಿ ಮಾಡಬೇಕೆಂಬ ಸಮಸ್ಯೆ ಬಿಜೆಪಿ ವರುಷ್ಠರಿಗೆ ಜಟಿಲವಾಗಿ ಪರಿಣಮಿಸಿದೆ.

ಇದರ ಪರಿಣಾಮವಾಗಿ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಮತ್ತು ಇತರ ಸಚಿವರು ಮಾತಾಡುವಾಗ ಸದನದಲ್ಲಿ ಕೂಗಾಡುವುದೇ ಬಿಜೆಪಿ ಶಾಸಕರ ಚಾಳಿಯಾಗಿದೆ.ಸಾಮಾನ್ಯವಾಗಿ ಮುಖ್ಯಮಂತ್ರಿಯಾಗಲಿ, ಯಾರೇ ಆಗಲಿ ಅವರು ಮಾತಾಡುವಾಗ ಉಳಿದ ಸದಸ್ಯರು ಮೌನವಾಗಿ ಕುಳಿತು ಅವರ ಮಾತುಗಳನ್ನು ಆಲಿಸಿ ಟಿಪ್ಪಣಿ ಮಾಡಿಕೊಂಡು ನಂತರ ತಮ್ಮ ಭಾಷಣದಲ್ಲಿ ಟೀಕಿಸುವುದು ಸಂಪ್ರದಾಯ. ಆದರೆ ಮುಖ್ಯಮಂತ್ರಿಗಳು ಮತ್ತು ಇತರ ಸಚಿವರ ಭಾಷಣಗಳಿಗೆ ಉತ್ತರ ನೀಡುವ ಅಧ್ಯಯನ ಶೀಲತೆ ಮತ್ತು ವಾಕ್ ಚಾತುರ್ಯ ಇಲ್ಲದ ಕೆಲವು ಬಿಜೆಪಿ ಶಾಸಕರು ಮುಖ್ಯಮಂತ್ರಿಗಳು ಮಾತಾಡುವಾಗಲೇ ನಡುವೆ ಎದ್ದು ನಿಂತು ಕೂಗಾಡಿ ಅವರ ಮಾತು ಯಾರಿಗೂ ಕೇಳಿಸದಂತೆ ಗಲಾಟೆ ಮಾಡುತ್ತಾರೆ. ಇವರನ್ನು ನಿಯಂತ್ರಿಸಲು ಸ್ಪೀಕರ್ ಖಾದರ್ ಕೂಡ ಸುಸ್ತಾಗಿ ಹೋಗಿದ್ದಾರೆ. ಇದು ರಾಷ್ಟ್ರೀಯ ಪಕ್ಷವೊಂದು ತಲುಪಿದ ದುರಂತ ಸ್ಥಿತಿ.

ಶಾಸಕ ಲಕ್ಷ್ಮಣ್ ಸವದಿಯವರ ಪ್ರಕಾರ ಕರ್ನಾಟಕ ವಿಧಾನಸಭೆ ಕಲಾಪಗಳನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಮಂತ್ರಿ ಅಮಿತಶಾ ಗಮನಿಸುತ್ತಿದ್ದಾರೆ. ಅವರಿಗೆ ತೋರಿಸಲು ಇವರೆಲ್ಲ ಅರಚಾಡುತ್ತಾರೆ. ಆದರೆ ವಿರೋಧ ಪಕ್ಷದ ನಾಯಕನ ನಿಜವಾದ ಪಾತ್ರವನ್ನು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ನಿರ್ವಹಿಸುತ್ತಿದ್ದಾರೆ. ಬಿಜೆಪಿ ಅವರ ಎರವಲು ಸೇವೆಯನ್ನು ಪಡೆಯುವ ಪರಿಸ್ಥಿತಿ ನಿರ್ಮಾಣವಾಗಬಹುದು. ಇದು ದಿಕ್ಕು ತಪ್ಪಿದ ಬಿಜೆಪಿಯ ಪರದಾಟ.

ಆಡಳಿತ ಪಕ್ಷ ಯಾವುದೇ ಆಗಿರಲಿ ಅದರ ಲೋಪದೋಷಗಳನ್ನು ಹುಡುಕಿ ಬಯಲಿಗೆಳೆಯಲು ಪ್ರಬಲ ವಿರೋಧ ಪಕ್ಷ ಬೇಕು. ಪ್ರಧಾನಿ ಮೋದಿಯವರು ವಿರೋಧ ಪಕ್ಷವನ್ನು ಎಂದೂ ಇಷ್ಟಪಡುವುದಿಲ್ಲ.ಅದು ಅವರು ಬೆಳೆದು ಬಂದ ಪರಿವಾರದಿಂದ ಪಡೆದ ಸೈದ್ಧಾಂತಿಕ ಸ್ಫೂರ್ತಿಯೋ ಅಥವಾ ವಯಕ್ತಿಕ ಮನಸ್ಥಿತಿಯೋ ಗೊತ್ತಿಲ್ಲ. ಕರ್ನಾಟಕದ ಮಟ್ಟಿಗೆ ಬಿಜೆಪಿ ಆಡಳಿತ ಪಕ್ಷದಲ್ಲಿ ಇದ್ದಾಗಲೂ ಆ ಪಕ್ಷದ ಶಾಸಕರು ಸದನದಲ್ಲಿ ಕೂಗಾಡಿ, ಚೀರಾಡಿ ಪ್ರತಿಪಕ್ಷ ಸದಸ್ಯರನ್ನು ಮಾತಾಡಲು ಬಿಡುತ್ತಿರಲಿಲ್ಲ. ಈಗ ವಿರೋಧ ಪಕ್ಷದಲ್ಲಿ ಇದ್ದಾಗಲೂ ಆಡಳಿತ ಪಕ್ಷದವರನ್ನು ಮಾತಾಡಲು ಬಿಡುವುದಿಲ್ಲ. ಚರ್ಚೆಯಲ್ಲಿ ಪಾಲ್ಗೊಂಡು ತಕ್ಕ ಉತ್ತರ ನೀಡುವ ಬೌದ್ಧಿಕ ಸಾಮರ್ಥ್ಯ ಮತ್ತು ಅಧ್ಯಯನ ಶೀಲತೆಯ ಕೊರತೆಯಿದ್ದಾಗ ಗಂಟಲು ಜೋರಾಗಿ ಕಿರುಚಾಟ ಆರಂಭವಾಗುತ್ತದೆ.ಬಿಜೆಪಿ ತನ್ನ ಶಾಸಕರಿಗೆ ಇನ್ನಾದರೂ ಶಾಸಕಾಂಗ ಕಲಾಪಗಳ ಬಗ್ಗೆ ತರಬೇತಿ ನೀಡಿ ಅದರ ಘನತೆ ಹೆಚ್ಚು ವಂತೆ ಮಾಡಲಿ.

ಕರ್ನಾಟಕ ವಿಧಾನ ಮಂಡಲಕ್ಕೆ ಅತ್ಯಂತ ಉನ್ನತ ಇತಿಹಾಸವಿದೆ.ಮೊದಲ ಮುಖ್ಯಮಂತ್ರಿ ಸಿಜಿಕೆ ರೆಡ್ಡಿ ,ನಂತರ ಬಂದ ನಿಜಲಿಂಗಪ್ಪ, ಬಿ.ಡಿ.ಜತ್ತಿ, ರಾಮಕೃಷ್ಣ ಹೆಗಡೆ, ಬಂಗಾರಪ್ಪ, ದೇವೇಗೌಡ, ಎಸ್.ಎಂ.ಕೃಷ್ಣರಿಂದ ಹಿಡಿದು ಇವತ್ತಿನ ಸಿದ್ದರಾಮಯ್ಯನವರ ವರೆಗೆ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿಗಳು, ಶಾಂತವೇರಿ ಗೋಪಾಲಗೌಡರು, ಎಸ್.ಶಿವಪ್ಪ, ಎಂ.ಎಸ್.ಕೃಷ್ಣನ್, ಬಿ.ವಿ. ಕಕ್ಕಿಲ್ಲಾಯರು, ಕಾಗೋಡು ತಿಮ್ಮಪ್ಪಮುಂತಾದವರು ಸದನದ ಘನತೆಯನ್ನು ಹೆಚ್ಚಿಸಿದ್ದಾರೆ. ಅದಕ್ಕೆ ಚ್ಯುತಿ ಬಾರದಿರಲಿ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ಸನತ್ ಕುಮಾರ ಬೆಳಗಲಿ

contributor

Similar News