ಗಾಂಧೀಜಿಯ ಗ್ರಾಮಾಂತರ ನೆಲೆ
‘ಫೀನಿಕ್ಸ್’ ಗಾಂಧಿಯವರು ಸ್ಥಾಪಿಸಿದ ಐದು ಅಂತಹ ನೆಲೆಗಳಲ್ಲಿ ಮೊದಲನೆಯದು. ದಕ್ಷಿಣ ಆಫ್ರಿಕಾದ ಒಳನಾಡಿನಲ್ಲಿಯ ಟಾಲ್‌ಸ್ಟಾಯ್ ಫಾರ್ಮ್ ಮತ್ತು ಭಾರತದಲ್ಲಿ ಕೊಚ್ರಾಬ್, ಸಬರಮತಿ ಮತ್ತು ಸೇವಾಗ್ರಾಮ ಆಶ್ರಮಗಳು ನಂತರದವಾಗಿವೆ. ಅಂತರ್ ಧರ್ಮೀಯ, ಅಂತರ್ ಜನಾಂಗೀಯ, ಅಂತರ್ ಜಾತೀಯ ಜೀವನದಲ್ಲಿ ಪ್ರಯೋಗವಾಗಿ, ದೈಹಿಕ ಶ್ರಮ ಮಾನಸಿಕ ಶ್ರಮದಷ್ಟೇ ಮಹತ್ವದ್ದು ಮತ್ತು ಮೌಲ್ಯಯುತವಾಗಿದೆ ಎಂದು ಮಾದರಿಯೊಂದನ್ನು ಫೀನಿಕ್ಸ್ ರೂಪಿಸಿತ್ತು. ಫೀನಿಕ್ಸ್‌ನಲ್ಲಿ ಗಾಂಧೀಜಿ ತಮ್ಮ ಮೊದಲ ಪತ್ರಿಕೆ ‘ಇಂಡಿಯನ್ ಒಪಿನಿಯನ್’ ಅನ್ನು ಮುದ್ರಿಸಿ ಪ್ರಕಟಿಸಿದರು. ಭಾರತದಲ್ಲಿ ಆನಂತರ ಅವರು ಕೈಗೆತ್ತಿಕೊಂಡಿದ್ದ ಪತ್ರಿಕೋದ್ಯಮಕ್ಕೆ ಅದು ಮುಂಚೂಣಿಯಲ್ಲಿತ್ತು.
1904ರ ನವೆಂಬರ್‌ನಲ್ಲಿ ಮೋಹನ್ ದಾಸ್ ಕರಮಚಂದ್ ಗಾಂಧಿ ದಕ್ಷಿಣ ಆಫ್ರಿಕಾದ ಡರ್ಬನ್ ಬಂದರಿನಿಂದ ಹದಿನಾಲ್ಕು ಮೈಲುಗಳಷ್ಟು ದೂರದಲ್ಲಿ ದೊಡ್ಡ ತೋಟ ಖರೀದಿಸಿದರು. ಅದಕ್ಕೂ ಮೊದಲು ಗಾಂಧೀಜಿ ತಮ್ಮ ಜೀವನದುದ್ದಕ್ಕೂ ನಗರ ಪ್ರದೇಶಗಳಲ್ಲಿ-ಪೋರಬಂದರ್ ಮತ್ತು ರಾಜ್‌ಕೋಟ್‌ನಂತಹ ಸಣ್ಣ ಪಟ್ಟಣಗಳಲ್ಲಿ, ಡರ್ಬನ್ ಮತ್ತು ಜೋಹಾನ್ಸ್‌ಬರ್ಗ್‌ನಂತಹ ದೊಡ್ಡ ಪಟ್ಟಣಗಳಲ್ಲಿ, ಲಂಡನ್ ಮತ್ತು ಮುಂಬೈಯಂತಹ ಮಹಾ ನಗರಗಳಲ್ಲಿ- ವಾಸಿಸುತ್ತಿದ್ದರು. ಆವರೆಗಿನ ಅವರ ಕೆಲಸಗಳು ಮಾನಸಿಕ ಶ್ರಮಕ್ಕೆ ಸೀಮಿತವಾಗಿತ್ತು; ಯೋಚಿಸುವುದು ಮತ್ತು ಬರೆಯುವುದು ಮತ್ತು ನ್ಯಾಯಾಲಯದಲ್ಲಿ ತನ್ನ ಕಕ್ಷಿದಾರರ ಪರವಾಗಿ ಮಾತನಾಡುವುದು. ಅವರ ಸ್ನೇಹಿತ ಹೆನ್ರಿ ಪೋಲಾಕ್ ಉಡುಗೊರೆಯಾಗಿ ನೀಡಿದ್ದ ಜಾನ್ ರಸ್ಕಿನ್ ಅವರ ‘ಅನ್ ಟು ದಿಸ್ ಲಾಸ್ಟ್’ ಪುಸ್ತಕದಿಂದ ಸ್ಫೂರ್ತಿ ಪಡೆದ ಗಾಂಧೀಜಿ, ಭೂಮಿಯಲ್ಲಿ ತಮ್ಮ ಕೈಗಳಿಂದ ಕೆಲಸ ಮಾಡುತ್ತಾ ಸ್ವಲ್ಪ ಸಮಯವನ್ನಾದರೂ ಕಳೆಯಲು ನಿರ್ಧರಿಸಿದರು. ಅಲ್ಲದೆ, ದಕ್ಷಿಣ ಆಫ್ರಿಕಾದಲ್ಲಿನ ಭಾರತೀಯ ಸಮುದಾಯದ ಭರವಸೆ ಮತ್ತು ಭಯವನ್ನು ವಿವರಿಸಲು ‘ಇಂಡಿಯನ್ ಒಪಿನಿಯನ್’ ಎಂಬ ಬಹುಭಾಷಾ ವೃತ್ತಪತ್ರಿಕೆಯನ್ನು ಆರಂಭಿಸಿದರು.
ಗಾಂಧಿ ಖರೀದಿಸಿದ ಆಸ್ತಿಗೆ ‘ಫೀನಿಕ್ಸ್’ ಫಾರ್ಮ್ ಎಂದು, ಆ ಸಮಯದಲ್ಲಿ ಅಲ್ಲಿನ ಹತ್ತಿರದ ರೈಲು ನಿಲ್ದಾಣಕ್ಕೆ ಇದ್ದ ಹೆಸರನ್ನೇ ಇಡಲಾಯಿತು. ಫೀನಿಕ್ಸ್ ಸ್ಥಾಪನೆಯ 120ನೇ ವಾರ್ಷಿಕೋತ್ಸವದ ವೇಳೆ, ದಕ್ಷಿಣ ಆಫ್ರಿಕಾದ ವಿದ್ವಾಂಸರಾದ ಉಮಾ ಧುಪೇಲಿಯಾ-ಮೆಸ್ತ್ರಿ ಅವರು ಅದರ ಹುಟ್ಟಿನಿಂದ ವರ್ತಮಾನದವರೆಗಿನ ಇತಿಹಾಸವನ್ನು ಪ್ರಕಟಿಸಿದ್ದಾರೆ. ಗಾಂಧೀಜಿ ಇನ್ನೂ ದಕ್ಷಿಣ ಆಫ್ರಿಕಾದಲ್ಲಿದ್ದಾಗಿನ ಫೀನಿಕ್ಸ್‌ನ ಮೊದಲ ದಶಕದ ವಿವರಗಳೊಂದಿಗೆ ಪುಸ್ತಕ ಪ್ರಾರಂಭವಾಗುತ್ತದೆ. ಅದರಲ್ಲಿನ ಒಂಭತ್ತು ವಿಭಾಗಗಳು ಗಾಂಧಿಯವರು ಭಾರತದಿಂದ ನಿರ್ಗಮಿಸಿದ ನಂತರ ಶತಮಾನದಲ್ಲಿ ಫೀನಿಕ್ಸ್‌ನ ನಂತರದ ಇತಿಹಾಸವನ್ನು ನಿರೂಪಿಸುವ ಪತ್ರಗಳು ಮತ್ತು ಟಿಪ್ಪಣಿಗಳನ್ನು ಒಳಗೊಂಡಿವೆ. ವರ್ತಮಾನದಲ್ಲಿನ ಫೀನಿಕ್ಸ್ ಕುರಿತ ಹಿನ್ನುಡಿಯೊಂದಿಗೆ ಪುಸ್ತಕ ಕೊನೆಗೊಳ್ಳುತ್ತದೆ.
ಪುಸ್ತಕದ ಆರಂಭಿಕ ಭಾಗಗಳು ಜೋಹಾನ್ಸ್‌ಬರ್ಗ್‌ನ ಸಸ್ಯಾಹಾರಿ ರೆಸ್ಟೋರೆಂಟ್‌ನಲ್ಲಿ ಗಾಂಧಿಯನ್ನು ಭೇಟಿಯಾದ, ಅವರೊಂದಿಗೆ ಭಿನ್ನಮತ ಹೊಂದಿದ್ದ ಇಂಗ್ಲಿಷ್ ವ್ಯಕ್ತಿ ಆಲ್ಬರ್ಟ್ ವೆಸ್ಟ್ ಕುರಿತು ಸರಿಯಾದ ರೀತಿಯಲ್ಲೇ ಗಮನ ಕೊಡುತ್ತದೆ. ‘ಇಂಡಿಯನ್ ಒಪಿನಿಯನ್’ ಅನ್ನು ನಡೆಸುವಲ್ಲಿ ಮತ್ತು ವಸಾಹತುವನ್ನು ನಿಜವಾದ, ಜೀವಂತ ಸಮುದಾಯವಾಗಿ ಮಾಡುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಫೀನಿಕ್ಸ್‌ನಲ್ಲಿ ಗಾಂಧೀಜಿ ಪರಿಚಯಿಸಿದ್ದ ದೈನಂದಿನ ಅಂತರ್ ಧರ್ಮೀಯ ಪ್ರಾರ್ಥನೆಗಳ ಬಗ್ಗೆ ವೆಸ್ಟ್ ಹೇಳಿರುವುದು ಹೀಗೆ: ‘ಹಿಂದೂಗಳು, ಮುಸ್ಲಿಮರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರು ಸ್ತೋತ್ರಗಳನ್ನು ಹಾಡಿದರು ಮತ್ತು ವಿವಿಧ ಭಾಷೆಗಳಲ್ಲಿ ವಿವಿಧ ಗ್ರಂಥಗಳನ್ನು ಓದಿದರು. ಇದು ನನ್ನ ಮನಸ್ಸಿನಲ್ಲಿ, ಸಾರ್ವತ್ರಿಕ ಚರ್ಚ್ ಸೇವೆಯ ಒಂದು ಅನನ್ಯ ಉದಾಹರಣೆಯಾಗಿದೆ. ಅಲ್ಲಿ ಯಾವುದೇ ನಿರ್ದಿಷ್ಟ ಧರ್ಮವನ್ನು ಉನ್ನತ ಸ್ಥಾನದಲ್ಲಿ ಇರಿಸಲಾಗಿಲ್ಲ ಮತ್ತು ಸತ್ಯ ಮತ್ತು ಪ್ರೀತಿಯನ್ನು ದೇವರ ಸಾರ್ವತ್ರಿಕ ಗುಣಲಕ್ಷಣಗಳು ಎಂದು ಒಪ್ಪಿಕೊಳ್ಳಲಾಗಿದೆ’.
1914ರಲ್ಲಿ ಗಾಂಧಿ ಅಲ್ಲಿಂದ ನಿರ್ಗಮಿಸಿದ ನಂತರ, ಫೀನಿಕ್ಸ್ ಅನ್ನು ಜೀವಂತವಾಗಿರಿಸಲು ವೆಸ್ಟ್ ಹೆಣಗಾಡಿದರು. 1917ರಲ್ಲಿ ಅದರ ಪುನಶ್ಚೇತನಕ್ಕೆ ಸಹಾಯ ಮಾಡಲು ಗಾಂಧೀಜಿ ತಮ್ಮ ಎರಡನೇ ಮಗ ಮಣಿಲಾಲ್ ಅವರನ್ನು ದಕ್ಷಿಣ ಆಫ್ರಿಕಾಕ್ಕೆ ಕಳುಹಿಸಿದರು. ಭಾರತದಲ್ಲಿ ಗಾಂಧೀಜಿ ನಡೆಸುತ್ತಿದ್ದ ಆಶ್ರಮದಲ್ಲಿ ಅನಿಶ್ಚಿತ ನಿರೀಕ್ಷೆಗಳಿಗೆ ಹೋಲಿಸಿದರೆ ಜೀವನದಲ್ಲಿ ಒಂದು ಉದ್ದೇಶವನ್ನು ಕಂಡುಕೊಳ್ಳಲು ಫೀನಿಕ್ಸ್ ಮಣಿಲಾಲ್‌ಗೆ ಒಂದು ಅವಕಾಶವನ್ನು ಒದಗಿಸಿತ್ತು ಎಂದು ಧುಪೇಲಿಯಾ-ಮೆಸ್ತ್ರಿ ಗಮನಿಸುತ್ತಾರೆ. 1919ರ ಡಿಸೆಂಬರ್‌ನಲ್ಲಿ ಮಣಿಲಾಲ್ ತನ್ನ ತಂದೆಗೆ ಬರೆದರು: ‘ಈ ಕ್ಷಣದಲ್ಲಿ ಭಾರತಕ್ಕೆ ಬರಲು ನನಗೆ ಇಷ್ಟವಿಲ್ಲ. ನಾನು ಹೆಚ್ಚು ಮನಶ್ಶಾಂತಿಯಿಂದ ಇಲ್ಲಿ ಕೆಲಸ ಮಾಡಬಹುದು ಮತ್ತು ಬದುಕಬಹುದು. ಆದ್ದರಿಂದ ನಾನು ಇಲ್ಲಿಯೇ ಇರಲು ಬಯಸುತ್ತೇನೆ ಮತ್ತು ನಾನು ‘ಇಂಡಿಯನ್ ಒಪಿನಿಯನ್’ ಕೆಲಸವನ್ನು ಮತ್ತು ಅಧ್ಯಯನವನ್ನು ನನ್ನಿಂದ ಸಾಧ್ಯವಾದಷ್ಟು ಮಾಡಲು ಬಯಸುತ್ತೇನೆ. ಆದರೆ ನಾನು ಭಾರತಕ್ಕೆ ಬರಬೇಕೆಂದು ನೀವು ಬಯಸಿದರೆ ಬರಲು ನಾನು ಸಿದ್ಧನಿದ್ದೇನೆ’.
ತೋಟವನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಂಡ ನಂತರ ಮಣಿಲಾಲ್ ಗಾಂಧಿ ಕಬ್ಬು ಮತ್ತು ಜೋಳ ಬೆಳೆದು ಮಾರುವ ಮೂಲಕ ಅದರ ವೆಚ್ಚ ನಿಭಾಯಿಸತೊಡಗಿದರು. 1927ರಲ್ಲಿ ಮಣಿಲಾಲ್ ಮಹಾರಾಷ್ಟ್ರದ ಅಕೋಲಾದ ಸುಶೀಲಾ ಮಶ್ರುವಾಲಾ ಅವರನ್ನು ವಿವಾಹವಾದರು. ಸುಶೀಲಾ ಅವರು ತೋಟ ಮತ್ತು ಪತ್ರಿಕೆಯನ್ನು ನಿರ್ವಹಿಸುವಲ್ಲಿ ಮತ್ತು ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸುವುದರೊಂದಿಗೆ ಅವರಿಬ್ಬರದು ಅನುಕರಣೀಯ ದಾಂಪತ್ಯವಾಗಿತ್ತು. ಉಮಾ ಧುಪೇಲಿಯಾ-ಮೆಸ್ತ್ರಿ ಬರೆದಂತೆ, ಪತ್ನಿಯಾಗಿ, ತಾಯಿಯಾಗಿ ಮತ್ತು ಪತ್ರಿಕೆಯ ಕೆಲಸಗಾರಳಾಗಿ ಸುಶೀಲಾ ಚಾಣಾಕ್ಷತನದಿಂದ ತನ್ನ ಪಾತ್ರಗಳನ್ನು ಸಮತೂಗಿಸಿಕೊಂಡು ಸಾಗಿದ್ದರು. ಧುಪೇಲಿಯಾ-ಮೆಸ್ತ್ರಿ ಸ್ವತಃ ಮಣಿಲಾಲ್ ಮತ್ತು ಸುಶೀಲಾ ಗಾಂಧಿಯವರ ಮೊಮ್ಮಗಳು. ಆದರೆ ಇಲ್ಲಿ, ಪುಸ್ತಕ ರಚನೆಯ ಸಂದರ್ಭದಲ್ಲಿ ತನ್ನ ವ್ಯಾಖ್ಯಾನಗಳು ಮತ್ತು ತೀರ್ಪುಗಳನ್ನು ಕುಟುಂಬದ ನಿಷ್ಠೆಯದ್ದಾಗದಂತೆ ನೋಡಿಕೊಂಡಿದ್ದಾರೆ. ಪೂರ್ತಿ ಬೇರೆಯವರಾಗಿ ನಿಂತು, ವೃತ್ತಿಪರ ಇತಿಹಾಸಕಾರ್ತಿಯ ವಿವೇಚನೆಯಿಂದ ನಿರ್ವಹಿಸಿದ್ದಾರೆ.
ಗಾಂಧಿಯವರ ದಿನಗಳಲ್ಲಿ ಇದ್ದಂತೆ, ಅವರ ಮಗನ ಉಸ್ತುವಾರಿಯ ಸಮಯದಲ್ಲಿ ‘ಇಂಡಿಯನ್ ಒಪಿನಿಯನ್’ ದಕ್ಷಿಣ ಆಫ್ರಿಕಾದ ವಿದ್ಯಮಾನಗಳ ವರದಿಗಳನ್ನು ಭಾರತದಲ್ಲಿನ ಪ್ರಮುಖ ಬೆಳವಣಿಗೆಗಳ ಸುದ್ದಿಗಳೊಂದಿಗೆ ಜೋಡಿಸಿತು. ಹೆಚ್ಚುತ್ತಿರುವ ವೆಚ್ಚಗಳು ಮತ್ತು ನಿಶ್ಚಲವಾಗಿರುವ ಚಂದಾದಾರರ ಕಾರಣದಿಂದಾಗಿ ನಿಯತಕಾಲಿಕವನ್ನು ನಿರ್ವಹಿಸುವುದು ಯಾವಾಗಲೂ ಕಷ್ಟದ್ದೇ ಕೆಲಸವಾಗಿತ್ತು. 1938ರ ಜುಲೈನಲ್ಲಿ ಮಣಿಲಾಲ್ ತನ್ನ ಸ್ನೇಹಿತ ಬಾಬರ್ ಚಾವ್ಡಾ ಅವರಿಗೆ ಪತ್ರ ಬರೆದರು. ಹಣದ ಕೊರತೆ ಪೂರೈಸಲು ಮತ್ತು ‘ಇಂಡಿಯನ್ ಒಪಿನಿಯನ್’ ಮತ್ತು ಫೀನಿಕ್ಸ್ ಅನ್ನು ಜೀವಂತವಾಗಿಡಲು ತಲಾ 25 ಪೌಂಡ್‌ಗಳ ಕೊಡುಗೆ ನೀಡುವಂತೆ ತಾನು ದಕ್ಷಿಣ ಆಫ್ರಿಕಾದ ಭಾರತೀಯ ಸಮುದಾಯದ ಇನ್ನೂರು ಮಂದಿಯ ಬಳಿ ಕೇಳಿರುವುದನ್ನು ಪತ್ರದಲ್ಲಿ ಅವರು ವಿವರಿಸಿದ್ದರು. ಅದನ್ನು ಅವರು ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿಯ ಏಕೈಕ ಸ್ಮಾರಕ ಎಂದು ಬಣ್ಣಿಸಿದ್ದರು. ಈ ಸಹಾಯ ಸಿಗದಿದ್ದರೆ, ‘ಇಂಡಿಯನ್ ಒಪಿನಿಯನ್’ ನಿಯತಕಾಲಿಕೆಯ ಅಗತ್ಯವಿಲ್ಲ ಎಂದು ನಾವು ಅರ್ಥಮಾಡಿಕೊಳ್ಳಬೇಕು ಮತ್ತು ನಂತರ ನಾನು ಅದನ್ನು ಮುಚ್ಚಿ ಹಿಂದಿರುಗಬೇಕಾಗುತ್ತದೆ ಎಂದು ಹೇಳಿಕೊಂಡಿದ್ದರು.
1942ರ ಸೆಪ್ಟಂಬರ್‌ನಲ್ಲಿ ಮಣಿಲಾಲ್ ಅವರು ಕ್ವಿಟ್ ಇಂಡಿಯಾ ಚಳವಳಿ ಮತ್ತು ಬ್ರಿಟಿಷ್ ರಾಜ್ ಅದನ್ನು ನಿಗ್ರಹಿಸುವ ಬಗ್ಗೆ ವಿಶೇಷ ಸಂಚಿಕೆಯನ್ನು ಯೋಜಿಸಲು ಪ್ರಾರಂಭಿಸಿದರು. ಸೂಕ್ತವಾದ ಮುಖಪುಟ ಚಿತ್ರವನ್ನು ಬರೆಯುವ ಕಲಾವಿದನನ್ನು ಹುಡುಕಿಕೊಡಲು ಅವರು ಚಾವ್ಡಾ ಅವರನ್ನು ಕೇಳಿದರು. ಅವರು ನೀಡಿದ್ದ ಸಲಹೆ ಹೀಗಿತ್ತು: ‘ಹಿನ್ನೆಲೆಯಲ್ಲಿ ಭಾರತದ ನಕ್ಷೆ ಇರಬೇಕು ಮತ್ತು ಅದರ ಮೇಲೆ ಸರಪಳಿಯಿಂದ ಬಂಧಿಸಲ್ಪಟ್ಟಿರುವ ಭಾರತಮಾತೆಯ ಚಿತ್ರ ಇರಬೇಕು. ಬಲಭಾಗದ ಮೂಲೆಯಲ್ಲಿ ಬ್ರಿಟನ್‌ನ ನಕ್ಷೆ ಇರಬೇಕು. ಅದರ ಜ್ವಾಲೆಗಳು ಭಾರತವನ್ನು ಆಕ್ರಮಿಸುತ್ತಿರುವಂತೆ ತೋರಿಸಬೇಕು. ಅದರ ಮೇಲೆ ಸಾಮ್ರಾಜ್ಯಶಾಹಿ ಎಂದು ಬರೆಯಬೇಕು. ಆಕಾಶದಿಂದ ತಿಲಕ್, ದಾದಾಭಾಯಿ ನೌರೋಜಿ, ರವೀಂದ್ರನಾಥ ಟಾಗೋರ್, ಅಬ್ಬಾಸ್ ತ್ಯಾಬ್ಜಿ ಮತ್ತು ಮಹಾದೇವ್ ದೇಸಾಯಿ ಅವರು ಜೈಲು ಪಾಲಾಗುವ ದೇಶಭಕ್ತರ ಮೇಲೆ ಪುಷ್ಪವೃಷ್ಟಿ ಮಾಡಬೇಕು’.
1948ರಲ್ಲಿ ನ್ಯಾಷನಲ್ ಪಾರ್ಟಿ ದಕ್ಷಿಣ ಆಫ್ರಿಕಾದಲ್ಲಿ ಅಧಿಕಾರವನ್ನು ಗಳಿಸಿತು ಮತ್ತು ವರ್ಣಭೇದ ನೀತಿ ಎಂದು ಕರೆಯಲ್ಪಡುವ ಜನಾಂಗೀಯ ತಾರತಮ್ಯದ ನೀತಿಯನ್ನು ಆಕ್ರಮಣಕಾರಿ ರೀತಿಯಲ್ಲಿ ಪ್ರಚಾರ ಮಾಡಿತು. 1951ರ ಆಗಸ್ಟ್‌ನಲ್ಲಿ ಮಣಿಲಾಲ್ ಗಾಂಧಿಯವರು ಪ್ರಧಾನ ಮಂತ್ರಿ ಡಿ. ಎಫ್. ಮಲಾನ್ ಅವರಿಗೆ ಪತ್ರ ಬರೆದರು. ಯುರೋಪಿಯನ್ನರಲ್ಲದವರ ಮೇಲೆ ಪರಿಣಾಮ ಬೀರುವ ಸರಕಾರದ ಪ್ರತಿಯೊಂದು ಕ್ರಮ ಯುರೋಪಿಯನ್ ಅಲ್ಲದವರ ಮೇಲಿನ ದ್ವೇಷದ ಸಂಕೇತವಾಗಿ ಗೋಚರಿಸುತ್ತದೆ. ವರ್ಣಭೇದ ನೀತಿ ಮಾನವರ ಸಂಪೂರ್ಣ ಆರ್ಥಿಕ ಮತ್ತು ರಾಜಕೀಯ ಅಭಿವ್ಯಕ್ತಿಯ ಹಕ್ಕನ್ನು ಕಸಿದುಕೊಳ್ಳುವುದಲ್ಲದೆ, ಅವರ ವ್ಯಕ್ತಿತ್ವದ ಸಂಪೂರ್ಣ ಬೆಳವಣಿಗೆಯ ಹಕ್ಕನ್ನು ಮತ್ತು ಅವರ ಆಧ್ಯಾತ್ಮಿಕ ಅಸ್ತಿತ್ವವನ್ನು ನಿರಾಕರಿಸುತ್ತದೆ. ಆದ್ದರಿಂದ ದೇವರ ಬೋಧನೆಗಳ ಬೆಳಕಿನಲ್ಲಿ ನಿಮ್ಮ ಸರಕಾರದ ರಾಜಕೀಯವನ್ನು ಮರುಪರಿಶೀಲಿಸಿ ಎಂದು ಕೇಳಿಕೊಂಡಿದ್ದರು. ಎರಡು ವರ್ಷಗಳ ನಂತರ ಮಣಿಲಾಲ್ ಅವರನ್ನು ಪ್ರತಿಭಟನೆಯ ವೇಳೆ ಬಂಧಿಸಲಾಯಿತು. ಒಂದು ತಿಂಗಳಿಗಿಂತ ಹೆಚ್ಚು ಕಾಲ ಜೈಲಿನಲ್ಲಿ ಕಳೆದರು.
ಮಣಿಲಾಲ್ 1956ರಲ್ಲಿ ನಿಧನರಾದರು. ಸುಶೀಲಾ ಅವರು ಐದು ವರ್ಷಗಳ ಕಾಲ ‘ಇಂಡಿಯನ್ ಒಪಿನಿಯನ್’ ಸಂಪಾದಿಸುವುದನ್ನು ಮುಂದುವರಿಸಿದರು. ಅಂತಿಮವಾಗಿ 1961ರ ಆಗಸ್ಟ್‌ನಲ್ಲಿ ಅದನ್ನು ಮುಚ್ಚಲಾಯಿತು. ಫೀನಿಕ್ಸ್ ನಲ್ಲಿ ಅವರೊಂದಿಗೆ ಅವರ ಮಗಳು ಎಲಾ ಮತ್ತು ಅಳಿಯ ಮೇವಾ ಇದ್ದರು. ನಂತರದ ವರ್ಷಗಳಲ್ಲಿ ಅವರಿಬ್ಬರೂ ವರ್ಣಭೇದ ನೀತಿ ವಿರೋಧಿ ಹೋರಾಟದಲ್ಲಿ ಸಕ್ರಿಯರಾಗಿದ್ದರು ಮತ್ತು ಪರಿಣಾಮವಾಗಿ ಪೊಲೀಸರಿಂದ ನಿರಂತರವಾಗಿ ಕಿರುಕುಳಕ್ಕೆ ಒಳಗಾದರು.
ಮಣಿಲಾಲ್ ಮತ್ತು ಸುಶೀಲಾ ಅವರು ಬರೆದ ಪತ್ರಗಳು ದಕ್ಷಿಣ ಆಫ್ರಿಕಾದಲ್ಲಿ ಭಾರತೀಯ ವ್ಯವಹಾರಗಳಲ್ಲಿನ ಇತರ ಪ್ರಮುಖರ ಬಗ್ಗೆ ಆಸಕ್ತಿದಾಯಕ ವಿವರಗಳನ್ನು ಹೊಂದಿವೆ. ಉದಾಹರಣೆಗೆ ಹಿರಿಯ ಉದಾರವಾದಿ ರಾಜಕಾರಣಿ ವಿ.ಎಸ್. ಶ್ರೀನಿವಾಸ ಶಾಸ್ತ್ರಿ ಮತ್ತು ಉದಯೋನ್ಮುಖ ಯುವ ಕಮ್ಯುನಿಸ್ಟ್ ಡಾ. ಯೂಸುಫ್ ದಾದೂ. ಪತ್ರವ್ಯವಹಾರದಲ್ಲಿ ಭಾಗಿಯಾಗಿದ್ದ ಇನ್ನೊಬ್ಬ ಪ್ರಮುಖ ವ್ಯಕ್ತಿ, ಕಾದಂಬರಿಕಾರ ಅಲನ್ ಪ್ಯಾಟನ್ ತನ್ನ ಸ್ನೇಹಿತ ಮಣಿಲಾಲ್‌ನ ಮರಣದ ನಂತರ ಫೀನಿಕ್ಸ್ ಅನ್ನು ಮುಂದುವರಿಸುವಲ್ಲಿ ಸುಶೀಲಾಗೆ ನಿರ್ಣಾಯಕ ಸಹಾಯವನ್ನು ಒದಗಿಸಿದ್ದರು.
1985ರಲ್ಲಿ ಫೀನಿಕ್ಸ್ ಸುತ್ತಮುತ್ತಲಿನ ಪ್ರದೇಶ ಹಿಂಸಾಚಾರ ಪೀಡಿತವಾಯಿತು. ಪೊಲೀಸರ ಕೈಯಲ್ಲಿ ಸಂಭವಿಸಿದ ಕಪ್ಪು ಕಾರ್ಯಕರ್ತನ ಸಾವು ಕಿಡಿ ಹೊತ್ತಿಸಿತು. ಆ ಪ್ರದೇಶದ ನಿವಾಸಿಗಳು ಭಯದಿಂದ ಪಲಾಯನ ಮಾಡಲು ಪ್ರಾರಂಭಿಸಿದರು. ಒಂದು ವರದಿಯ ಪ್ರಕಾರ, ಗಾಂಧಿ ಮನೆಯ ಕಿಟಕಿಗಳನ್ನು ಒಡೆದು ಹಾಕಲಾಯಿತು ಮತ್ತು ಅವರ ಜೀವನದ ಸ್ಮರಣಾರ್ಥ ಛಾಯಾಚಿತ್ರಗಳು ಚೆಲ್ಲಾಪಿಲ್ಲಿಯಾಗಿ ಹೊರಗೆ ಬಿದ್ದಿದ್ದವು. ಒಂದು ಕಾಲದಲ್ಲಿ ಅಭಿವೃದ್ಧಿ ಹೊಂದುತ್ತಿದ್ದ ವಸಾಹತುಗಳನ್ನು ಕೈಬಿಡಲಾಯಿತು. ಭೂಮಿಯನ್ನು ಒತ್ತುವರಿದಾರರು ಸ್ವಾಧೀನಪಡಿಸಿಕೊಂಡರು.
ಫೀನಿಕ್ಸ್ ನಾಶದಿಂದ ಸುಶೀಲಾ ಗಾಂಧಿ ಆಘಾತಗೊಂಡರು. ಅವರು 1988ರಲ್ಲಿ ನಿಧನರಾದರು. ಇಪ್ಪತ್ತೊಂದು ವರ್ಷಗಳ ನಂತರ, ದಕ್ಷಿಣ ಆಫ್ರಿಕಾದ ಮೊದಲ ಬಹು ಜನಾಂಗೀಯ ಸಂಸತ್ತಿನಲ್ಲಿ ಸಂಸದರಾಗಿದ್ದ ಅವರ ಮಗಳು ಎಲಾ ಗಾಂಧಿ ಫೀನಿಕ್ಸ್ ಫಾರ್ಮ್‌ನ ಮೂಲ ನೂರು ಎಕರೆಯಲ್ಲಿ ಉಳಿದಿದ್ದ ಮೂರು ಎಕರೆ ಜಮೀನಿಗೆ ನನ್ನನ್ನು ಕರೆದುಕೊಂಡು ಹೋಗಿದ್ದರು. ಅಲ್ಲಿ ಗಾಂಧಿಯವರ ಸಾಧಾರಣ, ಆದರೆ ಸುಸ್ಥಿತಿಯಲ್ಲಿರುವ ವಸ್ತುಸಂಗ್ರಹಾಲಯವಿತ್ತು. ಗಾತ್ರದಲ್ಲಿ ಕುಗ್ಗಿದ್ದರೂ, ಸಂದರ್ಶಕರನ್ನು ಆಕರ್ಷಿಸುವ ಶಕ್ತಿ ಅದಕ್ಕಿತ್ತು.
‘ಫೀನಿಕ್ಸ್’ ಗಾಂಧಿಯವರು ಸ್ಥಾಪಿಸಿದ ಐದು ಅಂತಹ ನೆಲೆಗಳಲ್ಲಿ ಮೊದಲನೆಯದು. ದಕ್ಷಿಣ ಆಫ್ರಿಕಾದ ಒಳನಾಡಿನಲ್ಲಿಯ ಟಾಲ್‌ಸ್ಟಾಯ್ ಫಾರ್ಮ್ ಮತ್ತು ಭಾರತದಲ್ಲಿ ಕೊಚ್ರಾಬ್, ಸಬರಮತಿ ಮತ್ತು ಸೇವಾಗ್ರಾಮ ಆಶ್ರಮಗಳು ನಂತರದವಾಗಿವೆ. ಅಂತರ್ ಧರ್ಮೀಯ, ಅಂತರ್ ಜನಾಂಗೀಯ, ಅಂತರ್ ಜಾತೀಯ ಜೀವನದಲ್ಲಿ ಪ್ರಯೋಗವಾಗಿ, ದೈಹಿಕ ಶ್ರಮ ಮಾನಸಿಕ ಶ್ರಮದಷ್ಟೇ ಮಹತ್ವದ್ದು ಮತ್ತು ಮೌಲ್ಯಯುತವಾಗಿದೆ ಎಂದು ಮಾದರಿಯೊಂದನ್ನು ಫೀನಿಕ್ಸ್ ರೂಪಿಸಿತ್ತು. ಫೀನಿಕ್ಸ್‌ನಲ್ಲಿ ಗಾಂಧೀಜಿ ತಮ್ಮ ಮೊದಲ ಪತ್ರಿಕೆ ‘ಇಂಡಿಯನ್ ಒಪಿನಿಯನ್’ ಅನ್ನು ಮುದ್ರಿಸಿ ಪ್ರಕಟಿಸಿದರು. ಭಾರತದಲ್ಲಿ ಆನಂತರ ಅವರು ಕೈಗೆತ್ತಿಕೊಂಡಿದ್ದ ಪತ್ರಿಕೋದ್ಯಮಕ್ಕೆ ಅದು ಮುಂಚೂಣಿಯಲ್ಲಿತ್ತು. ಫೀನಿಕ್ಸ್ ಇಲ್ಲದಿದ್ದರೆ ಗಾಂಧಿ ಇರುತ್ತಿರಲಿಲ್ಲ. ಅದರ ಶ್ರೀಮಂತ ಮತ್ತು ಪ್ರತಿಧ್ವನಿಸುವ ಇತಿಹಾಸವನ್ನು ಉಮಾ ಧುಪೇಲಿಯಾ-ಮೆಸ್ತ್ರಿ ತಮ್ಮ ಪುಸ್ತಕದಲ್ಲಿ ಮತ್ತೆ ನಮ್ಮ ಮನಸ್ಸಿಗೆ ತರುತ್ತಾರೆ.