ಕಿವೀಸ್ ಗೆಲುವನ್ನು ಪ್ರಶಂಸಿಸುತ್ತಾ...
ಕ್ರಿಕೆಟ್, ಮೊದಲನೆಯದಾಗಿ ಮತ್ತು ಮುಖ್ಯವಾಗಿ, ತಂಡದ ಆಟ ಎಂದು ನ್ಯೂಝಿಲ್ಯಾಂಡ್ ತಂಡದವರು ತೋರಿಸಿದ್ದಾರೆ. ಯಾವಾಗಲೂ ವೈಯಕ್ತಿಕ ಪ್ರತಿಭೆ ಮತ್ತು ಹಿಂದಿನ ಸಾಧನೆಗಳಿಗಿಂತಲೂ ಒಗ್ಗೂಡಿ ಆಡುವುದು ಮಾತ್ರವೇ ತಂಡದ ಯಶಸ್ಸಿಗೆ ಪೂರಕವಾಗಿರುತ್ತದೆ.
ನಾನು ಚಿನ್ನಸ್ವಾಮಿ ಸ್ಟೇಡಿಯಂನ ರಸ್ತೆಯಲ್ಲಿ ವಾಸಿಸುತ್ತಿದ್ದೇನೆ. ಸಾಮಾನ್ಯವಾಗಿ ಅಲ್ಲಿ ಟೆಸ್ಟ್ ಪಂದ್ಯದ ಆರಂಭವನ್ನು ವೀಕ್ಷಿಸುವುದನ್ನು ಎಂದಿಗೂ ತಪ್ಪಿಸಿಕೊಳ್ಳುತ್ತಿರಲಿಲ್ಲ. ಆದರೆ ಅಕ್ಟೋಬರ್ 16ರಂದು ಕೆಲವು ಅಕಾಡಮಿಕ್ ಕೆಲಸಗಳನ್ನು ಮುಗಿಸಬೇಕಾಗಿತ್ತು. ಅದಲ್ಲದೆ, ನ್ಯೂಝಿಲ್ಯಾಂಡ್ ತನ್ನ ಇತ್ತೀಚಿನ ಶ್ರೀಲಂಕಾ ಪ್ರವಾಸದಲ್ಲಿ ಕಳಪೆ ಪ್ರದರ್ಶನ ನೀಡಿದ್ದರಿಂದ ಮತ್ತು ಕೇನ್ ವಿಲಿಯಮ್ಸನ್ ಗಾಯದಿಂದಾಗಿ ಪಂದ್ಯದಲ್ಲಿ ಇಲ್ಲದೆ ಇದ್ದುದರಿಂದ, ಚೆನ್ನಾಗಿ ಆಡಿದರೆ ಆಮೇಲಿನದನ್ನು ವೀಕ್ಷಿಸಿದರಾಯಿತು ಎಂದುಕೊಂಡೆ.
ಹಾಗಾಗಿ ಭಾರತದ ಪ್ರಬಲ ಬ್ಯಾಟಿಂಗ್ ತಂಡ 46 ರನ್‌ಗಳಿಗೆ ಆಲೌಟ್ ಆಗುವ ಚಮತ್ಕಾರವನ್ನು ನಾನು ನೋಡಲಾಗಲಿಲ್ಲ. ಗೌತಮ್ ಗಂಭೀರ್, ರೋಹಿತ್ ಶರ್ಮಾ ಮತ್ತು ಜೊತೆಗಾರರಂತೆ ನಾನು ಈ ಕಿವೀಸ್ ಆಟಗಾರರ ಮರಳಿ ಮಿಂಚುವ ಗುಣವನ್ನು ತೀವ್ರವಾಗಿಯೇ ಅಂದಾಜು ಮಾಡಿರುವಂತೆ ತೋರುತ್ತದೆ. ಆ ಸಂಜೆ ನಾನು ಕ್ರೀಡಾಂಗಣದಲ್ಲಿ ಕಾಣಿಸಿಕೊಳ್ಳದ ಕಾರಣ, ಆ ತಂಡವನ್ನು ಗೌರವಿಸಲು ಅವರ ದೇಶದ ಶ್ರೇಷ್ಠ ಆಟಗಾರರಲ್ಲಿ ಸಾರ್ವಕಾಲಿಕ ಹನ್ನೊಂದು ಆಟಗಾರರನ್ನು ಆಯ್ಕೆ ಮಾಡಿದೆ.
ಕಾಲ್ಪನಿಕ ತಂಡಗಳ ರಚನೆಯಲ್ಲಿ ಯಾವಾಗಲೂ ಇರುವ ಖುಷಿಯಂತೆ, ಹಾಗೆ ಆಯ್ಕೆ ಮಾಡುವುದು ಖುಷಿ ಕೊಟ್ಟಿತು. ನಾನು ಅಂತಿಮವಾಗಿ ಕಂಡುಕೊಂಡ ತಂಡ ಹೀಗಿತ್ತು: 1. ಗ್ಲೆನ್ ಟರ್ನರ್, 2. ಬರ್ಟ್ ಸಟ್‌ಕ್ಲಿಫ್, 3. ಮಾರ್ಟಿನ್ ಡೊನೆಲ್ಲಿ, 4. ಮಾರ್ಟಿನ್ ಕ್ರೋವ್ (ನಾಯಕ), 5. ಕೇನ್ ವಿಲಿಯಮ್ಸನ್, 6. ಬ್ರೆಂಡನ್ ಮೆಕಲಮ್ (ವಿಕೆಟ್-ಕೀಪರ್ ), 7. ಕ್ರಿಸ್ ಕೈರ್ನ್ಸ್, 8. ರಿಚರ್ಡ್ ಹ್ಯಾಡ್ಲೀ, 9. ಡೇನಿಯಲ್ ವೆಟ್ಟೋರಿ, 10. ಶೇನ್ ಬಾಂಡ್, 11. ಟ್ರೆಂಟ್ ಬೌಲ್ಟ್.
ಇವರಲ್ಲಿ ನಾಲ್ವರು ಅಧಿಕೃತವಾಗಿ ಶ್ರೇಷ್ಠ ಕ್ರಿಕೆಟಿಗರು-ಡೊನೆಲ್ಲಿ, ಕ್ರೋವ್, ವಿಲಿಯಮ್ಸನ್ ಮತ್ತು ಹ್ಯಾಡ್ಲೀ-ಮತ್ತು ಇತರರೆಲ್ಲರೂ ತುಂಬಾ ಉತ್ತಮರು. ಯಾರಾದರೂ ಅವರನ್ನು ಸಿಡ್ನಿಯಲ್ಲಿನ ಆಸ್ಟ್ರೇಲಿಯದ ಸಾರ್ವಕಾಲಿಕ ಹನ್ನೊಂದರ ತಂಡದ ವಿರುದ್ಧ ಅಥವಾ ಚೆನ್ನೈನಲ್ಲಿ ಭಾರತೀಯ ಸಾರ್ವಕಾಲಿಕ ಹನ್ನೊಂದರ ತಂಡದ ವಿರುದ್ಧ ಬೆಂಬಲಿಸಲಿಕ್ಕಿಲ್ಲ. ಆದರೆ ವೆಲ್ಲಿಂಗ್ಟನ್‌ನ ಬೇಸಿನ್ ರಿಸರ್ವ್ ನಲ್ಲಿರುವ ತವರಿನಲ್ಲಿ ಅವರು ಸದಾ ಮೆಚ್ಚಿನವರಾಗಿಯೇ ಇರುತ್ತಾರೆ.
ಇಂತಹದೊಂದು ತಂಡವನ್ನು ಆಯ್ಕೆ ಮಾಡಿದ ಬಳಿಕ, ಮೊದಲ ದಿನದ ಪಂದ್ಯ ನೋಡದಿದ್ದುದಕ್ಕಾಗಿ ಮೂಡಿದ್ದ ಬೇಸರ ಇಲ್ಲವಾಯಿತು. ಮರುದಿನ ಬೆಳಗ್ಗೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹೊರಟೆ. ಸದಸ್ಯರ ಸ್ಟ್ಯಾಂಡ್‌ನ ಮೇಲಿನ ಹಂತದ ಮುಂಭಾಗದ ಸಾಲಿನಲ್ಲಿ ನನಗೆ ಉತ್ತಮವಾದ ಆಸನವಿದೆ. ಸುಮಾರು ಒಂದು ಸಾವಿರ ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಬಹುದಾದ ಸ್ಟ್ಯಾಂಡ್‌ನಲ್ಲಿ, ಆ ದಿನ ನಿಖರವಾಗಿ ಮೂವತ್ತು ಜನರಷ್ಟೇ ಇದ್ದರು. ಹತ್ತು ಸದಸ್ಯರು ಮತ್ತು ಇಪ್ಪತ್ತು ಪೊಲೀಸರು (ಐಪಿಎಲ್ ಪಂದ್ಯವಾಗಿದ್ದರೆ ಅದು ತುಂಬಿರುತ್ತಿತ್ತು). ಬೆಂಗಳೂರಿನಲ್ಲಿ ಬೇರುಗಳಿರುವ ಹಾಗೂ ಭಾರತದ ಇಬ್ಬರು ಶ್ರೇಷ್ಠ ಬ್ಯಾಟ್ಸ್‌ಮನ್‌ಗಳ ಹೆಸರನ್ನು ಹೊತ್ತಿರುವ ಕಿವೀಸ್ ತಂಡದ ಎಡಗೈ ಬ್ಯಾಟರ್ ರಚಿನ್ ರವೀಂದ್ರ, ನ್ಯೂಝಿಲ್ಯಾಂಡ್ ಕ್ರಿಕೆಟ್‌ನ ಗಟ್ಟಿ ಆಟಗಾರ ಮತ್ತು ಸ್ವಿಂಗ್ ಬೌಲರ್ ಟಿಮ್ ಸೌಥಿ ಅವರೊಂದಿಗೆ ಅಮೋಘ ಶತಕ ಸಿಡಿಸುವುದನ್ನು ನಾನು ಅಲ್ಲಿ ಕುಳಿತು ನೋಡಿದೆ. ಅವರ ಆಟ ಎಲ್ಲರನ್ನೂ ಆಸನದ ತುದಿಯಲ್ಲಿ ಕೂರುವಂತೆ ಮಾಡಿತ್ತು.
ಅಂತಿಮವಾಗಿ, ನ್ಯೂಝಿಲ್ಯಾಂಡ್ 350ಕ್ಕೂ ಹೆಚ್ಚು ಮುನ್ನಡೆ ಸಾಧಿಸಿತು. ಭಾರತ ಹೇಗೆ ಪ್ರತಿಕ್ರಿಯಿಸುತ್ತದೆ? ಅವರು ಎರಡನೇ ಬಾರಿಗೆ ಬ್ಯಾಟ್ ಮಾಡುವಾಗ ಆ ಹೀನಾಯ ಮೊದಲ ಇನ್ನಿಂಗ್ಸ್ ಪ್ರದರ್ಶನದ ನೆನಪುಗಳು ಅವರನ್ನು ಕಾಡಲಿವೆಯೆ? ನಾನು ಹಿಂದೆಂದೂ ಬ್ಯಾಟ್ ಅನ್ನು ಲೈವ್ ಆಗಿ ನೋಡದ ಅದ್ಭುತ ಪ್ರತಿಭಾವಂತ ಯಶಸ್ವಿ ಜೈಸ್ವಾಲ್ ಅವರನ್ನು ವೀಕ್ಷಿಸಲು ವಿಶೇಷವಾಗಿ ಉತ್ಸುಕನಾಗಿದ್ದೆ. ಅವರು ಕೆಲವು ಸೊಗಸಾದ ಡ್ರೈವ್‌ಗಳನ್ನು ಆಡಿದರು. ಆದರೆ ನಂತರ ಅದು ಸಾಧ್ಯವಾಗಲಿಲ್ಲ. ನಿಧಾನ ಗತಿಯ ಎಡಗೈ ಆಟಗಾರ ಅಜಾಝ್ ಪಟೇಲ್‌ರ ವಿಪರೀತ ಆತುರ ಸುಲಭ ಸ್ಟಂಪಿಂಗ್‌ಗೆ ಕಾರಣವಾಯಿತು. ಆದರೂ, ಶರ್ಮಾ ಮತ್ತು ಕೊಹ್ಲಿ ಭರವಸೆಯೊಂದಿಗೆ ಆಡಿದರು. ದುರದೃಷ್ಟವಶಾತ್ ಫಾರ್ವರ್ಡ್ ಡಿಫೆನ್ಸಿವ್ ಪ್ರಾಡ್‌ನಿಂದ ಸ್ಟಂಪ್‌ಗೆ ಹಿಂದಿರುಗಿದ ಬಾಲ್‌ಗೆ ಔಟಾದರು.
ನಂತರ ಸರ್ಫರಾಝ್ ಖಾನ್ ಬಂದರು. ಹಿಂದೆಂದೂ ಅವರ ಬ್ಯಾಟಿಂಗ್ ನೋಡಿರಲಿಲ್ಲ. ಯುವಕನ ಮೈಕಟ್ಟು, ಕುಣಿದು ಕುಪ್ಪಳಿಸಿದ ಉತ್ಸಾಹ, ಚಿನ್ನಸ್ವಾಮಿ ಕ್ರೀಡಾಂಗಣದ ಕಣ್ಮಣಿ ಜಿ.ಆರ್. ವಿಶ್ವನಾಥ್ ಅವರಂತಹ ಒಂದು ಕಾಲದಲ್ಲಿ ಅತ್ಯಂತ ಪ್ರಿಯವಾದ ಬ್ಯಾಟರ್ ಅನ್ನು ನೆನಪಿಸಿತು. ಅವರು ಸ್ಲಿಪ್‌ಗಳ ಮೇಲೆ ಮತ್ತು ದೂರದಲ್ಲಿ ಕೆಲವು ಉಸಿರು ಕಟ್ಟುವ ಕಟ್‌ಗಳನ್ನು ಆಡಿದಾಗ ಈ ಹೋಲಿಕೆ ಎದ್ದು ಕಾಣುತ್ತದೆ.
ದಿನದ ಕೊನೆಯ ಓವರ್‌ನಲ್ಲಿ ಕೊಹ್ಲಿ ಔಟಾದರು. ಆದರೆ ಭಾರತ ಹಾಕಿದ ಸವಾಲು ಮರುದಿನ ಬೆಳಗ್ಗೆ ಆಟ ಪ್ರಾರಂಭವಾಗುವ ಮೊದಲು ಮರಳಲು ನನ್ನನ್ನು ಉತ್ತೇಜಿಸಿತು. ಪೂರ್ಣ ಅವಧಿಗೆ ಮತ್ತು ಹೆಚ್ಚಿನದಕ್ಕಾಗಿ ನಾವು ಸರ್ಫರಾಝ್ ಮತ್ತು ರಿಷಬ್ ಪಂತ್ ನಡುವಿನ ಅದ್ಭುತ, ಸ್ಟ್ರೋಕ್ ತುಂಬಿದ ಪಾಲುದಾರಿಕೆಗೆ ಸಾಕ್ಷಿಯಾದೆವು. ಒಬ್ಬರ ಡ್ರೈವ್‌ಗಳು, ಕಟ್‌ಗಳು, ಲಾಫ್ಟೆಡ್ ಶಾಟ್‌ಗಳು ಮತ್ತು ಇನ್ನೊಬ್ಬರ ರಿವರ್ಸ್ ಸ್ವೀಪ್‌ಗಳು ಕೆಲವೇ ಗಂಟೆಗಳಲ್ಲಿ ಆಟದ ಸಮತೋಲನವನ್ನು ಬದಲಾಯಿಸಿದವು. ಕೊರತೆ ನೀಗುತ್ತಿದ್ದಂತೆ, ಕೈಯಲ್ಲಿ ಇನ್ನೂ ಆರು ವಿಕೆಟ್‌ಗಳಿರುವಾಗ, ನನ್ನ ಪಕ್ಕದಲ್ಲಿದ್ದ ಯುವ ಅಭಿಮಾನಿಯೊಬ್ಬರು ನಾಲ್ಕನೇ ಇನಿಂಗ್ಸ್‌ನಲ್ಲಿ ನ್ಯೂಝಿಲ್ಯಾಂಡ್‌ಗೆ ಭಾರತ ಯಾವ ರೀತಿಯ ಗುರಿಯನ್ನು ನಿಗದಿಪಡಿಸುತ್ತದೆ ಮತ್ತು ಕಿವೀಸ್ ಇದನ್ನು ನಿಭಾಯಿಸಲು ಸಾಧ್ಯವೇ ಎಂದು ಊಹಿಸಲು ಪ್ರಾರಂಭಿಸಿದರು.
ಎರಡನೇ ಇನಿಂಗ್ಸ್ ಮುಕ್ತಾಯಕ್ಕೆ ಬರುತ್ತಿದ್ದಂತೆ, ಕಿವೀಸ್ ಇನ್ನೂ ಎರಡನೇ ಹೊಸ ಚೆಂಡಿನ ಮೂಲಕ ಕೊನೆಯ ಎಸೆತವನ್ನು ಹೊಂದಿತ್ತು. ಅದು ನಿರ್ಣಾಯಕ ಎಂದು ಸಾಬೀತಾಯಿತು. ಪ್ರಯಾಸಕರ ಹೊಡೆತವನ್ನು ಆಡಿದ ಸರ್ಫರಾಝ್‌ರನ್ನು ಟಿಮ್ ಸೌಥಿ ಔಟ್ ಮಾಡಿದರು. ನಂತರ ಪಂತ್ ಅವರನ್ನು ವಿಲಿಯಂ ಒ’ರೂರ್ಕ್ ಬೌಲ್ಡ್ ಮಾಡಿದರು. ರಾಹುಲ್ ಮತ್ತು ಜಡೇಜಾ ಅವರನ್ನು ಸಹ ಔಟ್ ಮಾಡಿದರು. ನಾಲ್ಕನೇ ಇನ್ನಿಂಗ್ಸ್ ಗುರಿ ಸಂಪೂರ್ಣವಾಗಿ ಸಾಧಾರಣವಾಗಿತ್ತು. 2001ರಲ್ಲಿ ಕೋಲ್ಕತಾದಲ್ಲಿ ಲಕ್ಷ್ಮಣ್, ದ್ರಾವಿಡ್ ಮತ್ತು ಹರ್ಭಜನ್ ಮೂಲಕ ಆಸ್ಟ್ರೇಲಿಯಕ್ಕೆ ಮಾಡಿದ್ದನ್ನು 2024ರಲ್ಲಿ ಬೆಂಗಳೂರಿನಲ್ಲಿ ನ್ಯೂಝಿಲ್ಯಾಂಡ್‌ಗೆ ಭಾರತ ಮಾಡಲಿದೆ ಎಂಬ ಯಾವ ಕಲ್ಪನೆಗಳೂ ಇದ್ದಿರಲಿಲ್ಲ.
ಆ ದಿನ ಸಂಜೆ ನಾನು ಮೈದಾನದಿಂದ ಹೊರ ನಡೆಯುತ್ತಿರುವಾಗ ಒಬ್ಬ ಸಹ ಸದಸ್ಯರು, ‘‘ಸರ್, ನಾವು ನಿಮ್ಮನ್ನು ಟೆಸ್ಟ್ ಪಂದ್ಯಗಳಲ್ಲಿ ಮಾತ್ರ ನೋಡುತ್ತೇವೆ; ಎಂದಿಗೂ ಐಪಿಎಲ್ ಪಂದ್ಯಗಳಲ್ಲಿ ನೋಡಿಲ್ಲ’’ ಎಂದಿದ್ದರು. ಅದು ಕೇವಲ ವಾಸ್ತವಿಕ ಅವಲೋಕನವೋ ಅಥವಾ ಸೌಮ್ಯವಾದ ಶಿಕ್ಷೆಯೋ ಎಂದು ನನಗೆ ಖಚಿತವಿಲ್ಲ. ಎರಡನೆಯದಾದರೆ, ನಾನು ಅದನ್ನು ಹೆಮ್ಮೆಯ ಬ್ಯಾಡ್ಜ್ ಆಗಿ ಧರಿಸುತ್ತೇನೆ. ಐಪಿಎಲ್ ಪಂದ್ಯಗಳು ಮುಗಿದ ಕೆಲವೇ ನಿಮಿಷಗಳಲ್ಲಿ ಮರೆತುಹೋಗುತ್ತವೆ, ಆದರೆ ಇಲ್ಲಿ ನಾನು ವೀಕ್ಷಿಸಿದ ವಾರಗಳ ನಂತರವೂ ಆ ಟೆಸ್ಟ್ ಪಂದ್ಯದ ಎರಡು ದಿನಗಳನ್ನು ಮರು ಕಲ್ಪಿಸಿಕೊಳ್ಳ ಬಲ್ಲೆ. ರವೀಂದ್ರ ಮತ್ತು ಸರ್ಫರಾಜ್ ಬ್ಯಾಟಿಂಗ್‌ನ ನೆನಪುಗಳು, ಅವರು ಆಡಿದ ಸ್ಟ್ರೋಕ್‌ಗಳ ವಿವರಗಳು ಮತ್ತು ಒ’ರೂರ್ಕ್ ಮತ್ತು ಹೆನ್ರಿ ಅವರ ಬೌಲಿಂಗ್ ಮತ್ತು ಅವರು ಪಡೆದ ವಿಕೆಟ್‌ಗಳು ಇನ್ನೂ ಹೆಚ್ಚು ಕಾಲ ನನ್ನ ಮನಸ್ಸಿನಲ್ಲಿ ಉಳಿಯುತ್ತವೆ.
ನಾನು ಟಿವಿಯಲ್ಲಿ ಪುಣೆಯಲ್ಲಿ ನಡೆದ ಎರಡನೇ ಟೆಸ್ಟ್‌ನ ಬಹುಪಾಲು ವೀಕ್ಷಿಸಿದ್ದೇನೆ. ಕಿವೀಸ್ ತಂಡ ತನಗಿಂತ ಹೆಚ್ಚು ಶ್ರೇಷ್ಠವೆಂದು ಪರಿಗಣಿಸಲ್ಪಟ್ಟ ತಂಡವನ್ನು ಹೇಗೆ ಮಣಿಸಿತಲ್ಲ ಎಂದು ಆಶ್ಚರ್ಯವಾಯಿತು. ಈ ಬಾರಿ, ಅವರ ಹೀರೋಗಳು ಆತ್ಮವಿಶ್ವಾಸದಿಂದ ನಾಯಕತ್ವ ವಹಿಸಿದ್ದ ಮತ್ತು ಎರಡನೇ ಇನಿಂಗ್ಸ್ ನಲ್ಲಿ ತಮ್ಮ ಅದ್ಭುತ ವೇಗದಿಂದಲೇ ಪಂದ್ಯವನ್ನು ಭಾರತದ ಹಿಡಿತದಿಂದ ತೆಗೆದುಕೊಂಡಿದ್ದ ಟಾಮ್ ಲ್ಯಾಥಮ್ ಮತ್ತು ಎಡಗೈ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್. ಆದರೆ ಈ ಪಂದ್ಯ ಆಟದ ಅತ್ಯಂತ ಪ್ರಯಾಸಕರ ರೂಪದಲ್ಲಿ ಇದ್ದಂತೆ ಕಾಣಿಸಲಿಲ್ಲ.
ಕೊನೆಯಲ್ಲಿ, ಲೇಖನದ ಆರಂಭದಲ್ಲಿ ನಾನು ನೀಡಿದ ನ್ಯೂಝಿಲ್ಯಾಂಡ್‌ನ ಸಾರ್ವಕಾಲಿಕ ಹನ್ನೊಂದರ ಪಟ್ಟಿಗೆ ಹಿಂದಿರುಗೋಣ. ಖಂಡಿತವಾಗಿಯೂ ಇತರ ಕ್ರಿಕೆಟ್ ಅಭಿಮಾನಿಗಳು ನನ್ನ ಕೆಲವು ಆಯ್ಕೆಗಳ ಬಗ್ಗೆ ತಕರಾರು ಎತ್ತುತ್ತಾರೆ. ಕೆಲವರು 1930ರ ದಶಕದ ಅತ್ಯುತ್ತಮ ಸೀಮ್ ಬೌಲರ್, ಜ್ಯಾಕ್ ಕೌವೀ ಅವರನ್ನು ಕೇರ್ನ್ಸ್ ಗಿಂತ ಮುಂದೆ ಆಯ್ಕೆ ಮಾಡಬಹುದು. ಮೆಕಲಮ್‌ಗಿಂತ ಕೆನ್ ವಡ್ಸ್ವರ್ತ್ ಅಥವಾ ಬಿ.ಜೆ. ವಾಟ್ಲಿಂಗ್ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಆಗಿ ಉತ್ತಮ ಆಯ್ಕೆ ಎಂದು ಮತ್ತೆ ಕೆಲವರು ಭಾವಿಸಬಹುದು.
ಆದರೂ, ಭಾರತದಲ್ಲಿ ಈ ಸರಣಿಯನ್ನು ಗೆದ್ದ ನ್ಯೂಝಿಲ್ಯಾಂಡ್ ತಂಡದ ಯಾವುದೇ ಸದಸ್ಯರನ್ನು ತಮ್ಮ ದೇಶದ ಸಾರ್ವಕಾಲಿಕ ಹನ್ನೊಂದರ ಭಾಗವಾಗುವರೆಂದು ಭಾವಿಸುವುದು ಈಗ ಸಾಧ್ಯವಿಲ್ಲ. ಕೆನ್ ವಿಲಿಯಮ್ಸನ್ ಮೊದಲ ಎರಡು ಟೆಸ್ಟ್ ಗಳನ್ನು ಆಡಲಿಲ್ಲ; ಮತ್ತು ರಚಿನ್ ರವೀಂದ್ರ ಅವರು ತುಂಬಾ ಉತ್ತಮ ಆಟಗಾರರೋ ಅಥವಾ ಅಧಿಕೃತವಾಗಿ ಶ್ರೇಷ್ಠರೋ ಎಂದು ನಮಗೆ ತಿಳಿಯುವುದಕ್ಕೆ ಕೆಲವು ವರ್ಷಗಳೇ ಆಗಬಹುದು. ಮತ್ತೊಂದೆಡೆ, ಕೊಹ್ಲಿ, ಅಶ್ವಿನ್ ಮತ್ತು ಬುಮ್ರಾ ಯಾವುದೇ ಸಾರ್ವಕಾಲಿಕ ಭಾರತೀಯ ಹನ್ನೊಂದರ ಪಟ್ಟಿಗೆ ಸೇರಿರುತ್ತಾರೆ ಮತ್ತು ಜಡೇಜ ಹಾಗೂ ಪಂತ್ ಕೂಡ ಎಲ್ಲೋ ವಿವಾದದಲ್ಲಿರುತ್ತಾರೆ. ಈ ಎಲ್ಲವೂ ಭಾರತದಲ್ಲಿ ಕಳೆದ ಕೆಲವು ವಾರಗಳಲ್ಲಿ ನ್ಯೂಝಿಲ್ಯಾಂಡ್ ಏನನ್ನು ಸಾಧಿಸಿದೆ ಎಂಬುದರ ಸಂಪೂರ್ಣ ಚಿತ್ರವನ್ನು ಸ್ಪಷ್ಟವಾಗಿ ತೋರಿಸುತ್ತದೆ. ಕ್ರಿಕೆಟ್, ಮೊದಲನೆಯದಾಗಿ ಮತ್ತು ಮುಖ್ಯವಾಗಿ, ತಂಡದ ಆಟ ಎಂದು ಅವರು ತೋರಿಸಿದ್ದಾರೆ. ಯಾವಾಗಲೂ ವೈಯಕ್ತಿಕ ಪ್ರತಿಭೆ ಮತ್ತು ಹಿಂದಿನ ಸಾಧನೆಗಳಿಗಿಂತಲೂ ಒಗ್ಗೂಡಿ ಆಡುವುದು ಮಾತ್ರವೇ ತಂಡದ ಯಶಸ್ಸಿಗೆ ಪೂರಕವಾಗಿರುತ್ತದೆ.