ಲಾಹೋರ್: ಅಂದು ಮತ್ತು ಇಂದು
ಲೇಖಕರು ಲಾಹೋರ್ನಲ್ಲಿ ಬೆಳೆದವರು. ಮೂವತ್ತು ವರ್ಷಗಳ ಹಿಂದೆ ವಿದೇಶದಲ್ಲಿ ಅಧ್ಯಯನ ಮಾಡಲು ಮತ್ತು ಕೆಲಸ ಮಾಡಲು ಲಾಹೋರ್ ಅನ್ನು ಬಿಟ್ಟಿದ್ದವರು. ಆದರೂ, ಅವರು ಆಗಾಗ ತಮ್ಮ ಊರಿಗೆ ಹಿಂದಿರುಗುತ್ತಾರೆ ಮತ್ತು ಈ ಪುಸ್ತಕದಲ್ಲಿ ಈ ನಗರದ ಇತಿಹಾಸವನ್ನು ಆನುವಂಶಿಕವಾಗಿ ಪಡೆದ ದೇಶಕ್ಕೆ ಒತ್ತೆಯಾಗಿರಿಸದೆ ಹೇಳುವುದು ಅವರ ಉದ್ದೇಶವಾಗಿದೆ. ಈ ಇತಿಹಾಸವನ್ನು ನಿರೂಪಿಸುವಾಗ ಅವರು ವೈಯಕ್ತಿಕ ನೆನಪುಗಳನ್ನು ಪರ್ಷಿಯನ್, ಉರ್ದು, ಪಂಜಾಬಿ ಮತ್ತು ಅರೇಬಿಕ್ ಭಾಷೆಗಳಲ್ಲಿ ಪಠ್ಯಗಳ ಪಾಂಡಿತ್ಯಪೂರ್ಣ ಉತ್ಖನನಗಳೊಂದಿಗೆ ಜೋಡಿಸುತ್ತಾರೆ.;

ಹಲವು ವರ್ಷಗಳ ಹಿಂದೆ ಕ್ರೀಡೆಯ ಸಾಮಾಜಿಕ ಇತಿಹಾಸದ ಕುರಿತು ಶೋಧನೆ ಮಾಡುತ್ತಿದ್ಧಾಗ, 1955ರಲ್ಲಿ ಲಾಹೋರ್ನಲ್ಲಿ ನಡೆದ ಟೆಸ್ಟ್ ಪಂದ್ಯದ ಕೆಲವು ವರದಿಗಳನ್ನು ನಾನು ನೋಡಿದೆ. ಕ್ರಿಕೆಟ್ ಮೊದಲೇ ನೀರಸವಾಗಿತ್ತು. ಭಾರತ ಮತ್ತು ಪಾಕಿಸ್ತಾನ ನಡುವಿನ ಐದು ಪಂದ್ಯಗಳ ಸರಣಿಯಲ್ಲಿ ಐದು ಡ್ರಾಗಳಲ್ಲಿ ಒಂದು ಓವರ್ಗೆ ಎರಡಕ್ಕಿಂತ ಕಡಿಮೆ ರನ್ಗಳನ್ನು ಗಳಿಸಲಾಗಿತ್ತು. ಹೆಚ್ಚು ಆಸಕ್ತಿದಾಯಕ ವಿಷಯವೆಂದರೆ, ಸಾಮಾಜಿಕ ಸಂದರ್ಭ. 1947ರ ನಂತರ ಲಾಹೋರ್ ನಗರ ತನ್ನ ಬಹು ಸಾಂಸ್ಕೃತಿಕ ಗತ ಕಾಲವನ್ನು ಮರಳಿ ಪಡೆಯಲು ಅವಕಾಶವಾದದ್ದು ಅದೇ ಮೊದಲು. ಟೆಸ್ಟ್ಗಾಗಿ ಹತ್ತು ಸಾವಿರ ಟಿಕೆಟ್ಗಳನ್ನು ಪ್ರತಿದಿನ ಬೆಳಗ್ಗೆ ವಾಘಾ ಗಡಿಯನ್ನು ದಾಟಿ ಅದೇ ರಾತ್ರಿ ಅಮೃತಸರಕ್ಕೆ ಹಿಂದಿರುಗುವ ಭಾರತೀಯ ನಾಗರಿಕರಿಗಾಗಿ ಮೀಸಲಿಡಲಾಗಿತ್ತು. ವಿಭಜನೆಯ ನಂತರದ ಅತಿದೊಡ್ಡ ಸಾಮೂಹಿಕ ವಲಸೆ ಎಂದೊಬ್ಬರು ಅದನ್ನು ಕರೆದಿದ್ದರು.
ಆ ಟೆಸ್ಟ್ ಪಂದ್ಯ 1955ರ ಜನವರಿ 29ರಂದು ಪ್ರಾರಂಭವಾಯಿತು. ಮರುದಿನ, ಡಾನ್ ಪತ್ರಿಕೆ ‘ಮಹಿಳೆಯರು, ಸಿಖ್ಖರು, ಹಿಂದೂಗಳು ಮತ್ತು ಸ್ಥಳೀಯರು ಎರಡರಿಂದ ಮೂರು ಫರ್ಲಾಂಗ್ಗಳಷ್ಟು ಉದ್ದವಿರುವ ಸರತಿಯಲ್ಲಿ ತಾಳ್ಮೆಯಿಂದ ಮತ್ತು ಸಭ್ಯವಾಗಿ ಕಾಯುತ್ತಿದ್ದರು. ಬೆಳಗಿನ ಜಾವದ ಗದ್ದಲ ಶಾಲಿಮಾರ್ ಮೇಳವನ್ನು ನೆನಪಿಸುತ್ತಿತ್ತು. ಆದರೆ ಜನಸಂದಣಿಯ ಸಂಯೋಜನೆ ಒಂದು ಕ್ರಮದಲ್ಲಿತ್ತು’ ಎಂದು ಬರೆದಿತ್ತು.
‘ಸಿಖ್ಖರು ವಿಶೇಷವಾಗಿ ಎದ್ದು ಕಾಣುತ್ತಿದ್ದರು ಮತ್ತು ಅವರು ಹೋದಲ್ಲೆಲ್ಲಾ ಆಕರ್ಷಣೆಯ ಕೇಂದ್ರವಾಗಿದ್ದರು. ಅವರು ಬಯಸಿಯೇ ಇರದ ಶುಭಾಶಯಗಳು ಮತ್ತು ಅನಿರೀಕ್ಷಿತ ಸ್ವಾಗತ ಅವರಿಗೆ ಸಿಕ್ಕಿತ್ತು. ಅವರಲ್ಲಿ ಕೆಲವರು ನಗರದಲ್ಲಿ ತಮ್ಮ ಹಳೆಯ ಸ್ನೇಹಿತರನ್ನು ಅಪ್ಪಿಕೊಂಡಾಗ ಭಾವುಕರಾಗಿ ಅಳುತ್ತಿದ್ದರು’ ಎಂದು ಆ ವರದಿ ವಿವರಿಸಿತ್ತು.
ಡಾನ್ ಪ್ರಕಟಿಸಿದ ವರದಿ ಅನಾಮಧೇಯವಾಗಿತ್ತು. ಆದರೆ ಬರಹಗಾರ ಸ್ಪಷ್ಟವಾಗಿ ಲಾಹೋರ್ನಲ್ಲಿರುವ ಪಾಕಿಸ್ತಾನಿ ಮುಸ್ಲಿಮ್ ಆಗಿದ್ದರು. ದೂರದ ಮದ್ರಾಸ್ನಿಂದ ಬಂದ ಹಿಂದೂ ಪತ್ರಕರ್ತರೊಬ್ಬರು ಅವರ ಭಾವನೆಗಳನ್ನು ಪ್ರತಿಧ್ವನಿಸಿದ್ದರು. ಅವರು ವಿಭಜನೆಯ ಭೀಕರತೆಯಿಂದ ಸ್ವತಃ ಪ್ರಭಾವಿತರಾಗ ಲಿಲ್ಲ. ಅವರು, ‘ಟೆಸ್ಟ್ ಪಂದ್ಯದ ದಿನಗಳಲ್ಲಿ ಪಾಕಿಸ್ತಾನಿಗಳು ಮತ್ತು ಭಾರತೀಯರ ನಡುವೆ ದೊಡ್ಡ ಭ್ರಾತೃತ್ವ ಎಲ್ಲೆಡೆ ಕಂಡುಬಂದಿತು’ ಎಂದು ಬರೆದಿದ್ದರು.
ಮನನ್ ಅಹ್ಮದ್ ಆಸಿಫ್ ಅವರ ಇತ್ತೀಚಿನ ಪುಸ್ತಕ, ‘ಡಿಸ್ರಪ್ಟೆಡ್ ಸಿಟಿ: ವಾಕಿಂಗ್ ದಿ ಪಾತ್ವೇಸ್ ಆಫ್ ಮೆಮೊರಿ ಆ್ಯಂಡ್ ಹಿಸ್ಟರಿ ಇನ್ ಲಾಹೋರ್’ ಅನ್ನು ಓದಿದಾಗ ನನಗೆ ಆ ವರದಿಗಳು ನೆನಪಾದವು. ಲೇಖಕರು ಲಾಹೋರ್ನಲ್ಲಿ ಬೆಳೆದವರು. ಮೂವತ್ತು ವರ್ಷಗಳ ಹಿಂದೆ ವಿದೇಶದಲ್ಲಿ ಅಧ್ಯಯನ ಮಾಡಲು ಮತ್ತು ಕೆಲಸ ಮಾಡಲು ಲಾಹೋರ್ ಅನ್ನು ಬಿಟ್ಟಿದ್ದವರು. ಆದರೂ, ಅವರು ಆಗಾಗ ತಮ್ಮ ಊರಿಗೆ ಹಿಂದಿರುಗುತ್ತಾರೆ ಮತ್ತು ಈ ಪುಸ್ತಕದಲ್ಲಿ ಈ ನಗರದ ಇತಿಹಾಸವನ್ನು ಆನುವಂಶಿಕವಾಗಿ ಪಡೆದ ದೇಶಕ್ಕೆ ಒತ್ತೆಯಾಗಿರಿಸದೆ ಹೇಳುವುದು ಅವರ ಉದ್ದೇಶವಾಗಿದೆ. ಈ ಇತಿಹಾಸವನ್ನು ನಿರೂಪಿಸುವಾಗ ಅವರು ವೈಯಕ್ತಿಕ ನೆನಪುಗಳನ್ನು ಪರ್ಷಿಯನ್, ಉರ್ದು, ಪಂಜಾಬಿ ಮತ್ತು ಅರೇಬಿಕ್ ಭಾಷೆಗಳಲ್ಲಿ ಪಠ್ಯಗಳ ಪಾಂಡಿತ್ಯಪೂರ್ಣ ಉತ್ಖನನಗಳೊಂದಿಗೆ ಜೋಡಿಸುತ್ತಾರೆ.
ನಿರೂಪಣೆಯ ಆರಂಭದಲ್ಲಿ ಆಸಿಫ್, ‘1947ರ ಪೂರ್ವದ ಲಾಹೋರ್ನ ವೈವಿಧ್ಯತೆ ಮತ್ತು ಬಹುಸಂಖ್ಯೆಯು ನಗರದ ಹಿಂದೂ ಮತ್ತು ಸಿಖ್ ನಿವಾಸಿಗಳ ಸಾಮೂಹಿಕ ವಲಸೆ ಮತ್ತು ಈಗ ಭಾರತಕ್ಕೆ ಸೇರಿರುವ ಪಂಜಾಬ್ನ ಕೆಲ ಭಾಗಗಳಿಂದ (ಮುಸ್ಲಿಮ್) ನಿರಾಶ್ರಿತರ ಒಳಹರಿವಿನೊಂದಿಗೆ ಕೊನೆಗೊಂಡಿತು’ ಎಂದು ಹೇಳುತ್ತಾರೆ. ‘ಆ ಅಡಚಣೆಯ ಕ್ಷಣದ ನಂತರ, ಅದು ತನ್ನದೇ ಆದ ಭೂತಕಾಲದಿಂದ ಹೊರ ಹಾಕಲ್ಪಟ್ಟ ನಗರವಾಯಿತು’ ಎಂದು ಅವರು ಬರೆಯುತ್ತಾರೆ.
ಆಸಿಫ್ ಅವರ ಪುಸ್ತಕದಲ್ಲಿ ಕ್ರಿಕೆಟ್ ಅಂಕಿಅಂಶಗಳು ಕೇವಲ ಕ್ಷಣಿಕ ಮತ್ತು 1955ರ ಲಾಹೋರ್ ಟೆಸ್ಟ್ ಬಗ್ಗೆ ಅಷ್ಟೇನೂ ಇಲ್ಲ. ಆದರೂ ಅವರ ಪುಸ್ತಕ ಆ ನಾಲ್ಕು ದಿನಗಳಲ್ಲಿ ಶಾಲಿಮಾರ್ ಮೇಳದಂತೆಯೇ ಇದ್ದ ಜನಸಮೂಹದ ಕುತೂಹಲಕಾರಿ ಉಲ್ಲೇಖದ ಸುಳಿವುಗಳನ್ನು ಒದಗಿಸುತ್ತದೆ. ಆದರೂ ಅದು ಉನ್ನತ ವರ್ಗದ ಜನಸಮೂಹವಾಗಿತ್ತು. ಮೇಳ ಚಿರಾಘನ್ ಎಂದೂ ಕರೆಯಲ್ಪಡುವ ಶಾಲಿಮಾರ್ ಮೇಳ ಒಂದು ಕಾಲದಲ್ಲಿ ಲಾಹೋರ್ನ ಪ್ರಮುಖ ಹಬ್ಬವಾಗಿತ್ತು. ಇದು 16ನೇ ಶತಮಾನದ ಸೂಫಿ ಸಂತ ಶಾ ಹುಸೈನ್ ಅವರ ಜೀವನ ಮತ್ತು ಪರಂಪರೆಯನ್ನು ಕುರಿತ ಆಚರಣೆ. ಆಸಿಫ್ ತಮ್ಮ ಪುಸ್ತಕದಲ್ಲಿ ಬರೆಯುವಂತೆ, ‘ಅವರು ಸಾಂಪ್ರದಾಯಿಕತೆಗೆ ಬದ್ಧರಾಗಿರುವವರನ್ನು, ವೈನ್ ಮತ್ತು ಮಾದಕ ದ್ರವ್ಯ ಸೇವಿಸುವವರನ್ನು, ಹಾಡುವವರನ್ನು, ಆನಂದದಿಂದ ನೃತ್ಯ ಮಾಡುವವರನ್ನು ಮತ್ತು ಆಗಾಗ ವಿವಸ್ತ್ರರಾಗುವವರನ್ನು ಖಂಡಿಸಿದ್ದರು’. ಶಾ ಹುಸೈನ್ ಅವರ ಹತ್ತಿರದ ಒಡನಾಡಿ ಮತ್ತು ಸಂಭಾವ್ಯ ಪ್ರೇಮಿ ಒಬ್ಬ ಯುವ ಹಿಂದೂ ವ್ಯಕ್ತಿ ಮತ್ತು ಅವರಿಬ್ಬರನ್ನೂ ಸಮಾಧಿ ಮಾಡಿದ ಸ್ಥಳ ಹಿಂದೂಗಳು, ಮುಸ್ಲಿಮರು ಮತ್ತು ಸಿಖ್ಖರಿಗೆ ತೀರ್ಥಯಾತ್ರೆಯ ಸ್ಥಳವಾಯಿತು ಮತ್ತು ವಾರ್ಷಿಕ ದೀಪಗಳ ಹಬ್ಬವಾಯಿತು. ಇದು ನೂರಾರು ವರ್ಷಗಳ ಕಾಲ ಲಾಹೋರ್ನಲ್ಲಿ ಅತ್ಯಂತ ಪ್ರಮುಖ ಸಾರ್ವಜನಿಕ ಮೆರವಣಿಗೆಯಾಗಿ ಉಳಿಯಿತು. ವಿಭಜನೆಯ ನಂತರ ಉತ್ಸವ ತನ್ನ ಬಹುತ್ವದ ಸ್ವರೂಪವನ್ನು ಕಳೆದುಕೊಂಡಿತು. ಅದನ್ನು ವೀಕ್ಷಕರು 1955ರ ಲಾಹೋರ್ ಟೆಸ್ಟ್ ಸಂದರ್ಭದಲ್ಲಿ ನೆನಪಿಸಿಕೊಂಡರು.
ಮನನ್ ಆಸಿಫ್ ಅವರ ಪುಸ್ತಕ ಅವರ ಊರಿನ ಬಗ್ಗೆ, ಅದರ ಬಹು ಪದರದ, ಬಹು ಧಾರ್ಮಿಕ ಮತ್ತು ಬಹುಭಾಷಾ ಗತಕಾಲದ ಶ್ರೀಮಂತ ಅಂಶಗಳನ್ನು ನಮ್ಮ ತಿಳುವಳಿಕೆಗೆ ಮರಳಿ ತರುತ್ತದೆ. ಅವರು ನಗರಕ್ಕೆ ಸಂಬಂಧಿಸಿದ ಪಾತ್ರಗಳ ಸ್ಪಷ್ಟ ಚಿತ್ರಗಳನ್ನು ಒದಗಿಸುತ್ತಾರೆ. ಉದಾಹರಣೆಗೆ ವೇಶ್ಯೆ ಅನಾರ್ಕಲಿ, ಸಂತ ಮತ್ತು ಅತೀಂದ್ರಿಯ ದಾತಾ ಗಂಜ್ ಬಕ್ಷ್, ಯೋಧ ನಾಯಕ ರಂಜಿತ್ ಸಿಂಗ್ ಮತ್ತು ಇತರ ಅನೇಕರ ಚಿತ್ರಗಳು ಮಾಹಿತಿಯುಕ್ತ ಮತ್ತು ಸೂಕ್ಷ್ಮವಾಗಿವೆ. ರುಡ್ಯಾರ್ಡ್ ಕಿಪ್ಲಿಂಗ್ ಅವರ ವಿಷಯಕ್ಕೆ ಈ ಮಾತು ಹೊರತಾಗಿದೆ. ಅವರನ್ನು ಲೇಖಕರು ಕಾಮಾಲೆ ಪೀಡಿತ ಸಾಮ್ರಾಜ್ಯಶಾಹಿ ಎಂದು ಚಿತ್ರಿಸಿದ್ದಾರೆ. ಕಿಪ್ಲಿಂಗ್ ನಿಸ್ಸಂದೇಹವಾಗಿ ನಂತರದ ಜೀವನದಲ್ಲಿ ಹಾಗೆ ಆದರು. ಮತ್ತೊಂದೆಡೆ, ಅವರ ಯೌವನದ ಲಾಹೋರ್ನ ವಿವರಣೆಗಳು, ವಿಶೇಷವಾಗಿ ಅವರ ಕಾದಂಬರಿ ಕಿಮ್ನಲ್ಲಿ ಬರುವ ಚಿತ್ರಗಳು, ಸಾಮಾನ್ಯ ಜನರ ಜೀವನ ಮತ್ತು ಹೋರಾಟಗಳ ಬಗ್ಗೆ ಎದ್ದುಕಾಣುವ, ಸಹಾನುಭೂತಿಯುಳ್ಳ ಮತ್ತು ಆಳವಾದ ಒಳನೋಟವುಳ್ಳವುಗಳಾಗಿವೆ.
ಆಸಿಫ್ ಅವರ ಅಸ್ತವ್ಯಸ್ತಗೊಂಡ ನಗರದಿಂದ ನಾವು ಲಾಹೋರ್ನ ವಾಸ್ತುಶಿಲ್ಪ ಪರಂಪರೆಯ ತೀಕ್ಷ್ಣವಾದ ನೋಟವನ್ನು ಪಡೆಯುತ್ತೇವೆ. ದೊಡ್ಡ ಮತ್ತು ಸಾಮಾಜಿಕ, ಪ್ರಸಿದ್ಧ ಮತ್ತು ಅಸ್ಪಷ್ಟ ಕಟ್ಟಡಗಳ ನಿರೂಪಣೆಯೊಂದಿಗೆ ಅದನ್ನು ಹೆಣೆಯಲಾಗಿದೆ. ಈಗ ಅಳಿದುಳಿದ ಅಥವಾ ಪರಿತ್ಯಕ್ತ ದೇವಾಲಯಗಳು ಮತ್ತು ಗುರುದ್ವಾರಗಳು ಇನ್ನೂ ಸಕ್ರಿಯವಾಗಿರುವ ಮಸೀದಿಗಳ ಪಕ್ಕದಲ್ಲಿವೆ. ಮರೆತುಹೋದ ಭೂತಕಾಲದಲ್ಲಿ ಲಾಹೋರ್ನ ಕ್ಷಿತಿಜ ಹಿಂದೂ ಮತ್ತು ಸಿಖ್ ಪವಿತ್ರ ಸ್ಥಳಗಳಿಂದ ಎಷ್ಟು ರೂಪುಗೊಂಡಿತ್ತು ಎಂಬುದನ್ನು ಅದು ತೋರಿಸುತ್ತದೆ. ಮತ್ತೊಂದು ಅಧ್ಯಾಯದಲ್ಲಿ, ಆಸಿಫ್ 1947ಕ್ಕಿಂತ ಮೊದಲು ಲಾಹೋರ್ನ ಹೆಚ್ಚಿನ ಆರ್ಥಿಕ ಜೀವನವನ್ನು ಹಿಂದೂ ಮತ್ತು ಸಿಖ್ ಉದ್ಯಮವು ರೂಪಿಸಿತ್ತು ಎಂದು ಹೇಳುತ್ತಾರೆ.
1970 ಮತ್ತು 1980ರ ದಶಕದಲ್ಲಿ ಹೆಚ್ಚು ಇಸ್ಲಾಮೀಕರಣಗೊಂಡ ಲಾಹೋರ್ನಲ್ಲಿ ಬೆಳೆದ ಆಸಿಫ್, ಶಾಲೆಯಿಂದ ಮನೆಗೆ ನಡೆದುಕೊಂಡು ಹೋಗುವಾಗ ದೇವನಾಗರಿ ಅಕ್ಷರಗಳಲ್ಲಿ ಕೆಲವು ಮಸುಕಾದ ಪದಗಳನ್ನು ಬರೆಯಲಾದ ಹಳೆಯ ಮನೆಯನ್ನು ಹೇಗೆ ಹಾದುಹೋಗುತ್ತಿದ್ದರು ಎಂಬುದನ್ನು ಒಂದು ರೋಮಾಂಚಕ ದೃಶ್ಯದಲ್ಲಿ ಬರೆಯುತ್ತಾರೆ. ಹಲವು ತಿಂಗಳುಗಳ ಕಾಲ ನಾನು ಲಿಪಿಯ ಮೇಲೆ ಕೇವಲ ಮೇಲ್ನೋಟಕ್ಕೆ ಕಣ್ಣು ಹಾಯಿಸುತ್ತಾ ಗೇಟ್ ಅನ್ನು ದಾಟಿದೆ. ಯಾರೂ ಅದನ್ನು ಹೇಳದಿದ್ದರೂ, ಗೇಟ್ ಮುಂದೆ ಕಾಲಹರಣ ಮಾಡುವುದು ಒಳ್ಳೆಯದಲ್ಲ ಎಂದು ನನಗೆ ತಿಳಿದಿತ್ತು. ನನಗೆ ಲಾಹೋರ್ನಲ್ಲಿ ದೇವನಾಗರಿಯನ್ನು ಓದಲು ಅಥವಾ ಕಲಿಯಲು ಸಾಧ್ಯವಾಗಲಿಲ್ಲ. ದೇವನಾಗರಿ ಲಿಪಿ ‘ಹಿಂದೂ’ ಎಂದು ಮತ್ತು ‘ಹಿಂದೂ’ ಎಂದರೆ ನನ್ನ ಬೆನ್ನಿಗೆ ಇರಿಯಲು ಪ್ರಯತ್ನಿಸುತ್ತಿರುವ ವ್ಯಕ್ತಿ ಎಂದು ನನಗೆ ತಿಳಿದಿತ್ತು(ನನ್ನ ಸಮಾಜ ವಿಜ್ಞಾನ ಪಠ್ಯಪುಸ್ತಕದ ಪ್ರಕಾರ).
ಈ ಸಾಲುಗಳನ್ನು ಓದುತ್ತಾ, ಹಿಂದುತ್ವ ರಾಜ್ಯದಲ್ಲಿ ಹಿಂದೂ ಮಕ್ಕಳಿಗೆ ಅವರ ಭೂತ ಮತ್ತು ವರ್ತಮಾನದ ಬಗ್ಗೆ ವಿಕೃತ ತಿಳುವಳಿಕೆಯನ್ನು ಬಲವಂತವಾಗಿ ನೀಡಲಾಗುತ್ತಿದೆ ಎಂದು ನಾನು ಯೋಚಿಸಲು ಮತ್ತು ಚಿಂತಿಸಲು ಪ್ರಾರಂಭಿಸಿದೆ. ವಾಸ್ತವವಾಗಿ, ಕೆಲ ದಶಕಗಳಿಂದ ಉರ್ದುವನ್ನು ಸಂಪೂರ್ಣವಾಗಿ ಮುಸ್ಲಿಮ್ ಭಾಷೆಯಾಗಿ ಚಿತ್ರಿಸಲಾಗಿದೆ. ಅದರ ಸಾಹಿತ್ಯಕ್ಕೆ ಹಿಂದೂ ಮತ್ತು ಸಿಖ್ (ಮತ್ತು ನಾಸ್ತಿಕ) ಬರಹಗಾರರು ನೀಡಿದ ದೊಡ್ಡ ಕೊಡುಗೆಗಳ ಹೊರತಾಗಿಯೂ ಹಾಗೆ ಮಾಡಲಾಗಿದೆ. ಭಾರತವನ್ನು ಮೂಲಭೂತವಾಗಿ ಹಿಂದೂ ದೇಶವೆಂದು ಬಿಂಬಿಸುವುದನ್ನು ಬಿಜೆಪಿ ಸರಕಾರಗಳು ರೂಪಿಸಿರುವ ಇತಿಹಾಸ ಮತ್ತು ಸಮಾಜ ವಿಜ್ಞಾನ ಪಠ್ಯಪುಸ್ತಕಗಳಲ್ಲಿ ಮತ್ತಷ್ಟು ಹೆಚ್ಚಿಸಲಾಗಿದೆ. ಈ ಬಹುಸಂಖ್ಯಾತ ದೃಷ್ಟಿಕೋನವು ಹಿಂದುತ್ವ ಸಾಮಾಜಿಕ ಮಾಧ್ಯಮಗಳಿಂದ ಇನ್ನೂ ವರ್ಧಿತವಾಗಿದೆ. ಆದ್ದರಿಂದ ಎಲ್ಲಾ ವಯಸ್ಸಿನ ಹಿಂದೂಗಳು ಎಲ್ಲಾ ರೀತಿಯ ಮುಸ್ಲಿಮರನ್ನು ನಂಬದಂತೆ ಮಾಡಲಾಗುತ್ತದೆ.
ಆಸಿಫ್ ತಮ್ಮ ಪುಸ್ತಕದ ಇನ್ನೊಂದು ಸ್ಥಳದಲ್ಲಿ, ಮೇಳ ಚಿರಾಘನ್ ಮತ್ತು ಬಸಂತ್ನಂತಹ ಜನಪ್ರಿಯ ಹಬ್ಬಗಳನ್ನು ಲಾಹೋರಿಗಳ ಸಾಮೂಹಿಕ ಜೀವನದಿಂದ ಹೇಗೆ ಬಹಿಷ್ಕರಿಸಲಾಯಿತು ಎಂಬುದರ ಕುರಿತು ಮಾತನಾಡುತ್ತಾರೆ. ಏಕೆಂದರೆ ಅವು ಮಿಲಿಟರಿ ಸರ್ವಾಧಿಕಾರಿ ಝಿಯಾವುಲ್ ಹಕ್ ಉತ್ತೇಜಿಸಿದ ವಹಾಬಿ-ಇಸ್ಲಾಮ್ನ ತತ್ವಗಳಿಗೆ ವಿರುದ್ಧವಾಗಿದ್ದವು. 1980ರ ದಶಕದಲ್ಲಿ ಮತ್ತು ಅದರಾಚೆಗಿನ ಪಾಕಿಸ್ತಾನದಲ್ಲಿ, ಸಹ ಸಂತೋಷ, ಸ್ವಾಭಾವಿಕತೆ ಮತ್ತು ಸಾಮೂಹಿಕತೆ ಅನುಮಾನಾಸ್ಪದ ಚಟುವಟಿಕೆಗಳೆಂದು ಪರಿಗಣಿತವಾಗುತ್ತಿದ್ದವು. ಹಿಂದೂಕರಣಗೊಂಡ ಭಾರತ ಕೂಡ ಸಾಮೂಹಿಕ ಸಂತೋಷ ಮತ್ತು ಸ್ವಾಭಾವಿಕತೆಯನ್ನು ಅದೇ ರೀತಿಯಲ್ಲಿ ನೋಡುವ ಮೂಲಕ ಪಾಕಿಸ್ತಾನದ ಮಾದರಿಯನ್ನು ನಿಕಟವಾಗಿ ಅನುಕರಿಸುತ್ತಿರುವಂತೆ ತೋರುತ್ತದೆ.
ಇಸ್ಲಾಮಿಕ್ ರಿಪಬ್ಲಿಕ್ ಆಫ್ ಪಾಕಿಸ್ತಾನವು ಲಾಹೋರ್ನ ಗತಕಾಲದಿಂದ ಹಿಂದೂ ಮತ್ತು ಸಿಖ್ ಪ್ರಭಾವದ ಚಿಹ್ನೆಗಳನ್ನು ಅಳಿಸಲು ಶ್ರದ್ಧಾಪೂರ್ವಕವಾಗಿ ಪ್ರಯತ್ನಿಸಿದೆ. ಹಿಂದುತ್ವವಾದಿಗಳು ಪಾಕಿಸ್ತಾನವನ್ನು ದ್ವೇಷಿಸುವುದಾಗಿ ಹೇಳಿಕೊಂಡರೂ, ಇತಿಹಾಸದ ಅಳಿಸುವಿಕೆಯ ತಮ್ಮದೇ ಆದ ಪ್ರಯತ್ನಗಳಲ್ಲಿ ಅವರು ತಮ್ಮ ವಿರೋಧಿಗಳನ್ನೇ ಅನುಕರಿಸುತ್ತಾರೆ. ಯಾವುದೇ ಇಸ್ಲಾಮಿಕ್ ಪ್ರಭಾವವನ್ನು ಸಂಪೂರ್ಣವಾಗಿ ತೆಗೆದುಹಾಕುವ ರೀತಿಯಲ್ಲಿ ಉತ್ತರ ಭಾರತದ ನಗರಗಳು ಮತ್ತು ಪಟ್ಟಣಗಳನ್ನು ಸಾಂಸ್ಕೃತಿಕವಾಗಿ ಮತ್ತು ವಾಸ್ತುಶಿಲ್ಪದ ದೃಷ್ಟಿಯಿಂದ ಮರುರೂಪಿಸಬೇಕೆಂದು ಅವರು ಬಯಸುತ್ತಾರೆ. ಉತ್ತರ ಭಾರತದ ಗತಕಾಲ ಕೇವಲ ಅಥವಾ ಹೆಚ್ಚಾಗಿ ಮುಸ್ಲಿಮೇತರರ ರಾಜಕೀಯ ಆಳ್ವಿಕೆಯ ಬಗ್ಗೆ ಅಲ್ಲ ಎಂಬುದನ್ನು ನಾವು ಮರೆಯಬೇಕೆಂದು ಅವರು ಬಯಸುತ್ತಾರೆ. ಆದರೆ, ನಂಬಿಕೆಯಿಂದ ಮುಸ್ಲಿಮರಾಗಿರುವ ಬರಹಗಾರರು, ಕಲಾವಿದರು, ಸಂಗೀತಗಾರರು ಮತ್ತು ಕುಶಲಕರ್ಮಿಗಳು ಸಮಾಜಕ್ಕೆ ನೀಡಿದ ಅಸಾಧಾರಣ ಮತ್ತು ಶಾಶ್ವತ ಕೊಡುಗೆಗಳೂ ಇವೆ. ಅದು ನಮ್ಮ ಹಂಚಿಕೆಯ, ಎಲ್ಲರನ್ನೂ ಒಳಗೊಂಡ, ಬಹುತ್ವದ, ಭಾರತೀಯ ಪರಂಪರೆಯ ಅನಿವಾರ್ಯ ಭಾಗವಾಗಿತ್ತು. ಅದನ್ನು ಹಿಂದುತ್ವವನ್ನು ವಿರೋಧಿಸುವವರು ಒಪ್ಪಿಕೊಳ್ಳಬೇಕು ಮತ್ತು ದೃಢೀಕರಿಸಬೇಕು.
ಮನನ್ ಅಹ್ಮದ್ ಆಸಿಫ್ ಅವರ ಪುಸ್ತಕವನ್ನು ಪಾಕಿಸ್ತಾನದಲ್ಲಿ ವ್ಯಾಪಕವಾಗಿ ಓದಲಾಗುತ್ತದೆ ಮತ್ತು ಉರ್ದು, ಪಂಜಾಬಿ ಅನುವಾದದಲ್ಲಿಯೂ ಅದು ಪ್ರಕಟವಾಗುತ್ತದೆ ಎಂದು ಆಶಿಸಬಹುದು. ಅದು ಒಂದು ದೊಡ್ಡ, ಆದರೆ ತೊಂದರೆಗೀಡಾದ ನಗರದ ಉತ್ತಮ ಇತಿಹಾಸವಾಗಿದೆ. ಗಡಿಯ ಈ ಭಾಗದಲ್ಲಿ ವಾಸಿಸುವ ನಮಗೂ ಅದರಲ್ಲಿ ಪಾಠಗಳಿರಬಹುದು.