ಯುರೋಪ್ 1990, ಯುರೋಪ್ 2025

1990ರಲ್ಲಿ ಪ್ರಕಟವಾಗಿದ್ದ ಆ ಸಂಚಿಕೆಯ ಶೀರ್ಷಿಕೆ ‘ಹೊಸ ಯುರೋಪ್!’ ಎಂದಿತ್ತು. ಹೊಸ ಮತ್ತು ಆಶ್ಚರ್ಯಸೂಚಕ ಚಿಹ್ನೆ ಈ ವಿಶೇಷಣಗಳು ಹಿಂದಿನ ವರ್ಷದ ಯುಗಪ್ರವರ್ತಕ ಘಟನೆಗಳನ್ನು ನೆನಪಿಸುತ್ತವೆ. ಇದರಲ್ಲಿ ಬರ್ಲಿನ್ ಗೋಡೆಯ ಪತನ, ದಶಕಗಳಿಂದ ಪೋಲ್ಯಾಂಡ್‌ನಲ್ಲಿ ನಡೆದ ಮೊದಲ ಮುಕ್ತ ಚುನಾವಣೆಗಳು ಮತ್ತು ಪೂರ್ವ ಯುರೋಪಿನಲ್ಲಿಯ ಸರ್ವಾಧಿಕಾರದ ಕುಸಿತ ಸೇರಿವೆ.;

Update: 2025-03-15 12:02 IST
ಯುರೋಪ್ 1990, ಯುರೋಪ್ 2025
  • whatsapp icon

ಫೆಬ್ರವರಿ 28, ಉಕ್ರೇನಿಯನ್ ಅಧ್ಯಕ್ಷರನ್ನು ಅಮೆರಿಕದ ಅಧ್ಯಕ್ಷರು ಶ್ವೇತಭವನದಲ್ಲಿ ಅವಮಾನಿಸಿದ ದಿನ. ಬೆಂಗಳೂರಿನ ಅದ್ಭುತ ಸೆಕೆಂಡ್ ಹ್ಯಾಂಡ್ ಪುಸ್ತಕ ಮಳಿಗೆಗಳಲ್ಲೊಂದರಿಂದ ಎತ್ತಿಕೊಂಡಿದ್ದ ‘ಗ್ರಂಥ’ ಎಂಬ ಸಾಹಿತ್ಯಕ ನಿಯತಕಾಲಿಕೆಯ ಹಳೆಯ ಸಂಚಿಕೆಯನ್ನು ನಾನು ಓದುತ್ತಿದ್ದೆ. 1990ರಲ್ಲಿ ಪ್ರಕಟವಾಗಿದ್ದ ಆ ಸಂಚಿಕೆಯ ಶೀರ್ಷಿಕೆ ‘ಹೊಸ ಯುರೋಪ್!’ ಎಂದಿತ್ತು. ಹೊಸ ಮತ್ತು ಆಶ್ಚರ್ಯಸೂಚಕ ಚಿಹ್ನೆ ಈ ವಿಶೇಷಣಗಳು ಹಿಂದಿನ ವರ್ಷದ ಯುಗಪ್ರವರ್ತಕ ಘಟನೆಗಳನ್ನು ನೆನಪಿಸುತ್ತವೆ. ಇದರಲ್ಲಿ ಬರ್ಲಿನ್ ಗೋಡೆಯ ಪತನ, ದಶಕಗಳಿಂದ ಪೋಲ್ಯಾಂಡ್‌ನಲ್ಲಿ ನಡೆದ ಮೊದಲ ಮುಕ್ತ ಚುನಾವಣೆಗಳು ಮತ್ತು ಪೂರ್ವ ಯುರೋಪಿನಲ್ಲಿಯ ಸರ್ವಾಧಿಕಾರದ ಕುಸಿತ ಸೇರಿವೆ.

1989ರ ಈ ಘಟನೆಗಳು ಖಂಡ ಮತ್ತು ಜಗತ್ತಿನ ಭವಿಷ್ಯದ ಕುರಿತಾಗಿ ಏನನ್ನು ಸೂಚಿಸುತ್ತವೆ ಎಂಬುದನ್ನು ನಿರ್ಣಯಿಸಲು, ‘ಗ್ರಂಥ’ದ ಸಂಪಾದಕರು ಯುರೋಪಿಯನ್ ಮೂಲದ ಹದಿನೈದು ಬರಹಗಾರರಿಂದ ಪ್ರಬಂಧಗಳನ್ನು ಬರೆಸಿದ್ದರು. ಕೆಲವರು ಅವರು ಜನಿಸಿದ ರಾಷ್ಟ್ರಗಳಲ್ಲೇ ಇದ್ದರೆ, ಇತರರು ದೇಶದಿಂದ ಹೊರಗೆ ವಾಸಿಸುತ್ತಿದ್ದರು. ಅನಿವಾರ್ಯವಾಗಿ, ಅವರಲ್ಲಿ ಹಲವರು ಕಳೆದ ಕೆಲವು ತಿಂಗಳುಗಳ ಘಟನೆಗಳಿಂದ ಸಂತೋಷಪಟ್ಟಿದ್ದರು. ಹರ್ಷ ಅವರ ಮನಸ್ಸನ್ನು ತುಂಬಿತ್ತು. ಗೋಡೆಯನ್ನು ಉರುಳಿಸಿದ ಸ್ವಾತಂತ್ರ್ಯ ಮತ್ತು ಘನತೆಯ ಹೋರಾಟವನ್ನು ಸ್ವಾಗತಿಸಿದ ಪೂರ್ವ ಜರ್ಮನ್ ಪಾದ್ರಿ ವರ್ನರ್ ಕ್ರಾಟ್ಶೆಲ್ ಮತ್ತು ಸರ್ವಾಧಿಕಾರ ಕೊನೆಗೊಳಿಸಲು ಸಹಾಯ ಮಾಡಿದ ಭಿನ್ನಮತೀಯರು, ‘ಪ್ರಜಾಪ್ರಭುತ್ವ ಯುರೋಪ್, ಮುಂದಿನ ಸಹಸ್ರಮಾನಕ್ಕೆ ಯುರೋಪ್, ಪರಸ್ಪರ ದೇಶೀಯ ಶಾಂತಿಯಿಂದ ಬದುಕುವ ರಾಷ್ಟ್ರಗಳ ಯುರೋಪ್’ ಎಂಬ ಕಲ್ಪನೆಯನ್ನು ಸಾಕಾರಗೊಳಿಸುವ ಶಕ್ತಿಯನ್ನು ಹೊಂದಿದ್ದಾರೆಂದು ಭಾವಿಸಿದ ಪ್ರಸಿದ್ಧ ಜೆಕ್ ಕಾದಂಬರಿಕಾರ ಇವಾನ್ ಕ್ಲಿಮಾ ಅಂಥವರಲ್ಲಿ ಸೇರಿದ್ದರು.

ಯುರೋಪಿನಲ್ಲಿನ ಬದಲಾವಣೆಗಳನ್ನು ಸಕಾರಾತ್ಮಕ ಬೆಳಕಿನಲ್ಲಿ ನೋಡಿದವರಲ್ಲಿ ರಾಜಕೀಯ ವಿದ್ವಾಂಸ ಇಸಾಯ್ ಬರ್ಲಿನ್ ಕೂಡ ಸೇರಿದ್ದರು. ಸಂವಾದದಲ್ಲಿ ಭಾಗಿಯಾಗಿದ್ದವರಲ್ಲಿ ಅವರು ಹಿರಿಯರಾಗಿದ್ದರು ಮತ್ತು (ಇಂಗ್ಲಿಷ್ ಮಾತನಾಡುವ ಜಗತ್ತಿನಲ್ಲಿ) ಅತ್ಯಂತ ಪ್ರಸಿದ್ಧರಾಗಿದ್ದರು. ತ್ಸಾರಿಸ್ಟ್ ರಶ್ಯದಲ್ಲಿ ಜನಿಸಿದ ಬರ್ಲಿನ್ ಚಿಕ್ಕ ಹುಡುಗನಾಗಿದ್ದಾಗ ತನ್ನ ಕುಟುಂಬದೊಂದಿಗೆ ಇಂಗ್ಲೆಂಡ್‌ಗೆ ಓಡಿಹೋದರು. ಅವರು ತಮ್ಮ ರೀತಿಯಲ್ಲಿ ಪಕ್ಕಾ ಬ್ರಿಟಿಷರಾಗಿದ್ದರೂ, ಆಕ್ಸ್‌ಫರ್ಡ್‌ನಲ್ಲಿ ಹುದ್ದೆ ಪಡೆದಿದ್ದರು ಮತ್ತು ಆಕ್ಸ್‌ಫರ್ಡ್ ಕಾಲೇಜನ್ನು ಸ್ಥಾಪಿಸಿದರು. ಬಿಬಿಸಿಯಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದರು ಮತ್ತು ಬ್ರಿಟಿಷ್ ಅಕಾಡಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಅವರು ರಶ್ಯದ ಬಗ್ಗೆ ಬಲವಾದ ಆಸಕ್ತಿಯನ್ನು ಮತ್ತು ಹಿಂದಿನ ರಶ್ಯದ ಬರಹಗಾರರು ಮತ್ತು ಚಿಂತಕರ ಬಗ್ಗೆ ವಿಶೇಷ ಪ್ರೀತಿಯನ್ನು ಉಳಿಸಿಕೊಂಡಿದ್ದರು.

1989ರ ಘಟನೆಗಳಲ್ಲಿ, ಕಮ್ಯುನಿಸಂನಿಂದ ಪುಡಿಪುಡಿಯಾದ ಹಳೆಯ ಬುದ್ಧಿಜೀವಿಗಳ ಉದಾರ ಸಂಪ್ರದಾಯಗಳ ಪುನರುಜ್ಜೀವನವನ್ನು ಇಸಾಯ್ ಬರ್ಲಿನ್ ಈಗ ಕಂಡರು. ರಶ್ಯನ್ನರು ಮಹಾನ್ ಜನರು ಎಂದು ಅವರು ಗ್ರಂಥದಲ್ಲಿ ಬರೆದಿದ್ದಾರೆ. ಅವರ ಸೃಜನಶೀಲ ಶಕ್ತಿಗಳು ಅಪಾರ ಮತ್ತು ಒಮ್ಮೆ ಮುಕ್ತರಾದ ನಂತರ ಅವರು ಜಗತ್ತಿಗೆ ಏನು ನೀಡಬಹುದು ಎಂದು ಹೇಳಲು ಸಾಧ್ಯವಿಲ್ಲ. ಹೊಸ ಅನಾಗರಿಕತೆ ಯಾವಾಗಲೂ ಸಾಧ್ಯ. ಆದರೆ ಪ್ರಸ್ತುತ ಅದರ ನಿರೀಕ್ಷೆ ಕಡಿಮೆ. ಕಡೇ ಪಕ್ಷ, ದುಷ್ಟತನವನ್ನು ಜಯಿಸಬಹುದು, ಗುಲಾಮಗಿರಿಯ ಅಂತ್ಯವಾಗಲಿದೆ ಎಂಬುದು ಹೆಮ್ಮೆಪಡಬಹುದಾದ ವಿಷಯ ಎಂದು ಇಸಾಯ್ ಬರೆದಿದ್ದರು.

ಪೂರ್ವ ಯುರೋಪಿನಲ್ಲಿ ಸೋವಿಯತ್ ಕೈಗೊಂಬೆ ಸರಕಾರಗಳ ಪತನವನ್ನು ಸ್ವಾಗತಿಸುವಾಗ, ಸಂವಾದದಲ್ಲಿ ಭಾಗಿಯಾಗಿದ್ದ ಇತರರಲ್ಲಿ ಭವಿಷ್ಯದ ಬಗ್ಗೆ ತೀರಾ ಉತ್ಸಾಹವೇನೂ ಇರಲಿಲ್ಲ. ಕೆನಡಾದಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿದ್ದ ಜೆಕ್ ಮೂಲದ ಬರಹಗಾರ ಜೋಸೆಫ್ ಸ್ಕ್ವೊರೆಕಿ, ಯುರೋಪಿನ ಹೆಚ್ಚಿನ ಭಾಗಗಳಲ್ಲಿ ನಿರಂಕುಶಾಧಿಕಾರಿಗಳ ದಿನಗಳನ್ನು ಎಣಿಸಬಹುದು. ಕೆಲವು ಸ್ಥಳಗಳಲ್ಲಿ ಅವು ಇದೀಗ ಪ್ರಾರಂಭವಾಗುತ್ತಿವೆ ಎಂದು ಬರೆದಿದ್ದರು. ಬಹುಭಾಷಾ ವಿಮರ್ಶಕ ಜಾರ್ಜ್ ಸ್ಟೈನರ್, ಎಲ್ಲೆಡೆ ಪುನರುಜ್ಜೀವನಗೊಳ್ಳುತ್ತಿರುವ ರಾಷ್ಟ್ರೀಯತೆ, ಜನಾಂಗೀಯ ದ್ವೇಷಗಳು ಮತ್ತು ಸಂಭಾವ್ಯ ಸಮೃದ್ಧಿ ಮತ್ತು ಮುಕ್ತ ವಿನಿಮಯದ ಪ್ರತಿಶಕ್ತಿಯ ನಡುವಿನ ಬಹುತೇಕ ಹುಚ್ಚು ಓಟವನ್ನು ನೋಡುತ್ತಿದ್ದೇವೆ ಎಂದು ಅಭಿಪ್ರಾಯಪಟ್ಟಿದ್ದರು. ಸ್ಟೈನರ್, ಗುರುತಿಸಿದ ಇನ್ನೂ ಒಂದು ಅಂಶವೆಂದರೆ, ಯುಎಸ್ ಪ್ರಾಂತೀಯ ದೈತ್ಯನಾಗುತ್ತಿರುವಂತೆ ತೋರುತ್ತಿದೆ, ಯುರೋಪಿನ ಬಗ್ಗೆ ತಿಳಿದಿಲ್ಲ, ಅದರ ಬಗ್ಗೆ ಅಸಡ್ಡೆ ಹೊಂದಿದೆ. ಯುರೋಪ್ ಮತ್ತೆ ತನ್ನದೇ ಬಲದ ಮೇಲೆ ನಿಂತಿದೆ ಎಂಬುದಾಗಿತ್ತು.

ಪೂರ್ವ ಯುರೋಪಿನಾದ್ಯಂತ ನಡೆದದ್ದು, ಭಾಗಶಃ, ಪೋಲ್ಯಾಂಡ್‌ಗಳು, ಜೆಕ್‌ಗಳು, ಮಗ್ಯಾರ್‌ಗಳು ಮತ್ತು ಜರ್ಮನ್ನರು ಸಂಪೂರ್ಣ ಸೋವಿಯತ್ ನೊಗದ ವಿರುದ್ಧ ದಂಗೆ ಎದ್ದಿದ್ದರಿಂದ ದಮನಿಸಲ್ಪಟ್ಟ ರಾಷ್ಟ್ರೀಯತಾವಾದಿ ಭಾವನೆಗಳ ಅಭಿವ್ಯಕ್ತಿಯಾಗಿತ್ತು. ‘ಗ್ರಂಥ’ದ ಬರಹಗಾರರಲ್ಲಿ ಕೆಲವರು ಈ ಸಣ್ಣ ಯುರೋಪಿಯನ್ ರಾಷ್ಟ್ರಗಳ ಪುನರುಜ್ಜೀವನವನ್ನು ಸಂಭ್ರಮಿಸಿದರೆ, ರಾಷ್ಟ್ರೀಯತೆ ಪ್ರತಿಗಾಮಿ ಮತ್ತು ವಿಮೋಚನಾ ಫಲಿತಾಂಶಗಳನ್ನು ಹೊಂದಿರಬಹುದು ಎಂದು ಆಂಡ್ರೇ ಸಿನ್ಯಾವ್ಸ್ಕಿ ಎಚ್ಚರಿಸಿದ್ದರು. ಅವೆಲ್ಲವೂ ಹೆಚ್ಚಾಗಿ ರಶ್ಯದಲ್ಲಿ ಇದ್ದವು. ಅದು ಈಗ ತನ್ನ ಸಾಮ್ರಾಜ್ಯವನ್ನು ಕಳೆದುಕೊಂಡಿದೆ. ಆದರೆ ಅದರ ಬಗ್ಗೆ ಹೆಮ್ಮೆಯನ್ನು ಹೊಂದಿಲ್ಲ. ರಾಷ್ಟ್ರೀಯತೆ ಸ್ವತಃ ಗಂಭೀರ ಬೆದರಿಕೆಯಲ್ಲ ಎಂದು ಸಿನ್ಯಾವ್ಸ್ಕಿ ಬರೆದಿದ್ದರು. ಅದು ಕೆಲವೊಮ್ಮೆ ಒಂದು ರಾಷ್ಟ್ರಕ್ಕೆ ಮೌಲಿಕವಾಗಿರಬಹುದು. ಅದು ಯಾವುದೇ ಮೂಲಭೂತ ಕಾರಣಗಳಿಲ್ಲದೆ, ಆ ವಿಷಕಾರಿ ಉಪ ಉತ್ಪನ್ನವನ್ನು ಉತ್ಪಾದಿಸಲು ಪ್ರಾರಂಭಿಸುವವರೆಗೆ ಎಂದಿದ್ದರು. ಹಿಂದೆ ಸೋವಿಯತ್ ಒಕ್ಕೂಟ ವರ್ಗ ಶತ್ರುವನ್ನು ಹೊಂದಿತ್ತು ಮತ್ತು ಈಗ ದೇಶಭಕ್ತರು ಎಂದು ಕರೆದುಕೊಳ್ಳುವ ರಶ್ಯದ ರಾಷ್ಟ್ರೀಯವಾದಿಗಳು, ರುಸ್ಸೋಫೋಬಿಯಾ ಎಂದು ಮಾತಾಡಿದ್ದರು.

ಈ ರೀತಿಯ ಸಂವಾದದಲ್ಲಿ ಸಂಪಾದಕರು ಸಾಮಾನ್ಯವಾಗಿ ಪ್ರತಿಯೊಬ್ಬ ಬರಹಗಾರರಿಗೂ ಪ್ರತ್ಯೇಕವಾಗಿ ಬರೆಯುತ್ತಾರೆ. ನಿಸ್ಸಂದೇಹವಾಗಿ ಇಸಾಯ್ ಬರ್ಲಿನ್ ಮತ್ತು ಆಂಡ್ರೇ ಸಿನ್ಯಾವ್ಸ್ಕಿಗೆ ಇನ್ನೊಬ್ಬರು ಏನು ಬರೆಯುತ್ತಾರೆಂದು ತಿಳಿದಿರಲಿಲ್ಲ. ಆದಾಗ್ಯೂ, ಅವರ ಹೇಳಿಕೆಗಳನ್ನು ಅಕ್ಕಪಕ್ಕದಲ್ಲಿ ಓದಿದಾಗ, ಅವುಗಳನ್ನು ಮುದ್ರಿಸಿದ ಮೂವತ್ತೈದು ವರ್ಷಗಳ ನಂತರ, ಒಬ್ಬರ ಆಶಾವಾದ ಮತ್ತು ಇನ್ನೊಬ್ಬರ ಸಂದೇಹದ ನಡುವಿನ ವ್ಯತ್ಯಾಸ ಗಮನಾರ್ಹವಾಗಿದೆ. ಇದಕ್ಕೆ ಕಾರಣ ಅವರ ವಿಭಿನ್ನ ಜೀವನಚರಿತ್ರೆಯ ಪಥಗಳಾಗಿರಬಹುದು. ಬರ್ಲಿನ್‌ಗೆ ರಶ್ಯ ಮತ್ತು ರಶ್ಯನ್ನರೊಂದಿಗೆ ಜೀವನದ ನಿಜವಾದ ನೇರ ಅನುಭವವಿರಲಿಲ್ಲ. ಆದರೆ ಸಿನ್ಯಾವ್ಸ್ಕಿ ಖಂಡಿತವಾಗಿಯೂ ಆ ಅನುಭವ ಹೊಂದಿದ್ದರು. 1925ರಲ್ಲಿ ಮಾಸ್ಕೋದಲ್ಲಿ ಜನಿಸಿದ ಅವರು 1973ರಲ್ಲಿ ಮಾತ್ರ ಸೋವಿಯತ್ ಒಕ್ಕೂಟವನ್ನು ತೊರೆದರು. ಆದ್ದರಿಂದ, ರಶ್ಯದ ರಾಷ್ಟ್ರೀಯತೆ ನಿರ್ಣಾಯಕವಾಗಿ ಅನ್ಯದ್ವೇಷ ಮತ್ತು ಕೋಮುವಾದಿ ಪ್ರವೃತ್ತಿಗಳನ್ನು ಹೇಗೆ ಹೊಂದಿದೆ ಎಂಬುದನ್ನು ಅವರು ಹಲವಾರು ದಶಕಗಳ ಅನುಭವದಿಂದ ತಿಳಿದಿದ್ದರು.

ಕನಿಷ್ಠ ತಮ್ಮ ಸ್ಥಳೀಯ ರಶ್ಯಕ್ಕೆ ಸಂಬಂಧಿಸಿದಂತೆ ಸಿನ್ಯಾವ್ಸ್ಕಿ ಬರ್ಲಿನ್‌ಗಿಂತ ಹೆಚ್ಚು ನಿಖರವಾಗಿ ಮಾತಾಡಿದ್ದಾರೆ. ಏಕೆಂದರೆ, ತಮ್ಮ ದಶಕಗಳ ಅಧಿಕಾರದಲ್ಲಿ ವ್ಲಾದಿಮಿರ್ ಪುಟಿನ್ ಸೋವಿಯತ್ ಒಕ್ಕೂಟ ಪತನಗೊಂಡ ನಂತರ ಸ್ವಾತಂತ್ರ್ಯ ಪಡೆದ ದೇಶಗಳ ಜನರನ್ನು ಗುಲಾಮರನ್ನಾಗಿ ಮಾಡಲು ಪ್ರಯತ್ನಿಸುವ ಮೊದಲು ತಮ್ಮದೇ ಆದ ಜನರ ಗುಲಾಮಗಿರಿಯನ್ನು ಖಚಿತಪಡಿಸಿಕೊಂಡಿದ್ದಾರೆ. ಈ ವಿಶಾಲ ಸಾಮ್ರಾಜ್ಯಶಾಹಿ ಮಹತ್ವಾಕಾಂಕ್ಷೆ ಉಕ್ರೇನ್ ಆಕ್ರಮಣದಲ್ಲಿ ಅತ್ಯಂತ ಸ್ಪಷ್ಟವಾಗಿ ಕಂಡುಬರುತ್ತದೆ. ಆದರೂ ಪುಟಿನ್ ದೃಷ್ಟಿಯಲ್ಲಿ ಕೆಲವು ಸಣ್ಣ ಯುರೋಪಿಯನ್ ರಾಷ್ಟ್ರಗಳೂ ಇವೆ. ರಶ್ಯದ ರಾಷ್ಟ್ರೀಯತೆಯ ಸರ್ವಾಧಿಕಾರಿ ಮತ್ತು ವಿಸ್ತರಣಾವಾದಿ ರೂಪದ ವಿಮರ್ಶಕರು, ಸ್ವದೇಶದಲ್ಲಾಗಲಿ ಅಥವಾ ವಿದೇಶದಲ್ಲಾಗಲಿ ಪುಟಿನಿಸ್ಟರು ರುಸ್ಸೋಫೋಬ್ಸ್ ಎಂದು ತಳ್ಳಿಹಾಕುತ್ತಾರೆ.

‘ಗ್ರಂಥ’ದಲ್ಲಿನ ಸಂವಾದಕ್ಕೆ ಬರೆದವರಲ್ಲಿ ಜಾರ್ಜ್ ಸ್ಟೈನರ್ ಕೂಡ ದೂರದೃಷ್ಟಿಯುಳ್ಳ ವರಾಗಿದ್ದರು. ಅಮೆರಿಕ ಕಾಲಾನಂತರದಲ್ಲಿ ಯುರೋಪಿನ ಬಗ್ಗೆ ಅಸಡ್ಡೆ ಹೊಂದಬಹುದು ಎಂದು ಯೋಚಿಸುತ್ತಿದ್ದರು. ವ್ಲಾದಿಮಿರ್ ಪುಟಿನ್ ಬಗೆಗಿನ ಡೊನಾಲ್ಡ್ ಟ್ರಂಪ್ ಅವರ ಮೆಚ್ಚುಗೆ ಮೊದಲೇ ತಿಳಿದಿದ್ದರೂ, ಅವರು ತಮ್ಮ ಎರಡನೇ ಅವಧಿಯಲ್ಲಿ ಉಕ್ರೇನ್ ಮೇಲೆ ಇಷ್ಟು ಬೇಗ ತಿರುಗಿಬೀಳುತ್ತಾರೆ ಎಂದು ಕೆಲವರು ಭಾವಿಸಿದ್ದರು. ಟ್ರಂಪ್ ಮತ್ತು ಅವರ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಇಬ್ಬರೂ ವೊಲೊದಿಮಿರ್ ಝೆಲೆನ್‌ಸ್ಕಿಯನ್ನು ಸಾರ್ವಜನಿಕವಾಗಿ ಅವಮಾನಿಸುವುದನ್ನು ರಶ್ಯದ ರಾಜಕಾರಣಿಗಳು ಮತ್ತು ಪ್ರಚಾರಕರು ವ್ಯಾಪಕವಾಗಿ ಸ್ವಾಗತಿಸಿದ್ದಾರೆ. ಅವರು ಉಕ್ರೇನ್ ಅನ್ನು ವಶಪಡಿಸಿಕೊಳ್ಳಲು ಮತ್ತು ಪ್ರಾಬಲ್ಯ ಸಾಧಿಸಲು ತಮ್ಮದೇ ಆದ ಬಯಕೆಯ ಸಮರ್ಥನೆಯಾಗಿ ಇದನ್ನು ನೋಡಿದ್ದಾರೆ.

ಆದರೂ, ಉಕ್ರೇನ್‌ನ ಯುರೋಪಿಯನ್ ಮಿತ್ರರಾಷ್ಟ್ರಗಳು ಆ ಸಂಕಷ್ಟದಲ್ಲಿರುವ ದೇಶದ ಸಹಾಯಕ್ಕಾಗಿ ಇಷ್ಟು ಬೇಗ ಒಟ್ಟುಗೂಡುತ್ತವೆ ಎಂಬುದನ್ನು ಟ್ರಂಪ್ ಬಹುಶಃ ನಿರೀಕ್ಷಿಸಿರಲಿಕ್ಕಿಲ್ಲ. ಶ್ವೇತಭವನದಲ್ಲಿನ ಬಿಸಿಯೇರಿದ ವಾಗ್ವಾದವನ್ನು ನೇರ ಪ್ರಸಾರ ಮಾಡಿದ ಕೆಲವೇ ಗಂಟೆಗಳಲ್ಲಿ ಯುರೋಪಿಯನ್ ಒಕ್ಕೂಟದ ವಿದೇಶಾಂಗ ವ್ಯವಹಾರಗಳು ಮತ್ತು ಭದ್ರತಾ ನೀತಿಯ ಉನ್ನತ ಪ್ರತಿನಿಧಿ ಕಾಜಕಲ್ಲಾಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು. ‘‘ನಾವು ಉಕ್ರೇನ್‌ಗೆ ಬೆಂಬಲವಾಗಿ ನಿಲ್ಲುತ್ತೇವೆ. ಆಕ್ರಮಣಕಾರರ ವಿರುದ್ಧ ಹೋರಾಡುವುದನ್ನು ಮುಂದುವರಿಸಲು ನಾವು ಉಕ್ರೇನ್‌ಗೆ ನಮ್ಮ ಬೆಂಬಲವನ್ನು ಹೆಚ್ಚಿಸುತ್ತೇವೆ’’ ಎಂದಿದ್ದರು. ‘‘ಇಂದು, ಮುಕ್ತ ಜಗತ್ತಿಗೆ ಹೊಸ ನಾಯಕನ ಅಗತ್ಯವಿದೆ ಎಂಬುದು ಸ್ಪಷ್ಟವಾಯಿತು. ಈ ಸವಾಲನ್ನು ತೆಗೆದುಕೊಳ್ಳುವುದು ನಮ್ಮ ಜವಾಬ್ದಾರಿ ಯಾಗಿದೆ’’ ಎಂದು ಅವರು ಬರೆದಿದ್ದರು.

ತನ್ನ ಪ್ರಸಕ್ತ ಹುದ್ದೆಯನ್ನು ವಹಿಸಿಕೊಳ್ಳುವ ಮೊದಲು, ಕಲ್ಲಾಸ್ ಅವರು ಎಸ್ಟೋನಿಯಾದ ಪ್ರಧಾನಿಯಾಗಿದ್ದರು. ಇದು ಒಂದು ಕಾಲದಲ್ಲಿ ಸೋವಿಯತ್ ಆಳ್ವಿಕೆಯಲ್ಲಿದ್ದ ಮತ್ತು ಪುಟಿನ್ ಮತ್ತು ಅವರ ಬೆಂಬಲಿಗರು ಇನ್ನೂ ತಮ್ಮ ದುರಾಸೆಯ ಕಣ್ಣುಗಳನ್ನು ಹೊಂದಿದ್ದ ಸಣ್ಣ, ಆದರೆ ಸ್ವಾಭಿಮಾನಿ ಬಾಲ್ಟಿಕ್ ಗಣರಾಜ್ಯಗಳಲ್ಲಿ ಒಂದಾಗಿದೆ. ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್ ಉಕ್ರೇನ್‌ನೊಂದಿಗೆ ಸಾರ್ವಜನಿಕವಾಗಿ ಒಗ್ಗಟ್ಟಿನ ಪ್ರದರ್ಶನವನ್ನು ವ್ಯಕ್ತಪಡಿಸಿದರು. ಅವರು ಝೆಲೆನ್‌ಸ್ಕಿಯನ್ನು ತಮ್ಮ ಅಧಿಕೃತ ನಿವಾಸಕ್ಕೆ ಆಹ್ವಾನಿಸಿದರು ಮತ್ತು ಶ್ವೇತಭವನದಲ್ಲಿ ನಿರಾಕರಿಸಲಾದ ಗೌರವವನ್ನು ಮತ್ತು ಕೆಲವು ಗಣನೀಯ ಸಹಾಯವನ್ನು ಸಹ ನೀಡಿದರು. ಇದರ ನಂತರ ಯುರೋಪಿಯನ್ ನಾಯಕರ ದೊಡ್ಡ ಸಭೆ ನಡೆಯಿತು. ಅದು ಉಕ್ರೇನ್‌ನ ಸಾರ್ವಭೌಮತ್ವಕ್ಕೆ ಅವರ ಬೆಂಬಲವನ್ನು ಪುನರುಚ್ಚರಿಸಿತು.

ಅವರ ಎಲ್ಲಾ ಧೈರ್ಯಶಾಲಿ ನಿಲುವುಗಳಿಗೆ, ಯುರೋಪಿಯನ್ ರಾಜಕಾರಣಿಗಳಿಗೆ ರಶ್ಯದ ಆಕ್ರಮಣದಿಂದ ಉಕ್ರೇನ್ ಅನ್ನು ರಕ್ಷಿಸಲು ಮಿಲಿಟರಿ ಬಲದ ಕೊರತೆಯಿದೆ ಎಂದು ತಿಳಿದಿದೆ. ಟ್ರಂಪ್ ಉಕ್ರೇನ್‌ಗೆ ಮಿಲಿಟರಿ ಸಹಾಯವನ್ನು ಹಠಾತ್ತನೆ ಹಿಂದೆಗೆದುಕೊಳ್ಳುವುದನ್ನು ಮರುಪರಿಶೀಲಿಸುತ್ತಾರೆ ಎಂದು ಅವರು ಇನ್ನೂ ಆಶಿಸುತ್ತಾರೆ. ಬಹುಶಃ ಆ ದೇಶದ ಅಮೂಲ್ಯ ಖನಿಜ ಸಂಪನ್ಮೂಲಗಳ ಲಾಭ ಪಡೆಯಲು ಕಾದಿರುವ ಅಮೆರಿಕನ್ ಕಂಪೆನಿಗಳ ಒತ್ತಾಯದ ಬಳಿಕ ಅದು ಆಗಬಹುದು.

ವರ್ತಮಾನದ ಬೆಳಕಿನಲ್ಲಿ 1990ರ ‘ಗ್ರಂಥ’ ಸಂಚಿಕೆಯನ್ನು ಓದುವುದು ಆಸಕ್ತಿದಾಯಕ ಮತ್ತು ಕುತೂಹಲಕಾರಿಯಾಗಿತ್ತು. ರಶ್ಯದ ಅಪ್ರಬುದ್ಧತೆ ಮತ್ತು ಅಮೆರಿಕನ್ ಪ್ರತ್ಯೇಕತಾವಾದದ ಬಗ್ಗೆ ಸಾಂದರ್ಭಿಕ ಎಚ್ಚರಿಕೆ ಅಲ್ಲಿ ಕಂಡಿತು. ಆದರೂ, ಈ ಸಂವಾದದ ಒಂದು ಹೇಳಿಕೆಯೊಂದಿಗೆ ನಾನು ಈ ಅಂಕಣವನ್ನು ಕೊನೆಗೊಳಿಸುತ್ತೇನೆ. ಅದು ಸ್ಟೈನರ್ ಮತ್ತು ಸಿನ್ಯಾವ್ಸ್ಕಿಯವರ ಹೇಳಿಕೆಗಳಿಗಿಂತ ಹೆಚ್ಚು ದೂರದೃಷ್ಟಿಯನ್ನು ಹೊಂದಿತ್ತು. ಇದು ಪೂರ್ವ ಜರ್ಮನ್ ಭಿನ್ನಮತೀಯ ಬರಹಗಾರ ಜುರೆಕ್ ಬೆಕರ್ ಅವರ ಮಾತು: ‘‘ಇಲ್ಲಿ ಪಶ್ಚಿಮದಲ್ಲಿ, ನಾವು ಯಾವುದೇ ನಿರ್ದಿಷ್ಟ ಗುರಿ ಅಥವಾ ಉದ್ದೇಶವನ್ನು ಹೊಂದಿರದ ಸಮಾಜಗಳಲ್ಲಿ ನೆಲೆಸಿದ್ದೇವೆ. ಯಾವುದೇ ಮಾರ್ಗದರ್ಶಿ ತತ್ವವಿದ್ದರೆ, ಅದು ಗ್ರಾಹಕೀಕರಣ. ಸೈದ್ಧಾಂತಿಕವಾಗಿ, ಭೂಮಿ ನಶಿಸುವವರೆಗೂ ಮತ್ತು ಪ್ರಸ್ತುತ ಪ್ರವೃತ್ತಿಗಳನ್ನು ಗಮನಿಸಿದರೆ, ಅದು ನಿಖರವಾಗಿ ಏನಾಗುತ್ತದೆಯೋ ಅಲ್ಲಿಯವರೆಗೂ ನಾವು ನಮ್ಮ ಬಳಕೆಯನ್ನು ಹೆಚ್ಚಿಸಬಹುದು’’.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ರಾಮಚಂದ್ರ ಗುಹಾ

contributor

Similar News