‘ಬಸವ’ ಸಂದೇಶ ಮನೆಮನೆಗೆ ತಲುಪಲಿ

ಭಕ್ತಿ ಮಾರ್ಗವೆಂದರೆ ಬರೀ ಮೂರ್ತಿ ಪ್ರತಿಷ್ಠಾಪನೆ ಅಲ್ಲ. ಹೋಮ ಹವನಗಳಲ್ಲ. ಗಂಟೆ ಬಾರಿಸುವುದಲ್ಲ. ಊದುಬತ್ತಿ ಸುಡುವುದಲ್ಲ. ಯಾವ ವ್ರತಾಚರಣೆಯ ಅಗತ್ಯವೂ ಇಲ್ಲ. ಮಡಿ, ಮೈಲಿಗೆಗಳ ಉಸಾಬರಿಯೂ ಬೇಡ. ಇದೆಲ್ಲದರ ಬದಲಾಗಿ ಅಂತರಾಳದ ಕದ ತಟ್ಟಿ ಪ್ರೀತಿಸುವುದು ಮತ್ತು ಸಕಲರ ಏಳಿಗೆ ಬಯಸುವುದು ನಿಜವಾದ ಭಕ್ತಿ ಮಾರ್ಗ. ಹಸಿದವರ ಕಣ್ಣಲ್ಲಿ ಕೂಡಲ ಸಂಗಮದೇವನನ್ನು ಕಂಡ ಬಸವಣ್ಣ ನಮಗೆ ಆದರ್ಶವಾಗಬೇಕು. ಇವತ್ತಿನ ಕಾರ್ಗತ್ತಲ ಕಾಲದಲ್ಲಿ ಬಸವ ಮತ್ತು ಬಾಬಾಸಾಹೇಬರ ಬೆಳಕು ನಮ್ಮನ್ನು ಮುನ್ನಡೆಸಬೇಕಾಗಿದೆ. ಜನಸಾಮಾನ್ಯರಿಗಿಂತ ಮೊದಲು ಅವರನ್ನು ಪ್ರತಿನಿಧಿಸುವ ಶಾಸಕರು ಮತ್ತು ಸಂಸದರು ಒಟ್ಟಾರೆ ಜನಪ್ರತಿನಿಧಿಗಳು ಬಸವಣ್ಣನವರ ವಿಚಾರಗಳಿಗೆ ತಮ್ಮ ಬದ್ಧತೆಯನ್ನು ತೋರಿಸಬೇಕಾಗಿದೆ.

Update: 2024-01-22 04:47 GMT

ದೇಹವೇ ದೇವಾಲಯ ಎಂದು ಹೇಳಿ ದೇವಾಲಯ ಸಂಸ್ಕೃತಿಯನ್ನೇ ನಿರಾಕರಿಸಿದ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಘೋಷಿಸಿದೆ. ಇದು ನಿಜಕ್ಕೂ ಅತ್ಯಂತ ಶ್ಲಾಘನೀಯ ದಿಟ್ಟ ಹೆಜ್ಜೆ ಎಂದರೆ ಅತಿಶಯೋಕ್ತಿಯಲ್ಲ. ಇದರ ಜೊತೆಗೆ ಬಸವಣ್ಣನವರ ಯಾವ ಸಂದೇಶ ನೀಡಿದರು, ಯಾವುದು ತಿರಸ್ಕರಿಸಿದರು, ಯಾರನ್ನು ಅಪ್ಪಿಕೊಂಡರು ಎಂಬುದನ್ನು ರಾಜ್ಯದ ಜನಸಾಮಾನ್ಯರ ಮನೆ ಮನೆಗೆ ತಲುಪಿಸುವ ಮಹತ್ತರ ಹೊಣೆಗಾರಿಕೆಯನ್ನು ಈ ಸರಕಾರ ನಿಭಾಯಿಸಬೇಕಾಗಿದೆ.

ಅದರಲ್ಲೂ ಮುಂದಿನ ಪೀಳಿಗೆಯ ಮಕ್ಕಳ ಮೆದುಳಿಗೆ ‘ಇವ ನಮ್ಮವ,ಇವ ನಮ್ಮವ’ ಎಂಬ ಅಣ್ಣನ ಮಾತು ತಲುಪಬೇಕಿದೆ. ಧರ್ಮವಿಲ್ಲದವರಿಗಾಗಿ ಹೊಸ ಧರ್ಮವೊಂದನ್ನು ನಿರ್ಮಿಸಿಕೊಡಲು ಯತ್ನಿಸಿದ ಬಸವಣ್ಣ, ‘ವೇದಕ್ಕೆ ಒರೆಯ ಕಟ್ಟುವೆ! ಶಾಸ್ತ್ರಕ್ಕೆ ನಿಗಳನಿಕ್ಕುವೆ;. ತರ್ಕದ ಬೆನ್ನ ಭಾರವನೆತ್ತುವೆ;ಆಗಮದ ಮೂಗಕೊಯ್ಯುವೆ’ ಎಂದು ಹೇಳಿ ಮನುವಾದಕ್ಕೆ ಸವಾಲು ಹಾಕಿನಿಂತರು.

ವೇದವನ್ನು ಅರ್ಥಹೀನ ಕರ್ಮಕಾಂಡವನ್ನು ಟೀಕಿಸಿದ ಅವರು ಜಾತಿಯ ಕೊಳೆಯನ್ನು ಯಾವ ಪರಿ ಕಿತ್ತು ಹಾಕಿದರೆಂದರೆ, ಮಾದಾರ ಚೆನ್ನಯ್ಯನ ಮಗ ಎಂದು ತಮ್ಮನ್ನು ತಾವು ಕರೆದುಕೊಂಡರು. ಬಸವಣ್ಣ ಯಾವುದೇ ಒಂದು ಧರ್ಮ, ಇಲ್ಲವೇ ಜಾತಿಯ ಬಗ್ಗೆ ಅಥವಾ ಯಾವುದೇ ಭೂ ಪ್ರದೇಶದ ಜನರ ಹಿತವನ್ನು ಮಾತ್ರ ಬಯಸಲಿಲ್ಲ. ಸಕಲ ಜೀವಾತ್ಮರ ಲೇಸನು ಬಯಸಿದರು.

ಆದರೆ, ಹನ್ನೆರಡನೇ ಶತಮಾನದ ನಂತರ ಇಂತಹ ಬಸವಣ್ಣನವರ ಚರಿತ್ರೆಯನ್ನೇ ಅಳಿಸಿ ಹಾಕುವ ಹುನ್ನಾರ ನಡೆಯಿತು. ಜೀವಂತ ಬಸವಣ್ಣನವರನ್ನು ಮುಗಿಸಿದವರು ಅವರನ್ನು ಕಲ್ಲಿನ ಮೂರ್ತಿಯನ್ನಾಗಿ ಮಾಡುತ್ತ ಬಂದರು. ಆದರೆ, ಬಿಜಾಪುರದ ಫ.ಗು.ಹಳಕಟ್ಟಿಯವರು ವಚನ ಸಾಹಿತ್ಯವನ್ನು ಬೆಳಕಿಗೆ ತಂದ ನಂತರ ನಿಜವಾದ ಬಸವಣ್ಣ ಅನಾವರಣಗೊಂಡರು.

ಗೌತಮ ಬುದ್ಧನನ್ನು ವಿಷ್ಣುವಿನ ಅವತಾರ ಮಾಡಿ ಬೌದ್ಧಧರ್ಮವನ್ನು ದೇಶದಿಂದ ಹೊರ ಹಾಕಿದಂತೆ ಬಸವಣ್ಣನನ್ನು ಮೂರ್ತಿ ಮಾಡಿ ಗುಡಿಕಟ್ಟಿ ಕಲ್ಲಾಗಿ ಕೂರಿಸುವ ಅಪಾಯಗಳಿರುವಾಗಲೇ ಕರ್ನಾಟಕ ಸರಕಾರ ಸಾಂಸ್ಕೃತಿಕ ನಾಯಕ ಎಂದು ಸಾರಿದೆ. ‘ನೀರ ಕಂಡಲ್ಲಿ ಮುಳುಗುವರಯ್ಯ’ ಎಂದು ಕಂದಾಚಾರಿಗಳನ್ನು ಕೆಣಕಿದ ಬಸವಣ್ಣನನ್ನೇ ಕೋಮುವಾದದ ಕೆರೆಯಲ್ಲಿ ಮುಳುಗಿಸುವ ಹುನ್ನಾರ ನಡೆಯುತ್ತಲೇ ಬಂದಿದೆ. ಆದರೆ, ಬಸವಣ್ಣ ಬೆಂಕಿ ಇದ್ದಂತೆ ಅವನನ್ನು ಮುಟ್ಟಲು ಹೋದವರು ಕೈ ಸುಟ್ಟು ಕೊಳ್ಳುತ್ತಾರೆ. ಲಿಂಗಾಯತರಲ್ಲಿ ಕೆಲವರಾದರೂ ಎಚ್ಚೆತ್ತು ‘ನಾವು ನಿಮ್ಮವರಲ್ಲ. ಎಲ್ಲರೂ ನಮ್ಮವರು’ ಎಂದು ಮನುವಾದಿಗಳಿಗೆ ತಿರುಗಿ ಬಿದ್ದಿದ್ದಾರೆ.

ಇನ್ನು ಕೆಲವೇ ತಿಂಗಳಲ್ಲಿ ನಡೆಯುವ ಲೋಕಸಭಾ ಚುನಾವಣೆಗೆ ಟ್ರೆಂಡ್ ಸೆಟ್ ಮಾಡಲು ಅಧಿಕಾರದಲ್ಲಿ ಇರುವವರು ಪುರಾಣ ಪುರುಷರನ್ನು ಧಾರಾಳವಾಗಿ ಬಳಸಿಕೊಳ್ಳುತ್ತಿರುವ ಈ ದಿನಗಳಲ್ಲಿ ಬಸವಣ್ಣ ನವರು ಹಾಗಾಗದಿರಲಿ ಎಂಬ ಆಶಯದೊಂದಿಗೆ ಕರ್ನಾಟಕ ಸರಕಾರದ ದಿಟ್ಟ ನಿರ್ಧಾರವನ್ನು ಸ್ವಾಗತಿಸಬೇಕಾಗಿದೆ. ಎರಡು ವರ್ಷಗಳ ಹಿಂದೆ ಹಿರಿಯ ನ್ಯಾಯವಾದಿ ಸಿ.ಎಸ್.ದ್ವಾರಕಾನಾಥ ಅವರ ಮೊಟ್ಟಮೊದಲಿಗೆ ‘ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ’ ಎಂದು ಘೋಷಿಸುವಂತೆ ಬಹಿರಂಗವಾಗಿ ಒತ್ತಾಯಿಸಿದ್ದರು. ಮಾತೆ ಮಹಾದೇವಿಯವರೂ ಆಗ್ರಹಿಸಿದ್ದರು.ಇವರಲ್ಲದೇ ನಾಡಿನ ಅನೇಕ ಚಿಂತಕರ ಮನವಿಗೆ ಸ್ಪಂದಿಸಿದ ಸರಕಾರ ಈ ತೀರ್ಮಾನ ಕೈಗೊಂಡಿದೆ.

ವಾಸ್ತವವಾಗಿ ಜನತೆಗೆ ನೀಡಿದ ಯಾವ ಭರವಸೆಗಳನ್ನು ಈಡೇರಿಸದೇ ಮಾತಿನ ಮಂಟಪ ಕಟ್ಟುತ್ತ ಬಂದವರು ದೇವರನ್ನೂ ದುರ್ಬಳಕೆ ಮಾಡಿಕೊಳ್ಳುತ್ತಿರುವ ಈ ಕೆಟ್ಟ ದಿನಗಳಲ್ಲಿ ಅಪಾಯಕಾರಿ ಶಕ್ತಿಗಳಿಂದ ನಮ್ಮ ಬಸವಣ್ಣನವರನ್ನು ಕಾಪಾಡಿಕೊಳ್ಳಬೇಕಿದೆ. ತಮ್ಮ ಆಡಳಿತ ವೈಫಲ್ಯಗಳನ್ನು ಮರೆ ಮಾಚಿ ಭಾರತದ ಜನಸಾಮಾನ್ಯರನ್ನು ಸಮೂಹ ಸನ್ನಿಯಲ್ಲಿ ದಿಕ್ಕು ತಪ್ಪಿಸುವ ವಿದ್ಯೆ ಕೆಲವರಿಗೆ ಕರಗತವಾಗಿದೆ.ಜೊತೆಗೆ ಬಹುತೇಕ ಮಾಧ್ಯಮಗಳು ವೃತ್ತಿ ಧರ್ಮದಡಿ ಇಟ್ಟುಕೊಂಡು ತುತ್ತೂರಿಯಾಗಿ ರೂಪಾಂತರಗೊಂಡಿವೆ. ಸ್ವಾತಂತ್ರ್ಯ ಹೋರಾಟಕ್ಕೂ ಮಿಗಿಲಾದದದ್ದು ಎಂದು ಯಾವುದ್ಯಾವುದೋ ಗಲಭೆ, ದಂಗೆಗಳನ್ನು ವೈಭವೀಕರಿಸುತ್ತಿರುವ ಈ ದಿನಗಳಲ್ಲಿ ಬಸವಣ್ಣ ನಮಗೆ ಬಹಳ ಮುಖ್ಯವಾಗುತ್ತಾರೆ.

ಸಾಂಕೇತಿಕವಾಗಿ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದರೂ ಈ ನೆಲದಲ್ಲಿ ಜಾತಿ ಮತಗಳನ್ನು ಮನುಷ್ಯ ಪ್ರೀತಿಯ ಸಂದೇಶ ಸಾರಿದವರ ಬಹುದೊಡ್ಡ ಪರಂಪರೆಯೇ ಇದೆ. ಇವರಲ್ಲಿ ಬಸವಣ್ಣನವರು ಯಾಕೆ ಭಿನ್ನವಾಗಿ ನಿಲ್ಲುತ್ತಾರೆಂದರೆ ಅವರು ಬರೀ ಸಂದೇಶವನ್ನು ಮಾತ್ರ ನೀಡಲಿಲ್ಲ. ವರ್ಣಾಶ್ರಮ ವ್ಯವಸ್ಥೆಗೆ ಅವರ ಪ್ರತಿರೋಧ ಕೇವಲ ವೈಯಕ್ತಿಕವಾಗಿರಲಿಲ್ಲ. ಅವರು ಬಯಸಿದ್ದರೆ ಬಿಜ್ಜಳ ರಾಜನೊಂದಿಗೆ ರಾಜಿ ಮಾಡಿಕೊಂಡು ಒಣ ಉಪದೇಶ ನೀಡುತ್ತ ಸುರಕ್ಷಿತವಾಗಿ ಇರಬಹುದಿತ್ತು.ಆದರೆ ಬಸವಣ್ಣ ಅಷ್ಟಕ್ಕೆ ಸೀಮಿತರಾಗಿ ಉಳಿಯಲಿಲ್ಲ.

ಅಕ್ಷರ ವಂಚಿತ ಸಮುದಾಯಗಳ ಜನರನ್ನು ಸಂಘಟಿಸಿ ಅವರಿಗೆ ಅಕ್ಷರ ಕಲಿಸಿದರು.ಅಕ್ಷರ ಕಲಿತವರು ವಚನಗಳನ್ನು ಬರೆಯಲು ಪ್ರೇರಣೆಯಾದರು.ಎಂಟು ನೂರು ವರ್ಷಗಳ ಹಿಂದೆ ಸಾಕಷ್ಟು ಬಿಗಿಯಾಗಿದ್ದ ಶ್ರೇಣೀಕೃತ ಜಾತಿ ವ್ಯವಸ್ಥೆಯ ಬುಡ ಅಲ್ಲಾಡಿಸುವ ಕೆಲಸಕ್ಕೆ ಕೈ ಹಾಕಿದರು. ಮಧುವರಸ, ಹರಳಯ್ಯ ಕುಟುಂಬಗಳ ಬಾಂಧವ್ಯ ಬೆಸೆಯಲು ಜಾತಿ ರಹಿತ ಮದುವೆಗೆ ಮುಂದಾದರು. ಇದರಿಂದ ರೊಚ್ಚಿಗೆದ್ದ ಕರ್ಮಠ ಕ್ರೂರಿಗಳು ಬಸವಣ್ಣನವರನ್ನು ಹೇಗೆ ಮುಗಿಸಿದರೆಂಬುದು ಈಗ ಇತಿಹಾಸ. ಬಸವಣ್ಣನವರ ನಂತರ ಅವರ ಲಕ್ಷಾಂತರ ಅನುಯಾಯಿಗಳು ಅಮೂಲ್ಯವಾದ ವಚನ ಸಾಹಿತ್ಯದ ಗಂಟುಗಳನ್ನು ಹೊತ್ತುಕೊಂಡು ಕಲ್ಯಾಣ ತೊರೆದರು.

ಚೆನ್ನಬಸವಣ್ಣನ ನೇತೃತ್ವದಲ್ಲಿ ಶರಣರ ಬಹುದೊಡ್ಡ ಸಮೂಹ ಉಳವಿಯ ಮಾರ್ಗ ಹಿಡಿಯಿತು. ಉಳವಿ ಎಂಬ ಊರು ಇರುವುದು ಈಗಿನ ಕಾರವಾರ ಜಿಲ್ಲೆಯ ಜೊಯಿಡಾ ಸಮೀಪದಲ್ಲಿ. ಕಲ್ಯಾಣಕ್ಕೂ ಉಳವಿಗೂ ಅಂದಾಜು 800 ಮೈಲಿ ಅಂತರ. ವಚನ ಸಾಹಿತ್ಯವನ್ನು ಕಾಪಾಡಿಕೊಳ್ಳಲು ಬಿಜ್ಜಳನ ಸೇನೆಯ ಹಾಗೂ ಕ್ರೂರಿ ಮನುವಾದಿಗಳ ದಾಳಿಯನ್ನು ಎದುರಿಸುತ್ತ ದಾರಿಯಲ್ಲಿ ಹಲವರು ಬಲಿದಾನ ಮಾಡಿದರು. ಉಳಿದವರು ಉಳವಿಯನ್ನು ತಲುಪಿದರು. ಆ ಕಾಲದಲ್ಲಿ ಕಾಲ್ನಡಿಗೆಯಲ್ಲಿ ರಸ್ತೆಯಿಲ್ಲದಲ್ಲಿ ರಸ್ತೆ ಮಾಡಿಕೊಂಡು ಶರಣರು ಉಳವಿಯನ್ನು ತಲುಪಿದ್ದು ನನಗೀಗಲೂ ಅಚ್ಚರಿಯ ಸಂಗತಿಯಾಗಿದೆ. ನಾನು ಅನೇಕ ಸಲ ಇದೇ ಕುತೂಹಲದಿಂದ ಉಳವಿಗೆ ಹೋಗಿ ಬಂದಿದ್ದೇನೆ.

ಕರ್ನಾಟಕದಲ್ಲಿ ಸಕಲ ಜೀವಾತ್ಮರಿಗೆ ಲೇಸನು ಬಯಸಿದ ಬಸವಣ್ಣ, ಮನುಷ್ಯ ಕುಲಂ ತಾನೊಂದೆ ವಲಂ ಎಂದು ಸಾರಿದ ಪಂಪನ ಕನ್ನಡ ಪರಂಪರೆಗೆ ಸೇರಿದ ಮಹಾನ್ ಚೇತನ ಕುವೆಂಪು. ಇವರೆಲ್ಲ ನಮಗೆ ಮುಖ್ಯರಾಗುತ್ತಾರೆ. ಇವರು ಬರೀ ಯಾವುದೋ ಒಂದು ಜಾತಿಯ, ಮತದ ಕುಲದ, ಏಳಿಗೆಯನ್ನು ಮಾತ್ರ ಬಯಸಲಿಲ್ಲ. ಜಗತ್ತಿನ ಸಕಲ ಜೀವರಾಶಿಗಳ ಹಿತವನ್ನು ಬಯಸಿದರು.ಬಹುತ್ವ ಭಾರತವನ್ನು ಹಿಂದೂ ರಾಷ್ಟ್ರ ಮಾಡುತ್ತೇವೆ ಎಂದು ಕೂಗೆದ್ದಿರುವ ಈ ದಿನಗಳಲ್ಲಿ ಕುವೆಂಪು ಕೂಡ ಮತ್ತೆ ಮತ್ತೆ ನಮಗೆ ನೆನಪಾಗುತ್ತಾರೆ. ಈ ಮಹಾಕವಿ ಈ ನಾಡನ್ನು ಸರ್ವ ಜನಾಂಗದ ಶಾಂತಿಯ ತೋಟ ಎಂದು ಕರೆದರು. ಹಿಂದೂ, ಮುಸಲ್ಮಾನರ, ಕ್ರೈಸ್ತ, ಜೈನರುದ್ಯಾನ ಎಂದರು., ಮತಾಂಧತೆಯ ಪಿತ್ತ ನೆತ್ತಿಗೇರಿದ ಈ ದಿನಗಳಲ್ಲಿ ಕುವೆಂಪು ಎಂಬ ಚೇತನ ಕೂಡ ಬಸವ ಎಂಬ ಜ್ಯೋತಿಯ ಜೊತೆಗೆ ಈ ನಾಡನ್ನು ಮುನ್ನಡೆಸಬೇಕಾಗಿದೆ.

ಕುವೆಂಪು ತಾತ್ವಿಕ ಪ್ರಶ್ನೆಯಲ್ಲಿ ಎಷ್ಟು ನಿಷ್ಠುರವಾದಿಯಾಗಿದ್ದರೆಂದರೆ, ೭೦ರ ದಶಕದಲ್ಲಿ ಉಡುಪಿಯಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ತಿನ ಸ್ಥಾಪನಾ ಸಮಾವೇಶದ ಉದ್ಘಾಟನೆಗೆ ಅವರನ್ನು ಆಹ್ವಾನಿಸಲಾಗಿತ್ತು. ಈ ಆಹ್ವಾನವನ್ನು ತಿರಸ್ಕರಿಸಿದ ಕುವೆಂಪು, ‘ಹಿಂದೂ ಒಂದು ಎನ್ನುವುದಾದರೆ ಶ್ರೇಣೀಕೃತ ಜಾತಿಪದ್ಧತಿಯನ್ನು ಪ್ರತಿಪಾದಿಸುವ ಮನುಸ್ಮತಿ ಧಿಕ್ಕರಿಸುವಿರಾ? ಉಡುಪಿ ಅಷ್ಟ ಮಠಗಳ ಪೈಕಿ ಒಂದು ಮಠಕ್ಕಾದರೂ ಶೂದ್ರ ಮಠಾಧೀಶರನ್ನು ನೇಮಿಸುವಿರಾ’ ಎಂದು ಸವಾಲು ಹಾಕಿದರು. ಕುವೆಂಪು ಆ ಸಮಾವೇಶಕ್ಕೆ ಹೋಗಲಿಲ್ಲ. ತಮ್ಮ ಬದುಕಿನ ಕೊನೆಯುಸಿರು ಇರುವವರೆಗೆ ಕುವೆಂಪು ಕೋಮುವಾದಿಗಳ ಜೊತೆ ರಾಜಿ ಮಾಡಿಕೊಳ್ಳಲಿಲ್ಲ.

ಸರ್ವ ಜನಾಂಗದ ಶಾಂತಿಯ ತೋಟವಾದ ನಮ್ಮ ಕರ್ನಾಟಕವನ್ನು ಕೋಮುವಾದಿ ರೋಗಾಣುಗಳಿಂದ ಕಾಪಾಡಬೇಕಾದರೆ ಬರೀ ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದರೆ ಸಾಲದು. ಮನೆ ಮನೆಯ ಬಾಗಿಲಿಗೆ ಮನ ಮನದ ಅಂತರಾಳಕ್ಕೆ ಈ ಸಂದೇಶ ತಲುಪುವಂತೆ ಮಾಡಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದಕ್ಕಾಗಿ ಹನ್ನೊಂದು ದಿನಗಳ ಕಟ್ಟುನಿಟ್ಟಿನ ಧಾರ್ಮಿಕ ವ್ರತಗಳನ್ನು ಮಾಡಬೇಕಿಲ್ಲ. ಬರೀ ನೆಲದ ಮೇಲೆ ಮಲಗಬೇಕಿಲ್ಲ. ಎಳನೀರು ಮಾತ್ರ ಸೇವಿಸಬೇಕಾಗಿಲ್ಲ. ಪೂಜೆ, ಆರತಿಗಳ ಅಗತ್ಯವಿಲ್ಲ. ಮನೆ ಮನೆಗೆ ಮಂತ್ರಾಕ್ಷತೆ ತಲುಪಿಸಬೇಕಾಗಿಲ್ಲ. ಎಲ್ಲರನ್ನೂ ನಮ್ಮವರೆಂದು ಅಪ್ಪಿಕೊಂಡರೆ ಸಾಕು.

ವಾಸ್ತವವಾಗಿ ಯಾವ ಮಂತ್ರಾಕ್ಷತೆಯನ್ನು ನೀಡದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಸಿದ ಹೊಟ್ಟೆಗೆ ಪ್ರತೀ, ಮನೆಗೆ ಸಾಕಾಗುವಷ್ಟು ಅಕ್ಕಿ ನೀಡಿ ಬಸವ ಸಂದೇಶವನ್ನು ಜಾರಿಗೆ ತಂದಿದ್ದಾರೆ. ಆದರೆ ಇದಷ್ಟೇ ಸಾಲದು. ಫ್ಯಾಶಿಸ್ಟ್ ಮನುವಾದಿ ಶಕ್ತಿಗಳಿಂದ ಸಂವಿಧಾನಕ್ಕೆ ಎದುರಾಗಿರುವ ಅಪಾಯವನ್ನು ಹಿಮ್ಮೆಟ್ಟಿ ಸಬೇಕಾಗಿದೆ. ಧರ್ಮ ಮತ್ತು ರಾಜಕಾರಣದ ನಡುವಿನ ಲಕ್ಷ್ಮಣ ರೇಖೆ ಕ್ಷೀಣಿಸುತ್ತಾ ಹೋದಂತೆ ನಮ್ಮ ನಾಡಿನ ಬಸವಣ್ಣ, ಕುವೆಂಪು ಮತ್ತು ಪಂಪ, ಕನಕದಾಸರ ಬಹುತ್ವ ಪರಂಪರೆಯ ಪ್ರಭಾವ ಕಡಿಮೆಯಾಗುತ್ತಿದೆ.

ಸಂವಿಧಾನದ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿ ಶಾಸನಸಭೆಯನ್ನು ಪ್ರವೇಶಿಸಿದ ಜನಪ್ರತಿನಿಧಿಗಳು ಕೂಡ ಸಂವಿಧಾನವನ್ನು ಕಡೆಗಣಿಸಿ ಮತ ಧರ್ಮಗಳಿಗೆ ತಮ್ಮ ನಿಷ್ಠೆಯನ್ನು ಪ್ರದರ್ಶಿಸುತ್ತಿರುವ ಇಂದಿನ ದಿನಗಳಲ್ಲಿ ಇತರ ಧರ್ಮ ಮತ್ತು ಇತರರ ಆಲೋಚನೆಗಳನ್ನು ಸಹನೆಯಿಂದ ನೋಡುವುದೇ ನಿಜವಾದ ಧರ್ಮ ಎಂದು ಹೇಳಿದ ಕವಿರಾಜಮಾರ್ಗಕಾರನ ಮಾತು ನಮ್ಮನ್ನು ಮುನ್ನಡೆಸಬೇಕಾಗಿದೆ. ‘ಇತರರ ಪ್ರಾರ್ಥನಾ ಮಂದಿರಗಳನ್ನು ನೆಲಸಮಗೊಳಿಸುತ್ತೇವೆ’ ಎಂಬ ಕೂಗು ಮಾರಿಗಳಿಗೆ ಕಡಿವಾಣ ಹಾಕಬೇಕಿದೆ.

ಎಲ್ಲರನ್ನೂ ತನ್ನವರೆಂದು ಅಪ್ಪಿಕೊಂಡ, ಒಪ್ಪಿಕೊಂಡ ಅರಿವನ್ನು ಗುರುವೆಂದು ನುಡಿದ, ದಯೆಯೇ ಧರ್ಮದ ಮೂಲವೆಂದು ಸಾರಿದ ಬಸವಣ್ಣನವರ ವಚನಗಳನ್ನು ಮತ್ತು ಬಾಬಾಸಾಹೇಬರ ಸಂವಿಧಾನವನ್ನು ಶಾಲಾ ಮಕ್ಕಳ ಹಂತದಿಂದ ಕಡ್ಡಾಯ ಪಠ್ಯಕ್ರಮ ವಾಗಿ ಜಾರಿಗೆ ತರಬೇಕಾಗಿದೆ.

ಭಕ್ತಿ ಮಾರ್ಗವೆಂದರೆ ಬರೀ ಮೂರ್ತಿ ಪ್ರತಿಷ್ಠಾಪನೆ ಅಲ್ಲ. ಹೋಮ ಹವನಗಳಲ್ಲ. ಗಂಟೆ ಬಾರಿಸುವುದಲ್ಲ. ಊದುಬತ್ತಿ ಸುಡುವುದಲ್ಲ. ಯಾವ ವ್ರತಾಚರಣೆಯ ಅಗತ್ಯವೂ ಇಲ್ಲ. ಮಡಿ, ಮೈಲಿಗೆಗಳ ಉಸಾಬರಿಯೂ ಬೇಡ. ಇದೆಲ್ಲದರ ಬದಲಾಗಿ ಅಂತರಾಳದ ಕದ ತಟ್ಟಿ ಪ್ರೀತಿಸುವುದು ಮತ್ತು ಸಕಲರ ಏಳಿಗೆ ಬಯಸುವುದು ನಿಜವಾದ ಭಕ್ತಿ ಮಾರ್ಗ. ಹಸಿದವರ ಕಣ್ಣಲ್ಲಿ ಕೂಡಲ ಸಂಗಮದೇವನನ್ನು ಕಂಡ ಬಸವಣ್ಣ ನಮಗೆ ಆದರ್ಶವಾಗಬೇಕು. ಇವತ್ತಿನ ಕಾರ್ಗತ್ತಲ ಕಾಲದಲ್ಲಿ ಬಸವ ಮತ್ತು ಬಾಬಾಸಾಹೇಬರ ಬೆಳಕು ನಮ್ಮನ್ನು ಮುನ್ನಡೆಸಬೇಕಾಗಿದೆ. ಜನಸಾಮಾನ್ಯರಿಗಿಂತ ಮೊದಲು ಅವರನ್ನು ಪ್ರತಿನಿಧಿಸುವ ಶಾಸಕರು ಮತ್ತು ಸಂಸದರು ಒಟ್ಟಾರೆ ಜನಪ್ರತಿನಿಧಿಗಳು ಬಸವಣ್ಣನವರ ವಿಚಾರಗಳಿಗೆ ತಮ್ಮ ಬದ್ಧತೆಯನ್ನು ತೋರಿಸಬೇಕಾಗಿದೆ.


Writer - ವಾರ್ತಾಭಾರತಿ

contributor

Editor - Safwan

contributor

Byline - ಸನತ್ ಕುಮಾರ ಬೆಳಗಲಿ

contributor

Similar News