‘ನೆಟ್ ಝೀರೊ’; ಕುಂಟನ ಮೇಲೆ ಕುರುಡ ಕೂತಿದ್ದಾನೆ, ದಾರಿ ಸಾಗುವುದೆಂತೊ ನೋಡಬೇಕು

Update: 2023-09-16 04:39 GMT

ನಮ್ಮ ಗುರಿಗಳನ್ನು ಮುಂದಿಟ್ಟುಕೊಂಡು ನಮ್ಮ ಅಳವಿಗೆ ಮೀರಿದ ವಾಗಾಡಂಬರಗಳಲ್ಲೇ ಕಳೆದುಹೋದರೆ, ಅದಕ್ಕೆ ತೂಕ ಇರದು. ಆಡದೇ ಮಾಡಿ ತೋರಿಸಿದ ಬಳಿಕ ಮಾತ್ರ ಯಶಸ್ಸಿಗೊಂದು ಮರ್ಯಾದೆ ಎಂಬುದನ್ನು ದೇಶದ ನೀತಿ ನಿರೂಪಕರು ಅರ್ಥ ಮಾಡಿಕೊಳ್ಳಬೇಕು.

ಏರುತ್ತಿರುವ ಉಷ್ಣತೆಯಿಂದ ಭೂಮಿಯನ್ನು ರಕ್ಷಿಸಿ ಈ ಜಗತ್ತನ್ನು ವಾಸಯೋಗ್ಯವಾಗಿ ಉಳಿಯುವಂತೆ ಮಾಡುವುದಕ್ಕಾಗಿ 2070ರ ಹೊತ್ತಿಗೆ ಜಗತ್ತಿನಲ್ಲಿ ಕಾರ್ಬನ್ ಡೈಆಕ್ಸೈಡ್ ಹೊರಸೂಸುವಿಕೆಯನ್ನು ಶೂನ್ಯಗೊಳಿಸಿಕೊಳ್ಳಲು (ನೆಟ್ ಝೀರೊ) ವಿಶ್ವ ಸಂಸ್ಥೆಯ ಪರಿಸರ ಬದಲಾವಣೆ ಒಪ್ಪಂದದ ಚೌಕಟ್ಟು (ಸಿಒಪಿ-26) 2021ರಲ್ಲಿ ತೀರ್ಮಾನಿಸಿತ್ತು. ಅದರ ಪಾಲುದಾರ ದೇಶವಾಗಿ ಭಾರತ ಕೂಡ ‘ನೆಟ್ ಝೀರೊ’ ಸಾಧಿಸಬೇಕಿದೆ.

ಈ ಪರಿವರ್ತನೆ ಸಾಧಿಸಿಕೊಳ್ಳುವುದು ಬಹಳ ದುಬಾರಿ. ಅಂತರ್ರಾಷ್ಟ್ರೀಯ ಇಂಧನ ಸಂಸ್ಥೆ (ಐಇಎ) ಅಂದಾಜಿಸಿರುವಂತೆ ಜಗತ್ತಿನ ದೇಶಗಳು ಪ್ರತೀವರ್ಷ ಜಾಗತಿಕ ಜಿಡಿಪಿಯ ಶೇ. 2.5ರಷ್ಟು ಅಂದರೆ ಸುಮಾರು ಐದು ಲಕ್ಷ ಕೋಟಿ ಅಮೆರಿಕನ್ ಡಾಲರ್ ಖರ್ಚು ಮಾಡಬೇಕಿದೆ. ಇದಕ್ಕಾಗಿ ಅಭಿವೃದ್ಧಿಹೊಂದಿದ ದೇಶಗಳು ಅಭಿವೃದ್ಧಿಶೀಲ ಮತ್ತು ಬಡ ದೇಶಗಳಿಗೆ 10,000 ಕೋಟಿ ಡಾಲರ್ಗಳ ನೆರವಿನ ವಾಗ್ದಾನ ಮಾಡಿದ್ದವು. ಅದರಲ್ಲಿ ಎಲ್ಲೋ ಅಲ್ಪಸ್ವಲ್ಪ ಮಾತ್ರ ಇಲ್ಲಿಯ ತನಕ ಬಡ-ಅಭಿವೃದ್ಧಿಶೀಲ ದೇಶಗಳಿಗೆ ಹರಿದುಬಂದಿದೆ.

ಮೊನ್ನೆ ಮುಗಿದ ಜಿ20 ಶೃಂಗಸಭೆಯಲ್ಲಿ ಈ ನಿಟ್ಟಿನಲ್ಲಿ ದೊಡ್ಡ ಯಶಸ್ಸನ್ನು ಸಾಧಿಸಲಾಗಿದೆ ಎಂದು ಇದೇ ಸೆ.10ರಂದು ಪತ್ರಿಕಾಗೋಷ್ಠಿಯಲ್ಲಿ ಶೃಂಗದ ಅಧ್ಯಕ್ಷೀಯ ದೇಶದ ಶೆರ್ಪಾ (ನಿರ್ಣಯ ಸಂಧಾನಕಾರ) ಅಮಿತಾಬ್ ಕಾಂತ್ ಮತ್ತು ಭಾರತದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು. ಆ ಯಶಸ್ಸು ಏನೆಂದು ಮಾಧ್ಯಮದವರು ವಿವರವಾಗಿ ಕೇಳಿದರೆ, ಸ್ಪಷ್ಟ ಉತ್ತರ ಸಿಗಲಿಲ್ಲ. ಬದಲಾಗಿ, ನೆರವು ಕೊಡುತ್ತಾರೆಂದು ಶ್ರೀಮಂತ ದೇಶಗಳ ಮುಖ ನೋಡುವ ಬದಲು ನಾವೇ ಹೊಸ ದಾರಿ ಕಂಡುಕೊಳ್ಳಬೇಕು, ಖಾಸಗಿ ಪಾಲುದಾರಿಕೆ, ದಾನಿಗಳು ಎಲ್ಲರನ್ನೂ ಒಳಗೊಂಡು ಮುಂದೆ ಹೋಗುವುದನ್ನು ನೋಡಬೇಕು ಎಂಬ ಉತ್ತರ ಬಂತು (https://mea.gov.in/media-briefings.htm?dtl/37093/ Transcript+of+Press+briefing+by+G20+Presidency +September+09+2023).

ಈ ಯಶಸ್ಸಿನ ಪ್ರಕಟಣೆ ನಿಜಕ್ಕೂ ಏನು?

ತಂತ್ರಜ್ಞಾನದಲ್ಲಿ ಪೂರಕ ಬದಲಾವಣೆ ಮಾಡಿಕೊಳ್ಳುವುದು, ಕಲ್ಲಿದ್ದಲಿನಂತಹ ಮಾಲಿನ್ಯಕಾರಕಗಳ ಬಳಕೆ ತಗ್ಗಿಸಿಕೊಳ್ಳುವುದು, ಪರ್ಯಾಯ ಇಂಧನ ಮೂಲಗಳನ್ನು ಹಡುಕಿಕೊಂಡು ‘ನೆಟ್ ಝೀರೊ’ ಕಡೆ ಸಾಗುತ್ತಾ, ಜೊತೆಗೆ ಆರ್ಥಿಕವಾಗಿ ಕೂಡಾ ಸದೃಢಗೊಳ್ಳಲು ಯಾವುದೇ ದೇಶಕ್ಕೆ ದೊಡ್ಡ ಪ್ರಮಾಣದಲ್ಲಿ ಹಣ ಖರ್ಚು ಮಾಡುವುದು ಅನಿವಾರ್ಯ. ಅಗತ್ಯ ಇರುವ ಈ ಹಣ ಬರುವ ಹಾದಿ ಯಾವುದು ಎಂದು ಗೊತ್ತಿಲ್ಲದೆ ೨೦೭೦ರ ‘ನೆಟ್ ಝೀರೊ’ ಗುರಿ ತಲುಪುವುದು ಹೇಗೆ? ಬೇರೆ ದೇಶಗಳನ್ನು ಬಿಡಿ. ಹಾಲಿ ಜಿ೨೦ ಅಧ್ಯಕ್ಷತೆಯನ್ನು ಹೊಂದಿರುವ ಭಾರತದ ಪರಿಸ್ಥಿತಿ ಹೇಗಿದೆ? ಎಂಬುದನ್ನು ಒಮ್ಮೆ ನೋಡಿಕೊಂಡು ಬಂದರೆ, ಈ ವಾಗಾಡಂಬರಗಳು ಸರಳವಾಗಿ ಅರ್ಥವಾಗತೊಡಗುತ್ತವೆ.

ಭಾರತ ೨೦೭೦ರ ಹೊತ್ತಿಗೆ ತನ್ನ ಉದ್ದೇಶಿತ ಗುರಿ ತಲುಪಲು ಏನೆಲ್ಲ ಆಗಬೇಕೆಂಬ ಬಗ್ಗೆ ಇಂಧನ, ಪರಿಸರ ಮತ್ತು ಜಲ ಮಂಡಳಿ (CEEW) ಎಂಬ ಏಶ್ಯನ್ ಸಂಶೋಧನಾ ಸಂಸ್ಥೆ 2021 ಅಕ್ಟೋಬರಿನಲ್ಲಿ ಐದು ಗುರಿಗಳನ್ನು ಮುಂದಿಟ್ಟಿದೆ ಮತ್ತು ಮೂರು ಸಲಹೆಗಳನ್ನು ನೀಡಿದೆ.

ಗುರಿಗಳು:

2065ರ ಹೊತ್ತಿಗೆ ಕೈಗಾರಿಕೆಗಳಲ್ಲಿ ಕಲ್ಲಿದ್ದಲು ಬಳಕೆ ಸಂಪೂರ್ಣ ಸ್ಥಗಿತ

2060ರ ಹೊತ್ತಿಗೆ ಎಲ್ಲ ವಿಧದ ಕಲ್ಲಿದ್ದಲು ಬಳಕೆ ಸಂಪೂರ್ಣ ಸ್ಥಗಿತ

2050ರ ಹೊತ್ತಿಗೆ 1,700 ಗಿಗಾವ್ಯಾಟ್ ಸೌರ ವಿದ್ಯುತ್ ಉತ್ಪಾದನೆ.

2050ರ ಹೊತ್ತಿಗೆ 557 ಗಿಗಾವ್ಯಾಟ್ ವಾಯುಮೂಲದ ವಿದ್ಯುತ್ ಉತ್ಪಾದನೆ; ಮತ್ತು

2050ರ ಹೊತ್ತಿಗೆ 68 ಗಿಗಾವ್ಯಾಟ್ ಅಣು ವಿದ್ಯುತ್ ಉತ್ಪಾದನೆ.

ಸಲಹೆಗಳು:

2070ರ ಹೊತ್ತಿಗೆ ದೇಶದಲ್ಲಿ ಮಾರಾಟವಾಗುವ ಕಾರುಗಳಲ್ಲಿ ಶೇ. 84 ವಿದ್ಯುತ್ ಕಾರುಗಳಾಗಿರಬೇಕು.

2070ರ ಹೊತ್ತಿಗೆ ದೇಶದಲ್ಲಿ ಇರುವ ಟ್ರಕ್ಗಳಲ್ಲಿ ಶೇ. 79 ವಿದ್ಯುತ್ ಚಾಲಿತವಾಗಬೇಕು ಮತ್ತು ಉಳಿದವು ಹೈಡ್ರೋಜನ್ ಚಾಲಿತವಾಗಬೇಕು.

2070ರ ಹೊತ್ತಿಗೆ, ಉಳಿದಿರುವ ಪೆಟ್ರೋಲ್ ಚಾಲಿತ ಕಾರು, ಟ್ರಕ್, ವಿಮಾನಗಳಲ್ಲಿ ಬಳಕೆಯಾಗುವ ಇಂಧನಗಳಲ್ಲಿ ಶೇ. 84ರಷ್ಟರಲ್ಲಿ ಜೈವಿಕ ಇಂಧನಗಳು ಬ್ಲೆಂಡ್ ಆಗಿರಬೇಕು.

ನಾವೆಲ್ಲಿದ್ದೇವೆ?

ಜನವರಿ 22ರ ಹೊತ್ತಿಗೆ ಭಾರತದ ಸ್ಥಾಪಿತ ವಿದ್ಯುತ್ ಉತ್ಪಾದನಾ ಸಾಮರ್ಥ್ಯ 395.1 ಗಿಗಾವ್ಯಾಟ್. ಅದರಲ್ಲಿ ಶೇ. 60 ಕಲ್ಲಿದ್ದಲು ಆಧರಿತ. ಉಳಿದ ಶೇ. 11.8 ಜಲಮೂಲದ್ದು, ಶೇ. 28.5 ಸೌರ ಮತ್ತಿತರ ನವೀಕರಿಸಬಹುದಾದ ಮೂಲಗಳದ್ದು ಮತ್ತು ಶೇ. 1.7 ಅಣುಶಕ್ತಿ ಮೂಲದ್ದು. ಮೇಲೆ ಹೇಳಲಾಗಿರುವ ಗುರಿಗಳನ್ನು ತಲುಪಬೇಕಿದ್ದರೆ ಭಾರತ ಖರ್ಚು ಮಾಡಬೇಕಿರುವುದು ಕನಿಷ್ಠ ಸುಮಾರು 12ಲಕ್ಷ ಕೋಟಿ ಡಾಲರ್ಗಳನ್ನು! ನವೀಕರಿಸಬಲ್ಲ ಇಂಧನ ಬಳಸಿ ಒಂದು ಗಿಗಾವ್ಯಾಟ್ ವಿದ್ಯುತ್ ತಯಾರಿಸಲು ಅಂದಾಜು ಆರು ಕೋಟಿ ರೂ.ಗಳ ವೆಚ್ಚ ಬರುತ್ತದಂತೆ!!

140 ಕೋಟಿ ಜನಸಂಖ್ಯೆ ಇದ್ದರೂ, ಭಾರತದ ಕಾರ್ಬನ್ ಡೈಆಕ್ಸೈಡ್ ಹೊರಸೂಸುವ ಪ್ರಮಾಣ ಜಗತ್ತಿನ ಕೇವಲ ಶೇ. 17ರಷ್ಟು ಮಾತ್ರ. ಜೊತೆಗೆ 1850ರಿಂದ 2019ರ ನಡುವೆ ಜಗತ್ತಿಗೆ ಬಿಡುಗಡೆ ಆಗಿರುವ ಇಂಗಾಲದ ಮಾಲಿನ್ಯದಲ್ಲಿ ಭಾರತದ ಪಾಲು ಕೇವಲ ಶೇ. 4 ಮಾತ್ರ. ಅಂದರೆ, ನೈತಿಕವಾಗಿ ನಾವು ಮುಂಚೂಣಿಯಲ್ಲೇ ಇದ್ದೇವೆ. ಆದರೆ ನಮ್ಮ ಗುರಿಗಳನ್ನು ಮುಂದಿಟ್ಟುಕೊಂಡು ನಮ್ಮ ಅಳವಿಗೆ ಮೀರಿದ ವಾಗಾಡಂಬರಗಳಲ್ಲೇ ಕಳೆದುಹೋದರೆ, ಅದಕ್ಕೆ ತೂಕ ಇರದು. ಆಡದೇ ಮಾಡಿ ತೋರಿಸಿದ ಬಳಿಕ ಮಾತ್ರ ಯಶಸ್ಸಿಗೊಂದು ಮರ್ಯಾದೆ ಎಂಬುದನ್ನು ದೇಶದ ನೀತಿ ನಿರೂಪಕರು ಅರ್ಥ ಮಾಡಿಕೊಳ್ಳಬೇಕು.

ಭಾರತದಲ್ಲಿನ್ನೂ ಕಲ್ಲಿದ್ದಲು ಗಣಿಗಾರಿಕೆ, ಸಾಗಾಟ, ಆಮದಿನ ಅಬ್ಬರ ಇಳಿದಿಲ್ಲ; ಪರ್ಯಾಯದತ್ತ ನೊಡೋಣವೆಂದರೆ ಸಸ್ತಾ ಸಿಗುವ ವಿದ್ಯುತ್ ವಾಹನಗಳು ಅಗ್ನಿ ಅವಘಢದಂತಹ ಹತ್ತಾರು ಕಾರಣಗಳಿಂದಾಗಿ ರೂಢಿ ಆಗಲು ಕೇಳುತ್ತಿಲ್ಲ; ದುಬಾರಿ ವಿದ್ಯುತ್ ಚಾಲಿತ ವಾಹನಗಳು ಕೈಗೆ ಎಟುಕುತ್ತಿಲ್ಲ; ಬ್ಯಾಟರಿ ಉದ್ದಿಮೆ, ವಿದ್ಯುತ್ ರೀಚಾರ್ಜ್ ವ್ಯವಸ್ಥೆಗೆ ನೀತಿ, ವಿದ್ಯುತ್ ರೀಚಾರ್ಜ್ ಜಾಲ ಯಾವುದೂ ಸ್ಪಷ್ಟ ರೂಪ ತಳೆದಿಲ್ಲ; ಸೌರ ವಿದ್ಯುತ್ತಿಗೆ ಅಗತ್ಯವಿರುವಷ್ಟು ನೀರು ಇದೆಯೇ? ಕುಡಿಯುವ ನೀರಿಗೆ ಹಾಹಾಕಾರ ಏಳುತ್ತಿರುವಾಗ ಸೌರ ವಿದ್ಯುತ್ ಉತ್ಪಾದನೆ ಬಳಕೆಗೆ ನೀರಿನ ಕಥೆಯೇನು? ಎಂಬುದೂ ಗೊತ್ತಿಲ್ಲ; ಕಟ್ಟಕಡೆಗೆ ಈ ಎಲ್ಲದಕ್ಕೂ ಪಿಪಿಪಿ ಎನ್ನತ್ತಾ ‘ಆನಿ’ ಕಂಪೆನಿಗಳತ್ತ ಮತ್ತೆ ಮತ್ತೆ ದೃಷ್ಟಿ ಬೀರಲಾಗುತ್ತಿದೆ. ತಳ ಮಟ್ಟದಲ್ಲಿ ಪರಿಸ್ಥಿತಿ ಹೀಗಿದ್ದರೂ ಯಶಸ್ಸಿನ ಪ್ರಕಟಣೆಯಲ್ಲಿ ಮಾತ್ರ ನಾವು ಎಲ್ಲರಿಗಿಂತ ಮುಂದೆ!

ಭಾರತ ಸದ್ಯಕ್ಕೆ ಏಳು ಗುರಿಗಳೊಂದಿಗೆ ಈ ‘ನೆಟ್ ಝೀರೊ’ ಹಾದಿಯಲ್ಲಿ ಪಯಣ ಆರಂಭಿಸಿದೆ. ಕ್ರಮಿಸಿರುವುದು ಅತ್ಯಲ್ಪ. ಕುಂಟನ ಮೇಲೆ ಕುರುಡ ಕೂತಿದ್ದಾನೆ, ದಾರಿ ಸಾಗವುದೆಂತೊ ನೋಡಬೇಕು. ಆ ಏಳು ಗುರಿಗಳು ಯಾವುದೆಂದು ನೋಡಿಕೊಳ್ಳಿ (ಆಧಾರ: PIB Release ID: 1945472). ಮುಂದಿನ ದಿನಗಳಲ್ಲಿ ಅದಕ್ಕೆ ಸಂಬಂಧಿಸಿದ ಬೆಳವಣಿಗೆಗಳ ಮೇಲೆ ಕಣ್ಣಿಟ್ಟುಕೊಳ್ಳಿ:

1. ಕಾರ್ಬನ್ ಅಂಶ ಕಡಿಮೆ ಹೊರಸೂಸುವ ಮತ್ತು ಅಭಿವೃದ್ಧಿಗೆ ಪೂರಕವಾಗಿರುವ ವಿದ್ಯುತ್ ವ್ಯವಸ್ಥೆ.

2. ಸಂಯೋಜಿತ, ಪರಿಣಾಮಕಾರಿ, ಒಳಗೊಳ್ಳುವ ಸಾರಿಗೆ ವ್ಯವಸ್ಥೆ.

3. ಸುಸ್ಥಿರ, ಇಂಧನ ಸ್ನೇಹಿ ನಗರ-ಕಟ್ಟಡ ವಿನ್ಯಾಸಕ್ಕೆ ಪ್ರೋತ್ಸಾಹ.

4. ಕಡಿಮೆ ಮಾಲಿನ್ಯದ ಉದ್ಯಮಗಳಿಗೆ ಪ್ರೋತ್ಸಾಹ; ವಿಕಾಸಕ್ಕೂ ಮಾಲಿನ್ಯಕ್ಕೂ ಇರುವ ಸಂಬಂಧ ಕಳಚುವುದು.

5. ಕಾರ್ಬನ್ ಡೈಆಕ್ಸೈಡ್ ತೆಗೆದುಹಾಕಬಲ್ಲ ತಂತ್ರಜ್ಞಾನ ಅಭಿವೃದ್ಧಿ.

6. ಸಾಮಾಜಿಕ-ಆರ್ಥಿಕ ಪರಿಗಣನೆಗಳನ್ನು ಗಮನದಲ್ಲಿರಿಸಿಕೊಂಡು ಅರಣ್ಯೀಕರಣ.

7. ಕಡಿಮೆ ಕಾರ್ಬನ್ ಸಹಿತ ಅಭಿ ವೃದ್ಧಿಗೆ ಆರ್ಥಿಕ ಆವಶ್ಯಕತೆಗಳ ಪೂರೈಕೆ.

Writer - ವಾರ್ತಾಭಾರತಿ

contributor

Editor - Safwan

contributor

Byline - ರಾಜಾರಾಂ ತಲ್ಲೂರು

contributor

Similar News