ಅನ್ಯರ ನಂಬಿಕೆಗಳು
ಗಾಂಧಿಯವರ ಸ್ಪಷ್ಟವಾದ ಸೋಲು ಭಾರತ ಮತ್ತು ಭಾರತೀಯರಿಗೆ ಅವರ ಪರಂಪರೆಯ ನವೀಕರಣವನ್ನು ಇನ್ನಷ್ಟು ತುರ್ತಿನದ್ದಾಗಿಸಿದೆ. ಇಸ್ಲಾಮಿಕ್ ಬಹುಸಂಖ್ಯಾತವಾದದ ಪ್ರತಿಪಾದನೆಯಿಂದ ಪಾಕಿಸ್ತಾನದ ಜನರೇನೂ ಹೆಚ್ಚು ಶಾಂತಿ ಅಥವಾ ಸಮೃದ್ಧತೆಯಿಂದಿಲ್ಲ. ಶ್ರೀಲಂಕಾದಲ್ಲಿ ಬೌದ್ಧ ಬಹುಸಂಖ್ಯಾತವಾದ ನೆಮ್ಮದಿ ತಂದಿಲ್ಲ. ಆದ್ದರಿಂದ, ರಾಜಕಾರಣಿಗಳಿಗೆ ಮತ್ತು ಜನಸಾಮಾನ್ಯರಿಗೆ ಧರ್ಮದ ಗಡಿಗಳಾಚೆಗೆ ಸ್ನೇಹವನ್ನು ಬೆಳೆಸುವುದು ಗಣರಾಜ್ಯದ ಆರೋಗ್ಯವನ್ನು ಮರುಸ್ಥಾಪಿಸಲು ಅತ್ಯಗತ್ಯ ಮೊದಲ ಹೆಜ್ಜೆಯಾಗಿರಬಹುದು.
ಆಧುನಿಕ ಜಗತ್ತಿನ ಒಂದು ದೊಡ್ಡ ಸವಾಲೆಂದರೆ, ವಿಭಿನ್ನ ನಂಬಿಕೆಗಳ ಜನರು ಒಟ್ಟಿಗೆ ಶಾಂತಿಯಿಂದ ಬದುಕುವುದು ಹೇಗೆ ಎಂಬುದು. ಮಧ್ಯಪ್ರಾಚ್ಯ ಮತ್ತು ದಕ್ಷಿಣ ಏಶ್ಯದಲ್ಲಿ ಧಾರ್ಮಿಕ ಬಹುಸಂಖ್ಯಾತವಾದದ ಮೇಲೆ ರಾಷ್ಟ್ರ-ರಾಜ್ಯಗಳ ರಚನೆ ಮತ್ತು ಯುರೋಪ್ ಮತ್ತು ಉತ್ತರ ಅಮೆರಿಕಕ್ಕೆ ಕ್ರಿಶ್ಚಿಯನ್ ಅಲ್ಲದ ಜನರ ವಲಸೆ, ಧರ್ಮಾಧಾರಿತ ಕಟು ಸಂಘರ್ಷಕ್ಕೆ ಮತ್ತು ಕೆಲವೊಮ್ಮೆ ಹಿಂಸಾಚಾರಕ್ಕೆ ಕಾರಣವಾಗಿದೆ. ಸಹಿಷ್ಣುತೆ ಮತ್ತು ಪರಸ್ಪರ ತಿಳುವಳಿಕೆಯನ್ನು ಮೀರಿ ಅಹಂಕಾರ ಮತ್ತು ಶ್ರೇಷ್ಠತೆಯ ಪ್ರಜ್ಞೆಯದ್ದೇ ಸಾಮಾನ್ಯವಾಗಿ ಮೇಲುಗೈಯಾಗುತ್ತದೆ.
ಹೆಚ್ಚಿನ ಅಂತರ್‌ಧರ್ಮೀಯ ತಿಳುವಳಿಕೆಯ ವಿಷಯವನ್ನು ಅಮೆರಿಕನ್ ವಿದ್ವಾಂಸ ಥಾಮಸ್ ಆಲ್ಬರ್ಟ್ ಹೊವಾರ್ಡ್ ಅವರು ‘The Faith of Others: A History of Interreligious Dialogue’(ನ್ಯೂ ಹೆವನ್: ಯೇಲ್ ಯೂನಿವರ್ಸಿಟಿ ಪ್ರೆಸ್, 2021) ಎಂಬ ತಮ್ಮ ಪುಸ್ತಕದಲ್ಲಿ ವಿವರಿಸಿದ್ದಾರೆ.
ಹೊವಾರ್ಡ್ ಅವರ ಪುಸ್ತಕದ ಬಹುಪಾಲು ಸ್ವತಃ ಅವರಿಗೆ ಪರಿಚಿತವಾಗಿರುವ ಕ್ರಿಶ್ಚಿಯನ್ ಧರ್ಮದ ಮೇಲೆ ಕೇಂದ್ರೀಕೃತವಾಗಿದೆ. ಕ್ರಿಶ್ಚಿಯನ್ ಧರ್ಮಶಾಸ್ತ್ರಜ್ಞರು ತಮ್ಮ ಧರ್ಮವೇ ನಿಜವಾದ ಧರ್ಮ ಎಂದೊಮ್ಮೆ ಭಾವಿಸಿದ್ದರು. ಇಪ್ಪತ್ತನೇ ಶತಮಾನದಲ್ಲಿ ಈ ಭಾವನೆ ಬದಲಾಗಲು ಶುರುವಾಯಿತು. ಒಮ್ಮೆ ತನ್ನ ಆಧ್ಯಾತ್ಮಿಕ ಅಹಮಿಕೆಗಾಗಿ ಹೆಚ್ಚು ಗೊತ್ತಾಗಿದ್ದ ಕೆಥೊಲಿಕ್ ಚರ್ಚ್ 1960ರ ದಶಕದಲ್ಲಿ ಇತರ ನಂಬಿಕೆಗಳನ್ನೂ ಸ್ವೀಕರಿಸುವ ಪ್ರಕ್ರಿಯೆಯನ್ನು ನಿಧಾನವಾಗಿ ಪ್ರಾರಂಭಿಸಿತು. ಆಗಸ್ಟ್ 1964ರ ಪೋಪ್ ಪತ್ರದಲ್ಲಿ ‘ಕೆಥೊಲಿಕ್ ಚರ್ಚ್ ವಿವಿಧ ಕ್ರೈಸ್ತೇತರ ಧರ್ಮಗಳ ನೈತಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಗುರುತಿಸುತ್ತದೆ ಮತ್ತು ಗೌರವಿಸುತ್ತದೆ’ ಎಂದು ಸ್ಪಷ್ಟಪಡಿಸಲಾಯಿತು. ಇಪ್ಪತ್ತೈದು ವರ್ಷಗಳ ನಂತರ, ಇನ್ನೊಬ್ಬ ಪೋಪ್ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ, ‘‘ಸಂವಾದವು ಯುದ್ಧತಂತ್ರದ ಉದ್ದೇಶ ಅಥವಾ ಸ್ವ ಹಿತಾಸಕ್ತಿಯಿಂದ ಹುಟ್ಟಿಕೊಂಡಿಲ್ಲ. ಬದಲಾಗಿ, ತನ್ನ ಮಾರ್ಗದರ್ಶಿ ತತ್ವಗಳು, ಅವಶ್ಯಕತೆಗಳು ಮತ್ತು ಘನತೆಯೊಂದಿಗಿನ ಒಂದು ಕ್ರಮವಾಗಿದೆ’’ ಎಂದು ಹೇಳಿದರು.
ಅಂತರ್ ಧರ್ಮೀಯ ಸಂವಾದದ ಇಬ್ಬರು ಭಾರತೀಯ ಪ್ರತಿಪಾದಕರ ಬಗ್ಗೆ ಹೊವಾರ್ಡ್ ಅವರ ಅಧ್ಯಯನದಲ್ಲಿ ಉಲ್ಲೇಖವಿದೆ. ಒಬ್ಬರು ಮೊಗಲ್ ಚಕ್ರವರ್ತಿ ಅಕ್ಬರ್. ಇದಕ್ಕಾಗಿ ಅವರು 1952ರಲ್ಲಿ ಮಖನ್ ಲಾಲ್ ರಾಯ್ ಚೌಧರಿಯವರು ಪ್ರಕಟಿಸಿದ ‘The Din I Ilahi or the Religion of Akbar’ ಎಂಬ ಪುಸ್ತಕವನ್ನು ಹೆಚ್ಚಾಗಿ ಅವಲಂಬಿಸಿದ್ದಾರೆ. ಅಕ್ಬರ್ ತನ್ನ ಸಮಕಾಲೀನ, ಸ್ಪೇನ್ ರಾಜ ಎರಡನೇ ಫಿಲಿಪ್‌ಗೆ ಬರೆದ ಪತ್ರದಿಂದ ನಾನು ವಿಶೇಷವಾಗಿ ಪ್ರಭಾವಿತನಾಗಿದ್ದೆ. ಯಹೂದಿಗಳು ಮತ್ತು ಮುಸ್ಲಿಮರನ್ನು ಹೊರಹಾಕಿದ ನಂತರ, ಸ್ಪೇನ್ ತನ್ನ ಕೆಥೊಲಿಕ್ ಧರ್ಮದಲ್ಲಿ ಹೆಚ್ಚು ಹೆಚ್ಚು ನಿಷ್ಠೆಯನ್ನು ಹೊಂದತೊಡಗಿತ್ತು. ಅಕ್ಬರ್ ಭಾರತೀಯ ಸಂದರ್ಭದಿಂದ ಕಲಿಯಲು ತನ್ನ ಸ್ಪೇನ್ ದೊರೆಯನ್ನು ಕೇಳಿಕೊಂಡ. ‘ಭಾರತದಲ್ಲಿ ಪ್ರತಿಯೊಬ್ಬರೂ ತಮ್ಮ ವಾದಗಳನ್ನು ಮತ್ತು ಕಾರಣಗಳನ್ನು ಬದಿಗಿರಿಸಿ, ತಾವು ಹುಟ್ಟಿ ಶಿಕ್ಷಣ ಪಡೆದ ಧರ್ಮವನ್ನು ಅನುಸರಿಸುತ್ತಾರೆ. ಅದೊಂದು ಉದಾತ್ತ ಗುರಿ. ಹಾಗಾಗಿ ಎಲ್ಲಾ ಧರ್ಮಗಳ ವಿದ್ವಾಂಸರೊಂದಿಗೆ ಒಳ್ಳೆಯ ಬಾಂಧವ್ಯ, ಅವರ ತಿಳುವಳಿಕೆಯ ಮಾತಿನಿಂದ ಪ್ರಯೋಜನ ಸಾಧ್ಯವಾಗುತ್ತದೆ’ ಎಂದು ಅಕ್ಬರ್ ತನ್ನ ಪತ್ರದಲ್ಲಿ ಹೇಳಿದ್ದ.
ಅಕ್ಬರ್ ಆಗಿಹೋದ ಹಲವು ಶತಮಾನಗಳ ನಂತರ ಬದುಕಿದ್ದ ಸ್ವಾಮಿ ವಿವೇಕಾನಂದರು ಹೊವಾರ್ಡ್ ಪರಿಗಣಿಸುವ ಎರಡನೇ ಭಾರತೀಯ ಮಾದರಿ. ಇತರ ವ್ಯಾಖ್ಯಾನಕಾರರಂತೆ, ಅವರು 1893ರಲ್ಲಿ ಚಿಕಾಗೋದಲ್ಲಿ ವಿಶ್ವ ಧರ್ಮಗಳ ಸಮ್ಮೇಳನದಲ್ಲಿನ ವಿವೇಕಾನಂದರ ಭಾಷಣವನ್ನು ಪ್ರಸ್ತಾಪಿಸುತ್ತಾರೆ. ವಿವಿಧ ಧಾರ್ಮಿಕ ವ್ಯಕ್ತಿಗಳಲ್ಲಿ ಮಾನವ ಸಹೋದರತ್ವದ ಮನೋಭಾವವನ್ನು ಉತ್ತೇಜಿಸಲು ಮತ್ತು ಗಾಢವಾಗಿಸಲು ಹಾಗೂ ಶಾಶ್ವತ ಅಂತರ್‌ರಾಷ್ಟ್ರೀಯ ಶಾಂತಿಯನ್ನು ಕಾಯುವ ಭರವಸೆಯಲ್ಲಿ ಜಗತ್ತಿನ ರಾಷ್ಟ್ರಗಳನ್ನು ಹೆಚ್ಚು ಸ್ನೇಹಪರ ನೆಲೆಗೆ ತರಲು ಅವರು ಆ ಸಮ್ಮೇಳನದ ಆದರ್ಶಗಳನ್ನು ನಮಗೆ ಮೊದಲು ಪರಿಚಯಿಸುತ್ತಾರೆ.
ಆನಂತರ ಹೊವಾರ್ಡ್ ಚಿಕಾಗೋದಲ್ಲಿ ವಿವೇಕಾನಂದರು ಮಾಡಿದ ಭಾಷಣದಿಂದ ಕೆಲವು ಆಯ್ದ ಭಾಗಗಳನ್ನು ಕೊಡುತ್ತಾರೆ. ಒಂದು, ‘‘ಜಗತ್ತಿಗೆ ಸಹಿಷ್ಣುತೆ ಮತ್ತು ಸಾರ್ವತ್ರಿಕ ಸ್ವೀಕಾರ ಎರಡನ್ನೂ ಕಲಿಸಿದ ಧರ್ಮಕ್ಕೆ ಸೇರಿದವನು ಎಂದು ಹೆಮ್ಮೆಪಡುತ್ತೇನೆ’’ ಎಂಬ ವಿವೇಕಾನಂದರ ದೃಢೀಕರಣ ಮತ್ತು ಅದೇ ಸಮಯದಲ್ಲಿ, ಹಿಂಸೆಗೊಳಗಾದವರಿಗೆ ಮತ್ತು ನಿರಾಶ್ರಿತರಿಗೆ ಆಶ್ರಯ ನೀಡಿದ ರಾಷ್ಟ್ರಕ್ಕೆ ಸೇರಿದವನು ಎಂದು ಹೆಮ್ಮೆಪಡುತ್ತಾರೆ. ಎರಡು, ಬಹುಶಃ ಇನ್ನೂ ಹೆಚ್ಚು ಸೂಕ್ತವಾದ ವಿವೇಕಾನಂದರ ಉಲ್ಲೇಖ ಹೀಗಿದೆ: ‘ಪಂಥೀಯತೆ, ಧರ್ಮಾಂಧತೆ ಮತ್ತು ಅದೇ ಭಯಾನಕ ವಂಶಸ್ಥ ಮತಾಂಧತೆಗಳು ಈ ಸುಂದರ ಭೂಮಿಯನ್ನು ದೀರ್ಘಕಾಲ ಆಕ್ರಮಿಸಿದ್ದವು. ಆದರೆ ಈಗ ಅದರ ಕೊನೆಗಾಲ ಬಂದಿದೆ ಮತ್ತು ಈ ಬೆಳಗ್ಗೆ (ಸಮ್ಮೇಳನದ ಪ್ರಾರಂಭದಲ್ಲಿ) ಮೊಳಗಿದ ಗಂಟೆ ಎಲ್ಲಾ ಮತಾಂಧತೆಗೆ ಮರಣದಂಡನೆಯಾಗಿರಬಹುದು ಎಂದು ನಾನು ತೀವ್ರವಾಗಿ ಆಶಿಸುತ್ತೇನೆ.’
ಹೊವಾರ್ಡ್ ಅವರು ಇತರ ಸಂದರ್ಭಗಳಲ್ಲಿ ಗಾಂಧಿಯನ್ನು ಉಲ್ಲೇಖಿಸುತ್ತಾರೆ. ಆದರೆ ದುರದೃಷ್ಟವಶಾತ್ ಅವರ ಧಾರ್ಮಿಕ ಚಿಂತನೆಯನ್ನು ಆಳವಾಗಿ ಪರಿಗಣಿಸುವುದಿಲ್ಲ. ವಾಸ್ತವವಾಗಿ, ಗಾಂಧಿಯವರು ಅಕ್ಬರ್ ಅಥವಾ ವಿವೇಕಾನಂದರಿಗಿಂತ ಆಳವಾದ ಮತ್ತು ಹೆಚ್ಚು ಮೂಲಭೂತವಾದ ಅರ್ಥದಲ್ಲಿ ಧಾರ್ಮಿಕ ಬಹುತ್ವವಾದಿಯಾಗಿದ್ದರು. ಅವರು ಅಂತರ್ ಧರ್ಮೀಯ ಸಂವಾದವನ್ನು ಅನುಸರಿಸಿದರು ಮತ್ತು ಅಂತರ್ ಧರ್ಮೀಯ ಸಾಮಾಜಿಕ ಕ್ರಮವನ್ನು ಸಹ ಅಭ್ಯಾಸ ಮಾಡಿದರು. ಅವರ ಸತ್ಯಾಗ್ರಹಗಳು, ದಕ್ಷಿಣ ಆಫ್ರಿಕಾದಲ್ಲಾಗಲಿ ಅಥವಾ ಭಾರತದಲ್ಲಾಗಲಿ, ಪ್ರಪಂಚದ ಎಲ್ಲಾ ಧರ್ಮಗಳ ವ್ಯಕ್ತಿಗಳನ್ನು ತಮ್ಮ ಮಡಿಲಿಗೆ ತರಲು ಪ್ರಯತ್ನಿಸಿದವು. ಅವರ ಆಶ್ರಮಗಳಲ್ಲಿ ವಿವಿಧ ನಂಬಿಕೆಗಳ ಜನರು ನಿಕಟ ಮತ್ತು ನಿರಂತರ ಸಾಮೀಪ್ಯದಲ್ಲಿ ವಾಸಿಸುತ್ತಿದ್ದರು. ಅದು ಪರಸ್ಪರ ಗೌರವ ಮತ್ತು ತಿಳುವಳಿಕೆಯನ್ನು ಗಾಢವಾಗಿಸಿತ್ತು. ವಿವಿಧ ಧರ್ಮಗಳ ಪಠ್ಯಗಳು ಮತ್ತು ಸ್ತೋತ್ರಗಳ ಓದು ಮತ್ತು ಹಾಡುವಿಕೆಯ ಅವರ ಅಂತರ್ ಧರ್ಮೀಯ ಪ್ರಾರ್ಥನಾ ಸಭೆ ನಮ್ಮ ಕಲಹ ಪೀಡಿತ ಕಾಲದಲ್ಲಿ ನೆನಪಿನಲ್ಲಿಟ್ಟುಕೊಳ್ಳಬೇಕಾದ ಗಮನಾರ್ಹವಾದ ನಾವೀನ್ಯತೆಯಾಗಿತ್ತು.
ನಾಸ್ತಿಕರಿಗಿಂತ ಭಿನ್ನವಾಗಿ, ಮಾನವ ಗ್ರಹಿಕೆಗೆ ಮೀರಿದ ಶಕ್ತಿ ಅಥವಾ ಚೈತನ್ಯವಿದೆ ಎಂದು ಒಪ್ಪಿಕೊಳ್ಳಲು ಗಾಂಧಿ ಸಿದ್ಧರಾಗಿದ್ದರು. ಧಾರ್ಮಿಕ ಜನರಂತೆ, ಅವರ ಧರ್ಮ ದೇವರಿಗೆ ವಿಶೇಷ ಮತ್ತು ಉನ್ನತ ಮಾರ್ಗವಾಗಿದೆ ಎಂದೇನೂ ಅವರು ನಂಬಲಿಲ್ಲ. ಸೆಪ್ಟಂಬರ್ 1924ರಲ್ಲಿ ಅವರು ದೇವರು ಒಬ್ಬನೇ ಎಂಬ ಶೀರ್ಷಿಕೆಯ ಒಂದು ಲೇಖನ ಬರೆದರು. ಅದರಲ್ಲಿ ಅವರು ಹೇಳಿದರು: ‘ಹಿಂದೂಗಳು ಇಸ್ಲಾಂ ಧರ್ಮ, ಕ್ರಿಶ್ಚಿಯನ್ ಧರ್ಮ ಅಥವಾ ರೆರಾಸ್ಟ್ರಿಯನ್ ಧರ್ಮವನ್ನು ಭಾರತದಿಂದ ಓಡಿಸಬೇಕೆಂದು ನಿರೀಕ್ಷಿಸುವುದು ನಿಷ್ಫಲ ಕನಸು. ಸತ್ಯವು ಯಾವುದೇ ಒಂದು ಗ್ರಂಥದ ವಿಶೇಷ ಆಸ್ತಿಯಲ್ಲ.’
ಈ ಪ್ರಮಾಣೀಕರಣದ ನಿರಾಕರಣೆ ಹಿಂದೂಗಳು, ಮುಸ್ಲಿಮರು ಅಥವಾ ಕ್ರಿಶ್ಚಿಯನ್ನರ ಮತಾಂತರದ ಯತ್ನಗಳ ಬಗ್ಗೆ ಗಾಂಧಿ ಸಂಶಯಪಡುವಂತೆ ಮಾಡಿತು. ಮಿಷನರಿ ಪ್ರಯತ್ನದ ಮೂಲದಲ್ಲಿರುವುದು, ತನ್ನ ಸ್ವಂತ ನಂಬಿಕೆ ತನಗೆ ಮಾತ್ರವಲ್ಲದೆ ಪ್ರಪಂಚದಾದ್ಯಂತದ ಸತ್ಯವಾಗಿದೆ ಎಂಬ ಊಹೆಯಾಗಿದೆ. ಆದರೆ ಸತ್ಯವೆಂದರೆ, ನಮಗೆ ಅರ್ಥವಾಗದ ಲಕ್ಷಾಂತರ ಮಾರ್ಗಗಳ ಮೂಲಕ ದೇವರು ನಮ್ಮನ್ನು ತಲುಪುತ್ತಾನೆ. ಹೀಗಾಗಿ ಮಿಷನರಿ ಪ್ರಯತ್ನದಲ್ಲಿ ನಿಜವಾದ ನಮ್ರತೆಯ ಕೊರತೆಯಿದೆ ಎಂದೊಮ್ಮೆ ಗಾಂಧಿ ಬರೆದಿದ್ದರು. ‘ಆಧ್ಯಾತ್ಮಿಕ ದೃಷ್ಟಿಕೋನದಿಂದ ನಾನು ಅನಾಗರಿಕರಿಗಿಂತ ಶ್ರೇಷ್ಠನೆಂದು ನನಗೆ ಯಾವುದೇ ಭಾವನೆ ಇಲ್ಲ ಮತ್ತು ಆಧ್ಯಾತ್ಮಿಕ ಶ್ರೇಷ್ಠತೆಯ ಭಾವನೆ ಅಪಾಯಕಾರಿ’ ಎಂದು ಅವರು ಹೇಳಿದ್ದರು.
ತಮ್ಮದಲ್ಲದ ನಂಬಿಕೆಗಳ ಬಗೆಗಿನ ಗೌರವ, ಇತರ ಧರ್ಮದ ಜನರೊಂದಿಗೆ ಸ್ನೇಹ ಬೆಳೆಸುವ ಬಯಕೆ ಗಾಂಧಿಗೆ ಕೇವಲ ವೈಯಕ್ತಿಕ ಆಯ್ಕೆಯಾಗಿರಲಿಲ್ಲ. ಅದು ರಾಜಕೀಯ ಅನಿವಾರ್ಯತೆಯೂ ಆಗಿತ್ತು. 1941ರಲ್ಲಿ ಪ್ರಕಟಿಸಿದ ಮೂವತ್ತು ಪುಟಗಳ ಕಿರು ಹೊತ್ತಗೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬ ಸದಸ್ಯರೂ ಅನುಸರಿಸಬೇಕೆಂದು ತಾವು ಆಶಿಸಿದ ರಚನಾತ್ಮಕ ಕಾರ್ಯಕ್ರಮಗಳನ್ನು ಗಾಂಧಿ ವಿವರಿಸಿದ್ದರು. ಅದರಲ್ಲಿ ಅಸ್ಪಶ್ಯತೆ ನಿವಾರಣೆ, ಖಾದಿ ಪ್ರಚಾರ, ಮಹಿಳೆಯರ ಉನ್ನತಿ ಮತ್ತು ಆರ್ಥಿಕ ಸಮಾನತೆಯ ಅನ್ವೇಷಣೆಯಂಥ ವಿಷಯಗಳು ಇದ್ದವು.
ಬಹುಮುಖ್ಯವಾಗಿ, ಕೋಮು ಏಕತೆ ಮೊದಲ ಅಂಶವಾಗಿತ್ತು. ಪ್ರತಿಯೊಬ್ಬ ಕಾಂಗ್ರೆಸಿಗ ಹಿಂದೂ, ಮುಸ್ಲಿಮ್, ಕ್ರಿಶ್ಚಿಯನ್, ರೆರಾಸ್ಟ್ರಿಯನ್, ಯೆಹೂದಿ ಹೀಗೆ ತನ್ನ ಧರ್ಮ ಯಾವುದೇ ಆಗಿರಲಿ, ಹಿಂದೂಸ್ತಾನದ ಲಕ್ಷಾಂತರ ನಿವಾಸಿಗಳಲ್ಲಿ ಪ್ರತಿಯೊಬ್ಬರೊಂದಿಗೂ ತನ್ನ ಅಸ್ಮಿತೆಯನ್ನು ಅನುಭವಿಸಬೇಕು. ಇದನ್ನು ಅರಿತುಕೊಳ್ಳಲು ಪ್ರತಿಯೊಬ್ಬ ಕಾಂಗ್ರೆಸಿಗ ತನ್ನ ನಂಬಿಕೆಯನ್ನು ಹೊರತುಪಡಿಸಿ ಇತರ ಧರ್ಮಗಳನ್ನು ಪ್ರತಿನಿಧಿಸುವ ವ್ಯಕ್ತಿಗಳೊಂದಿಗೆ ವೈಯಕ್ತಿಕ ಸ್ನೇಹವನ್ನು ಬೆಳೆಸಿಕೊಳ್ಳಬೇಕು. ಅವನು ತನ್ನ ನಂಬಿಕೆಯ ಬಗ್ಗೆ ಇರುವಷ್ಟೇ ಗೌರವವನ್ನು ಇತರ ಧರ್ಮಗಳ ಬಗ್ಗೆಯೂ ಹೊಂದಿರಬೇಕು ಎಂದು ಗಾಂಧಿ ಬರೆದಿದ್ದಾರೆ.
ಇದು ಗಾಂಧಿಯವರು ತಾವೇ ರೂಪಿಸಿಕೊಂಡ ನಂಬಿಕೆಯಾಗಿತ್ತು. ಗಾಂಧಿಯವರ ಹಿಂದೂಯೇತರ ನಿಕಟ ಸ್ನೇಹಿತರು ಮತ್ತು ಸಹವರ್ತಿಗಳ ಅಪೂರ್ಣ ಪಟ್ಟಿ:
ಮುಸ್ಲಿಮರಾದ ಅಬ್ದುಲ್ ಖಾದರ್ ಬವಾಜೀರ್, ಎ.ಎಂ. ಕಚಾಲಿಯಾ, ಅಬುಲ್ ಕಲಾಂ ಆಝಾದ್, ಝಾಕಿರ್ ಹುಸೈನ್, ಅಸಫ್ ಅಲಿ ಮತ್ತು ರೈಹಾನಾ ತ್ಯಾಬ್ಜಿ;
ಕ್ರಿಶ್ಚಿಯನ್ನರಾದ ಜೋಸಿಯಾ ಓಲ್ಡ್‌ಫೀಲ್ಡ್, ಜೋಸೆಫ್ ಡೋಕ್, ಸಿ.ಎಫ್. ಆಂಡ್ರ್ಯೂಸ್, ಜೆ.ಸಿ. ಕುಮಾರಪ್ಪ, ಮುರಿಯಲ್ ಲೆಸ್ಟರ್, ಮತ್ತು ರಾಜಕುಮಾರಿ ಅಮೃತ್ ಕೌರ್;
ಪಾರ್ಸಿಗಳಾದ ದಾದಾಭಾಯಿ ನೌರೋಜಿ, ಜಿವಾನ್ಜಿ ಗೊರ್ಕೂಡೂರ್ ರುಸ್ತೋಮ್ಜಿ ಮತ್ತು ಖುರ್ಷಿದ್ ನೌರೋಜಿ;
ಯೆಹೂದಿಗಳಾದ ಹರ್ಮನ್ ಕಲ್ಲೆನ್‌ಬಾಚ್, ಸೋಂಜಾ ಷ್ಲೆಸಿನ್, ಹೆನ್ರಿ ಪೊಲಾಕ್ ಮತ್ತು ಎಲ್.ಡಬ್ಲ್ಯು. ರಿಚ್;
ಜೈನರಾದ ಪ್ರಂಜಿವನ್ ಮೆಹ್ತಾ ಮತ್ತು ರಾಯಚಂದ್;
ನಾಸ್ತಿಕ ಜಿ. ರಾಮಚಂದ್ರರಾವ್ (‘ಗೋರಾ’).
ಪ್ರಾಯಶಃ ಅವರು ಪಂಜಾಬ್ ಜೊತೆ ಕಡಿಮೆ ಸಂಪರ್ಕ ಹೊಂದಿದ್ದರಿಂದ, ಗಾಂಧಿಗೆ ನಿಕಟ ಸಿಖ್ ಸ್ನೇಹಿತರು ಇರಲಿಲ್ಲ (ಅಮೃತ್ ಕೌರ್ ಅವರ ಕುಟುಂಬ ಮೂಲತಃ ಸಿಖ್ ಆಗಿದ್ದರೂ). ಆದರೂ, ವಿಶೇಷವಾಗಿ ಗಾಂಧೀಜಿಯನ್ನು ಸಂಪೂರ್ಣವಾಗಿ ಅಲ್ಲದಿದ್ದರೂ ಹೆಚ್ಚಾಗಿ ಕ್ರಿಶ್ಚಿಯನ್ ನಂಬಿಕೆಯುಳ್ಳ ಸ್ನೇಹಿತರನ್ನೇ ಹೊಂದಿದ್ದ ಅವರ ಮಹಾನ್ ಪಾಶ್ಚಿಮಾತ್ಯ ಸಮಕಾಲೀನರಾದ ಚರ್ಚಿಲ್, ರೂಸ್ವೆಲ್ಟ್, ಡಿ. ಗಾಲ್ ಮೊದಲಾದವರೊಡನೆ ಹೋಲಿಸಿದರೆ, ಅದೊಂದು ಸಣ್ಣ ಊನವಾಗಿತ್ತು.
ಮೇಲ್ನೋಟಕ್ಕೆ ಗಾಂಧಿಯವರು ಧಾರ್ಮಿಕ ಬಹುತ್ವದ ಅನ್ವೇಷಣೆಯಲ್ಲಿ ವಿಫಲರಾಗಿದ್ದಾರೆ ಎನ್ನಿಸುತ್ತದೆ. ಪಾಕಿಸ್ತಾನದ ಸೃಷ್ಟಿಯನ್ನು ಅದು ನಿಲ್ಲಿಸಲಿಲ್ಲ ಮತ್ತು ಉಳಿದಿರುವ ಭಾರತದಲ್ಲಿ, ಅವರ ರಾಜಕೀಯ ಉತ್ತರಾಧಿಕಾರಿ ಜವಾಹರಲಾಲ್ ನೆಹರೂ ಅನುಸರಿಸಿದ್ದ ಅಂತರ್ ಧರ್ಮೀಯ ಸಹಿಷ್ಣುತೆ ಕೂಡ ದೀರ್ಘ ಕಾಲದವರೆಗೆ ವ್ಯರ್ಥವಾಯಿತು. ಹಿಂದೂ ಪಾಕಿಸ್ತಾನವನ್ನು ನಿರ್ಮಿಸಲು ಯತ್ನಿಸುವ ಹಿಂದುತ್ವ ಪ್ರಬಲವಾಗಿಲ್ಲ, ಆದರೆ ಏರುಗತಿಯಲ್ಲಿದೆ.
ಮತ್ತೊಂದೆಡೆ, ಗಾಂಧಿಯವರ ಸ್ಪಷ್ಟವಾದ ಸೋಲು ಭಾರತ ಮತ್ತು ಭಾರತೀಯರಿಗೆ ಅವರ ಪರಂಪರೆಯ ನವೀಕರಣವನ್ನು ಇನ್ನಷ್ಟು ತುರ್ತಿನದ್ದಾಗಿಸಿದೆ. ಇಸ್ಲಾಮಿಕ್ ಬಹುಸಂಖ್ಯಾತವಾದದ ಪ್ರತಿಪಾದನೆಯಿಂದ ಪಾಕಿಸ್ತಾನದ ಜನರೇನೂ ಹೆಚ್ಚು ಶಾಂತಿ ಅಥವಾ ಸಮೃದ್ಧತೆಯಿಂದಿಲ್ಲ. ಶ್ರೀಲಂಕಾದಲ್ಲಿ ಬೌದ್ಧ ಬಹುಸಂಖ್ಯಾತವಾದ ನೆಮ್ಮದಿ ತಂದಿಲ್ಲ. ಆದ್ದರಿಂದ, ರಾಜಕಾರಣಿಗಳಿಗೆ ಮತ್ತು ಜನಸಾಮಾನ್ಯರಿಗೆ ಧರ್ಮದ ಗಡಿಗಳಾಚೆಗೆ ಸ್ನೇಹವನ್ನು ಬೆಳೆಸುವುದು ಗಣರಾಜ್ಯದ ಆರೋಗ್ಯವನ್ನು ಮರುಸ್ಥಾಪಿಸಲು ಅತ್ಯಗತ್ಯ ಮೊದಲ ಹೆಜ್ಜೆಯಾಗಿರಬಹುದು.